ಯೋಗೇಶ್ ಮಾಸ್ಟರ್, ಬೆಂಗಳೂರು

ಬರೆದ ಕಥೆಯನ್ನು ಮತ್ತೊಮ್ಮೆ ಓದಿ ತೃಪ್ತಿಯಿಂದ ಆಳವಾದ ನಿಟ್ಟುಸುರೊಂದನ್ನು ದಬ್ಬಿದ ಚಿಂತನ್. ಬರೆದುದನ್ನು ಶಬರಿಗೆ ಓದಿ ಹೇಳುವ ಹುಮ್ಮಸ್ಸಿನಲ್ಲಿ ಮೇಲೆದ್ದು ಹಾಲ್‍ಗೆ ಓಡಿದ. ಸೋಫಾದ ತೆಕ್ಕೆಯಲ್ಲಿ ಪವಡಿಸಿದ್ದ ಶಬರಿಗೆ ಹಳೆಯ ಚಿತ್ರಗೀತೆಯೊಂದನ್ನು ಮೆಲುದನಿಯಲ್ಲಿ ಉಸುರುತ್ತಾ ಟೇಪ್‍ರೆಕಾರ್ಡರ್ ಜೋಗುಳ ಹಾಡುತ್ತಿತ್ತು.
‘ಈಗ ಕಥೆಯನ್ನೋದಿ ಹೇಳಲು ಅವಳನ್ನು ಎಬ್ಬಿಸಲೋ ಬೇಡವೋ?’ ಸುಖ ನಿದ್ರೆಯಲ್ಲಿ ಮುಳುಗಿರುವ ಹೆಂಡತಿಯನ್ನು ಎಬ್ಬಿಸಿ ತಾನು ಬರೆದ ಕಥೆಯನ್ನು ಓದಿ ಹೇಳುವುದು ಒಂದು ರೀತಿಯ ಬಲತ್ಕಾರವಾಗುವುದು ಎಂದು ಯೋಚಿಸತೊಡಗಿದ.
ಮೊದಲ ಕರೆಗೇ ಓಗೊಟ್ಟು ಮೇಲಕ್ಕೆದ್ದರೆ ಕಥೆ ಓದಿ ಹೇಳುವೆ. ಮೊದಲ ಮತ್ತು ಎರಡನೆಯ ಕರೆಗೆ ಓಗೊಡಲಾಗದಷ್ಟು ನಿದ್ರೆಯಲ್ಲಿ ಮುಳುಗಿದ್ದು ಮೂರನೆಯ ಕರೆಗೆ ಎದ್ದರೆ ಊಟ ಬಡಿಸಲು ಹೇಳಿ ಇಬ್ಬರೂ ಊಟ ಮುಗಿಸಿ ನಾಲ್ಕು ಮಾತುಗಳನ್ನಾಡಿ ಬೆಡ್‍ರೂಂಗೆ ಹೋಗುವುದೇ ಸರಿ. ಒಂದು ವೇಳೆ ಮೂರು, ನಾಲ್ಕು ಕರೆಗಳಿಗೂ ಓಗೊಡದೇ ಹೋದರೆ ಹಾಗೆಯೇ ಮೇಲಕ್ಕೆಬ್ಬಿಸಿ ನಾನೇ ಊಟ ಮಾಡಿಸಿ ಬೆಡ್‍ರೂಂಗೆ ಕರೆದುಕೊಂಡು ಹೋಗುತ್ತೇನೆ. ಹಾಗೊಂದು ವೇಳೆ ಐದಾರು ಬಾರಿ ಕರೆದರೂ ಏಳದಿದ್ದರೆ ಅವಳನ್ನು ಹಾಗೆಯೇ ಮೆಲ್ಲನೆ ಮೇಲಕ್ಕೆತ್ತಿಕೊಂಡು ಹೋಗಿ ಮಂಚದ ಮೇಲೆ ಮಲಗಿಸುತ್ತೇನೆ. ಏಳೆಂಟು ಬಾರಿ ಕರೆದರೂ ಮೇಲಕ್ಕೇಳದಿದ್ದರೆ…’
“ಚಿಂತೂ, ಕಥೆ ಬರೆದಾಯ್ತಾ?” ಚಿಂತನ್‍ಗೆ ತನ್ನ ಒಂದು ಕರೆಯೊಂದಿಗೂ ಪ್ರಯೋಗ ಮಾಡಲು ಆಸ್ಪದ ಕೊಡದೇ ನಿದ್ರೆಯ ಮಂಪರಿನಲ್ಲೇ ಶಬರಿ ಮೇಲಕ್ಕೆದ್ದಳು. ಅವಳ ನಿದ್ರೆ ಕೂಡಲೇ ಹಾರಿ ಹೋಗುವಂತೆ ಗಹಗಹಿಸಿ ನಕ್ಕ ಚಿಂತನ್. ತನ್ನ ಅನಾಮತ್ತಾದ ನಗೆಯಿಂದ ಗಾಬರಿಗೊಂಡು, ‘ಏನಾಯ್ತು, ಏನಾಯ್ತು?’ ಎಂದು ಕೇಳಿದ ಶಬರಿಯನ್ನು ಸಮಾಧಾನಿಸುತ್ತಾ ಚಿಂತನ್ ತಾನು ಮಾಡುತ್ತಿದ್ದ ಆಲೋಚನೆಯನ್ನು ಹೇಳಿದ.
“ಚಿಂತೂ, ನೀವು ತುಂಬಾ ಆಲೋಚನೆ ಮಾಡ್ತೀರಿ. ನನಗನ್ನಿಸತ್ತೆ… ಒಂದು ದಿನ ನಿಮಗೆ ಆಲೋಚನೆ ಮಾಡಕ್ಕೆ ಏನೂ ವಿಷಯಗಳೇ ಸಿಗದೇ ಹೋಗಬಹುದು. ಅಷ್ಟು ನೀವು ಎಲ್ಲದರ ಬಗ್ಗೆಯೂ ಆಲೋಚನೆ ಮಾಡ್ತೀರ.”
ಶಬರಿ ಹಾಗೆ ಹೇಳುತ್ತಲೇ ಅವನಿಗೆ ಮುಂದೆ ಮಾತು ಬೆಳೆಸಲು ಅವಕಾಶ ಕೊಡದಂತೆ, “ಕೈ ತೊಳೆದುಕೊಳ್ಳಿ ಊಟ ಮಾಡೋಣ. ಊಟವಾದ ಮೇಲೆ ನಾನು ಪಾತ್ರೆಗಳನ್ನು ತೊಳೆದಿಡುವಾಗ ನಿಮ್ಮ ಕಥೆ ಓದಿ ಹೇಳಿ” ಎಂದು ಅಡಿಗೆ ಮನೆಗೆ ನಡೆದಳು.
ಮೌನವಾಗಿ ಊಟ ಸಾಗುತ್ತಿದ್ದಾಗ ಶಬರಿ ಹೇಳಿದ ಮಾತೇ ಚಿಂತನ್‍ನ ತಲೆ ಕೊರೆಯುತ್ತಿತ್ತು. ‘ಹೀಗಾಗುವುದುಂಟೇ? ಎಂದಾದರೂ ಒಂದು ದಿನ ಏನೂ ವಿಚಾರ ಮಾಡಲು ಉಳಿದಿಲ್ಲ ಅನ್ನೋ ಸ್ಥಿತಿಗೆ ನಾನು ತಲುಪುತ್ತೇನೆಯೇ?’ ಅವನ ಗಂಭೀರ ಮುಖ ಮುದ್ರೆಯನ್ನು ಕಂಡೇ ಶಬರಿಗರ್ಥವಾಯಿತು ಈಗಲೂ ಏನೋ ಚಿಂತನೆ ಅವನಲ್ಲಿ ನಡೆಯುತ್ತಿದೆಯೆಂದು.
“ಏನದು ಚಿಂತೂ? ಈಗಲೂ ಚಿಂತಿಸುತ್ತಿದ್ದೀರಿ?”
“ಚಿಂತಿಸುತ್ತಿಲ್ಲ. ಚಿಂತನೆ ನಡೆಸುತ್ತಿದ್ದೇನೆ. ಅದೇ ನೀನು ಹೇಳಿದ್ಯಲ್ಲಾ ಹೀಗೇ ಸದಾ ಚಿಂತನೆ ಮಾಡ್ತಾಯಿದ್ರೆ ಕೊನೆಗೊಂದು ದಿನ ವಿಚಾರ ಮಾಡಕ್ಕೆ ಏನೂ ವಿಷಯವೇ ಸಿಗದೇ ಹೋಗಬಹುದೂಂತ. ಅದನ್ನು ಕುರಿತೇ ಆಲೋಚನೆ ಮಾಡ್ತಿದ್ದೆ.”
“ಅಯ್ಯೋ ದೇವರೇ,” ಎಡಗೈಯಿಂದ ಹಣೆ ಗಟ್ಟಿಸಿಕೊಂಡ ಶಬರಿ,”ನೀವು ಸದಾ ಚಿಂತನೆಯಲ್ಲೇ ಮುಳುಗಿರುತ್ತೀರ ಎಂಬುದೇ ನನ್ನ ಚಿಂತೆ. ನಮ್ಮತ್ತೆ ಮಾವನವರನ್ನು ದೂರಬೇಕೂಂತ ಅನ್ನಿಸತ್ತೆ. ನಿಮಗೆ ಚಿಂತನ್ ಅಂತ ಹೆಸರಿಟ್ಟು ಸದಾ ಚಿಂತನೆಯಲ್ಲೇ ಮುಳುಗಿರುವ ಹಾಗೆ ಮಾಡಿಬಿಟ್ಟಿದ್ದಾರೆ” ಎಂದಳು.
ಅವಳ ಮಾತು ಕೇಳಿದ ಚಿಂತನ್ ನಾಟಕೀಯವಾಗಿ ಚಿಂತನೆಯಲ್ಲಿ ಮುಳುಗಿದಂತೆ ತನ್ನ ತೋರ್ಪಡಿಸಿದ. ಅವನ ನಿರೀಕ್ಷೆಯಂತೆ ಶಬರಿ ಕೇಳಿದಳು.”ಈಗೇನು ನಿಮ್ಮ ತಲೆಯಲ್ಲಿ ವಿಚಾರ ಬಂದಿದ್ದು?”
“ಅಲ್ಲಾ, ನನಗೆ ಚಿಂತನ್ ಅಂತ ಹೆಸರಿಟ್ಟು ನಾನು ಚಿಂತನೆಗಳಲ್ಲಿ ಮುಳುಗಿರುವ ಹಾಗೆ ಮಾಡಿದ್ದಾರೆ. ಆದರೆ ನಿನಗೆ ಪತಿ-ಚಿಂತನಾ-ಚಿಂತಾಮಣಿ ಅಂತ ಹೆಸರಿಡದಿದ್ದರೂ ನೀನ್ಯಾಕೆ ನಿನ್ನ ಗಂಡ ಚಿಂತನೆಗಳಲ್ಲಿ ಮುಳುಗಿರುತ್ತಾನೆ ಎಂಬ ಚಿಂತೆಯಲ್ಲಿ ಮುಳುಗಿರುತ್ತೀಯಾಂತ?” ಇಬ್ಬರೂ ನಗುನಗುತ್ತಾ ಊಟ ಮುಗಿಸಿದರು.
ಅವಳು ಆಯೋಜಿಸಿದಂತೆ ತಟ್ಟೆ ಪಾತ್ರೆಗಳನ್ನು ತೊಳೆದು ಒರೆಸಿಡುತ್ತಿದ್ದಾಗ ಚಿಂತನ್ ಕಥೆ ಓದಿ ಹೇಳಿದ.
ಕಥೆಯ ಹೆಸರು ‘ಆದಿಯಿಂದ ಆದಿಗೆ’. ಕಥೆಯ ಸಾರಾಂಶವಿಷ್ಟು.
ಮಧುಕರ್ ಒಬ್ಬ ವೈಚಾರಿಕ ಮನೋಭಾವದ ಆಶಾವಾದಿ. ಶಾಲಾದಿನಗಳಲ್ಲಿ ಮಹತ್ವಾಕಾಂಕ್ಷಿಯಾಗಿ ತನ್ನ ಭವಿಷ್ಯವನ್ನು ಕುರಿತು ನಿರ್ಣಾಯಕವಾದ ಕನಸು ಕಂಡವನು. ಅದನ್ನು ನೆರವೇರಿಸಿಕೊಳ್ಳಲು ತನ್ನ ಮನೆಯಲ್ಲಿ ಹಿರಿಯರು ಹೇಳುವುದನ್ನೆಲ್ಲಾ ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಾನೆ. ಅಜ್ಜಿಯ ಅಣತಿಯಂತೆ ಪೂಜೆ-ಉಪವಾಸ ವ್ರತಾದಿಗಳನ್ನು, ತಾಯಿ ಅಪೇಕ್ಷಿಸಿದಂತೆ ಓದು-ಬರಹ, ಸಾಂಸ್ಕೃತಿಕ ಚಟುವಟಿಕೆಗಳು, ತಂದೆಯ ಆದೇಶದಂತೆ ಶಿಸ್ತು, ಸಾಮಾಜಿಕ ವರ್ತನೆಗಳನ್ನು ರೂಢಿಸಿಕೊಳ್ಳುತ್ತಾನೆ.
ಆದರೆ ಅವನ ಕಾಲೇಜಿನ ದಿನಗಳಲ್ಲಿ ಅವೆಲ್ಲವೂ ಅವನ ಬಾಲ್ಯದ ಕನಸುಗಳನ್ನು ನೆರವೇರಿಸುವುದರಲ್ಲಿ ಅಡೆತಡೆಗಳೆನಿಸುತ್ತವೆ. ಅಜ್ಜಿ ಹಾಕಿಕೊಟ್ಟ ವಿಧಿ ವಿಧಾನಗಳಿಂದ, ಅಮ್ಮ ಮನದಟ್ಟು ಮಾಡಿಕೊಟ್ಟಿದ್ದ ಔಪಚಾರಿಕತೆಗಳಿಂದ, ಅಪ್ಪ ಅಳವಡಿಸಿದ ಸಾಮಾಜಿಕ ಶಿಸ್ತುಗಳಿಂದ ತನ್ನ ಬಾಲ್ಯದ ಕನಸನ್ನು ಬಿಡಿಸಿಕೊಳ್ಳಲು ಹೆಣಗುತ್ತಾನೆ. ಅದರಿಂದಾಗಿ ಅವನ ಮನೆಯವರಿಂದಲೇ ಅವನು ಬಂಡಾಯಗಾರ ಎಂಬ ಹಣೆ ಪಟ್ಟಿ ಹೊತ್ತುಕೊಳ್ಳಬೇಕಾಗುತ್ತದೆ.
ಅವನು ಒಬ್ಬ ಸಂಪಾದಿಸುವಂತಹ ವಯಸ್ಕನಾಗಿ, ಮದುವೆ ಮಕ್ಕಳು ಅಂತ ಆಗುವ ಹೊತ್ತಿಗೆ ಅವನ ಕನಸಿನ ಕೂಸು ಜನಿಸುವ ಆಶಾಕಿರಣವು ಕಾಣತೊಡಗಿ ಅದರ ಜಾಡನ್ನು ಹಿಡಿದು ಮುಂದುವರಿಯುತ್ತಾನೆ.
ಆದರೆ, ಆಗ ಅವನಿಗೆ ಗೋಚರವಾಗುವುದು ಅವನ ತಂದೆ, ತಾಯಿ, ಅಜ್ಜಿ ಮುಂತಾದವರು ಮಾಡಿದ್ದನ್ನೇ ತಾನೂ ಮಾಡುತ್ತಾ ಇರುವುದು. ಆದರೆ ಅವನು ಅವುಗಳನ್ನು ಬೇರೆ ಬೇರೆ ಪದಗಳಿಂದ ಕರೆಯುತ್ತಿದ್ದಾನೆ. ಬೇರೆ ವಿನ್ಯಾಸಗಳಿಂದ ಪ್ರದರ್ಶಿಸುತ್ತಿದ್ದಾನೆ. ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುತ್ತಿದ್ದಾನೆ. ಈ ಮಧ್ಯದಲ್ಲಿ ತಾನು ಮಾಡಿದ ಬಂಡಾಯಗಳೆಲ್ಲವೂ ಅರ್ಥಹೀನವಾದಂತೆ ಅವನಿಗೆ ತೋರುತ್ತದೆ. ತನ್ನ ಹೋರಾಟಕ್ಕೆ, ಹೆಣಗಾಟಕ್ಕೆ ಅಂತ್ಯವೊಂದು ಕಾಣುತ್ತದೆ ಎಂದು ಇದಿರು ನೋಡುತ್ತಿದ್ದವನಿಗೆ ಅದು ಮತ್ತೆ ಪ್ರಾರಂಭವಾದಂತೆ ಕಾಣುತ್ತದೆ. ಆದರೆ ಈ ಪ್ರಾರಂಭದಲ್ಲಿ ಗೊಂದಲ, ಜಂಜಾಟಗಳು ಕಾಣದೇ ಸುರಸವಾದ ಸ್ವೀಕೃತಭಾವ ಕಾಣುತ್ತದೆ. ಪ್ರತಿ ಪರಂಪರೆಯೂ, ಸಂಸ್ಕೃತಿಯೂ ವ್ಯಕ್ತಿಗತವಾದ ಸಾಮಾನ್ಯ ಅರಿವಿನಿಂದ ನವೀಕೃತಗೊಳ್ಳುತ್ತದೆ ಎಂದು ಅವನ ಅರಿವಿಗೆ ಬರುತ್ತದೆ.
ಬಹಳ ಸರಳವಾದ ಘಟನೆಗಳಿಂದ, ನೇರವಾಗಿ ಕಥೆ ನಿರೂಪಿತವಾಗಿತ್ತು. ಶಬರಿ ಅದನ್ನು ಬಹುವಾಗಿ ಮೆಚ್ಚಿದಳು.
“ವಿಮರ್ಶೆ ಮಾಡು” ಅಂದ ಚಿಂತನ್.
“ಚೆನ್ನಾಗಿದೆ.”
“ಚೆನ್ನಾಗಿದೆ ಅಂತಷ್ಟೇ ಹೇಳಿಬಿಡುವುದು ವಿಮರ್ಶೆಯಲ್ಲ. ಕಥೆಯ ಯಾವ ಭಾಗ ನಿನಗೆ ಮೆಚ್ಚುಗೆಯಾಯ್ತು, ಯಾವ ದೃಷ್ಟಿಕೋನದಿಂದ ಅದನ್ನು ಮೆಚ್ಚುತ್ತೀಯ ಅಥವಾ ಖಂಡಿಸುತ್ತೀಯ ಅಂತ ವಿವರವಾಗಿ ಹೇಳು.”
“ಚಿಂತೂ, ಒಟ್ಟಾರೆ ಕಥೆ ಸರಳವಾಗಿ ಸುಂದರವಾಗಿದೆ. ಅದನ್ನು ಭಾಗ ಭಾಗವಾಗಿ ಅರ್ಥ ಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡೋದು….” ಶಬರಿ ತಲೆಯಲುಗಿಸಿದಳು. “ಯಾಕೆ ಬೇಕು ಚಿಂತೂ. ಅದು ನನ್ನಿಂದ ಆಗೊಲ್ಲ.”
“ಒಂದು ಹೂವಿನ ಪೂರ್ಣ ಸೌಂದರ್ಯವನ್ನು ಹಾಗೆಯೇ ಪೂರ್ಣವಾಗಿ ನೋಡಿ ಆನಂದಿಸುವುದೇ ಸರಿ. ದಳ, ಕುಸುಮ, ಪರಾಗ, ಕಾಂಡ, ಕೋಶ, ತೊಟ್ಟು ಅಂತೆಲ್ಲಾ ವಿಭಾಗಗಳನ್ನು ಮಾಡಿ ಹೂವಿನ ಸೌಂದರ್ಯವನ್ನು ಛಿದ್ರ ಮಾಡಿ ಕುರೂಪಗೊಳಿಸುವುದು ಬೇಡಾಂತೀಯಾ?”
“ಛಿದ್ರನೂ ಇಲ್ಲ, ಕುರೂಪನೂ ಇಲ್ಲ. ಸಕ್ಕರೆ ಮಿಠಾಯಿಯನ್ನು ಯಾವ ಭಾಗದಿಂದ ಸವಿದರೂ ಸಿಹಿಯಾಗೇ ಇರುತ್ತೇಂತ.”
“ಭೇಷ್ ಹೆಣ್ಣೇ! ನೀನೂ ಸಮಯಕ್ಕೆ ತಕ್ಕಂತೆ ಜಾಣತನವಾಗಿ ಮಾತನಾಡೋದನ್ನು ಕಲಿತಿದ್ದೀಯೆ.” ಚಿಂತನ್ ಬೆಕ್ಕಸ ಬೆರಗಾದಂತೆ ಅವಳನ್ನು ದಿಟ್ಟಿಸುತ್ತಾ ನಾಟಕೀಯವಾಗಿ ಶ್ಲಾಘಿಸಿದ.
ಅವನ ಹೊಗಳಿಕೆಗೆ ಅಷ್ಟೇ ನಾಟಕೀಯವಾಗಿ ಸಂಕೋಚದಿಂದ ಸಮ್ಮತಿಸುತ್ತಾ ಅವನ ತೋಳುಗಳಲ್ಲಿ ಬಂಧಿತಳಾಗುತ್ತಾ ಉಸುರಿದಳು. “ತಮ್ಮಂತ ಲೇಖಕರ ಕೈ ಹಿಡಿದುದರ ಪ್ರತಿಫಲವಲ್ಲವೇ ಇದು?” ಎಂದು ಸಹಜತೆಗೆ ಮರಳಿ, “ಚಿಂತೂ, ನಾನು ಹಾಗೆ ಹೇಳಿದ್ದು ನನ್ನ ಮಾತೇನಲ್ಲ. ನನ್ನಲ್ಲಿ ಅಂತಹ ಸೃಜನಶೀಲತೆಯೇನೂ ಇಲ್ಲ. ಯಾವುದೋ ಪುಸ್ತಕದಲ್ಲಿ ಅದನ್ನು ಓದಿದ್ದು.”
“ಅದನ್ನು ಯಾವ ಪುಸ್ತಕದಲ್ಲಿ ಓದಿದ್ದೆ, ಯಾವ ಸಂದರ್ಭದಲ್ಲಿ ಲೇಖಕರು ಅದನ್ನು ಉಪಯೋಗಿಸಿದ್ದರು ಎಂಬುವುದಲ್ಲ ಮುಖ್ಯ. ಅದನ್ನು ಪ್ರಸ್ತುತ ಸಂದರ್ಭದಲ್ಲಿ ಎಷ್ಟು ಸಮರ್ಪಕವಾಗಿ ಬಳಸುತ್ತೀಯ ಅನ್ನೋದು ಅಂತಃಚತುರತೆ ಶಬರಿ. ಅಂತಹ ಅಂತಃಚತುರತೆಯೇ ಸೃಜನಶೀಲತೆಯನ್ನು ಬೆಳೆಸುವುದು. ಆಗ ಆ ಹಳೇ ಮಾತು, ಹಳೇ ತತ್ವ ಹೊಸ ಅರ್ಥದಲ್ಲಿ ಗೋಚರವಾಗುತ್ತದೆ.”
“ಆದರೂ,” ಶಬರಿ ಮೆಚ್ಚುಗೆಯಿಂದ ಹೇಳಿದಳು,” ನನಗೆ ಸೃಜನಶೀಲತೆಯಿರುವವರನ್ನು ನೋಡಿದರೆ ಅತ್ಯಾಶ್ಚರ್ಯವಾಗತ್ತೆ. ಯಾರಿಗೂ ಹೊಳೆಯದೇ ಇರುವುದು ಅವರಿಗೆ ಹೇಗೆ ಹೊಳೆಯತ್ತೆ? ಹೊಸತೊಂದನ್ನು ಹುಟ್ಟಿಸುವ ಅವರುಗಳೆಲ್ಲಿ, ಯಾರೋ ಹೇಳಿದ್ದು, ಯಾರೋ ಪ್ರದರ್ಶಿಸಿದ್ದನ್ನು ಮತ್ತೆ ತೋರಿಸುವಂತ ನಮ್ಮಂತಹ ಸಾಮಾನ್ಯರೆಲ್ಲಿ?”
“ಶಬರಿ, ನೀನು ಹಾಗೆ ಅಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಹೊಸತನ್ನು ಯಾರು ಹುಟ್ಟಿಸುತ್ತಾರೆ? ತರಾವರಿ ಹೂಗಳಿವೆ, ತರಾವರಿಯಾಗಿ ಜೋಡಿಸುವಂತಹ ತರಾವರಿ ಜನಗಳಿದ್ದಾರೆ. ಪ್ರದರ್ಶಿಸುವ ರೀತಿಯಲ್ಲಿ ವ್ಯತ್ಯಾಸವಿರುವುದು ಅಂತ ನನಗನ್ನಿಸತ್ತೆ. ಅಕ್ಷರಗಳಿವೆ, ಪದಗಳಿವೆ, ವ್ಯಾಕರಣವಿದೆ. ಇವುಗಳೆಲ್ಲದರ ಚೌಕಟ್ಟಿನಲ್ಲಿ ನನ್ನ ಭಾವನೆ, ವಿಚಾರ ಮತ್ತು ಅನುಭವಗಳನ್ನು ನಾನೂ ಬರೆಯುತ್ತೇನೆ. ನನ್ನ ವಿಚಾರಗಳು, ಭಾವನೆಗಳು ಮತ್ತು ಅನುಭವಗಳು ನನ್ನದೇನಲ್ಲ ಸಂಸ್ಕೃತಿ, ಪರಿಸರ, ಸಮಾಜ ಎಲ್ಲವೂ ರೂಪಿಸಿರುತ್ತದೆ. ಒಂದೋ ಅವನ್ನು ಪ್ರತಿನಿಧಿಸುತ್ತೇನೆ. ಇಲ್ಲವೇ ಪ್ರತಿಭಟಿಸುತ್ತೇನೆ. ಒಟ್ಟಾರೆ ನಾನು ರೂಪುಗೊಳ್ಳುವುದೇ ನನ್ನ ಕುಟುಂಬದಿಂದ, ನನ್ನ ಸಮಾಜದಿಂದ, ನನ್ನ ಸುತ್ತಮುತ್ತಲ ಪರಿಸರದಿಂದ. ನನ್ನದೂಂಥ ಇಲ್ಲಿ ಗರ್ವ ಪಡಲು ಏನಿದೆ? ಬರೀ ಜೋಡಣೆಗೇ ಸೃಷ್ಟಿಕರ್ತರೆಂದು ಜಂಭ ಪಡಬೇಕೇ? ನಾವು ನಮ್ಮ ಮೇಲಾಗಿರುವ ಪ್ರಭಾವಗಳನ್ನು, ನಮಗಾಗುವ ಅನುಭವಗಳನ್ನು ನಮಗೆ ಗೊತ್ತಿರುವ ರೀತಿಯಲ್ಲಿ ಹೇಳುತ್ತೇವೆ. ಅಷ್ಟೇ!”
“ಇದು ಅಷ್ಟೇ ಅನ್ನುವಷ್ಟು ಸರಳವಲ್ಲ ಚಿಂತೂ, ನೀವು ನನ್ನ ಸಮಾಧಾನಿಸಲು ಏನೋ ಹೇಳ್ತಿದ್ದೀರಿ ಅಂತ ಅನ್ನಿಸತ್ತೆ. ಅದೇನೇ ಇರಲಿ ಈಗ ಮಾತು ಬೇಡ. ಮಲಗೋಣ ಹೊತ್ತಾಯ್ತು.”
ಶಬರಿಯನ್ನು ತೋಳ್ಬಂಧನದಿಂದ ಬಿಡುಗಡೆಗೊಳಿಸಿದ ಚಿಂತನ್ ಕಥೆ ಬರೆದಿದ್ದ ಹಾಳೆಗಳನ್ನು ಸರಿಯಾಗಿ ಮಡಿಸಿ, ಸಂಪಾದಕರಿಗೆ ಬರೆದಿದ್ದ ಪತ್ರವನ್ನು ಲಗತ್ತಿಸಿ, ಕವರ್‍ನೊಳಗಿತ್ತು ಅಂಚುಗಳನ್ನು ಅಂಟಿಸಿ ಕೈಯಲ್ಲೇ ಅದನ್ನು ತೂಗಿ, “ಎಷ್ಟು ಸ್ಟ್ಯಾಂಪ್ಸ್ ಇದಕ್ಕೆ ಬೇಕಾಗಬಹುದು ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.
“ಕೊಡಿಯಿಲ್ಲಿ. ನಾನು ನಾಳೆ ಬೆಳಗ್ಗೆ ಬ್ಯಾಂಕ್‍ಗೆ ಹೋಗ್ತಿದ್ದೀನಿ. ಪಕ್ಕದಲ್ಲೇ ಪೋಸ್ಟಾಫೀಸ್. ಅಲ್ಲೇ ತೂಕ ಹಾಕಿಸಿ, ಸ್ಟ್ಯಾಂಪ್ಸ್ ಹಚ್ಚಿ ಪೋಸ್ಟ್ ಮಾಡ್ತೀನಿ.” ಹೀಗೆ ‘ಆದಿಯಿಂದ ಆದಿಗೆ’ ಕಥೆಯನ್ನು ಪತ್ರಿಕೆಗೆ ಕಳುಹಿಸುವ ಜವಾಬ್ದಾರಿ ಶಬರಿಯ ಹೆಗಲೇರಿತು.
ರಾತ್ರಿ ಮಲಗುವ ಮುನ್ನ ಹೊರಗೆ ಗೇಟಿಗೆ ಬೀಗ ಹಾಕುವಾಗ ಚಿಂತನ್ ಹಾಗೆಯೇ ಹೊರಗೆ ರಾತ್ರಿಯ ಸೌಂದರ್ಯವನ್ನು ನೋಡುತ್ತಾ ನಿಂತುಬಿಟ್ಟ. ಬೀಗ ಹಾಕಲು ಹೋದವನು ಇನ್ನೂ ಮರಳದಿರುವುದನ್ನು ನೋಡಿ ಯಾವುದೋ ಆಲೋಚನೆಯಲ್ಲಿ ಮುಳುಗಿರುವನೆಂದು ಎಚ್ಚರಿಸಲು ಶಬರಿಯೂ ಹೊರಗೆ ಬಂದಳು.
“ಈಗೇನು ವಿಚಾರ ಮಾಡ್ತಿದ್ದೀರಿ?”
“ನಿನ್ನ ಕಥೆ ಹೇಗಿದೆಯೆಂದು ಕೇಳಿದಾಗ ನೀನು ಚೆನ್ನಾಗಿದೆ ಅಂತಷ್ಟೇ ಹೇಳಿದೆ. ಆದರೆ ನನ್ನಂತಹ ಮನೋಕೇಂದ್ರಿತ-ಮೈಂಡ್ ಓರಿಯೆಂಟೆಡ್ ಜನಕ್ಕೆ ಅಷ್ಟು ಹೇಳಿಬಿಟ್ಟರೆ ವಿಶ್ವಾಸವೇ ಬರುವುದಿಲ್ಲ. ಏಕೆ ಚೆನ್ನಾಗಿದೆ? ಹೇಗೆ ಚೆನ್ನಾಗಿದೆ? ಅಂತ ಕಾರಣಕೊಡಬೇಕು.
ಆದರೆ ಸೌಂದರ್ಯವನ್ನು ಸವಿಯುವಾಗ ಹೀಗೆ ಚೆನ್ನಾಗಿದೆ ಹಾಗೆ ಚೆನ್ನಾಗಿದೆ ಅಂಥ ವಿಶ್ಲೇಷಣೆ ಮಾಡಲು ಹೇಗಾಗುವುದು? ಎಲ್ಲದಕ್ಕೂ ಕಾರಣ ಪರಿಣಾಮಗಳನ್ನು ಆಲೋಚಿಸುವಂತಹ, ತರ್ಕ-ವಿಶ್ಲೇಷಣೆ ಮಾಡುವಂತಹ ವಿಚಾರವಾದಿಗಳು ಕೆಲವೊಂದು ಸಮಯ ಸೌಂದರ್ಯವನ್ನು ಸವಿಯುವಂತಹ ರಸಗಳಿಗೆಯಿಂದ ವಂಚಿತರಾಗಿಬಿಡುತ್ತಾರೆ ಅಂತ ಅನ್ನಿಸತ್ತೆ. ಸೌಂದರ್ಯವನ್ನು ಸವಿಯುವ ರಸಿಕತೆಗೆ ಕಾರಣ-ಪರಿಣಾಮಗಳ ಗೊಡವೆ ಯಾಕೇಂತ?”
“ಚಿಂತೂ, ಚಿಂತೂ….ಸಾಕು ಬನ್ನಿ. ಹಾಗಾದರೆ ಡ್ರಗ್‍ನಲ್ಲಿ, ಕುಡಿಯುವುದರಲ್ಲಿ, ಅನಾರೋಗ್ಯಕರವಾಗಿ ವೇಶ್ಯೆಯರ ಜೊತೆ ಮಲಗುವಲ್ಲಿ ಅದರ ಸೌಂದರ್ಯವನ್ನು ಸವಿಯುತ್ತಾ ಪರಿಣಾಮಗಳ ಗೊಡವೆಯೇಕೆ ಅನ್ನಕ್ಕೆ ಆಗತ್ತಾ? ಚಿಂತೂ ಬನ್ನಿ ಸಾಕು.”
“ಈಗ…, ವೇಶ್ಯೆ ಅಂದೆಯಲ್ಲಾ…”
“ಚಿಂತೂ ಸುಮ್ಮನೆ ಬನ್ನಿ. ಇದು ಹೀಗೇ ಹೋಗ್ತಾಯಿರತ್ತೆ. ಬನ್ನಿ ಮಲಗೋಣ.”
ಚಿಂತನ್, “ನನಗನ್ನಿಸತ್ತೆ ಯಾವುದನ್ನೂ ಹೀಗೇ ಎಂದು ನಿರ್ದಿಷ್ಟವಾಗಿ ನಿರ್ಣಯಕ್ಕೆ ಬರದೇ ಆ ಪ್ರಸ್ತುತ ಸಂದರ್ಭದಲ್ಲಿ ಅದನ್ನು ಆಲಿಸಿ, ಸ್ವೀಕರಿಸಿ, ಅಥವಾ ವಿಮರ್ಶಿಸಿ ಅದರ ವಿಚಾರ ತನ್ನಲ್ಲಿ ಸ್ವತಂತ್ರವಾಗಿ, ತನ್ನ ಹಿಂದಿನ ಆಲೋಚನೆಯಗಳ ಪ್ರಭಾವ ಅದರ ಮೇಲೆ ಬೀಳದಂತೆ, ಹೊಸತಾಗಿ ಬೆಳೆಯಲು ಅವಕಾಶ ಮಾಡಿಕೊಡುವವನೇ ಚಿಂತಕ ಅನ್ನಿಸತ್ತೆ…”
“ಚಿಂತೂ, ನೀವೂ ಅಂತವರೇ” ಎಂದು ಮೆಚ್ಚುಗೆಯಿಂದ ಅವನನ್ನಪ್ಪಿಕೊಂಡು “ನಡೆಯಿರಿ ಇನ್ನು ಮಲಗೋಣ.” ಎಂದು ಹೊರಡಿಸಿದಳು.
“ಹಾಗಾದರೆ ಸಿದ್ಧಾಂತಗಳೇಕೆ? ಸೂತ್ರಗಳೇಕೆ ಬೇಕಾಗುತ್ತದೆ?” ಚಿಂತನ್ ಮತ್ತೆ ಎದ್ದ. ಆದರೆ ಶಬರಿ ನಿದ್ರೆ ಹೋಗಿದ್ದಳು.

ಚಿಂತನ್ ತಾನು ಕಥೆ ಅಥವಾ ಲೇಖನಗಳನ್ನು ಒಮ್ಮೆ ಪತ್ರಿಕೆಗಳಿಗೆ ಕಳುಹಿಸಿದ ಮೇಲೆ ಅವು ಯಾವಾಗ ಪ್ರಕಟವಾಗುವವೋ ಎಂದು ಕಾಯುವಂತಹ ಜಾಯಮಾನದವನಲ್ಲ. ಸ್ವೀಕೃತವಾದರೆ ಆ ಬರಹ ಸ್ವವಿಳಾಸ ಬರೆದು ಕಥೆಯೊಂದಿಗೇ ಇರಿಸಿರುವ ಲಕೋಟೆಯಲ್ಲಿ ಮರಳಿ ಬರದೇ ತಡವಾಗಿಯಾದರೂ ಮುದ್ರಿತವಾಗುವುದು. ಆಗಲಂತೂ ಗೌರವಪೂರ್ವಕವಾಗಿ ಪ್ರತಿ-ಧನವೆರಡೂ ಲಭ್ಯವಾಗಿ ಬರಹದ ವಿಚಾರ ತಿಳಿಯುವುದು. ಕೆಲವು ಬಾರಿ ಅವು ತಲುಪುವ ಮುನ್ನವೇ ಆಯಾ ಪತ್ರಿಕೆಗಳನ್ನು ತಿರುವಿಹಾಕುವಾಗ ತಿಳಿದುಬರುವುದು. ಮತ್ತೆ ಕೆಲವು ಬಾರಿ ಪತ್ರಿಕೆ ಓದುವ ಸ್ನೇಹಿತರು, ಹಿತೈಷಿಗಳು ನಿಮ್ಮ ಕಥೆ ಬಂದಿದೆ ಎಂದೂ ತಿಳಿಸುವುದುಂಟು. ಆದರೆ ‘ಆದಿಯಿಂದ ಆದಿಗೆ’ ಕಥೆಯು ‘ಸಂಪದ’ ಪತ್ರಿಕೆಯಲ್ಲಿ ಪ್ರಕಟವಾದದ್ದು ತಿಳಿದ ಬಗೆ ವಿಭಿನ್ನವಾದುದು.
ಒಂದು ಮಧ್ಯಾಹ್ನ ಚಿಂತನ್ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಶಾಲೆಯಲ್ಲೇ ಸಮಾಜ ಪಾಠಗಳನ್ನು ಬೋಧಿಸುವ ಕುಮುದಿನಿ ಸಂಪದ ಪತ್ರಿಕೆಯನ್ನು ಹಿಡಿದುಕೊಂಡು ಮಾಡುತ್ತಿದ್ದ ಊಟವನ್ನು ಅರ್ಧಕ್ಕೇ ಬಿಟ್ಟು ಗಂಭೀರ ಆಲೋಚನೆಯಲ್ಲಿ ಮುಳುಗಿದ್ದಳು. ಜತೆಗಾರರೆಲ್ಲಾ ಊಟ ಮುಗಿಸಿ ಅವರವರಲ್ಲಿ ಮಾತುಕತೆಯಾಡುತ್ತಿದ್ದರು.
ಈ ಲೋಕದಲ್ಲಿರದ ಕುಮುದಿನಿಯ ಸ್ಥಿತಿ ಮತ್ತು ಮುಖದ ಮೇಲಿನ ಆನಂದ ಗಮನಿಸಿದ ಚಿಂತನ್ ಚಪ್ಪಾಳೆ ತಟ್ಟಿ ಎಲ್ಲರ ಗಮನ ಸೆಳೆದ. “ಮಹಿಳೆಯರೇ ಮತ್ತು ಮಹನಿಯರೇ, ಈ ಸುಂದರವಾದ ಮಧ್ಯಾಹ್ನದಲ್ಲಿ ನಾವು ನಮ್ಮ ನಮ್ಮ ಮನೆಗಳಿಂದ ತಂದುಕೊಂಡ ಭೋಜನವನ್ನು ಹಂಚಿಕೊಂಡು ಮನದ ಮಾತುಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ಸಂತೋಷ ಪಡುತ್ತಿದ್ದೇವೆ. ಆದರೆ ಕುಮಾರಿ ಕುಮುದಿನಿಯವರು ತಾವು ತಂದ ಊಟವನ್ನು ತಾವೂ ಮಾಡದೇ, ನಾವು ಅವರ ಪಾಲಿಗಿಟ್ಟಿರುವುದನ್ನೂ ಮುಟ್ಟದೇ ತಾವೊಬ್ಬರೇ ಯಾವುದೋ ಆನಂದದಲ್ಲಿ ತೇಲುತ್ತಾ ಇದ್ದಾರೆ. ಇದು ಸರಿಯೇ? ಅವರು ತಿನ್ನದೇ ಹೋದರೂ ಸರಿಯೇ. ಆದರೆ ನಮ್ಮ ನೆಚ್ಚಿನ ಗೊಜ್ಜವಲಕ್ಕಿಯನ್ನು ನಮಗೆ ಕೊಡದಿರುವುದು ಸರಿಯೇ?”
“ಸರಿಯಲ್ಲ, ಸರಿಯಲ್ಲ” ಎಂದು ಇತರರು ಮೇಜು ಬಡಿದರು. ತಾನು ಇದಕ್ಕಿದ್ದಂತೆ ಎಲ್ಲರ ಆಕರ್ಷಣೆಯ ಕೇಂದ್ರವಾದ ಪರಿಗೆ ಕುಮುದಿನಿಯಲ್ಲಿ ಲಜ್ಜೆಯ ರಂಗೇರಿತು.
“ಚಿಂತನ್, ನೀವು ಸುಮ್ಮನೆ ನನ್ನನ್ನು ಪೇಚಿಗೆ ಸಿಕ್ಕಿಸುತ್ತಿದ್ದೀರಿ. ನಾನು ಸಂಪದದಲ್ಲಿ ಒಂದು ಕಥೆಯನ್ನು ಓದುತ್ತಿದ್ದೆ. ಅಷ್ಟೇ!” ಕುಮುದಿನಿಯ ಸ್ನೇಹಪೂರ್ವಕವಾದ ಆಕ್ಷೇಪವನ್ನೇ ಮತ್ತೆ ಎಳೆಯಾಗಿ ಹಿಡಿದ ಚಿಂತನ್.
“ಅಷ್ಟೇ! ಅಷ್ಟೇ ಅಲ್ಲ. ಹಣ್ಣನ್ನು ಹಂಚಿ ತಿನ್ನಬೇಕು. ಜತೆಯವರು ಚಪ್ಪರಿಸುವ ದನಿ ಕೇಳುತ್ತಾ ನಾವು ತಿನ್ನುತ್ತಿರುವ ಹಣ್ಣಿನ ರುಚಿ ಇನ್ನಷ್ಟು ಸವಿಯಾಗುತ್ತದೆ. ಓದಿದ ಕಥೆಯನ್ನು ಜತೆಯವರಿಗೆ ಹೇಳಬೇಕು. ಸಾಲು ಸಾಲಿಗೂ ಅವರು ಕಾಯುತ್ತಾ ಹೂಂಗುಟ್ಟುವ ದನಿ ಕೇಳುತ್ತಾ ಕಥೆಯ ಸ್ವಾರಸ್ಯ ಇನ್ನೂ ಹೆಚ್ಚುತ್ತದೆ.
ಚಿಂತನ್‍ನ ಇಂತಹ ಮಾತುಗಳಿಗೆ ಅವನ ಸಹ ಶಿಕ್ಷಕರು ಯಾವತ್ತೂ ಅನುಮೋದಿಸುತ್ತಾರೆ. ಅದರಲ್ಲಿಯೂ ಮಿತಭಾಷಿಯಾದ ಕುಮುದಿನಿಯಿಂದ ಮಾತುಗಳನ್ನು ಹೊರಡಿಸಲು ಎಲ್ಲರೂ ಅಗತ್ಯಕ್ಕಿಂತ ಹೆಚ್ಚಾಗಿಯೇ ಹೂಂಗುಟ್ಟಿದರು.
“ಈಗ ನಾನು ಏನು ಮಾಡಬೇಕು?” ನಿಧಾನವಾಗಿ ಬೆವರ ಸಾಲೆ ಕುಮುದಿನಿಯ ಮುಖವನ್ನು ಅಂಚಿನಿಂದ ತೊಳೆಯಲಾರಂಭಿಸಿತು.
“ಕಥೆ ಹೇಳಬೇಕು” ಎಂದರು ಒಬ್ಬರು.
“ಕಥೆ ನಿಮಗೆ ಏಕೆ ಇಷ್ತವಾಯ್ತೂಂತ ಹೇಳ್ಬೇಕು” ಎಂದರು ಇನ್ನೊಬ್ಬರು.
ಅವರೆಲ್ಲರ ಒತ್ತಡ ಅತಿಯಾದಾಗ ಕುಮುದಿನಿ ಹೇಳಲೇಬೇಕಾಯ್ತು.
“ಒಬ್ಬ ಇರ್ತಾನೆ. ಅವನಿಗೆ ಏನೇನೋ ಆಲೋಚನೆ, ಭಾವನೆಗಳು ಮತ್ತು ಆಕಾಂಕ್ಷೆಗಳು ಇರುತ್ತವೆ. ಅವನ ತಂದೆ-ತಾಯಿ ಮತ್ತು ಹಿರಿಯರು ತಮ್ಮ ಪರಂಪರೆಯಲ್ಲಿ ಅವನನ್ನು, ಅವನ ಒಟ್ಟು ವ್ಯಕ್ತಿತ್ವವನ್ನು ಪೆÇೀಷಿಸುತ್ತಾರೆ. ಅವನು ಯುವಕನಾದಾಗ ಆ ಸಾಂಪ್ರದಾಯಿಕ ಕ್ರಮಗಳ ವಿರುದ್ಧ ದಂಗೆ ಏಳ್ತಾನೆ. ಆದರೆ ಕೊನೆಗೆ ತಾನೇ ಆ ಸಂಪ್ರದಾಯಗಳಿಗೆ ಹೊಸ ಅರ್ಥ ಕಂಡುಕೊಳ್ಳುತ್ತಾನೆ. ಅದೇ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ಇಷ್ಟೇ ಕಥೆ” ಅಂತೂ ಇಂತೂ ಪದಗಳನ್ನು ಹೊರದಬ್ಬಿ ನಿಟ್ಟುಸುರಿಟ್ಟು ಸುಧಾರಿಸಿಕೊಂಡಳು ಕುಮುದಿನಿ.
ಇಷ್ಟಕ್ಕೇ ಬಿಡಲು ಚಿಂತನ್ ಒಪ್ಪಲಿಲ್ಲ. “ಕೌರವರು-ಪಾಂಡವರು ದಾಯಾದಿಗಳು. ವಿಭಿನ್ನವಾಗಿ ಹುಟ್ಟಿದರು. ಭಿನ್ನವಾಗಿ ಬೆಳೆದರು. ಧರ್ಮಾಧರ್ಮದ ವಿಷಯದಲ್ಲಿ ದೃಷ್ಟಿಕೋನಗಳು ಮತ್ತು ಪ್ರಭಾವಗಳು ಬೇರೆಯಾಗಿದ್ದವು. ಆದ್ದರಿಂದ ಸಂಘರ್ಷವುಂಟಾಯ್ತು. ಕೊನೆಗೆ ಕುರುಕ್ಷೇತ್ರದಲ್ಲಿ ಯುಧ್ಧವಾಡಿದರು. ಕೌರವರು ಸೋತರು. ಪಾಂಡವರು ಗೆದ್ದರು. ಇದೇ ಮಹಾಭಾರತದ ಕಥೆ ಅಂತಂದು ಬಿಟ್ರೆ ಸಾಕಾ? ಕಥೆ ಕೇಳಿದ ಸಮಾಧಾನ ಸಿಗುತ್ತಾ?”
ಚಿಂತನ್‍ನಿಂದ ಪ್ರೇರಿತರಾದ ಇತರರೂ ಪಟ್ಟು ಬಿಡಲಿಲ್ಲ. “ನಮಗೆ ಸಾರಾಂಶ ಬೇಡ. ಕಥೆ ಬೇಕು.”
“ಏನೋ ಆಯ್ತು ಅನ್ನೋದು ಬೇಡ. ಏನಾಯ್ತು ಅನ್ನೋದು ಬೇಕು.”
ಅಂತೂ ಕುಮುದಿನಿಯಿಂದ ಕಥೆ ಹೇಳಿಸಲಾಯ್ತು.
ಕಥೆಯ ಪ್ರಾರಂಭದಲ್ಲೇ ಇದು ತನ್ನ ಕಥೆಯೇ ಎಂದು ಚಿಂತನ್‍ಗೆ ಅನ್ನಿಸಿ, ಕಥೆ ಕೊನೆಯಾಗುವ ಹೊತ್ತಿಗೆ ತನ್ನದೇ ಎಂದು ದೃಢವಾಯ್ತು. ತನಗೆ ಅರಿವಿಲ್ಲದೇ ತನ್ನ ಕಥೆಯನ್ನು ತಾನೇ ಪ್ರಚಾರ ಮಾಡಿದ ಬಗ್ಗೆ ಅವನಿಗೆ ಸೋಜಿಗವಾಯ್ತು.
“ಕಥೆಯ ಹೆಸರೇನು? ಬರೆದವರ್ಯಾರು?”
“ನಾನು ಅದನ್ನು ನೋಡಲೇ ಇಲ್ಲ.” ಚಿಂತನ್‍ನ ಪ್ರಶ್ನೆಗೆ ಉತ್ತರಿಸಲು ಕುಮುದಿನಿ ಪತ್ರಿಕೆಯ ಪುಟಗಳನ್ನು ತಿರುವಿಹಾಕತೊಡಗಿದಳು.
ಆತುರದಿಂದ ಮೊಗಚಿ ಹಾಕುತ್ತಿಧ್ದ ಹಾಳೆಗಳಲ್ಲಿ ಕಳೆದುಹೋದ ಪುಟಗಳನ್ನು ಮತ್ತೆ ಮತ್ತೆ ತಿರುವಿಹಾಕುತ್ತಿದ್ದ ಕುಮುದಿನಿಯ ಗಡಿಬಿಡಿಯನ್ನು ಕಂಡು, “ಕಷ್ಟ ತೆಗೆದುಕೊಳ್ಳಬೇಡಿ. ಕಥೆಯ ಹೆಸರು ಆದಿಯಿಂದ ಆದಿಗೆ. ಕಥೆಗಾರನ ಹೆಸರು…. ನನ್ನ ಹೆಸರನ್ನು ನಾನೇ ಹೇಳಿಕೊಳ್ಳುವ ಅಗತ್ಯವಿದೆಯೇ?” ಎಂದ ಚಿಂತನ್.
“ಓಹ್!” ಎಂದು ಒಕ್ಕೊರಲಿನ ಉದ್ಗಾರದಿಂದ ಎಲ್ಲರೂ ಚಪ್ಪಾಳೆ ತಟ್ಟಿ ಚಿಂತನ್‍ನ ಅಭಿನಂದಿಸಿದರು.
“ಕಥೆ ತುಂಬಾ ಚೆನ್ನಾಗಿತ್ತು.” ಅವನ ಮಿತ್ರರು ಅವನ ಕೈಕುಲುಕಿದರು.
“ಸ್ವಲ್ಪ ತಾಳಿ,” ಹುಡುಕುತ್ತಿದ್ದ ಕಥೆ ಕುಮುದಿನಿಯ ಕೈಗೆಟುಕಿತ್ತು. “ಕಥೆಯ ಹೆಸರು ‘ಕೊರಡು ಕೊನರಿತು’…. ಕಥೆಗಾರನ ಹೆಸರು ಬೇರೆ ಇದೆ. ಆನಂದ ಮೂರ್ತಿ ಅಂತ….”
ಆ ಮಾತು ಚಿಂತನ್‍ನ ಹಣೆಯ ಮೇಲೆ ಆಶ್ಚರ್ಯಾಘಾತದ ಗೆರೆಗಳನ್ನು ಮೂಡಿಸಿತು.
ಚಿಂತನ್ ಕಥೆಗಳನ್ನು ಬರೆಯುವ, ಅವುಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಷಯವೂ ಅವರಿಗೆಲ್ಲಾ ತಿಳಿದಿದ್ದು ಇದರ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡವರಂತೆ ಕಾಣಲಿಲ್ಲ.
ಚಿಂತನ್ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿರಲಿ ಎಂದು, ‘ಏನೋ ಹೆಚ್ಚು ಕಡಿಮೆಯಾಗಿರಬೇಕು.’
‘ಮುದ್ರಾರಾಕ್ಷಸನ ಹಾವಳಿಯಿರಬೇಕು’ ಅಥವಾ ‘ಅಕಸ್ಮಾತ್ ಆಗಿ ಏನೋ ಆಗಿರಬೇಕು’ ಎಂದು ತತ್ಕಾಲದ ಸಮಾಧಾನದ ಮಾತುಗಳನ್ನಾಡಿ ತಂತಮ್ಮ ತರಗತಿಗಳಿಗೆ ಹೋದರು.
ಆದರೆ ಚಿಂತನ್‍ಗೆ ಅಂದು ಮಧ್ಯಾಹ್ನದ ತರಗತಿಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಲಾಗಲಿಲ್ಲ. ಬಿಗುವಾಗಿ ಕಾಯುತ್ತಲೇ ಇದ್ದು ತಾನು ಬಿಡುವಾಗಿರುವಂತಹ ಕೊನೆಯ ಅವಧಿ ಬಂದ ಕೂಡಲೇ ವಾಚನಾಲಯಕ್ಕೆ ಧಾವಿಸಿ ಸಂಪದವನ್ನು ತಿರುವಿ ಹಾಕಿ ಕಥೆ ಓದಿದ. ಕಥೆಯ ಹಂದರ, ವಸ್ತು, ಸಂದೇಶ ಎಲ್ಲವೂ ತನ್ನದೇ. ಕಥೆಯ ಶೀರ್ಷಿಕೆ ಬದಲಾಗಿದೆ. ಪಾತ್ರಗಳ ಹೆಸರು ಬೇರೆ ಬೇರೆ. ನಿರೂಪಣೆಯಲ್ಲಿ ಕೊಂಚ ಬದಲಾವಣೆ. ಚಿಂತನ್‍ಗೆ ಇದು ಆಘಾತ. ಎಂತಾ ಕೃತಿಚೌರ್ಯ!
ಚಿಂತನ್‍ಗೆ ನಂಬಲೂ ಆಗಲಿಲ್ಲ. ಕುಮುದಿನಿ, ರೇಣುಕಾ, ಅಬ್ದುಲ್ ಬಷೀರ್‍ನೊಂದಿಗೆ ಹಂಚಿಕೊಂಡ.
“ಬೇಲಿಯೇ ಎದ್ದು ಹೊಲ ಮೇಯ್ದಂತೆ.”
“ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ನಕಲಿ ಕಥೆಗಾರರು ಸ್ವಲ್ಪ ಬದಲಾವಣೆ ಮಾಡಿಕೊಂಡು ಮತ್ತೆ ಬರೆದು ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಂಡರೆ ಕೃತಿಚೌರ್ಯ ಎನ್ನಬಹುದು. ಆದರೆ ಪತ್ರಿಕೆಯವರೇ ಪ್ರಕಟಣೆಗೆ ಬಂದ ಕಥೆಗಳನ್ನು ಕದ್ದುಬಿಟ್ಟರೆ?”
ಅವರಲ್ಲಾದ ಬಿಸಿ ಬಿಸಿ ಚರ್ಚೆಯ ಕಾವಿನಲ್ಲೇ ಚಿಂತನ್ ಮನೆಗೆ ಬಂದ. ಶಬರಿ ಮನೆಯಲ್ಲಿರಲಿಲ್ಲ. ಸ್ನೇಹಿತೆಯೊಬ್ಬಳ ಮನೆಗೆ ಹೋಗಿರುತ್ತೇನೆ. ಸಂಜೆ ತರಕಾರಿ ತೆಗೆದುಕೊಂಡು ಬರುತ್ತೇನೆ- ಎಂದು ಚೀಟಿ ಬರೆದಿಟ್ಟು ಹೋಗಿದ್ದಳು.
ಚಿಂತನ್ ಸಂಪದದ ಸಂಪಾದಕರಿಗೆ ಫೆÇೀನ್ ಮಾಡಿ ನೇರವಾಗಿ ಕೃತಿಚೌರ್ಯದ ದೂರು ನೀಡಿದ.
ಸಂಪಾದಕರು ಸಮಾಧಾನವಾಗಿ ಉತ್ತರಿಸಿದರು. “ಹಾಗೇನೂ ಇಲ್ಲ. ಕೊರಡು ಕೊನರಿತು ಕಥೆಯನ್ನು ಬಹಳ ಚೆನ್ನಾಗಿದೆಯೆಂದು ಮತ್ತು ಉತ್ತಮ ಕಥಾವಸ್ತುವೆಂದು ನಾನೇ ಸ್ವಯಂ ಮುತುವರ್ಜಿಯಿಂದ ಪ್ರಕಟಣೆಗೆ ತೆಗೆದುಕೊಂಡೆ. ಆನಂದ ಮೂರ್ತಿಯೆಂಬುವರು ಕಥೆಗಾರರು. ಅದರ ಹಸ್ತಪ್ರತಿ ನಮ್ಮಲ್ಲಿಯೇ ಇದೆ. ನೀವು ಕಛೇರಿಗೆ ಬಂದು ನಿಮ್ಮ ಅನುಮಾನ ಪರಿಹರಿಸಿಕೊಳ್ಳಿ.”
“ಹಾಗಾದರೆ, ಹೀಗಾಗಿರಲಿಕ್ಕೂ ಸಾಧ್ಯವಿಲ್ಲವೇ? ನಿಮ್ಮ ಸಂಪಾದಕ ಮಂಡಲಿಯವರೋ ಅಥವಾ ಬೇರೆ ಜವಾಬ್ದಾರಿಯಿರುವಂತವರೋ ನಿಮ್ಮ ಪತ್ರಿಕೆ ಬಂದಿರುವ ನನ್ನ ಕಥೆಯನ್ನು ಈ ರೀತಿ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆಯೋ ಏನೋ!” ಚಿಂತನ್‍ನ ಗರ್ಜನೆ ಸಂಪಾದಕರ ತಾಳ್ಮೆಯನ್ನು ಮತ್ತಷ್ಟು ಗಟ್ಟಿ ಮಾಡಿತು.
“ನೋಡಿ ಚಿಂತನ್‍ರವರೇ, ಆನಂದಮೂರ್ತಿಯೆಂಬುವರ್ಯಾರೋ ಹವ್ಯಾಸಿ ಕಥೆಗಾರರು ಅಂತನ್ನಿಸತ್ತೆ. ನಮ್ಮ ಕಛೇರಿಯಲ್ಲಿರುವವರ್ಯಾರೂ ಅಲ್ಲವೇ ಅಲ್ಲ. ಇಂತಹ ಕೆಲಸಗಳಿಗೆ ನಮ್ಮಲ್ಲಿ ಯಾರಿಗೂ ಪುರುಸೊತ್ತಿಲ್ಲ. ಇಲ್ಲಿ ಪತ್ರಿಕೆಗಾಗಿ ದುಡಿಯುವ ಮಂದಿ, ಪತ್ರಿಕೆಯನ್ನು ಜನರಿಗೆ ಔಚಿತ್ಯಪೂರ್ಣವಾಗಿ ಕೊಟ್ಟು, ಪತ್ರಿಕೆಗೆ ಒಳ್ಳೆ ಹೆಸರು ಬರಲಿ ಎಂದು ಹೆಣಗುತ್ತಿರುವಂತಹ ಮಂದಿ ಇದ್ದಾರೆಯೇ ಹೊರತು ಇಂತಹ ಮೂರ್ಖತನಕ್ಕೆ ನಮ್ಮಲ್ಲಿ ಯಾರಿಗೂ ಪುರುಸೊತ್ತಿಲ್ಲ. ನೀವು ಆರೋಪಿಸುತ್ತಿರುವಂತಹದ್ದು ನಮ್ಮ ಕಲ್ಪನೆಗೂ ಮೀರಿರುವಂತಹದು. ಆನಂದಮೂರ್ತಿ ಯಾರೆಂದೂ ನಮಗೆ ಗೊತ್ತಿಲ್ಲ. ಬಹುಶಃ ನಮ್ಮ ಪತ್ರಿಕೆಗೆ ಅವರ ಬರಹ ಬಂದಿರುವುದು ಕೂಡ ಮೊದಲಬಾರಿಗೆ ಅನ್ನಿಸತ್ತೆ. ಏನಾಗಿದೆ ಅಂತ ವಿಚಾರಣೆ ಮಾಡೋಣ. ದಯವಿಟ್ಟು ಫೆÇೀನ್‍ನಲ್ಲಿಯೇ ಎಲ್ಲವನ್ನೂ ಬಗೆಹರಿಸಿಕೊಳ್ಳುವಷ್ಟು ಉದ್ವಿಗ್ನರಾಗಬೇಡಿ. ಬನ್ನಿ ನೋಡೋಣ. ಆದರೆ ನೀವು ದೂರುತ್ತಿರುವಂತೆ ಇಲ್ಲಿ ಏನೂ ನಡೆದಿಲ್ಲ. ಅದಂತೂ ಸ್ಪಷ್ಟ. ನೀವು ನಮಗೆ ಕಳುಹಿಸಿರುವುದೆಂದು ತಪ್ಪಾಗಿ ತಿಳಿದುಕೊಂಡು ಇನ್ನಾವುದೋ ಪತ್ರಿಕೆಗೆ ಕಳುಹಿಸಿದ್ದು, ಅದು ಅಲ್ಲಿ ಪ್ರಕಟವಾಗಿ ಅದನ್ನು ಓದಿ ಇನ್ನಾರಾದರೂ ಬರೆದಿರಬಹುದೇನೋ ಗೊತ್ತಿಲ್ಲ. ಇಬ್ಬರೂ ಒಂದೇ ತರಹದ ಕಥೆ ಬರೆದಿರಬಹುದಾದಂತಹ ಕಾಕತಾಳೀಯವನ್ನು ನಾವು ಅಲ್ಲಗಳೆಯಕ್ಕಾಗಲ್ಲ. ಅಥವಾ ನಿಮಗೆ ಈ ಕಥೆಯನ್ನು ಬರೆಯಲು ಯಾವುದರಿಂದ ಪ್ರೇರಣೆ ಸಿಕ್ಕಿತೋ ಅದೇ ಮೂಲದಿಂದ ಆ ಲೇಖಕರಿಗೂ ಪ್ರೇರಣೆ ಸಿಕ್ಕಿರಬಹುದು. ಇಲ್ಲಿ ಏನಾಗಿದೇಂತ ಗೊತ್ತಿಲ್ಲ. ನಿಮ್ಮ ಭಾವನೆಗಳಿಗೆ ಬೆಲೆಕೊಡ್ತೀವಿ. ಆದರೂ ಅದನ್ನು ಸಮರ್ಥಿಸಕ್ಕಾಗಲ್ಲ. ನಿಧಾನವಾಗಿ ಆಲೋಚಿಸಿ.”
ಆದರೆ ಚಿಂತನ್ ತಾನು ಅಷ್ಟೊಂದು ಅಧಿಕಾರಯುತವಾಗಿ ಮಾತನಾಡುವುದಕ್ಕೆ ಕಾರಣವನ್ನೂ ಹೇಳಿದ.
“ಈ ಕಥೆಯ ಮೂಲಪ್ರತಿ ಮುಖ್ಯ ಸಾಕ್ಷಿಯಾಗಿ ನನ್ನ ಹತ್ತಿರವೇ ಇದೆ. ಮಿಗಿಲಾಗಿ ಇದು ಕಥೆಯಲ್ಲ. ನನ್ನ ಜೀವನ. ನನ್ನ ಬಾಲ್ಯ ಮತ್ತು ಯೌವನದ ಅನುಭವಗಳನ್ನು ಕಥೆಯಾಗಿಸಿದ್ದೇನೆ. ಆದ್ದರಿಂದಲೇ ಇಲ್ಲೇ ಏನೋ ಆಗಿದೆ ಅಂತನ್ನೋದು ಶತಸಿದ್ಧ. ಏನಾಗಿದೆ ಅಂತ ನಾನು ತಿಳಿದುಕೊಂಡೇ ತೀರ್ತೀನಿ” ಎಂದ ಚಿಂತನ್.
ಸಂಪಾದಕರಿಂದ ಆನಂದಮೂರ್ತಿಯವರ ಮನೆಯ ಫೆÇೀನ್ ನಂಬರ್ ಪಡೆದ. ಇಂತಹ ಕೃತಿಚೌರ್ಯದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದೂರು ಕೊಡಬಹುದಾದ ಸಾಧ್ಯತೆಗಳ ಬಗ್ಗೆ ಆಲೋಚಿಸಿದ.
ವಕೀಲರೊಬ್ಬರನ್ನು ಸಂಪರ್ಕಿಸಿ ಸಲಹೆ ಪಡೆಯುವ ಮುನ್ನ ಈ ಆನಂದಮೂರ್ತಿ ತನ್ನ ಕಳ್ಳ ಕೃತಿಯ ಬಗ್ಗೆ ಏನು ಹೇಳುವನೋ ಎಂದು ತಿಳಿದುಕೊಳ್ಳಲು ಅವರ ಮನೆಗೆ ಫೆÇೀನ್ ಮಾಡಿದ.
ಹೆಣ್ಣು ದನಿಯೊಂದು ಉತ್ತರಿಸಿತು. “ಅವರು ಮನೆಯಲ್ಲಿ ಇಲ್ಲ. ಫ್ಯಾಕ್ಟರಿಯಿಂದ ಇನ್ನೂ ಬಂದಿಲ್ಲ. ಒಂದು ವೇಳೆ ಓ.ಟಿ. ಇದ್ದರೆ ರಾತ್ರಿ ಒಂಭತ್ತು ಗಂಟೆಗೇ ಬರುವುದು.” ಪೇಪರ್ ಆಫೀಸಿಗೆ ಕೆಲಸಕ್ಕೆ ಹೋಗ್ತಾರೆ ಎಂದುಕೊಂಡಿದ್ದ ಚಿಂತನ್‍ನ ಲೆಕ್ಕಾಚಾರ ಬದಲಾಯಿತು.
“ಫ್ಯಾಕ್ಟರಿ? ಪ್ರಿಂಟಿಂಗ್‍ಪ್ರೆಸ್‍ಗೆ ಕೆಲಸಕ್ಕೆ ಹೋಗ್ತಾರಾ?”
“ಇಲ್ಲ. ನಿಮಗೆ ಯಾವ ನಂಬರ್ ಬೇಕು ಹೇಳಿ?” ಆಕೆಗೆ ಅವರು ಕೇಳಿದ ಹೆಸರು ಸರಿ ಇದ್ದರೂ ಇದು ರಾಂಗ್‍ನಂಬರ್ ಇರಬೇಕೆಂದು ಅನುಮಾನ ಮೂಡಿತು.
ಚಿಂತನ್ ನಂಬರ್ ಹೇಳಿದ.
“ನಂಬರ್ ಸರಿಯಾಗಿದೆ. ಆದರೆ ನಿಮ್ಮ ಆನಂದಮೂರ್ತಿ ಇವರಲ್ಲ ಅನ್ನಿಸತ್ತೆ. ಡೈರೆಕ್ಟರಿಯಲ್ಲಿ ಎಷ್ಟೊಂದು ಜನ ಆನಂದ- ಮೂರ್ತಿಗಳಿದ್ದಾರೆ.”
“ಈ ವಾರದ ಸಂಪದ ವಾರ ಪತ್ರಿಕೆಯಲ್ಲಿ ಕೊರಡು ಕೊನರಿತು ಬರೆದಿರುವ ಆನಂದ ಮೂರ್ತಿ.”
“ಓಹೋ! ಹಾಗಾದರೆ ಸರಿ. ಅವರು ನಮ್ಮೆಜಮಾನರು. ಅವರು ಸ್ಪ್ರಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗ್ತಾರೆ. ಏಕೆ? ಏನಾಗಬೇಕಿತ್ತು? ನೀವು ಪತ್ರಿಕೆಯವರಾ?” ಎಂದು ಆಕೆ ಉತ್ಸಾಹದಿಂದ ಕೇಳಿದರು.
‘ನಿನ್ನ ಗಂಡ ಕಥೆಯನ್ನು ಬರೆದಿಲ್ಲ. ಕದ್ದಿದ್ದಾನೆ’ ಎಂದು ಚೀರಬೇಕೆನಿಸಿತು ಚಿಂತನ್‍ಗೆ.
“ಏನಿಲ್ಲ, ನಾನು ಅವರ ಕಥೆ ಓದಿದೆ. ಮಾತನಾಡಬೇಕೆನಿಸಿತು. ಅವರು ಮನೆಗೆ ಬಂದ ಮೇಲೆ ನಮ್ಮ ಮನೆಗೆ ಫೆÇೀನ್ ಮಾಡಲು ಹೇಳಿ” ಎಂದು ತನ್ನ ಹೆಸರನ್ನು, ದೂರವಾಣಿ ಸಂಖ್ಯೆಯನ್ನೂ ಕೊಟ್ಟ ಚಿಂತನ್.
ಉದ್ವೇಗದಿಂದ ತಲೆ ನೋಯುತ್ತಿತ್ತು. ಸಂಪದದಲ್ಲಿ ಬಂದಿರುವ ಕಥೆಯನ್ನೂ, ತನ್ನ ಮೂಲ ಪ್ರತಿಯನ್ನೂ ಮುಂದಿಟ್ಟುಕೊಂಡು ತಾಳೆ ನೋಡಿದ. ಶೇಕಡಾ 90 ಭಾಗದಷ್ಟು ಭಟ್ಟಿಯಿಳಿಸಿದ್ದಾನೆ ಕೃತಿಚೋರ. ಘಟನೆಗಳನ್ನೂ, ನಿರೂಪಣಾ ಶೈಲಿಯನ್ನೂ ಅಲ್ಪ ಸ್ವಲ್ಪ ಬದಲಾವಣೆ ಮಾಡಿದ್ದಾನೆ.
ಆದರೆ ನನ್ನ ಕಥೆ ಅವನಿಗೆ ಹೇಗೆ ಸಿಕ್ಕಿತು? ಈ ಕಥೆಯ ಪಾತ್ರಧಾರಿಗಳಾದ ಅಪ್ಪ, ಅಮ್ಮ, ಅಜ್ಜಿ, ಸ್ನೇಹಿತರು, ತನ್ನ ಆಗಿನ ವಿಚಾರಗಳು, ಭಾವನೆಗಳೆಲ್ಲವನ್ನೂ ಸ್ಮೃತಿಗೆ ತಂದುಕೊಂಡ ಚಿಂತನ್‍ಗೆ ಒಬ್ಬನ ಜೀವನದ ಅನುಭವಗಳನ್ನೂ ತಮ್ಮ ಕಥೆಗಾಗಿ ದೋಚುತ್ತಾರಲ್ಲಾ ಇದೆಂತಹ ಕಳ್ಳತನ? ಎಂದು ಚಿಂತೆಯಲ್ಲಿ ಚಿಂತನ್ ನರಳಿದ.
“ಚಿಂತೂ,” ಶಬರಿ ಖುಶಿಯಿಂದ ನಗುನಗುತ್ತಾ ಒಳಗೆ ಬಂದವಳು ಗಂಭೀರವಾಗಿ, ಖಿನ್ನವಾಗಿ ಕುಳಿತಿರುವ ಚಿಂತನ್‍ನ ಕಂಡು ಕಳವಳಗೊಂಡಳು.
“ಯಾಕೆ ಚಿಂತೂ? ಏನಾಯ್ತು?” ಅವನ ಹಣೆ ಮುಟ್ಟಿ ನೋಡಿದಳು.
“ಶಬರಿ,” ನೋವಿನಿಂದ ತನ್ನ ಕಥೆ ಕೃತಿಚೌರ್ಯವಾದ ಕಥೆ ಹೇಳಲು ಸಿದ್ಧನಾದ. “ಹದಿನೈದು ದಿನಗಳ ಹಿಂದೆ ಒಂದು ಕಥೆ ಬರೆದಿದ್ದೆನಲ್ಲಾ?…ಆದಿಯಿಂದ ಆದಿಗೆ…ನಿನಗೇ ಪೆÇೀಸ್ಟ್ ಮಾಡಕ್ಕೆ ಕೊಟ್ಟಿದ್ದೆನಲ್ಲಾ?”
“ಓಹ್!” ಥಟ್ಟನೆ ನೆನಪಿಸಿಕೊಂಡಳು ಶಬರಿ.
“ಸಾರಿ, ಸಾರಿ ಚಿಂತೂ, ಎಕ್ಸ್‍ಟ್ರೀಮ್ಲಿ ಸಾರಿ. ನಾನು ಅದನ್ನು ಪೆÇೀಸ್ಟ್ ಮಾಡಲೇ ಇಲ್ಲ ಚಿಂತೂ. ಅವತ್ತು ಬ್ಯಾಂಕ್‍ಗೆ ಹೋದಾಗ ಹಾಗೇ ಮರೆತು ಬಂದುಬಿಟ್ಟೆ. ಮತ್ತೆ ಆ ಕಡೆ ಹೋದಾಗ ಪೆÇೀಸ್ಟ್ ಮಾಡೋಣಾಂತಿದ್ದೆ. ಆದರೆ ಆ ಕಡೆ ಹೋದಾಗ ನನ್ನ ಹ್ಯಾಂಡ್‍ಬ್ಯಾಗ್ ಮರೆತು ಹೋಗೋದು…. ಹೀಗೇ ಏನೇನೋ ಆಗಿ ಕೊನೆಗೆ ಪೆÇೀಸ್ಟ್ ಮಾಡಲೇ ಇಲ್ಲ.”
ಶಬರಿ ತನ್ನ ಹ್ಯಾಂಡ್‍ಬ್ಯಾಗ್‍ನಿಂದ ಕಥೆಯ ಲಕೋಟೆ ತೆಗೆದಳು. “ನಿಜಕ್ಕೂ ಕ್ಷಮಿಸಿ ಚಿಂತೂ, ನಾಳೆ ಬೆಳಗ್ಗೆ ಖಂಡಿತ ಪೆÇೀಸ್ಟ್ ಮಾಡ್ತೀನಿ.” ಇನ್ನೂ ಏನೋ ಹೇಳಲಿದ್ದವಳು ಅಷ್ಟರಲ್ಲಿ ಟೆಲಿಫೆÇೀನ್ ಕರೆ ಬಂದುದರಿಂದ ಅತ್ತ ಕಡೆಗೆ ನಡೆದಳು.
“ಚಿಂತೂ, ಇದು ನಿಮಗೆ, ಯಾರೋ ಆನಂದ- ಮೂರ್ತಿಯಂತೆ.”
ರಿಸೀವರ್‍ನ್ನು ಚಿಂತನ್‍ಗೆ ಹಸ್ತಾಂತರಗೊಳಿಸಿ ತಾನು ಅಡಿಗೆ ಮನೆಗೆ ಕಾಫಿ ಮಾಡಲು ಹೋದಳು.
“ನಮಸ್ಕಾರ. ನನ್ನ ಹೆಸರು ಚಿಂತನ್‍ಅಂತ.” ತಾನು ಆಡಬೇಕೆಂದುಕೊಂಡಿದ್ದ ಮಾತುಗಳನ್ನು ಸಂಪೂರ್ಣವಾಗಿ ಮಾರ್ಪಡಿಸಿ ಆಡಲು ಅಷ್ಟೇನೂ ಸುಲಭವಾಗಲಿಲ್ಲ.
“ನಿಮ್ಮ ಕಥೆ ‘ಕೊರಡು ಕೊನರಿತು’ ಓದಿದೆ. ಮನಸ್ಸಿಗೆ ಬಹಳ ಹತ್ತಿರವಾಯ್ತು. ನನಗಾದ ಭಾವನೆಗಳನ್ನು ನಿಮ್ಮ ಜತೆ ಹೇಳಿಕೊಳ್ಳೋಣಾಂತ ನಿಮಗೆ ಫೆÇೀನ್ ಮಾಡಿದೆ. ನಿಮ್ಮ ಕಥೆ ತೀರಾ ನೈಜವಾಗಿದೆ. ಅದಕ್ಕೇ ಅಭಿನಂದನೆ ಸಲ್ಲಿಸೋಣಾಂತ…”
“ತುಂಬಾ ಥ್ಯಾಂಕ್ಸ್, ಆದರೆ ಒಂದು ಸಣ್ಣ ಬದಲಾವಣೆ. ಕಥೆ ತೀರಾ ನೈಜವಾಗಿದೆ ಅಂದಿರಲ್ಲಾ, ‘ಕೊರಡು ಕೊನರಿತು’ನಲ್ಲಿ ನಿಜವೇ ಕಥೆಯಾಗಿರುವುದು. ಅದು ನನ್ನ ಸ್ವಾನುಭವ. ನನ್ನ ಬಾಲ್ಯ, ಯೌವನ ಕಾಲದಿಂದ ಇಲ್ಲಿಯವರೆಗಿನ ನನ್ನ ವೈಚಾರಿಕ ಹಾಗೂ ಭಾವನಾತ್ಮಕ ಸಂಘರ್ಷ, ನನ್ನಲ್ಲಿ ಆದ ಬದಲಾವಣೆಗಳನ್ನು, ಆಗ ಮಾಡಿದ ವಿಚಾರಗಳನ್ನು, ಮೂಡಿದ ಭಾವನೆಗಳನ್ನು ಕಥೆಯಾಗಿಸಿದೆನೇ ಹೊರತು ಅದರ ನಿಜವಾದ ಲೇಖಕರು, ಈಗ ಬದುಕಿಲ್ಲದಿದ್ದರೂ, ನಮ್ಮ ತಂದೆ, ತಾಯಿ, ಅಜ್ಜಿ ಜೊತೆಗೆ ನನ್ನ ಮೇಲೆ ಆಗಿರುವ ಈ ಸಂಸ್ಕೃತಿ ಮತ್ತು ಸಮಾಜದ ಪ್ರಭಾವ.”
ಆನಂದಮೂರ್ತಿಯವರ ಮಾತುಗಳಿಗೆ ಮೂಕನಾಗಿ ಹೋಗಿದ್ದ ಚಿಂತನ್.
“ಹಲೋ?” ತಮ್ಮ ಮಾತುಗಳನ್ನು ಕೇಳುತ್ತಿದ್ದಾರೋ ಇಲ್ಲವೋ ಎಂಬ ಅನುಮಾನದಿಂದ ಆನಂದಮೂರ್ತಿಯವರು ಚಿಂತನ್‍ನ ಗಮನ ಸೆಳೆಯಲು ಯತ್ನಿಸಿದರು.
ಚಿಂತನ್ ಉತ್ತರಿಸಿದ. “ಹೌದು, ನನಗೀಗ ಅರ್ಥವಾಯ್ತು. ನಾನು ಮತ್ತೊಮ್ಮೆ ನಿಮಗೆ ಫೆÇೀನ್ ಮಾಡುತ್ತೇನೆ. ಭೇಟಿಯಾಗೋಣ” ಎಂದು ಚಿಂತನ್ ಹೇಳಿ, ಪರಸ್ಪರ ವಂದಿಸುವುದರೊಂದಿಗೆ ಅವರ ದೂರವಾಣಿ ಸಂಭಾಷಣೆ ಮುಗಿಯಿತು.
ಅವನೆದುರಿಗೆ ಕಾಫಿ ತಂದಿಟ್ಟ ಶಬರಿ, “ಚಿಂತೂ, ನಾಳೆ ಬೆಳಗ್ಗೆ ಮರೆಯದೇ ಪೆÇೀಸ್ಟ್ ಮಾಡ್ತೀನಿ.” ಎಂದು ಮತ್ತೊಮ್ಮೆ ಕ್ಷಮೆ ಯಾಚಿಸಿದಳು.
“ಅಗತ್ಯವಿಲ್ಲ ಶಬರಿ.” ಚಿಂತನ್ ಅವಳಿಂದ ಲಕೋಟೆಯನ್ನು ಪಡೆದುಕೊಂಡ.
“ಕೋಪ ಬಂತಾ ಚಿಂತೂ?”
“ಇಲ್ಲ, ಈ ಕಥೆ ಕಳಿಸುವ ಅಗತ್ಯವಿಲ್ಲ. ಇನ್ನೊಂಧು ಕಥೆ ಬರೀತೀನಿ. ಅದರ ಹೆಸರು ಕೃತಿಚೌರ್ಯ. ಅದನ್ನು ನೀನೇ ಪೆÇೀಸ್ಟ್ ಮಾಡು.”
“ಏನು ಅದರ ಕಥೆ?”
“ಹೇಳ್ತೀನಿ. ಮೊದಲು ಸಂಪದ ವಾರ ಪತ್ರಿಕೆಯ ಸಂಪಾದಕರಿಗೊಂದು ಫೆÇೀನ್ ಮಾಡಬೇಕು. ಆಮೇಲೆ ನಿನಗೆ ಇದರ ಕಥೆ ಹೇಳ್ತೀನಿ” ಎಂದು ಡಯಲ್ ಮಾಡತೊಡಗಿದ. ಶಬರಿ ತಾನು ಸ್ವಲ್ಪ ಹೊತ್ತಿನ ಮುಂಚೆ ಬಂದಾಗ ಅವನ ಮುಖದ ಮೇಲೆ ಕಂಡ ದುಗುಡ, ಕಳವಳ ಕರಗಿ ಈಗ ಹಗುರವಾದಂತಹುದನ್ನು ಕಂಡು ಸಮಾಧಾನದಿಂದ ಕೇಳಿದಳು. “ಏನೋ ಸ್ವಾರಸ್ಯವಾಗಿರೋದು ನಡೆದಂತಿದೆ?”
“ಹೌದು, ಅದರ ಸೂತ್ರಧಾರಿಣಿ ನೀನೇ!….ಹಲೋ, ನಮಸ್ಕಾರ ಸಂಪಾದಕರಿದ್ದಾರಾ?…”
“ನಾನೇ?” ಶಬರಿ ಅವನು ಫೆÇೀನ್‍ನಲ್ಲಿ ಮಾತನಾಡಿ ಮುಗಿಸುವುದನ್ನೇ ಕಾತುರದಿಂದ ಕಾಯುತ್ತಾ ಕುಳಿತಳು.
1987
(ಇದು ನಾನು 1987ರಲ್ಲಿ ಬರೆದ ಕತೆ. 1982ರಲ್ಲಿ ‘ಅಸೂಯೆ’ ಎಂಬ ಕತೆ ಬರೆದಿದ್ದೆ. ನಾನಾಗ ಅದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಯಾವುದೋ ಕಥಾ ಸ್ಪರ್ಧೆಗೆ ಕಳುಹಿಸಬೇಕೆಂದುಕೊಂಡಿದ್ದು ನನ್ನ ಶಾಲೆ ಪರಿಷತ್ತಿನ ಬಳಿಯೇ ಆಗಿದ್ದರಿಂದ ಈಗ ಕೊಡೋಣ, ಆಗ ಕೊಡೋಣ ಎಂದುಕೊಂಡು ಕಾಲ ತಳ್ಳುತ್ತಿದ್ದೆ. ಆದರೆ, ಮುಂದೊಂದು ದಿನ ಬಹುಮಾನಿತ ಕತೆಗಳನ್ನು ಪ್ರಕಟಿಸಿದ್ದ ಪರಿಷತ್ತಿನ ಕತಾ ಸಂಕಲನದಲ್ಲಿ ನನ್ನದೇ ಕಥಾವಸ್ತುವಿನ ಕತೆಯನ್ನು ನೋಡಿ ಅಚ್ಚರಿಗೊಂಡಿದ್ದೆ. ನನಗೆ ತುಂಬಾ ಆಶ್ಚರ್ಯವಾಗಿತ್ತು ಮತ್ತು ಆಘಾತವೂ ಆಗಿತ್ತು. ನಾನು ನನ್ನ ಸೃಜನಶೀಲತೆಯ ಬಗ್ಗೆ ಅತ್ಯಂತ ನಂಬಿಕೆ ಇಟ್ಟುಕೊಂಡಿದ್ದವನು. ಹಾಗೆಯೇ ನಾನು ಎಂದಿಗೂ, ಯಾರದೂ ಕದಿಯುವಂತಹ ಬರಗೆಟ್ಟವನಾಗುವುದಿಲ್ಲ ಎಂದು ವಿಪರೀತ ಅಭಿಮಾನ ಅಥವಾ ಅಹಂಕಾರವಿಟ್ಟುಕೊಂಡಿದ್ದವನಿಗೆ ಬೇರೆಯವರೊಬ್ಬರು, ಬೇರೆ ಹೆಸರಿನಲ್ಲಿ ನನ್ನದೇ ಕಥಾವಸ್ತುವನ್ನು ತಮ್ಮ ಸೃಜನಶೀಲತೆಯ ನೇಯ್ಗೆಯಲ್ಲಿ ಹೆಣೆದಿದ್ದದ್ದು ಕೆಟ್ಟದಾಗೆನಿಸಿತು. ಆದರೆ, 1987ರಲ್ಲಿ ಯಾವುದೋ ದಪ್ಪ ಪುಸ್ತಕದಲ್ಲಿ ಅಸೂಯೆ ಕತೆ ಸಿಕ್ಕಿತು. ಪರಿಷತ್ತಿನ ವಿಳಾಸಕ್ಕೆ ಬರೆದ ಕವರಿನಲ್ಲಿ. ಆಗ ನನಗೆ ಸೃಜನಶೀಲತೆಯ ಸಾಮರ್ಥ್ಯ ಮತ್ತು ತಾತ್ವಿಕತೆಯ ಬಗ್ಗೆ ಆಲೋಚಿಸುವಂತಾಯಿತು. ಅದರ ಪ್ರತಿಫಲ ಈ ಕತೆ. ಆಗ ಚಿಂತನ್ ಮತ್ತು ಶಬರಿ ಎಂಬ ಎರಡು ಸಾಕ್ಷಿ ಪ್ರಜ್ಞೆಗಳನ್ನು ಪ್ರತಿಮೆಯಾಗಿಟ್ಟುಕೊಂಡು ಕತೆ ಬರೆಯುತ್ತಿದ್ದೆ. ಈ ಕೃತಿಚೌರ್ಯವನ್ನು ಅವರಿಬ್ಬರ ಕತೆಗಳ ಸರಣಿಯಲ್ಲಿ ಅಳವಡಿಸಿದೆ.)

LEAVE A REPLY

Please enter your comment!
Please enter your name here