ಲೇಖಕರು: ಯಾಸೀನ್ ಕೋಡಿಬೆಂಗ್ರೆ

ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಕುತೂಹಲ ಭರಿತವಾಗಿ ಭಾಷಣ ಮಾಡಿ ದೇಶದ ನೂರ ಮೂವತ್ತು ಕೋಟಿಯ ಜನರ ಎದುರು ಬಂದು ಜನತ ಕರ್ಫ್ಯೂಯ ಬಗ್ಗೆ ಘೋಷಣೆ ಮಾಡಿದ್ದರು, ಅದರೊಂದಿಗೆ ಸಂಜೆ ಐದು ಗಂಟೆಗೆ ನಮ್ಮ ನಮ್ಮ ಬಾಲ್ಕನಿಯೋ ಮನೆಯಲ್ಲೇ ಚಪ್ಪಾಳೆ ತಟ್ಟಿ ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಗಳನ್ನು ಅವರು ತಮ್ಮ ಪ್ರಾಣದ ಹಂಗುತೊರೆದು ಕೊರೋನಾ ವೈರಸ್ ವಿರುದ್ಧ ಮಾಡುತ್ತಿರುವ ಹೋರಾಟವನ್ನು ಅಭಿನಂದಿಸಲು ಸೂಚಿಸಿದ್ದರು. ಇಡೀ ದೇಶಕ್ಕೆ ದೇಶವೇ ಕೋರಾನಾ ವೈರಸ್ ಹೆದರಿಕೆಯಿಂದ ಪ್ರಧಾನಿ ಮೋದಿಯವರ ಕರೆಗೆ ಒಗೊಟ್ಟು ಮಾರ್ಚ್ 22 ರಂದು ಸ್ತಬ್ಧವಾಗಿತ್ತು. ಅದರ ನಂತರ ಎಡವಟ್ಟು ಮಾಡಿಕೊಂಡ ಜನತೆ ಗುಂಪು ಗುಂಪಾಗಿ ಬಂದು ಹಲವೆಡೆ ಚಪ್ಪಾಳೆ ತಟ್ಟಿ ಇಡೀ ದಿನ ಮನೆಯೊಳಗಿದ್ದ ಆಶಯಕ್ಕೆ ಮಣ್ಣು ಎರಚಿದ್ದಾರೆ. ಕೆಲವೆಡೆ ಇದನ್ನು ರಾಜಕೀಯ ಕಾರ್ಯಕ್ರಮದಂತೆ ಗುಂಪಿನಲ್ಲಿ ಚಪ್ಪಾಳೆ ಹೊಡೆದು ಕೋರಾನಾ ವೈರಸ್ ನ ಗಂಭೀರತೆಯನ್ನು ಹಗುರವಾಗಿ ಪರಿಗಣಿಸಿರುವುದು ದೇಶದ ಮಟ್ಟಿಗೆ ಒಳ್ಳೆಯ ಸೂಚನೆಯಲ್ಲ. 
ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವ ಸಂದರ್ಭದಲ್ಲಿ ಈ ದೇಶದ ಜನತೆ ಕೋರೊನಾ ವೈರಸ್ ವಿರುದ್ಧ ಹೋರಾಡಲು ಕೆಲವೊಂದು ಸುರಕ್ಷ ಕ್ರಮದೊಂದಿಗೆ ದೇಶದ ಅರ್ಥಿಕತೆಯ ಮೇಲೆ ಬಿದ್ದಿರುವ ಹೊಡೆತವನ್ನು ತಪ್ಪಿಸಲು ಪ್ರಮುಖ ಯೋಜನೆಗಳನ್ನು ಘೋಷಿಸಬಹುದೆಂದು ಜನರು ಭಾವಿಸಿದ್ದರು. ಆದರೆ ಎಂದಿನಂತೆ ನಿರಾಸೆ ಮೂಡಿಸಿದರು. ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೆಗೆದುಕೊಂಡಷ್ಟು ಕ್ರಮಗಳನ್ನು ಕೈಗೊಂಡರು ದೇಶಕ್ಕೆ ದೇಶ ತಲೆದೂಗುತ್ತಿತ್ತು.‌ಆದರೆ ಮೋದಿ ಮಾತ್ರ ಇದರಲ್ಲಿ ವಿಫಲರಾದರು.
 ಇನ್ನು ದೇಶದಲ್ಲಿ ಮಾರ್ಚ್ 22 ರಂದು ಘೋಷಿಸಿದ ಜನತಾ ಕರ್ಫ್ಯೂ ಮಾತ್ರ ಭಾರೀ ಯಶಸ್ವಿಯಾಗಿದೆ. ಈ ಮಟ್ಟಿಗೆ ಮೋದಿಯವರನ್ನು ಪ್ರಶಂಸೆ ಮಾಡಲೇಬೇಕು. ಕೋರೊನಾ ವೈರಸ್ ತಡೆಯಬೇಕಾದರೆ ‘ಸಾಮಾಜಿಕ ದೂರ’ ಅಗತ್ಯವಿದೆ. ಇಲ್ಲದಿದ್ದರೆ ಈ ರೋಗ ಭಾರತದಂತಹ ದೇಶದಲ್ಲಿ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದರೆ ಇದು ಒಂದು ದಿನದ ರಾಜಕೀಯ ಕಾರ್ಯಕ್ರಮವಾದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಇದನ್ನು ಈ ರೋಗ ಹತೋಟಿಗೆ ಬರುವವರೆಗೆ ಮುಂದುವರಿಸಬೇಕಾಗಿದೆ.‌ ಅದರೊಂದಿಗೆ ಜನರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಪೂರೈಸಲು ಕೂಡ ಸರಕಾರ ಕ್ರಮ ಕೈಗೊಳ್ಳಬೇಕು. ದಿನಗೂಲಿ ನೌಕರರಿಗೆ ಆಹಾರದ ವ್ಯವಸ್ಥೆ ಸರಕಾರ ಉಚಿತವಾಗಿ ಮಾಡಬೇಕು. ಕೋರೊನಾ ವೈರಸ್ ನಿಯಂತ್ರಣದೊಂದಿಗೆ ಅರ್ಥಿಕ ಕುಸಿತವನ್ನು ಸರಕಾರ ಸಮರ್ಥವಾಗಿ ನಿಭಾಯಿಸಬೇಕು. ಇಲ್ಲದಿದ್ದರೆ ಈ ವೈರಸ್’ನೊಂದಿಗೆ ದೇಶದ ನಾಗರಿಕರು ಅರ್ಥಿಕ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆಯೇ ಹೆಚ್ಚು.

ಧರ್ಮಧಾರಿತ ರಾಜಕೀಯಕ್ಕೆ ಹೆಚ್ಚು ಒಲವು ನೀಡುತ್ತಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇಂತಹ ಸಂದರ್ಭದಲ್ಲಿ ತನ್ನ ಸೈದ್ಧಾಂತಿಕವಾದ ಸಂಕುಚಿತ ವಾದಗಳನ್ನು ಬದಿಗೊತ್ತಿ ಸರ್ವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದರೆ ಭಾರತ ಯಶಸ್ವಿಯಾಗಿ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ.

 ಇನ್ನು ನಾಗರಿಕರು ಕೂಡ ಈ ವೈರಸ್’ನ ಬಗ್ಗೆ ಅಸಡ್ಡೆ ತೋರದೆ ಹೆಚ್ಚಿನ ಸಮಯ ಮನೆಯಲ್ಲೇ ಉಳಿಯಲು ಪ್ರಯತ್ನಿಸಬೇಕಾಗಿದೆ. ಸಂತೋಷದಿಂದ ಎಲ್ಲರೂ ಜೊತೆಯಾಗಿ ಚಪ್ಪಾಳೆ ಹೊಡೆಯಲು ಇದು ಉತ್ಸಾಹವಲ್ಲ, ಡೆಡ್ಲಿ ವೈರಸ್ ಎಂಬ ಕನಿಷ್ಠ ಪರಿಜ್ಞಾನ ಬೆಳಸಿಕೊಳ್ಳಬೇಕಾದ ಅವಶ್ಯಕತೆ ಖಂಡಿತವಿದೆ. ಎಲ್ಲರೂ ಸೇರಿ ಪ್ರಜ್ಞಾವಂತಿಕೆಯೊಂದಿಗೆ ಕೋರೊನಾ ಮಹಾಮಾರಿಯನ್ನು ಎದುರಿಸೋಣ, ಆರೋಗ್ಯವಂತ ಭಾರತ ಕಟ್ಟೋಣ.

LEAVE A REPLY

Please enter your comment!
Please enter your name here