ಆತನು ಆಗಷ್ಟೇ ನಿದ್ರೆಯಿಂದ ಎಚ್ಚೆತ್ತಿದ್ದನು. ಗಡಿಯಾರದೆಡೆಗೆ ಕಣ್ಣೋಡಿಸಿದ. ಫಜ್ರ್ ನ ಕೊನೆಯ ಗಳಿಗೆಯಾಗಿತ್ತು. ವಝೂ ಮಾಡಲು ಓಡಿದ ಅದರೆ ಏನೋ ಅನುಭವವಾದಂತಾಯಿತು. ಮತ್ತೆ ತನಗೆ ಕಡ್ಡಾಯವಾಗಿ ಸ್ನಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಲು ತಡವಾಗಲಿಲ್ಲ. ಈಗ ನಮಾಜ್ ನಿರ್ವಹಿಸುವುದು ಅಸಾಧ್ಯವಾಗಿತ್ತು. ಆತನಿಗೆ ಜಿಗುಪ್ಸೆಯಾಗತೊಡಗಿತು. ಆದರೆ ಅಕಸ್ಮಾತ್ ಆತನ ಮನಸ್ಸಿನಲ್ಲಿ ಸಂತೋಷದ ಅಲೆ ಮೂಡಿತ್ತು. ಈ ರೀತಿಯ ಸಂತೋಷವು ಬಹುಶಃ ಆತನ ಜೀವನದಲ್ಲಿ ಬಂದದ್ದು ಇದೆ ಮೊದಲಾಗಿತ್ತು. ಅದು ಬಹಳ ದಿನಗಳ ಪರಿಶ್ರಮದ ಬಳಿಕ ದೊರಕಿದ ಬಹುದೊಡ್ಡ ವಿಜಯವಾಗಿತ್ತು. ಮೊದಲು ಆತನೊಬ್ಬ ಶ್ರದ್ಧೆ, ಆತ್ಮವಿಶ್ವಾಸವುಳ್ಳ ಜಾಣ ವಿಧ್ಯಾರ್ಥಿಯಾಗಿದ್ದ. ಏಕಾಗ್ರತೆಯೊಂದಿಗೆ ನಮಾಜ್ ನಿರ್ವಹಿಸುವುದು ಆ ಮೂಲಕ ದೇವಸಂಪ್ರೀತಿಯನ್ನರಸಿ ಅಳುವುದು, ಮನಸ್ಸಿನ ದುಗುಡಗಳನ್ನು ಮರೆಮಾಚಿ ಮುಗುಳ್ನಗುವುದು ಇತರರಂತೆ ಆತನಿಗೆ ಕಷ್ಟದ ಕೆಲಸವಾಗಿರಲಿಲ್ಲ. ಆತನಿಗೆ ಕುರ್ ಆನಿನೊಂದಿಗಿದ್ದ ಅವಿನಾಭಾವ ಸಂಬಂಧವು ಯಾರಿಗೂ ತಿಳಿಯದೇ ಇರಲಿಲ್ಲ. ಪ್ರತಿ ಕ್ಷಣವೂ ಕುರ್ ಆನ್ ಮತ್ತು ಉತ್ತಮ ಸಾಹಿತ್ಯಗಳ ಬಗ್ಗೆ ಚರ್ಚಿಸುವುದು ಆತನ ನೆಚ್ಚಿನ ಕಾರ್ಯವಾಗಿತ್ತು. ಆದರೆ ಆತನ ಈ ಎಲ್ಲ ನಡವಳಿಕೆಗಳೂ ನಿಧಾನವಾಗಿ ದಿನದಿಂದ ದಿನಕ್ಕೆ ಕುಗ್ಗತೊಡಗಿತು.

ಆತನ ಅಧ್ಯಯನದ ಮೇಲೆ ಯಾವುದೋ ಬಾಹ್ಯ ಪ್ರಭಾವವು ಪರಿಣಾಮ ಬೀರಲಾರಂಭಿಸಿತು. ಆತನ ಏಕಾಗ್ರತೆಯು ವ್ಯತಿಚಲಿಸತೊಡಗಿತು. ಆತನ ಕುರ್ ಆನ್ ಮತ್ತು ಇತರ ಸಾಹಿತ್ಯಗಳ ನಡುವಿನ ಅಂತರವೂ ದಿನನಿತ್ಯ ಅಧಿಕವಾಗತೊಡಗಿತು. ಯಾರ ದೃಢ ಚಿತ್ತತೆ ಮತ್ತು ಆತ್ಮವಿಶ್ವಾಸದಿಂದ ಇತರರು ಪ್ರಭಾವಿತರಾಗಿ ಪ್ರೇರಣೆ ಪಡೆಯುತ್ತಿದ್ದರೋ ಸ್ವತಃ ತಾನೇ ಅದರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಾರಂಭಿಸಿದ್ದನು ಮತ್ತು ತನಗೆ ತಾನೇ ಏಕಾಂಗಿ ಮತ್ತು ಅಸಹಾಯಕನೆಂಬಂತೆ ಭಾವಿಸತೊಡಗಿದ್ದನು. ಆತನ ಮುಂದೀಗ ಯಾವುದೇ ಪ್ರೇರಣೆಯಾಗಲಿ ಗುರಿಯಾಗಲಿ ಬಾಕಿ ಉಳಿದಿರಲಿಲ್ಲ. ಜೀವನವು ಸಂಪೂರ್ಣ ನಶ್ವರವೆಂಬಂತೆ ಭಾಸವಾಗತೊಡಗಿತ್ತು.

ಪ್ರಾರಂಭದಲ್ಲಿ ಇದೆಲ್ಲಾ ಯಾಕೆ ಹೀಗೆ ಸಂಭವಿಸುತ್ತಿದೆ ಎಂಬುದರ ಬಗ್ಗೆ ಆತನು ಅಜ್ಞನಾಗಿದ್ದನು. ಈ ಬಗ್ಗೆ ಚಿಂತನೆ ನಡೆಸಿದಂತೆಲ್ಲ ಕಾರಣವು ಮನವರಿಕೆಯಾಗತೊಡಗಿತು. ಆದರೆ ಆತ ಇದರ ಮೇಲೆ ನಿಯಂತ್ರಣ ಸಾಧಿಸುವುದರಲ್ಲಿ ವಿಫಲನಾಗಿದ್ದನು. ಪ್ರಾರಂಭದಲ್ಲಿ ಆತನ ಸಮಯವು ಅತ್ತಿತ್ತ ಸಾಗುವ ಯುವತಿಯರನ್ನು ದಿಟ್ಟಿಸುವುದರಲ್ಲಿ ಮತ್ತು ಅನಾವಶ್ಯಕ ಹರಟೆಗಳಲ್ಲಿ ವ್ಯರ್ಥವಾಗುತ್ತಿತ್ತು.ಮುಂದುವರಿದು ಅಶ್ಲೀಲ ಸಾಹಿತ್ಯಗಳ ಅಧ್ಯಯನದಿಂದ ಹಿಡಿದು ಚಲನಚಿತ್ರ ವೀಕ್ಷ ಣೆಯ ಹಂತಕ್ಕೆ ತಲುಪಿತ್ತು. ಇನ್ನೂ ಮುಂದುವರಿದು ಅಶ್ಲೀಲ ವಿಡಿಯೋ ವೆಬ್ ಸೈಟ್ ಗಳ ವರೆಗೆ ತಲುಪಿತು. ಅಂತಿಮವಾಗಿ ಆತನು ತನ್ನಿಂದ ಊಹಿಸಲೂ ಸಾಧ್ಯವಿಲ್ಲದಂತಹ ನೀಚ ಕಾರ್ಯಗಳನ್ನು ಕೂಡ ಮಾಡಿ ಮುಗಿಸಿದನು. ಮತ್ತೆ ಆತನಿಗೆ ಅಪರಾಧಿ ಭಾವನೆಯು ಎಲ್ಲಾ ಸತ್ಕಾರ್ಯಗಳಲ್ಲಿ ತೊಡಕಾಗಿ ಪರಿಣಮಿಸತೊಡಗಿತು. ಅದರಿಂದ ಹೊರಬರಲು ಬಹಳ ಪರಿಶ್ರಮ ಪಟ್ಟನಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿ ಬಾರಿಯೂ ದೇವನೊಂದಿಗೆ ಕ್ಷಮೆಯಾಚಿಸಿ ಈ ದುಷ್ಕೃತ್ಯದಿಂದ ದೂರ ಉಳಿಯುವ ನಿರ್ಧಾರ ಕೈಗೊಳ್ಳುತ್ತಾನಾದರೂ ಕೆಲವು ದಿನಗಳ ಬಳಿಕ ಅದರಲ್ಲಿ ವಿಫಲವಾಗುತ್ತಿದ್ದನು. ಇದರಿಂದ ಹೊರಬರಲು ಅನೇಕ ಪ್ರಾಯೋಗಿಕ ಪ್ರಯತ್ನಗಳನ್ನು ಮಾಡಿಯೂ ನೋಡಿಯಾಯಿತು. ಎಲ್ಲವೂ ನಿಷ್ಪ್ರಯೋಜಕ. ಈಗ ಇದರಿಂದ ಹೊರ ಬರುವುದು ಎಂದಿಗೂ ಸಾಧ್ಯವಿಲ್ಲ ಎಂಬ ಆಲೋಚನೆಯು ಅವನ ಮನಸ್ಸಿನಲ್ಲಿ ಸುಳಿಯಲಾರಂಭಿಸಿತ್ತು. ತಾನು ಇಷ್ಟೊಂದು ದರ್ಬಲನೆಂದು ಆತನಿಗೆ ಯಾವತ್ತೂ ಅನ್ನಿಸಿರಲಿಲ್ಲ. ಏನು ಮಾಡಲಿ? ಎತ್ತ ಸಾಗಲಿ? ಏನೂ ತೋಚದಾದನು. ಒಂದು ದಿನ ಆತನಿಗೆ ಯಾಕೆ ದೇವನೆದುರು ಪ್ರತಿಜ್ಞೆ ಮಾಡಿ ನೋಡಬಾರದು ಎಂಬ ಆಲೋಚನೆಯುಂಟಾಯಿತು. ಅಂತಿಮವಾಗಿ ಯಾವುದೇ ಒಬ್ಬ ವ್ಯಕ್ತಿಯು ದೇವನೊಂದಿಗೆ ಪ್ರತಿಜ್ಞೆ ಮಾಡಿ ಅದನ್ನು ನಿರ್ವಹಿಸುವುದರಲ್ಲಿ ತೋರಿದ ನಿರಾಸಕ್ತಿಗಾಗಿ ಉಂಟಾಗುವ ಪರಿಣಾಮಗಳನ್ನು ಮನವರಿಕೆ ಮಾಡಿಕೊಂಡು ಸಂಪೂರ್ಣ ದೃಢ ಚಿತ್ತದೊಂದಿಗೆ ತಾನು ಇನ್ನೆಂದೂ ಈ ದುಷ್ಕೃತ್ಯದ ಸಮೀಪವೂ ಕೂಡ ಸುಳಿಯಲಾರೆನೆಂಬ ಪ್ರತಿಜ್ಞಗೈಯ್ಯುತ್ತಾನೆ.

ಈ ದಿನ ಅಂದು ಆತ ಮಾಡಿದ ಪ್ರತಿಜ್ಞೆಯ ಫಲಿತಾಂಶವು ಇಂದು ಆತನಿಗೆ ಗೋಚರಿಸುತ್ತಿದೆ. ಬಹಳ ತಿಂಗಳುಗಳ ಬಳಿಕ ಆತನು ಸ್ವಪ್ನಸ್ಕಲನವಾದ ಸ್ಥಿತಿಯಲ್ಲಿ ನಿದ್ರೆಯಿಂದ ಎಚ್ಚೆತ್ತಿದ್ದಾನೆ. ಅನೈತಿಕತೆಯ ಮಾರ್ಗವು ಬಹಳ ಸುಗಮವಾಗಿ ತನ್ನೆಡೆಗೆ ಕೈ ಚಾಚಿ ಕರೆಯುತ್ತಿದ್ದರೂ ಪ್ರತಿ ಕ್ಷಣವೂ ಅದರ ವಿರುದ್ಧ ಹೋರಾಟ ನಡೆಸಿ ಸಫಲನಾಗಿದ್ದಕ್ಕೆ ಸಂತೋಷವಾಗದೇ ಇರುವುದೆ? ಅಂತಿಮವಾಗಿ ಆತನು ತನ್ನ ಲಜ್ಜೆಯನ್ನು ಮರಳಿ ಪಡೆದಿದ್ದನು ಮಾತ್ರವಲ್ಲ ಪರಿಶುದ್ಧ ಜೀವನವನ್ನು ಮರಳಿ ಪಡೆದಿದ್ದನು. ಯಾಕಿಲ್ಲ? ಏಕೆಂದರೆ ಲಜ್ಜೆಯ ಅರ್ಥವೇ ಜೀವನವಾಗಿದೆ…

 

ಕೃಪೆ: ರಫೀಕ್-ಎ-ಮಂಜಿಲ್ ಉರ್ದು ಮಾಸಿಕ.

ಕನ್ನಡಕ್ಕೆ: ಮಹಮದ್ ಫಾರೂಕ್ ತೀರ್ಥಹಳ್ಳಿ.

 

LEAVE A REPLY

Please enter your comment!
Please enter your name here