ಶಿಕ್ರಾನ್ ಶರ್ಫುದ್ದೀನ್ ಎಂ ಮಂಗಳೂರು

Lives of great men all remind us We can make our lives sublime, And, departing, leave behind us Footprints on the sands of time; – Henry Wadsworth Longfellow

ನಾನು ಬಿ.ಎಸ್ಸಿ ವ್ಯಾಸಂಗಕ್ಕಾಗಿ ಭಂಡಾರ ಕಾರ್ಸ್ ಕಾಲೇಜು ಸೇರುವರೆಗೆ, ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಯಾರೆಂದು ತಿಳಿದಿರಲಿಲ್ಲ. ಕಾಲೇಜಿನಲ್ಲಿ ಪ್ರತಿ ಬುಧವಾರ ನಡೆಯುತ್ತಿದ್ದ ಪಠ್ಯೇತರ ಚಟುವಟಿಕೆಯ ಕ್ಲಾಸಿನಲ್ಲಿ ನಮ್ಮ ಗುರುಗಳಾದ ಹಯವದನ ಸರ್ ಅವರು ನಮಗೆ ಹಲವಾರು ಹಿರಿಯ ಸಾಹಿತಿಗಳನ್ನು ಪರಿಚಯಿಸುತ್ತಿದ್ದರು. ಇಲ್ಲಿಯೇ, ನನಗೆ ಕಾರ್ನಾಡರ ಪರಿಚಯವಾದದ್ದು; ತದನಂತರ, ಕಾರ್ನಾಡರನ್ನು ಓದಿ, ಅಧ್ಯಯನಿಸಿ, ಪ್ರಭಾವಿತನಾಗಿ ಅವರ ಅಭಿಮಾನಿಯಾದೆ! ಇವತ್ತು ಈ ಜ್ಞಾನ ದಿಗ್ಗಜರು ಇಹಲೋಕ ತ್ಯಜಿಸಿ ಪರಲೋಕಕ್ಕೆ ಪಾದಾರ್ಪಣೆಗೈದು ಎರಡು ವರುಷಗಳು ಕಳೆದಿದೆ. ಶ್ರೀಯುತರ ಬದುಕು-ಸಾಧನೆಗಳು ನಮಗೆಲ್ಲರಿಗೂ ಆದರ್ಶವಾಗಲಿ ಎಂದು ಆಶಿಸುತ್ತಾ, ಕಾರ್ನಾಡರ ಸಾಧನೆಗಳನ್ನು ಪರಿಚಯಿಸುತ್ತ ಈ ಲೇಖನವನ್ನು ಬರೆದಿದ್ದೇನೆ.

ಕಾರ್ನಾಡರು ಮೇ 19, 1938 ರಂದು ಮಥೆರಾನಿನಲ್ಲಿ ರಘುನಾಥರಾಯರು – ಕೃಷ್ಣಾಬಾಯಿ ಅವರಿಗೆ ಜನಿಸಿದರು. ಬೆಳೆಯೋ ಪೈರು ಮೊಳಕೆಲೇ ನೋಡೋ ಎಂದು ನಾಣ್ನುಡಿ ಹೇಳಿದಂತೆ, ಕಾರ್ನಾಡರು ಬಾಲ್ಯದಲ್ಲೇ ತಮ್ಮ ಅಪ್ರತಿಮ ಪ್ರತಿಭೆ-ಜಾಣ್ಮೆಗಳನ್ನು ಪ್ರದರ್ಶಿಸತೊಡಗಿದರು. ಒಬ್ಬರು ಕಾಲೇಜು ವಿದ್ಯಾರ್ಥಿಯಾದಾಗ, ಅಂತಾರಾಷ್ಟ್ರೀಯ ಕವಿಗಳ ಭಾವಚಿತ್ರಗಳನ್ನು ಬಿಡಿಸಿ ಅವರ ಆಟೋಗ್ರಾಫ್ ಪಡೆಯುತ್ತಿದ್ದರು. ಮುಂದೆ ಧಾರ್ವಾಡ ವಿ.ವಿ ಯಲ್ಲಿ ಪ್ರಥಮ ಸ್ಥಾನಗೈದು ರೋಡ್ಸ್ ವಿದ್ಯಾರ್ಥಿವೇತನ ಪಡೆದು ಆಕ್ಸ್ಫರ್ಡ್ ವಿ.ವಿ ಪ್ರವೇಶಿಸಿದರು. ಇವರ ಚುರುಕುತನಕ್ಕೆ ಬುದ್ಧಿವಂತಿಕೆಗೆ ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕಿಸಿದರು. ಆಕ್ಸ್ಫರ್ಡ್ ವ್ಯಾಸಂಗ ಪೂರೈಸಿ ಭಾರತಕ್ಕೆ ಮರಳಿ, ಮದ್ರಾಸಿನ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ಸ್ ನಲ್ಲಿ ಮುಖ್ಯಸ್ಥರಾದರು.

ಕನ್ನಡ ನಾಟಕ ರಂಗದಲ್ಲಿ ಮಿಂಚಿದ ಕಾರ್ನಾಡರು: ವೃತ್ತಿ ನಾಟಕಗಳನ್ನು ನೋಡಿ ಅದಕ್ಕೆ ಆಕರ್ಷಿತರಾದ ಕಾರ್ನಾಡರು ಸಣ್ಣವರಿರುವಾಗಲೇ ನಾಟಕ ಬರೆಯತೊಡಗಿ; ನಾಟಕ ಮಂಡಳಿಯವರೊಂದಿಗೆ ಬಾಲ್ಯದಿಂದಲೇ ಸ್ನೇಹ ಸಂಬಂಧವನ್ನು ಬೆಳೆಸಿದ್ದರು. ನಾಟಕರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹೆಗ್ಗುರಿ ಹೊಂದಿ, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಸ ತೊರೆದು, ಫುಲ್ ಬ್ರೈಟ್ ನಾಟಕಕಾರಾಗಿ- ಒಂದೊಂದು ನಾಟಕಗಳನ್ನು ಪರೀಕ್ಷೆ ಎಂಬಂತೆ ರೂಪಿಸಿ, ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದರು.

ಮೂಲತಃವಾಗಿ ಕಾರ್ನಾಡರು ರಂಗಭೂಮಿಯ ಕುರಿತು ಒಲವಿರಿಸಿಕೊಂಡವರಾದುದರಿಂದ ವಿಲಿಯಮ್ ಷೇಕ್ಸ್ಪಿಯರ್, ಅನೋಯಿ, ಕಾಮು, ಬ್ರೆಕ್ಟ್ ಮೊದಲಾದ ಐರೋಪ್ಯ ನಾಟಕಕಾರರ ಗಾಢವಾದ ಪ್ರಭಾವಕ್ಕೆ ಒಳಗಾದರು. ಇಪ್ಪತ್ತನೇ ಶತಮಾನದಲ್ಲಿ ಭಾರತೀಯ ರಂಗಭೂಮಿಯಲ್ಲಿ ಸಮಗ್ರ ಬದಲಾವಣೆಯ ರೂವಾರಿಯಾದ ಕಾರ್ನಾಡರು- ಐರೋಪ್ಯ, ಗ್ರೀಸ್, ರೋಮ್ ದೇಶಗಳ ರಂಗತಂತ್ರಗಳನ್ನು ತಮ್ಮ ನಾಟಕಗಳಲ್ಲಿ ಪ್ರಯೋಗಿಸಿ ಭಾರತೀಯ ರಂಗ ರಸಿಕರನ್ನು ಚಕಿತಗೊಳಿಸಿದರು. ನುರಿತ ನಾಟಕಕಾರರಂತೆ ಕಾರ್ನಾಡರು ತಮ್ಮ ನಾಟಕಗಳಲ್ಲಿ ನವ್ಯತೆಯನ್ನು ತರುವಲ್ಲಿ ಶ್ರಮಿಸಿದರು. ಪ್ರತಿಯೊಂದು ವಿಷಯವನ್ನು ಆಳವಾಗಿ ಅಧ್ಯಯನಗೈದು ಕೃತಿರಚನೆಗೆ ತೊಡಗುವುದು ಕಾರ್ನಾಡರ ವೈಶಿಷ್ಟ್ಯ. ಶ್ರೀಯುತರ ಗಂಭೀರವಾದ ಬದುಕಿನ ಮೂಲಭೂತ ಸಮಸ್ಯೆಗಳ ಜಟಿಲತೆಯನ್ನು ಮನೋವೈಜ್ಞಾನಿಕವಾಗಿ ಅಧ್ಯಯನಿಸಿ ನಾಟ್ಯಿಕರಿಸಿ; ಅಪೂರ್ಣತೆಯಂಥ ಸಮಸ್ಯೆಗಳನ್ನು ನಗಿಸುತ್ತ, ರಂಜಿಸುತ್ತ ಆರಾಮವಾಗಿ ಯೋಚಿಸಲು- ವಿಮರ್ಶಿಸಲು ಪ್ರಚೋದಿಸಲು ಉತ್ತೇಜಿಸುತ್ತದೆ.

“ನನಗನ್ನಿಸುವ ಪ್ರಕಾರ ಕಾರ್ನಾಡ್ ‘ನುಡಿ’ ಹಿಡಿಯುವ’ ಬದಲು, ನಾಟಕದ ‘ನಾಡಿ’ ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ ಕೆಲಸ. ಅದನ್ನು ಸಾಧಿಸಿದರೆ ನುಡಿ ತಾನಾಗೇ ಬಡ ಮೂಡುತ್ತದೆ” ಎಂದು ಕಾರ್ನಾಡರ ನಾಟಕ ಜಾಣ್ಮೆಯ ಕುರಿತು ಬಿ.ವಿ.ಕಾರಂತರ ಅಭಿಪ್ರಾಯ ಇಲ್ಲಿ ಸ್ಮರಿಸಬಹುದು. ಇವರ ಬಹಳಷ್ಟು ನಾಟಕಗಳು ಹಲವಾರು ಭಾರತೀಯ ಭಾಷೆಗಳಲ್ಲಿ ಭಾಷಾಂತರಗೊಳ್ಳದೆ, ಖ್ಯಾತ ನಿರ್ದೇಶಕರಾದ ಇಬ್ರಾಹಿಂ ಅಲ್-ಖಾಝಿ, ಬಿ.ವಿ. ಕಾರಂತ, ಪ್ರಸನ್ನ, ಅರವಿಂದ್ ಗೌರ್, ಸತ್ಯದೇವ ದುಬೆ, ವಿಜಯ್ ಮೆಹ್ತಾ, ಜಾಫರ್ ಮೊಹಿದ್ದೀನ್ ಇತ್ಯಾದಿಯವರಿಂದ ನಿರ್ದೇಶನಗೊಂಡು ರಂಗಮಂಚದ ಮೇಲೆ ಪ್ರದರ್ಶನವಾಗಿ ರಂಗರಸಿಕರನ್ನು ರಸದೌತಣ ಬಡಿದಂತಾಯಿತು!

ಕಾರ್ನಾಡರ ಪ್ರಸಿದ್ಧ ನಾಟಕಗಳ ಒಂದು ಸಂಕ್ಷೀಪ್ತ ಅವಲೋಕನ: ಶ್ರೀಯುತರ ನಾಟಕಗಳೆಲ್ಲವೂ ಹೆಚ್ಚಾಗಿ ಹಳಗನ್ನಡ ಕಾವ್ಯ, ಜಾನಪದ ಕಥೆ, ವಿಶಿಷ್ಟ ರೀತಿಯ ಕಥಾ ವಿವರಣೆ ಹಾಗು ಐತಿಹಾಸಿಕ ಕಥಾವಸ್ತು ಹೊಂದಿದಂತಹುಗಳು. ಪ್ರಾಚೀನ ವಿಷಯವನ್ನು ನವೀನ ತಂತ್ರಗಾರಿಕೆಯ ಮೂಲಕ ಸಮಕಾಲೀನ ವಸ್ತುವೆಂಬಂತೆ ತೋರಿಸುವ ಜಾಣ್ಮೆಯೇ ಕಾರ್ನಾಡರ ನಾಟಕಗಳ ವೈಶಿಷ್ಟ್ಯ. ಶ್ರೀರಂಗರಂತೆ ನಾಟಕದಲ್ಲಿ ನೂತನತೆಯನ್ನು ಪ್ರಯೋಗಿಸುವಲ್ಲಿ ಕಾರ್ನಾಡರು ಪ್ರಲೋಭಿಸಿದರು. 1961ರಲ್ಲಿ ಮಹಾಭಾರತದ ಆದಿ ಪರ್ವದಿಂದ ಆರಿಸಿಗೊಂಡ ಪೌರಾಣಿಕ ಕಥೆ ನವೀನ ರೀತಿಯಾಗಿ ಇಂದಿನ ಕಾಲಕ್ಕೆ ಸಮೀಕರಿಸಿ ‘ಯಯಾತಿ’ಯನ್ನು ರಚಿಸಿ, ತಮ್ಮ ನಾಟಕ ರಂಗದ ಪಯಣವನ್ನು ಯಶಸ್ವಿಯಾಗಿ ಬೆಳೆಸಿದರು. ತರುವಾಯ, 1964ರಲ್ಲಿ ಐತಿಹಾಸಿಕ ಕಥೆಯನ್ನು ರಂಗದ ಮೇಲೆ ಸಫಲವಾಗಿ ಪ್ರದರ್ಶಿಸುವಂತೆ ರಚಿಸಿದರು. ಒಬ್ಬರು ಸಫಲ ನಾಟಕಕಾರರಾಗಿ ಕಾರ್ನಾಡರು ಇದರಲ್ಲಿ ಸಾಧಿಸಿದ ಯಶಸ್ಸು ಪರಿಣಿತಿ ಅನನ್ಯವಾದದ್ದು; ಅವರಿಗೆ ರಾಷ್ಟೀಯ-ಅಂತರಾಷ್ಟ್ರೀಯ ಖ್ಯಾತಿಯನ್ನು ತಂದು, ರಾಷ್ಟೀಯ ಮಟ್ಟದಲ್ಲಿ ಓರ್ವ ಮುಂಚೂಣಿಯ ನಾಟಕಕಾರರೆಂದು ತೋರಿಸಿ; ಭಾರತದಲ್ಲಿನ ಅನೇಕ ಭಾಷೆಗಳಿಗೆ ಅದೇ ರೀತಿ ಪರದೇಶದ ಭಾಷೆಗಳಿಗೆ ಭಾಷಾಂತಾರಗೊಂಡು ಪ್ರದರ್ಶಿಸಿದ ನಾಟಕ ಚರ್ಚೆಗೊಳಗಾಗಿ, ವಿಮರ್ಶೆಗೊಳಗಾಗಿ ಜನಪ್ರಿಯ ಗೊಂಡಂತಹ ನಾಟಕ.

ಕಥೆಯ ಹಂದರವನ್ನು ವಿಶ್ಲೇಷಿಸಿದಾಗ ಒಡೆದೆದ್ದು ಕಾಣಸಿಗುವುದು ‘ವೇತಾಳ ಪಂಚ ವಿಂಶತಿ’ಯಲ್ಲಿನ ಆರನೆಯ ಕಥೆಯೇ, ಕಾರ್ನಾಡರ ಮುಂದಿನ ನಾಟಕವಾದ ‘ಹಯವದನ’ ನಾಟಕದ ಮೂಲವಸ್ತುವಾಗಿದೆ. ಬೇತಾಳ ಕಥೆಗಳು ಮೂಲ ಪೈಶಾಚಿಕ ಭಾಷೆಯಲ್ಲಿವೆಯಾದರೂ ಭಾರತದ ಹಾಗು ಪರದೇಶದ ಭಾಷೆಗಳಲ್ಲಿ ಅನುವಾದಗೊಂಡು; ಪಾಶ್ಚಾತ್ಯ ವಿದ್ವಾಂಸ ಹೆನ್ರಿಕ್ ಝಿಮ್ಮರ ಎನ್ನುವವನು ‘The King and the Corpse’ (ಅರಸ ಮತ್ತು ಮೃತದೇಹ) ಎನ್ನುವ ಕೃತಿಯನ್ನು ರಚಿಸಿದರು. ಅವರ ಹಿಂದಿನ ನಾಟಕಗಳಿಗಿಂತ ‘ಹಯವದನ’ ನಾಟಕ ಅನೇಕ ರೀತಿಯಿಂದ ಭಿನ್ನವಾಗಿದೆ. ‘ಹಯವದನ’ ನಾಟಕದ ಮುಖ್ಯ ಕಥಾವಸ್ತು ಥಾಮಸ್ ಮಾನ್ನನ ನೀಳ್ಗತೆಯಿಂದ ಆಧರಿತಗೊಂಡಿದೆ. ಅವರ ‘Transformed Head’ ಎಂಬ ನೀಳ್ಗತೆಗೆ ತಾವು ಚಿರಋಣಿಯಾಗಿರುವುದಾಗಿ ಸ್ವತಃ ನಾಟಕಕಾರರೇ ಹೇಳಿಕೊಂಡಿದ್ದಾರೆ. ಪರಿಪೂರ್ಣತೆಗಾಗಿ ಹಂಬಲಿಸುವ ಮನುಷ್ಯನ ನಿರಂತರ ಹೋರಾಟವೇ ಈ ನಾಟಕದ ಕಥೆ ಸಂಕೇತಿಸುತ್ತದೆ. ದೇವದತ್ತ ಬುದ್ಧಿಶಕ್ತಿ ಮತ್ತು ಕಪಿಲನ ಅಪ್ರತಿಮ ದೇಹ; ಎರಡನ್ನೂ ಪ್ರೇಮಿಸಿ ಬಯಸುವ ಪದ್ಮಿನಿಯ ದುರಾಸೆ ಪ್ರಾತಿನಿಧಿಕವಾದದ್ದು. ಮನುಷ್ಯನ ದೇಹ ಕುದುರೆಯ ಮುಖ, ಪೂರ್ಣ ಮನುಷ್ಯನೂ ಅಲ್ಲ, ಅತ್ತ ಪೂರ್ಣ ಕುದುರೆಯೂ ಅಲ್ಲ; ಈ ಅಪೂರ್ಣತೆಯನ್ನು ಸಂಕೇತಿಸುವುದೇ ಉಪಕಥೆಯ ಶೀರ್ಷಿಕೆಯ ವಿಶೇಷ. ‘ಹಯವದನ’ ನಾಟಕ ತಾತ್ವಿಕ ಎತ್ತುವ ಸಮಸ್ಯೆ- ಅಪೂರ್ಣತೆಯ ಸಮಸ್ಯೆ -ನಾಟಕದ ಮೂರು ಪಾತ್ರಗಳ ಜೀವನದಿಂದ ಹೊರಗುಳಿಯುವುದು!

ಕಾರ್ನಾಡರ ನಾಟಕಗಳ ವಿಷಯ ಗಂಭೀರವಾದ್ದು; ಧಾಟಿ ಲಘುವಾದ್ದು; ತಂತ್ರ ವಾಸ್ತವತೆಯ ಅಪೇಕ್ಷೆಗಳಿಂದ ನಾಟಕವನ್ನು ಸ್ವತಂತ್ರಗೊಳಿಸುವ ಶೈಲೀಕರಣದ್ದು. ಇದಕ್ಕೆ ಶ್ರೀಯುತರು 1988ರಲ್ಲಿ ರಚಿತಗೊಂಡ ‘ನಾಗಮಂಡಲ’ ನಾಟಕವಾಗಿದೆ. ‘ನಾಗಮಂಡಲ’ ನಾಟಕದಲ್ಲಿ ಬರುವ ಎರಡು ಜಾನಪದ ಕತೆಗಳು ತಮಗೆ ಏ.ಕೆ. ರಾಮನುಜನ್ ಹೇಳಿಕೊಡುವುದರಿಂದ ತಾವು ತಮ್ಮ ಕೃತಿಯನ್ನು ಅವರಿಗೆ ಅರ್ಪಿಸುತ್ತೇನೆಂದು ನಾಟಕಕಾರರು ಸ್ವತಃ ಹೇಳಿ ಸಮರ್ಪಿಸಿದ್ದಾರೆ. ನಾಟಕದಲ್ಲಿ ಬರುವ ಜ್ಯೋತಿಗಳ ಸಂಭಾಷಣೆ, ನಾಗರಹಾವು ಮಾನವನ ರೂಪ ಧರಿಸುವ ಪ್ರಸಂಗ (shape-shifting), ನಾಟಕದ ನಡುವೆ ಯುವತಿಯ ರೂಪ ಧರಿಸಿದ ಕತೆಯ ಕಥಾ ವಿವರಣೆ, ರಾಣಿ-ನಾಗಪ್ಪನ ಮಾತುಕತೆ ಇತ್ಯಾದಿಗಳಿಂದ ‘ನಾಗಮಂಡಲ’ ನಾಟಕವು ಆಂಗ್ಲ ಭಾಷೆಯಲ್ಲಿ ಭಾಷಾಂತರಗೊಂಡು ಅಮೆರಿಕಾದಲ್ಲಿ ಪ್ರದರ್ಶನಗೊಂಡಿದೆ. ಕಾರ್ನಾಡರು ತಮ್ಮ ನಾಟಕಗಳನ್ನು ರಚಿಸುವಾಗ ಅದನ್ನು ಸವಾಲಾಗಿ ಸ್ವೀಕರಿಸಿ ಒಲವಿನಿಂದ ರಚಿಸುತ್ತಿದ್ದರು. ಭಾರತ ದೇಶ ಅರ್ಧ ಶತಮಾನದ ಹೊಸ್ತಿಲಿನಲ್ಲಿರುವಾಗ ಬಿ.ಬಿ.ಸಿ. ರೇಡಿಯೋಗಾಗಿ ಕಾರ್ನಾಡರು ಭಾರತ-ಇಂಗ್ಲೆಂಡ್ ದೇಶಕ್ಕೆ ಅನುಕೂಲವಾಗುವಂತೆ, ಇತಿಹಾಸದ ಅಂಶಗಳನ್ನು ಪಲಕು ಪಲಕಾಗಿ ಒಂದರ ಮಗ್ಗುಲಲ್ಲಿ ಇನ್ನೊಂದನ್ನಿಟ್ಟು ನೋಡುವ ರೀತಿಯಿಂದಾಗಿಯೇ ಕಾರ್ನಾಡರ “ಟಿಪೂ ಸುಲ್ತಾನ್ ಕಂಡ ಕನಸು” ಎಂಬ ನಾಟಕ ಉದ್ಭವವಾಗಿದೆ. ಮಹಾಪುರುಷರನ್ನು, ವಿದ್ವಾಂಸರನ್ನು ಧರ್ಮ, ಜಾತಿ, ಕುಲ, ಭಾಷೆ ಮೊದಲಾದ ಕುಂಟು ನೆಪಗಳಿಗಾಗಿ ಪ್ರೀತಿಸುವುದು ಅಥವಾ ದ್ವೇಷಿಸುವುದು ತರವಲ್ಲ; ಬದಲಾಗಿ, ಅವರನ್ನು ಸ್ಮರಿಸುವುದು ಮತ್ತು ಅನುಸರಿಸುವುದು ನಮ್ಮೆಲ್ಲರ ಒಳಿತಿಗಾಗಿ ಪೂರಕವಾಗಿದೆ. ಅಲ್ಲದೇ, ಪೂರ್ವಗ್ರಹ ಪೀಡಿತರಿಗೆ ತಮ್ಮ ನಾಟಕದಲ್ಲೇ ಜರೆದು, ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ನಾಡರು ತಮ್ಮ ಈ ಮೇರುಕೃತಿಗಾಗಿ ಹದಿನೈದು ಆಧಾರ ಗ್ರಂಥಗಳ ನೆರವು ಪಡೆದರು. ಕಾರ್ನಾಡರ ನಾಟಕದಲ್ಲಿ ಇತಿಹಾಸಗಾರ ದಿಗ್ಗಿಜರ ಚರ್ಚೆಗಳ ನಡುವೆ ಹಿಮ್ಮಿಂಚಿನಿಂದ ವರ್ತಮಾನ ಮತ್ತು ಭೂತಗಳು ಒಂದರೊಳಗೊಂದು ಬೆಸೆದುಕೊಂಡಂತೆ ನಾಟಕವೂ ಮೂರ್ತರೂಪವನ್ನು ತಾಳಿದೆ. ಹೀಗೆಯೇ, ಹಲವಾರು ಕಾರಣಗಳಿಂದಲೇ ಕಾರ್ನಾಡರ “ಟಿಪೂ ಸುಲ್ತಾನ ಕಂಡ ಕನಸು” ಓದಲೇ-ನೋಡಲೇಬೇಕಾದ ನಾಟಕವಾಗಿ ಮೂಡಿಬಂದಿದೆ!!

ಕಾರ್ನಾಡರ ಕೆಲವು ಸುಪ್ರಸಿದ್ಧ ನಾಟಕಗಳು: – ಯಯಾತಿ – ತುಘಲಕ್ – ಹಯವದನ – ಅಂಜುಮಲ್ಲಿಗೆ – ನಾಗಮಂಡಲ – ತಲೆದಂಡ – ಅಗ್ನಿ ಮತ್ತು ಮಳೆ

ರೇಡಿಯೋ ನಾಟಕಗಳು: – ಮಾನಿಪಾದ – ಹಿಟ್ಟಿನ ಹುಂಜ – ಟೀಪು ಸುಲ್ತಾನ್ ಕಂಡ ಕನಸು

ಕಾರ್ನಾಡರ ನಾಟಕಗಳಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು: – 1972 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ – 1972 ರಲ್ಲಿ ಹಯವದನ ನಾಟಕಕ್ಕೆ ಕಮಲಾದೇವಿ ಪ್ರಶಸ್ತಿ – 1984 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ – 1989 ರಲ್ಲಿ ಕಲ್ಕತ್ತೆಯ ನಂದಿಕಾರ ಪ್ರಶಸ್ತಿ – 1992 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ನಾಗಮಂಡಲ’ಕ್ಕೆ – 1992 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ‘ತಲೆದಂಡ’ – 1993 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ತಲೆದಂಡ’ – 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ತಲೆದಂಡ’

ಚಲನಚಿತ್ರದಲ್ಲೂ ಮಿಂಚಿದ ಕಾರ್ನಾಡಿನ ಧ್ರುವತಾರ! ಚಿತ್ರರಂಗದಲ್ಲೂ ಶಿಸ್ತು ಮುಖ್ಯವೆಂದು ಕಲೆಯಲ್ಲಿ ಗಣಿತದ ಆಂತರಿಕ ಶಿಸ್ತು ಪಾಲಿಸಿ, ಓರ್ವ ಪ್ರಯೋಗಮತಿ ಸಾಹಸಿಯಾದರು. ಯುರೋಪ ಪ್ರವಾಸ ಮುಗಿಸಿ ಬಂದ ಕಾರ್ನಾಡರು, ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಸಿನಿಮಾಕ್ಕೆ ಅಳವಡಿಸಿದರು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಣೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ ಕಾರ್ನಾಡರು ಇದಕ್ಕಾಗಿ ಭಾರತದ ಸ್ವರ್ಣಕಮಲ ಪ್ರಶಸ್ತಿಯನ್ನು ಪ್ರಥಮ ಚಿತ್ರಕ್ಕೆ ಪಡೆದು ತಮ್ಮನ್ನು ತಾವು ಬಹು ಪ್ರತಿಭಾವಂತರು ಎಂದು ಸಾಬೀತುಪಡಿಸಿದರು. ನಂತರ ಬಿಡುಗೋಡೆಗೊಂಡ ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೂಡ ಅಪಾರ ಜನಮನ್ನಣೆ ಪಡೆಯಿತು. ಉತ್ಸವ, ಒಂದಾನೊಂದು ಕಾಲದಲ್ಲಿ, ತಬ್ಬುಲಿಯು ನೀನಾದೆ ಮಗನೆ, ಕಾಡು, ಇತ್ಯಾದಿ ಚಲನಚಿತ್ರಗಳು ವಿಭಿನ್ನವಾಗಿ ಮೂಡಿಬಂದವು. ಹಾಗೆಯೆ, ಕನಕ ಪುರಂದರ, ಸೂಫಿ ಸಂತ, ದ.ರಾ.ಬೇಂದ್ರೆ, ಚೆಲ್ವಿ, ಸಾಕ್ಷಿ ಚಿತ್ರಗಳು ಕಲಾತ್ಮಕ ಚಿತ್ರಗಳ ಶ್ರೇಷ್ಠ ನಿರ್ದೇಶಕರಾಗಿ ವಾಣಿಜ್ಯ ಚಿತ್ರಗಳಲ್ಲಿಯೂ ಕೂಡ ಅಭಿನಯಿಸಿ ಸೈ ಎನ್ನಿಸಿಕೊಂಡರು. ಸಂತ ಶಿಶುನಾಳ ಷರೀಫ್ ಚಿತ್ರದಲ್ಲಿ ಗೋವಿಂದ ಭಟ್ಟರಾಗಿ, ಪಂಚಾಕ್ಷರ ಗವಾಯಿ ಚಿತ್ರದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳಾಗಿ, ಆನಂದ ಭೈರವಿ, ಜನುಮದಾತ, ಎ.ಕೆ.-47, ನೀ ತಂದ ಕಾಣಿಕೆ… ಹೀಗೆ ಚಲನಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ಓರ್ವ ಸಫಲ ನಟರಾಗಿ, ನಿರ್ದೇಶಕರಾಗಿ, ಮತ್ತು ಚಿತ್ರಕತೆಗಾರರಾಗಿ ಸೇವೆಗೈದು, ಅವರು ಅಪಾರ ಖ್ಯಾತಿ- ಪ್ರಶಸ್ತಿಪುರಸ್ಕಾರಗಳನ್ನು ತನ್ನದಾಗಿಸಿದರು. ಅವುಗಳಲ್ಲಿ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಒಳಗೊಂಡಂತೆ, ಭಾರತ ಸರಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣವೂ ಸೇರಿಕೊಂಡಿವೆ.

– 1974 ರಲ್ಲಿ ಪೂನಾ ಫಿಲ್ಮ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿ ಸೇವೆ – 1976 ರಿಂದ 1978 ರ ತನಕ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದದ್ದು. – 1987 ರಲ್ಲಿ ಚಿಕಾಗೊ ವಿ.ವಿ.ಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ. – 1988 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಗೆ ಅಧ್ಯಕ್ಷರಾದದ್ದು. ಅಲ್ಲದೇ, ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಕಥನವಾದ ‘The Wings of Fire’ (ಅಗ್ನಿಯ ರೆಕ್ಕೆಗಳು) ಅನ್ನು ಚರಕ ಆಡಿಯೋ ಬುಕ್ಸ್ ಅವರು ಧ್ವನಿ ಮುದ್ರಣಕ್ಕೆ ರೂಪಾಂತರಿಸುವಾಗ ಕಾರ್ನಾಡರು, ಅಬ್ದುಲ್ ಕಲಾಂ ಅವರ ಧ್ವನಿಯನ್ನು ನೀಡಿದರು.

ಕಾರ್ನಾಡರ ಸಾಹಿತ್ಯಿಕ ಸೇವೆಗಾಗಿ ಒಲಿದ ಸರ್ವಶ್ರೇಷ್ಠ ಪುರಸ್ಕಾರಗಳು: 1970 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ 1972 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1974 ರಲ್ಲಿ ಪದ್ಮಶ್ರೀ 1994 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1998 ರಲ್ಲಿ ಕಾಳಿದಾಸ ಸಮ್ಮಾನ್ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿ

ಕಾರ್ನಾಡರು ಸಫಲ ನಾಟಕಕಾರರಾದಂತೆ ಪ್ರಗತಿಪರ ಚಿಂತನಕಾರರು ಮಿತಭಾಷಿಗಳು ಸ್ನೇಹಮಯಿಯಾದ ಅವರು, ಬಹುಮುಖ ಪ್ರತಿಭೆಯ ವ್ಯಕ್ತಿತ್ವ! ನಟ, ನಾಟಕಕಾರ, ನಿರ್ದೇಶಕ, ಚಿತ್ರಕಥಾ ಲೇಖಕ, ಸಂಭಾಷಣಕಾರ, ದಕ್ಷ ಆಡಳಿತಗಾರ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ಅರ್ಥಪೂರ್ಣವಾಗಿ, ಗಂಭೀರವಾಗಿ ತೊಡಗಿಸಿಕೊಂಡರು. ಸಾಹಿತಿಯಾದವರು ಸಾಮಾಜಿಕ ಉಪದ್ವ್ಯಾಪಗಳಿಂದ ದೂರ ‘ದಂತಗೋಪುರ’ದಲ್ಲಿ ಇರಬೇಕೆನ್ನುವ ನಿಲುವಿನವರಲ್ಲ ಕಾರ್ನಾಡರು- ಸಾಹಿತಿಯೂ ಸಮಾಜಜೀವಿಯೂ! ಸಮಾಜದ ಆಗು ಹೋಗುಗಳಿಗೆಲ್ಲಾ ಜವಾಬ್ದಾರಿಯುತವಾಗಿ ಪ್ರತಿಸ್ಪಂದಿಸುತ್ತಿರಬೇಕೆಂದು ನಂಬಿದವರು. ಹಾಗಾಗಿ, ಇವರು ಜಾಗೃತ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಬಲಪಂಥೀಯ ಪಕ್ಷಗಳು ಮತ್ತು ಸುದ್ದಿ ಮಾಧ್ಯಮಗಳು ಅವರ ವಿರುದ್ಧ ವ್ಯವಸ್ಥಿತ ಅಪಪ್ರಚಾರವನ್ನು ನಡೆಸುತ್ತಿತ್ತು. ಆದರೂ, ಎದೆಗುಂದದೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ತಮಗೆ ಪ್ರಾಮಾಣಿಕವಾಗಿ ಅನ್ನಿಸಿದ್ದನ್ನು ಧೈರ್ಯದಿಂದ ಅಭಿವ್ಯಕ್ತಗೊಳಿಸುತ್ತಿರುವ ಸಾಮಾಜಿಕ ಬದ್ಧತೆಯ ಸಾಹಿತಿ ದಿವಂಗತ ಗಿರೀಶ್ ಕಾರ್ನಾಡ್ ಅವರು. ಬಾಬಾಬುಡನಗಿರಿಯ ದತ್ತಪೀಠದ ವಿವಾದವನ್ನು ಕಾರ್ನಾಡರು ಕಟುವಾಗಿ ವಿರೋಧಿಸಿದರು. ಅಲ್ಲದೇ, ಹಲವಾರು ವಿವಾದಾತ್ಮಕ ವಿಷಯಗಳನ್ನು ಕಾರ್ನಾಡರು ವಿವೇಕತೆಯಿಂದ ವಿರೋಧಿಸಿದ್ದರು.

ಯಾವುದೇ ತತ್ವಜ್ಞಾನಿಯಾಗಲಿ, ಸಾಹಿತಿಯಾಗಲಿ, ವಿಚಾರವಾದಿಯಾಗಲಿ- ತಮ್ಮ ನಡೆದು ಬಂದ ದಾರಿಯಲ್ಲಿ ಹಂತ ಹಂತವಾಗಿ ಹೊಸ ಕ್ರಾಂತಿಕಾರಿ ಚಿಂತನೆಗಳನ್ನು ನೆಟ್ಟಿ, ಧನಾತ್ಮಕ-ರಚನಾತ್ಮಕ ಬದಲಾವಣೆಯ ಹೆಮ್ಮರದ ನಿರೀಕ್ಷೆಯಲ್ಲಿ ಇಹ ತ್ಯಜಿಸುತ್ತಾರೆ. ಅವರ ಅಭಿಮಾನಿಯಾಗಿ-ಅನುಯಾಯಿಯಾಗಿ ತಮ್ಮನ್ನು ತಾವು ಅವರ ಭಕ್ತವೆಂದು ಪರಿಚಯಿಸುವುದರಿಂದ-ಗುರುತಿಸಿಕೊಳ್ಳುವುದರಿಂದ; ವೃತ್ತ-ಮಾರ್ಗಗಳನ್ನು ಅವರ ಶುಭ ಹೆಸರುಗಳಿಂದ ನಾಮಕರಣಗೊಳಿಸುವುದರಿಂದ ಅಥವಾ ಅವರು ದಿವ್ಯದೆಡೆಗೆ ತಮ್ಮ ಪಯಣವನ್ನು ಬೆಳೆಸಿದ ದಿವಿಸವನ್ನು ನೆನೆಯಲು ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಏನೂ ದೊರೆಯಲಾರದು. ಹಾಗಾಗಿ, ಕಾರ್ನಾಡರ ತತ್ವವನ್ನು-ಕ್ರಿಯಾಶೀಲತೆಯನ್ನು ಅರ್ಥೈಸಿ, ಅವರ ಸಾಹಿತ್ಯಿಕ ಸೇವೆಯನ್ನು ತಾದಾತ್ಮ್ಯಗೊಳಿಸಿ-ಅಧ್ಯಯನಿಸುವುದೇ ನಾವು ಅವರಿಗೆ ನೀಡುವ ನೈಜ ಶೃದ್ಧಾಂಜಲಿಯಾಗಿದೆ. ಕಾರ್ನಾಡರ ವಿಚಾರಧಾರೆಗಳಿಗೆ ಸಹಮತವಿಲ್ಲದಿದ್ದವರೂ, ಅವರ ಸಾಧನೆಗಳಿಂದ ಪ್ರೇರಿತರಾಗಿ ತಮ್ಮ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಬಹುದು. ಕನಿಷ್ಠಮಟ್ಟಕ್ಕೆ, ಕಾರ್ನಾಡರ ಕೃತಿಯನ್ನು ಓದುವುದೇ ಅವರಿಗೆ ನಾವು ನೀಡುವ ಶೃದ್ಧಾಂಜಲಿಯಾಗಿದೆ ಎನ್ನುವುದು ನನ್ನ ವ್ಯಕ್ತಿಗತ ಅಭಿಪ್ರಾಯವಾಗಿದೆ.

ಗ್ರಂಥಋಣಿ:

೧.ಅನಂತಮೂರ್ತಿ, ಯೂ. ಆರ್. ಸನ್ನಿವೇಶ. ಬೆಂಗಳೂರು: ಅಭಿನವ, 1982

೨. ಮೂಡುಸಗ್ರಿ, ಹಯವದನ, ಸೌಹಾರ್ದ ಸಂಕಲನ. ಉಡುಪಿ: ಸೌಹಾರ್ದ ಪ್ರಕಾಶನ, 2016

೩. ಕಾರ್ನಾಡ್, ಗಿರೀಶ್. ಆಡಾಡತ ಆಯುಷ್ಯ. ಧಾರ್ವಾಡ: ಮನೋಹರ ಗ್ರಂಥ ಮಾಲಾ, 2011

LEAVE A REPLY

Please enter your comment!
Please enter your name here