ಕವನ

ಊರು ಊರುಗಳಲ್ಲಿ
ಕೇರಿ ಕೇರಿಗಳಲ್ಲಿ
ಕನಕರಿದ್ದಾರೆ…
ಕನಕಾಧಿಪತಿಗಳಿದ್ದಾರೆ…
ಕನಕ ಹಂಚಿದವರಲ್ಲ
ನೂರು ತಲೆಮಾರು
ಕೂತುಂಡು ತೇಗುವಷ್ಟು
ಕನಕ ಬಚ್ಚಿಟ್ಟವರು…
ತೊಟ್ಟು ಮೆರೆದವರು…!!
*******
ನೆಲದಲ್ಲಿ ಸಿಕ್ಕ ಕನಕವನು
ನೆಲೆಗಾಗಿ ಹೂಡಲಿಲ್ಲ…
ದೊರೆಯಾಗಲಿಲ್ಲ…
ನೆಲೆಯಿಲ್ಲದವನಿಗೆ
ಧಾರೆಯೆರೆದಿದ್ದು…
ನಾವಿಂದು ನೆಲ ಬಗೆದು
ಕನಕ ಕೂಡಿಡುತ
ಮತ್ತೆ ಹುಡುಕುತ್ತಿದ್ದೇವೆ,
ಹೊನ್ನಿರುವ ಮಣ್ಣನ್ನು,
ತವಿಸದಿಹ ನಿಧಿಯನ್ನು!!
*******
ಕನಕನೆಂದರೆ
ಗುರುಭಕ್ತಿಯೆನ್ನುತಲೇ
ಗುರುವಿಗೆ ಅನಾದರ ತೋರಿದ್ದೇವೆ.
ಗುರುವನ್ನು ಲಘುವಾಗಿಸಿ,
ನಗುವಿನ ಸರಕು ಮಾಡಿದ್ದೇವೆ..
ಕನಕನ ಗುರುಭಕ್ತಿಯನ್ನು
ಶ್ರದ್ಧೆಯಿಂದ ಕೇಳುತ್ತೇವೆ..
ಅಷ್ಟೇ ಬೇಗ ಮರೆಯುತ್ತೇವೆ..
*********
ವೇದಿಕೆಯೇರಿ
ಗುಣಗಾನ ಮಾಡಿ,
ಹಾಡಿ ಕೊಂಡಾಡಿ
ಬೆನ್ನು ತಟ್ಟಿಸಿಕೊಂಡೆವು…
ಕನಕನ ತತ್ತ್ವ
ಕಿವಿಯಿಂದ ಕಿವಿ ದಾಟಿ
ಬಾಯಿಯಿಂದ ಬಾಯಿಗೆ ಹರಿದು
ಎಲ್ಲೂ ನಿಲ್ಲಲಾರದೆ
ಪುನಃ ಕನಕನಲ್ಲಿಗೆ ತೆರಳಿ
ಅಂತಸ್ಥಗೊಂಡಿತು…

ರಚನೆ: ನಾಖಾರ್ವಿ ಕಂಚುಗೋಡು

LEAVE A REPLY

Please enter your comment!
Please enter your name here