ಲೇಖಕರು : ಶಿವಂ ವಿಜ್
ಅನುವಾದ: ನಿಖಿಲ್ ಕೋಲ್ಪೆ


ಅತ್ಯಂತ ಕೆಟ್ಟದಾಗಿ ಯೋಜಿಸಲಾದ ಅಥವಾ ನಿರ್ದಿಷ್ಟವಾದ ಯೋಜನೆಯೇ ಇಲ್ಲದ ಮೋದಿಯ ರಾಷ್ಟ್ರೀಯ ಕರ್ಫ್ಯೂ ಅಥವಾ ಲಾಕ್‌ಡೌನ್ ಭಾರತೀಯರನ್ನು ಹಸಿವಿನಿಂದ ಕೊಲ್ಲಬಹುದೇ ಹೊರತು, ಅದು ವೈರಸ್‌ನಿಂದ ಅವರನ್ನು ರಕ್ಷಿಸುವುದು ಕಷ್ಟಸಾಧ್ಯ.

ಕೊರೋನ ವೈರಸ್ ನಿಯಂತ್ರಣದಲ್ಲಿ ಈ ತನಕ ಬಹಳಷ್ಟು ಒಳ್ಳೆಯ ಸಾಧನೆ ತೋರಿದ ದೇಶಗಳು ಸಂಪೂರ್ಣ, ದೇಶವ್ಯಾಪಿ ಕರ್ಫ್ಯೂ ಮಾದರಿಯ ಲಾಕ್‌ಡೌನ್ ಹೇರಿಲ್ಲ ಎಂದು ಗಮನಿಸುವುದು ಅಗತ್ಯ. ಈ ದೇಶಗಳಲ್ಲಿ ಸಿಂಗಾಪುರ, ತೈವಾನ್, ಜರ್ಮನಿ ಮತ್ತು ತುರ್ಕಿ ಸೇರಿವೆ. ಇವೆಲ್ಲವೂ ಆರಂಭವಾದ ಚೀನಾದಲ್ಲಿಯೂ ಹ್ಯುಬೆಯ್ ಪ್ರಾಂತ್ಯವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿತ್ತಾದರೂ, ಇಡೀ ದೇಶದಲ್ಲಿ ಅದನ್ನು ಮಾಡಿರಲಿಲ್ಲ.
ಆದರೆ, ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರನ್ನು ಕರ್ಫ್ಯೂ ಮಾದರಿಯ ಲಾಕ್‌ಡೌನ್‌ನಲ್ಲಿ ಇರಿಸಿದ್ದಾರೆ. ಪಾಸ್‌ಗಳನ್ನು ನೀಡುವಾಗ ಅಧಿಕಾರಿಗಳು ‘ಕರ್ಫ್ಯೂ’ ಎಂಬ ಪದವನ್ನು ಬಳಸುತ್ತಿರುವುದರಿಂದ ಅದನ್ನು ರಾಷ್ಟ್ರೀಯ ಕರ್ಫ್ಯೂ ಎಂದು ಕರೆಯುವುದೇ ಸಮಂಜಸವಾಗಿದೆ.
21 ದಿನಗಳ ರಾಷ್ಟ್ರೀಯ ಕರ್ಫ್ಯೂ ಖಂಡಿತವಾಗಿಯೂ ಈ ಮಾರಣಾಂತಿಕ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ನೆರವಾಗಲಿದೆ. ಆದರೆ, 21 ದಿನಗಳ ನಂತರ ಏನಾಗಲಿದೆ? ಆ ಬಳಿಕ ವೈರಸೇನೂ ಮಾಯವಾಗುವುದಿಲ್ಲ- ಕನಿಷ್ಟ ನಮಗೆ ಲಸಿಕೆ ಸಿಗುವ ತನಕ. ಲಸಿಕೆಯನ್ನು ಅಭಿವೃದ್ಧಿಪಡಿಸಿದ ಮೇಲೂ ಪ್ರತೀ ಭಾರತೀಯನಿಗೆ ಲಸಿಕೆ ಹಾಕಲು ಕೆಲವು ತಿಂಗಳುಗಳೇ ಬೇಕು. ಈ ಕೆಲವು ತಿಂಗಳುಗಳು ಎಂಬುದು ಒಂದು ಆಶಾವಾದಿ ಅಂದಾಜು. ಬೇರೆ ಮಾತುಗಳಲ್ಲಿ ಹೇಳುವುದಾದಲ್ಲಿ ಕೆಲವು ವರ್ಷಗಳ ಕಾಲ ನಾವು ಈ ಗೋಜಲಿನಲ್ಲಿ ಇರಲಿದ್ದೇವೆ.
ಆದುದರಿಂದ, 21 ದಿನಗಳ ರಾಷ್ಟ್ರೀಯ ಲಾಕ್‌ಡೌನನ್ನು ಭಾರಿ ಪ್ರಮಾಣದ ಪರೀಕ್ಷಾ ಸೌಲಭ್ಯಗಳ ನಿರ್ಮಾಣಕ್ಕೆ ಕಾಲಾವಕಾಶ ಪಡೆಯುವ ಪ್ರಯತ್ನ ಎಂಬಂತೆ ಕಾಣಬೇಕಾಗಿದೆ. ಇದರಿಂದ ರೋಗಲಕ್ಷಣ ರಹಿತರನ್ನೂ ಪರೀಕ್ಷಿಸಿ, ಶಂಕಿತರನ್ನು ಪ್ರತ್ಯೇಕಿಸಬಹುದು. ನಮಗೆ ಸೂಕ್ತ ಔಷಧಿಗಳು ಮತ್ತು ಸಾಮೂಹಿಕವಾಗಿ ಹಾಕಲು ಬೇಕಾದಷ್ಟು ಲಸಿಕೆ ಸಿಗುವ ವರೆಗೆ ಇದೊಂದೇ ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಇರುವ ಹಾದಿ.

ಈ ಪೆಡಂಭೂತದ ವಿವರಗಳು

ದುರದೃಷ್ಟವಶಾತ್, ನರೇಂದ್ರ ಮೋದಿ ತನ್ನ ಎರಡೂ ಭಾಷಣಗಳಲ್ಲಿ ಭಾರತವು ಸಾಮೂಹಿಕ ಪರೀಕ್ಷೆಯ ಹಾದಿಯನ್ನು ಹಿಡಿಯದೇ ಇರುವ ಆತಂಕದ ವಿಷಯದ ಬಗ್ಗೆ ಏನನ್ನೂ ಹೇಳಿಲ್ಲ. ನಮಗೆ ತ್ವರಿತ, ಅಗ್ಗದ, ಸುಲಭವಾಗಿ ಲಭ್ಯವಾಗುವ ಪರೀಕ್ಷೆಗಳು ಬೇಕು. ಒಬ್ಬ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ, ಆ ವ್ಯಕ್ತಿ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬದ ಇತರ ಸದಸ್ಯರೂ ಸೇರಿದಂತೆ ಬೇರೆಯವರಿಗೆ ಅದನ್ನು ಹರಡದಂತೆ ತಡೆಯಲು ಉತ್ತಮವಾದ ಪ್ರತ್ಯೇಕಿಸುವ (quarantine) ವ್ಯವಸ್ಥೆ ಬೇಕು.
ಭಾರತದ ಕೊರೋನ ವೈರಸ್ ಸೋಂಕಿತರ ಅಧಿಕೃತ ಸಂಖ್ಯೆಯನ್ನು ನಂಬಿದರೆ ನೀವು ನಿಜಕ್ಕೂ ಮುಗ್ಧರು. ಪರೀಕ್ಷೆಯೇ ಇಲ್ಲದೆ, ಕೊರೋನ ವೈರಸ್ ಸಾವು ಎಂಬ ಗಣನೆಗೂ ಬಾರದೆ, ಏಕಾಏಕಿಯಾಗಿ ನ್ಯುಮೋನಿಯಾಕ್ಕೆ ಬಲಿಯಾದವರಿದ್ದಾರೆ. ವ್ಯಾಪಕವಾದ ಪರೀಕ್ಷಾ ಸೌಲಭ್ಯ ಮತ್ತು ವೈದ್ಯರಿಗೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳ ಕೊರತೆ ಒಂದು ಹಗರಣವೇ ಸರಿ.

ಈ 21 ದಿನಗಳು ಈ ಎರಡು ಸಮಸ್ಯೆಗಳನ್ನು ಪರಿಹರಿಸಲು ಮೋದಿಗಿರುವ ಕೊನೆಯ ಅವಕಾಶ. ಎಲ್ಲರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇರಬೇಕಾದುದು ಅವರಿಗೇ. ಜೊತೆಗೆ ರಾಜ್ಯ ಸರಕಾರಗಳು ಕೂಡಾ ಪರೀಕ್ಷೆಗೆ ಒಳಪಡಲಿವೆ. ದುಃಖದ ವಿಷಯವೆಂದರೆ, ಯೋಜನೆ ಮತ್ತು ಅನುಷ್ಟಾನದ ವಿವರಗಳನ್ನು ಕುರಿತು ಚಿಂತಿಸಲು ಮೋದಿ ಸರಕಾರಕ್ಕೆ ಸಾಮರ್ಥ್ಯವಿಲ್ಲ ಎಂದು ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ನೌಟಂಕಿಯನ್ನು ಸಾಧನೆ ಎಂದು ಭಾವಿಸುವ ಮೋದಿಯ ಟಿಪಿಕಲ್ ಸಮಸ್ಯೆಯಿಂದಾಗಿ, ಇದು ಇನ್ನೊಂದು ನೋಟು ಅಮಾನ್ಯೀಕರಣದ ರೂಪ ಪಡೆಯುತ್ತಿದೆ. ಪ್ರಸ್ತುತ ಎಂದರೆ, ಎಷ್ಟು ಜನ ಮೋದಿಯ ಸಲಹೆಯಂತೆ ಜಾಗಟೆ ಬಡಿದರು, ಎಷ್ಟು ಜನ ಮನೆಯೊಳಗೆ ಉಳಿದರು ಎಂಬುದಲ್ಲ. ಪ್ರಸ್ತುತ ಎಂದರೆ, ಎಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಎಷ್ಟು ವೈದ್ಯರಿಗೆ ಸುರಕ್ಷಾ ಸಾಧನಗಳನ್ನು ಒದಗಿಸಲಾಗಿದೆ, ತಕ್ಷಣದಲ್ಲಿ ಸರಕಾರ ಎಷ್ಟು ವೆಂಟಿಲೇಟರ್‌ಗಳನ್ನು ಉತ್ಪಾದಿಸಿದೆ ಅಥವಾ ಖರೀದಿಸಿದೆ ಎಂಬುದಾಗಿದೆ. ಇತರ ಪ್ರಸ್ತುತ ವಿಷಯಗಳೆಂದರೆ, ಪ್ರತ್ಯೇಕಿಸುವ ಕೇಂದ್ರಗಳು, ಒಳಾಂಗಣ ಕ್ರೀಡಾಂಗಣ ಅಥವಾ ಮಾನವ ವಾಸಕ್ಕೆ ಯೋಗ್ಯವಾದ ಕಟ್ಟಡಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಪ್ರತ್ಯೇಕಿಸುವ ಕೇಂದ್ರಗಳು.
ಮೋದಿಗೆ ಇಂತಹಾ ವಿವರಗಳನ್ನು ಪರಿಶೀಲಿಸುವ ತಾಳ್ಮೆಯಾಗಲೀ, ಆಸಕ್ತಿಯಾಗಲೀ ಇದ್ದಂತಿಲ್ಲ. ಬಹುಶಃ ಆತ ತನ್ನ ವಾಕ್ಚಾತುಯರ್ಯಕ್ಕೆ ಚಪ್ಪಾಳೆ ಗಿಟ್ಟಿಸುವ ಮುಂದಿನ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ತಯಾರಿಯಲ್ಲಿ ತೊಡಗಿರಬಹುದು. ಆತ ಕಷ್ಟಕರ ಕೆಲಸಗಳನ್ನು ರಾಜ್ಯ ಸರಕಾರಗಳ ಹೆಗಲಿಗೆ ತಳ್ಳಿ, ಈ ಕಷ್ಟಕಾಲದಲ್ಲಿ ತನ್ನ ರಾಜಕೀಯ ರೇಟಿಂಗ್‌ ಉಳಿಸಿಕೊಳ್ಳುವ ಪ್ರಚಾರ ತಂತ್ರಗಳ ಮೇಲೆ ಗಮನಹರಿಸಬಹುದು.
ವೈರಸ್ ನಿಮ್ಮನ್ನು ಕೊಲ್ಲದಿದ್ದಲ್ಲಿ…
ಒಂದು ವೇಳೆ ನಾವು ಈ ಪಿಡುಗಿನಿಂದ ಪಾರಾದರೂ, ಮುಂದೆ ಬರಲಿರುವ ಆರ್ಥಿಕ ಕುಸಿತದಿಂದ ಪಾರಾಗಲಾರೆವು. ಆರ್ಥಿಕತೆ ಕೂಡಾ ಮೋದಿಯ ಗಮನದಲ್ಲಿಲ್ಲ. ಕಳೆದ 45 ವರ್ಷಗಳಲ್ಲೇ ಹೆಚ್ಚಿನ ನಿರುದ್ಯೋಗ ದರಕ್ಕೆ ಕಾರಣವಾದ ದುರಂತಕಾರಿ ಆರ್ಥಿಕ ನೀತಿಗಳ ಹೊರತಾಗಿಯೂ ಆತ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗಿರುವಾಗ ಆತ ಆರ್ಥಿಕತೆಯ ಕುರಿತು ಏಕೆ ಚಿಂತಿಸಬೇಕು?
ಅಮಾನ್ಯೀಕರಣ ಮತ್ತು ಜಿಎಸ್‌ಟಿಗಳು ಬೇಡಿಕೆಯನ್ನು ಕೊಂದವು. ಕೆಟ್ಟದಾಗಿ ಯೋಜಿಸಲಾದ ಈ ರಾಷ್ಟ್ರೀಯ ಕರ್ಫ್ಯೂ ಪೂರೈಕೆ ಜಾಲಗಳನ್ನು ಕೊಲ್ಲಲಿದೆ. ಕೊನೆಯಲ್ಲಿ ನಮಗೆ ಭಾರತದ ಅತ್ಯಂತ ದೊಡ್ಡ ಆವಿಷ್ಕಾರವಾಗಿರುವ “ಸೊನ್ನೆ” ಮಾತ್ರ ಉಳಿಯಲಿದೆ.
ಮೋದಿ ಹೆಚ್ಚಿನ ಸಮಯವನ್ನೇ ಕೊಡದೆ ರಾಷ್ಟ್ರೀಯ ಕರ್ಫ್ಯೂ ಘೋಷಿಸಿದರು. ರಾತ್ರಿ 8.00 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಮಧ್ಯ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬಂತು. ಅಮಾನ್ಯೀಕರಣದ ರೀತಿಯಲ್ಲೇ. ಆತ ಜನರಿಗೆ ಸ್ವಲ್ಪ ಕಾಲಾವಕಾಶವನ್ನು ಏಕೆ ಕೊಡಲಿಲ್ಲ? ಬೆಳಿಗ್ಗೆ 8.00 ಗಂಟೆಗೆ ಭಾಷಣ ಮಾಡಬಹುದಿತ್ತಲ್ಲವೆ? ನೋಡಿ, ಇದು ಟಿ.ವಿ.ಯ ಪ್ರೈಮ್ ಟೈಮ್‌ನ ಗರಿಷ್ಟ ಪ್ರಚಾರ ಗಿಟ್ಟಿಸುವುದಕ್ಕಾಗಿ.
ಗೃಹ ಸಚಿವಾಲಯವು ಕೆಲವು ವಿನಾಯಿತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ, ಅದನ್ನು ರಸ್ತೆಯಲ್ಲಿರುವ ಪೊಲೀಸರಿಗೆ ವಿವರಿಸಲು ಹೋಗಿ ನೋಡಿ. ಭಾರತೀಯ ಪೊಲೀಸರು ತಮಗೆ ಅತ್ಯಂತ ಪ್ರಿಯವಾದ ಕೆಲಸವನ್ನೇ ಮಾಡುತ್ತಿದ್ದಾರೆ. ಅದೆಂದರೆ, ಭಾರತೀಯ ಪ್ರಜೆಗಳಿಗೇ ಲಾಠಿಯಲ್ಲಿ ಥಳಿಸುವುದು. ಇದೇ ವೇಳೆಗೆ ಸಾವಿರಾರು ಟ್ರಕ್‌ಗಳು ರಾಜ್ಯಗಳ ಗಡಿಗಳಲ್ಲಿ ಸಿಕ್ಕಿಬಿದ್ದಿವೆ. ಔಷಧಿ, ಹಾಲು, ದಿನಸಿ, ಆಹಾರ ಮತ್ತು ಪತ್ರಿಕೆಗಳಂತಹ ಅತ್ಯಂತ ಆವಶ್ಯಕ ವಸ್ತುಗಳ ಪೂರೈಕೆ ಜಾಲಗಳು ಬುಡಮೇಲಾಗಿವೆ. ಕಟಾವಿನ ಅಂದರೆ, ರಾಬಿ ಋತುವಿನಲ್ಲಿ ಈ ಕೆಲಸವನ್ನು ರಾಷ್ಟ್ರೀಯ ಕರ್ಫ್ಯೂ ನಡುವೆ ಹೇಗೆ ನಡೆಸುವುದು ಎಂದು ಲಕ್ಷಾಂತರ ರೈತರು ಚಿಂತಿತರಾಗಿದ್ದಾರೆ ಎಂಬ ವಿಷಯ ಪ್ರಧಾನಿಯ ಕಚೇರಿಯಲ್ಲಿ ಯಾರಿಗೂ ಗೊತ್ತಿರುವಂತಿಲ್ಲ. ದೇಶವು ಒಂದು ಸಾಂಕ್ರಾಮಿಕ ಪಿಡುಗನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ದೇಶದ ವೈದ್ಯಕೀಯ ಜಾಲವನ್ನು ಬುಡಮೇಲುಗೊಳಿಸುವುದು ಕೇವಲ ಮೋದಿಗಷ್ಟೇ ಸಾಧ್ಯ.

ಈ ತನಕ ದೊಡ್ಡ ಹಣಕಾಸು ಪ್ಯಾಕೇಜನ್ನು ಘೋಷಿಸದ ಏಕೈಕ ವಿಶ್ವನಾಯಕನೆಂದರೆ ಮೋದಿ. ಹಣಕಾಸು ಸಚಿವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆತ ತನ್ನ ಮೊದಲ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ವಿಷಯ ತಮಗೆ ಗೊತ್ತಾದುದೇ ಪ್ರಧಾನಿ ಭಾಷಣದಿಂದ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳುತ್ತಿವೆ. ಕೊರೋನದಿಂದ ಉಂಟಾಗುವ ಆರೋಗ್ಯ ವೆಚ್ಚವನ್ನು ಭರಿಸಲು ಹೆಚ್ಚುವರಿ 15,000 ಕೋಟಿ ರೂ.ಗಳನ್ನು ಅವರು ಘೋಷಿಸಿದ್ದಾರೆ. ಆದರೆ ಇದು ಕೇಂದ್ರ ದಿಲ್ಲಿಯನ್ನು ನವೀಕರಿಸುವ ಅನಗತ್ಯವಾದ, ಸ್ವಮೋಹಿ ಯೋಜನೆಗೆ ಆತ ತೆಗೆದಿಟ್ಟ ಹಣಕ್ಕಿಂತ 5,000 ಕೋಟಿ ರೂ. ಕಡಿಮೆ. ಈ ರೀತಿ ನಡೆದರೆ, ಕೊರೋನ ವೈರಸ್‌ನಿಂದ ಸಾಯುವ ಜನರಿಗಿಂತಲೂ ಹೆಚ್ಚು ಜನರು ಹಸಿವಿನಿಂದ ಸಾಯಬಹುದು. ಮೋದಿಯ ಕಳಪೆ ಆಡಳಿತ ಕೌಶಲ, ವಿವರಗಳ ಕುರಿತು ಶೂನ್ಯ ಗಮನ, ಆಡಳಿತಕ್ಕಿಂತಲೂ ಭಾಷಣಕ್ಕೆ ಮಹತ್ವ ಎಲ್ಲಾ ಸೇರಿ ಈ ಬಿಕ್ಕಟ್ಟನ್ನು ದೊಡ್ಡ ದುರಂತವನ್ನಾಗಿ ಮಾಡಬಹುದು. ಇನ್ನು ಕೆಲವೇ ವಾರಗಳಲ್ಲಿ ಅಧಿಕೃತ ಅಂಕಿ ಅಂಶಗಳನ್ನು ಮೀರಿದ ಮಹಾಮಾರಿಯನ್ನು ಮತ್ತು 1980 ದಶಕದ ಆರ್ಥಿಕತೆಯನ್ನು ನಾವು ಎದುರು ನೋಡಬೇಕಾಗಿ ಬರಬಹುದು.

(ಲೇಖಕರು ‘ದಿ ಪ್ರಿಂಟ್’ನ ಕಾಂಟ್ರಿಬ್ಯೂಟಿಂಗ್ ಎಡಿಟರ್ ಆಗಿದ್ದು, ಅಭಿಪ್ರಾಯಗಳು ಲೇಖಕರದ್ದು)

LEAVE A REPLY

Please enter your comment!
Please enter your name here