ರಿಯಾಝ್ ಅಹ್ಮದ್ ರೋಣ

ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ರಾಷ್ಟ್ರಾಧ್ಯಕ್ಷರು ನೆಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕರಾಗಿದ್ದ ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಮೌಲಾನಾ ಅವರದ್ದು ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಇಸ್ಲಾಮೀ ಆಂದೋಲನದ ಕ್ಷೇತ್ರದಲ್ಲಿ ತುಂಬ ಜನಮೆಚ್ಚುಗೆಯನ್ನು ಪಡದಿರುವಂತಹ ವ್ಯಕ್ತಿತ್ವ. ಅವರ ಅಗುಲಿಕೆಯ ನೋವು ದೇಶದ ಉದ್ದಗಲಕ್ಕೂ ಜಮಾಅತಿನ ಪ್ರತಿಯೊಬ್ಬ ಕಾರ್ಯಕರ್ತನನ್ನು ಬಾಧಿಸಿದೆ. ದೇಶದ ಮೂಲೆ ಮೂಲೆಗಳಿಂದ ಬರುತ್ತಿರುವ ಸಂತಾಪ ಸೂಚನಾ ಸಂದೇಶಗಳೇ ಇದಕ್ಕೆ ಸಾಕ್ಷಿ ಎಂದರೆ ತಪ್ಪಾಗದು. ಭಾರತದ ಪ್ರಸಿದ್ಧ ವಿವಿಧ ಧಾರ್ಮಿಕ ಸಂಘಟನೆಗಳ ಹೊಣೆಗಾರರೂ, ರಾಜಕೀಯ ನಾಯಕರೂ, ಚಿಂತಕರೂ ಬುದ್ದಿಜೀವಿಗಳು, ಪ್ರಮುಖ ಬರಹಗಾರರೂ, ಸಾಹಿತಿಗಳೆಲ್ಲರೂ ಇಂದು ಅವರ ನಿಧನದಿಂದಾಗಿ ದುಖಿಃತರಾಗಿ ಮೌಲಾನಾ ಅವರೊಟ್ಟಿಗೆ ತಾವು ಕಳೆದ ಕ್ಷಣಗಳನ್ನು ಮೆಲಕು ಹಾಕುತ್ತ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಖ್ಯಾತ ವಿದ್ಯಾಂಸ ಅಲ್ಲಾಮಾ ಯೂಸುಫುಲ್ ಕರ್ಝಾವಿ ಸಹ ಮೌಲಾನಾ ಅವರ ನಿಧನದ ಸುದ್ದಿ ಹಾಗೂ ಸಂತಾಪವನ್ನು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವ ಅಂಶವನ್ನು ಗಮನಿಸಿದಾಗ ಮೌಲಾನಾ ಎಷ್ಟೊಂದು ಉನ್ನತವಾದ ವ್ಯಕ್ತಿತ್ವವನ್ನು ಹೊಂದಿದ್ದರೆಂದು ಈ ಸಂದರ್ಭದಲ್ಲಿ ಮತ್ತೆ ಮತ್ತೆ ಹೆಮ್ಮೆ ಅನಿಸುತ್ತಿದೆ.
ಅಲ್ಲಾಹನ ಸಜ್ಜನ ದಾಸರಾಗಿದ್ದಂತಹ ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಅವರನ್ನು ಕಂಡಾಗಲೆಲ್ಲ ಸೃಷ್ಟಿಕರ್ತನ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಗೊಳ್ಳುತ್ತಿತ್ತು. ಪದೇ ಪದೇ ಅವರನ್ನು ನೋಡುವ, ಅವರೊಟ್ಟಿಗೆ ಮಾತನಾಡುತ್ತ ಆದಷ್ಟೂ ಹೆಚ್ಚು ಸಮಯ ಕಳೆಯುವ ಬಯಕೆ ನಮ್ಮದಾಗಿರುತ್ತಿತ್ತು. ಯಾರು ಅಲ್ಲಾಹನೆಡೆಗೆ ಧಾವಿಸುತ್ತಾನೋ ಅಲ್ಲಾಹನು ಅಂತಹವರನ್ನು ತಮ್ಮವನಾಗಿಸುತ್ತಾನೆ ಎಂಬುವುದುಕ್ಕೆ ಮೌಲಾನಾ ಅವರ ಬದುಕು ಸಾಕ್ಷಾತ್ ನಿದರ್ಶನವಾಗಿತ್ತು. ಅವರು ಸಂಘಟನಾ ಬಾಂಧವರನ್ನು ಯಾವುದೇ ತೋರಿಕೆಯಿಲ್ಲದೇ ನಿಷ್ಕಳಂಕವಾಗಿ ಪ್ರೀತಿಸುತ್ತಿದ್ದರು. ಮತ್ತು ಎಲ್ಲರೂ ಕೂಡಾ ಅವರನ್ನು ಅಷ್ಟೇ ಅಭಿಮಾನದೊಂದಿಗೆ ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಒಬ್ಬ ನಾಯಕನ ಗುಣ ಅದು. ಜನರು ಅವನನ್ನು ಪ್ರೀತಿಸುತ್ತಾರೆ ಮತ್ತು ಅವನು ಜನರನ್ನು ಪ್ರೀತಿಸುತ್ತಾನೆ. ಜಮಾಅತಿನ ಕಟ್ಟಕಡೆಯ ವ್ಯಕ್ತಿಯು ಕೂಡಾ ಮೌಲಾನಾ ಎಲ್ಲರಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಾರೆ ಎಂಬ ಅಭಿಮಾನ ಅವನಲ್ಲಿರುತ್ತಿತ್ತು. ಯಾವುದಾದರೂ ಸಭೆಗಳಲ್ಲಿ ಮೌಲಾನಾ ಸಿರಾಜುಲ್ ಹಸನ್ ಸಾಹಬ್ ಮಾತನಾಡಲು ಕುಳಿತರೆ ಅಲ್ಲಾಹನ ಈ ಸಜ್ಜನ ದಾಸ ನನ್ನನ್ನೇ ಅಭಿಸಂಭೊದಿಸಿ ಮಾತನಾಡುತ್ತಿರಬಹುದು ಎಂದಾಗಿ ನಮ್ಮಲ್ಲಿ ಭಾವನೆ ಮೂಡುತ್ತಿತ್ತು. ಅವರದ್ದು ಬಹಳ ವಿಶಾಲವಾದ ಮನಸ್ಸು. ಅಲ್ಲಿ ಪ್ರೀತಿ, ಅನುಕಂಪ, ಸಹಾನುಭೂತಿ, ನೊಂದವರ ಪರವಾಗಿ ಮಿಡಿಯುವ, ಎಲ್ಲಕ್ಕಿಂತ ಮಿಗಿಲಾಗಿ ಅವರ ಹೃದಯವು ಪದೇ ಪದೇ ಅಲ್ಲಾಹನೆಡೆಗೆ ವಾಲುವ ಗುಣ ಹೊಂದಿತ್ತು. ದ್ವೇಷ ಅಸೂಯೆ ಕಾಪಾಟ್ಯ, ತೋರಿಕೆ ಮತ್ತು ಕೋಪದಂತಹ ನಕಾರಾತ್ಮಕ ಅಂಶಗಳನ್ನು ಬದುಕಿನ್ನುದ್ದಕ್ಕು ಅವರೆಂದೂ ತಮ್ಮ ಹತ್ತಿರವು ಸುಳಿಯಲು ಬಿಡಲಿಲ್ಲ. ಆದ್ದರಿಂದ ಅವರೆಂದರೆ ಇಸ್ಲಾಮೀ ಆಂದೋಲನದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪಂಚಪ್ರಾಣ.
ಅಲ್ಲಾಹನ ಪ್ರವಾದಿ ಚರ್ಯೆಯಂತೆ ಇತರರನ್ನು ಕ್ಷಮಿಸುವ ಗುಣ ಅವರಲ್ಲಿ ಮನೆಮಾಡಿತ್ತು.ಸುಧಾರಣೆ ದೃಷ್ಟಿಯಿಂದ ಅವಶ್ಯಕತೆ ಎನಿಸಿದಾಗಲೆಲ್ಲ ತಮ್ಮ ಸಂಗಾತಿಗಳನ್ನು ತಿದ್ದುವ ಪರಿ ಅದ್ಭುತವಾಗಿತ್ತು. ವ್ಯೆಯಕ್ತಿಕವಾಗಿ ಭೇಟಿ ಮಾಡಿ ತುಂಬಾ ವೈಶಾಲ್ಯ ಹಾಗೂ ತಮ್ಮತನವನ್ನು ವ್ಯಕ್ತ ಪಡಿಸುತ್ತ, ವಿಷಯಗಳಿಗೆ ಸಂಬಂಧಿಸಿ ನಾಳೆ ಪರಲೋಕದಲ್ಲಿನ ವಿಚಾರಣೆಯ ಭಯವನ್ನು ಮೂಡಿಸುತ್ತ ಸುಧಾರಿಸುವ ಅವರ ಸ್ವಭಾವ ಮರೆಯಲಾಗದು. ಬೆಳಿಗ್ಗೆ ನಾಲ್ಕು ಗಂಟೆಗಿಂತ ಮೊದಲು ಎದ್ದು ಅಲ್ಲಾಹನ ಆಸ್ಥಾನದಲ್ಲಿ ತಹಜ್ಜುದ್ ನಿರ್ವಹಿಸುವುದು ಅವರ ಜೀವನದ ಸಾಮಾನ್ಯ ರೂಢಿಯಾಗಿತ್ತು. ಅವರು ಜ.ಇ.ಹಿಂದ್ ಕರ್ನಾಟಕ ಇದರ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಂತಹ ಸಮಯ ಅದು, ಒಂದು ಪ್ರದೇಶದಲ್ಲಿ ಅವರ ಪ್ರವಾಸ ಕಾರ್ಯಕ್ರಮವಿತ್ತು. ದಿನವಿಡೀ ಸಭೆ ಸಮಾರಂಭಗಳು ಅದಲ್ಲದೇ ಪ್ರವಾಸದ ಆಯಾಸ ಬೇರೆ. ಅಂತಹ ಸಂದರ್ಭದಲ್ಲಿಯೂ ಮೌಲಾನಾ ಅವರು ರಾತ್ರಿ ಮೂರು ಗಂಟೆಯ ಜಾವದಲ್ಲಿ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ ತಹಜ್ಜುದ್ ನಮಾಝ್‍ಗಾಗಿ ನಿಂತಿದ್ದು ಆ ಪ್ರದೇಶದ ಹೊಣೆಗಾರರೂ ಇಂದಿಗೂ ಕೂಡಾ ಬಹಳ ಹಮ್ಮೆಯಿಂದ ನನೆಪಿಸಿಕೊಳ್ಳುತ್ತಾರೆ. ಮೌಲಾನಾ ಈ ಜಗತ್ತಿನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಅಲ್ಲಾಹ ಮತ್ತು ಅವನ ಪ್ರವಾದಿ(ಸ)ರನ್ನು ಪ್ರೀತಿಸುವವರಾಗಿದ್ದರು. ಅಲ್ಲಾಹನ ಸಾಮಿಪ್ಯಕ್ಕಾಗಿ ಈ ಲೋಕದ ಎಲ್ಲ ಬಗೆಯ ಸುಖ ಸೌಲತ್ತುಗಳನ್ನು ಅವರು ಯಾವುದೆ ಮುಲಾಜಿಯಿಲ್ಲದೇ ತ್ಯಜಿಸಿದ್ದರು. ಆಗರ್ಭ ಶ್ರೀಮಂತ ಜಮೀನ್ದಾರ್ ಕುಟುಂಬಕ್ಕೆ ಸೇರಿದವರಾಗಿದ್ದರೂ ಆ ಸಿರಿತನವನ್ನು ಲೆಕ್ಕಿಸದೇ ಅದನ್ನು ದೇವ ಸಂಪ್ರೀತಿಗಾಗಿ ತ್ಯಾಗ ಮಾಡಿ ಅಲ್ಲಾಹನÀ ಧರ್ಮದ ಉತ್ತುಂಗಕ್ಕಾಗಿ ಬಹಳ ಪ್ರಾಮಾಣಿಕವಾಗಿ ಬದುಕಿನುದ್ದಕ್ಕೂ ಶ್ರಮಿಸಿದರು. ತಿಂಗಳಿನ ಅತೀ ಹೆಚ್ಚು ದಿನಗಳು ಅವರದ್ದು ಪ್ರವಾಸಗಳಲ್ಲಿ ಕಳೆಯುತ್ತಿದ್ದವು. ಬಿಸಿಲು ಮಳೆ ಛಳಿ ಎನ್ನದೇ ಬಸ್ಸಿನಲ್ಲಿ, ರೈಲಿನಲ್ಲಿ, ಟ್ರ್ಯಾಕ್ಟರ್‍ನಲ್ಲಿ, ಎತ್ತಿನಗಾಡಿಯಲ್ಲಿ ಕೆಲವೊಮ್ಮೆ ನದಿಯ ಆಚೆಯಿರುವಂತಹ ಊರುಗಳಿಗೆ ಹೋಗಲು ದೋಣಿಯಲ್ಲಿಯೂ, ಅಂದು ಕೆಲವು ಪ್ರದೇಶಗಳಿಗೆ ತೆರಳಲು ಯಾವುದೇ ಸಾಧನಗಳಿಲ್ಲದಿರುವಾಗ ಯಾವುದನ್ನು ಲೆಕ್ಕಿಸದೇ ಅವರು ನಡೆದುಕೊಂಡೇ ಹೋದಂತಹ ಅದೆಷ್ಟೋ ಉದಾಹರಣೆಗಳಿವೆ. ಈಗಿರುವಂತೆ ಆ ಸಂದರ್ಭದಲ್ಲಿ ಪ್ರಯಾಣವು ಇಷ್ಟೊಂದು ಅನುಕೂಲಕರವಾಗಿರಲಿಲ್ಲ. ಅದಾಗಿಯೂ ಮೌಲಾನಾರವರು ಹೇಗಾದರೂ ಮಾಡಿ ತಮ್ಮ ನಿಗದಿತ ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಸಂಘಟನಾ ಪ್ರವಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದರು. ಅವರು ಭೇಟಿ ನೀಡದ ಜಮಾಅತಿನ ಯಾವೊಂದೂ ಪ್ರದೇಶವು ಉಳಿದಿರಲಿಕ್ಕಿಲ್ಲ. ಅವರು ವ್ಯಕ್ತಿಗಳನ್ನು ರೂಪಿಸಿದರು, ನಾಯಕರನ್ನು ಸೃಷ್ಟಿಸಿದರು, ಸಂಘಟನಾ ಚಾತುರ್ಯತೆಯನ್ನು ಕಲಿಸಿದರು, ವಿವಿಧ ಕ್ಷೇತ್ರಗಳಲ್ಲಿ ಜಮಾಅತಿನ ಕೆಲಸವನ್ನು ವಿಸ್ತರಿಸಿದರು. ಐಶಾರಾಮಿ ಬದುಕನ್ನು ಮೌಲಾನಾ ಎಂದೂ ಇಷ್ಟ ಪಡುತ್ತಿರಲಿಲ್ಲ, ದೇವನ ನೈಜ ದಾಸರ ಗುಣ ಸಂಘರ್ಷಮಯ ಬದುಕಾಗಿರುತ್ತದೆ ಎಂಬ ಸಿದ್ದಾಂತವನ್ನು ಅವರು ನಂಬಿದ್ದರು, ಪ್ರವಾಸ ಕೈಗೊಂಡ ಪ್ರದೇಶಗಳಲ್ಲಿ ಅವರು ಹೊಟೇಲ್‍ಗಳಲ್ಲಿ ಉಳಿದುಕೊಂಡ ಉದಾಹರಣಿ ತುಂಭಾ ವಿರಳ. ಹೇಗೂ ಇರಲಿ ಜಮಾಅತಿನ ಕಛೇರಿ ಅಥವಾ ಬಾಂಧವರ ಮನೆಗಳಲ್ಲಿಯೇ ಅವರು ರಾತ್ರಿ ಉಳಿದುಕೊಳ್ಳಲು ಇಷ್ಟ ಪಡುತ್ತಿದ್ದರು. ಕೆಲವೊಮ್ಮೆ ಹೊಸ ಪ್ರದೇಶಕ್ಕೆ ತೆರಳಿದಾಗ ನಿರಂತರ ಪ್ರಯಾಣದ ಸಹಜ ಆಯಾಸದಿಂದಾಗಿ ಮಸೀದಿಗಳಲ್ಲಿ ತಂಗುವ ಪರಿಸ್ಥಿತಿ ಉದ್ಭವವಾದರೆ ಆ ಸಂದರ್ಭದಲ್ಲಿ ತಮ್ಮ ಕೈಯನ್ನೇ ತಲೆದಿಂಬಾಗಿಸಿಕೊಂಡು ಮಲಗಿ ನಿದ್ರೆಗೆ ಜಾರುತ್ತಿದ್ದರು.
ಒಬ್ಬ ನಾಯಕನಲ್ಲಿರಬೇಕಾದಂತಹ ಸರ್ವ ಉನ್ನತ ಗುಣಗಳು ಮೌಲಾನಾ ಅವರ ವ್ಯಕ್ತಿತ್ವದಲ್ಲಿ ನಾವು ನೋಡಬಹುದಾಗಿತ್ತು. ನಾಯಕನ ಅನೇಕ ಗುಣಗಳಲ್ಲಿನ ಪ್ರಮುಖ ಗುಣವೆಂದರೆ ಸಂಘಟನೆಯಲ್ಲಿನ ಕಟ್ಟಕಡೆಯ ವ್ಯಕ್ತಿಯು ಕೂಡಾ ಈ ನಾಯಕನು ನನ್ನ ಅಮೀರ್ ಆಗಿದ್ದಾನೆ, ನನ್ನ ಮಾತುಗಳನ್ನು ಆಲಿಸುತ್ತಾನೆ ಹಾಗೂ ನನ್ನ ವ್ಯೆಯಕ್ತಿಯ ವಿಷಯಗಳಲ್ಲಿ ಇವರಿಗೆ ಆಸಕ್ತಿಯಿದೆ ಎಂದು ಪರಿಗಣಿಸುವುದು. ಮೌಲಾನಾ ಅವರ ಕುರಿತು ನಮ್ಮಲ್ಲಿನ ಪ್ರತಿಯೊಬ್ಬ ಸದಸ್ಯನ ಭಾವನೆ ಇದೇ ರೀತಿಯಾಗಿತ್ತು. ನಾಯಕನ ಎರಡನೆಯ ಗುಣ, ಅವರೆಂದೂ ತನಗೆ ಗೌರವ, ಪ್ರಚಾರ ದೊರೆಯಬೇಕೆಂದು ಬಯಸದೇ ತನ್ನ ಹಿಂಬಾಲಕರ ಘನತೆಯನ್ನು ಕಾಪಾಡಲು ಅವರೊಟ್ಟಿಗೆ ಗೌರವದೊಂದಿಗೆ ವರ್ತಿಸಲು ಪ್ರಯತ್ನಿಸುತ್ತಾರೆ. ಜಮಾಅತಿನ ಕಾರ್ಯಕರ್ತನು ಬಿಡಿ ಒಬ್ಬ ಸಾಮಾನ್ಯ ಕೆಲಸದವನೂ ಮೌಲಾನಾರನ್ನು ಕಾಣಲು ಆಗಮಿಸಿದರೆ ಅವನೊಟ್ಟಿಗೆ ಬಹಳ ವಿನಮ್ರವಾಗಿ ಆದರದೊಂದಿಗೆ ಭೇಟಿಯಾಗುತ್ತಿದ್ದರು. ಆಪ್ತ ಯುವಕರೊಂದಿಗೆ ಕೆಲವೊಮ್ಮೆ ಬೆನ್ನು ಸವರಿ ಮಾತನಾಡುತ್ತಿದ್ದರು, ಮೌಲಾನಾ ಅವರ ದೈಹಿಕ ಭಾಷೆ (ಬಾಡಿ ಲಾಂಗವೇಜ್) ಅಸಾಮಾನ್ಯ ಮಟ್ಟದ್ದಾಗಿತ್ತು. ಹಲವೊಮ್ಮೆ ಭೇಟಿಯಾಗುವವನು ಇದರಿಂದಾಗಿ ಪ್ರಭಾವಕ್ಕೊಳಗಾಗಿ ತುಂಬ ಪುಳುಕಿತನಾಗುತ್ತಿದ್ದನು. ಒಬ್ಬ ಉನ್ನತ ನಾಯಕನ ಇನ್ನೊಂದು ವೈಶಿಷ್ಟ್ಯ ಅವನು ಎದುರಿನವನ ಮಾತುಗಳನ್ನು, ಅವನ ವಿಚಾರಗಳನ್ನು ಬಹಳ ಗಮನವಿಟ್ಟು ಆಲಿಸುತ್ತಾನೆ. ಎದುರಿನವನ ಮಾತುಗಳನ್ನು ಕೇಳುವ ವಿಷಯದಲ್ಲಂತೂ ಮೌಲಾನಾರ ಸಾಟಿ ಯಾರೂ ಇಲ್ಲ ಎಂದರೆ ಅತೀಶಯೋಕ್ತಿಯಾಗದು. ಯಾರಿಗಾದರೂ ಭೇಟಿಯಾಗಲು ಅವರು ತೆರಳಿದರೆ ತಮ್ಮ ಎದುರಿನವರ ಮಾತನ್ನು ಬಹಳ ಗಮನವಿಟ್ಟು ಆಲಿಸುತ್ತಿದ್ದರಲ್ಲದೇ ಮಾತಿನ ಮಧ್ಯದಲ್ಲಿ ಹೇಳುವವನ ಭಾವನೆಗಳಿಗೆ ಸ್ಪಂದಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಉದಾಹರಣೆಗೆ ಯಾವುದಾದರೂ ಊರಿನ ಪ್ರಸ್ತಾಪ ಬಂದಾಗ ಅಲ್ಲಿ ಜಮಾಅತಿನ ಬಾಂಧವರ ಹೆಸರನ್ನೆತ್ತಿ ಅವರ ಆರೋಗ್ಯದ ಕುರಿತು ಕೇಳುವುದು, ಮನೆಯ ವಿಚಾರ ಪ್ರಸ್ತಾಪಿಸಿದಾಗ ಮಗನ ಉದ್ಯೋಗ ಮಗಳ, ಮದುವೆ ಕುರಿತು ಕೇಳಿ ತಿಳಿದುಕೊಳ್ಳುವುದು ಇತ್ಯಾದಿ. ಅವರು ರಾಷ್ಟ್ರಾಧ್ಯಕ್ಷರಾಗಿದ್ದ ಸಂದರ್ಭ ಅದು ಪ್ರಮುಖ ದಿನ ಪತ್ರಿಕೆಯ ಸಂಪಾದಕರೋರ್ವರು ಇಸ್ಲಾಮಿನ ಕುರಿತು ಇಲ್ಲಸಲ್ಲದ ವಿಷಯಗಳನ್ನು ಎಳೆದು ತಂದು ತಪ್ಪಾಗಿ ಮಾಹಿತಿಯನ್ನೊಳಗೊಂಡ ಒಂದು ಲೇಖನ ಪ್ರಕಟಿಸಿದ್ದರು. ಆ ನಿಮಿತ್ತ ಅವರನ್ನು ಭೇಟಿಯಾಗಲು ಮೌಲಾನಾ ತಮ್ಮ ಆಯ್ದ ಸಂಘಟನಾ ಹೊಣೆಗಾರರೊಂದಿಗೆ ತೆರಳಿದಾಗ ಮೊಟ್ಟ ಮೊದಲೆನೆಯದಾಗಿ ಮೌಲಾನಾ ಅವರ ಭೇಟಿಯಾಗುವ ರೀತಿ ನೋಡಿಯೇ ಆ ವ್ಯಕ್ತಿ ಒಂದು ಕ್ಷಣ ಚಕಿತರಾದರು. ‘ ಮೌಲಾನಾ ಸಾಹಬ್ ತಾವು ದೂರು ನೀಡಲು ಬಂದಿರುವಿರಿ ಆದರೆ ಇದೇನು ಯಾರೋ ತಮ್ಮ ಪರಿಚಯದ ಓರ್ವ ಹಿತ ಚಿಂತಕನೊಂದಿಗೆ ಭೇಟಿಯಾಗಿ ಖುಷಿ ಪಡುವಂತೆ ಕಾಣುತ್ತಿದ್ದೀರಲ್ಲ’ ಎಂಬ ಮಾತಿನಿಂದ ಚರ್ಚೆ ಪ್ರಾರಂಭವಾಯಿತು. ಅವರ ಆಕ್ಷೇಪಭರಿತ ಮಾತುಗಳನ್ನಾಲಿಸುವಾಗ ಮೌಲಾನಾ ಯಾವುದೇ ರೀತಿಯ ಕೋಪ, ಬೇಸರ ಹಾಗೂ ಉದ್ವೇಗಕ್ಕೊಳಗಾಗದೇ ಬಹಳ ನಿರಾಳವಾಗಿ ಅವರ ಒಂದೊಂದು ಮಾತುಗಳನ್ನು ಆಲಿಸುತ್ತ ಹೋದರು, ಕೊನೆಯಲ್ಲಿ ಎಲ್ಲಾ ಆಕ್ಷೇಪಗಳನ್ನು ಹೊರಹಾಕಿದ ಬಳಿಕ ಸಂಪಾದಕರು ಮೌನಕ್ಕೆ ಶರಣಾದಾಗ ಮೌಲಾನಾ ಅವರಲ್ಲಿ, ಬಹಳ ಆತ್ಮೀಯವಾಗಿ ಮುಗುಳ್ನಗುತ್ತ, ಇನ್ನು ಏನಾದರೂ ಹೇಳಲಿಕ್ಕಿದೆಯೇ? ಎಂಬ ಪ್ರಶ್ನೆಯ ಬಳಿಕ ಮತ್ತೆ ಮೌಲಾನಾ ಅವರು ಸಂಕ್ಷಿಪ್ತವಾಗಿ ಒಂದೆರಡು ವಿಷಯಗಳನ್ನು ಪ್ರಸ್ತಾಪಿಸಿದರು. ಅವರು ಮಾತಿನ ಪ್ರಥಮ ಸಾಲು ಇಲ್ಲಿ ಯಥಾವತ್ತಾಗಿ ನೀಡುತ್ತಿದ್ದೇನೆ, “ದೋಶಿ ಆಪ್ ನಹೀ ಹೈಂ, ದೋಶಿ ಹಮ್ ಹೈಂ, ದೋಶಿ ಹಮ್ ಇಸ್ಲಿಯೇ ಹೈಂ ಕೆ ಹಮ್ ನೆ ಆಪ್ ಕೊ ಇಸ್ಲಾಮ್ ಕ್ಯಾ ಹೈ ಏ ನಹೀ ಬತಾಯಾ” (ಇಸ್ಲಾಮಿನ ಸರಿಯಾದ ಪರಿಚಯ ಮಾಡದಿರುವುದರಿಂದ ಆರೋಪಿಗಳು ತಾವಲ್ಲ ಬದಲಾಗಿ ಆರೋಪಿಗಳು ನಾವಾಗಿದ್ದೇವೆ). ಹೀಗೆ ಕೆಲವೊಂದು ಮಾತುಗಳನ್ನು ಹೇಳಿ ಮೌಲಾನಾ ಅಲ್ಲಿಂದ ಹೊರಡಲು ಅನುವಾದಾಗ ಆ ಪತ್ರಿಕೆಯ ಸಂಪಾದಕರು ಎಷ್ಟೊಂದು ಪ್ರಭಾವಿತರಾದರೆಂದರೆ ಈ ಘಟನೆಯ ಬಳಿಕ ನಂತರದ ದಿನಗಳಲ್ಲಿ ಅವರು ಮೌಲಾನಾರವರ ಒಬ್ಬ ಆತ್ಮೀಯ ಸ್ನೇಹಿತನಾಗಿ ಮಾರ್ಪಟ್ಟರು. ಒಂದು ಸಂದರ್ಭದಲ್ಲಿ ಮರ್ಕಝ್ ಜಮಾಅತ್‍ಗೆ ತಾವೇ ಖುದ್ದು ಭೇಟಿ ನೀಡಿ ಮೌಲಾನಾ ಅವರ ಸಂದರ್ಶನಗೈದು ತಮ್ಮ ಪತ್ರಿಕೆಯ ಒಂದು ನಿರ್ದಿಷ್ಟ ಪುಠದಲ್ಲಿ ಅದನ್ನು ಪ್ರಕಟಿಸಿದ್ದರು.
ಅವರು ಕರ್ನಾಟಕಕ್ಕೆ ಮರಳಿದ ಬಳಿಕ ಬೇಸಿಗೆಯ ದಿನಗಳಲ್ಲಿ ಮೌಲಾನಾ ರಾಯಚೂರಿನಿಂದ ಬೆಂಗಳೂರಿಗೆ ಆಗಮಿಸುವುದು ಸಾಮಾನ್ಯ ರೂಢಿಯಾಗಿತ್ತು. ತಮ್ಮ ಮಗ ಮರಹೂಮ್ ನಜ್ಮುಲ್ ಹಸನ್‍ರ ಮನೆಯಲ್ಲಿ ತಂಗಿದಾಗ ನಾವು ಘಟಕ ಕಛೇರಿಯಿಂದ ಭೇಟಿಯಾಗಲು ಹೋದಾಗ ಅಂತಹ ಇಳಿ ವಯಸ್ಸಿನಲ್ಲಿಯೂ ಎದ್ದು ನಿಂತು ಎಲ್ಲರನ್ನು ಆಲಂಗಿಸಿ ಬಹಳ ಪ್ರೀತಿ ಪೂರ್ವಕವಾಗಿ ಭೇಟೆಯಾಗುತ್ತಿದ್ದರಲ್ಲದೇ ರಾಜ್ಯಾದ್ಯಂತ ಜಮಾಅತಿನ ಚಟುವಟಿಕೆಗಳನ್ನು ಒಂದೊಂದಾಗಿ ಕೇಳಿ ತಿಳಿದುಕೊಂಡು ನಮ್ಮನ್ನು ಅಭಿನಂದಿಸುತ್ತ ಅಗತ್ಯವೆನಿಸಿದ ಕಡೆ ಮಾರ್ಗದರ್ಶನ ಮಾಡುತ್ತಿದ್ದರು. ಹೀಗೆ ಮಾತಿನ ಮಧ್ಯೆ ಮನೆಯಲ್ಲಿನ ಒಬ್ಬರೂ ಕಿಟಕಿ ಪರದೆಯನ್ನು ಮುಚ್ಚಲು ಮುಂದಾದಾಗ ಮೌಲಾನಾ ಅವರನ್ನು ತಡೆದು “ನಾವು ಪ್ರಕಾಶವನ್ನು ಹರಡಿಸುವವರಾಗಿದ್ದೇವಲ್ಲವೇ? ಮತ್ತೇಕೆ ತಾವು ಕತ್ತಲನ್ನುಂಟು ಮಾಡುತ್ತಿದ್ದೀರಿ” ಎಂದು ನಗುತ್ತಲೇ ಹೇಳಿದಾಗ ಸಭೆಯಲ್ಲಿ ಒಂದು ರೀತಿಯ ಸಂತೋಷದ ಲಹರಿಯೇ ಹರಿಯಿತು. ನಂತರ ಕಾರ್ ಪಾರ್ಕ್ ಮಾಡಿ ನಮ್ಮ ಜೊತೆಗಾರರಾಗಿದ್ದoತಹ ಚಾಲಕ ತಡವಾಗಿ ಅಲ್ಲಿ ಆಗಮಿಸಿದಾಗ ಅವರನ್ನು ಸಹ ಮೌಲಾನಾ ನಮ್ಮನ್ನು ಭೇಟಿಯಾದಂತೆ ಎದ್ದು ನಿಂತು ಆಲಂಗಿಸಿ ಬರಮಾಡಿಕೊಂಡರಲ್ಲದೇ ಸವಿಸ್ತಾರವಾಗಿ ಅವರ ಪರಿಚಯವನ್ನು ಕೇಳಿ ತಿಳಿದುಕೊಂಡಿರುವ ನೆನಪು ಇಂದಿಗೂ ನನ್ನ ಸ್ಮತಿಪಟದಲ್ಲಿದೆ. ಅದೇ ರೀತಿ ಇನ್ನೊಂದು ಉದಾಹರಣೆ ಬೆಂಗಳೂರಿನ ಓರ್ವ ಹಿರಿಯ ಜಮಾಅತ್ ಸದಸ್ಯರೋರ್ವರು (ಧಾರ್ಮಿಕ ಪಂಡಿತರು ಮತ್ತು ಪವಿತ್ರ ಕುರ್‍ಆನ್‍ನ್ನು ಕಂಠಪಾಟ ಮಾಡಿದವರಾಗಿದ್ದರು) ಮೌಲಾನಾ ಅವರನ್ನು ಕಾಣಲು ಅವರ ಪುತ್ರನ ಮನೆಗೆ ಹೋದಾಗ ಮೌಲಾನ ಅವರನ್ನು ಬರಮಾಡಿಕೊಳ್ಳಲೆಂದು ಮನೆಯ ಎರಡನೆಯ ಅಂತಸ್ತಿನಿಂದ ಕೆಳಗಿ ಇಳಿದು ಬಂದು ಮನೆಯ ಗೇಟಿನ ಬಳಿ ನಿಂತು ಬಹಳ ನಮ್ರತೆಯಿಂದ ಬರಮಾಡಿಕೊಳ್ಳಲು ಮುಂದಾದಾಗ ಅವರು ನಾಚಿ ತಲೆ ತಗ್ಗಿಸಿದರಂತೆ.
ಅವರನ್ನು ಭೇಟಿಯಾಗಲು ಬರುವವರನ್ನು ಮೌಲಾನಾ ಬಹಳ ವಿನಮ್ರವಾಗಿ ನಗುಮುಖದೊಂದಿಗೆ ಬರಮಾಡಿಕೊಂಡು ಮಾತನಾಡಿಸುತ್ತಿದ್ದರು. ಒಮ್ಮೆ ಅವರನ್ನು ಭೇಟಿಯಾದವನು ಭವಿಷ್ಯದಲ್ಲಿ ಅವರ ಅಭಿಮಾನಿಯಾಗಿ ಮಾರ್ಪಡುತ್ತಿದ್ದದ್ದು ಸಾಮಾನ್ಯ. ಒಂದು ಸಂಘಟನೆಯ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿದ್ದರೂ ಆ ಹುದ್ದೆಯಿಂದಾಗಿ ಅವರಲ್ಲಿ ಸ್ವಲ್ಪವೂ ಅಹಂಭಾವ ಇರಲಿಲ್ಲ. ಅವರದ್ದು ಮಾದರಿ ವ್ಯಕ್ತಿತ್ವ. ಸಮುದಾಯ ಸದಸ್ಯರು ಮಾತ್ರವಲ್ಲದೇ ದೇಶ ಬಾಂಧವರೂ ಕೂಡಾ ಮೌಲಾನಾ ಅವರನ್ನು ಹಾಡಿ ಹೊಗುಳತ್ತ ಕೊಂಡಾಡುತ್ತಿದ್ದರು. 1999 ಬೆಂಗಳೂರಿನಲ್ಲಿ ನಡೆದಂತಹ ಜಮಾಅತೆ ಇಸ್ಲಾಮೀ ಹಿಂದ್ ಇದರ ದಕ್ಷಿಣ ಭಾರತ ಸಮ್ಮೇಳದ ಸಂದರ್ಭ ಅದು ನಮ್ಮೂರಿನ ಓರ್ವ ರಾಜಕೀಯ ಮುಖಂಡರೂ ರಾಜ್ಯ ಮಟ್ಟದ ವ್ಯಕ್ತಿಯಾಗಿದ್ದ ಅವರು ಆ ಸಮ್ಮೇಳನದ ಕೊನೆಯ ದಿನದಂದು ವೀಕ್ಷಕರಾಗಿ ಆಗಮಿಸಿದಾಗ ಮೊಟ್ಟ ಮೊದಲೆನೆಯದಾಗಿ ಅವರು“ಮೌಲಾನಾ ಸಿರಾಜುಲ್ ಹಸನ್ ಸಾಹಬ್ ಅವರನ್ನು ನನಗೆ ಭೇಟಿಯಾಗಲಿಕ್ಕಿದೆ ದಯವಿಟ್ಟು ಇದರ ವ್ಯವಸ್ಥೆ ಮಾಡುವಿರಾ” ಎಂದು ಆತ್ಮೀಯವಾಗಿ ವಿನಂತಿಸಿದರು. ನಂತರ ಭೇಟಿಯಾಗಿ ತುಂಬ ಸಂತೋಷವನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ ಸಮ್ಮೇಳನದ ಕೊನೆಯ ದಿನದಂದು ಮೌಲಾನಾ ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ ಓರ್ವ ಹಿರಿಯ ವ್ಯಕ್ತಿ ಎಲ್ಲರ ನಡುವೆ ಎದ್ದುನಿಂತು “ಜಮಾಅತೆ ಇಸ್ಲಾಮೀ ಝಿಂದಾ ಬಾದ್ ಮೌಲಾನಾ ಸಿರಾಜುಲ್ ಹಸನ್ ಝಿಂದಾಬಾದ್” ಎಂದು ಏರು ಧ್ವನಿಯಲ್ಲಿ ಕೂಗಿದ್ದು, ಸಮ್ಮೇಳನದ ಕೊನೆಯಲ್ಲಿ ದುವಾದ ನಂತರ ಸಾವಿರಾರು ಜನರು ಅವರನ್ನು ಭೇಟಿಯಾಗಲು ಮುಗಿಬಿದ್ದರು. ಆ ಸಂದರ್ಭದಲ್ಲಿ ಮೌಲಾನಾ ಸ್ವಲ್ಪವು ವಿಚಲಿತರಾಗದೇ ತಮ್ಮೆಡೆಗೆ ಬರುವ ಒಬ್ಬೊಬ್ಬರನ್ನು ಕೈಕುಲಕುತ್ತಿಲಿದ್ದ ದೃಶ ಇಂದಿಗೂ ಕೂಡಾ ನನ್ನ ಸ್ಮತಿಪಟಲದಲ್ಲಿದೆ.
ಇಂದು ನಮ್ಮಲ್ಲಿನ ಅನೇಕರು ವ್ಯಕ್ತಿತ್ವ ವಿಕಸನ (ಪರ್‍ಸ್ನಾಲಿಟಿ ಡೆವಲಪ್‍ಮೆಂಟ್) ಕುರಿತು ಘಂಟೆಗಟ್ಟಲೆ ಭಾಷಣ ಮಾಡುತ್ತಾ ಜನರನ್ನು ತಮ್ಮಡೆಗೆ ಆಕರ್ಷಿಸುವುದರಲ್ಲಿ ನಿಪುಣರಾಗಿತ್ತಾರೆ, ಆದರೆ ಅವರಲ್ಲಿನ ಹೆಚ್ಚಿನವರ ವೈಯಕ್ತಿಕ ಬದುಕನ್ನು ಅವಲೋಕಿಸಿದಾಗ ಅವರ ಜೀವನ ಹಾಗೂ ಮಾತುಗಳು ತದ್ವಿರುದ್ಧವಾಗಿರುತ್ತವೆ. ಆದರೆ ಮೌಲಾನಾ ಅವರು ತಾವು ಉಪದೇಶಿಸುವ ಪ್ರತಿಯೊಂದು ಮಾತಿನ ಮೇಲೆ ಅನುಸರಣೆ ಮಾಡುವವರಾಗಿರುತ್ತಿದ್ದರು. ಅವರ ಮಾತು ಮತ್ತು ಕೃತಿಯ ನಡುವೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ. ಪವಿತ್ರ ಕುರ್‍ಆನಿನ ಶಿಕ್ಷಣದಂತೆ ಮಾಡದ್ದನ್ನು ಆಡುವುದು ಅವರಿಗೆ ಸ್ವಲ್ಪವು ಇಷ್ಟವಿರಲಿಲ್ಲ. ಮೌಲಾನಾ ಸಂಘಟನಾ ಸಹೋದರರ ವ್ಯಯಕ್ತಿಕ ಬದುಕಿನ ಕುರಿತು ಎಲ್ಲರಿಗಿಂತಲೂ ಹೆಚ್ಚು ತಿಳಿಯುವವರಾಗಿರುತ್ತಿದ್ದರು. ಇತರರಿಗೆ ಸಹಾಯ ಮಾಡುವುದರಲ್ಲಿ ಮೌಲಾನಾ ಅವರದ್ದು ಎತ್ತಿದ ಕೈ, ಗರಿಷ್ಟ ಮಟ್ಟದಲ್ಲಿ ತಾವು ಇತರರಿಗೆ ಉಪಕಾರಿಯಾಗಬೇಕೆಂಬ ತುಡಿತ ಅವರಲ್ಲಿತ್ತು, ತಮ್ಮವರೊಂದಿಗೆ ಅವರು ಎಷ್ಟು ಸಲುಗೆಯಿಂದ ಇರುತ್ತಿದ್ದರೆಂದರೆ ಪ್ರಥವi ಬಾರಿಗೆ ಅವರು ಜಮಾಅತಿನ ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಾಗ ಕರ್ನಾಟದಲ್ಲಿನ ಅನೇಕರು ದೆಹಲಿಯಿಂದ ಮೌಲಾನಾ ಅವರ ಮೂಲಕ ಚಿಕ್ಕ ಪುಟ್ಟ ವಸ್ತುಗಳನ್ನು ಅಲ್ಲಿಂದ ತರಿಸಿಕೊಳ್ಳುತ್ತಿದ್ದರು. ಮೌಲಾನಾ ಅವರು ಕೆಲಸದ ಒತ್ತಡದ ನಡುವೆಯೂ ದೆಹಲಿಯಿಂದ ತವರಿಗೆ ಬಂದಾಗಲೆಲ್ಲ ವಸ್ತುಗಳನ್ನು ಖರೀದಿಸಿ ತಂದು ತಮ್ಮವರಿಗೆ ನೀಡುತ್ತಿದ್ದರೆಂದು ಅವರ ಆಪ್ತ ಮಿತ್ರರೊಬ್ಬರು ಹಂಚಿಕೊಳ್ಳುತ್ತಾರೆ. ಎಲ್ಲಿಯವರೆಗೆಂದರೆ ತಮಾಷೆ ನೋಡಿ, ಒಬ್ಬ ಮಿತ್ರರೂ ತಮ್ಮ ಮಡದಿಗಾಗಿ ದೆಹಲಿಯಿಂದ ಲೇಡಿ ಪರ್ಸ್ ತಂದುಕೊಡುವಂತೆ ಮೌಲಾನಾ ಅವರಲ್ಲಿ ಕೇಳಿಕೊಂಡರಂತೆ, ಜ.ಇ.ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಸಯ್ಯದ್ ತನ್ವೀರ್ ಅಹ್ಮದ್ ಅವರು ಅಂದು ದೆಹಲಿಯಲ್ಲಿ ಎಸ್‍ಐಓ ಇದರ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮೌಲಾನಾ ಅವರ ಆಪ್ತ ಮಿತ್ರರು ಆಗಿದ್ದರು, ಅವರೊಂದಿಗೆ ‘ತನ್ವೀರ್ ಮಿಯಾಂ ನಮ್ಮ ಒಬ್ಬ ಮಿತ್ರನಿಗೆ ಮಾರ್ಕೆಟ್‍ನಲ್ಲಿನ 9ನೇ ನಂಬರ್ ಅಂಗಡಿಯಿಂದ ಪರ್ಸ್ ತಂದು ಕೊಡುವಿರಾ’ ಎಂದು ವಿನಂತಿಸಿದ್ದು ಇಂದಿಗೂ ಕೂಡಾ ಅವರು ನೆನಪಿಸಿಕೊಳ್ಳುತ್ತಾರೆ. ಇದಲ್ಲದೆ ಮಾರ್ಗದಶನ ಮಾಡುವುದರಲ್ಲಿ ಮೌಲಾನಾ ತುಂಬ ಮುಂದಿರುತ್ತಿದ್ದರು, ಉದಾಹರಣೆಗೆ ಆ ಕಾಲ ರೈಲು ಮುಂಗಡ ಪಾವತಿ (ರಿಸರ್ವೆಶನ್), ರೈಲು ಯಾನ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಮೌಲಾನಾ ಅವರಲ್ಲಿ ಈ ಕುರಿತು ಯಾರಾದರೂ ವಿಚಾರಿಸಿದರೆ, ಎಲ್ಲವನ್ನು ಸುಲಭ ರೀತಿಯಲ್ಲಿ ಒಂದೊಂದಾಗಿ ಬಿಡಿಸಿ ವಿವರಿಸುತ್ತಿದ್ದರು. ಇಂತಿಂತಹ ರೈಲು ಈ ಸಮಯದಲ್ಲಿದ್ದು ಅದರಿಂದ ಹೋಗಿ ಅಲ್ಲಿ ಇಳಿದು ಮತ್ತೇ ಇಂತಿಂತಹ ರೈಲು ಸಿಗುವುದು, ದಾರಿ ಮಧ್ಯೆದಲ್ಲಿ ಊಟ ಅಷ್ಟೊಂದು ಸರಿಯಿರುವುದಿಲ್ಲ ಜೊತೆಯಲ್ಲಿ ಏನಾದರೂ ತೆಗೆದುಕೊಂಡು ಹೋಗಿ ಎಂದೆಲ್ಲ ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಿದ್ದರು.
ಭಾಷಣ ಮಾಡುವಾಗ ಅವರ ಒಂದೊಂದು ಮಾತು ಮುತ್ತು ರತ್ನಗಳಂತಿರುತ್ತಿದ್ದವು, ಕೆಲವು ನುಡಿಮಾತುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. “ ಅಲ್ಲಾಹನ ಪ್ರವಾದಿಯ ಸೀರತ್ ಸಂಜೆ ಇಲ್ಲದ ನಿರಂತರ ಮುಂಜಾನೆಯೇ ಆಗಿದೆ.” ಗೋಡೆಗಳಾಗದೇ ಜನರಿಗೆ ನಾವು ದ್ವಾರಗಳಾಗಬೇಕು”, “ಕಿರಿಯರ ಯಶಸ್ಸನ್ನು ಕಂಡು ಹಿರಿಯರು ಸಂತೋಷಪಡಬೇಕು”. “ನಾವು ಕಟ್ಟಡಗಳನ್ನಲ್ಲ ವ್ಯಕ್ತಿಗಳನ್ನು ನಿರ್ಮಿಸುವ ಕೆಲಸ ಮಾಡಬೇಕು” “ಅಂತರಂಗದಲ್ಲಿ ಶಾಂತಿ ಇದ್ದರೆ ಮಾತ್ರ ಬಹಿರಂಗದಲ್ಲಿ ಶಾಂತಿ ನೆಲೆಸುವುದು”. ಹುಬ್ಬಳ್ಳಿಯಲ್ಲಿ ಜರುಗಿದ ಒಂದು ತರಬೇತಿ ಕಾರ್ಯಕ್ರಮದಲ್ಲಿ “ಜನರು ಅಲ್ಲಾಹನ ನಿಕಟ ದಾಸರೊಂದಿಗೆ ಅಂಟಿಕೊಳ್ಳುತ್ತಾರಾದರೂ ಕೆಲವೊಮ್ಮೆ ಅಲ್ಲಾಹನಿಂದ ದೂರವಾಗುತ್ತಾರೆ” . ಕಳೆದ 30 ವರ್ಷಗಳ ಹಿಂದಿನ ಮಾತು ಓರ್ವ ವಿದ್ಯಾವಂತ ಯುವಕ ಮೌಲಾನಾ ಅವರ ಜೊತೆ ನಮಾಝ್ ನಿರ್ವಹಿಸಿದಾಗ ಹೊರಗೆ ಬಂದು ಹೇಳಿದ್ದು. “ಇಂದು ನಾನು ಪ್ರಸಕ್ತ ಕಾಲದ ಗುರು(ವಲಿ)ಯ ಪಕ್ಕದಲ್ಲಿ ನಿಂತು ನಮಾಝ್ ಮಾಡಿದ ಖುಷಿಯಿದೆ ಎಂದು ಅಭಿಮಾನದಿಂದ ಹೇಳಿಕೊಂಡರು.”
ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ ಸಾಹಬ್ ಸೇವೆಯನ್ನು ಸ್ವೀಕರಿಸಿ ಅಲ್ಲಾಹನು ಅವರಿಗೆ ಸ್ವರ್ಗದ ಅತ್ಯುನ್ನತ ಸ್ಥಾನ ಜನ್ನತುಲ್ ಫಿರ್ದೋಸ್ ದಯಪಾಲಿಸಲಿ. ಅವರ ಕುಟುಂಬದವರಿಗೆ ಸಹನೆ ಸ್ಥೈರ್ಯವನ್ನು ನೀಡಲಿ. ಆಮೀನ್.

LEAVE A REPLY

Please enter your comment!
Please enter your name here