• ಶಾರೂಕ್ ತೀರ್ಥಹಳ್ಳಿ

ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದಂತಹ ಮೂರು ವಿಡಿಯೋಗಳು ವೈರಲ್ ಆಗಿತ್ತು. ಅದರಲ್ಲಿ ಒಂದರಲ್ಲಿ ಒಬ್ಬಳು ಮಹಿಳೆ ತನ್ನ ಮಕ್ಕಳು ಹಸಿವಾಗುತ್ತಿದೆ ಎಂದು ಹೇಳಿದಾಗ ಬೇಯಿಸಲು ಅನ್ನವಿಲ್ಲದೆ ಮಕ್ಕಳನ್ನು ಸಮಾದಾನ ಪಡಿಸುವ ಸಲುವಾಗಿ ಕಲ್ಲುಗಳನ್ನು ಬೇಯಿಸುತ್ತಿರುವ ದೃಶ್ಯ, ಇನ್ನೊಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಿನ್ನಲು ಆಹಾರ ಸಿಗದೆ ಮರದಿಂದ ಬಿದ್ದಂತಹ ಎಲೆಗಳನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದಂತಹ ದೃಶ್ಯ. ಇನ್ನೊಂದು ವಿಡಿಯೋ ಒಬ್ಬ ವ್ಯಕ್ತಿ ಹಸಿವನ್ನು ತಾಳಲಾರದೆ ಆಹಾರ ಸಿಗದೆ ಕೊನೆಗೆ ರಸ್ತೆಯ ಬದಿಯಲ್ಲಿ ಸತ್ತ ನಾಯಿಯ ಮಾಂಸವನ್ನು ತಿನ್ನುತ್ತಿದಂತಹ ದೃಶ್ಯ. ಈ ಮೂರು ದೃಶ್ಯಗಳನ್ನು ನೋಡಿದವರ ಹೃದಯ ಒಮ್ಮೆಲೆ ಕರಗಿದಂತು ಸತ್ಯ. ಈ ಮೂರು ಘಟನೆಗಳು ನಡೆದದ್ದು, ಸೆಂಟ್ರಲ್ ಆಫ್ರೀಕಾ ಅಥವಾ ಸೊಮಾಲಿಯಾದಲ್ಲಿ ಅಲ್ಲ. ಇದು ನಡೆದದ್ದು ನಮ್ಮ ಭಾರತ ದೇಶದಲ್ಲಿ.

ಭಾರತದ ಪ್ರಮುಖ ಸಮಸ್ಯೆಗಳಲ್ಲಿ ಬಡತನ ಹಸಿವು ಕೂಡ ಒಂದು. 2019ರ “ದಿ ಸ್ಟೇಟ್ ಆಫ್ ಫುಡ್ ಸೆಕ್ಯೂರಿಟಿ ಅಂಡ್ ನ್ಯೂಟ್ರಿಯನ್ ಇನ್ ದಿ ವರ್ಡ್ “ ವರದಿಯ ಪ್ರಕಾರ ಭಾರತ ದೇಶದಲ್ಲಿ ಸುಮಾರು 194.4 ಮಿಲಿಯನ್ ನಷ್ಟು ಜನ ಸರಿಯಾದ ಪೌಷ್ಠಿಕ ಆಹಾರ ಇಲ್ಲದೆ ಬಳಲುತ್ತಿದ್ದಾರೆ ಎಂದು ಅಧಿಕೃತ ವರದಿಗಳು ಸಹ ನಮಗೆ ತಿಳಿಸುತ್ತದೆ. ಹಲವು ಸರ್ಕಾರಗಳು ಆಡಳಿತ ನಡೆಸಿದವು, ಈ ದೇಶವನ್ನು ಹಸಿವು ಮುಕ್ತಗೊಳಿಸುತ್ತೇವೆ ಎಂದು ಹಲವು ಭಾಷಣಗಳ್ಳಿ ಹೇಳಲಾಯಿತು. ಬಡವರಿಗೆ ಹಲವು ಬಗೆಯ ಭರವಸೆಗಳನ್ನು ಸಹ ನೀಡಲಾಯಿತು. ಹಸಿವು ಮುಕ್ತಗೊಳಿಸುವುದಕ್ಕಾಗಿ ಹಲವು ರೀತಿಯ ಬಜೆಟ್ ಗಳನ್ನು ಸಹ ರೋಪಿಸಲಾಯಿತು ಆದರು ಇಲ್ಲಿಯವರೆಗೂ ಯಾವ ಸರ್ಕಾರಕ್ಕೂ ಈ ದೇಶವನ್ನು ಹಸಿವು ಮುಕ್ತಗೊಳಿಸಲು ಸಾಧ್ಯವಾಗದೇ ಇಲ್ಲದಂತಾಯಿತು.

ಕಣ್ಣು ಕಾಣದವನ ಬಳಿ ಕಣ್ಣಿನ ಅವಶ್ಯಕತೆ ಬಗ್ಗೆ ಕೇಳಿದರೆ ಆತ ಕಣ್ಣಿನ ಅವಶ್ಯಕತೆ ಬಗ್ಗೆ ಹೇಳುತ್ತಾನೆ. ಕಾಲಿಲ್ಲದವನ ಬಳಿ ಹೋಗಿ ಕಾಲಿನ ಅವಶ್ಯಕತೆ ಎಷ್ಟಿದೆ ಎಂದು ಕೇಳಿದರೆ ಆತ ಕಾಲಿನ ಅವಶ್ಯಕತೆಯ ಬಗ್ಗೆ ವಿವರಿಸುತ್ತಾನೆ ಹಾಗೆಯೇ ಹಸಿವಿನ ಕಷ್ಟ, ನೋವಿನ ಬಗ್ಗೆ ಒಬ್ಬ ಹಸಿದವನಿಗೆ ಮಾತ್ರ ಗೊತ್ತಿರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಇಸ್ಲಾಮ್ ಧರ್ಮದಲ್ಲಿ ರಮಝಾನ್ ತಿಂಗಳ ಉಪವಾಸವನ್ನು ಕಡ್ಡಾಯಗೊಳಿಸಲಾಯಿತು. ಉಪವಾಸವನ್ನು ಆರಾಧನ ಕರ್ಮದಲ್ಲಿ ಸೇರಿಸಲಾಯಿತು. ಇಸ್ಲಾಮೀನ ಮೂಲಭೂತ ತತ್ವಗಳಲ್ಲಿ ಒಂದಾಗಿ ಪರಿಗಣಿಸಲಾಯಿತು. ಪ್ರತಿಯೊಬ್ಬ ಶ್ರೀಮಂತರಿಗೂ ಕೂಡ ಹಸಿವಿನಿಂದ ಇರುವವರ ಕಷ್ಟಗಳಲ್ಲಿ, ನೋವಿನಲ್ಲಿ ನೀವು ಸಹ ಭಾಗೀದಾರಾಗಬೇಕು ಆ ಮೂಲಕ ಹಸಿದವನ ಕಷ್ಟವನ್ನು ಅರಿತು ನೀವು ಸಹ ಅದಕ್ಕೆ ಸ್ಪಂದನೆ ನೀಡಬೇಕು ಎಂದು ಪ್ರವಾದಿಗಳ ಮೂಲಕ ಕಲಿಸಿಕೊಡಲಾಯಿತು.

ಇದೀಗ ಮೂವತ್ತು ದಿನದ ಉಪವಾಸ ಆಚರಿಸಿದ ಮುಸ್ಲೀಮರಿಗೆ ಈದುಲ್ ಫಿತ್ರ್ ಪುನಃ ಲಭಿಸಿದೆ, ಈದ್ ಎಂದರೆ ಸಂತೋಷ ಆದರೆ ಈ ಬಾರಿಯ ಈದ್ ಕೊರೋನ ಎಂಬ ಮಹಾಮಾರಿ ರೋಗದ ಸಮಯದಲ್ಲಿ ಬಂದಿರುವುದರಿಂದ ಸಂತೋಷ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಎಲ್ಲಾ ಮಸೀದಿಗಳಲ್ಲಿ ಈ ಬಾರಿಯ ರಮಝಾನ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ.

ಈದುಲ್ ಫಿತ್ರ್‍ನಂದು ಇಸ್ಲಾಮ್ ಜಾರಿಗೊಳಿಸಿದ ಫಿತ್ರ್ ಝಕಾತ್ ಎಂಬ ನಿರ್ಬಂದ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಡು ಸಂತೋಷ ಪಡಬೇಕೆಂಬ ಸದುದ್ದೇಶದಿಂದ ಕೂಡಿದೆ. ಈದುಲ್ ಫಿತ್ರ್ ಹಬ್ಬವನಾಚರಿಸಲು ಆರ್ಥಿಕ ಸಾಮಥ್ರ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿಕಲರಿಗೂ, ವಿಧವೆಯರಿಗೂ ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡಬಹುದಾಗಿದೆ.

ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು, ತಾನು ಗಳಿಸಿದ ಎಲ್ಲಾ ಸಂಪತ್ತನ್ನು, ತನ್ನ ಮತ್ತು ತನ್ನವರ ಹಿತಾಸತ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್ ನಿಷೇಧಿಸಿದೆ “ನೀನು ಗಳಿಸಿದ ಸಂಪತ್ತೂ ನಿನ್ನದಾಗುವುದಿಲ್ಲ, ಅದರಲ್ಲಿ ಶೇಕಡಾ ಎರಡೂವರೆ ಅಂಶವನ್ನು ನೀನು ಬಡವರಿಗೆ, ದೀನದಲಿತರಿಗೆ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರಿಗೆ ಕಡ್ಡಯವಾಗಿ ನೀಡಲೇ ಬೇಕು ಇದು ನೀನು ದೇವನ ಮಾರ್ಗದಲ್ಲಿ ಪುಣ್ಯಸಂಪಾದನೆಗಾಗಿ ವ್ಯಯಿಸುವ ಪ್ರಕ್ರಿಯೆ. ಒಂದು ವೇಳೆ ನೀನು ಸ್ವಾರ್ಥ ದೃಷ್ಟಿಯಿಂದ ಅಲ್ಲಾಹನ ಕೃಪೆಯಿಂದ ಗಳಿಸಿರುವ ಸಂಪತ್ತಿನಲ್ಲಿ ಎರಡೂವರೆ ಅಂಶವನ್ನು “ಝಕಾತ್ ನೀಡಲು ಹಿಂಜರಿಯುವೆ ಎಂದಾದರೆ ಆ ನಿನ್ನ ಎಲ್ಲಾ ಸಂಪತ್ತು ಅಲ್ಲಾಹನ ದೃಷ್ಟಿಯಲ್ಲಿ ಅಶುದ್ಧ ಮತ್ತು ಅದನ್ನು ಗಳಿಸಲು ಉಪಯೋಗಿಸಿದ ನಿನ್ನ ದೇಹವೂ ಮಲಿನವಾಗಿದ್ದು. ನೀನು ಅಲ್ಲಾಹನ ಅನುಗ್ರಹದಿಂದ ಗಳಿಸಿರುವ ಸಂಪತ್ತಿನಲ್ಲಿ ದೀನದಲಿತರ ಬಡಬಗ್ಗರ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರ ಒಂದು ಪಾಲು ಸೇರಿಕೊಂಡಿದೆಯೆಂದು ನೀನು ಅರ್ಥಮಾಡಿಕೊಳ್ಳಬೇಕು” ಎಂದು ಕುರ್‍ಆನ್ ಮಾನವಕುಲಕ್ಕೆ ಬೋಧಿಸಿದೆ.

‘ತನ್ನ ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ಮುಸಲ್ಮಾನನಲ್ಲ, ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಏನಲ್ಲಾ ಒಳಿತನ್ನು ಅಪೇಕ್ಷಿಸುತ್ತೀರೋ, ಅವೆಲ್ಲವೂ ನಿಮ್ಮ ಸಹೋದರ ಬಾಂಧವರಿಗೂ ದೋರೆಯುವಂತೆ ಬಯಸಿರಿ. ಅಲ್ಲಿಯ ತನಕ ನೀವಾರೂ ಪರಿಪೂರ್ಣ ಸತ್ಯವಿಶ್ವಾಸಿಗಳಾಗಲಾರಿರಿ’ ಎಂದು ಪ್ರವಾದಿ ಮುಹಮ್ಮದ್ರವರು(ಸ) ಮನುಕುಲಕ್ಕೆ ಕರೆ ನೀಡಿರುವರು.

ಈದುಲ್ ಫಿತ್ರ್ ನ ಇನ್ನೊಂದು ಮುಖ್ಯ ಸಂದೇಶವೇನೆಂದರೆ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಮನುಕುಲಕ್ಕೆ ಬೋಧಿಸಿ, ಬದುಕಿನ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ ರವ್ಮಝಾನ್ ಮತ್ತು ಈದುಲ್ ಫಿತ್ರ್ ಸಾರುವ ಸತ್ಯ, ಶಾಂತಿ ಸೌಹಾರ್ದತೆಗಳು ಬದುಕಿನಲ್ಲಿ ಭರವಸೆಯನ್ನು, ಸ್ಪೂರ್ತಿಯನ್ನೂ ಮತ್ತು ನವ ಚೈತನ್ಯವನ್ನು ತುಂಬುದಕ್ಕೆ ನಮಗಿಂದು ಅಗತ್ಯವಾಗಿದೆ. ಬದುಕಿನ ಜಂಜಾಟ ಮರೆಯುತ್ತಿರುವ ನೈತಿಕ ಮೌಲ್ಯವನ್ನು ಮತ್ತು ಜಾಗೃತಗೊಳಿಸಿ, ಬದುಕಿಗೆ ಉನ್ನತ ಅರ್ಥವನ್ನು ಕಲ್ಪಿಪಸುವುದೇ ಹಬ್ಬಗಳ ಗುರಿ. ಈದುಲ್ ಫಿತ್ರ್ ಸಾರುವ ಸಮಾನತೆ ಮತ್ತು ಸಹೋದರತೆಯ ಮನುಷ್ಯನ ದೈನಂದಿನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ ಮನುಷ್ಯನು ಸಂತೋಷಪಡಬೇಕಾದುದು ಕೇವಲ ತನ್ನೊಬ್ಬನ ವೈಯಕ್ತಿಕ ಏಳಿಗೆಯಲ್ಲಿ ಮಾತ್ರವಲ್ಲ ಬದಲಾಗಿ, ಸರ್ವ ಮನುಕುಲದ ಹಿತ ಸಾಧನೆಯಲ್ಲಿ ಸಂತೋಷಪಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಇಸ್ಲಾಮ್ ನೀಡಿದ ಉನ್ನತ ಮೌಲ್ಯಗಳು ಬದುಕನ್ನು ಪಾವನಗೊಳಿಸುತ್ತದೆ.

ಕೊರೋನ ಸೋಂಕಿನಿಂದ ಈಗಾಗಲೇ ಲಕ್ಷಾಂತರ ಜನ ಮರಣ ಹೊಂದಿದ್ದಾರೆ, ಲಕ್ಷಾಂತರ ಜನ ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಪ್ರಾರ್ಥಿಸೋಣ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ನಾವು ಆರೋಗ್ಯದಿಂದಿದ್ದರೆ ನಮ್ಮ ಸಮಾಜ ಕೂಡ ಆರೋಗ್ಯದಿಂದಿರುತ್ತದೆ. ಕೊರೋನ ಎಂಬ ಮಹಾಮಾರಿಯ ವಿರುದ್ದ ಹೊರಾಟ ನಡೆಸಲು ನಾವೆಲ್ಲರೂ ಸದಾ ಸಿದ್ದರಾಗೋಣ.

LEAVE A REPLY

Please enter your comment!
Please enter your name here