(ಗಿರೀಶ್ ಕಾರ್ನಾಡ್ ನಮ್ಮನ್ನಗಲಿ ಒಂದು ವರ್ಷ)

  • ಇಸ್ಮತ್ ಪಜೀರ್

ಅನಂತಮೂರ್ತಿಯವರ ಸಂಸ್ಕಾರ ನಾನು ಓದಿದ ಅತ್ಯಂತ ಶ್ರೇಷ್ಠ ಸೃಜನಶೀಲ ಸಾಹಿತ್ಯ ಕೃತಿಗಳಲ್ಲೊಂದು. ಅದನ್ನು ಸುಮಾರು ಎಂಟು ಬಾರಿ ಆವರ್ತಿಸಿ ಆವರ್ತಿಸಿ ಓದಿದ್ದೆ. ಪ್ರತೀ ಓದಿನಲ್ಲೂ ಅದು ನನ್ನೊಳಗೆ ಬೆಳೆಯುತ್ತಲೇ ಇತ್ತು. ಸಿನಿಮಾದ ಬಗ್ಗೆ ವಿಶೇಷ ಆಸಕ್ತಿಯಿಲ್ಲದ ನಾನು ಸಂಸ್ಕಾರ ಸಿನಿಮಾ ನೋಡಿದ್ದೇ ಅದರಲ್ಲಿ ಲಂಕೇಶ್ ಮತ್ತು ಕಾರ್ನಾಡರು ನಟಿಸಿದ್ದಾರೆ ಎಂಬ ಕಾರಣಕ್ಕೆ….
ಒಮ್ಮೆ ಆ ಸಿನಿಮಾ ನೋಡಿದ ಮೇಲೆ ಅದು ನನ್ನಲ್ಲಿ ಇನ್ನಷ್ಟು ಬೆಳೆದಿತ್ತು. ಸಂಸ್ಕಾರ ಸಿನಿಮಾ ಒಂದು ವಿಶೇಷ ಸಿನಿಮಾ. ಯಾಕೆಂದರೆ ಅದು ಕನ್ನಡ ಸಾಹಿತ್ಯದ ಮೂರು ದಿಗ್ಗಜಗಳ ಸಮ್ಮಿಲನ. ಅನಂತಮೂರ್ತಿಯವರು ಕಾದಂಬರಿ ಬರೆದಿದ್ದರೆ, ಕಾರ್ನಾಡರು ಅದರ ನಾಯಕ ಪ್ರಾಣೇಶಾಚಾರ್ಯನ ಪಾತ್ರದಲ್ಲಿದ್ದರು, ಲಂಕೇಶ್ ಮೇಷ್ಟ್ರು ಅದರ ಪ್ರತಿನಾಯಕ ನಾರಣಪ್ಪನ ಪಾತ್ರದಲ್ಲಿದ್ದರು. ಕಾದಂಬರಿ ಓದುವಾಗ ಬ್ರಾಹ್ಮಣ್ಯದ ಎಲ್ಲ ಕಟ್ಟುಪಾಡುಗಳನ್ನು ಮೀರಿ ಬಿಂದಾಸ್ ಆಗಿ ಬದುಕಿದ ಪ್ರತಿ ನಾಯಕ ನಾರಣಪ್ಪ ಇಷ್ಟವಾದರೆ, ಸಿನಿಮಾ ನೋಡಿದಾಗ ಬ್ರಾಹ್ಮಣ್ಯದ ಸರಹದ್ದು ಮೀರದೇ ಕೊನೆಗಿಂತ ತುಸು ಮೊದಲಿನವರೆಗೆ ಹಾಗೇ ಇದ್ದು, ಕೊನೆಯಲ್ಲಿ ಮನುಷ್ಯ ಸಹಜ ಇಂದ್ರಿಯಾಸಕ್ತಿಗಳು ಗರಿಗೆದರಿ ಕಾಡಲ್ಲಿ ಚಂದ್ರಿಯ ಜೊತೆ ಸುಖಿಸುವ ಪ್ರಾಣೇಶಾಚಾರ್ಯ ಇಷ್ಟವಾಗುತ್ತಾರೆ.
ಸಂಸ್ಕಾರ ಸಿನಿಮಾದಲ್ಲಿ ನಾರಣಪ್ಪನ ಪಾತ್ರದಲ್ಲಿ ನಟಿಸಿದ್ದ ಲಂಕೇಶರಿಗಿಂತ, ಪ್ರಾಣೇಶಾಚಾರ್ಯನ ಪಾತ್ರದಲ್ಲಿ ನಟಿಸಿದ್ದ ಕಾರ್ನಾಡರ ನಟನೆ ಅದ್ಭುತವಾಗಿತ್ತು. ಲಂಕೇಶ್ ಕಾರ್ನಾಡರಂತೆ ಪಳಗಿದ ನಟರಾಗಿರಲಿಲ್ಲ. ಕಾರ್ನಾಡ್ ರಂಗಭೂಮಿಯನ್ನೇ ತನ್ನ ಸಾಹಿತ್ಯದ ಉಸಿರಾಗಿಸಿದವರಾದುದರಿಂದ ಸಹಜವಾಗಿಯೇ ನಟನೆ ಅವರೊಳಗೆ ಇಳಿದಿತ್ತು.
………………………………..
ಸೌಹಾರ್ದ ಕರ್ನಾಟಕದ ಕನಸುಗಾರ ಕಾರ್ನಾಡ್:
ಬಾಬಾ ಬುಡಾನ್ ಗಿರಿಯನ್ನು ಕೋಮು ವಿಚ್ಚಿದ್ರಕಾರಿ ಶಕ್ತಿಗಳು ತಮ್ಮ ಆಡುಂಬೊಲವಾಗಿಸಲು ಹವಣಿಸಿದಾಗ ಅದರ ವಿರುದ್ಧ ಒಂದು ಬೃಹತ್ ಚಳವಳಿಯನ್ನು ಕನ್ನಡ ನಾಡಿನ ಪ್ರಜ್ಞಾವಂತರೆಲ್ಲಾ ಸೇರಿ ಕಟ್ಟಿದ್ದರು. ಕನ್ನಡದ ಪ್ರಮುಖ ಸಾಹಿತಿಗಳೆಲ್ಲಾ ಅದರ ಭಾಗವಾಗಿದ್ದರು. ಅದರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ಕಾರ್ನಾಡರು ಸೂಫಿ ಮತ್ತು ಅವದೂತ ಪಂಥದ ಅಪೂರ್ವ ಶೃದ್ದಾಕೇಂದ್ರವಾಗಿರುವ ಅದನ್ನು ಹಾಗೇ ಉಳಿಸುವ ಹೋರಾಟದ ಪ್ರಾಥಮಿಕ ಹಂತದಲ್ಲೇ ಅದರ ಭಾಗವಾಗಿದ್ದರು.
………………………………
ಟಿಪ್ಪು ಕುರಿತು ಕಾರ್ನಾಡ್ :
ಕಾರ್ನಾಡರ ನಾಟಕಗಳಲ್ಲಿ ಪುರಾಣವನ್ನು ವರ್ತಮಾನದೊಂದಿಗಿಟ್ಟು ಮುಖಾಮುಖಿಗೊಳಿಸುವ… ಮತ್ತು ಇತಿಹಾಸವನ್ನು ವರ್ತಮಾನದೊಂದಿಗಿಟ್ಟು ಮುಖಾಮುಖಿಯಾಗಿಸುವ ಪ್ರಯೋಗಗಳು ಸಾಮಾನ್ಯ.‌ಅದೇ ಅವರ ನಾಟಕಗಳ ವಿಶಿಷ್ಟತೆಯೂ ಹೌದು.
ಅವರ ಟಿಪ್ಪು ಕಂಡ ಕನಸು ಭಾರತೀಯ ರಂಗಭೂಮಿಯ ಅತ್ಯಂತ ಶ್ರೇಷ್ಠ ನಾಟಕಗಳಲ್ಲೊಂದು. ಅವರು ಟಿಪ್ಪುವನ್ನು ನೋಡಿದ ಬಗೆಯೇ ಅದ್ಭುತ. ಟಿಪ್ಪುವನ್ನು ಅವರ ಸುಧಾರಣೆ, ಅವರ ಕನಸುಗಳು, ಅವರ ಆಧುನಿಕ ಆಲೋಚನೆ, ಅವರ ವೈಜ್ಞಾನಿಕ ದೃಷ್ಟಿಕೋನ, ಅವರ ಉದ್ಯಮಶೀಲತೆ ಇತ್ಯಾದಿಗಳ ಆಧಾರದಲ್ಲಿ ನೋಡಿದ ಮೊದಲ ನಾಟಕಕಾರ ಕಾರ್ನಾಡ್. ಟಿಪ್ಪುವಿನ ವ್ಯಕ್ತಿತ್ವವನ್ನು ರಂಗಭೂಮಿಗೆ ತಂದ ಮೊದಲಿಗರೂ ಬಹುಶಃ ಗಿರೀಶ್ ಕಾರ್ನಾಡ್. ಅವರು ಒಂದೆಡೆ ಹೇಳುತ್ತಾರೆ ಕಳೆದ ಮುನ್ನೂರು ವರ್ಷಗಳ ಅವಧಿಯಲ್ಲಿ ಟಿಪ್ಪುವಿನಂತಹ ಮಹಾನ್ ಕನ್ನಡಿಗ ಹುಟ್ಟಿಯೇ ಇಲ್ಲ. ಅವರು ಟಿಪ್ಪು ಅಖಂಡ ಕರ್ನಾಟಕದ ನಿರ್ಮಾತೃ ಎನ್ನುತ್ತಾರೆ. ಆ ಕಾರಣಕ್ಕಾಗಿಯೇ ಅವರ ಟಿಪ್ಪು ಕಂಡ ಕನಸು ಭಾರತೀಯ ರಂಗಭೂಮಿಯ ಸಾರ್ವಕಾಲಿಕ ಶ್ರೇಷ್ಠ ಇತಿಹಾಸಾಧಾರಿತ ನಾಟಕಗಳಲ್ಲಿ ಅಗ್ರ ಸರದಿಯದ್ದೆಂದು ಗುರುತಿಸಲ್ಪಡುತ್ತದೆ.
……………………………….
ಕಾರ್ನಾಡರ ಸಹನೆಯ ಕಟ್ಟೆಯೊಡೆದಾಗ :
2018ರ ಅಗಸ್ಟ್ ತಿಂಗಳಲ್ಲಿ ಕೇಂದ್ರ ಸರಕಾರವು ದೇಶದಾದ್ಯಂತದ ಹಲವು ಮಾನವ ಹಕ್ಕು ಹೋರಾಟಗಾರರಿಗೆ ಅರ್ಬನ್ ನಕ್ಸಲ್ ಪಟ್ಟ ಕಟ್ಟಿ ಅವರ ಮೇಲೆ ಕೇಸು ಜಡಿದಿತ್ತು. ಇದು ದೇಶದಾದ್ಯಂತದ ಪ್ರಗತಿಪರರಲ್ಲಿ, ಮಾನವ ಹಕ್ಕು ಹೋರಾಟಗಾರರಲ್ಲಿ ಅಸಾಧ್ಯ ಸಿಟ್ಟು ತರಿಸಿತ್ತು.
ಸೆಪ್ಟೆಂಬರ್ ನಾಲ್ಕರಂದು ದೇಶದ ಪ್ರಮುಖ ಬುದ್ಧಿಜೀವಿ ಚಿಂತಕ ಡಾ.ಆನಂದ ತೇಲ್ ತುಂಬ್ಡೆಯವರನ್ನು ಮೊದಲಬಾರಿಗೆ ಪೋಲೀಸರು ಬಂಧಿಸಿದರು. ಅಂದು ಪ್ರಗತಿಪರ ಚಳವಳಿಯ ಕಾರ್ಯಕರ್ತರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೋಷ ವ್ಯಕ್ತಪಡಿಸುತ್ತಿದರು.
ಮರುದಿನ ಗೌರಿ ಲಂಕೇಶ್ ಬಲಿದಾನಕ್ಕೆ ಒಂದು ವರ್ಷ. ಬೆಂಗಳೂರಿನಲ್ಲಿ ಮಧ್ಯಾಹ್ನದ ವರೆಗೆ ಮೆರವಣಿಗೆಯಿತ್ತು. ಮಧ್ಯಾಹ್ನದ ಬಳಿಕ ಇದ್ದ ಕಾರ್ಯಕ್ರಮದ ಸಭಾಂಗಣಕ್ಕೆ ಗಿರೀಶ್ ಕಾರ್ನಾಡ್ ವಿಶಿಷ್ಟ ರೂಪದಲ್ಲಿ ಆಗಮಿಸಿದರು. ಮೊದಲೇ ಅಕ್ಕ ಗೌರಿಯವರ ಹತ್ಯೆಯ ರೋಷ ಕಾರ್ನಾಡರೂ ಸೇರಿದಂತೆ ನಮ್ಮ ಯಾರ ಮನದಿಂದಲೂ ಮಾಸಿರಲಿಲ್ಲ. ಅದರ ಮೇಲೆ ಪ್ರಭುತ್ವ “ಅರ್ಬನ್ ನಕ್ಕಲ್ ” ಹೊಸ ಪದಪುಂಜವೊಂದನ್ನು‌ ಹುಟ್ಟು ಹಾಕಿತ್ತು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಗಿರೀಶ್ ಕಾರ್ನಾಡ್ ಕಾಡುವ ಅನಾರೋಗ್ಯದ ನಡುವೆಯೂ ಕತ್ತಿಗೆ “Me too urban naxal” ಎಂಬ ಟ್ಯಾಗ್ ನೇತುಹಾಕುತ್ತಾ ಬಂದರು. ಅವರ ಸುತ್ತ ಜನಜಂಗುಳಿ ಸೇರಿ ಅವರಿಗೆ ತೊಂದರೆಯಾಗದಂತೆ ನಮ್ಮ ಸ್ವಯಂ ಸೇವಕರು ಅವರನ್ನು ಸಭಾಂಗಣದ ಮೊದಲ ಸಾಲಿನಲ್ಲಿ ಕೂರಿಸಿದ್ದರು. ಅವರ ಪಕ್ಕ ಸ್ವಾಮಿ ಅಗ್ನಿವೇಶ್, ಹಿರಿಯ ಲೇಖಕಿ ಕೆ.ಶರೀಫಾ ಮುಂತಾದವರು ಕೂತಿದ್ದರು. ಸಮಾರೋಪಕ್ಕಿಂತ ಮುಂಚಿನ ಸೆಶನ್ ಗೆ ಕಾರ್ನಾಡ್ ಅತಿಥಿಯಾಗಿದ್ದರು. ಅವರು ತೀವ್ರ ಅನಾರೋಗ್ಯದ ನಡುವೆಯೂ ಅಲ್ಲಿಗೆ ಬಂದಿದ್ದೇ ದೊಡ್ಡದು. ಅವರು ವೇದಿಕೆಯೇರಲಿಲ್ಲ. ವೇದಿಕೆ ಏರಲು ಅವರಿಗೆ ಸಾಧ್ಯವಾಗುತ್ತಲೂ ಇರಲಿಲ್ಲವೇನೋ… ಅವರ ಸರದಿ ಬಂದಾಗ ಅವರು ಸಭಿಕರ ಸಾಲಿನಿಂದಲೇ ಎದ್ದು ನಿಂತು ಒಂದೆರಡು ನಿಮಿಷಗಳ ಕಾಲ ಮಾತನಾಡಿದರು.ಅವರ ಮಾತುಗಳು ಪ್ರಭುತ್ವದ ನಿರಂಕುಶಾಧಿಪತ್ಯಕ್ಕೆ ಅವರು ಅವರ ಮಿತಿಯಲ್ಲಿ ಒಡ್ಡುತ್ತಿರುವ ಪ್ರತಿರೋಧದ ಪ್ರತಿಫಲನವಾಗಿತ್ತು.‌ಅದಕ್ಕೆ ಕಾರಣ ಅವರ ಸಹನೆಯ ಕಟ್ಟೆಯೊಡೆದಿತ್ತು. ಅಂದೇ ನಮ್ಮ ಮಾನಗೆಟ್ಟ ಮಾಧ್ಯಮಗಳು ಆ ವ್ಯಕ್ತಿ ಕನ್ನಡ ಸಾರಸ್ವತ ಲೋಕಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಣ್ಣನೆಯೊದಗಿಸಿದ ಮಹಾನ್ ಪ್ರತಿಭಾವಂತ ಎಂಬುವುದನ್ನೂ ಮರೆತು ಅವರ ಮೇಲೆ ಮುಗಿಬಿದ್ದು ದಾಳಿ ಮಾಡಿದವು.
ಉಗ್ರ ಬಲಪಂಥೀಯರಂತೂ ಅವರನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು. ಅವರನ್ನು ಬಂಧಿಸಬೇಕೆಂಬ ಕೂಗು ಕೇಳಿಬಂದ ಕೂಡಲೇ… ನಾವು ಕೆಲವು ಪ್ರಗತಿಪರ ಗೆಳೆಯರು ಕಾರ್ನಾಡ್ ಸರ್ ಅವರಿಗೆ ಬೆಂಬಲಾರ್ಥವಾಗಿ ನಮ್ಮ ಫೇಸ್ ಬುಕ್,ವಾಟ್ಸಾಪ್ ಗಳ ನಮ್ಮ ಪುಟಗಳಲ್ಲಿ “Me too urban naxal” ಎಂದು ಬರೆದು‌ ಸ್ಟೇಟಸ್ ಹಾಕಿದ್ದೆವು. “ನಾನೂ ಗೌರಿ…ನಾವೆಲ್ಲಾ ಗೌರಿ…” ಎಂಬ ಘೋಷಣೆಯೊಂದಿಗೆ ಬೆಂಗಳೂರಿನ ಕಾರ್ಯಕ್ರಮಕ್ಕೆ ಹೊರಟವರು ನಮಗೆ ನಾವೇ “ಅರ್ಬನ್ ನಕ್ಸಲ್” ಎಂಬ ಹೆಸರು ಕೊಟ್ಟು ಹಿಂದಿರುಗಿದೆವು…
ಅದೇ ಕೊನೆ ಮುಂದೆಂದೂ ನಾನು ಕಾರ್ನಾಡ್ ಸರ್ ಅವರನ್ನು ಮುಖತಃ ನೋಡಲಿಲ್ಲ…
ಕೊನೆಯ ಮಾತು : ಒಂದು ವೇಳೆ ಕಾರ್ನಾಡರೇನಾದರೂ ಲಂಡನ್ ನಲ್ಲಿ‌ ಹುಟ್ಟಿದ್ದರೆ ಅವರು ಷೇಕ್ಸ್ ಪಿಯರ್ ನ ನಂತರದ ಸ್ಥಾನದಲ್ಲಿ ನಿಲ್ಲುತ್ತಿದ್ದರೇನೋ….

LEAVE A REPLY

Please enter your comment!
Please enter your name here