ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ದೇಶ ಮತ್ತು ವಿಶೇಷವಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ ಮತ್ತು ಅದರ ಹಿಂದಿನ ಒಳಹುಗಳನ್ನು ಅರಿಯ ಬಯಸುವವರು ಡಾ. ಮುಜಾಫ್ಫರ್ ಅಸ್ಸಾದಿಯವರ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು ಎಂಬ ಪುಸ್ತಕವನ್ನು ಓದಲೇ ಬೇಕು. ಲಡಾಯಿ ಪ್ರಕಾಶನ ಗದಗ ಪ್ರಕಟಿಸಿರುವ ಈ ಪುಸ್ತಕದಲ್ಲಿ ಸುಮಾರು ಹದಿನಾರು ಚಿಕ್ಕ-ಚಿಕ್ಕ ಅಧ್ಯಾಯಗಳಿವೆ. ಈ ಎಲ್ಲಾ ಅಧ್ಯಾಯಗಳ ನಂತರ ಅನೇಕ ಉಲ್ಲೇಖಗಳನ್ನು ನೀಡಿರುವುದು ಉತ್ತಮವಾಗಿದೆ ಮತ್ತು ಓದುಗರನ್ನು ಗಾಢವಾಗಿ ಚಿಂತಿಸಲು ಪ್ರೇರೇಪಿಸುತ್ತದೆ. ಭಾಷೆಯು ಸರಳ ಮತ್ತು ಸುಲಭವಿರುವುದರಿಂದ ಅರ್ಥೈಸಲು ಯಾವುದೇ ಕಷ್ಟವಿಲ್ಲ.

ಈ ಪುಸ್ತಕದ ಪ್ರಥಮ ಅಧ್ಯಾಯವು “ಕರ್ನಾಟಕದಲ್ಲಿ ಸಮಾಜ, ಅಧಿಕಾರ, ರಾಜಕಾರಣ……” ಪುಸ್ತಕದ ಒಂದು ಪ್ರಮುಖ ಅಧ್ಯಾಯವಾಗಿದೆ. ಇದರಲ್ಲಿ ಕರ್ನಾಟಕದ ಪ್ರಬಲ ಜಾತಿಗಳು ಯಾವ ರೀತಿ ತನ್ನ ಹಿಡಿತವನ್ನು ಗಟ್ಟಿಗೊಳಿಸಿದೆ, ಮೀಸಲಾತಿ ರಾಜಕಾರಣ ಅಧಿಕಾರದ ಪರಿಣಾಮ ಮತ್ತು ಅಹಿಂದ, ಲಿಯೋ ಮತ್ತು ಲಿಬ್ರಾ ಗುಂಪುಗಳ ಉಗಮ ಒಂದು ಚರ್ಚಾ ವಿಷಯ. ಅದೇ ರೀತಿ ದ್ವಿತೀಯ ಅಧ್ಯಾಯ, “ಮುಸ್ಲಿಮ್ ಮಹಿಳೆಯರು ಮಾತನಾಡಬಲ್ಲರೇ…..” ಹಲವು ಚರ್ಚೆ, ವಿಮರ್ಶೆಗೆ ಕಾರಣವಾಗಬಹುದು. ಅಂಬೇಡ್ಕರ್ ಮತ್ತು ಮೌಲಾನ ಆಝಾದ್‍ರ ಕುರಿತು ಇರುವ ಚರ್ಚೆಯಲ್ಲಿ ಎರಡು ವ್ಯಕ್ತಿತ್ವದ ತುಲನೆಯು ಅಸಮಂಜಸವಾಗಿ ಕಾಣುತ್ತಿದೆ ಎಂಬುವುದು ನನ್ನ ಅಭಿಪ್ರಾಯ. ಏಕೆಂದರೆ, ಮೌಲಾನ ಆಝಾದರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಲೆಂದೇ ತನ್ನ ಜೀವನವನ್ನು ಮುಡಿಪಾಗಿಟ್ಟು ನಿರಂತರ ಹೋರಾಟ ಮಾಡುತ್ತಾ ಬಂದವರು. ಅವರ ಜೀವನದ ಒಂದು ದೊಡ್ಡ ಭಾಗವು ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದು ಹೋಯಿತು. ದೇಶ ವಿಭಜನೆಯು ಅವರಿಗೆ ಅತ್ಯಂತ ಕಹಿಯಾದ ಅನುಭವವೂ ಆಗಿದ್ದರಿಂದ, ಅದರಿಂದ ಸುಧಾರಿಸಿಕೊಳ್ಳಲು ಅವರಿಗೆ ಸುಲಭವಾಗಲಿಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ, ವಿಭಜನೆಯಾಗಬಾರದೆಂದು ದೇಶಾದ್ಯಂತ ಮುಸ್ಲಿಮ್ ಸಮುದಾಯದ ಸಭೆ ಕರೆದು ಮನವೊಲಿಸುತ್ತಿದ್ದಂತಹ ಆಝಾದ್‍ರಿಗೆ ದೇಶದಲ್ಲಿ ಆಗಾಗ ನಡೆಯುತ್ತಿರುವಂತಹ ಕೋಮು ಗಲಭೆಗಳು, ದಂಗೆಗಳು ದೇಶದ ವಿವಿಧತೆಯಲ್ಲಿ ಏಕತೆಯನ್ನು ಮುರಿಯುವಂತಿತ್ತು. ಆದ್ದರಿಂದಾಗಿ, ಅವರು ಕೇವಲ ಮುಸ್ಲಿಮ್ ಸಮುದಾಯವನ್ನೇ ಕೇಂದ್ರೀಕರಿಸಿ ತನ್ನ ಕೆಲಸ ಕಾರ್ಯಗಳನ್ನು ಮುಂದುವರಿಸದೇ, ಇಡೀ ದೇಶವನ್ನೇ ತನ್ನ ಸಮುದಾಯವೆಂದು ಭಾವಿಸಿದ್ದರು. ಒಬ್ಬ ದೊಡ್ಡಣ್ಣನ ರೂಪದಲ್ಲಿ ಆ ಕಾಲದಲ್ಲಿ ತನ್ನ ಸಮುದಾಯಕ್ಕಾದ ಅನ್ಯಾಯವನ್ನು ಸಹಿಸುತ್ತಾ ಬಂದರು. ಓರ್ವ ನಿಷ್ಠಾವಂತ ಕಾಂಗ್ರೆಸ್ಸಿಗನಾಗಿ ಜೀವಿಸಿದರು. ಆದರೆ, ಅಂಬೇಡ್ಕರ್ ಹಾಗಿರಲಿಲ್ಲ. ಅವರು ದೇಶಕ್ಕಾಗಿ ಸಂವಿಧಾನವನ್ನು ರಚಿಸುವಾಗ ತನ್ನ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮರೆಯಲಿಲ್ಲ. ಸಮುದಾಯದ ಮೇಲೆ ನಡೆಯುತ್ತಿದ್ದ ಪ್ರತಿ ಸಣ್ಣ-ಸಣ್ಣ ಸಮಸ್ಯೆಗಳನ್ನೂ ನಿರಂತರ ಪ್ರಶ್ನಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ತನ್ನ ಸಮುದಾಯದ ಸಮಸ್ಯೆಗಳನ್ನು ಬ್ರಿಟೀಷರೊಂದಿಗೆ ನಿರಂತರ ಚರ್ಚಿಸುತ್ತಿದದ್ದು ಕೂಡ ಕಾಣಬಹುದು. ಆದರೆ, ಅವರು ಭಾರತೀಯ ಸಮಾಜದಲ್ಲಿ ಗುರುತಿಸಿಕೊಂಡಿರುವುದು ಹಾಗು ಪ್ರಭಾವ ಬೀರಿದ್ದು ಸ್ವಾತಂತ್ರ್ಯದ ನಂತರದಲ್ಲಿ ಮತ್ತು ಸಂವಿಧಾನ ರಚನೆಯ ಸಂದರ್ಭದಲ್ಲಿಯಾಗಿದೆ.

ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯವು ಯಾರೂ ತಂದು ಕೊಡುವುದಿಲ್ಲ ಮತ್ತು ಶೋಷಿತನನ್ನು ಯಾರು ಕೇಳುವುದೂ ಇಲ್ಲ. ಬದಲಾಗಿ ಅದನ್ನು ತನ್ನ ಹಕ್ಕೆಂದು ಕಸಿದುಕೊಂಡರೆ ಮಾತ್ರ ಅದು ದೊರೆಯುವುದೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಇದು ಅವರು ಅವರ ಸಮುದಾಯಕ್ಕೆ ಮಾಡಿದ ದೊಡ್ಡ ಕೊಡುಗೆಯಾಗಿ ಮಾರ್ಪಟ್ಟಿತು.

ಆಹಾರ ಸಂಸ್ಕøತಿ ಹಿಂಸೆ ಮತ್ತು ಗಾಂಧೀ, ಗೋವು ಕುರ್ಚಿ ಅಲ್ಲಾಡಿಸುತ್ತಿದೆಯೇ ಧಾರ್ಮಿಕ ಜನಗಣತಿ, ಜೆ.ಎನ್.ಯು ಸಂಸ್ಕøತಿ ಆಸಕ್ತಿದಾಯಕ ಅಧ್ಯಾಯವಾಗಿದೆ. ಅರಬ್ ಸ್ಪ್ರಿಂಗ್ ಚರ್ಚೆಯು ಕೂಡಾ ಪ್ರಪಂಚದ ಅಧಿಕಾರ ರಾಜಕಾರಣಕ್ಕೆ ಎತ್ತಿ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ಇದು ಕನ್ನಡಿಗರು ಓದಲೇಬೇಕಾದ ಒಂದು ಪ್ರಮುಖ ಪುಸ್ತಕವಾಗಿದೆ.

LEAVE A REPLY

Please enter your comment!
Please enter your name here