ಮಹಮ್ಮದ್ ಶರೀಫ್ ಕಾಡುಮಠ


ಭಗತ್ ಸಿಂಗ್ ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಾನೆ.‌ ಇಪ್ಪತ್ಮೂರರ ಹರೆಯದಲ್ಲಿ ಭಗತ್ ಸಿಂಗ್ ಆಡಿದ ಮಾತು, ನಿಜಕ್ಕೂ ಈ ಹೊತ್ತಿನಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗಿ‌ ಕಾಡುತ್ತದೆ. ‘ಬ್ರಿಟಿಷರು ಬಿಟ್ಟು ಹೋದ ಅಧಿಕಾರದ ಕುರ್ಚಿಯಲ್ಲಿ ಭಾರತೀಯರು ಕೂರುವುದಷ್ಟೇ ಆಗಿಬಿಡಬಹುದೇ ಈ ಸ್ವಾತಂತ್ರ್ಯ’ ಎಂಬ ಭಯವನ್ನು ಭಗತ್ ಅಂದೇ ಹೊರಹಾಕಿದ್ದ. ನಾನು ಈ ಮಾತನ್ನು ಹಲವು ಬಾರಿ ಉಲ್ಲೇಖಿಸಿದ್ದೇನೆ.‌ ಕಾರಣವಿಷ್ಟೆ, ಆತ ನಿರ್ಭಯಿ. ಸಾವಿಗೂ ಹೆದರದೆ ನೇಣಿಗೆ ನಗುನಗುತ್ತ ಕೊರಳೊಡ್ಡಿದ ಈ ಕ್ರಾಂತಿಕಾರಿಗೆ ‘ಭಯ’ ಆಗುವುದೆಂದರೆ ಅದು ಎಂತಹಾ ದೊಡ್ಡ ದುರಂತವಾಗಿರಬಹುದು ಯೋಚಿಸಿ… ಭಗತ್ ಸಿಂಗ್ ನಲ್ಲಿ ಭಯವಿದ್ದದ್ದು  ಬ್ರಿಟಿಷರ ಬಗ್ಗೆ ಅಲ್ಲ, ಭಾರತೀಯರ ಬಗ್ಗೆಯೇ. ಬ್ರಿಟಿಷರಿಂದ ಭಾರತ ಸ್ವತಂತ್ರವಾಗುವುದರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ ಎಂಬ ಮಾತನ್ನೂ ಆತ ಈ ಆತಂಕದ ಮಾತಿಗಿಂತ ಮೊದಲು ಹೇಳಿದ್ದ. 
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಸ್ವಲ್ಪಮಟ್ಟಿಗೆ ಜನರು ಸಂಕಷ್ಟ ಅನುಭವಿಸಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು.‌ ತುರ್ತು ಪರಿಸ್ಥಿತಿಯಂತಹ ಸಂದರ್ಭಗಳು ಈ ಅನುಭವವನ್ನು ದೇಶದ ಜನತೆಗೆ ನೀಡಿದ್ದವು. ಬ್ರಿಟಿಷರ ಆಡಳಿತದ ಮುಂದೆ ಅದೇನೂ ದೊಡ್ಡದೆನಿಸಲಿಲ್ಲ ಅವರಿಗೆ. ಆದರೆ ಸದ್ಯದ ಭಾರತ ಬ್ರಿಟಿಷರಿದ್ದಾಗಿನ ಸಂದರ್ಭಗಳಿಗಿಂತಲೂ ಭೀಕರವಾಗಿದೆ. ಎಂತಹ ಅಪಾಯಕಾರಿ ಸ್ಥಿತಿಯಲ್ಲಿ ನಾವು- ಈ‌ ನೆಲದ ಪ್ರಜೆಗಳು ಇದ್ದೇವೆ ಎಂಬುದನ್ನು ಅರಗಿಸಿಕೊಳ್ಳಲೂ ಆಗುತ್ತಿಲ್ಲ. 
ಸೈದ್ಧಾಂತಿಕವಾಗಿ ಚರ್ಚೆ, ಸಂವಾದದ ಮೂಲಕ ಸೆಣಸಲು ಸಾಧ್ಯವಿಲ್ಲದ ದುರ್’ಬಲ’ರು ಇದೀಗ ಜೆಎನ್ಯೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಂದೆಂದೂ ನಡೆದಿರದ ಇಂತಹ ಅಮಾನವೀಯ ಘಟನೆಗಳು ಈಗೀಗ ಹೆಚ್ಚುತ್ತಿವೆ. ಪೊಲೀಸರು ಯಾವುದೋ ಕಾರ್ಯಕ್ರಮ ನೋಡಿದ ಹಾಗೆ ನಿಂತು ನೋಡಿದ್ದನ್ನು ಬಿಟ್ಟರೆ ತಮ್ಮ ಕರ್ತವ್ಯ ಮಾಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಸ್ವತಃ ನಿರ್ಧಾರದಿಂದ ಹೀಗೆ ಸುಮ್ಮನೆ ನಿಲ್ಲಲು ಸಾಧ್ಯವಿಲ್ಲ. ‌ಅಥವಾ ಅವರೂ ಸೇರಿ ಅಲ್ಲಿ ಸೇರಿದ್ದ ಜನರ ಮೇಲೆ ಹಲ್ಲೆ ನಡೆಸಲು ಕೊರಳಪಟ್ಟಿ ಹಿಡಿದೆಳೆಯಲು ಸಾಧ್ಯವಿರಲಿಲ್ಲ. ಪೊಲೀಸರನ್ನು ಬಳಸಿ ಇಂತಹ ಕೃತ್ಯಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಜೆಎನ್ಯೂ ಗೇಟಿನ ಬಳಿಗೆ ಬರುವ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಈ ಕೃತ್ಯ ನಡೆಸಲಾಗಿದೆ. ಅಲ್ಲದೆ ಮಧ್ಯಾಹ್ನವೇ ಅಲ್ಲಿನ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಅಪರಿಚಿತರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಕಾನೂನು ಮೌನವಾಗುವ ಮೂಲಕ ತನ್ನ ಅಧಿಕಾರವನ್ನು ಜನರ ಕೈಗೆ ಒಪ್ಪಿಸುತ್ತಿದೆಯೇ? ಜನರೇ ಕಾದಾಡಿ ಎಲ್ಲವನ್ನೂ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಸೂಚಿಸುತ್ತಿದೆಯೇ? ಇದನ್ನು ಒಂದು ಷಡ್ಯಂತ್ರದ ಹಾಗೆ, ಗಲಭೆಯ ಹೆಸರಿನಲ್ಲಿ ಅಮಾಯಕರನ್ನು ಜೈಲಿಗಟ್ಟಿ ಬಲಿಷ್ಠ ಶಕ್ತಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಕೇಂದ್ರ ಮಾಡುತ್ತಿದೆಯೇ? ಇಂತಹ ಆತಂಕಕಾರಿ ಪ್ರಶ್ನೆಗಳು‌ ಮನಸ್ಸಿನ ಮುಂದೆ ಬಂದು ನಿಲ್ಲುತ್ತಿವೆ. 


ವಿದ್ಯಾರ್ಥಿ ಶಕ್ತಿಯನ್ನು, ಹೋರಾಟದ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ವಿಶ್ವವಿದ್ಯಾಲಯ ಜೆಎನ್ಯೂ. ಪ್ರಖರ ಚಿಂತಕರನ್ನು ದೇಶಕ್ಕೆ ನೀಡಿದ ವಿಶ್ವವಿದ್ಯಾಲಯ ಅದು. ಎಲ್ಲಕ್ಕಿಂತ ಮುಖ್ಯವಾಗಿ ಬಡ ಕುಟುಂಬದ ವಿದ್ಯಾರ್ಥಿಗಳು ಕಲಿಯುತ್ತಿರುವ ವಿಶ್ವವಿದ್ಯಾಲಯ. ಜಗತ್ತೇ ನೋಟ‌ ನೆಟ್ಟಿರುವ ಈ ವಿಶ್ವವಿದ್ಯಾಲಯವನ್ನು ಕೇವಲ ಸಿದ್ಧಾಂತಕ್ಕಾಗಿ ತಮ್ಮ ಕೈವಶ ಮಾಡಿಕೊಳ್ಳುವ ಪ್ರಯತ್ನ ಬಲಪಂಥೀಯರಿಂದ‌ ನಡೆಯುತ್ತಿದೆ. ವಿದ್ಯಾಸಂಸ್ಥೆಯೊಂದನ್ನು ಹಿಂಸಾತ್ಮಕವಾಗಿ, ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿ ವಶಪಡಿಸಲು ಪ್ರಯತ್ನಿಸುವುದು ನಿಜಕ್ಕೂ ಹಾಸ್ಯಾಸ್ಪದ. ‌ಇದು ಹಿಂಸೆಗಿಂತ ಹೆಚ್ಚಾಗಿ ಸೈದ್ಧಾಂತಿಕವಾಗಿ ಸಂವಾದದ ಮೂಲಕ ಎದುರುಗೊಳ್ಳುವಲ್ಲಿ ಅವರ ದೌರ್ಬಲ್ಯವನ್ನು ದೊಡ್ಡಮಟ್ಟದಲ್ಲಿ ಧ್ವನಿಸುತ್ತಿದೆ.
ಬ್ರಿಟಿಷರು ಖಂಡಿತಾ ನೆನಪಾಗಲೇಬೇಕು. ಮನೆಯ ಮಕ್ಕಳು ತಪ್ಪು ಮಾಡಿದರೆ ಬುದ್ಧಿ ಹೇಳಲು, ಅವರಿಗೆ ಅವರ ತಪ್ಪಿನ ಅರಿವಾಗಲು ಪೋಷಕರು ಹೊಡೆಯುತ್ತಾರೆ. ಅವರ ಹೊಡೆತದಲ್ಲಿ ಸಿಟ್ಟಿಗಿಂತ ಹೆಚ್ಚು ಪ್ರೀತಿ ಇರುತ್ತದೆ. ಆದರೆ ಇಲ್ಲಿ ಆ ವಿದ್ಯಾರ್ಥಿಗಳು ಯಾವ ತಪ್ಪೂ ಮಾಡಿಲ್ಲ, ವಿನಾಕಾರಣ ಹಿಂಸೆ ಅನುಭವಿಸಬೇಕಾಯಿತು. ಯಾವ ಸಿದ್ಧಾಂತದವರೇ ಇರಲಿ, ಯಾವ ವಿಶ್ವವಿದ್ಯಾಲಯವೇ ಇರಲಿ, ಅವರೆಲ್ಲ ನಾಳೆ ದೇಶ ಮುನ್ನಡೆಸುವ ಅಪ್ಪಟ ಭಾರತೀಯ ಪ್ರಜೆಗಳು.‌ ಅವರು ಈ ಮಣ್ಣಿನ ಮಕ್ಕಳಲ್ಲವೇ? ಸ್ವಂತ ನೆಲದ ಮಕ್ಕಳ ಮೇಲೆ ಈ ರೀತಿಯ ಹಿಂಸಾಚಾರವನ್ನು ಕೇಂದ್ರ ಸರ್ಕಾರದ ಮೌನಸಮ್ಮತಿಯೊಂದಿಗೆ ನಡೆಸಲಾಗುತ್ತದೆ ಎಂದರೆ? ಇದು ಬ್ರಿಟಿಷರಿಗಿಂತಲೂ ಅಪಾಯಕಾರಿ ಅಲ್ಲವೆ? 


ಅಮಿತ್ ಶಾ ಇಂದು ದೇಶದ ಜನತೆಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಮಾತು, ನಡೆ, ನಿರ್ಧಾರಗಳು ಇದನ್ನು ಸೂಚಿಸುತ್ತಿದೆ. ಜೆಎನ್ಯೂ ಘಟನೆಯ ಹಲವು ದಿನಗಳ‌ ಮೊದಲು ಶಾ ನೀಡಿದ್ದ ‘ತುಕ್ಡೆ ತುಕ್ಡೆ ಗ್ಯಾಂಗ್ ಗೆ ಪಾಠ ಕಲಿಸುವ ಸಮಯ ಬಂದಿದೆ’ ಎಂಬ ಹೇಳಿಕೆ ಈಗ ಯಾಕೋ ತಾಳೆಯಾಗುತ್ತಿದೆ. ಘಟನೆಗಳು ನಡೆದ ಮೇಲೆ ‘ಇದು ಅತ್ಯಂತ ಅಮಾನವೀಯ ಘಟನೆ, ಹೀಗಾಗಬಾರದಿತ್ತು’ ಎಂದು ಅಧಿಕಾರದಲ್ಲಿರುವವರ ಬಾಯಿಂದ ಬರಬಹುದು. ಆದರೆ ‘ಅವರ ಮಾತನ್ನು ನೀವು ನಂಬಬೇಡಿ, ಅವರ ವರ್ತನೆಯನ್ನು ಗಮನಿಸಿ’ ಎಂದು ಪ್ರಕಾಶ್ ರೈ ಹಿಂದೊಮ್ಮೆ ಹೇಳಿದಂತೆ ಈ ಹೊತ್ತು, ಇಂತಹ ಸರ್ವಾಧಿಕಾರಿ ನಾಯಕರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವ ಸಮಯವೇ ಅಲ್ಲ. ಬದಲಾಗಿ ಅವರ‌ ವರ್ತನೆಗಳ ಮೇಲೆ ಗಮನ ಹರಿಸಬೇಕಿದೆ. ನಾಚಿಕೆಗೇಡಿನ ಸಂಗತಿಯೆಂದರೆ ನಮ್ಮ ದೇಶದ ಪ್ರಧಾನಿ ಹಾಗೂ ಗೃಹಸಚಿವರು ಬಳಸುತ್ತಿರುವ ಭಾಷೆ. ಯಾರೋ ಬಳಸುವ ತುಕ್ಡೆ ತುಕ್ಡೆ ಗ್ಯಾಂಗ್, ಅರ್ಬನ್ ನಕ್ಸಲ್, ದೇಶದ್ರೋಹಿ ಇಂತಹ ಪದಗಳು ಅಧಿಕಾರದ ಉನ್ನತ ಹುದ್ದೆಯಲ್ಲಿ ಕುಳಿತ ಇಂತಹ ನಾಯಕರ ಬಾಯಿಂದ ಹೊರಬರುತ್ತದೆ ಎಂಬ ಆತಂಕಕಾರಿ ಸಂಗತಿಯೇ ಇವರೆಷ್ಟು ಅಪಾಯಕಾರಿ ಎಂಬುದನ್ನು ನಮಗೆ ಈಗಾಗಲೇ ಮನದಟ್ಟಾಗಿಸಬೇಕಿತ್ತು.‌
ಮೋದಿಗೂ ಮುನ್ನ ಹತ್ತು ವರ್ಷ ಅಧಿಕಾರ ನಡೆಸಿದ ಮನ್ ಮೋಹನ್ ಸಿಂಗ್ ರನ್ನು ಇದೇ ಮೋದಿ ಮೌನ ಮೋಹನ್ ಸಿಂಗ್ ಎಂದು ಗೇಲಿ ಮಾಡಿದ್ದಿದೆ. ಮಾತಿಗಿಂತ ಕೃತಿಯ ಮೇಲೆ ಮನಮೋಹನ್ ಸಿಂಗ್ ನಂಬಿಕೆ ಇರಿಸಿದ್ದರು ಹಾಗೂ ತನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಮಾಡಿದ್ದರು. ಆದರೆ ಎಂದೂ ಕೂಡಾ ಇಂತಹ ಭಾಷೆಯನ್ನು ಬಳಸಿರಲಿಲ್ಲ. ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಯಾವುದೇ ಸಾಕ್ಷ್ಯಾಧಾರವಿಲ್ಲದೆ ಜೆಎನ್ಯೂ ವಿದ್ಯಾರ್ಥಿಗಳನ್ನು ಹೀಯಾಳಿಸುವ ಕೆಂದ್ರಸಚಿವರಿಗೆ ಕಿಂಚಿತ್ತಾದರೂ ಆಲೋಚಿಸಬಾರದೆ? ತುಕ್ಡೆ ತುಕ್ಡೆ ಘೋಷಣೆ ಕೂಗಿದ್ದಕ್ಕೆ ಸಾಕ್ಷಿ ಇದ್ದಿದ್ದರೆ ಕನ್ಹಯ್ಯಾ ಜೈಲು ಪಾಲಾಗಬೇಕಿತ್ತಲ್ಲವೇ? ಕಡೇಪಕ್ಷ ಆತನ ಮೇಲೆ ಚಾರ್ಜ್ ಶೀಟ್ ಆದರೂ ಸಲ್ಲಿಕೆಯಾಗಬೇಕಿತ್ತಲ್ಲ? ಇದು ಯಾವುದನ್ನೂ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ನಮ್ಮ ಗೃಹಸಚಿವರಿಗೆ ಇಲ್ಲವೇ? ಅವರನ್ನೂ ನಾವು ಮಭ್ಭಕ್ತರ ಹಾಗೆ ಕಾಣಬೇಕೆ? ಭಕ್ತರು ಯಾವುದನ್ನು ಬೇಕಾದರೂ ನಂಬುತ್ತಾರೆ ಅವರಿಗೆ ಸತ್ಯದ ಅಗತ್ಯವೇ ಇಲ್ಲ. ಏಕೆಂದರೆ ಸುಂದರ ಸುಳ್ಳು ಅವರಿಗೆ ನೀಡುವಷ್ಟು ಖುಷಿಯನ್ನು ಕಹಿ ಸತ್ಯಗಳು ನೀಡವು. ಹಾಗಾಗಿ ಅದೇ ರೀತಿಯ ಸುಂದರ ಸುಳ್ಳುಗಳೇ ಈ ಪ್ರಧಾನಮಂತ್ರಿ, ಗೃಹಸಚಿವರಿಗೂ ಹಿತವೆನಿಸುತ್ತದೆ ಎಂದರೆ, ನಿಜಕ್ಕೂ‌ ಇಂತಹ ನಾಯಕರನ್ನು ಗೆಲ್ಲಿಸಿ, ಗೆಲುವಿಗೆ ಸಹಕರಿಸಿದ ಇವಿಎಂನಿಂದಾಗಿ, ನಮ್ಮನ್ನು ನಾವು ಯಾವ ಪ್ರಪಾತಕ್ಕೆ ದೂಡಿಹಾಕಿದ್ದೇವೆ ಎಂಬ ದುಃಖವಾಗುತ್ತಿದೆ. 


ಜಗತ್ತಿನ ಇಪ್ಪತ್ತು ಪ್ರಭಾವಿತ ವ್ಯಕ್ತಿಗಳ ಸಾಲಿನಲ್ಲಿ ಇಂದು ಅಮಿತ್ ಶಾ ಹೆಸರಿಲ್ಲ, ಕನ್ಹಯ್ಯಾ ಎಂಬ ಅಪ್ಪಟ ಭಾರತೀಯನ ಹೆಸರಿದೆ. ಯಾವ ಮುಖವಿಟ್ಟುಕೊಂಡು ಈಗ ಅವರು ಈ‌ ಕನ್ಹಯ್ಯಾನನ್ನು ತುಕ್ಡೆ ತುಕ್ಡೆ ಎನ್ನುತ್ತಾರೆ? ಇನ್ನೊಂದು ವಿಚಾರ ಎಂದರೆ, ಈ ಸರ್ಕಾರದಿಂದ ಜನತೆ ಒಳಿತನ್ನು, ಸುರಕ್ಷತೆಯನ್ನು, ಅಭಿವೃದ್ಧಿಯನ್ನು ನಿರೀಕ್ಷಿಸುವುದೇ ತಪ್ಪು ಎಂದನಿಸುತ್ತದೆ. ಜ್ಞಾನದ ಮಹತ್ವ ಗೊತ್ತಿಲ್ಲದವರ ಕೈಯಲ್ಲಿ ಅಧಿಕಾರ ಕೊಟ್ಟುಬಿಟ್ಟಿದ್ದೇವೆ. ನಮ್ಮ ಮುಂದಿರುವುದು ಎರಡೇ ಆಯ್ಕೆ, ಹೋರಾಟದ ಮೂಲಕ ಸರ್ಕಾರ ಬೀಳಿಸುವುದು ಅಥವಾ ಹೀಗೇ ಅನುಭವಿಸುತ್ತ ಮುಂದುವರಿಯುವುದು. ನಿಮ್ಮ ಆಯ್ಕೆ ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರವಾಗಿಸುವಂತಿರಲಿ. 

LEAVE A REPLY

Please enter your comment!
Please enter your name here