• ಮಿಸ್ರಿಯ.ಐ.ಪಜೀರ್

ದೇಶದೆಲ್ಲೆಡೆ ಬಡವರನ್ನು, ದಿನಗೂಲಿ ಕಾರ್ಮಿಕರನ್ನು ಕಂಗಾಲಾಗಿಸಿದ ಹಸಿವು ಮತ್ತು ದೈವತ್ವಕ್ಕೇರಿಸಲ್ಪಟ್ಟ ದನದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡುವಾಗೆಲ್ಲಾ ಮಲಯಾಳಂ ಸಾಹಿತ್ಯ ಲೋಕದಲ್ಲಿ ಬಿರುಗಾಳಿಯೆಬ್ಬಿಸಿದ ಮಾಧವಿ‌ಕುಟ್ಟಿ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರು ಬರೆದ ‘ವಿಶುದ್ಧ ಪಶು’ ಎಂಬ ಸಣ್ಣ ಕಥೆಯು ಫ್ಯಾಸಿಸಂ ಮತ್ತು ಹಸಿವು ತಾಂಡವವಾಡುತ್ತಿರುವ ಭಾರತದಲ್ಲಿ ಇಂದಿಗೂ ಪ್ರಸ್ತುತ. ಇಲ್ಲಿ ಹಸಿವು ಮತ್ತು ಫ್ಯಾಸಿಸಂನ ಉಸಿರುವವರೆಗೂ ಪ್ರಸ್ತುತವಾಗಿಯೇ ಉಳಿಯುತ್ತದೆ.

ಪುಟ್ಟ ಮಗುವೊಂದು ಕಸದ ತೊಟ್ಟಿಯಿಂದ ಬಾಳೆ ಸಿಪ್ಪೆಯೊಂದನ್ನು ತಿನ್ನುತ್ತಿರಬೇಕಾದರೆ ದನವೊಂದು ಬಂದು ಅದಕ್ಕೆ ಬಾಯಿ ಹಾಕುತ್ತದೆ.ಆ ಮಗವು ದನವನ್ನು ದೂರಕ್ಕೆ ಓಡಿಸುತ್ತದೆ. ಎಲ್ಲಿಂದಲೋ ಬಂದ ಸನ್ಯಾಸಿಗಳು ದನವನ್ನೇಕೆ ಅಟ್ಟಿದೆ ಎಂದು ಮಗುವನ್ನು ಪ್ರಶ್ನಿಸುತ್ತಾರೆ.ನನ್ನ ಆಹಾರಕ್ಕೆ ಹಸು ಬಾಯಿ‌ ಹಾಕಲು ಬಂದದ್ದಕ್ಕೆ ಓಡಿಸಿದೆ ಎಂದು ಆ ಮಗು ಹೇಳುತ್ತದೆ.

ನೀನು ಹಿಂದುವೋ..ಮುಸಲ್ಮಾನನೋ…?
ನನಗೆ ಗೊತ್ತಿಲ್ಲ
ನೀನು ಎಲ್ಲಿ ಪೂಜೆ ಮಾಡುವುದು..? ಮಸೀದಿಯಲ್ಲೋ?ದೇವಸ್ಥಾನದಲ್ಲೋ ? ಹಸಿವಿನ ಭಾಷೆ ಮಾತ್ರ ಗೊತ್ತಿರುವ ಆ ಮಗುವಿಗೆ ಅವರ ಹಗೆಯ, ಅಸಹಿಷ್ಣುತೆಯ ಭಾಷೆ ಹೇಗೆ ತಾನೇ ಅರ್ಥವಾಗಬೇಕು..

ದನಕ್ಕೆ ತೊಂದರೆ ಕೊಟ್ಟಿರುವೆಯೆಂದಾದರೆ ನೀನು ಮುಸಲ್ಮಾನನೇ ಇರಬೇಕು.

ಆ ಹಸು ನಿಮ್ಮದೇ? ಮಗು ಮುಗ್ಧವಾಗಿ ಪ್ರಶ್ನಿಸುತ್ತದೆ.
ಕೊನೆಗೆ ಅವರು ಆ ಮಗುವನ್ನು‌ ಕೊಂದು ಕಸದ ತೊಟ್ಟಿಗೆಸೆದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
ಕಥೆಗಾರ್ತಿ ಈ ಕಥೆಯನ್ನು ಕಲ್ಪಿಸಿ ಬರೆದಿರಲೂ ಬಹುದು.ಆದರೆ ಅವರ ಈ ಬರಹ ನಮ್ಮ ದೇಶದೊಳಗೆ ಪ್ರತಿನಿತ್ಯವೂ ಮರು ಹುಟ್ಟು ಪಡೆಯುತ್ತಲೇ ಹೋಗುತ್ತಿದೆ.

ಕೊರೋನಾದಿಂದಾಗಿ ದೇಶದೆಲ್ಲೆಡೆ ಬೀಗ ಮುದ್ರೆಯನ್ನು ಹೇರಿದ ಸಂದರ್ಭ ವಾರಣಾಸಿಯ ಬುಡಕಟ್ಟು ಜನಾಂಗದ ಪುಟ್ಟ ಮಕ್ಕಳು ಹಸಿವು ತಾಳಲಾರದೆ ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿಂದ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ the wire.in ನಲ್ಲಿ ವರದಿ ಮಾಡಿದ್ದರು.ಆ ವರದಿಯನ್ನು ಓದುತ್ತಿದ್ದಂತೆ ಕಮಲಾ ಸುರಯ್ಯ ಮನಸ್ಸಿಗೆ ಮತ್ತಷ್ಟು ಹತ್ತಿರವಾದರು.

ಕೇರಳದ ದಕ್ಷಿಣ ಮಲಬಾರಿನ ತ್ರಿಶೂರ್ ಜಿಲ್ಲೆಯ ಪುನ್ನಯೂರ್‌ಕುಳಂ ಎಂಬ ಹಳ್ಳಿಯಲ್ಲಿ ಸಂಪ್ರದಾಯಸ್ಥ ನಾಯರ್ ಕುಟುಂಬದಲ್ಲಿ ಮಾಧವಿ ಕುಟ್ಟಿ ಜನಿಸಿದಳು.ಎಳವೆಯಲ್ಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡ ಮಾಧವಿ ಕುಟ್ಟಿಗೆ ಸಾಹಿತ್ಯ ರಕ್ತಗತವಾಗಿ ಬಂದಿತ್ತು. ಅವರ ತಂದೆ ವಿ.ಎಂ.ನಾಯರ್ ‘ಮಾತೃ ಭೂಮಿ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದರು.ತಾಯಿ ಬಾಲಮಣಿಯಮ್ಮ ಮಲಯಾಳಂನ ಪ್ರಸಿದ್ಧ ಲೇಖಕಿಯಾಗಿದ್ದರು.ಆದರೂ ಅವರಿಗೆ ಅಂಥ ಶಿಕ್ಷಣವೇನೂ ಸಿಗಲಿಲ್ಲ.ಒಬ್ಬ ಬರಹಗಾರ್ತಿಗೆ ಶಿಕ್ಷಣವೇ ಮಾನದಂಡವಲ್ಲ ಎಂಬುದನ್ನು ಮಾಧವಿ ಕುಟ್ಟಿ ಸಾಬೀತುಪಡಿಸಿದರು.ಆಕೆ ಓರ್ವ ಅನುಕೂಲಸ್ಥ ಮನೆತನದಲ್ಲಿ ಹುಟ್ಟಿದ ಹೆಣ್ಣಾಗಿದ್ದರೂ ತನ್ನ ಸುತ್ತಮುತ್ತಲ ಸಮಾಜದ ನೋವಿಗೆ ಬೆನ್ನು ತೋರಿಸಿ ನಡೆಯಲಿಲ್ಲ.ಎಲ್ಲವನ್ನೂ ಎಚ್ಚರದ ಕಣ್ಣು ಮತ್ತು ಹೃದಯದಿಂದ ನೋಡುತ್ತಿದ್ದರು.ಅವರ ಕಾವ್ಯ ಕೃಷಿಗೆ ಸೋದರ ಮಾವ ನಲಪಾಟ್ ನಾರಾಯಣನ್ ಮೆನನ್ ಸ್ಪೂರ್ತಿಯಾಗಿದ್ದರು.

ಸಣ್ಣ ಕಥೆ, ಕಾದಂಬರಿಯಲ್ಲಿ ತನ್ನದೇ ಛಾಪು ಮೂಡಿಸಿದ ಸುರಯ್ಯಾರ ಬರಹಗಳು ತಾನು, ತನ್ನದು, ತನ್ನ ಜಾತಿ ಶ್ರೇಷ್ಠ ವಾದದ್ದು ಎನ್ನುವ ಸಮಾಜದೊಳಗೆ ಬಿರುಗಾಳಿಯೆಬ್ಬಿಸತೊಡಗಿತು.ಇಂಗ್ಲಿಷ್‌ನಲ್ಲೂ ಸಾಹಿತ್ಯ ಕೃಷಿಗೈದ ಅವರ ಬರಹಗಳು ಜಗತ್ತಿನೆಲ್ಲೆಡೆ ಪಸರಿಸಿತು.ಸ್ತ್ರೀ ಸ್ವಾತಂತ್ರ್ಯ, ಅವಳ ಬಯಕೆ, ನೋವು, ಸಂಕಟ, ದುಃಖ, ಅವಳೊಳಗಿನ ಸಂಘರ್ಷ ಇವೆಲ್ಲವನ್ನೂ ಮುಚ್ಚು ಮರೆಯಿಲ್ಲದೆ ಕೆಚ್ಚೆದೆಯಿಂದಲೇ ಬರೆದರು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಗುರುತಾಗಿ ಮಾಧವಿ ಕುಟ್ಟಿ ಮಾದರಿಯಾದರು.
ಮಾಧವಿ ಕುಟ್ಟಿಯವರು ಬರೆದ ‘ಎಂಡೆ ಕಥಾ’ ಎನ್ನುವ ಆತ್ಮ ಚರಿತ್ರೆಯೇ ಅವರ ಮೊದಲ ಕಾದಂಬರಿ.ಅದನ್ನಾಕೆ ತನ್ನ ಮಾತೃಭಾಷೆಗಷ್ಟೇ ಸೀಮಿತಗೊಳಿಸದೆ ‘My story’ ಎಂದು ಇಂಗ್ಲಿಷ್ ‌ನಲ್ಲಿ ಬರೆದು ಜಾಗತಿಕ ಸಾಹಿತ್ಯಕ್ಕೆ ಅರ್ಪಿಸಿದರು‌.ಇದು ಆಕೆಗೆ ಕೆಚ್ಚೆದೆಯ ಬರಹಗಾರ್ತಿ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟರೆ, ಮಡಿವಂತ ಸಮಾಜದೊಳಗೆ ಬಿರುಗಾಳಿಯೆಬ್ಬಿಸಿತ್ತು.ಇದು ಭಾರತೀಯ ಭಾಷೆಗಳಿಗಲ್ಲದೆ ಜಗತ್ತಿನ 14 ಭಾಷೆಗಳಿಗೆ ಅನುವಾದಗೊಂಡಿದೆ.ನೊಬೆಲ್ ಪ್ರಶಸ್ತಿಗೂ ನಾಮ ನಿರ್ದೇಶನಗೊಂಡಿತ್ತು.

ತನ್ನ 15 ವರ್ಷ ಪ್ರಾಯದಲ್ಲಿ ಮಾಧವಿ ಕುಟ್ಟಿಯವರ ವಿವಾಹವು ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದರಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದ ಕೆ.ಮಾಧವ ದಾಸ್ ಎಂಬವರ ಜೊತೆ ನೆರವೇರಿತು.ಅವರಿಗೆ ಮೂರು ಗಂಡು ಮಕ್ಕಳಿದ್ದರು.ದುರ್ಬಲರ ನೋವಿಗೆ ಧ್ವನಿಯಾಗುತ್ತಿದ್ದ ಅವರು ತನ್ನ ಮಕ್ಕಳೊಡನೆ ಇಬ್ಬರು ಅಂಗವಿಕಲ ಮಕ್ಕಳನ್ನೂ ದತ್ತು ಪಡೆದು ಸಾಕಿ ಅವರ ಬಾಳನ್ನು ಬೆಳಗಿಸಿದರು.

ಕೇವಲ ಬರವಣಿಗೆಯಷ್ಟೇ ಸಾಲದು, ಜನರ ಸೇವೆಯೂ ಮಾಡಬೇಕೆಂಬ ಇರಾದೆಯೊಂದಿಗೆ 1984ರಲ್ಲಿ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.ತನ್ನೂರಿನಲ್ಲಿ ತನ್ನ ಪಾಲಿಗೆ ಬಂದ ಆಸ್ತಿಯನ್ನೆಲ್ಲಾ ಕೇರಳ ಸಾಹಿತ್ಯ ಅಕಾಡೆಮಿಗೆ ದಾನವಾಗಿ ನೀಡಿದರು.

Pen Asian poetry prize, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವಗಳಿಗೂ ಪಾತ್ರರಾದರು.ಶಾಲೆ- ಕಾಲೇಜು, ವಿಶ್ವವಿದ್ಯಾನಿಲಯಗಳ ಪದವಿಗಳು ಸಾಹಿತಿಯ ಗುಣಮಟ್ಟಕ್ಕೆ ಮಾನದಂಡವಲ್ಲ ಎನ್ನುವುದಕ್ಕೆ ಉದಾಹರಿಸಬಹುದಾದ ಅತ್ಯಂತ ಶ್ರೇಷ್ಠ ಹೆಸರು ಕಮಲಾ ಸುರಯ್ಯಾರದ್ದು.

ತನ್ನ ಬದುಕಿನ ಅರುವತ್ತೈದನೇ ವಯಸ್ಸಿನಲ್ಲಿ ಇಸ್ಲಾಮ್‌‌‌ ಧರ್ಮವನ್ನು ಅಭ್ಯಸಿಸಿ ಸ್ವೀಕರಿಸಿದರು. ಮಾಧವಿ ಕುಟ್ಟಿಯಾಗಿ ಜನಿಸಿ, ಕಮಲಾದಾಸ್ ಎಂಬ ಹೆಸರಲ್ಲಿ‌ ಖ್ಯಾತಿಯ ಉತ್ತುಂಗಕ್ಕೇರಿ ಅರುವತ್ತೈದನೇ ವಯಸ್ಸಿಗೆ ಕಮಲಾ ಸುರಯ್ಯಾ ಆಗಿ ಜಗತ್ತೇ ಅಚ್ಚರಿಯಿಂದ ನೋಡುವಂತೆ ಮಾಡಿದರು. ಅವರ ಬರಹಗಳನ್ನು ಆಳವಾಗಿ ಓದಿ ಬಲ್ಲವರಿಗೆ ಅವರ ಇಂತಹ ತೀರ್ಮಾನ ಆಶ್ಚರ್ಯವೆನಿಸಲಿಲ್ಲ. ಅವರು ತನಗೆ ಸರಿ ಕಾಣದ್ದನ್ನು ಸರಿಯಲ್ಲ ಎನ್ನಲು ಯಾವತ್ತೂ ಹಿಂಜರಿದವರಲ್ಲ. ಆದುದರಿಂದಲೇ ಅವರ ಬರಹಗಳು ವಿವಾದಗಳಿಂದ ಯಾವತ್ತೂ ದೂರ ನಿಂತಿರಲಿಲ್ಲ. ತನ್ನ ಬರಹಗಳಿಂದ ವಿವಾದಗಳಾಗಬಹುದು ಎಂದು ಅವರು ಯಾವತ್ತೂ ಭಯಪಟ್ಟವರೇ ಅಲ್ಲ. ಅವರ ಆತ್ಮ ಚರಿತ್ರೆ “ಎಂಡೆ ಕಥಾ” ದಂತಹ ಬರಹಗಳನ್ನು ಬರೆಯಲು ಯಾರಿಗೂ ಸಾಮಾನ್ಯ ಧೈರ್ಯ ಸಾಲದು. ಆ ಕಾಲದಲ್ಲಿ ಒಂದು ಸಂಪ್ರದಾಯಸ್ಥ ನಾಯರ್ ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣಾಗಿ ಅವರು ತೋರಿದ ಧೈರ್ಯ ಸಾಮಾನ್ಯ ಮಹಿಳೆಯರಿಗೇಕೆ.. ಪುರುಷರಿಗೂ ಬರದು. ಮನುಷ್ಯ ಜೀವನದ ನಶ್ವರತೆ ಮತ್ತು ಮರಣದ ವಾಸ್ತವವನ್ನು ಸ್ಪಷ್ಟವಾಗಿ ಅರಿತಾಗ ಅವರು ಅನುಗ್ರಹದ ಪ್ರಕಾಶವನ್ನು ಹಿಂಬಾಲಿಸುತ್ತಾ ಹೋಗಿ ಇಸ್ಲಾಮನ್ನು ಅಪ್ಪಿಕೊಂಡರು. 2009ರಲ್ಲಿ ಅವರೊಂದು ನೋವು-ನಲಿವು-ಖ್ಯಾತಿ-ಅಪಖ್ಯಾತಿ-ಸಂಕಷ್ಟ-ಸಂತಸ ಮುಂತಾದ ಬದುಕಿನ ಎಲ್ಲಾ ನಮೂನೆಗಳನ್ನು ಅನುಭವಿಸಿದ ಸಂಪೂರ್ಣತೆಯೊಂದಿಗೆ ಜಗತ್ತಿಗೆ ವಿದಾಯ ಹೇಳಿದರು. ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಅದ್ಭುತ ಸೃಜನ ಶೀಲ ಸೃಷ್ಟಿ ಕ್ರಿಯೆಗಳು ಇನ್ನು ಐನೂರು ವರ್ಷಗಳವರೆಗೂ ಹೆಣ್ಣೊಬ್ಬಳ ಧೈರ್ಯಕ್ಕೆ ಅತ್ಯುತ್ಕೃಷ್ಟ ಮಾದರಿಯಾಗಿ ಉಳಿಯಬಲ್ಲುದು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ

LEAVE A REPLY

Please enter your comment!
Please enter your name here