• ಶರೀಫ್ ಕಾಡುಮಠ ಮಂಗಳೂರು

ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ‘ಮಹಾನಾಯಕ’ ಎಂಬ ಧಾರಾವಾಹಿಯನ್ನು ತಡೆಹಿಡಿಯುವಂತೆ ವಾಹಿನಿಯ ಮುಖ್ಯಸ್ಥರಿಗೆ ಬೆದರಿಕೆ ಕರೆಗಳು ಬಂದ ಸುದ್ದಿ ಗೊತ್ತಿದೆ. ಇದಾದ ಬಳಿಕ ಬೆದರಿಕೆಗಳಿಗೆ ಸೊಪ್ಪು ಹಾಕದ ಮುಖ್ಯಸ್ಥ ಅಷ್ಟೇ ಎದೆಗಾರಿಕೆಯಿಂದ ಪ್ರಸಾರವನ್ನು ನಿಲ್ಲಿಸುವುದಿಲ್ಲ ಎಂದೇ ಉತ್ತರ ಕೊಟ್ಟಿದ್ದಾರೆ. ಇದು ಒಂದು ಬಗೆಯ ಮಾನಸಿಕ ಸಂಘರ್ಷದ ವಾತಾವರಣವನ್ನು ಅಂಬೇಡ್ಕರ್ ಅಥವಾ ದಲಿತ ವಿರೋಧಿ ಮನಸ್ಥಿತಿಗಳ ನಡುವೆ ಸೃಷ್ಟಿಸಿತ್ತು. 
ಆದರೆ ಇತ್ತೀಚಿನ ಶನಿವಾರ ಹಾಗೂ ಭಾನುವಾರ ‘ಮಹಾನಾಯಕ’ ಪ್ರಸಾರವಾಗಿಲ್ಲ. ವಿರೋಧದ ನಡುವೆಯೂ ಪ್ರಸಾರ ಮಾಡುವ ಧೈರ್ಯ ತೋರಿರುವ ಮುಖ್ಯಸ್ಥ, ವಿನಾಕಾರಣಕ್ಕೋ ಅಥವಾ ಕ್ಷುಲ್ಲಕ ಕಾರಣಕ್ಕೋ ಧಾರಾವಾಹಿಯನ್ನು ನಿಲ್ಲುವುದು ಅಸಾಧ್ಯ. ಇದರ ಹಿಂದೆ ತೀವ್ರವಾದ ಒತ್ತಡ ಕೆಲಸ ಮಾಡಿದೆ ಎಂಬುದು ಮೇಲ್ನೋಟಕ್ಕೇ ಅರ್ಥವಾಗುತ್ತದೆ. 

ಅಚ್ಚರಿಯಾಗುವುದೆಂದರೆ, ಅಂಬೇಡ್ಕರ್‌ರನ್ನೂ ವಿರೋಧಿಸುತ್ತಾರಲ್ಲಾ ಎಂಬ ಸಂಗತಿ. ಅಂಬೇಡ್ಕರ್ ಯಾರಿಗೆ ಶತ್ರುವಾಗಿ ನಿಂತರು? ಯಾರ ವಿರುದ್ಧ ಕೆಲಸ ಮಾಡಿದರು? ಯಾರಲ್ಲಿ ಅನುಮಾನ ಹುಟ್ಟಿಸಿದರು? ಎಲ್ಲಿ ವಿವಾದ ಹುಟ್ಟು ಹಾಕಿದರು..? ಅಂಬೇಡ್ಕರ್ ಅವರ ಬದುಕಿನಲ್ಲಿ ಇವು ಯಾವುವೂ ಅವರಿಗೆ ಅಗತ್ಯವೆನಿಸಿದ್ದೂ ಅಲ್ಲ, ಅವರಿಂದಾಗಿ ಇವು ಯಾವುವೂ ಸೃಷ್ಟಿಗೊಂಡದ್ದೂ ಇಲ್ಲ. ಬಾರತದ ಚರಿತ್ರೆಯನ್ನು ತೆಗೆದು ನೋಡಿದರೆ, ವಿವಾದ ರಹಿತವಾಗಿ ನಿಲ್ಲಬಲ್ಲ ಮಹಾನ್ ವ್ಯಕ್ತಿತ್ವದಲ್ಲಿ ಅಗ್ರಗಣ್ಯರೆಂದರೆ ಅಂಬೇಡ್ಕರ್. 
ಮಹಾತ್ಮ ಗಾಂಧಿಯನ್ನು ಗೋಡ್ಸೆ ಕೈಯಿಂದ ಹತ್ಯೆ ಮಾಡಿಸಲಾಯಿತು. ಗಾಂಧಿ ಬಗ್ಗೆ ಹಿಂದುತ್ವವಾದಿಗೆ ತೀವ್ರ ಅಸಮಾಧಾನವಿತ್ತು. ಆ ಅಸಮಾಧಾನದ ಆಕ್ರೋಶಿತ ರೂಪ ಗೋಡ್ಸೆ. ಎಂದರೆ ಅವರ ಅಸಮಾಧಾನ ನ್ಯಾಯಸಮ್ಮತ ಎಂದಲ್ಲ. ಉದ್ದೇಶಪೂರ್ವಕ ಸಂಚಿನ ನಡುವೆ ಅಡ್ಡಿಯಂತೆ ಕಂಡ ಗಾಂಧಿಯನ್ನು ಇಲ್ಲವಾಗಿಸುವುದಕ್ಕೆ ಹುಟ್ಟಿಕೊಂಡ ಸುಳ್ಳು ದೇಶಭಕ್ತಿಯ ಅಸಮಾಧಾನ ಅದು. ಗೋಡ್ಸೆ ಒಂದು ಆಯುಧವಾಗಿ, ಧರ್ಮದ ಅಮಲನ್ನು ಇಂಜೆಕ್ಟ್ ಮಾಡಲ್ಪಟ್ಟ  ಮಿದುಳಾಗಿ ಮಾತ್ರ ಕಾಣಿಸುತ್ತಾನೆ. ಹಾಗಾಗಿ, ಗಾಂಧಿಯನ್ನು ವಿರೋಧಿಸುವುದಕ್ಕೆ ಹಲವಾರು ಕಾರಣಗಳನ್ನು ಗೋಡ್ಸೆ ಮನಸ್ಥಿತಿಯ ಜನರು ಕೊಡುತ್ತಾರೆ. ಅವು ಯಾವುವೂ ಸಮರ್ಪಕವಲ್ಲದಿದ್ದರೂ, ಅವರ ದೃಷ್ಟಿಯಲ್ಲಿ ಅದೇ ಸರಿ, ಸಮರ್ಪಕ. ಆದರೆ ಅಂಬೇಡ್ಕರ್ ಅವರನ್ನು ಈ ಮನಸ್ಥಿತಿಯ ಜನ ಏಕೆ ವಿರೋಧಿಸುತ್ತಾರೆ? ಅಂಬೇಡ್ಕರ್ ಎಂಬ ವಿವಾದರಹಿತ ವ್ಯಕ್ತಿತ್ವದ ವಿರುದ್ಧ ದ್ವೇಷ ಕಾರುವುದರ ಹಿಂದಿನ ಮರ್ಮವೇನು?

ಭಾರತೀಯ ಸಂವಿಧಾನವೆಂಬ ಗಟ್ಟಿ ಬೆನ್ನೆಲುಬು, ಆಧಾರವನ್ನು ಹಿಡಿದುಕೊಂಡು ನಾವಿಂದು ಹಲವು ಪ್ರತಿಜ್ಞೆಗಳನ್ನು ಮಾಡುತ್ತೇವೆಂದರೆ, ಅದರ ಹಿಂದೆ, ಇದೇ ಸಮಾಜ ಜಾತಿಯ ಹೆಸರಿನಲ್ಲಿ ತುಳಿದು, ದೂರ ತಳ್ಳಿ, ನೀರು ಕೊಡದೆ ಅವಮಾನಿಸಿ, ಅಸ್ಪೃಶ್ಯರಂತೆ ಕಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮದ ಪಾಲು ಬಲುದೊಡ್ಡದು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಹೊತ್ತಿನಲ್ಲಿ ಈ ಮಾತನ್ನು ಒತ್ತಿ ಹೇಳಬೇಕಾದ ಅಗತ್ಯವೆಂದರೆ, ಇತ್ತೀಚೆಗೆ, ಅಂಬೇಡ್ಕರ್ ಹೆಸರನ್ನು ‘ಸಂವಿಧಾನ ಶಿಲ್ಪಿ’ ಬಿರುದಿನಿಂದ ದೂರ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ.
ಗಾಂಧಿ ವಿರೋಧದಷ್ಟೇ ದಟ್ಟವಾಗಿ ಅಂಬೇಡ್ಕರ್ ವಿರೋಧ ನಮ್ಮ ಸಮಾಜದಲ್ಲಿದೆ. ಗಾಂಧಿ ವಿರೋಧದ ಕಾರಣ ಬೇರೆ. ಆದರೆ ಅಂಬೇಡ್ಕರ್ ವಿರೋಧದ ಕಾರಣ ‘ಜಾತಿ’. ಜಾತಿಯ ಹೊರತು ಅಂಬೇಡ್ಕರ್ ಅವರನ್ನು ವಿರೋಧಿಸಲು ಯಾವ ಕಾರಣವೂ ಸದ್ಯ ಕಾಣಿಸುತ್ತಿಲ್ಲ. ಮೇಲ್ವರ್ಗದವರ ದೃಷ್ಟಿಯ ‘ಕೀಳು’ ಜಾತಿಯಲ್ಲಿ ಹುಟ್ಟಿ ಅವಮಾನಗಳನ್ನು ಸವಾಲುಗಳನ್ನು ಎದುರಿಸಿಕೊಂಡೇ ಒಬ್ಬ ಮಹಾನ್ ವ್ಯಕ್ತಿತ್ವವಾಗಿ ರೂಪುಗೊಂಡ ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರೀತಿ, ಅಭಿಮಾನದಿಂದ ಸ್ವೀಕರಿಸುವಾಗ, ಭಾರತೀಯರೆಂಬ ನಮಗೆ, ಅಂಬೇಡ್ಕರ್ ಹುಟ್ಟಿ ಬೆಳೆದು ಕಳೆದುಹೋದ ಇದೇ ಮಣ್ಣಿನ ಜನತೆಗೆ, ಅವರನ್ನು ಸ್ವೀಕರಿಸುವಲ್ಲಿ ಜಾತಿ ಅಡ್ಡ ಬರುತ್ತದೆ ಎಂದಾದರೆ, ಇದಕ್ಕಿಂತ ನಾಚಿಕೆಗೇಡು ಬೇರೇನಿದೆ?

ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೊಲಂಬಿಯಾ ವಿಶ್ವವಿದ್ಯಾಲಯ ತನ್ನ ಹಳೆ ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ವಿದ್ಯಾರ್ಥಿಯೊಬ್ಬರ ಪ್ರತಿಮೆಯನ್ನು ಕೆಲ ವರ್ಷಗಳ ಹಿಂದೆ ಆ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿತು. ಆ ವಿಶ್ವವಿದ್ಯಾಲಯದ ಶ್ರೇಷ್ಠ ವಿದ್ಯಾರ್ಥಿ ಎಂದು ಕೊನೆಗೆ ಆಯ್ಕೆಯಾದ ಹೆಸರು ‘ಡಾ.ಬಿ.ಆರ್.ಅಂಬೇಡ್ಕರ್’.  ಜಗತ್ತಿನ ಹಲವಾರು ವಿಶ್ವವಿದ್ಯಾಲಯಗಳು ಅಂಬೇಡ್ಕರ್ ಅವರನ್ನು ಆಗಾಗ ಯಾವುದಾದರೊಂದು ಕಾರ್ಯಕ್ರಮಗಳ ಮೂಲಕ, ಜನ್ಮದಿನಾಚರಣೆಯ ಮೂಲಕ ನೆನಪಿಸುತ್ತಲೇ ಇರುತ್ತದೆ. ಭಾರತೀಯರಾದ, ಜಾತಿ ಸಂಕೋಲೆಯೊಳಗೆ ಸಿಲುಕಿದ ಕೂಪಮಂಡೂಕ ಮನಸ್ಥಿತಿಯ ನಮಗೆ ಅಂಬೇಡ್ಕರ್ ಒಬ್ಬ ದಲಿತ ಅಷ್ಟೆ. ಆದರೆ ಅವರಿಗೆ ಅಂಬೇಡ್ಕರ್ ಒಬ್ಬ ವಿಶ್ವಶ್ರೇಷ್ಠ ನಾಯಕ. ವಿಪರ್ಯಾಸ ನೋಡಿ, ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಗುರುತಿಸಲ್ಪಟ್ಟ ಅಂಬೇಡ್ಕರ್, ವಿಶ್ವದ ಹಲವೆಡೆ ಸೆಮಿನಾರ್‌ಗಳ ಮೂಲಕ ಸ್ಮರಿಸಲ್ಪಡುತ್ತಿದ್ದರೆ, ಅವರ ಮಣ್ಣಿನವರಾದ ನಾವು, ಅಂಬೇಡ್ಕರ್ ಜೀವನ ಚರಿತ್ರೆಯನ್ನು ಅರಿತುಕೊಳ್ಳುವುದನ್ನು ನಿರಾಕರಿಸುತ್ತ ಅವರ ಬಗೆಗಿನ ಧಾರಾವಾಹಿಯನ್ನು ನಿಲ್ಲಿಸುವಂತೆ ಬೆದರಿಕೆ ಕರೆ ಮಾಡುವುದರಲ್ಲಿ ತೊಡಗಿಕೊಂಡಿದ್ದೇವೆ! ನಿಜಕ್ಕೂ ನಾಚಿಕೆಯಾಗುವುದಿಲ್ಲವೇ?

‘ಮಹಾನಾಯಕ’ ಧಾರಾವಾಹಿ ಬರೀ ಗೋಳಿನಿಂದ ಕೂಡಿದೆಯಂತೆ! ಎಷ್ಟು ಸಲೀಸಾಗಿಬಿಟ್ಟಿತಲ್ಲ ಅಂಬೇಡ್ಕರ್ ಬದುಕು? ನಾವೀಗ ನೋಡುತ್ತಿರುವುದು ಅಂಬೇಡ್ಕರ್ ‘ಗೋಳಿನ’ ಧಾರಾವಾಹಿ ಅಷ್ಟೆ. ಆದರೆ ಸ್ವತಃ ಅಂಬೇಡ್ಕರ್ ಆ ಗೋಳಿನ ಬದುಕನ್ನು ಬದುಕಿದ್ದರು ಎಂಬುದನ್ನು ಯೋಚಿಸಿ ನೋಡಿ. 
ನಮ್ಮ ಮನಸ್ಥಿತಿಯನ್ನು ನಾವು ಈಗಿಂದೀಗಲೇ ತಿದ್ದಿಕೊಳ್ಳದೇ ಹೋದರೆ, ಭಾರತದ ಭವಿಷ್ಯದ ಬಗ್ಗೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವ ಅಗತ್ಯವಿಲ್ಲ.  ಏಕೆಂದರೆ ವಿದ್ಯಾವಂತರಾದ ನಾವೇ ಹೀಗಿದ್ದೇವೆ ಎಂದರೆ, ನಾವು ಪಡೆದ ಶಿಕ್ಷಣಕ್ಕೂ, ನಮ್ಮ ಹಿರಿಯ ತಲೆಮಾರು ಪಡೆಯದ ಶಿಕ್ಷಣಕ್ಕೂ ಇರುವ ವ್ಯತ್ಯಾಸವಾದರೂ ಏನು? ಅಥವಾ ಮುಂದಿನ ತಲೆಮಾರು ಪಡೆಯಬಹುದಾದ ಶಿಕ್ಷಣದ ನಡುವೆ ವ್ಯತ್ಯಾಸ ಏನು ಬಂತು?
ಅಂಬೇಡ್ಕರ್ ಕುರಿತ ಸಮಗ್ರ ಚಿತ್ರಣವನ್ನು ಶಿಕ್ಷಣ ವಲಯದಲ್ಲಿ ಒದಗಿಸದಂತೆ ಪೂರ್ವಗ್ರಹ ಪೀಡಿತ ಮನಸ್ಥಿತಿ ಅಥವಾ ‘ಜಾತಿ’ ಉನ್ಮಾದ ಕೆಲಸ ಮಾಡುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಇತ್ತೀಚೆಗಂತೂ ಈ ವಿಚಾರ ತೀವ್ರವಾಗಿ ಕಾಡುತ್ತಿದೆ. ಅಂಬೇಡ್ಕರ್ ಎಂದರೆ ಸಂವಿಧಾನ, ಸಂವಿಧಾನ ಎಂದರೆ ಅಂಬೇಡ್ಕರ್ ಎಂಬುದಷ್ಟೇ ನಾವು ಕಲಿತಿದ್ದು. ಅದರಾಚೆಗೆ ಕಲಿಯಲು ಅದಕ್ಕೆ ಪೂರಕವಾದ ಪಠ್ಯಗಳು ಲಭ್ಯವಿದ್ದ ನೆನಪಿಲ್ಲ. ಅಂದರೆ ಸಂವಿಧಾನ ಕೆಲವು ವಿಧಿಗಳನ್ನು, ಮೂಲಭೂತ ಹಕ್ಕುಗಳನ್ನು ಕಲಿತರೆ ಸಾಕು, ಅಲ್ಲಿಗೆ ಅಂಬೇಡ್ಕರ್ ಮುಗಿಯಿತು ಎಂದು ಭಾವಿಸುವಂತೆ ಶಿಕ್ಷಣ ವ್ಯವಸ್ಥೆ ನಮ್ಮನ್ನು ನಿಯಂತ್ರಿಸುತ್ತ ಬಂದಿದೆ.
ಅಂಬೇಡ್ಕರ್ ಮನೆಮನ ತಲುಪುವುದು ಅತ್ಯಂತ ಅಗತ್ಯ. ಈ ದೃಷ್ಟಿಯಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದಡಿಯಲ್ಲಿಯೇ ‘ಮಹಾನಾಯಕ’ ಧಾರಾವಾಹಿ ಮುಂದುವರಿಯಬೇಕು. ವಿಶ್ವಮೆಚ್ಚಿದ ನಾಯಕನಿಗೆ ನ್ಯಾಯ ಸಲ್ಲಬೇಕು

LEAVE A REPLY

Please enter your comment!
Please enter your name here