ಲೇಖಕರು: ಚರಣ್ ಐವರ್ನಾಡು

ಐತಿಹ್ಯ ಮತ್ತು ಇತಿಹಾಸಗಳೆರಡೂ ಸಂಸ್ಕೃತ ಮೂಲದ ಪದಗಳು. “ಹೀಗೆ ಇತ್ತು” ಎಂಬುದು ಇದರ ಅರ್ಥ. ಆದರೆ ಈ ಎರಡೂ ಪದಗಳು ಒಂದೇ ಮೂಲದವರಾದರೂ ಬೌದ್ಧಿಕ ವಲಯ ಇವೆರಡನ್ನೂ ಪ್ರತ್ಯೇಕಿಸುತ್ತದೆ.
ಐತಿಹ್ಯವು “ಹಿಂದೆ ಇತ್ತು” ಎಂಬಲ್ಲಿಂದ ಅನೇಕ ವೈಭವೀಕೃತ ಮಾರ್ಪಾಡುಗಳೊಂದಿಗೆ ಅತಿಮಾನುಷವೂ, ಅಸಹಜವೂ, ಅಸ್ವಾಭಾವಿಕವೂ ಆಗುತ್ತದೆ. ಈಗ ಈ “ಐತಿಹ್ಯ” ಪದವು ಇಂಗ್ಲೀಷಿನ Legend ಪದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತದೆ. legend ಎಂಬುದು ಲ್ಯಾಟೀನ್ ಪದ. lexicon ಇದಕ್ಕೆ things to be read ಎಂದು ಅರ್ಥ ನೀಡುತ್ತದೆ. ಆದರೆ ಮಧ್ಯಯುಗದಲ್ಲಿ legend ಎಂಬುದು ಸಾಧು-ಸಂತರ ಕತೆಗಳು, ಜೀವನ ಎಂಬೆಲ್ಲ ಅರ್ಥಗಳಿಂದ ಬಳಕೆಯಾಗಿದೆ. ಕ್ರೈಸ್ತ ಸಾಧುಗಳ ಕತೆಗಳೇ legendಗಳಾದ್ದರಿಂದ ಪಾಶ್ಚಾತ್ಯ ಬರಹಗಾರರು saint’s legend ಎಂಬುದನ್ನೇ ಬಳಸಿದರು. ಹತ್ತೊಂಬತ್ತನೆ ಶತಮಾನದ ನಂತರ ಲೆಜೆಂಡ್ ಎಂಬುದು “ಪರಂಪರೆಯ ಸಂಗತಿ” ಎಂಬರ್ಥದಲ್ಲಿ ವ್ಯಾಪಕವಾಗಿ ಬಳಕೆಯಾಯಿತು.

ಕಿಟ್ಟೆಲ್ ಕೂಡ legendಎಂದರೆ ಮೌಖಿಕ ಪರಂಪರೆ (oral tradition) , ಐತಿಹ್ಯ ಎಂದು ಕರೆದಿದ್ದಾರೆ. ವಾಸ್ತವವಾಗಿ ನಡೆದಿದೆ ಎಂದು ನಂಬಿಕೊಂಡು ಬಂದಿರುವ ಅಸಾಮಾನ್ಯ ಘಟನೆಯೊಂದರ ಕತೆಯೇ ಐತಿಹ್ಯ. ಪ್ರಾಚೀನವಾದ ಸಣ್ಣ ಘಟನೆಯೊಂದರ ಸುತ್ತ ಅದ್ಭುತವಾದ ಸನ್ನಿವೇಶಗಳು ಬೆಳೆದು ತಲೆಮಾರುಗಳ ಮೂಲಕ ಬಾಯ್ಕಿವಿಗಳ ಮೂಲಕ ಹರಿದು ಬಂದ ಕತೆಗಳು ಐತಿಹ್ಯಗಳು.

ಆರಂಭದಲ್ಲಿ ಐತಿಹ್ಯಗಳು ಬಹಳ ಸರಳ,ಸಂಕ್ಷಿಪ್ತವಾಗಿದ್ದವೆನಿಸುತ್ತದೆ. ವರುಷಗಳುರುಳಿದಂತೆ ಹೆಚ್ಚು ಉತ್ಪ್ರೇಕ್ಷಿತ ಮತ್ತು ರಂಜನೀಯ ವಿವರಗಳೊಂದಿಗೆ ಬೆಳೆದು ಅತಿಮಾನುಷಗೊಳ್ಳುತ್ತವೆ. ಈ ಉತ್ಪ್ರೇಕ್ಷೆಗಳು ಕಾರ್ಯಕಾರಣ ಸಂಬಂಧಗಳನ್ನು ವಿವರಿಸಲೂ ಜನಸಾಮಾನ್ಯರಲ್ಲಿ ವಿಮರ್ಶೆಗೊಳಪಡದಂತೆ ಗಟ್ಟಿಯಾಗಿ ಬೇರೂರಿರುವ ಬಳಕೆಯಾಗಿವೆ. ಬಹುತೇಕ ಐತಿಹ್ಯಗಳು single motif ಏಕಾಶಯಗಳ ಮೇಲೆ ರಚನೆಗೊಂಡಿವೆ.

ನಾನು ಕರಾವಳಿಯ ಐತಿಹ್ಯಗಳ ಹಿನ್ನಲೆಯಲ್ಲಿ ವರ್ಗೀಕರಿಸುತ್ತೇನೆ. ನಾನು ತಿಳಿದಂತೆ ಜಗತ್ತಿನ ಅನೇಕ ವಿದ್ವಾಂಸರು ಬೇರೆ ಬೇರೆ ನೆಲೆ-ಹಿನ್ನಲೆಗಳ ಆಧಾರದಲ್ಲಿ ವರ್ಗೀಕರಿಸಿದ್ದಾರೆ
1) ಅತಿಮಾನುಷ ವ್ಯಕ್ತಿಗಳ ಹುಟ್ಟು-ಬದುಕು-ಸಾವು:- ಕೋಟಿ ಚೆನ್ನಯರ ಹುಟ್ಟಿನ ಬಗ್ಗೆ ಇರುವ ಮೌಖಿಕ ಪರಂಪರೆ ಅಸ್ವಾಭಾವಿಕ. ಅನೇಕ ತುಳುನಾಡಿನ ವೀರರ ಮೂಲವನ್ನು ಬ್ರಾಹ್ಮಣರ ಮೂಲಕ ಆರಂಭಿಸುವುದು, ಹುಟ್ಟನ್ನೂ ಅಸ್ವಾಭಾವಿಕಗೊಳಿಸುವುದು. ಬೈದರ್ಲ ತಾಯಿ ದೇಯಿ (ದೇವಿಯ ಅಪಭ್ರಂಶ) ಮೂಲವನ್ನು ಕೇಂಜವ ಹಕ್ಕಿಗಳ ಮೂಲಕ ಬ್ರಾಹ್ಮಣ್ಯಕ್ಕೆ ಇಳಿಸಿ ಅವರ ಹುಟ್ಟನ್ನು ಪವಿತ್ರಗೊಳಿಸಲಾಗಿದೆ. ಗುಳಿಗನೂ ತಾಯಿಯ ಮೊಲೆಯನ್ನು ಬಗೆದು ಭೂಮಿಗೆ ಬರುತ್ತಾನೆ. ಪೂಮಾಣಿ-ಕಿನ್ನಿಮಾಣಿಗಳು ತಲಕಾವೇರಿಯ ಬ್ರಾಹ್ಮಣನಿಗೆ ತಾವರೆಯಲ್ಲಿ ಸಿಕ್ಕವರು. ತುಳುನಾಡಿನ ವೀರನೊಬ್ಬನ ತಾಯಿ ಬ್ರಾಹ್ಮಣರ ಮನೆಯ ಬಾವಿ ನೀರು ಕುಡಿದು ಗರ್ಭ ಧರಿಸುತ್ತಾಳೆ. ಇವೆಲ್ಲ ಅವರ ಜನ್ಮವನ್ನು ಜನಸಾಮಾನ್ಯನಿಗಿಂತ ಭಿನ್ನಗೊಳಿಸುವ, ನಿಗೂಢಗೊಳಿಸುವ ಕ್ರಿಯೆಗಳಾಗಿ ಕಂಡುಬರುತ್ತದೆ. ಅದಕ್ಕೆ ಪೂರಕವಾದ ಸ್ಥಳ, ಮನೆ, ಬಾವಿಗಳನ್ನು ಆಧಾರವೆಂಬಂತೆ ತೋರಿಸಲಾಗುತ್ತದೆ. (ಇದು ಕೋಟಿ-ಚೆನ್ನಯರ ತಾಯಿಯ ಮನೆ ಎಂದು ಕೂವೆಯ ಮನೆಯನ್ನು ತೋರಿಸಲಾಗುತ್ತದೆ) ಅವರ ಅಸಾಮಾನ್ಯ ಬದುಕು ಅಸಹಜವಾದ ಜನ್ಮದಿಂದ ಆರಂಭವಾಗಿ ಅಸ್ವಾಭಾವಿಕ ಸಾವಿನೊಂದಿಗೆ ಕೊನೆಯಾಗುತ್ತದೆ. ಕೊರಗತನಿಯ ಕದ್ರಿಯ ಛಾವಣಿಯ ಮೇಲೆ ಬಾಗಿದ್ದ ಹಣ್ಣನ್ನು ತಿಂದು ಮಾಯಕಕ್ಕೆ ಸಂದುತ್ತಾನೆ. ಅಗೋಳಿಯ ಮಂಜಣ್ಣನ ಸಾಹಸಗಳನ್ನು ನಾವು ಕೇಳಿದ್ದೇವೆ.
2) ‎ಸೃಷ್ಟಿಯ ಮೂಲ:- ಇದನ್ನು ಜಗತ್ತಿನ ಬಹುತೇಕ ಎಲ್ಲಾ ಮತಗಳ ಪುರಾಣಗಳಲ್ಲಿ ಕಾಣಬಹುದು. ಬೆರ್ಮೆರೆ, ಲೆಕ್ಕೆಸಿರಿಯ ಪಾಡ್ದನದಲ್ಲಿ, ಬಂಟರ ಸಂಧಿಯಲ್ಲಿ ಜಗತ್ತಿನ ಸೃಷ್ಟಿಯ ವಿವರಣೆಗಳಿವೆ. ಆಡಂ-ಈವರ ಕತೆ ಇಂತದ್ದೇ. ಭೂಮಿ,ಜೀವಗಳ ಸೃಷ್ಟಿ-ಸ್ಥಿತಿ-ಲಯ, ಅಸ್ತಿತ್ವ ಮತ್ತು ಪ್ರಾದುರ್ಭಾವಗಳನ್ನು ಇದು ವಿವರಿಸುತ್ತದೆ. ಬಹುಮಟ್ಟಿಗೆ ಇವು ಶಿಷ್ಟ ಪುರಾಣಗಳ ಸಂಪರ್ಕದಿಂದ ಸ್ಥಾಪಿತವಾಗುತ್ತವೆ. (ಐತಿಹ್ಯ&ಪುರಾಣಗಳ ಮಧ್ಯೆ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಬಹುದು)
3) ‎ಐತಿಹಾಸಿಕ ಮತ್ತು ಮಿಥ್ಯ ಇತಿಹಾಸ (pseudo-historical) :- ಇಲ್ಲಿ ಇತಿಹಾಸದ ಅಂಶಗಳೊಂದಿಗೆ ಅತಿಮಾನುಷತೆ ಸೇರಿ ಐತಿಹ್ಯ ಬೆಳೆಯುತ್ತದೆ. ಕಾರ್ಕಳ, ವೇಣೂರಿನ ಗುಮ್ಮಟೇಶನ ರಚನೆಯ ಹಿನ್ನಲೆಯಲ್ಲಿ ಕಲ್ಲುರ್ಟಿ-ಕಲ್ಕುಡರ ಬದುಕು.
4) ‎ಶಿಷ್ಟ ಪುರಾಣದ ಪ್ರಭಾವ:- ಬಹುತೇಕ ಎಲ್ಲಾ ದೇವಸ್ಥಾನಗಳ ಸ್ಥಳ ಪುರಾಣಗಳು ಇಂತಹ ಐತಿಹ್ಯಗಳೇ. ತುಳುನಾಡಿನ ಎಲ್ಲಾ ಪಂಚಲಿಂಗಗಳನ್ನು ಪಾಂಡವರೇ ಸ್ಥಾಪಿಸಿದ್ದು. ಅಡೂರಿನಲ್ಲಿಯೇ ಅರ್ಜುನ ಪಾಶುಪತಾಸ್ತ್ರವನ್ನು ಶಿವನಿಂದ ಪಡೆದದ್ದು. ನನ್ನ ಊರಿಗೆ ಪಾಂಡವರು ಬಂದಿದ್ದರು. ನನ್ನ ಮನೆಯ ಪಕ್ಕದ ಪೆರಿಯಬಾಣೆಯಲ್ಲಿ ಪಾಂಡವರು ಮಾಡಿದ ಅಗರು(ಕಂದಕ) ಇದೆ. ಅದು ನನ್ನ ಊರಿಂದ ಆರಂಭವಾಗಿ ಸವಣೂರಿನ ಮೂಲಕ ಕುಮಾರಧಾರದಲ್ಲಿ ಕೊನೆಯಾಗುತ್ತದೆ. ಒಂದೇ ರಾತ್ರೆಯಲ್ಲಿ ಪಾಂಡವರು ಒಂದೇ ಕೊಟ್ಟಿನ ಪೆಟ್ಟಿನಲ್ಲಿ ತೆಗೆದದ್ದಂತೆ! ಮೂಡುಬಿದಿರೆಯ ಪಕ್ಕದ ಇಂದಿನ “ಅಶ್ವತ್ಥಪುರ”, ಹಿಂದಿನ “ಪೀಪಳ್ಳ”ಕ್ಕೆ ರಾಮ ತನ್ನ ವನವಾಸದ ಸಂದರ್ಭದಲ್ಲಿ ಬಂದಿದ್ದನಂತೆ. ಅಲ್ಲಿ ಅವನು ಅಶ್ವತ ಗಿಡಗಳನ್ನು ನೆಟ್ಟಿದ್ದರಿಂದ ಅಲ್ಲಿಗೆ ಪೀಪಳ್ಳ ಎಂಬ ಹೆಸರು ಬಂದಿದೆ. ಅಲ್ಲೊಂದು ಹೊಸದಾದ ರಾಮನ ದೇವಾಲಯ ಇದೆ. ಪೀಪಳ್ಳ ಎಂಬ ಹೆಸರು ಹೇಲಿನಂತಹ ಮಣ್ಣಿನ ಸಣ್ಣ ಕೆರೆಯಿಂದ ಬಂದದ್ದು. ಆ ಹೆಸರು ಹೇಳಲು ಮುಜುಗರವಾಗಿ ಅಶ್ವತ್ಥಪುರ ಎಂದು ಮರುನಾಮಕರಣ ಮಾಡಿ ಐತಿಹ್ಯ ಹುಟ್ಟಿಸಿದ್ದಾರೆ. ಅದರ ಪ್ರಕಾರ ಪೀಪಳ್ಳ ಎಂದರೆ ಪೀಪಲ್ -ಆಲದ ಮರ-banyan tree !
5) ‎ಸ್ಥಳನಾಮೆಗಳಿಗೆ ಪೂರಕವಾದ ಐತಿಹ್ಯ:- ಅನೇಕ ಸ್ಥಳನಾಮಗಳ ಮೂಲಾರ್ಥವನ್ನು ಬೇಧಿಸುವುದು ಕಷ್ಟ. ಅವು proto-Dravidianಮೂಲದ್ದು. ಉದಾ:ಕುದುಂಗು, ಜಬಳೆ, ನಿಡುಬೆ ಇತ್ಯಾದಿಗಳು. ಆ ಹೆಸರುಗಳ ಅರ್ಥವನ್ನು ಬಿಡಿಸುವಾಗ ಅದಕ್ಕೊಪ್ಪುವ ಐತಿಹ್ಯ ಸೃಷ್ಟಿಗೊಳ್ಳುತ್ತದೆ. ಪೀಪಳ್ಳದ ಹೊಸ ಐತಿಹ್ಯದಂತೆ. ಪಂಚ ಪಾಂಡವರು ಬಂದ ಐವರ್ನಾಡು ಅರ್ವಾಚೀನವಾಗಿ ಇಟ್ಟ ಹೆಸರು. ಸುಳ್ಯದ ಕೊಳಿಕ್ಕಮಲೆ ಬೆಟ್ಟದ ತುದಿಯಲ್ಲಿ ಕೃಷ್ಣ ಪಾಂಡವರನ್ನು ರಾತ್ರೋರಾತ್ರೆ ಪಯಸ್ವಿನಿಗೆ ಸೇತುವೆ ಕಟ್ಟುವ ಪಂಥದಲ್ಲಿ ಸೋಲಿಸಲು ಕೋಳಿಯಾಗಿ ಕೊಕ್ಕೊಕ್ಕೋ….ಕೋ….. ಎಂದು ಕೂಗಿದನಂತೆ! ಅಡೂರಿನಲ್ಲಿ ಅರ್ಜುನನಿಗೂ ಶಿವನಿಗೂ ಹಂದಿ ಬೇಟೆಯ ವಿಷಯದಲ್ಲಿ ಉರ್ಡಾಪುಡಿ ಲಡಾಯಿಯಾಗಿ ಅವರ ಉರ್ಡಿದ (ಘರ್ಷಣೆ, ಜಗಳ) ಜಾಗವೇ ಅಡೂರು !

ಇನ್ನು ಐತಿಹ್ಯಗಳನ್ನು local and migratory (ಸ್ಥಳೀಯ ಮತ್ತು ವಲಸೆಯಿಂದ ಬಂದ ಐತಿಹ್ಯ) legends ಎಂದೂ ವರ್ಗೀಕರಿಸಿದ್ದಾರೆ. ಅದರ ಬಗ್ಗೆ ಹೆಚ್ಚು ಹೇಳಲು ಇಲ್ಲಿ ಸಮಯವಿಲ್ಲ. ಉದಾಹರಣೆಗಳನ್ನಷ್ಟೇ ನೀಡುತ್ತೇನೆ.
1)ಸ್ಥಳೀಯ ಐತಿಹ್ಯ:- ಪೀಪಳ್ಳದ ಕತೆ, ಅಡೂರಿನ ಕತೆ ಇತ್ಯಾದಿ. ಹೆಸರಿನ ಮೂಲ ತಿಳಿಯದಿದ್ದಾಗ ಬರೀಯ imaginary predictionಗಳಿಂದ ಹುಟ್ಟಿದವು. ಸ್ಥಳ, ವಸ್ತು ವೈಶಿಷ್ಟ್ಯಗಳಿಂದ ಹುಟ್ಟಿದವು. ಅಗೋಳಿ ಮಂಜಣ್ಣನ ಕಲ್ಲು, ಬೃಹತ್ತಾದ ಭೀಮನ ಕಲ್ಲು , ಹಂಪಿಯ ಸೀತೆಯ ಸೆರಗು ಇತ್ಯಾದಿ.
2)ವಲಸೆ ಐತಿಹ್ಯ:- ನಮ್ಮ ಊರಿಗೆ ಪಾಂಡವರು ಬಂದದ್ದು, ರಾಮ ಬಂದದ್ದು, ನಾನೆಲ್ಲೋ ಓದಿದ್ದ ಯುರೋಪಿನ ‘ಈಡಿಪಸ್’ ಐತಿಹ್ಯ , ಕೋಟಿ-ಚೆನ್ನಯರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಊರಿಗೆ ಬಂದಿದ್ದರು ಎಂದು ಅನೇಕ ಗರಡಿಗಳ ಕತೆಗಳು ಹೇಳುತ್ತವೆ.

ಎ.ಕೆ.ಘೋಷರು ತಮ್ಮ Legends from Indian Historyಯಲ್ಲಿ ಐತಿಹ್ಯಗಳ ಉದ್ದೇಶಗಳನ್ನು ತಿಳಿಸುತ್ತಾ -ಐತಿಹ್ಯವು ಜನರು ಏನು ಅದನ್ನು ಮಾಡಿದರು ಎಂಬುದನ್ನು ಮಾತ್ರ ಅಲ್ಲ ಯಾಕೆ ಮಾಡಿದರು ಎಂಬುದನ್ನೂ ತಿಳಿಸುತ್ತವೆ.ಅವರ ಕ್ರಿಯೆಯ ಹಿಂದಿರುವ ಯೋಚನೆಯನ್ನು ನಾವು ಅರಿಯಬಹುದು- ಎಂಬರ್ಥದಲ್ಲಿ ಹೇಳುತ್ತಾರೆ.

ಒಂದೇ ಐತಿಹ್ಯ ಒಂದೇ ಆಶಯದೊಂದಿಗೆ ಭಿನ್ನ ಸ್ಥಳಗಳಲ್ಲಿ ಸ್ಥಳೀಯ ಐತಿಹ್ಯಗಳಾಗುವುದಿದೆ. ಅದು ರಾಮಾಯಣ-ಮಹಾಭಾರತಗಳು ಸ್ಥಳೀಯ ಭಾಷೆಗಳಲ್ಲಿ ಮರುರಚನೆಗೊಂಡ ಹಾಗೆ. ಅನೇಕ ರಾಮಾಯಣಗಳಲ್ಲಿ ರಾಮ ಅಯೋಧ್ಯೆಯಲ್ಲಿ ಹುಟ್ಟದೆ ಅವರವರ ಊರಲ್ಲಿ ಅವರ ಸಮುದಾಯದಲ್ಲಿ ಹುಟ್ಟುವುದಿದೆ ! ಅಡೂರಿ ಮಹಾಲಿಂಗೇಶ್ವರ ಪರಿಸರದಲ್ಲಿ ನಡೆದ ಅರ್ಜುನ-ಶಿವರ ಹಂದಿ ಬೇಟೆಯ ಕಾಳಗದ ಕತೆಯನ್ನು ಸುಳ್ಯದ ತೊಡಿಕಾನದವರು ಅದು ನಮ್ಮಲ್ಲಿ ಆದದ್ದು ಅಂತ ಹೇಳುತ್ತಾರೆ. ತೊಡಿಕಾನದ ಜನರ ಪ್ರಕಾರ ಅರ್ಜುನ ಪಾಶುಪತ ಅಸ್ತ್ರ ಪಡೆದದ್ದು ಅವರ ಊರಲ್ಲಿ. ಶಿವಾರ್ಜುನರ ಕಾಳಗ ನಡೆದದ್ದು ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ.

ಕೋಟೆ-ಕೊತ್ತಲಗಳ ರಚನೆಯ ಸಂದರ್ಭದಲ್ಲಿ ಕೊಟ್ಟ ನರಬಲಿ, ಕೆರೆ ನೀರು ತುಂಬಲು ಸ್ತ್ರೀಯರ ಆತ್ಮಾಹುತಿ ಇನ್ನೊಂದು ಬಗೆಯ ಐತಿಹ್ಯಗಳು. ಕೆಂಪೇಗೌಡನ ಸೊಸೆ ಬೆಂಗಳೂರಿನ ಹೆಬ್ಬಾಗಿಲು ಪದೇ ಪದೇ ಬೀಳುವುದನ್ನು ತಡೆಯಲು ತನ್ನನ್ನೇ ಬಲಿಕೊಟ್ಪುಕೊಂಡಳಂತೆ! ಸುಳ್ಯದ ಗೌಡ ಸಮುದಾಯದ ಅಜ್ಜಿಗಳು ಹಾಡುವ ಶೋಭಾನೆ ಹಾಡಿನಲ್ಲಿ ಸಕಲೇಶಪುರದ ಹೊಸಕೋಟೆಯ ಗೌಡ ಮುಖಂಡನ ಸೊಸೆ ಕೆಂಚಮ್ಮ ಹೊಸ ಕೆರೆಯ ನೀರು ತುಂಬಲು ತನ್ನನ್ನೇ ಅರ್ಪಿಸಿಕೊಂಡಳು. ನಾನು ಅವಳಿಗಾಗಿ ಕಟ್ಟಿದ ಹೊಸಕೋಟೆ ಕೆಂಚಮ್ಮನ ದೇವಾಲಯವನ್ನೂ, ಆ ಕೆರೆಯನ್ನೂ ನೋಡಿದ್ದೇನೆ. ಈಗ ಆಕೆ ಕೆಂಚಾಂಬಿಕೆಯಾಗಿ ಹಾಸನಾಂಬೆಯ ತಂಗಿಯಾಗಿದ್ದಾಳೆ.
(ಸತಿ ಹೋದ ಸ್ತ್ರೀಯರ ದೇವಾಲಯಗಳು ಅನೇಕ ಇವೆ. ಸುಳ್ಯದ ಬೆಳ್ಳಾರೆಯ ಮೇಲಿನ ಪೇಟೆಯ “ಮಾಸ್ತಿಕಟ್ಟೆ” ಓರ್ವ ಸ್ತ್ರೀ ಮಹಾಸತಿಯಾಗಿ ತನ್ನ ಗಂಡನ ಚಿತೆಗೆ ಹಾರಿ ಆತ್ಮಾರ್ಪಣೆ ಮಾಡಿದ ಜಾಗ. ಅಲ್ಲೊಂದು ಒಕ್ಕೈ(ಒಂದು ಕೈ)ಯ ಮಾಸ್ತಿಕಲ್ಲು ಇತ್ತಲ್ಲದೆ ಅದನ್ನು ದೊಡ್ಡ ಅಂಗಡಿ ಕಟ್ಟುವಾಗ ಬೇರೆಲ್ಲೋ ಎಸೆದಿದ್ದಾರೆ !)

ಆದರೆ “ಇತಿಹಾಸ” ಪದದಿಂದಲೇ ಐತಿಹ್ಯ ಹುಟ್ಟಿದ್ದರೂ ಅದು history ಎಂಬ ನೆಲೆಯಲ್ಲಿ ಬಳಕೆಯಾಗುತ್ತದೆ. ಇದಕ್ಕೆ “ಚರಿತ್ರೆ” ಎಂಬುದು ಪರ್ಯಾಯ ಅರ್ಥ ಮತ್ತು ಯೋಗ್ಯ ಪದ. historiographyಯಲ್ಲಿ ಚರಿತ್ರೆಯ ಬರವಣಿಗೆಗಳಲ್ಲಿ ಬಳಸಬೇಕಾದ ಆಕರಗಳು ಬಹಳ ವೈಜ್ಞಾನಿಕವಾದವು. ಚರಿತ್ರೆಗೆ ಆಧಾರಗಳು ಮುಖ್ಯ ಮತ್ತು ಅಗತ್ಯ. ಶಾಸನಗಳು, ಪಳೆಯುಳಿಕೆಗಳು, ತಾಳೆಗರಿಗಳು, ನಾಣ್ಯಗಳು, ಸಮಕಾಲೀನ ಸಾಹಿತ್ಯ-ಬರಹಗಳು ಇತ್ಯಾದಿಗಳು. ಇವುಗಳೊಂದಿಗೆ ಐತಿಹ್ಯವನ್ನೂ ಆಕರವಾಗಿ ಬಳಸಬಹುದಾದರೂ ಜಾಗ್ರತೆ ಇರಬೇಕಾಗುತ್ತದೆ. ಇತಿಹಾಸಕಾರ ಇಲ್ಲಿ ಹಾದಿತಪ್ಪಬಹುದು. ಕೋಟಿ-ಚೆನ್ನಯರ ಪಾಡ್ದನದಿಂದ ಸ್ಥಳೀಯ ಇತಿಹಾಸವನ್ನು ಕಟ್ಟುವ ರೀತಿಯೂ ಎಚ್ಚರಿಕೆಯನ್ನು ಬಯಸುತ್ತದೆ. ಇತಿಹಾಸ ರಚನೆ ಒಂದು ವೈಜ್ಞಾನಿಕ ಶಿಸ್ತು. ಓರ್ವ ಇತಿಹಾಸಕಾರ ನಿರ್ಣಯಿಸಿದ ಅಂಶ ಕೆಲಕಾಲಗಳ ನಂತರ ಹೊಸ ಸಂಶೋಧನೆಗಳಿಂದ ತಿರಸ್ಕೃತಗೊಳ್ಳಬಹುದು. ಇದು ವಿಜ್ಞಾನದ ನಿಯಮಗಳಂತೆ, ಅ ಕಾಲಕ್ಕೆ ಸತ್ಯ!

ಉದಾಹರಣೆಗೆ ಆರ್.ನರಸಿಂಹಾಚಾರ್ “ವಡ್ಡಾರಾಧನೆಯ” ಕರ್ತೃ ಶಿವಕೋಟ್ಯಾಚಾರ್ಯರೆಂದು ನಿರ್ಣಯಿಸಿದ್ದರು. ಆಮೇಲೆ ಮತ್ತಾರೋ ಓರ್ವ ಸಂಶೋಧಕರು ಅದರ ಹೆಸರು “ಉಪಸರ್ಗಕೇವಲಿಗರ ಕತೆಗಳು” ಎಂದು ಹೇಳಿದರು. ಆ ಕೃತಿಯ ಬಗ್ಗೆ ಅನೇಕ ಸಂಶೋಧನೆಗಳಾದರೂ ಅಂತಿಮ ನಿರ್ಣಯವಿರಲಿಲ್ಲ! ಇಂದೂ ಅನೇಕರು ಅದರ ಕರ್ತೃ ಶಿವಕೋಟ್ಯಾಚಾರ್ಯರೆಂದೇ ತಿಳಿದಿದ್ದಾರೆ. ಡಾ.ಹಂಪ ನಾಗರಾಜಯ್ಯನವರು (ಬಹುಶಃ ಮೂಡುಬಿದಿರೆಯ ಬಸದಿಯಲ್ಲಿ ಸಿಕ್ಕ ಆಧಾರದಂತೆ ?!?!) ಅದರ ಕರ್ತೃ 9ನೇ ಶತಮಾನದ ರಾಷ್ಟ್ರಕೂಟರ ಕಾಲದ ಯಾಪನೀಯ ಪಂಥೀಯ “ಭ್ರಾಜಿಷ್ಣು” ಎಂದೂ ಅದರ ಹೆಸರು “ಆರಾಧನಾ ಕರ್ಣಾಟಟೀಕಾ” ಎಂದು ನಿರ್ಣಯಿಸಿದ್ದಾರೆ! ಚರಿತ್ರೆ ರಚನೆಯ ಪ್ರಕ್ರಿಯೆ ಈ ಬಗೆಯದ್ದು.

ಇನ್ನು ಜನಪದದ ಐತಿಹ್ಯಗಳು ಶಿಷ್ಟ ಪುರಾಣಗಳಾಗಿ ಮರು ರಚನೆಯಾದದ್ದು; ಆ ಪುರಾಣಗಳು ದೇಶದಲ್ಲೆಡೆ ವ್ಯಾಪಿಸಿ ಶಿಷ್ಟ ಮತ್ತು ಜಾನಪದೀಯವಾಗಿ ಮರುಸೃಷ್ಟಿಗೊಳ್ಳುವುದು; ಪುರಾಣಗಳು ಸ್ಥಳೀಯವಾಗಿ ಮರು ಐತಿಹ್ಯಗಳಾಗುವುದನ್ನು “ರಾಮಾಯಣ-ಮಹಾಭಾರತ”ಗಳಂತಹ ಕಾವ್ಯಗಳಿಂದ ವಿವರಿಸಬಹುದು. ಇಂದು ಈ ಐತಿಹ್ಯಗಳನ್ನು ಇತಿಹಾಸವೆಂದೇ ಬಗೆದು ಜಗಳವಾಡುವುದು……… ಹೀಗೇ….ಹೇಳಿದ್ರೆ ಮುಗಿಲಿಕ್ಕಿಲ್ಲ…….!

ಕೊನೆಯದಾಗಿ ಐತಿಹ್ಯ , ಪುರಾಣ(ಹಳೆಯದ್ದು) ಗಳನ್ನು ನಿಜವಾಗಿ ಹೀಗೇ ನಡೆದಿದೆ ಎಂದು ವಾದಿಸುವಂತಿಲ್ಲ. ಅವಕ್ಕೆ ವೈಜ್ಞಾನಿಕವಾಗಿ ಸಾಬೀತುಪಡಿಸಬಲ್ಲ ಆಧಾರಗಳ ಕೊರತೆ ಇದೆ. ಅದಕ್ಕೆ ಕಾಳಿದಾಸ ತನ್ನ ಮಾಲವಿಕಾಗ್ನಿ ಮಿತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ-
ಹಳೆಯದೆಂಬ ಮಾತ್ರಕ್ಕೆ ಎಲ್ಲವೂ ಸತ್ಯವಲ್ಲ, ಹೊಸದೆಂದು ಸುಂದರವಲ್ಲದ್ದಲ್ಲ. ಸಜ್ಜನರು ಪರೀಕ್ಷಿಸಿ ನಿರ್ಣಯಕ್ಕೆ ಬರುತ್ತಾರೆ. ಮೂರ್ಖರು ಪರರ ಬುದ್ಧಿಗೇ ಜೋತುಬೀಳುತ್ತಾರೆ.
“ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ” ಅಂತ !

LEAVE A REPLY

Please enter your comment!
Please enter your name here