ಇದು ಇತ್ತೀಚೆಗೆ ನಾನು ವಾಟ್ಸಾಪಿನಲ್ಲಿ ವೀಕ್ಷಿಸಿದ ಒಂದು ಮಲಯಾಳಂ ಚಿತ್ರಣದ ಬರಹ ರೂಪ. ಮಲಯಾಳಂ ಅರಿಯದವರಿಗೂ ತಲಪಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ.
ಕೆಲವು ವರ್ಷಗಳ ಹಿಂದಿನ ಕತೆ.
ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿಯದು. ಆ ಹಳ್ಳಿಯಲ್ಲಿ ಹಂಚಿನ ಮೇಲ್ಚಾವಣಿಯ ಹಳೆಯ ಮಸೀದಿಯೊಂದಿತ್ತು. ಅದರ ಪಕ್ಕವೇ ಹಿಂದೂ ಕುಟುಂಬವೊಂದು ವಾಸವಾಗಿತ್ತು. ಆ ಹಿಂದೂ ಕುಟುಂಬದವರ ಅಂಗಳದಲ್ಲಿ ಒಳ್ಳೆಯ ಕಾಯಿ ನೀಡುವ ತೆಂಗಿನ ಮರಗಳ ಸಾಲೇ ಇತ್ತು. ಅಂತಹ ತೆಂಗಿನ ಮರಗಳಲ್ಲಿ ಒಂದು ಮರ ಮಸೀದಿಯ ಮೇಲ್ಚಾವಣಿಯತ್ತ ಚಾಚಿತ್ತು. ಅದರ ತೆಂಗಿನ ಕಾಯಿ, ಸೋಗೆ, ಸಿಯಾಳ ಮುಂತಾದವುಗಳು ಆಗಾಗ ಮಸೀದಿಯ ಹಂಚಿನ ಮೇಲ್ಚಾವಣಿಗೆ ಬಿದ್ದು ಆಗಾಗ ಹಂಚು ಒಡೆದು ಹೋಗುತ್ತಿತ್ತು. ಇದು ವಿಪರೀತಕ್ಕೇರಿದಾಗ ಸಹಿಸದ ಮಸೀದಿಯ ಆಡಳಿತ ಸಮಿತಿ ಸದಸ್ಯರು ಆ ಮನೆಯ ಯಜಮಾನಿಯಾದ ಹಿರಿಯ ಮಹಿಳೆಯನ್ನು ಭೇಟಿಯಾಗಿ ಅವರ ತೆಂಗಿನ ಮರದಿಂದ ಆಗುವ ಸಮಸ್ಯೆಯನ್ನು ವಿವರಿಸಿ ತೆಂಗಿನ ಮರ ಕಡಿಯುವಂತೆ ಕೋರಿದರು. ಹಿರಿಯರಾದ ಆ ಮಹಿಳೆಗೆ ಸಮಸ್ಯೆಯ ಗಂಭೀರತೆ ಅರ್ಥವಾಗಿ ಅವರು ಮರಕಡಿಯಲು ಸಮ್ಮತಿಸಿದರಾದರೂ ಅವರ ಮಗ ಒಪ್ಪಲೇ ಇಲ್ಲ.
ರಾತ್ರೋ ರಾತ್ರಿ ಮಸೀದಿ ಆಡಳಿತ ಸಮಿತಿಯವರು ಅಂದಿನ ಖಾಝಿಗಳೂ ಮುಸ್ಲಿಂ ಲೀಗಿನ ಉನ್ನತ ನಾಯಕರೂ ಆಗಿದ್ದ ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ರ ಬಳಿಗೆ ಹೋಗಿ ಅವರ ಸಮಸ್ಯೆಯನ್ನು ವಿವರಿಸಿದರು. ಅವರು ಒಂದು ಪರಿಹಾರೋಪಾಯ ಸೂಚಿಸಿದರು. *ಮಸೀದಿ ಒಡೆದು ಹೊಸ ಆರ್.ಸಿ.ಸಿ. ಮಸೀದಿ ನಿರ್ಮಿಸಿ.* ಸರಿಯೆಂದು ಸಮ್ಮತಿ ಸೂಚಿಸಿ ಅವರು ಮರಳಿ ಬಂದರು.ಮಸೀದಿ ಒಡೆಯುವ ಸುದ್ಧಿ ಆ ಹಿಂದೂ ಕುಟುಂಬಕ್ಕೆ ತಲಪಿತು. ಆ ಸುದ್ಧಿಯಿಂದ ಸಂಕಟ ತಾಳಲಾರದ ಆ ಕುಟುಂಬದ ಹಿರಿಯ ಮಹಿಳೆ ಮತ್ತು ಅವರ ಮಗ ಕೂಡಲೇ ಖಾಝಿಯವರನ್ನು ಭೇಟಿಯಾಗಿ *ನಾವು ಮರ ಕಡಿಯುತ್ತೇವೆ, ದಯಮಾಡಿ ಮಸೀದಿ ಒಡೆಯುವುದು ಬೇಡ* ಎಂದು ಕೈ ಮುಗಿದು ಬೇಡಿಕೊಂಡರು. ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಗನೂ ಪರಿ ಪರಿಯಾಗಿ ಮಸೀದಿ ಒಡೆಯಬೇಡಿ, ಮರ ಕಡಿಯುತ್ತೇವೆ ಎಂದು ಬೇಡಿಕೊಂಡ.
ಖಾಝಿ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಆ ವೃದ್ದೆಯನ್ನು ಅಮ್ಮಾ ಎಂದು ಕರೆದು ಹೇಳಿದರು *ತೆಂಗು ಕಲ್ಪವೃಕ್ಷವಲ್ಲವೇ ಅಮ್ಮಾ…. ಅದನ್ನು ಕಡಿಯುವುದು ಬೇಡ, ನಾವು ಮಸೀದಿ ಒಡೆದು ಆರ್.ಸಿ.ಸಿ.ಮಸೀದಿ ನಿರ್ಮಿಸುತ್ತೇವೆ* ಎಂದು ಅಂತಿಮ ತೀರ್ಮಾನ ಹೇಳಿ ಬಿಟ್ಟರು.
ಎಲ್ಲಾ ಸಮಸ್ಯೆಗಳಿಗೆ ಮಾತುಕತೆಯಲ್ಲಿ ಪರಿಹಾರವಿದೆ. ಇಂತಹ ನಡವಳಿಕೆಗಳಿಂದ ಸಹೋದರ ಸಮುದಾಯಗಳಲ್ಲಿ ಎಂತಹ ಭಾವನೆಯನ್ನು ನಾವು ಮೂಡಿಸಲು ಸಾಧ್ಯ….
ಕೇರಳದ ಮಲಪ್ಪುರಂ ಜಿಲ್ಲೆಯಂತೂ ಮುಸ್ಲಿಂ ಬಾಹುಳ್ಯವಿರುವ ಜಿಲ್ಲೆ. ಅಲ್ಲಿ ಮಸೀದಿ ಸಮಿತಿಯವರು ಮನಸ್ಸು ಮಾಡಿದರೆ ಮರ ಕಡಿಯುವುದು ಒಂದು ಸವಾಲೇ ಆಗಿರಲಿಲ್ಲ. ಆದರೆ ಮಾನವೀಯ ಸಂಬಂಧಕ್ಕಿಂತ ಯಾವುದೂ ಮಿಗಿಲಲ್ಲ ಎಂದು ಅವರು ತೋರಿಸಿಕೊಟ್ಟಿದ್ದರು.
Good one