ಲೇಖಕರು: ಯಾಸೀನ್ ಕೋಡಿಬೆಂಗ್ರೆ. ( ವಕೀಲರು ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ)

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಒಂದು ದೊಡ್ಡ ಅಂದೋಲನವೇ ಹುಟ್ಟಿ ಕೊಂಡಿದೆ. ಫ್ಯಾಸಿಸ್ಟ್ ಶಕ್ತಿಗಳ ನಿರೂಪಣೆಗೆ ವಿರುದ್ಧವಾದ ವ್ಯಾಖ್ಯಾನಗಳು ಹುಟ್ಟಿಕೊಳ್ಳಲಾರಂಭಿಸಿದೆ. ಇಡೀ ಜಗತ್ತಿನಲ್ಲಿ ಇಸ್ಲಾಮಿನ ಬಗ್ಗೆ ತಪ್ಪು ಕಲ್ಪನೆ ಹರಡಲು ಯತ್ನಿಸುತ್ತಿರುವ ಶಕ್ತಿಗಳು ಅರಬಿಕ್ ಶಬ್ದಗಳಿಗೆಲ್ಲ ‘ಇಸ್ಲಾಮಾಫೋಬಿಕ್’ ಗೊಳಿಸಿ ಪ್ರಸ್ತುತ ಪಡಿಸುತ್ತಿರುವ ಸಂದರ್ಭದಲ್ಲಿ ಅದರ ನಿಜಾರ್ಥವನ್ನು ಮತ್ತು ಅದರ ಸರಿಯಾದ ನಿರೂಪಣೆಯನ್ನು ನಾವು ಮಾಡಬೇಕಾಗಿದೆ.

ದುರಾದೃಷ್ಟವಶಾತ್ ಒಂದು ಸಮುದಾಯವನ್ನು ಗುರಿಯನ್ನಾಗಿಸಲು ಅರಬಿಕ್ ಪದಗಳನ್ನು ಫ್ಯಾಸಿಸ್ಟ್ ಶಕ್ತಿಗಳು ತಿರುಚಿ ಬಳಸಿದರು. ಆದರೆ‌ ಅದನ್ನೇ ಇವತ್ತು ಯಾವುದಾದರೂ ಕೆಡುಕನ್ನು ಪ್ರಸ್ತಾಪಿಸುವಾಗ ಪ್ರಗತಿಪರರು, ದಲಿತರು, ಮುಸ್ಲಿಮರು ಬಳಸುತ್ತಿರುವುದು ಮಾತ್ರ ವಿಪರ್ಯಾಸ. 
ಇದರಲ್ಲಿ ಮುಖ್ಯವಾಗಿ ಕೆಲವು ಅರಬಿಕ್ ಪದಗಳಿಗೆ ಈ ಸಗಟು ವಾಸನೆ ಅಂಟಿ ಕೊಂಡಿದೆ. ಉದಾಹರಣೆಯಾಗಿ ಜಿಹಾದ್, ತಾಲಿಬಾನ್ ಇತ್ಯಾದಿ. ಇದರ ಹೊರತಾಗಿ ಇನ್ನಷ್ಟು ಪದಗಳಿವೆ. ವಾಸ್ತವದಲ್ಲಿ ಜಿಹಾದ್ ಎಂದರೆ ತ್ಯಾಗ, ಬಲಿದಾನ ಎಂದರ್ಥ ಇಸ್ಲಾಮಿನಲ್ಲಿ ತನ್ನ ಚಿತ್ತವನ್ನು ನಿಯಂತ್ರಿಸುವುದು. ಸ್ವತಃ ಸಂಸ್ಕರಣೆ ಅತ್ಯಂತ ದೊಡ್ಡ ತ್ಯಾಗವಾಗಿದೆ ಎಂದು ಸಂಬೋಧಿಸಿರುವಾಗ, ಇವತ್ತು ಜಿಹಾದ್ ಪದವನ್ನು ಭಯೋತ್ಪಾದನೆಯೊಂದಿಗೆ ತಳಕು ಹಾಕಿ ‘ಇಸ್ಲಾಮಾಫೋಬಿಕ್’ ನಿರೂಪಣೆ ನೀಡಲಾಯಿತು. ಆದರೆ ದುರದೃಷ್ಟವಶಾತ್ ಇದೇ ನಿರೂಪಣೆಯನ್ನು ಪ್ರಜ್ಞಾವಂತ ಜನರು ಕೂಡ ಬಳಸುತ್ತಿರುವುದು ಅಚ್ಚರಿಯೆನಿಸುತ್ತದೆ. ಯಾಕೆಂದರೆ ಈ ರೀತಿಯ ನಿರೂಪಣೆಯನ್ನು ಸಾಮಾನ್ಯವನ್ನಾಗಿಸಿ ಒಂದು ನಿರ್ದಿಷ್ಟ ಧರ್ಮವನ್ನು ಹೀಯಾಳಿಸುವುದು ಫ್ಯಾಸಿಸ್ಟರ ಕುತಂತ್ರದ ಭಾಗ. ಹಾಗಾಗಿ ನಾವು ಶಬ್ದಗಳಿಂದ ಬಳಸುವಾಗಲು ಎಚ್ಚರಿಕೆಯಿಂದಿರಬೇಕು. ತಾಲಿಬಾನ್ ಎಂದರೆ ಅರಬಿಕ್ ವಿದ್ಯಾರ್ಥಿಗಳು ಎಂದು ಅರ್ಥ. ಯಾವುದೋ ಹಿಂಸಾವಾದಿ ಸಂಘಟನೆಯು ಈ  ಶಬ್ದದೊಂದಿಗೆ ತಮ್ಮ ಹೆಸರನ್ನು ಸಮೀಕರಿಸುತ್ತದೆ ಎಂಬ ಕಾರಣಕ್ಕೆ ತಾಲಿಬಾನ್ ಎಂಬ ಶಬ್ದವನ್ನು ಹಿಂಸೆಯೊಂದಿಗೆ ಸಮೀಕರಿಸುವುದು‌ ಎಷ್ಟು ಸರಿ?. ಈ ಶಬ್ಧವನ್ನು ಹಿಂಸೆಯ ಸಮಾನಾರ್ಥಕವಾಗಿ ಉಪಯೋಗಿಸುವುದು ವಿದ್ಯಾರ್ಥಿಗಳಿಗೆ ಮಾಡುವ ಅವಮಾನ.

ಆದ್ದರಿಂದ ಈ ದೇಶದಲ್ಲಿ ಧರ್ಮ, ಜಾತಿ, ಬಣ್ಣ, ಭಾಷೆಯ ತಾರತಮ್ಯ ಇಲ್ಲದೇ ಒಂದು ಅಂದೋಲನ ಸೃಷ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಎಲ್ಲ ಷಡ್ಯಂತ್ರದಿಂದ ಕೂಡಿದ ನಿರೂಪಣೆಗಳಿಗೂ ಮುಕ್ತಿ ನೀಡುತ್ತ ಸಾಗಬೇಕಿದೆ. ಆಗ ಮಾತ್ರ ಭವಿಷ್ಯದಲ್ಲಿ ಭಾರತ ಮತ್ತಷ್ಟು ಬಲಿಷ್ಠ ವಾಗಲಿದೆ. ಇಲ್ಲದಿದ್ದರೆ ನಾವಿಡುವ ಸಣ್ಣ ಬಿರುಕು ಕೂಡ ಗೆದ್ದಲು ಹಿಡಿಯಲು ಬಹಳಷ್ಟು ಅವಕಾಶ ಕಲ್ಪಿಸುತ್ತದೆ.

LEAVE A REPLY

Please enter your comment!
Please enter your name here