ಪುನೀತ್ ಅಪ್ಪು

ಸುಲ್ತಾನ್ ಖಬ್ಬೂಸ್ ಬಿನ್ ಸೈದ್ ಓಮಾನಿನ ಧೀರ್ಘಕಾಲೀನ ಅರಸ ಇನ್ನಿಲ್ಲ. ಮರುಭೂಮಿಯನ್ನು ಸ್ವರ್ಗವನ್ನಾಗಿಸಿದ ಈ ಅರಸನ ಹೃದಯವೂ ಅಷ್ಟೇ ಸಮೃದ್ಧವಾಗಿತ್ತು. ಓಮಾನನ್ನು ಸಕಲ ಧರ್ಮಗಳ ಜನರಿಗೆ ತೆರೆದಿಟ್ಟ ಇವರ ಉದಾರತೆಯೇ ಇಂದು ಓಮಾನಿನಲ್ಲಿ ಅತೀ ಹೆಚ್ಚು ಭಾರತೀಯರು ಬದುಕು ಕಟ್ಟಿಕೊಳ್ಳಲು ಕಾರಣವಾಗಿರುವುದು. 
ಸುಲ್ತಾನ್ ಖಬ್ಬೂಸ್ ಅವರು ಪುಣೆಯ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿದ್ದಾಗ  ಶಂಕರ್ ದಯಾಲ್ ಶರ್ಮ ಅವರು ಆ ಕಾಲೇಜಿನ ಅಧ್ಯಾಪಕರಾಗಿದ್ದರು. ನಂತರ ಅವರು ಭಾರತದ ರಾಷ್ಟ್ರಪತಿಯಾದ ಅವರನ್ನು ಓಮಾನ್ ದೇಶಕ್ಕೆ ಬರ ಮಾಡಿಕೊಂಡ ಶಿಷ್ಯ,  ವಿಮಾನ ನಿಲ್ದಾಣದಿಂದ ರಸ್ತೆಯವರೆಗೆ ಗುಲಾಬಿ ಹೂಗಳನ್ನು ಹರಡಿ ಗುರುವಿಗೆ ಸ್ವಾಗತಗೈದಿದ್ದರಂತೆ. “ನಿಮಗೆ ಹಸಿವಾದರೆ ನಾನು ನಿಮಗೆ ಗಾಳವನ್ನು ನೀಡ ಬಯಸುತ್ತೇನೆ, ಮೀನನ್ನು ಮಾತ್ರ ನೀವೆ ಹಿಡಿಯಬೇಕು” ಎಂದು ಓಮಾನ್ ಪ್ರಜೆಗಳಿಗೆ ಸ್ವಾವಲಂಬನೆಯ ಬದುಕನ್ನು ಕಲಿಸಿದ ಅರಸ ಪ್ರಜಾಪ್ರಭುತ್ವ ರಾಷ್ಟ್ರಗಳಿಗೂ ಮಾದರಿಯಾಗುತ್ತಾರೆ. 

ಆಧುನಿಕ ಓಮನ್ ದೇಶ ನಿರ್ಮಾಣದಲ್ಲಿ ಭಾರತೀಯರ ಕೊಡುಗೆಯೂ ಅಪಾರ. ಗುಜರಾತ್ ಮೂಲದ ಉದ್ಯಮಿ ಕಿಂಜೀಯವರು ಸುಲ್ತಾನರ ಮಿತ್ರರೂ ಕೂಡಾ. ಓಮಾನ್ ದೇಶಕ್ಕೆ ಕಿಂಜೀ ಕೊಡುಗೆಯನ್ನು ಗುರುತಿಸುತ್ತಾ ಆತನಿಗೆ ಶೇಕ್ ಪದವಿಯನ್ನು ನೀಡಿ ಅರಬ್ ರಾಷ್ಟ್ರಗಳಲ್ಲೇ ಓರ್ವ ಹಿಂದೂ ಉದ್ಯಮಿಗೆ ಶೇಕ್ ಪದವಿಯನ್ನು ನೀಡಿದ ಮೊತ್ತ ಮೊದಲ ಸುಲ್ತಾನರಾಗುತ್ತಾರೆ. ಸುಲ್ತಾನರು ಅಸ್ವಸ್ಥಗೊಂಡಿದ್ದಾಗ ಭಾರತದ ಹಲವಾರು ಕಡೆಗಳಲ್ಲಿ  ಅವರಿಗೆ ಧೀರ್ಘಾಯಸ್ಸನ್ನು ಕೋರಿ ಪೂಜೆ, ಯಜ್ಞ ಯಾಗಾದಿಗಳು ಕೂಡಾ ನಡೆದಿದ್ದವು. 

ಈ ಓಮಾನ್ ದೇಶಕ್ಕೂ ಭಾರತ ದೇಶಕ್ಕೂ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಭಾರತದ ಮುಂಬಯಿ ಗುಜರಾತ್ ಕರಾವಳಿಯಿಂದ ನೇರ ಗೆರೆಯನ್ನು ಎಳೆದರೆ ಅದು ಓಮಾನಿನ ಸಲಾಲ ಬಂದರಿಗೆ ತಲುಪುತ್ತದೆ. ಇಬ್ನ್ ಬಟೂಟ ಭಾರತಕ್ಕೆ ಬಂದಿರುವುದೂ ಸಲಾಲ ಬಂದರಿನ ಮೂಲಕವೇ . ಕೇರಳ, ಕರ್ಣಾಟಕ ಪಶ್ಚಿಮ ಕರಾವಳಿಯಿಂದ ಅನಾಧಿ ಕಾಲದಿಂದಲೂ ಆಮದು ರಫ್ತು ವ್ಯವಹಾರಗಳು ನಡೆಯಲು ಈ ಸಲಾಲ ಬಂದರಿನ ಪಾತ್ರವೂ ಪ್ರಮುಖವಾದುದು. ಎಲ್ಲದಕ್ಕಿಂತಲೂ ಅತೀ ಪ್ರಮುಖವಾದುದು. ಕೇರಳದ ಸಾಮೂದಿರಿ ವಂಶದವರಾದ   ಚೇರಮಾನ್ ಪೆರುಮಾಳ ಅರಸ   ಕ್ರಿ.ಶ ಏಳನೇ ಶತಮಾನದಲ್ಲಿ ಸಲಾಲ ಮೂಲಕವೇ ಮೆಕ್ಕಾ ಮದೀನ ಯಾತ್ರೆಯನ್ನು ಕೈಗೊಂಡು ಇಸ್ಲಾಮನ್ನು ಸ್ವೀಕರಿಸಿದರೆಂದು ಇತಿಹಾಸದಲ್ಲಿ ದಾಖಲಾಗಿದೆ.  ಚೇರಮಾನ್ ಪೆರುಮಾಳ ಅರಸ ತಾಜುದ್ದೀನ್ ಎಂಬ ಹೆಸರಿನಲ್ಲಿ ಸಲಾಲದಲ್ಲಿ ಜೀವಿಸಿದ್ದು ಅಲ್ಲಿಯೇ ಮರಣ ಹೊಂದಿದರೆಂದೂ  ಇತಿಹಾಸಕಾರರು ಉಲ್ಲೇಖಿಸುತ್ತಾರೆ.  ಇದಕ್ಕೆ ಪೂರಕವಾಗಿ ಸಲಾಲ ಊರಿನಲ್ಲಿ ಇಂದಿಗೂ ಅವರ ಸಮಾಧಿಯಿದೆ. 

ಇಂತಹ ಇತಿಹಾಸವುಳ್ಳ ಓಮಾನಿನ ಅರಸ ಇಂದು ಇತಿಹಾಸದ ಪುಟಗಳಿಗೆ ಸೇರಿಹೋಗಿದ್ದಾರೆ. ಆದರೆ ಆತ ಸಾರಿದ ಮಾನವ ಬಂಧುತ್ವದ ಸಂದೇಶಗಳು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿವೆ. 
‘ಲಾಂಗ್ ಲೀವ್ ದ ಕಿಂಗ್’ !

LEAVE A REPLY

Please enter your comment!
Please enter your name here