• ರುಕ್ಸಾನ ಫಾತಿಮ ಯು.ಕೆ.

ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷ.

ಮಾಜಿ ಈಜಿಪ್ಟ್ ರಾಷ್ಟ್ರಾಧ್ಯಕ್ಷ ಹಾಗೂ ಮುಸ್ಲಿಂ ಬ್ರದರ್ ಹುಡ್ ನ ಧೀಮಂತ ನಾಯಕ ಮುಹಮ್ಮದ್ ಮುರ್ಸಿ ನಮ್ಮನ್ನಗಲಿ ಇಂದಿಗೆ 2 ವರ್ಷಗಳುರುಳಿದವು.
ಅರಬ್ ಕ್ರಾಂತಿಯ ನಂತರ ಈಜಿಪ್ಟ್ ನಲ್ಲಿ ಪ್ರಜಾತಂತ್ರವಾಗಿ ಚುನಾಯಿತರಾದ ಮೊದಲ ರಾಷ್ಟ್ರಾಧ್ಯಕ್ಷರಾದ ಮುರ್ಸಿ ಜೂನ್ 17, 2019 ರಂದು 7 ವರ್ಷಗಳ ಸೆರೆವಾಸವನ್ನು ಅನುಭವಿಸಿ ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾದಾಗ ಹೃದಯಾಘಾತದಿಂದ ನಿಧನರಾದರೆಂದು ಪ್ರಮುಖ ಔದ್ಯೋಗಿಕ ಸುದ್ದಿ ವಾಹಿನಿ ವಾರ್ತೆ ನೀಡಿತು.

1951 ಅಗಸ್ಟ್ 20 ರಂದು ಈಜಿಪ್ಟ್ ನ ಶರಖಿಯ್ಯಾದಲ್ಲಿ ಮುಹಮ್ಮದ್ ಮುರ್ಸಿ ಈಸಾ ಅಲ್ ಇಯ್ಯಾಥಿಯವರ ಜನನವಾಯಿತು. ಕೈರೋ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ನಲ್ಲಿ ಬಿರುದಾಂಕಿತ ಪದವಿಯನ್ನು ಪಡೆದ ಮುರ್ಸಿ 1982 ರಲ್ಲಿ ಕಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು ಮತ್ತು ಅಲ್ಲೇ 3 ವರ್ಷಗಳ ಕಾಲ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. 1985 ರಲ್ಲಿ ತಾಯ್ನಾಡಿಗೆ ಮರಳಿದ ಮುರ್ಸಿ ಬ್ರದರ್ ಹುಡ್ ಸಂಘಟನೆಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡರು. 2000-2005 ರ ಅವಧಿಯಲ್ಲಿ ಬ್ರದರ್ ಹುಡ್ ನ ಬೆಂಬಲದೊಂದಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮುರ್ಸಿ ತಮ್ಮ ಕಾರ್ಯವೈಖರಿಗಳಿಂದ ಗಮನ ಸೆಳೆದಿದ್ದರು.
2011 ರಲ್ಲಿ ಫ್ರೀಡಮ್ ಆಂಡ್ ಜಸ್ಟೀಸ್ ಪಾರ್ಟಿಯ ಉಗಮದವರೆಗೆ ಬ್ರದರ್ ಹುಡ್ ನ ನೇತೃತ್ವವನ್ನು ವಹಿಸಿದ್ದ ಮುಹಮ್ಮದ್ ಮುರ್ಸಿಯವರು ಹಲವಾರು ವರ್ಷಗಳ ಸ್ವೇಚ್ಛಾದಿಕಾರಕ್ಕೆ ಅಂತ್ಯ ಹಾಡಿ ಜನಾಭಿಮತದಿಂದ ಮುನ್ನಡೆ ಸಾಧಿಸಿದ ಫ್ರೀಡಮ್ ಆಂಡ್ ಜಸ್ಟೀಸ್ ಪಾರ್ಟಿಯ ಪ್ರಪ್ರಥಮ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದರು. ಮುಸ್ಲಿಂ ಬ್ರದರ್ ಹುಡ್ ನ ರಾಷ್ಟ್ರೀಯ ಸಂಘಟನೆಯಾದ ಫ್ರೀಡಮ್ ಆಂಡ್ ಜಸ್ಟೀಸ್ ಪಾರ್ಟಿಯ ಔದ್ಯೋಗಿಕ ಅಭ್ಯರ್ಥಿಯೂ, ಪಾರ್ಟಿಯ ಉಪ ಕಾರ್ಯದರ್ಶಿಯೂ ಆಗಿದ್ದ ಖೈರಾತ್ ಶಾತ್ವಿರ್ ರನ್ನು ‘ಹುಸ್ನಿ ಮುಬಾರಕ್ ರ ಆಡಳಿತಾವಧಿಯಲ್ಲಿ ಜೈಲು ವಾಸವನ್ನು ಅನುಭವಿಸಿದ್ದರೆಂಬ’ ನೆಪವೊಡ್ಡಿ ಚುನಾವಣಾ ಆಯೋಗವು ಅಯೋಗ್ಯರೆಂದು ಸಾರಿದ್ದರಿಂದ ಅನಿರೀಕ್ಷಿತವಾಗಿ 2012 ರ ಚುನಾವಣೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿದ್ದ ಮುಹಮ್ಮದ್ ಮುರ್ಸಿ ಅನಿರೀಕ್ಷಿತವಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪಟ್ಟಿಯಲ್ಲಿ ಮನ್ನಣೆಗಳಿಸುತ್ತಾರೆ. ಚುನಾವಣಾ ಪ್ರಚಾರದ ಮೊದಲ ಘಟ್ಟದಲ್ಲಿ ತನಗೆ ಜನರ ವಿಶ್ವಾಸಗಳಿಸಲು ಸಾಧ್ಯವೇ? ಎಂಬ ಆಶಂಕೆಯಲ್ಲಿದ್ದ ಮುರ್ಸಿಯನ್ನು ಈಜಿಪ್ಟ್ ನ ಪ್ರಜೆಗಳು ಮೊತ್ತ ಮೊದಲ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಬಹುಮತದೊಂದಿಗೆ ಬೆಂಬಲಿಸಿ ಇತಿಹಾಸ ರಚಿಸಿದರು. ವಿದೇಶ ಯಾತ್ರೆಗಳಿಗೆ ಹುಸ್ನಿ ಮುಬಾರಕ್ ನ ಅವಧಿಯಲ್ಲಿ ಅವಕಾಶವಿಲ್ಲದ್ದರಿಂದ ಮುರ್ಸಿ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಹಲವಾರು ರಾಷ್ಟ್ರಗಳಿಗೆ ಬೇಟಿ ನೀಡಿದರು. 2013 ರಲ್ಲಿ ಮಾರ್ಚ್ 18,19,20 ರಂದು 3 ದಿನಗಳ ಕಾಲ ಭಾರತಕ್ಕೆ ಸೌಹಾರ್ದ ಸಂದರ್ಶನಕ್ಕೆ ಬಂದ ಮುರ್ಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರದಾನಿ ಮನಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಇನ್ನಿತರ ಗಣ್ಯರನ್ನು ಬೇಟಿಯಾದರು. ಈಜಿಪ್ಟ್ ಹಾಗೂ ಭಾರತದ ನಡುವಿನ ಉತ್ತಮ ಬಾಂಧವ್ಯದ ದೆಸೆಯಿಂದ 7 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇವು ವ್ಯಾಪಾರ, ವ್ಯವಸಾಯ ಹಾಗೂ ಇನ್ನಿತರ ರಂಗದಲ್ಲಿ ಉತ್ತಮ ಸ್ನೇಹಕ್ಕೆ ನಾಂದಿಯಾಯಿತು.

ಹುಸ್ನಿ ಮುಬಾರಕ್ ನ 30 ವರ್ಷದ ಸ್ವೇಚ್ಛಾಡಳಿತವನ್ನು ಮುರ್ಸಿಯ ಆಡಳಿತವು ಕೊನೆಗಾಣಿಸಿತು. 2013 ರಲ್ಲಿ ಮುರ್ಸಿ ಯ ಮೇಲೆ ಸುಳ್ಳುಆರೋಪ ಹೊರಿಸಿ ಈಜಿಪ್ಟ್ ನಲ್ಲಿ ದೊಡ್ಡ ಕ್ಷೋಭೆಯೊಂದು ಹರಡಿತು. ಅದರಿಂದಾಗಿ ಸೈನ್ಯವು ಮಧ್ಯಪ್ರವೇಶಿಸಿ ಮುರ್ಸಿಯ ಆಡಳಿತವನ್ನು ಕೊನೆಗಾಣಿಸಲು ಮುಂದಾಯಿತು. ಮುರ್ಸಿಯನ್ನು ಅಧಿಕಾರ ಭ್ರಷ್ಟನೆಂದು ಬಿಂಬಿಸುವ ಮೂಲಕ ವಿರೋಧ ಪಕ್ಷದ ಅಭ್ಯರ್ಥಿಯಾದ ಅಬ್ದುಲ್ ಫತಾಹ್ ಸಿ.ಸಿ ಆಡಳಿತವನ್ನು ಕೈಗೆತ್ತಿಕೊಂಡನು. ನಂತರದ ದಿನಗಳಲ್ಲಿ ಮುರ್ಸಿಯ ವಿರುದ್ಧ ಸಂಚುಗಳು ಹೆಚ್ಚಾಗತೊಡಗಿತು.ಅನೇಕ ಅಪವಾದಗಳನ್ನು ಮುರ್ಸಿಯ ವಿರುದ್ಧ ಹೂಡಲಾಯಿತು.
ಹಮಾಸ್ ನೊಂದಿಗೆ ಸೇರಿ ಈಜಿಪ್ಟ್ ನ ಪ್ರತಿಭಟನಾಕಾರರ ವಿರುದ್ಧ ಕ್ಷೋಭೆ ಹರಡಲಾಯಿತೆಂಬ ಕೇಸ್ ನ ವಿಚಾರಣೆಯ ವೇಳೆ ಮುರ್ಸಿ 20 ನಿಮಿಷಗಳ ಕಾಲ ಮಾತನಾಡಿ ಹೃದಯಾಘಾತದಿಂದ ಮರಣ ಹೊಂದಿದರೆಂದು ವರದಿ ಮಾಡಲಾಗುತ್ತದೆ.
ತೀವ್ರ ಮಧುಮೇಹ ಹಾಗೂ ಕರುಳು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರೂ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಅವರ ಆರೋಗ್ಯವು ಅಪಾಯದಲ್ಲಿದೆಯೆಂದು ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರ ಕುಟುಂಬವು ಆರೋಪಿಸಿತ್ತು.

ಶಹೀದ್ ಮುರ್ಸಿಯವರನ್ನು ಮರಣದಂಡನೆ ವಿಧಿಸಿ ಕೊಲ್ಲುವ ಧೈರ್ಯ ಅಬ್ದುಲ್ ಫತಾಹ್ ಸಿ. ಸಿ ಗೆ ಇರಲಿಲ್ಲ. ಗಲ್ಲಿಗೇರಿಸಿ ಮರಣ ಹೊಂದುವ ಮುರ್ಸಿಯನ್ನು ಅವರು ಭಯಪಡುತಿದ್ದರು. ಸಿಸಿ ಗೆ ಮಾತ್ರವಲ್ಲ, ಅವರನ್ನು ಬೆಂಬಲಿಸಿದ ಇತರ ಅರಬ್ ರಾಷ್ಟ್ರಗಳ ನಾಯಕರೂ ಶಹೀದ್ ಆಗಿ ಮರಣ ಹೊಂದುವ ಮುರ್ಸಿಯನ್ನು ಹೆದರಿದ್ದರು. ಆದ್ದರಿಂದ ಮುರ್ಸಿಯನ್ನು ಸೆರೆವಾಸದಲ್ಲಿರಿಸಿ ಇಂಚಿಂಚಾಗಿ ಕೊಲ್ಲಬೇಕೆಂಬುದು ಅವರ ಬಯಕೆಯಾಗಿತ್ತು.ಹಲವು ಬಾರಿ ಕೋರ್ಟ್ ನಲ್ಲಿ ಮುರ್ಸಿ ಅದರ ಕುರಿತು ಪ್ರಸ್ತಾಪಿಸುತ್ತಿದ್ದರು.

ಮೌತುಲ್ ಬತೀಹ- ಸಾವಾಧಾನದ ಮರಣವಾಗಿದೆ ನನಗೆ ವಿಧಿಸಿರುವುದು. ಇಂಚಿಂಚಾಗಿಯಾಗಿದೆ ಅವರು ನನ್ನನ್ನು ಕೊಲ್ಲುವುದು. ದಡ್ಡರಾದ ಸ್ವೇಚ್ಛಾಧಿಪತಿಗಳು ಮನುಷ್ಯರನ್ನು ಕೊಲ್ಲುವುದೂ ಇದೇ ರೀತಿಯಾಗಿದೆ. ಯಾಸರ್ ಅರಫಾತ್ ರನ್ನು ಕೊಂದದ್ದೂ ಇದೇ ರೀತಿ ವಿಷ ನೀಡಿಯಾಗಿತ್ತು. ಹಮಾಸ್ ನಾಯಕ ಖಾಲಿದ್ ಮಿಶ್’ಅಲ್ ರನ್ನು ಕೊಲ್ಲಲು ಪ್ರಯತ್ನಿಸಿದ್ದೂ ಇದೇ ರೀತಿಯಲ್ಲಿ ಒಂದು ಪ್ರತ್ಯೇಕ ವಸ್ತುವನ್ನು ಅವರ ಕಿವಿಗಳ ಬಳಿಯಲ್ಲಿಟ್ಟು ಸ್ವಾಭಾವಿಕ ಮರಣವೆಂದು ಬಿಂಬಿಸಲಾಗಿತ್ತು ಮೊಸಾದ್ ರ ಪ್ರಯತ್ನ. ಆದರೆ ಅವರ ಅಜೆಂಡಾ ಫಲಿಸಿರಲಿಲ್ಲ.
ನಿಜವಾಗಿ ಸಹಜ ಮರಣವೆಂದು ಹೇಳಲಾಗುವ ಮರಣಗಳೆಲ್ಲವು ಕೊಲೆಗಳಾಗಿವೆ. ಹಾಗೆ ಕೊಲ್ಲಲ್ಪಟ್ಟ ಓರ್ವರಾಗಿದ್ದಾರೆ ಶಹೀದ್ ಮುಹಮ್ಮದ್ ಮುರ್ಸಿ. ಅವರನ್ನು ಇದೇ ರೀತಿ ಸೆರೆಮನೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಉಸಿರುಗಟ್ಟಿಸುವಂತಹ ಸಣ್ಣ ಸೆಲ್ಲಿನಲ್ಲಿಟ್ಟು ಕೊಲ್ಲಲಾಯಿತು. ತನ್ನ ಮಕ್ಕಳನ್ನೋ ,ಪತ್ನಿಯನ್ನೋ ಸಂದರ್ಶಿಸಲು ಅವರನ್ನು ಅನುಮತಿಸಿರಲಿಲ್ಲ. ಅದರ ಕುರಿತು ಅನೇಕ ಬಾರಿ ಪ್ರಿಯ ಪುತ್ರ ಪತ್ರಿಕಾ ಸಂದರ್ಶನಗಳಲ್ಲಿ ಮಾನವ ಹಕ್ಕುಗಳ ಸಂಘಟನೆಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮಧ್ಯ ಪ್ರವೇಶಿಸಬೇಕೆಂದು ಕೋರಿದರೂ ಅವೆಲ್ಲವು ನಿರಾಕರಿಸಲ್ಪಟ್ಟಿತ್ತು.

ಡಾ ಮುಹಮ್ಮದ್ ಮುರ್ಸಿ ಕೋರ್ಟ್ ನಲ್ಲಿ ನ್ಯಾಯಾಧೀಶರನ್ನು ಉದ್ದೇಶಿಸಿಯಾಡುವ ಮಾತುಗಳು ಮಾತ್ರ ಇಂದು ನಮಗೆ ಲಭಿಸುವುದು. ಅದರಲ್ಲಿ ಅವರು ಹಲವು ವಿಚಾರಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಅವರು ಒಮ್ಮೆ ಹೇಳಿದರು ‘ನಾನು ಅವರೊಂದಿಗೆ ಕುರ್ಆನ್ ಕೇಳಿದೆ ಆದರೆ ಅವರು ನನಗೆ ಅದನ್ನು ಜೈಲಿನಲ್ಲಿ ನಿಷೇಧಿಸಿದರು. ಮುಹಮ್ಮದ್ ಮುರ್ಸಿ ನ್ಯಾಯಾಲಯದಲ್ಲಿ ಈ ರೀತಿ ಹೇಳಿದರು ‘ಅವರು ನನಗೆ ಕುರಾನ್ ನೀಡದಿದ್ದರೆ ನನಗೆ ಓದಲು ಸಾಧ್ಯವಿಲ್ಲವೆಂದಲ್ಲ, ನಾನು ಬಹಳ ಚಿಕ್ಕಂದಿನಲ್ಲಿಯೇ ಕುರ್ಆನನ್ನು ಕಂಠಪಾಠಗೊಳಿಸಿದವನಾಗಿದ್ದೇನೆ. ಆದ್ದರಿಂದ ನಾನು ಕುರಾನ್ ಕೇಳಿದ್ದು ಅದನ್ನೊಮ್ಮೆ ಮುಟ್ಟಬೇಕೆಂಬ ಆಸೆಯಿಂದ ಬದಲಾಗಿ ನನಗೆ ತಿಳಿಯದಿದ್ದರಿಂದಲ್ಲ’.
ಕುರ್ಆನನ್ನು ಅಷ್ಟು ಮಾತ್ರಕ್ಕೂ ಭಯಪಡುವ ಆಡಳಿತಗಾರರೂ ,ಸೈನ್ಯವೂ ಆಗಿತ್ತು ಈಜಿಪ್ಟ್ ನಲ್ಲಿರುವುದು. ಸೈಯದ್ ಖುತುಬ್ ರನ್ನು ಹಾಗೂ ಅವರ ಅನುಯಾಯಿಗಳನ್ನು ಕೊಲ್ಲುವ ವೇಳೆಯಲ್ಲಿ ಜೈಲ್ ಅಧಿಕಾರಿಗಳು ಕುರಾನನ್ನು ತಮ್ಮ ಕಾಲುಗಳಿಂದ ತುಳಿದದ್ದು ನಮಗೆ ಇತಿಹಾಸದಲ್ಲಿ ಕಾಣಬಹುದು. ನಿಜವಾಗಿಯೂ ಇವರ ವಿರೋಧವು ಸೈಯದ್ ಕುತುಬ್ ರೊಂದಿಗೋ,ಹಸನುಲ್ ಬನ್ನಾರೊಂದಿಗೋ, ಮುಹಮ್ಮದ್ ಮುರ್ಸಿಯೊಂದಿಗೋ ಅಲ್ಲ ಬದಲಾಗಿ ಅಲ್ಲಾಹನ ಕುರಾನ್ ನೊಂದಿಗಾಗಿದೆ.
ಮಹಾನ್ ನಾಯಕ ಡಾ ಮುರ್ಸಿಯು ಉಮ್ರಾ ಮಾಡಿ ಇಹ್ರಾಮ್ ವಸ್ತ್ರದಲ್ಲಿ ನಮಾಝ್ ಮಾಡುತ್ತಿರುವಾಗ ಕುರಾನ್ ಸೂಕ್ತಗಳನ್ನು ಆಲಿಸುತ್ತಾ ಅಳುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಮುರ್ಸಿ ಎಂಬ ವ್ಯಕ್ತಿಯು ನಾವ್ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲದಂತಹ ಧೀಮಂತ ನಾಯಕರಾಗಿದ್ದರು.
ತುರ್ಕಿಯ ಪ್ರದಾನಿ ರಜಬ್ ತಯ್ಯಿಬ್ ಉರ್ದುಗಾನ್ ಸಿ.ಸಿ ಯ ಕುರಿತು ಪ್ರತಿಕ್ರಯಿಸುತ್ತಾ ‘ ನನಗೆ ಸಿ.ಸಿ ಯನ್ನು ಕಾಣಲು ಸಾಧ್ಯವಿಲ್ಲ. ಜನಾಭಿಮತದಿಂದ ಆಯ್ಕೆಯಾಗಿ ಈಜಿಪ್ಟ್ ನ ಅಧ್ಯಕ್ಷರಾದ ಮುರ್ಸಿ ಎಂಬ ಅಧ್ಯಕ್ಷ ನೇಮಿಸಿದ ಸೇನಾಧಿಕಾರಿಯಾಗಿದ್ದರು ಅಬ್ದುಲ್ ಫತಾಹ್ ಸಿಸಿ. ತನ್ನನ್ನು ನೇಮಿಸಿದ ಅದೇ ಅಧ್ಯಕ್ಷರನ್ನು ಅರಮನೆಯಿಂದ ಸೆರೆಮನೆಗೆ ತಳ್ಳಿದ ಅತ್ಯಂತ ಕ್ರೂರಿ ಸಿ.ಸಿ ಯನ್ನು ಹೇಗೆ ತಾನೇ ನೋಡಲಿ? ಎಂದು ದುಃಖಿತರಾಗುತ್ತಾರೆ.

ಕೊನೆ ಪಕ್ಷ ಮುರ್ಸಿಯ ಮಯ್ಯತ್ ನೊಂದಿಗೂ ಅವರು ನ್ಯಾಯ ಪಾಲಿಸಲಿಲ್ಲ. ಮಯ್ಯತ್ ಸ್ನಾನ ಮಾಡಿಸಿ ಸಾಮಾನ್ಯ ಪ್ರಜೆಯಂತೆ ಅವರನ್ನು ಕೊಂಡುಹೋದರು. ಜನಾಝದಲ್ಲಿ ಪಾಲ್ಗೊಳ್ಳಲು ಕೇವಲ ಅವರೆರಡು ಪುತ್ರರಿಗೆ ಹಾಗೂ ವಕೀಲನಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಪ್ರಿಯ ಪತ್ನಿಗೆ ಕೊನೆಯ ಬಾರಿ ಪತಿಯ ಮುಖ ನೋಡಲೂ ಅವರು ಅವಕಾಶ ನೀಡಲಿಲ್ಲ. 3 ವರ್ಷಗಳಿಂದ ಅವರನ್ನು ನೋಡಲು ಮನೆಯವರಿಗೆ ಅವಸರ ನೀಡಿರಲಿಲ್ಲ.
ಜನಾಭಿಮತದಿಂದ ಆಡಳಿತ ಪಡೆದ ಮುರ್ಸಿ ಯೊಡನೆ ಅವರು ಅತೀ ಕ್ರೂರವಾಗಿ ವರ್ತಿಸಿದರು.

ಯಾ ಶಹೀದ್ ಅಸ್ಸಲಾಮ್❤
ಅಲ್ಲಾಹನು ಅವರೆಲ್ಲಾ ಸತ್ಕರ್ಮ ಗಳನ್ನು ಸ್ವೀಕರಿಸಿ ಜನ್ನಾತುಲ್ ಫಿರ್ದೌಸ್ ನೀಡಿ ಅನುಗ್ರಹಿಸಲಿ
ಆಮೀನ್??????

ಮುಹಮ್ಮದ್ ಮುರ್ಸಿ?
ಕ್ರಾಂತಿಕಾರಿಗಳಿಗೆ ಪ್ರೇರಣೆ ಹಾಗೂ ನಿರೀಕ್ಷೆಯಾಗಿ ನಿಮ್ಮ ಹೆಸರು ಲೋಕಾಂತ್ಯದವರೆಗೆ ಪ್ರತಿಧ್ವನಿಸಲಿದೆ………..❗

LEAVE A REPLY

Please enter your comment!
Please enter your name here