ವಿವೇಕಾನಂದ.ಹೆಚ್.ಕೆ ಬೆಂಗಳೂರು

70/80 ರ ದಶಕದಲ್ಲಿ, ಕರ್ನಾಟಕದಲ್ಲಿ ಗೂಳಿಯಂತೆ ಆಕ್ರಮಣಕಾರಿಯಾಗಿ ನುಗ್ಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವ್ಯವಸ್ಥೆಯ ವಿರುದ್ಧ ಘರ್ಜಿಸಿದ, ವ್ಯವಸ್ಥೆಯನ್ನು ಕೆಡಿಸಿದ ಮತ್ತು ಕೆಲವು ಬದಲಾವಣೆಗಳಿಗೆ ಕಾರಣರಾದ ಕೆಲವರನ್ನು ನೆನೆಯುತ್ತಾ…ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಪಿ. ಲಂಕೇಶ್, ರೈತ ಚಳವಳಿಯಲ್ಲಿ ಪ್ರೋ: ಎಂ.ಡಿ.ನಂಜುಡಸ್ವಾಮಿ, ಧ್ವನಿ ಸುರುಳಿ ಮತ್ತು ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯ, ದಲಿತ ಜಾಗೃತಿಯಲ್ಲಿ ಸಿದ್ದಲಿಂಗಯ್ಯ, ಬಂಡಾಯ ಸಾಹಿತ್ಯದಲ್ಲಿ ಬರಗೂರು ರಾಮಚಂದ್ರಪ್ಪ,ಕನ್ನಡ ಚಳವಳಿಯಲ್ಲಿ ವಾಟಾಳ್ ನಾಗರಾಜ್, ಸಹಜ ಬದುಕಿನ ಪ್ರಕೃತಿ ನಿಷ್ಠೆಯ ಸಾಹಿತ್ಯದಲ್ಲಿ ಪೂರ್ಣ ಚಂದ್ರ ತೇಜಸ್ವಿ, ಚಲನಚಿತ್ರ ನಟನೆಯಲ್ಲಿ ಅಂಬರೀಶ್,ರಾಜಕೀಯದಲ್ಲಿ ಬಂಗಾರಪ್ಪ,ರೌಡಿಸಂನಲ್ಲಿ ಕೊತ್ವಾಲ್ ರಾಮಚಂದ್ರ, ಚಲನಚಿತ್ರ ಸಾಹಿತ್ಯ ಮತ್ತು ಸಂಗೀತದಲ್ಲಿ ಹಂಸಲೇಖ, ವಕೀಲಿಕೆಯಲ್ಲಿ ದೇವದಾಸ್, ಭೂ ಖರೀದಿಯಲ್ಲಿ ದಯಾನಂದ ಪೈ, ಖಾಸಗಿ ಆಸ್ಪತ್ರೆಗಳ ಬೆಳವಣಿಗೆಯಲ್ಲಿ ಎಂ ಎಸ್ ರಾಮಯ್ಯ, ಜನಪ್ರಿಯ ಕಾದಂಬರಿ ಸಾಹಿತ್ಯದಲ್ಲಿ ಎಸ್ ಎಲ್ ಭೈರಪ್ಪ, ವೈಚಾರಿಕ ಸಾಹಿತ್ಯದಲ್ಲಿ ಬಸವರಾಜ ಕಟ್ಟೀಮನಿ, ಭಾಷೆಯ ಹೋರಾಟದಲ್ಲಿ ಪಾಟೀಲ್ ಪುಟ್ಟಪ್ಪ, ಸುಗಮ ಸಂಗೀತ ಗಾಯನದಲ್ಲಿ ಸಿ. ಅಶ್ವಥ್, ಹೀಗೆ ಅನೇಕ ಹೆಸರುಗಳು ನೆನಪಾಗುತ್ತಿದೆ.

ಮಹಿಳಾ ಹೋರಾಟಗಾರರಲ್ಲಿ ಇದಕ್ಕೆ ಸೂಕ್ತ ಹೆಸರು ತಿಳಿಯುತ್ತಿಲ್ಲ. ಇಲ್ಲಿ ಪ್ರಖ್ಯಾತರು, ಕುಖ್ಯಾತರು, ಒಳ್ಳೆಯ ಆದರ್ಶ ವ್ಯಕ್ತಿಗಳು, ಸಮಾಜ ದ್ರೋಹಿಗಳು ಎಲ್ಲರೂ ಈ ಪರಿಕಲ್ಪನೆಯಲ್ಲಿ ಸೇರುತ್ತಾರೆ. ಬಂಡಾಯ ಸ್ವಭಾವದ, ಒಂದು ರೀತಿಯಲ್ಲಿ ಒರಟು ಭಾಷೆಯ ಡೇರ್ ಡೆವಿಲ್ಸ್ ವರ್ತನೆಯವರು. ಹಿರಣ್ಣಯ್ಯನವರು ಉಪಯೋಗಿಸುತ್ತಿದ್ದ ಬೋಳಿ ಮಕ್ಕಳಾ – ಸೂಳೆ ಮಕ್ಕಳಾ ಪದಗಳು, ಲಂಕೇಶರ ಗುಂ ಬಂ ಎನ್ನುವ ಏಕವಚನ ಶಬ್ದಗಳು, ಸಿದ್ದಲಿಂಗಯ್ಯನವರ ಇಕ್ಕರ್ಲ ಒದೀರ್ಲಾ, ಬಸವರಾಜ ಕಟ್ಟೀಮನಿ ಅವರ ಖಾವಿ ಹಿಂದಿನ ಕರಾಳ ಮುಖವಾಡಗಳನ್ನು ಬಯಲು ಮಾಡಿದ್ದು, ವಾಟಾಳ್ ನಾಗರಾಜ್ ಅವರ ಕನ್ನಡ ಕನ್ನಡ ಕನ್ನಡ ಎಂಬ ಆಕ್ರೋಶದ ಮಾತುಗಳು, ಕೊತ್ವಾಲ್ ರಾಮಚಂದ್ರ ಎಂಬ ರೌಡಿ ವಿಧಾನಸೌದಕ್ಕೆ ನುಗ್ಗಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮಚ್ಚು ತೋರಿಸಿ ಬೆದರಿಸಿದ್ದು ( ಇದು ಕೇಳಲ್ಪಟ್ಟಿರುವುದು. ಖಚಿತತೆ ಇಲ್ಲ ), ಬಂಗಾರಪ್ಪನವರ ಡೋಂಟ್ ಕೇರ್ ವ್ಯಕ್ತಿತ್ವ, ದೇವದಾಸ್ ಎಂಬ ವಕೀಲರು ರೌಡಿಗಳು ಕೊಲೆಗಾರರ ಬಗ್ಗೆ ವಾದಿಸಿ ಜಯಿಸುತ್ತಿದ್ದುದು ಹೀಗೆ ಇವರುಗಳು ತುಂಬಾ ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿದ್ದರು.

ಮಾಸ್ಟರ್ ಹಿರಣ್ಣಯ್ಯನವರು ನಿಧನರಾಗಿರುವ ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಸಟೆದು ಮಾತಿನಲ್ಲಿಯೇ ಅವರುಗಳ ಬಣ್ಣ ಬಯಲು ಮಾಡಿ ಅನೇಕ ಜನಸಾಮಾನ್ಯರಿಗೆ ಸ್ಪೂರ್ತಿ ತುಂಬಿದ್ದರು ಮತ್ತು ಮನರಂಜಿಸುತ್ತಿದ್ದರು.ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ…
ಇದು ಅಂದಿನ ದಿನಮಾನಗಳ ಸುದ್ದಿ ನೆನಪಿನ ಪುಟದಿಂದ. ತಕ್ಷಣಕ್ಕೆ ನೆನಪಿಗೆ ಸಿಗದ ಇನ್ನೂ ಎಷ್ಟೋ ವ್ಯಕ್ತಿತ್ವಗಳು ಸಹ ಇವೆ. ಅದರಲ್ಲೂ ಉತ್ತರ ಕರ್ನಾಟಕದ ಹೆಸರುಗಳು ಹೆಚ್ಚು ತಿಳಿದಿಲ್ಲ. ನಿಮಗೆ ನೆನಪಾದರೆ ದಯವಿಟ್ಟು ಇಲ್ಲಿ ದಾಖಲಿಸಿ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

1 COMMENT

LEAVE A REPLY

Please enter your comment!
Please enter your name here