ಡಾ.ಸಿದ್ಧಲಿಂಗಯ್ಯನವರೊಡನೆ ಬಿಡುವಿನ ವೇಳೆಯಲ್ಲಿ ಮಾತನಾಡುತ್ತಿರುವುದನ್ನು ಸಂದರ್ಶನ ರೂಪದಲ್ಲಿ ದಾಖಲಿಸಿದ್ದೇನೆ.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (1): ಸರ್ ಬರಹಗಾರರಿಗೆ, ಹೋರಾಟಗಾರರ ಮೇಲೆ ದೂರು ದಾಖಲಿಸುವುದು, ವೈಯಕ್ತಿಕ ದಾಳಿ ಮಾಡುವುದು ನಡೆಯುತ್ತಿದೆ. ನಿಮ್ಮ ಸಂದರ್ಭದಲ್ಲಿಯೂ ಇಂತಹ ಪೈಶಾಚಿಕೆಗಳು ನಡೆಯುತಿದ್ವ?
ಡಾ. ಸಿದ್ಧಲಿಂಗಯ್ಯ: ಖಂಡಿತವಾಗಿಯೂ ನಡೆಯುತಿದ್ದವು. ನನ್ ಪದ್ಯಗಳನ್ನ ನೋಡಿ ಅದೆಷ್ಟೊ ಮಂದಿ ನನಗೆ ಹೊಡೆಯೋದಿಕ್ಕೆಲ್ಲಾ ಕಾಯ್ತಿದ್ರು. ಎಲ್ ಸಿಕ್ತಾನೋ ನೋಡ್ರೋ ಆ ಸಿದ್ಧಲಿಂಗಯ್ಯನವರನ್ನು ಹೊಡೆಯೋಣ ಅಂತ ಮಾತಾಡ್ಕೊಂತಾ ಇದ್ರು. ಒಂದಲ್ಲ, ಎರಡಲ್ಲ ನನ್ನ ಮೇಲೆ ಮೂವತ್ತಕ್ಕು ಹೆಚ್ಚು ಬಾರಿ ಕೊಲೆ ಪ್ರಯತ್ನ ನಡೆದಿವೆ. ಆಗ ನಾನು ಮನೆಗೆ ಯಾರೆ ಬಂದ್ರು ಬಾಗಿಲು ತೆಗೆಯೋಕೆನೆ ಭಯಪಡ್ತಿದ್ದೆ. ಒಂದ್ಸಲ ಗೆಳೆಯರೆಲ್ಲಾ ಸೇರಿ ಪೆರಿಯಾರ್ ಅವರನ್ನ ಬೆಂಗಳೂರಿಗೆ ಕರೆಸಿದ್ವಿ. ಅವರು ಇರೊಬರೊ ದೇವರನೆಲ್ಲಾ ಬೈದಾಕ್ಬುಟ್ರು, ಈ ಸಿದ್ಧಲಿಂಗಯ್ಯನವರು ಪೆರಿಯಾರ್ ಕರ್ಸಿ ದೇವಮಾನವರಿಗೆಲ್ಲಾ ಹೀನಾಮಾನವಾಗಿ ಬೈಸ್ಬುಟ್ಟ ಅಂತ ಕಾರ್ಯಕ್ರಮ ಮುಗಿದು ಎಲ್ಲರೂ ಮನೆಗೊರಟೋದ್ರು ನಾನು ಒಬ್ಬನೇ ಆಗ್ಬಿಟ್ಟೆ. ಒಂದಷ್ಟು ಜನ ಬಂದು ನನ್ನ ಹೊಡೆದು ಮೋರಿಗಾಕಿದ್ರು. ಸಿದ್ಧಲಿಂಗಯ್ಯನ ಹೊಡೆದು ಸಾಯಿಸಿಬುಟ್ರಂತೆ ಅಂತ ಎಲ್ಲಾಕಡೆ ವಿಷಯ ಹರಡಿತ್ತು. ಸದ್ಯ ಯಾರೋ ಪುಣ್ಯಾತ್ಮರ ದಯೆಯಿಂದ ಬದುಕುಳಿದೆ.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (2): ಸರ್ ಬೂಸಾ ಚಳವಳಿಯಲ್ಲಿ ತಾವು ಮುಂಚೂಣಿಯಲ್ಲಿದ್ರಿ ಅಂತ ಕೇಳ್ಪಟ್ಟೆ?
ಡಾ. ಸಿದ್ಧಲಿಂಗಯ್ಯ: ಹೌದು, ಆಗಷ್ಟೆ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿ ಏನಿದೆ, ಅದೆಲ್ಲಾ ಬೂಸಾ ಅಂದ್ ಬುಟ್ರು. ಬಹುತೇಕ ಜನರು ಅವರು ರಾಜೀನಾಮೆ ಕೊಡಬೇಕು ಅಂತ ಪಟ್ಟು ಹಿಡಿದ್ರು. ಅವಾಗ ನಾನು ಕಾಲೇಜು ಓದ್ತಾ ಇದ್ದೆ. ಆ ಹುಡುಗ ಯಾರ್ರಿ ಚೆನ್ನಾಗ್ ಮಾತಾಡ್ತಾನೆ ಕಣ್ರಿ. ಅವನನ್ನ ಕರೆಯಿಸಿ ಅಂತ ಹೇಳಿ ನನ್ನ ಕರೆಯಿಸಿಕೊಂಡ್ರು. ಅವಾಗ ನಾವೆಲ್ಲಾ ಸೇರಿ ಬಸವಲಿಂಗಪ್ಪನವರ ಪರವಾಗಿ ಕೆಲಸ ಮಾಡಿದ್ವಿ. ಅದರಿಂದನೇ ದಲಿತ ಚಳವಳಿ ಮತ್ತು ಸಾಹಿತ್ಯ ಹುಟ್ಟುಕೊಳ್ತು. ಆ ಸಂದರ್ಭದಲ್ಲಿ ಕುವೆಂಪು ಅವರು ಕೂಡ ಬಸವಲಿಂಗಪ್ಪನವರಿಗೆ ಬೆಂಬಲವಾಗಿ ನಿಂತಿದ್ರು.
ಹಾರೋಹಳ್ಳಿ ರವೀಂದ್ರಪ್ರಶ್ನೆ (3): ಸರ್ ದಲಿತ ಸಂಘಟನೆಗಳು ಪ್ರಸ್ತುತದಲ್ಲಿ ಛಿದ್ರವಾಗಿವೆ. ನೀವೆ ನೇತೃತ್ವ ವಹಿಸಿ ಒಂದೇ ವೇದಿಕೆಗೆ ಕರೆತನ್ನಿ?
ಡಾ. ಸಿದ್ಧಲಿಂಗಯ್ಯ: ನನ್ನಲ್ಲಿ ಆರೋಗ್ಯ ಸಮಸ್ಯೆ ಇದೆ. ಮೊದಲಿನ ರೀತಿ ಆರೋಗ್ಯವಾಗಿಲ್ಲ. ನನಗೂ ವಯಸ್ಸಾಯಿತು. ಹೊಸ ತಲೆಮಾರಿನಲ್ಲಿ ಇತ್ತೀಚಿಗೆ ನಿಮ್ಮಂತವರು ಅವುಗಳನ್ನೆಲ್ಲಾ ಸರಿಪಡಿಸಬೇಕು.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (4): ಗೋಹತ್ಯೆ ನಿಷೇಧ ಕುರಿತು ನಿಮ್ಮ ಅಭಿಪ್ರಾಯವೇನು?
ಡಾ. ಸಿದ್ಧಲಿಂಗಯ್ಯ: ಗೋಹತ್ಯೆ ನಿಷೇಧವನ್ನು ನಾನು ಒಪ್ಪಲ್ಲ. ಅದು ನಮ್ಮ ಮೂಲ ಆಹಾರ. ಮನುಷ್ಯ ಆರೋಗ್ಯವಂತನಾಗಿರಬೇಕು ಅಂದ್ರೆ, ಚೆನ್ನಾಗ್ ದನಿನ್ ಬಾಡು ತಿನ್ನಬೇಕು. ನೋಡು ರವೀಂದ್ರ ಚಿದಾನಂದ ಮೂರ್ತಿಯವರು ನನಗೆ ಗುರುಗಳಿದ್ದಂಗೆ ಹೀಗೆ ಹಿಂದೊಮ್ಮೆ ಗೋಹತ್ಯೆ ನಿಷೇಧ ಪ್ರಸ್ತಾಪವಾದಾಗ ಚಿದಾನಂದ ಮೂರ್ತಿಯವರು ಕಾಲ್ ಮಾಡಿ ಸಿದ್ಧಲಿಂಗಯ್ಯ ಒಂದು ಲೆಟರ್ ಕಳ್ಸಿದಿನಿ ಅದಕ್ಕೊಂದು ಸೈನ್ ಹಾಕಿ ಕಳ್ಸು ಅಂದ್ರು. ಏನ್ ಗುರುಗಳೆ ಏನ್ ವಿಷ್ಯ ಅಂದೆಅದೆ ಕಣಯ್ಯ ಗೋಹತ್ಯೆ ನಿಷೇಧ ಮಾಡಿ ಅಂತ ನಾವೆಲ್ಲಾ ಸಹಿ ಹಾಕಿ ಸರ್ಕಾಕ್ಕೆ ಒತ್ತಾಯ ಮಾಡೋಣ ಅಂತ ಅಂದ್ರುಅದಕ್ಕೆ ನಾನು ಅಯ್ಯೊ ಗುರುಗಳೆ ನಾನು ದನದ ಮಾಂಸ ತಿನ್ನುವವನು ತಿಂದೊಟ್ಟೆ ಮುಂದ್ ಮಡಿಕಂಡು ನಾ ಹೇಗ್ ಸೈನ್ ಮಾಡ್ಲಿ ಅಂದೆ. ಕಕ್ಕಾಭಿಕ್ಕಿಯಾಗಿ ಚಿದಾನಂದಮೂರ್ತಿಗಳು ಫೋನ್ ಕಟ್ ಮಾಡಿಬಿಟ್ರು.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (5): ಸರ್ ನಿಮಗೆ ಸದಾ ಮುತ್ತೈದೆ ಅನ್ನೊ ಆರೋಪ ಇದೆ?
ಡಾ. ಸಿದ್ಧಲಿಂಗಯ್ಯ: ಕನಕಪುರ ತಾಲ್ಲೂಕಿನಲ್ಲಿ ದಲಿತರಿಗಾದ ಅನ್ಯಾಯವನ್ನು ಮೊದಲಬಾರಿಗೆ ಸದನದಲ್ಲಿ ದನಿ ಎತ್ತಿದ್ದೆ ನಾನು. ನಾನು ಮಾತಾಡಿದ ನಂತರ ಅಲ್ಲಿನ ದಲಿತರಿಗೆ ನ್ಯಾಯ ದೊರಕಿತು. ನಾನು ಏನೆನು ಕೆಲಸ ಮಾಡಿದ್ದೇನೆ ಎನ್ನುವುದನ್ನ ನೀವು ಸಿದ್ಧಲಿಂಗಯ್ಯನವರ ಸದನದ ಭಾಷಣಗಳು ಪುಸ್ತಕಗಳನ್ನೊಮ್ಮೆ ತಿರುವಿ ಹಾಕಿ ಗೊತ್ತಾಗುತ್ತೆ. ನೀವು ಮುಖ್ಯವಾಗಿ ಗಮನಿಸಬೇಕಿರುವುದು ನಾವು ಅಧಿಕಾರದಿಂದ ಆಚೆ ನಿಂತು ಮಾತಾಡಿದರೆ ಪ್ರಯೋಜನವಿಲ್ಲ. ಒಳಗೆ ನಿಂತರೆ ಮಾತ್ರ ಏನಾದರು ಮಾಡಲು ಸಾಧ್ಯ.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (6): ಬಿಜೆಪಿಯ ಮೇಲೆ ನಿಮಗೆ ಎಲ್ಲೊ ಒಂದ ಕಡೆ ಅನುಕಂಪ ಇದೆ ಅನ್ಸುತ್ತೆ?
ಡಾ. ಸಿದ್ಧಲಿಂಗಯ್ಯ : ನನಗೆ ಬಿಜೆಪಿಯ ಮೇಲೆ ಅನುಕಂಪವಿಲ್ಲ, ಯಡಿಯೂರಪ್ಪನವರ ಮೇಲಿದೆ. ಆತ ಬೇರೆಯವರ ತರ ಕಮ್ಯುನಲ್ ಅಲ್ಲ. ಪಾಪ ಒಳ್ಳೆಯ ಮನುಷ್ಯ ಈ ಕಾರಣಕ್ಕೆ ನಾನು ಅವರನ್ನು ಬೆಂಬಲಿಸುತ್ತೇನೆ. ಯಡಿಯೂರಪ್ಪ ಒಮ್ಮೆ ಬಿಜೆಪಿಯಿಂದ ಪ್ರಾಥಮಿಕ ಸದಸ್ಯತ್ವ ತಗೊಳಿ, ನಿಮಗೆ ಟಿಕೆಟ್ ಕೊಡ್ತಿವಿ ನೀವು ಮನೆಲಿರಿ ನಾವೆ ಗೆಲ್ಸಿ ಮಂತ್ರಿ ಮಾಡ್ತಿವಿ ಅಂದ್ರು ನಾನೆ ಬೇಡ ಅಂದೆ. ಅಮಿತ್ ಶಾ ಅವರು ಸ್ವತಹ ಮನೆಗೆ ಬಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡ್ತಿನಿ ಅಂದ್ರು ನಾನೆ ಬೇಡ ಅಂದೆ. ನನಗೆ ಜನ ಕೊಟ್ಟಿರುವ ಕವಿ ಪಟ್ಟವೆ ಸಾಕು. ಇವೆಲ್ಲಾ ಬೇಡ ಎಂದೆ. ನನಗೆ ಬಿಜೆಪಿಯ ಮೇಲೆ ಅನುಕಂಪ ಇದ್ದಿದ್ರೆ, ಅಧಿಕಾರದ ಮೋಹ ಇದ್ದಿದ್ರೆ ಹೋಗ್ತಾ ಇದ್ದಿದ್ದೆ. ಆದರೆ ಆತರಹದ ದುರಾಸೆ ಇಲ್ಲ.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (7): ನೀವು ನೋಡಿದ ವಿಶ್ವವಿದ್ಯಾನಿಲಯಗಳಿಗೂ, ಇವತ್ತಿನ ವಿಶ್ವವಿದ್ಯಾನಿಲಯಗಳಿಗೂ ಏನಾದರೂ ವ್ಯತ್ಯಾಸ ಇದೆಯ?
ಡಾ. ಸಿದ್ಧಲಿಂಗಯ್ಯ: ತುಂಬಾ ಇದೆ ರವೀಂದ್ರ, ನಾವು ಓದುವಾಗ ಚೆನ್ನಾಗಿ ಯಾರ್ ಓದುತ್ತಾರೋ ಅವರಿಗೆ ಬೆಂಬಲ ಇರ್ತಿತ್ತು. ಚೆನ್ನಾಗ್ ಕೆಲಸ ಮಾಡ್ತಾನೆ ಅಂತ ಗೊತ್ತಾದ್ರೆ, ಅವನನ್ನೆ ಕರೆದು ಕೆಲ್ಸ ಕೊಡ್ತಿದ್ರು. ನೋಡಿ ನಾನು ಮನೇಲಿ ಕೂತಿದ್ದೆ, ನಮ್ ಗುರುಗಳು ಜಿ.ಎಸ್.ಶಿವರುದ್ರಪ್ಪನವರು ನನ್ನನ್ನು ಕರೆದು ಕೆಲ್ಸ ಕೊಟ್ರು. ಅವರಿಂದ ನಾನು ಮೂರುತ್ತೊ ಊಟ ಮಾಡ್ತಿದಿನಿ. ಇವತ್ತು ಹಾಗಿಲ್ಲ. ಹಣ, ಅಧಿಕಾರ ಇರುವವರಿಗೆ ಮಾತ್ರ ವಿಶ್ವವಿದ್ಯಾನಿಲಯಗಳು ಬಾಗಿಲು ತೆರೆದಿವೆ.
ಹಾರೋಹಳ್ಳಿ ರವೀಂದ್ರ ಪ್ರಶ್ನೆ (8): ದಸಂಸ ದ ಈ ಸ್ಥಿತಿಗೆ ಕಾರಣಗಳೇನಿರಬಹುದು ಸರ್ ?
ಡಾ. ಸಿದ್ಧಲಿಂಗಯ್ಯ: ಅದರ ಅವನತಿಗೆ ತುಂಬಾ ಜನರು ಕಾರಣರು. ಅವರೆಲ್ಲಾ ಇಂದು ಸಮಾಜದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಇವಾಗ ಅವರ ಬಗೆ ಮಾತಾಡಿದ್ರೆ ತಪ್ಪಾಗುತ್ತೆ. ರವೀಂದ್ರ ಅವರು ಯಾರು ಅಂತ ನಿನಗೆ ಮಾತ್ರ ಹೇಳ್ತಿನಿ. ಅದನ್ನೆಲ್ಲೂ ಬರೆಯಕೋಗ್ಬೆಡ