ಲೇಖಕರು : ಎಮ್ಮೆಸ್ಕೆ, ಬೆಂಗಳೂರು

ನಾಲ್ಕು ಮಂದಿಯ ಚಪ್ಪಾಳೆಗೆ ಖುಷಿಗೊಂಡು ಮತ್ತೆ ಮತ್ತೆ ತಮ್ಮ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಗೆಯನ್ನು ಮುಂದುವರೆಸುವ, ಅದರಲ್ಲಿ ಹೊಸತನ್ನು ಸೃಷ್ಟಿಸುವ ಹಲವಾರು ಹೊಸ ತಲೆಮಾರಿನ ಯುವಕ ಯುವತಿಯರಿದ್ದಾರೆ. ಮೊನ್ನೆ ಮೊನ್ನೆ ಸುದ್ದಿಯಾದ ಅಮೂಲ್ಯ ಎಂಬ ಹುಡುಗಿಯೂ ಇದೇ ರೀತಿಯ ಹೆಣ್ಣು ಮಗಳು. ಅತಿರೇಕದ, ಆವೇಶದ, ಆಕ್ರೋಶದ ಮಾತುಗಳು ಹಿಡಿತಕ್ಕೆ ಸಿಗದಂತೆ ಹಲವರ ಬಾಯಿಯಿಂದ ಹೊರಬರುತ್ತಿರುವುದು ಇತ್ತೀಚೆಗೆ ಸಾಮಾನ್ಯ ಅನಿಸಿಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಎಂಬುದನ್ನು ಬದಿಗಿಟ್ಟು, ಇಂತಹ ಮಾತುಗಳನ್ನು ಸ್ವೀಕರಿಸುವ ಮಟ್ಟಕ್ಕೆ ಜನಸಾಮಾನ್ಯರ ಮನಸ್ಥಿತಿ ಇಳಿದುಬಿಟ್ಟಿದೆ. 
ಹಿಂದಣ ಹೆಜ್ಜೆಯನ್ನು ಗಮನಿಸಿದರೆ, ಭಾರತದಲ್ಲಿ, ನಮ್ಮ ರಾಜ್ಯದಲ್ಲಿ ಮಾತು, ಮಾತಿನಲ್ಲಿ ಬಳಕೆಯಾಗುತ್ತಿದ್ದ ಭಾಷೆ, ಸಭ್ಯತೆ, ಶಿಸ್ತು, ಆಲಿಸುವ ಜನರ ಮನಸ್ಥಿತಿ ಎಲ್ಲವೂ ಒಂದು ಹಂತದ ಹಿಡಿತದಲ್ಲಿ ಆರೋಗ್ಯಕರ ನೆಲೆಯಲ್ಲಿದ್ದವು. ಇದನ್ನು ಈಗಿನ ತಲೆಮಾರು ಅನುಭವಿಸುವುದು ಕಷ್ಟ. ಅಪರೂಪಕ್ಕೆ ಯೂಟ್ಯೂಬ್ ನಲ್ಲಿ ಸಿಗುವ ಹಿಂದಿನ ರಾಜಕೀಯ ನಾಯಕರ, ಮೇಧಾವಿಗಳ ಭಾಷಣಗಳನ್ನು ಕೇಳಲು ಹೊರಟರೆ ಇಂದಿನ ಗದ್ದಲದ ನಡುವೆ ಒಂದು ರೀತಿಯ ನಿರಾಳತೆ ಖಂಡಿತಾ ಸಿಗಬಹುದು. ಭಾಷೆ ಏಕೆ ಇಷ್ಟು ಕಲುಷಿತಗೊಳ್ಳುತ್ತಿದೆ ಎನ್ನುವ ಆತಂಕಕಾರಿ ಪ್ರಶ್ನೆ ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನೂ ಕಾಡುತ್ತಿಲ್ಲ ಎಂಬುದೇ ಅಪಾಯಕಾರಿ ಅನಿಸುತ್ತಿದೆ. 
ಇತ್ತೀಚೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾತಿನ ಮೇಲಿನ ಹಿಡಿತ, ತಾಳ್ಮೆ ಭಾಷೆಯ ಬಳಕೆ ಕುರಿತು ಸದನದಲ್ಲಿ ಕೆಲವು ಸಚಿವರಿಗೆ, ಶಾಸಕರಿಗೆ ಪಾಠ ಹೇಳಿದ್ದನ್ನು ಯೂಟ್ಯೂಬ್ ನಲ್ಲಿ ನೋಡಿದೆ. ನಿಜಕ್ಕೂ ಯುವ ರಾಜಕಾರಣಿಗಳು ರಮೇಶ್ ಕುಮಾರ್ ಅವರ ಮಾತುಗಳನ್ನು ಮತ್ತೆ ಮತ್ತೆ ಗಮನವಿಟ್ಟು ಕೇಳಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಸಭ್ಯತೆ, ಶಿಸ್ತಿನ ವಿಚಾರದಲ್ಲಿ ರಮೇಶ್ ಕುಮಾರ್ ಅವರನ್ನು ಅನುಸರಿಸಿದರೇ ಒಬ್ಬ ಉತ್ತಮ, ಮಾದರಿ ರಾಜಕಾರಣಿಯಾಗಿ ಬೆಳೆಯಬಹುದು ಎನ್ನುವಷ್ಟು ಸುಂದರ ನಡೆಯನ್ನು ಅವರು ಹೊಂದಿದ್ದಾರೆ. 
ಅದೆಲ್ಲ ಇರಲಿ. ಈಗ ಚರ್ಚೆಯಲ್ಲಿರುವ ಅಮೂಲ್ಯ ಎಂಬ ಹುಡುಗಿಯ ವಿಚಾರಕ್ಕೆ ಬರೋಣ. ಹದಿನೇಳೋ ಹದಿನೆಂಟೋ ವಯಸ್ಸಿನ ಈ ಹುಡುಗಿ ಇದ್ದಕ್ಕಿದ್ದಂತೆ ಸಿಎಎ ವಿರೋಧಿ ಪ್ರತಿಭಟನಾ ಸಭೆಗಳಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದಾಗ ಪ್ರತಿಭಟನೆಯಲ್ಲಿ ಸೇರಿದ್ದವರಿಗೆಲ್ಲ‌ ಬಹಳ‌ ಖುಷಿಯಾಯಿತು. ಶಿಳ್ಳೆ,ಚಪ್ಪಾಳೆ ಉದ್ಗಾರದ ಧ್ವನಿ ಅಮೂಲ್ಯಳಲ್ಲಿ ಇನ್ನಷ್ಟು ಸ್ಪೂರ್ತಿ ತುಂಬಿದ್ದು ಸುಳ್ಳಲ್ಲ. ದಿನದಿಂದ ದಿನಕ್ಕೆ ಪ್ರತಿಭಟನೆಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತ ಇದೇ ಮಾದರಿಯನ್ನು ಮುಂದುವರೆಸಿಕೊಂಡು, ಶಾ-ಮೋದಿ ಅವರನ್ನೂ ಜರೆಯುತ್ತ, ವಾಕ್ ಸ್ವಾತಂತ್ರ್ಯದ ನೆಪದಲ್ಲಿ ತನಗೆ ಬೇಕಾದ ಹಾಗೆ ಮಾತಾಡತೊಡಗಿದ್ದ ಈ ಹುಡುಗಿಗೆ ತನ್ನ ಅತಿರೇಕದ ಹೆಜ್ಜೆಯನ್ನು ತಪ್ಪು ಅಥವಾ ಇದು ಸರಿಯಲ್ಲ ಎಂದು ಯಾರೂ ಹೇಳಿಕೊಡಲು ಮುಂದೆ ಬಂದಿಲ್ಲ. ಹಲವು ಹಿರಿಯರು ತಮ್ಮಲ್ಲೇ ಗೊಣಗಿರಬಹುದು, ಇನ್ನೊಬ್ಬರ ಬಳಿ ಹೇಳಿರಬಹುದು.‌ ಆದರೆ ನೇರವಾಗಿ ಅಮೂಲ್ಯ ಬಳಿ ಹಾಗೆ ಯಾರೂ ಹೇಳಿರಲಿಕ್ಕಿಲ್ಲ ಎಂದನಿಸುತ್ತದೆ. 
ಈಗಿನ ತಲೆಮಾರಿನ ದೊಡ್ಡ ಸಮಸ್ಯೆ ಎಂದರೆ ಥಟ್ಟೆಂದು ಎಲ್ಲವನ್ನೂ ಪಡೆಯುವ ವ್ಯಾಮೋಹ. ಎಲ್ಲವನ್ನೂ ಅಂದರೆ, ಆರಂಭದಲ್ಲಿ ಈ ಹುಚ್ಚು ಕೇವಲ,‌ಹಣ ಸಂಪಾದನೆ, ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಬಗೆಗಿನ ವಿಚಾರಗಳ ವಲಯದಲ್ಲಿತ್ತು. ಆದರೆ ಇದು ಹೆಚ್ಚು ಅಪಾಯಕಾರಿ ಬೆಳವಣಿಗೆಯಾಗಿ ಕಾಣಿಸಿದ್ದು ಈಗೀಗ. ಡಾ.ಕನ್ಹಯ್ಯಾ ಮಾತನಾಡುವ ಶೈಲಿ, ಆತನಲ್ಲಿರುವ ಅಗಾಧವಾದ ಜ್ಞಾನ ಮತ್ತು ಆ ಜ್ಞಾನದ ಮೂಲಕವೇ ಎಂತಹ ಎದುರಾಳಿ ವಾದಿಗಳನ್ನು ಸಲೀಸಾಗಿ ಸೋಲಿಸಬಲ್ಲ ಅದ್ಭುತ ಸಾಮರ್ಥ್ಯ ಬಹಳಷ್ಟು ಜನರನ್ನು ಸೆಳೆದಿದೆ. ಕನ್ಹಯ್ಯಾನಲ್ಲಿರುವ ಜ್ಞಾನ ಮೇಲ್ನೋಟಕ್ಕೆ ಗಿಟ್ಟಿಸಿಕೊಂಡ ಜ್ಞಾನವಲ್ಲ, ಕನ್ಹಯ್ಯಾನ ಮಾತುಗಳೂ ಕೂಡ ಬೀಸು ಹೇಳಿಕೆಗಳಲ್ಲ. ಇದಕ್ಕೆ ಕಾರಣ ಆತನ ಆಳವಾದ ಅಧ್ಯಯನ. ಆದರೆ ಇದನ್ನು ಅರ್ಥಮಾಡಿಕೊಳ್ಳುವಷ್ಟು ತಾಳ್ಮೆ ಈ ಯುವಜನತೆಯಲ್ಲಿಲ್ಲ.‌ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕನ್ಹಯ್ಯಾನಂತಹ ಯುವ ಮನಸ್ಸುಗಳು ಸಂವಿಧಾನದ ಬಗ್ಗೆ, ರಾಜಕೀಯದ ಬಗ್ಗೆ, ಇತಿಹಾಸಗಳ‌ ಆಧಾರದೊಂದಿಗೆ ಮಾತನಾಡುವ ಬಗೆಯನ್ನು ಕಂಡು ಈ ಯುವಜನರು ತಮಗೂ ಹೀಗೇ ಮಾತನಾಡಲು ಜ್ಞಾನ‌ ಬೇಕು ಎಂದು ಹಂಬಲಿಸುತ್ತಾರೆ. ಆದರೆ ಕನ್ಹಯ್ಯಾನಂತೆ ದೀರ್ಘವಾಗಿ ಅಧ್ಯಯನ ಮಾಡಿಕೊಂಡು ಕೂತರೆ ವರ್ಷಗಳು ಬೇಕಾಗುತ್ತವೆ. ಅಷ್ಟೊತ್ತಿಗೆ ಇಂತಹ ವಾತಾವರಣ ಇರಲಿಕ್ಕಿಲ್ಲ. ಆಗ ತಾವು ಸಮಾಜದಲ್ಲಿ ಪ್ರಸಿದ್ಧಿ ಪಡೆಯಲಿಕ್ಕಿಲ್ಲ ಎಂಬಂತಹ ಸಂಕುಚಿತ ಆಲೋಚನೆ ಹಲವು ಯುವಕ ಯುವತಿಯರ ಮನಸ್ಸಿನಲ್ಲಿದೆ. ಹತ್ತೇ ದಿನದಲ್ಲಿ ಶ್ರೀಮಂತರಾಗಿ ಎಂಬ ಹೆಸರಿನ ಪುಸ್ತಕ ನೋಡಿ ಆಕರ್ಷಿತರಾದಂತೆ, ಕಡಿಮೆ ಅವಧಿಯಲ್ಲಿ ಜ್ಞಾನವಂತರಾಗಿ ಎಂಬ ಆಯ್ಕೆಯನ್ನು ತಮಗೆ ತಾವೇ ಮಾಡಿಕೊಂಡಂತಿದೆ. 
ಅಮೂಲ್ಯ ಏನು ಹೇಳಲು ಹೊರಟಿದ್ದಳು ಎಂಬುದು ಆ ವಿಡಿಯೊವನ್ನು ಸ್ವಲ್ಪ ಹೊತ್ತು ಸ್ಪಷ್ಟವಾಗಿ ಎಂಥವರಿಗೂ ಖಂಡಿತಾ ಅರ್ಥವಾಗುತ್ತದೆ. ಈ ಸುದ್ದಿಯನ್ನು ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಸುದ್ದಿ ಮಾಡುವ ಅವಿವೇಕಿತನದ ಹಿಂದೆ ದೊಡ್ಡ ರಾಜಕೀಯ ಇರುವುದನ್ನು ಅಲ್ಲಗಳೆಯಲಾಗದು. ಬೆಂಗಳೂರಿನಲ್ಲಿ ಸಿಎಎ ಪ್ರತಿಭಟನೆಗೆ ಅವಕಾಶ ನೀಡದಂತೆ ಸೂಚನೆ ನೀಡುವ ಮೂಲಕ ಆ ರಾಜಕೀಯದ ಪರಿಣಾಮ ಅಥವಾ ಪ್ರತಿಫಲನ ಈಗಾಗಲೇ ಕಾಣಿಸಿಯೂ ಆಗಿದೆ. ಅಮೂಲ್ಯ ನಾಲ್ಕು ಬಾರಿ ಪಾಕಿಸ್ತಾನಕ್ಕೆ, ನಾಲ್ಕು ಬಾರಿ ಹಿಂದೂಸ್ತಾನಕ್ಕೆ ಜಿಂದಾಬಾದ್ ಹೇಳಿ, ಅದರಲ್ಲಿ ಯಾವ ಜಿಂದಾಬಾದ್ ಗೆ ಪ್ರತಿಭಟನಾಕಾರರು ಹೆಚ್ಚು ದನಿಗೂಡಿಸುತ್ತಾರೆ ಎಂಬುವುದನ್ನು- ಅಂದರೆ ನಾವು ಹಿಂದೂಸ್ತಾನಕ್ಕೆ ಜಿಂದಾಬಾದ್ ಹೇಳುವವರೇ ಹೊರತು ಪಾಕಿಸ್ತಾನಕ್ಕೆ ಅಲ್ಲ ಎಂಬ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡಲು ಹೊರಟಿದ್ದವಳು. ಆದರೆ ಅಸಾದುದ್ದೀನ್ ಒವೈಸಿ ಈ ಹುಡುಗಿಯ ಉದ್ದೇಶ ಅರ್ಥವಾಗಲಿಲ್ಲ. ಒವೈಸಿ ಗಾಬರಿಯಾಗಿದ್ದನ್ನು ಕಂಡು ಸಂಘಟಕರೂ ಇದನ್ನು ಗಂಭೀರವಾಗಿಸಿ ಅಮೂಲ್ಯಳ ಕೈಯಿಂದ ಮೈಕ್ ಕಿತ್ತು, ಅವಳನ್ನು ಗದರಿಸಿ, ಎಳೆದಾಡಿದರು! ಆ ಹೆಣ್ಣುಮಗಳನ್ನು ಅವರು ಕೊನೆಯ ಕ್ಷಣ ನಡೆಸಿಕೊಂಡ ರೀತಿಯನ್ನು ಖಂಡಿತವಾಗಿಯೂ ನಾನು ಖಂಡಿಸುತ್ತೇನೆ. ಆ ರೀತಿಯ ದುರ್ವರ್ತನೆ ತೋರುವ ಅಗತ್ಯವೇ ಇರಲಿಲ್ಲ. ಅರ್ಧ ಮಾತಿಗೆ ಮೈಕ್ ಕಿತ್ತುಕೊಂಡು ಸಮಾಜಕ್ಕೆ ಆ ಹುಡುಗಿಯ ಹೇಳಿಕೆಯ ಕುರಿತು ತಪ್ಪು ಸಂದೇಶ ಕೊಟ್ಟಿರುವುದು ಈ ಸಂಘಟಕರೇ. ಅಮೂಲ್ಯ ತನ್ನ ಮಾತನ್ನು ಪೂರ್ತಿಗೊಳಿಸಿದ್ದಿದ್ದರೆ ಅದು ತಪ್ಪು ಭಾವನೆ ಉಂಟು ಮಾಡಲು ಸಾಧ್ಯವಿರಲಿಲ್ಲ.‌ 
ಆದರೆ, ಇನ್ನೊಂದು ಅಂಶವನ್ನು ಗಮನಿಸಬೇಕು. ಅದು ಅಮೂಲ್ಯ ದೇಶಭಕ್ತಿ ಯಾರಿಗೆ ಹೆಚ್ಚು ಯಾರಿಗೆ ಕಡಿಮೆ ಅಥವಾ ಪ್ರತಿಭಟಿಸುವವರಿಗೆ ದೇಶಭಕ್ತಿ ಹೆಚ್ಚು ಇದೆ ಎಂದು ತೋರಿಸಿಕೊಡಲು ಆಯ್ಕೆ ಮಾಡಿಕೊಂಡ ವಿಷಯ.‌ ಎರಡು ದೇಶಗಳ ಹೆಸರಿನಲ್ಲಿ ಜಿಂದಾಬಾದ್ ಹೇಳಿ ದೇಶಭಕ್ತಿಯನ್ನು ಲೆಕ್ಕ ಹಾಕುವಷ್ಟು ಗತಿಕೆಟ್ಟ ಪರಿಸ್ಥಿತಿ ನಮಗಿದೆಯೇ? ಈ ಪರಿಸ್ಥಿತಿಯನ್ನು ಬದಿಗಿಡಿ. ಆದರೆ ನಾವು ಈ ತಲೆಮಾರಿಗೆ ಯಾವ ಭಾಷೆಯನ್ನು ಕಲಿಸಿಕೊಡುತ್ತಿದ್ದೇವೆ ಎಂಬುದರ ಪರಿವೆ ಇಲ್ಲದಾಗಿದೆಯಲ್ಲ, ಅದು ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಅಪಾಯ. ಆ ಹುಡುಗಿಗೆ ಬೇರೆ ಭಾಷೆ ಗೊತ್ತಿಲ್ಲ. ಭಾಷೆ ಕಲುಷಿತಗೊಂಡಿದೆ. ನಾವು ಏನನ್ನೋ ಹೇಳಲು ಯಾವುದೋ ರಮದಾರಿ ಹುಡುಕುತ್ತಿದ್ದೇವೆ. ಕಾರಣ ಬೇರೆ ದಾರಿಗಳಿಲ್ಲ. ಹಿಂದೂ- ಮುಸ್ಲಿಂ ಸೌಹಾರ್ದವನ್ನು ಎತ್ತಿ ಹಿಡಿಯಲು, ಉರೂಸಿನಲ್ಲಿ ಹಿಂದೂಗಳು ಪಾನೀಯ ವಿತರಿಸಿದ್ದನ್ನು, ಗಣೇಶೋತ್ಸವಕ್ಕೆ ಮುಸ್ಲಿಮರು ಪಾನೀಯ ವಿತರಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ. ಇದು ನನ್ನ ಭಾರತ ಎಂದು ತಲೆಬರಹ ನೀಡುತ್ತೇವೆ. ಪತ್ರಿಕೆಗಳೂ ಇವನ್ನೇ ಮುಖ್ಯ ಸುದ್ದಿ ಮಾಡುತ್ತವೆ. ಆದರೆ ಒಂದೆರಡು ದಶಕದ ಹಿಂದೆ ಇದು ಇಲ್ಲಿನ ಜನರ ಬದುಕಿನ, ಸಾಮಾನ್ಯ ಎಂದರೆ ತೀರಾ ಸಾಮಾನ್ಯವಾದ ಚಿತ್ರಣವಾಗಿತ್ತು ಎನ್ನುವುದನ್ನು ನಾವು ನಮಗೆ ಗೊತ್ತಿಲ್ಲದೇ ಮರೆಯಾಗಿಸುತ್ತಿದ್ದೇವೆ. ತೋರಿಕೆಯ ಸೌಹಾರ್ದದ, ದೇಶಪ್ರೇಮದ ಭಾಷೆಗಳು ಮುನ್ನೆಲೆಗೆ ಬರುತ್ತಿವೆ. ಸಹಜವಾದ ಭಾಷೆ ನಾಶವಾಗಿ ಹೋಗಿರುವುದರಿಂದ ಈ ಅಪಾಯ ನಮ್ಮ ಮುಂದೆ ಬಂದು ನಿಂತಿದೆ. ಇದು ಅಪಾಯವೂ ಹೌದು, ಸವಾಲೂ ಹೌದು. ಹೆಚ್ಚು ಓದಿಕೊಂಡಿರುವ, ಸಮಾಜಮುಖೀ  ಚಿಂತನೆಗಳನ್ನೇ ಹೊಂದಿರುವ ಈ ತಲೆಮಾರಿನವರ ಮಾತುಗಳನ್ನು ಕೇಳಿ. ಅವರಾಡುವುದು ಇದೇ ಮಾದರಿಯ ಮಾತುಗಳು. ಈ ಸುಳಿಯಲ್ಲಿ ಎಲ್ಲರೂ ಸಿಕ್ಕಿಬಿಟ್ಟಿದ್ದಾರೆ. ಸಹಜ ಸೌಹರ್ದತೆಯನ್ನು ಕಾಣುವಾಗ ನಮಗೆ ಸುಮ್ಮನಿರಲಿಕ್ಕೆ ಆಗುವುದಿಲ್ಲ. ಯಾರೋ ಒಬ್ಬರು ಸ್ವಾಮೀಜಿ, ಇನ್ನೊಬ್ಬರು ಉಸ್ತಾದರು ಒಟ್ಟೊಟ್ಟಿಗೆ ಕುಳಿತು ಊಟ ಮಾಡಿದರೆ, ಅವರ ಫೋಟೋ ಕ್ಲಿಕ್ಕಿಸಿ, ‘ಇದು ನನ್ನ ಭಾರತ’ ಎಂದು ಶೀರ್ಷಿಕೆ ಕೊಟ್ಟು ಫೇಸ್ ಬುಕ್‌ ನಲ್ಲಿ ಹಂಚಲಾಗುತ್ತದೆ. ಈ ದುರಂತ, ಭ್ರಾಮಕ ಜಗತ್ತಿನಿಂದ ಹೊರಬರುವುದಕ್ಕೆ ನಾವು ದಾರಿ ಕಂಡುಕೊಳ್ಳಬೇಕಿದೆ. 
ಇಂತಹ ‘ಭಾಷೆಯಿಲ್ಲದ ಭಾಷೆ’ ಏಕೆ ಅಪಾಯಕಾರಿ ಎಂದರೆ, ಈ ತಲೆಮಾರು ಈ ಕೃತಕ ಭಾಷೆ, ಭಾವನೆಗಳನ್ನು ಬಳಸಿಕೊಂಡು ಭವಿಷ್ಯವನ್ನು ಸೃಷ್ಟಿಸಲು ಹೊರಡುತ್ತದೆ‌. ಈ ಭವಿಷ್ಯ ನಮ್ಮ ಮುಂದಿನ ಭಾರತದ ಭವಿಷ್ಯವಾದರೆ ಅದರ ಪರಿಣಾಮವನ್ನು ನಾವೇ ಅನುಭವಿಸಬೇಕು. ಭಾಷಣ ಸ್ಪರ್ಧೆಗಳನ್ನು ಶಾಲೆ ಕಾಲೇಜುಗಳಲ್ಲಿ ಮಾಡಲಾಗುತ್ತದೆ. ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಕ್ಕೆ ಭಾಷಣ ಸ್ಪರ್ಧೆ ಇದ್ದೇ ಇರುತ್ತದೆ. ಅದರಲ್ಲಿ ಒಬ್ಬರಾದರೂ ಚಕ್ರವರ್ತಿ ಸೂಲಿಬೆಲೆಯ ಧಾಟಿಯಲ್ಲಿ ಭಾಷಣ ಮಾಡುವವರು ಇದ್ದೇ ಇರುತ್ತಾರೆ‌. ಈ ಧಾಟಿ ಅಪಾಯಕಾರಿ ಎಂಬುವುದನ್ನು ಹೇಳಿಕೊಡುವುದಾದರೂ ಹೇಗೆ? ಸೂಲಿಬೆಲೆಯ ಧಾಟಿಯಲ್ಲಿ ಅತಿ ಸುಂದರವಾದ ಸುಳ್ಳುಗಳನ್ನು ಹೇಳಲು ಸಾಧ್ಯ. ಇತಿಹಾಸವನ್ನು ತಿರುಚಿ ಹೇಳಿದರೂ ಜನರು ಸಂತೋಷದಿಂದ ತಲೆದೂಗಬಲ್ಲ ಧಾಟಿ ಅದು. ಬೆಳೆಯುವ ಭಾಷಣಕಾರರು ಸೂಲಿಬೆಲೆ, ಅರ್ನಾಬ್ ಗೋಸ್ವಾಮಿಯಂಥವರ ಮಾತಿನ ಶೈಲಿಯನ್ನು ಅನುಸರಿಸಿಕೊಂಡು ಮಾತನಾಡಲು ಶುರುವಿಟ್ಟರೆ ನಮ್ಮ ಭವ್ಯ ಭಾರತ ಮುಂದೆ ‘ಬೊಗಳೆ ಭಾರತ’ ವಾಗುವುದರಲ್ಲಿ ಅನುಮಾನವಿಲ್ಲ. ಈ ಹಿಂದೆಯೇ ನಾನು ಹೇಳಿದ ಹಾಗೆ, ಕನ್ಹಯ್ಯಾನ ಹಾದಿಯಲ್ಲಿ ಮಾತನಾಡಲು ಪ್ರಯತ್ನಪಡುವ ಯುವಕ ಯುವತಿಯರ ಗುಂಪು ಸೋಲುವುದು ಏಕೆಂದರೆ ಕನ್ಹಯ್ಯಾನ ಮಾತುಗಳಲ್ಲಿ ಅಪಾರ ಜ್ಞಾನದ ತೂಕ ಇರುತ್ತದೆ. ಅದನ್ನು ಇವರಿಗೆ ತಮ್ಮ ಮಾತುಗಳಲ್ಲಿ ತುಂಬಿಸಲು ಸುಲಭ ಸಾಧ್ಯವಲ್ಲ. ಆದರೆ ಸೂಲಿಬೆಲೆಯ ಧಾಟಿಯಲ್ಲಿ ಮಾತನಾಡುವವರಿಗೆ ಹೆಚ್ಚು ಜ್ಞಾನ ಬೇಕೆಂದೇ ಇಲ್ಲ‌. ಸ್ವಾಮಿ ವಿವೇಕಾನಂದರ ನಾಲ್ಕು ಹೇಳಿಕೆಗಳು ಕಂಠಪಾಠವಾಗಿದ್ದರೆ ಸಾಕು! ಇಂಥ ಭಾಷಣಕಾರರನ್ನು ಕಣ್ಣಾರೆ ಕಂಡು, ಕಿವಿಯಾರೆ ಆಲಿಸಿದ್ದರಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ಸುಖಾಸುಮ್ಮನೆ ವಿದ್ಯಾರ್ಥಿಗಳ‌ ಭಾಷಣಗಳನ್ನು ಮೆಚ್ಚಿ ಬೆನ್ನು ತಟ್ಟಬೇಡಿ. ದಯವಿಟ್ಟು ಅವರನ್ನು ತಿದ್ದಿ. ಸರಿಯಲ್ಲ ಎಂಬುವುದನ್ನು ಸರಿಯಲ್ಲ ಎಂದೇ ಹೇಳಿ. ಆತ್ಮವಂಚನೆ ಮಾಡಬೇಡಿ. ಇದರಿಂದ ಅವರೂ ನಿರ್ದಾಕ್ಷಿಣ್ಯವಾಗಿ ಅಭಿಪ್ರಾಯಿಸುವ ಒಂದು ಮಾದರಿಯನ್ನು ಕಲಿಯುತ್ತಾರೆ‌. ಅಮೂಲ್ಯಳಿಗೆ ಯಾರಾದರೂ ಮೊದಲೇ ಗಟ್ಟಿಯಾಗಿ ಇಂತಹ ಅಭಿಪ್ರಾಯ ಹೇಳಿದ್ದಿದ್ದರೆ ಇಂದು ಇಂತಹ ಅಹಿತಕರ ಘಟನೆ ಸಂಭವಿಸುತ್ತಿರಲಿಲ್ಲ. ನಮ್ಮ ನಾಳೆಯ ಭಾರತ ಹೀಗಾಗದಿರಲಿ‌ ಎಂಬ ಆತಂಕ, ಸಂಕಟ, ಕಾಳಜಿಯಷ್ಟೇ ಈ ಬರಹದ ಉದ್ದೇಶ. 

LEAVE A REPLY

Please enter your comment!
Please enter your name here