ಕನ್ನಡಕ್ಕೆ ಅನುವಾದ: ಶೇಖ್ ಅಯಾನ್. ಕಾನೂನು ವಿದ್ಯಾರ್ಥಿ, ಉಡುಪಿ

ಉರ್ದುವಿನ ಮಾಸಿಕ ಪತ್ರಿಕೆ “ಜಿಂದಗಿ ಎ ನೌವ್” ಇದರಲ್ಲಿ ಪ್ರಕಟಿತ ಅನುವಾದಿತ ಲೇಖನ.

ಮೂಲ ಲೇಖಕರು: ಸಯ್ಯದ್ ತನ್ವೀರ್, ದೆಹಲಿ

21ನೇ ಶತಮಾನದ ವಿದ್ಯಾರ್ಥಿಗಳು ಪಡೆಯಬೇಕಾದ ಅತ್ಯಂತ ಪ್ರಮುಖವಾದ ಸಾಮರ್ಥ್ಯ ಎಂದರೆ ಅದುವೇ ನಾಯಕತ್ವ. ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ನಾಯಕತ್ವವವನ್ನು ಕೇವಲ ರಾಜಕೀಯ ನಾಯಕತ್ವಕ್ಕೆ ಮೀಸಲಿಟ್ಟಿದ್ದಾರೆ, ಆದರೆ ಪೂರ್ವ ಮತ್ತು ಪಶ್ಚಿಮದ ನಾಗರಿಕ ಜಗತ್ತಿನಲ್ಲಿ, ನಾಯಕತ್ವವು ರಾಜಕೀಯ ಕ್ಷೇತ್ರದಲ್ಲಿ ತನ್ನ ಸಾರವನ್ನು ತೋರಿಸುವುದಕ್ಕೆ ಸೀಮಿತವಾಗಿಲ್ಲ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದ ಯಾವುದೋ ಒಂದು ಹಂತದಲ್ಲಿ ಸಣ್ಣ ಅಥವಾ ದೊಡ್ಡ ನಾಯಕನಾಗಬಹುದು ಮತ್ತು ಅವನು ನಾಯಕನಾಗುವುದು ಸಹ ಅಗತ್ಯ. ಅವನು ನಾಯಕನಾಗದಿದ್ದರೆ ಮತ್ತು ತನ್ನಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳದಿದ್ದರೆ, ಅವನು ತನ್ನ ಪಾತ್ರವನ್ನು ಸಕಾರಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ.

ಉದಾಹರಣೆಗೆ, ಒಬ್ಬ ಅಣ್ಣ ತನ್ನ ಕಿರಿಯ ಸಹೋದರನಿಗೆ ನಾಯಕ, ತಂದೆ ತನ್ನ ಕುಟುಂಬಕ್ಕೆ ನಾಯಕ, ತಾಯಿ ಮನೆಯಲ್ಲಿ ತನ್ನ ವಲಯದಲ್ಲಿ ನಾಯಕಿ, ಕಚೇರಿಗಳಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಕೂಡ ನಾಯಕ. ಮಧ್ಯಮ ಮಟ್ಟದ ವ್ಯವಸ್ಥಾಪಕರು, ಮುಂಚೂಣಿಯಲ್ಲಿರುವವರು ಅಂದರೆ ಕೆಳ ಹಂತದ ಕೆಲಸಗಾರರು ಸಹ ನಾಯಕರಾಗಿರುತ್ತಾರೆ. ಬಾಲ್ಯದಲ್ಲಿಯೂ ಸಹ ಕೆಲವು ಜವಾಬ್ದಾರಿಗಳನ್ನು ಪೂರೈಸುವಾಗ ಒಬ್ಬ ವ್ಯಕ್ತಿಯು ನಾಯಕನಾಗುತ್ತಾನೆ. ವ್ಯಕ್ತಿಗಳು ತಮ್ಮ ವಯಸ್ಸಿನ ವಿವಿಧ ಭಾಗಗಳಲ್ಲಿ ನಾಯಕರಾಗಿರುತ್ತಾರೆ. ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದರೆ, ಒಬ್ಬನಿಗೆ ಎಂಟು ವರ್ಷ ಮತ್ತು ಇನ್ನೊಬ್ಬನಿಗೆ ಐದು ವರ್ಷ, ಎಂಟು ವರ್ಷದ ಹುಡುಗ ಐದು ವರ್ಷದ ಹುಡುಗನಿಗೆ ನಾಯಕನಾಗುತ್ತಾನೆ ಮತ್ತು ಐದು ವರ್ಷದ ಮಗು ಎಂಟು ವರ್ಷದ ಹುಡುಗನಿಗೆ ನಾಯಕನಾಗುತ್ತಾನೆ ಹಾಗೂ ಐದು ವರ್ಷದ ಮಗು ಎಂಟು ವರ್ಷದ ಹುಡುಗನಿಗೆ ನಾಯಕನಾಗುತ್ತಾನೆ. ಒಂದು ವರ್ಷದ ಮಗುವನ್ನು ನೋಡಿ ಪ್ರಭಾವಿತನಾಗಿ, ಅವನು ರಹಸ್ಯವಾಗಿ ಅವನನ್ನು ನಾಯಕನೆಂದು ಗುರುತಿಸುತ್ತಾನೆ.

ಇಂದಿನ ಜಾಗತೀಕರಣಗೊಂಡ ಜಗತ್ತಿನಲ್ಲಿ ನಾಯಕತ್ವವು ಒಂದು ಪ್ರಮುಖ ಅಗತ್ಯವಾಗಿದೆ. ಈ ಅಗತ್ಯದ ಮಹತ್ವವು ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಈ ರೀತಿ ಹೇಳಿರುವರು, “ಪ್ರತಿಯೊಬ್ಬ ವ್ಯಕ್ತಿಯು ನಾಯಕ ಮತ್ತು ಅವನ ಅಧೀನ ಅಧಿಕಾರಿಗಳ ಬಗ್ಗೆ ಪ್ರಶ್ನಿಸಲಾಗುವುದು.” ಈ ಹದೀಸ್‌ನ ಅರ್ಥವೇನೆಂದರೆ, ಶ್ರೀಮಂತರು ಮಾತ್ರ ನಾಯಕರಲ್ಲ, ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯ ಬಳಿ ಕಡಿಮೆ ‌ಅಥವಾ ಹೆಚ್ಚು ಕೆಲಸ ಮಾಡುವವರಿಗೆ ಆತ ನಾಯಕನಾಗಿದ್ದಾನೆ.

ಇಂದಿನ ಜಾಗತೀಕರಣದ ಜಗತ್ತಿನಲ್ಲಿ, ನಾಯಕತ್ವದ ಮಹತ್ವ ಕೂಡ ಹೆಚ್ಚಾಗಿದೆ. ಏಕೆಂದರೆ ಕೆಲಸದ ಸ್ವರೂಪ ಬದಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಜೀವನದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಕೆಲಸದ ವಿಧಾನವು ಸಂಘಟಿತವಾಗಿದೆ. ವ್ಯಕ್ತಿ, ತಂಡ ಮತ್ತು ಸಂಘಟನೆಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದುದರಿಂದ, ವ್ಯಕ್ತಿಗಳಲ್ಲಿ ನಾಯಕತ್ವದ ಸಾಮರ್ಥ್ಯವು 21 ನೇ ಶತಮಾನದ ಪ್ರಮುಖ ಅವಶ್ಯಕತೆಯಾಗಿದೆ.

ನಾಯಕತ್ವದ ವ್ಯಾಖ್ಯಾನ:

ನಾಯಕತ್ವವನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಸಾಮಾನ್ಯವಾಗಿ, ನಾಯಕನು ಎಂದರೆ ಜನರ ಗುಂಪನ್ನು ಒಂದು ಧ್ಯೇಯದತ್ತ ಮಾರ್ಗದರ್ಶನ ಮಾಡುವವನು, ಅವರನ್ನು ಪರಿಣಾಮಕಾರಿಯಾಗಿ ಪ್ರಭಾವಿತಗೊಳಿಸುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವವನಾಗಿದ್ದಾನೆ ಮತ್ತು ನಾಯಕ, ಸಂಸ್ಥೆ ಅಥವಾ ಗುಂಪು ನಿಗದಿಪಡಿಸಿದ ಧ್ಯೇಯ ಸಾಧಿಸಲು ಅವರನ್ನು ಪ್ರೇರೇಪಿಸುವವನಾಗಿರುತ್ತಾನೆ. ನಾಯಕತ್ವವು ಕೇವಲ ಒಂದು ಸ್ಥಾನವಲ್ಲ, ಬದಲಾಗಿ ಜನರ ಮೇಲೆ ಪ್ರಭಾವ ಬೀರುವ ಒಂದು ಪ್ರಕ್ರಿಯೆಯಾಗಿದೆ. ನಾಯಕತ್ವವು ನಿರಂತರ ಅನುಭವ ಮತ್ತು ವಿಭಿನ್ನ ಹಂತಗಳಲ್ಲಿ ಇರುವ ಜನರೊಂದಿಗೆ ಕೆಲಸ ಮಾಡುವ ಮೂಲಕ ಅಸ್ತಿತ್ವಕ್ಕೆ ಬರುತ್ತದೆ. ಆದರೆ ಕೆಲವೊಮ್ಮೆ, ಕೆಲವರು ಅಭ್ಯಾಸ ಮತ್ತು ಅನುಭವದ ಮೂಲಕ ಅಭಿವೃದ್ಧಿಪಡಿಸಿದ ನೈಸರ್ಗಿಕ ನಾಯಕತ್ವ ಕೌಶಲ್ಯಗಳೊಂದಿಗೆ ಈ ಜಗತ್ತಿಗೆ ಬರುತ್ತಾರೆ.

ಯಶಸ್ವಿ ನಾಯಕನಿಗೆ ಇರಬೇಕಾದ ಕೆಲವು ಅಗತ್ಯ ಸಾಮರ್ಥ್ಯಗಳು:

ನಾಯಕತ್ವಕ್ಕೆ ಅಗತ್ಯವಾದ ಸಾಮರ್ಥ್ಯಗಳು ಕೆಲವು ವ್ಯಕ್ತಿಗಳಲ್ಲಿ ಸ್ವಾಭಾವಿಕವಾಗಿಯೇ ಇರುತ್ತವೆ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿ ಕಠಿಣ ಪರಿಶ್ರಮ, ಶಿಕ್ಷಣ, ಶಿಸ್ತು ಮತ್ತು ಅನುಭವದ ಮೂಲಕ ಈ ಸಾಮರ್ಥ್ಯಗಳನ್ನು ಪಡೆಯುತ್ತಾನೆ.

ಸಹಜವಾಗಿ, ಒಬ್ಬ ಯಶಸ್ವಿ ನಾಯಕನಲ್ಲಿ ಅನೇಕ ಗುಣಲಕ್ಷಣಗಳು ಇರುತ್ತವೆ. ಪ್ರಸಿದ್ಧ ಅಮೇರಿಕನ್ ಲೇಖಕ ಜಾನ್ ಸಿ ಮ್ಯಾಕ್ಸ್‌ವೆಲ್ ತಮ್ಮ ಪ್ರಸಿದ್ಧ ಪುಸ್ತಕ “The 21 Irrefutable Laws of Leadership” ನಲ್ಲಿ ನಾಯಕತ್ವದ ಕಾನೂನು ಎಂದು ಕರೆಯಲ್ಪಡುವ ಇಪ್ಪತ್ತೊಂದು ಸಾಮರ್ಥ್ಯಗಳನ್ನು ವಿವರಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಈ ಇಪ್ಪತ್ತೊಂದು ಸಾಮರ್ಥ್ಯಗಳ ಬಗ್ಗೆ ತಿಳಿಸುವಂತ ಪ್ರಯತ್ನ ನಡೆಯಬೇಕಾಗಿದೆ. ಶಾಲೆಗಳು ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ತಮ್ಮದೇ ಆದ ಯೋಜನೆಯನ್ನು ಸಹ ಮಾಡಬಹುದು. ವಿದ್ಯಾರ್ಥಿಗಳು ಅವಕಾಶ, ಪ್ರಸ್ತುತತೆ ಮತ್ತು ಅವರ ಸಾಮರ್ಥ್ಯಗಳಿಗೆ ಅನುಗುಣವಾಗಿ ಹಂತ-ಹಂತವಾಗಿ ಈ ಸಾಮರ್ಥ್ಯಗಳನ್ನು ತಮ್ಮೊಳಗೆ ಅಭಿವೃದ್ಧಿಪಡಿಸಲು ನಿರಂತರವಾಗಿ ಪ್ರಯತ್ನಿಸಬೇಕು.

ಈ ಎಲ್ಲಾ ತತ್ವಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ:

(1) ಮುಚ್ಚಳದ ನಿಯಮ (The Law of the Lid)

ಒಬ್ಬ ವ್ಯಕ್ತಿ ಮುನ್ನಡೆಸಲು ಎಷ್ಟು ಸಮರ್ಥ? ಅವನ ಯಶಸ್ಸು ಅದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಯಾರೊಬ್ಬರ ನಾಯಕತ್ವದ ಸಾಮರ್ಥ್ಯವು ಏಳನೇ ಹಂತದಲ್ಲಿದ್ದರೆ, ಅವರು ಎಂದಿಗೂ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನೀವು ನಿಮ್ಮ ತಂಡದ ಕಾರ್ಯಕ್ಷಮತೆಯನ್ನು ಸಹ ಸುಧಾರಿಸಬಹುದಾಗಿ ಅವರು ಹೇಳುತ್ತಾರೆ.

2) ಪ್ರಭಾವದ ನಿಯಮ (The Law of Influence)

ನಾಯಕತ್ವದ ನಿಜವಾದ ಅಳತೆಯು ಪ್ರಭಾವವಾಗಿದೆ. ನಾಯಕತ್ವ ಎಂದರೆ ಕೇವಲ ಸ್ಥಾನ ಅಥವಾ ಅಧಿಕಾರವಲ್ಲ, ಬದಲಾಗಿ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಕಾರ್ಯ ವೈಖರಿ ಶಕ್ತಿಯಾಗಿದೆ.

3) ಪ್ರಕ್ರಿಯೆಯ ನಿಯಮ (The Law of Process)

ನಾಯಕತ್ವ ಎಂಬುದು ಒಂದು ದಿನದಲ್ಲಿ ನಿರ್ಮಾಣವಾಗುವುದಿಲ್ಲ, ಬದಲಾಗಿ ನಿರಂತರ ದೈನಂದಿನ ಅಭ್ಯಾಸದ ಮೂಲಕ ರೂಪಗೊಳ್ಳುವಂತದ್ದು, ನಾಯಕತ್ವವು ಅಭಿವೃದ್ಧಿಯ ನಿರಂತರ ಕಲಿಕೆ ಮತ್ತು ಸ್ವಯಂ ಸುಧಾರಣೆಯ ಒಂದು ಪ್ರಕ್ರಿಯೆವಾಗಿದೆ.

4) ನ್ಯಾವಿಗೇಷನ್ ನಿಯಮ (The Law of Navigation)

ಯಾವನು ಕೂಡ ಹಡಗನ್ನು ಚಲಾಯಿಸಬಹುದು, ಆದರೆ ನೇರವಾದ ಮಾರ್ಗವು ಕೇವಲ ನಾಯಕನು ಮಾತ್ರ ತೋರಿಸುತ್ತಾನೆ. ಒಬ್ಬ ಒಳ್ಳೆಯ ನಾಯಕ ಸುದೀರ್ಘ ಕಾಲ
ಯೋಜನೆಗಳನ್ನು ರೂಪಿಸುತ್ತಾನೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧನಾಗಿರುತ್ತಾನೆ.

5) ಸಂಕಲನ ನಿಯಮ (The Law of Addition)

ಒಳ್ಳೆಯ ನಾಯಕರು ಇತರರಿಗೆ ಸೇವೆ ಸಲ್ಲಿಸುವ ಮೂಲಕ ಅವರ ಜೀವನವನ್ನು ಸುಧಾರಿಸುವ ಪ್ರಯತ್ನ ಪಡುತ್ತಾರೆ. ನಾಯಕತ್ವ ಎಂದರೆ ನಿಮಗೆ ಮಾತ್ರವಲ್ಲದೆ ಇತರರಿಗೂ ಪ್ರಯೋಜನಕಾರಿಯಾಗುವ ಒಂದು ಸಾಮರ್ಥ್ಯವಾಗಿದೆ.

6) ತಳಮಟ್ಟದ ನಿಯಮ (The Law of Solid Ground)

ನಾಯಕತ್ವವು ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಜನರು ನಿಮ್ಮನ್ನು ನಂಬದಿದ್ದರೆ, ಅವರು ನಿಮ್ಮ ನಾಯಕನಾಗಿ ಸ್ವೀಕರಿಸುವ ಯಾವುದೇ ಅರ್ಥವೇ ಇಲ್ಲ.

7) ಗೌರವದ ನಿಯಮ (The Law of Respect)

ಜನರು ತಮಗಿಂತ ಉತ್ತಮರೆಂದು ಪರಿಗಣಿಸುವ ನಾಯಕರನ್ನು ಕೇವಲ ಅನುಸರಿಸುತ್ತಾರೆ. ನಾಯಕತ್ವದ ಜವಾಬ್ದಾರಿಯಲ್ಲಿರುವರು ತಮನ್ನು ಬಲಿಷ್ಠ ಮತ್ತು ವಿಶ್ವಾಸಾರ್ಹರನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ.

8) ಅಂತಃಪ್ರಜ್ಞೆಯ ನಿಯಮ (The Law of Intuition)

ಒಬ್ಬ ನಾಯಕನಾಗಿರುವ ಎಲ್ಲವನ್ನೂ ನಾಯಕತ್ವದ ದೃಷ್ಟಿಕೋನದಿಂದ ನೋಡುತ್ತಾನೆ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಾನೆ. ಈ ಸಾಮರ್ಥ್ಯವು ಅನುಭವ, ವೀಕ್ಷಣೆ ಮತ್ತು ಕೆಲವು ತಿಳುವಳಿಕೆಯಿಂದ ಬರುತ್ತದೆ.

9) ಕಾಂತೀಯತೆಯ ನಿಯಮ (The Law of Magnetism)

ಈ ನಿಯಮ ಪ್ರಕಾರ ನಾವು ನಮ್ಮಂತಹ ಜನರನ್ನು ಆಕರ್ಷಿಸುತ್ತೇವೆ. ಅದೇ ರೀತಿ ಒಬ್ಬ ನಾಯಕನ ವ್ಯಕ್ತಿತ್ವ ಮತ್ತು ವರ್ತನೆ ಅವನ ತಂಡದ ಮೇಲೆ ಸಹ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿರುತ್ತವೆ.

10) ಸಂಪರ್ಕದ ನಿಯಮ (The Law of Connection)

ಅಂದರೆ ಜನರ ಹೃದಯಗಳನ್ನು ತಟ್ಟದೇ ಅವರಿಂದ ನಾವು ಬಯಸುವ ಕೆಲಸಗಳನ್ನು ಮಾಡಿಸಲು ಸಾಧ್ಯವಿಲ್ಲ. ನಾಯಕನಾದವನು ತನ್ನ ಜನರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸಿದ ನಂತರವೇ ಅವರಿಂದ ಕೆಲಸ ಕಾರ್ಯಗಳನ್ನು ಮಾಡಿಸಲು ಮಾತ್ರ ಸಾಧ್ಯ.

11) ಆಂತರಿಕ ವೃತ್ತದ ನಿಯಮ (The Law of the Inner Circle)

ಒಬ್ಬ ನಾಯಕನ ಯಶಸ್ಸು ಅವನಿಗೆ ಹತ್ತಿರವಿರುವ ಜನರ ಮೇಲೆ ಅವಲಂಬಿತವಾಗಿರುತ್ತದೆ. ನಾವು ತಂಡವನ್ನು ರಚಿಸುವಾಗ ಎಲ್ಲಾ ಆಯಾಮಗಳನ್ನು ನೋಡುತ್ತಾ ಆರಿಸಬೇಕಾಗುತ್ತದೆ, ಏಕೆಂದರೆ ಅವರು ನಮ್ಮ ನಾಯಕತ್ವವನ್ನು ಬಲಪಡಿಸಬಹುದು ಅಥವಾ ದುರ್ಬಲಗೊಳಿಸಬಹುದು.

12) ಸಬಲೀಕರಣದ ನಿಯಮ (The Law of Empowerment)

ಈ ನಿಯಮದ ಅನುಸಾರವಾಗಿ ಕೇವಲ ತನ್ನನ್ನು ಸುರಕ್ಷಿತ ಮತ್ತು ಆತ್ಮವಿಶ್ವಾಸ ಹೊಂದಿರುವ ನಾಯಕರು ಮಾತ್ರ ಅಧಿಕಾರವನ್ನು ಹೊಂದಿರುತ್ತಾರೆ. ಹಾಗೂ ಅದೇ ರೀತಿ ತನ್ನ ತಂಡದವರನ್ನು ಕೂಡ ಬೆಳೆಯಲು ಅವಕಾಶ ಒದಗಿಸಬೇಕೆಂದು ಈ ನಿಯಮ ಹೇಳುತ್ತದೆ.

13) ಪ್ರತಿಬಿಂಬದ ನಿಯಮ (The Law of Picture)

ಜನರು ಒಂದು ಸ್ವಭಾವ ಹೇಗೆಂದರೆ ತಾವು ಏನನ್ನು ನೋಡುತ್ತಾರೋ ಅದನ್ನೇ ಮಾಡುತ್ತಾರೆ. ಹಾಗಿರುವಾಗ ನಾಯಕನಾದವನು ಇತರರಿಗೆ ನಡೆದಾಡುವ ಉದಾಹರಣೆಯಾಗಿ ಇರುವುದು ಅತ್ಯಂತ ಮುಖ್ಯವಾದುದು.

14) ಖರೀದಿ ನಿಯಮ (The Law of Buy-In)

ಈ ನಿಯಮದ ಪ್ರಕಾರ ಜನರು ಮೊಟ್ಟ ಮೊದಲಾಗಿ ನಾಯಕನನ್ನು ಸ್ವೀಕರಿಸುತ್ತಾರೆ, ನಂತರ ಅವನು ಹೊಂದಿರುವಂತಹ ದೃಷ್ಟಿಕೋನ ಆಗಿದೆ. ಆದುದರಿಂದ  ಜನರು ನಮ್ಮ ದೃಷ್ಟಿಕೋನವನ್ನು ಬೆಂಬಲಿಸುವಂತೆ ಆಗಬೇಕಾದರೆ ನಾಯಕತ್ವದ ಹುದ್ದೆಯಲ್ಲಿರುವ ಎಲ್ಲ ನಾಯಕ, ಜನರು ವಿಶ್ವಾಸವನ್ನು ಗೆಲ್ಲುವುದು ಅತೀ ಮುಖ್ಯ.

15) ವಿಜಯದ ನಿಯಮ (The Law of Victory)

ನಾಯಕರು ಯಾವಾಗಲೂ ಗೆಲ್ಲಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಆದರೆ ಧೀಮಂತ ನಾಯಕ ತನ್ನ ತಂಡದ ಯಶಸ್ಸನ್ನು ತನ್ನ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಾನೆ.

16) ಕಾರ್ಯ ವೈಖರಿ ನಿಯಮ (The Law of Big Mo)

ನಿರಂತರ ಕಾರ್ಯ ತೊಡಗಿಸುವುದು ಒಂದು ನಾಯಕನ ಒಳ್ಳೆಯ ಸ್ನೇಹಿತ. ಒಮ್ಮೆ ಆ ಕಾರ್ಯದಲ್ಲಿ ತೊಡಗಿಸುವ ವೇಗ ಸ್ಥಾಪಿತವಾದರೆ, ಮತ್ತೆ ಯಶಸ್ಸಿನ ಪ್ರಯಾಣ ಸುಲಭವಾಗಿರುತ್ತದೆ.

17) ಆದ್ಯತೆಯ ನಿಯಮ (The Law of Priorities)

ಒಬ್ಬ ನಾಯಕನಿಗೆ ಪ್ರತಿಯೊಂದು ಕೆಲಸವೂ ಮುಖ್ಯವಲ್ಲ ಎಂದು ತಿಳಿದಿರಬೇಕು. ಒಬ್ಬ ನಾಯಕ ತನ್ನ ಆದ್ಯತೆಗಳನ್ನು ಸರಿಯಾಗಿ ಹೊಂದಿಸಿಕೊಳ್ಳುವುದರಲ್ಲಿ ಯಶಸ್ವಿಯಾದರೆ ಮತ್ತು ಇತರ ವಿಷಯದ ಬಗ್ಗೆ ಅರ್ಥ ಮಾಡಿಕೊಳ್ಳಲು ಸುಲಭವಾಗಿರುತ್ತದೆ.

18) ತ್ಯಾಗದ ನಿಯಮ (The Law of Sacrifice)

ನಾಯಕತ್ವಕ್ಕೆ ತ್ಯಾಗ ಮಾಡಬೇಕಾಗುತ್ತದೆ. ದೊಡ್ಡ ಗುರಿಗಳಿಗಾಗಿ ಸಣ್ಣ ಸ್ವಾರ್ಥಗಳನ್ನು ತ್ಯಜಿಸುವುದು ಅಗತ್ಯ.

19) ಸಮಯದ ನಿಯಮ (The Law of Timings)

ನಾಯಕತ್ವಕ್ಕೆ ಯಾವಾಗ ಏನು ಮಾಡಬೇಕು ಎಂಬುದು ತಿಳಿದಿರುವುದು ಅತ್ಯಂತ ಮುಖ್ಯ. ತಪ್ಪು ಸಮಯದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರವೂ ಕೆಲವೊಮ್ಮೆ ವಿಫಲವಾಗಬಹುದು.

20) ಸ್ಫೋಟಕ ಪ್ರಗತಿಯ ನಿಯಮ (The Law of Explosive Growth)

ಅನುಯಾಯಿಗಳನ್ನೇ ಮುನ್ನಡೆಸುವುದರಿಂದ ನಾಯಕತ್ವ ಬೆಳೆಯುತ್ತದೆ, ಆದರೆ ನಾಯಕರನ್ನೇ ಮುನ್ನಡೆಸುವುದರಿಂದ ಹಲವೆರಡು ಪಟ್ಟು ಹೆಚ್ಚು ಬೆಳವಣಿಗೆ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಸುತ್ತಮುತ್ತ ಅನುಯಾಯಿಗಳನ್ನು ಮುನ್ನಡೆಸುವ ನಾಯಕರನ್ನು ನೋಡುತ್ತೇವೆ — ಅಂದರೆ ನಾಯಕನು ಅನುಯಾಯಿಗಳು ಬಯಸುವುದನ್ನೇ ಮಾಡುತ್ತಾನೆ. ಇಂತಹ ಕ್ರಮದಲ್ಲಿ ಯಶಸ್ಸು ದೊರೆಯಬಹುದು, ಆದರೆ ನಿಜ ಯಶಸ್ಸು ಯಾವಾಗ ದೊರೆಯುತ್ತದೆ ಅಂದರೆ ಅನುಯಾಯಿಗಳು ನಾಯಕರನ್ನು ಸ್ವೀಕರಿಸುತ್ತಾರೆ ಮತ್ತು ನಾಯಕನು ತನ್ನ ನಾಯಕತ್ವವನ್ನು ಕಾರ್ಯರೂಪಕ್ಕೆ ತರುತ್ತಾನೆ. ಈ ಸ್ಥಿತಿಯಲ್ಲಿ ನಾಯಕನು ಅನುಯಾಯಿಗಳ ಕಡೆ ತಿರುಗಿ ಪರಿಸ್ಥಿತಿಗಳ ಹಾದಿಯನ್ನು ಬದಲಿಸಲು ಪ್ರಯತ್ನಿಸುತ್ತಾನೆ, ಇದೇ ನಿಜವಾದ ನಾಯಕತ್ವ. ಆದರೆ ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಸಮುದಾಯದ ಹೆಚ್ಚಿನ ನಾಯಕತ್ವವು ಅನುಯಾಯಿಗಳ ನಾಯಕತ್ವವಾಗಿ ಉಳಿದುಬಿಟ್ಟಿದೆ. ಒಬ್ಬ ನಾಯಕನು ಮತ್ತಷ್ಟು ನಾಯಕರನ್ನು ಸೃಷ್ಟಿಸುವ ಕಲೆ ಹೊಂದಬೇಕಾಗಿದೆ.

21) ವಾರಸತ್ತಿನ ನಿಯಮ (The Law of Legacy)

ಒಬ್ಬ ನಾಯಕನು ನಿಜವಾದ ಮೌಲ್ಯವನ್ನು, ಅವನು ತನ್ನ ಹಿಂದೆ ಬಿಟ್ಟಿರುವ ಪರಂಪರೆಯಿಂದ ಅಳೆಯಲಾಗುತ್ತದೆ.
ನಾಯಕತ್ವದ ಉದ್ದೇಶ, ನಾಯಕನ ನಂತರವೂ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುವಂತಹ ಕೆಲಸ ಅಥವಾ ತಂಡವನ್ನು ನಿರ್ಮಿಸುವುದಾಗಿದೆ.

ಜೊನ್‌ ಸಿ ಮ್ಯಾಕ್ಸ್ ವೆಲ್ ಅವರು ನೀಡಿದಂತಹ ಈ 21 ನಿಯಮಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ವಿದ್ಯಾರ್ಥಿಗಳು ತಮ್ಮಲ್ಲಿ ಆ ಎಲ್ಲಾ ನಾಯಕತ್ವದ ಗುಣ ಹೊಂದಲು ಪ್ರಯತ್ನಿಸಬೇಕಾಗಿದೆ, ಈ ನಿಟ್ಟಿನಲ್ಲಿ ಒಂದು ಉಜ್ವಲ ಭವಿಷ್ಯದೆಡೆಗೆ ಸಾಗಲು ಹಾಗೂ ಬರುವ ದಿನಗಳಲ್ಲಿ ನಮ್ಮ ದೇಶಕ್ಕೆ ಹಾಗೂ ಸಮಾಜಕ್ಕೆ ಒಂದು ಉತ್ತಮ ಗುರಿಯನ್ನು ಹೊಂದಿರುವ ಸಾಮರ್ಥ್ಯವುಳ್ಳ ನಾಯಕರು ನಮ್ಮ ದೇಶದಲ್ಲಿ ಬೆಳೆದು ಬರಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here