• ಶರೀಫ್ ಕಾಡುಮಠ

ಖ್ಯಾತ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಅವರ 2013ರ ಭಾಷಣವೊಂದರ ತುಣುಕನ್ನು ಹಂಚಿಕೊಂಡಿದ್ದರು. ಮುಂಬೈ-ಅಹ್ಮದಬಾದ್ ನಡುವೆ ಬುಲೆಟ್ ರೈಲು ಆರಂಭಿಸುವ ಕುರಿತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೋದಿ ಸಲಹೆ ನೀಡಿದ್ದರ ಬಗ್ಗೆ ಆ ಭಾಷಣದಲ್ಲಿ ಹೇಳಿದ್ದರು.
ಮನಮೋಹನ್ ಸಿಂಗ್ ತನ್ನ ವಾಕ್ಚಾತುರ್ಯದಿಂದಲೋ, ವೇಷ ಭೂಷಣ, ಭಾಷಣಗಳಿಂದಲೋ ಜನಪ್ರಿಯತೆ ಗಳಿಸಿ ಪ್ರಧಾನಿ ಆದವರಲ್ಲ. ಅಥವಾ ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಇಂಥವುಗಳನ್ನು ಮಾಡಿದವರೂ ಅಲ್ಲ. ಪ್ರಚಾರ ಗಿಟ್ಟಿಸುವ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಗಮನ ಹರಿಸಿದ್ದು ಯಾರ ನೆನಪಿನಲ್ಲೂ ಇರಲಿಕ್ಕಿಲ್ಲ, ಎಂದರೆ ಆ ವ್ಯಕ್ತಿ ಪ್ರಚಾರದ ಹಿಂದೆ ಬಿದ್ದಿರಲಿಲ್ಲ.‌ ಹಾಗೆಲ್ಲಾದರೂ ಅಬ್ಬರದ ಪ್ರಚಾರ ನಡೆಸಿದ್ದರೆ ಈಗಲೂ ಅವರೇ ಪ್ರಧಾನಿ ಆಗಿ ಉಳಿಯುತ್ತಿದ್ದರು. ತನ್ನ ಅಗಾಧವಾದ ಆರ್ಥಿಕ ಅರಿವಿನ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಮನಮೋಹನ್ ಸಿಂಗ್ ಅವರಿಗೆ, ಪ್ರಚಾರಗಳ ಮೂಲಕ, ಭಾವನಾತ್ಮಕ ವಿಚಾರಗಳನ್ನು ಎತ್ತಿಕೊಂಡು ಜನರನ್ನು ಮರುಳು ಮಾಡುವ ಮೂಲಕವೇ ಮೇಲೇರಿದ ಮೋದಿ ಇಂತಹದೊಂದು ಪುಕ್ಕಟೆ ಸಲಹೆ ನೀಡಿದ್ದು ಹಾಸ್ಯಾಸ್ಪದ. ಸಲಹೆ ನೀಡುವುದು ತಪ್ಪಲ್ಲ. ಆದರೆ ಆ ಸಲಹೆಯನ್ನೂ, ತಾನು ಸಲಹೆ ನೀಡುತ್ತಿರುವ ವ್ಯಕ್ತಿಯನ್ನೂ ಗಮನಿಸಬೇಕಲ್ಲವೇ. ಮೋದಿಯವರೇ ಹೇಳಿದಂತೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮುಂಬೈ-ಅಹಮದಬಾದ್ ನಡುವೆ ಬುಲೆಟ್ ಟ್ರೈನ್ ಆರಂಭಿಸಲು ಸೂಚಿಸಿದರಂತೆ. ಆಗ ಮನಮೋಹನ್ ಸಿಂಗ್, ‘ಅದರ ಅಗತ್ಯವೇನಿದೆ ಈಗ?’ ಎಂದು ಕೇಳಿದರು. ‘ಅಗತ್ಯದ ಪ್ರಶ್ನೆ ಅಲ್ಲ, ಒಂದು ವೇಳೆ ಬುಲೆಟ್ ಟ್ರೈನ್ ಆರಂಭಿಸಿದರೆ ಇಲ್ಲಿನ ಜನ ಅದರಲ್ಲಿ ಕೂರಲಿಕ್ಕಿಲ್ಲ. ಆದರೂ ಹೊರದೇಶದವರಿಗೆ ನಮ್ಮಲ್ಲಿಯೂ ಇಂತಹ ದೊಡ್ಡ ದೊಡ್ಡ ವ್ಯವಸ್ಥೆಗಳಿವೆ ಎಂದು ತೋರಿಸಲಿಕ್ಕಾಗಿ ಇಂಥದ್ದೆಲ್ಲ ಮಾಡಬೇಕಾಗುತ್ತದೆ’ ಎಂದರಂತೆ ಮೋದೀಜಿ!

ಇದೆಂತಹ ಖತರ್ನಾಕ್ ಐಡಿಯಾ! ಮೋದಿ ಅವರ ಈ ಸಲಹೆಯ ಕುರಿತು ಜನರು ಆಗಲೇ ಎಚ್ಚೆತ್ತಿದ್ದರೆ ಇಂದು ಭಾರತಕ್ಕೆ ಇಂತಹ ಗತಿ ಬರುತ್ತಿರಲಿಲ್ಲ (ವಿಪರ್ಯಾಸವೆಂದರೆ ಆ ಭಾಷಣದಲ್ಲಿ ಮೋದಿ ಅವರ ಸಲಹೆಗೆ ಜನರ ಚಪ್ಪಾಳೆಯೋ ಚಪ್ಪಾಳೆ!). ಬಹುಷಃ ಮನಮೋಹನ್ ಸಿಂಗ್ ಮೋದಿ ಅವರ ಬಗ್ಗೆ ಆ ಹೊತ್ತಿನಲ್ಲಿ ಮನಸ್ಸಿನಲ್ಲೇ ಏನೆಂದುಕೊಂಡಿರಬಹುದೋ ಗೊತ್ತಿಲ್ಲ. ಹೀಗೂ ಸಲಹೆ ಕೊಡಬಹುದೇ ಎಂದು ಆಶ್ಚರ್ಯವಾಗುತ್ತದೆ. ಹೊರಪ್ರಪಂಚಕ್ಕೆ ನಾವೇನೂ ಕಮ್ಮಿ ಇಲ್ಲ ಎಂದು ತೋರಿಸುವ ಮೋದಿ ಅವರ ಈ ರೀತಿಯ ಐಡಿಯಾ ನಿಜಕ್ಕುಇ ಭಾರತವನ್ನು ಬಡವಾಗಿಸುತ್ತದೆ. ಏನೂ ಬೇಡ, ನೇರವಾಗಿ ಒಮ್ಮೆ ಪಟೇಲರ ಪ್ರತಿಮೆಯನ್ನು ನೋಡಿ. ಆಗಲೇ ಅರ್ಥವಾಗುತ್ತದೆ. ಮನಮೋಹನ್ ಸಿಂಗ್ ಅವರಿಗೆ ಮೋದ ನೀಡಿದ ಸಲಹೆಯನ್ನು ನೆನಪಿಸಿದಾಗ ಈ ಪ್ರತಿಮೆಯ ಪ್ರತಿಷ್ಠೆ ಅಷ್ಟು ಅಚ್ಚರಿ ಹುಟ್ಟಿಸದು. ಆದರೆ ಮೋದಿಯವರ ಗೀಳಿನ ಬಗ್ಗೆ ನಂಬಿಕೆ ಬರಬಹುದು. ಕಮ್ಮಿ ಇಲ್ಲ ಎಂದು ತೋರಿಸಿಕೊಳ್ಳಲು ಹೋಗಿ ಕೊನೆಗೆ ಟ್ರಂಪ್ ಭೇಟಿ ವೇಳೆ ತನ್ನದೇ ರಾಜ್ಯದಲ್ಲಿ ಕೊಳಗೇರಿ ಪ್ರದೇಶಕ್ಕೆ ಗೋಡೆ ಕಟ್ಟಬೇಕಾದ ಸ್ಥಿತಿ ಬಂತು ಮೋದೀಜಿಗೆ. ಇದು ಒಂದು ತಮಾಷೆ ಎಂದು ಬಿಟ್ಟುಬಿಡುವ ಸಂಗತಿಯೇನಲ್ಲ. ಇತಿಹಾಸ ಇದನ್ನು ನೆನಪಿಟ್ಟುಕೊಳ್ಳಬೇಕಿದೆ. ಮೋದಿ ಆಡಳಿತದ ಅವಧಿಯಿಂದ ಕಲಿಯಬೇಕಾದ ಪಾಠ ಇದು. ಮುಂದಾಲೋಚನೆಗಳಿಲ್ಲದ, ಸಾಮಾನ್ಯ ಜನರ ಬದುಕಿನ ಅಗತ್ಯತೆಯ ಅರಿವಿಲ್ಲದ ವ್ಯಕ್ತಿಯನ್ನು ನಾಯಕನಾಗಿ ಆರಿಸಿದರೆ, ಆತನ ಆಡಳಿತದಿಂದಾಗಿ ಒಂದು ದೇಶ ಹೇಗೆ ಅಧಃಪತನಕ್ಕೆ ಕುಸಿಯಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇನ್ನೊಂದು ಅವಕಾಶ ಬಾರದು, ಬಾರದಿರಲಿ. ಹಾಗಾಗಿ ಮೋದಿ ಆಡಳಿತದ ಈ ಸಂದರ್ಭವನ್ನೇ ಅಂತಹ ತಿಳುವಳಿಕೆಗಾಗಿ ಬಳಸಿಕೊಳ್ಳಬೇಕಿದೆ.

ಪ್ರಚಾರದ ಗೀಳು ಮೋದೀಜಿಗೆ ವಿಪರೀತ. ಪ್ರತಿಯೊಂದರಲ್ಲೂ ಪ್ರಚಾರದ ಸಾಧ್ಯತೆಯನ್ನೇ ಹುಡುಕುವ ಮನುಷ್ಯ. ಹಾಗಾಗಿ ಇಲ್ಲಿ ಅವರ ಯೋಜನೆಗಳು ಎಷ್ಟು ಫಲಕಾರಿ ಆಗಲಿವೆ ಎನ್ನುವುದು ಸ್ಬತಃ ಅವರಿಗೇ ಅಗತ್ಯವಿಲ್ಲ. ಆದರೆ ಅದನ್ನು ಹೇಗೆ ಪ್ರಚಾರ ಮಾಡಬಹುದು ಮತ್ತು ಅದರಿಂದ ತಾನು ಹೇಗೆ ಪ್ರಚಾರ ಪಡೆಯಬಹುದು ಎಂಬುದೇ ಮೋದಿ ಆಲೋಚನೆ. ಆದ್ದರಿಂದ ಮೋದಿ ಆಡಳಿತವನ್ನು ಆಡಳಿತ ಎನ್ನುವುದಕ್ಕಿಂತ ವ್ಯವಹಾರ ಎಂದೇ ಹೇಳಬಹುದು. ಮಾರುಕಟ್ಟೆಯಲ್ಲಿ ಮೌಲ್ಯಯುತ, ಬಾಳಿಕೆಯ ವಸ್ತುಗಳನ್ನು ಮಾರಲಾಗುತ್ತದೆ. ಆದರೆ ಪ್ರಚಾರದ ವೈಫಲ್ಯದಿಂದ ಅದು ಮಾರಾಟವಾಗದೆ ಉಳಿಯಬಹುದು. ಆದರೆ ಗುಣಮಟ್ಟವಿಲ್ಲದ, ಬೇಗ ಹಾಳಾಗಬಹುದಾದ ವಸ್ತುಗಳನ್ನು ಅದರ ಮಾರಾಟಗಾರರು ಅಬ್ಬರದ ಪ್ರಚಾರದ ಮೂಲಕ ಮಾರಾಟ ಮಾಡುತ್ತಾರೆ. ಪ್ರಚಾರದ ಶಕ್ತಿಯಿಂದ ಅವರ ಕಡೆ ಜನ ಬರುತ್ತಾರೆ. ಮೋದಿ ಯೋಜನೆಗಳಲ್ಲಿ ಯಶಸ್ವಿ ಯೋಜನೆ ಎಂದು ಜನರ ಮನಸ್ಸಿನಲ್ಲಿ ಉಳಿಯುವುದಕ್ಕೆ ಯಾವುದೂ ಇಲ್ಲ. ಆದರೆ, ನೋಟುರದ್ದತಿ, ಲಾಕ್ ಡೌನ್, ಜಿಎಸ್ಟಿ ಎನ್ ಆರ್ ಸಿ ಮುಂತಾದ ಜನರ ಬದುಕನ್ನು ಕಿತ್ತುಕೊಂಡ ಬದಲಾವಣೆಗಳು ಖಂಡಿತವಾಗಿಯೂ ಜನರ ಮನಸ್ಸಿನಿಂದ ಬಹುಕಾಲದವರೆಗೆ ಮಾಸಲಾರವು.
ತೋರಿಸಿಕೊಳ್ಳುವಿಕೆಯ ಹುಚ್ಚುತನವನ್ನು ಮೋದಿ ಅವರಿಂದ ಬಿಡಿಸಲು ಯಾರಿಗೂ ಸಾಧ್ಯವಿಲ್ಲ. ಅದು ಹಾಗೆಯೇ ಇರುತ್ತದೆ. ಒಂದು ಹೊತ್ತಿಗೆ ನಾವು ಪ್ರಪಂಚಕ್ಕೆ ಸುಂದರವಾಗಿ ಕಂಡರೆ ಸಾಲದು. ಇಲ್ಲಿನ ಜನರು ದಿನನಿತ್ಯ ಬದುಕಬೇಕಾದವರು. ಅವರಿಗೆ ಅಗತ್ಯವೆನಿಸದ ಬುಲೆಟ್ ರೈಲಿನಂತಹ ಯೋಜನೆಗಳ ಯೋಚನೆ, ಮತ್ತು ಜನರು ಅದರಲ್ಲಿ ಕೂರುವುದಿಲ್ಲ, ಅದು ವ್ಯರ್ಥ ಎಂಬುದನ್ನು ಗೊತ್ತಿದ್ದೂ ಅದನ್ನು ಮಾಡುವಂತೆ ಸಲಹೆ ನೀಡಲು ಮೋದಿಗೆ ಹೊಳೆಯುವುದಾದರೆ, ಜನಸಮಾನ್ಯ ನಾವು ಅರ್ಥಮಾಡಿಕೊಳ್ಳಬೇಕಾದ ವಿಚಾರ ಬಹಳ ಇದೆ. ಜನಸಾಮಾನ್ಯರಿಗೆ ಇಲ್ಲಿ ನೆಮ್ಮದಿಯ ಬದುಕು ಬದುಕಬೇಕಾದರೆ, ಮೋದಿ ಅವರಂತಹ ಪ್ರಚಾರ ಪ್ರಿಯ ನಾಯಕರನ್ನು ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಬಾರದು. ಇನ್ನು ಮೋದಿ ಅಧಿಕಾರಾವಧಿ ಮುಗಿಯುವವರೆಗೂ ಏನೂ ಮಾಡಲಾಗದು. ಪ್ರತಿಮೆ, ಪ್ರತಿಷ್ಠೆ, ತೋರಿಸಿಕೊಳ್ಳುವುದರಲ್ಲೇ ಕಾಲ ಮುಗಿಯುತ್ತದೆ. ಅಷ್ಟೊತ್ತಿಗೆ ನಮ್ಮ ಅವಸ್ಥೆ ಏನಾಗಿರಬಹುದು ಎಂಬುದು ಅನೂಹ್ಯ. ಆದರೆ ಮುಂದೆ ಇಂತಹ ಅಪಾಯವನ್ನು ದೇಶಕ್ಕೆ ತಂದೊಡ್ಡದೆ ಇರುವ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದೂ ಆಗಿರಲಿ.

LEAVE A REPLY

Please enter your comment!
Please enter your name here