ಡಾಟಾವಾಚ್

-ಬೆನ್ ಹೆಬ್ಲ್, ಡಾಟಾ ಜರ್ನಲಿಸ್ಟ್

ಲಂಡನ್: ದೇಶ ಸಾಗುತ್ತಿರುವ ಪಥದ ಕುರಿತು ಸಂತೋಷಗೊಂಡಿರುವ ಜನತೆಯಿಂದ ಭಾರತದ ಪ್ರಧಾನಿ ಮೋದಿಯವರು ಆಗಾಧ ಬೆಂಬಲವನ್ನು ಪಡೆಯುತ್ತಿದ್ದಾರೆ. ಈ ಆಶಾವಾದದ ಎಡೆಯಲ್ಲಿಯೂ, ಭಾರತವು ಪ್ರಜಾಪ್ರಭುತ್ವದಿಂದ ಅಪಾಯಕಾರಿಯಾದ ಅಂತರದೆಡೆಗೆ ಸಾಗುತ್ತಿದೆ ಎಂದು ಹೊಸ ದತ್ತಾಂಶಗಳು ಹೇಳುತ್ತದೆ.

ಆರ್ಥಿಕ ಸುಧಾರಕ ಎಂಬ ಹೆಗ್ಗಳಿಗೆಯೊಂದಿಗೆ ಮೋದಿಯವರು ಅಧಿಕಾರಕ್ಕೇರುವ ಹಿಂದಿನ ವರ್ಷ 2013ರಲ್ಲಿ ಭಾರತವು 6.4% ಬೆಳವಣಿಯನ್ನು ಹೊಂದಿತ್ತು. 2016ರಲ್ಲಿ ಬೆಳವಣಿಗೆಯ ಪ್ರಮಾಣವು 7.9% ಅನ್ನು ತಲುಪಿತು. ಆದರೆ, ಮೋದಿಯವರ ಚುನಾವಣೆಯಂದಿನಿಂದ ದೇಶದ ಉದಾರ ಪ್ರಜಾಪ್ರಭುತ್ವ ಗುಣಗಳು ತೀವ್ರವಾಗಿ ಕುಸಿದಿದೆ ಎಂದು ಸೂಚ್ಯಂಕವೊಂದು ತೋರಿಸುತ್ತದೆ.

ಗೊಥೆನ್‍ಬರ್ಗ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರೊಫೆಸರ್ ಆಗಿರುವ ಸ್ಟಾಫನ್ ಐ ಲಿಂಡ್‍ಬರ್ಗ್ ರವರು ನಡೆಸುತ್ತಿರುವ ವಿ-ಡೆಮ್ ಸಂಸ್ಥೆಯು ಈ ಸೂಚ್ಯಂಕವನ್ನು ಸಂಗ್ರಹಿಸಿದೆ. ಪ್ರಜಾಪ್ರಭುತ್ವವೆಂಬುವುದು ಬೇರೆ-ಬೇರೆ ಜನರ ದೃಷ್ಟಿಯಲ್ಲಿ ವಿಭಿನ್ನವಾಗಿದ್ದರೂ, ಲಿಂಡ್‍ಬರ್ಗ್ ರವರು ಅದನ್ನು “ಸ್ವಭಾವಜನ್ಯ ಒಳಿತು” ಎಂದು ಪರಿಗಣಿಸುತ್ತಾರೆ ಮತ್ತು ಮನುಷ್ಯನಿಗೆ ಸ್ವಸರಕಾರದ ಮತ್ತು “ತನ್ನ ಸ್ವಂತ ಆಯ್ಕೆಯ ಸ್ಥಿತಿಯಲ್ಲಿ ಬದುಕುವ” ಹಕ್ಕು ಇದೆ ಎಂದು ಅವರು ಹೇಳುತ್ತಾರೆ.

ವಿ-ಡೆಮ್ ವ್ಯಾಖ್ಯಾನವು ಹೀಗೆ ಹೇಳುತ್ತದೆ: “ಪ್ರಜಾಪ್ರಭುತ್ವದ ಉದಾರ ತತ್ವಗಳು ರಾಜ್ಯದ ದಬ್ಬಾಳಿಕೆ ಮತ್ತು ಬಹುಸಂಖ್ಯಾತರ ದಬ್ಬಾಳಿಕೆಯ ವಿರುದ್ಧ ವೈಯಕ್ತಿಕ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಮಹತ್ವಕ್ಕೆ ಒತ್ತು ನೀಡುತ್ತದೆ”.

ಈ ರೀತಿಯಾದ ಸ್ವಾತಂತ್ರ್ಯವನ್ನು ನೀಡುವ ವ್ಯವಸ್ಥೆಯನ್ನು ಭಾರತವು ಈಗ ಕಳೆದುಕೊಳ್ಳುತ್ತದೆ ಎಂಬ ಆತಂಕವನ್ನು ಪ್ರೊಫೆಸರ್ ಮತ್ತು ಇತರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಭಾರತದ ಸೂಚ್ಯಂಕವು ಯಾಕೆ ಇಳಿಯುತ್ತದೆ? ಮುಖ್ಯ ಕಾರಣವೇನೆಂದರೆ ಶಾಸಕಾಂಗವು ಅತಿಯಾಗಿ ಕುಂಟವಾಗುತ್ತದೆ, ಮೋದಿಯವರ ಅಧಿಕಾರವನ್ನು ಪರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಅವರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಒಕ್ಕೂಟವು ಕೆಳಮನೆಯಲ್ಲಿ ದೊಡ್ಡ ಬಹುಮತವನ್ನು ಹೊಂದಿದೆ ಮತ್ತು ಹೆಚ್ಚಿನೆಲ್ಲಾ ಮೇಲಿನ ಸ್ಥರಗಳನ್ನು ನಿಯಂತ್ರಿಸುತ್ತಿದೆ.

ಸೂಚ್ಯಂಕವು 0 ರಿಂದ 100 ವರೆಗೆ ವ್ಯಾಪಿಸಿರುವುದರಿಂದ, 50 ಅನ್ನು ನೈಸರ್ಗಿಕ ಮಿತಿ ಎಂದು ಪರಿಗಣಿಸಲಾಗುತ್ತದೆ ಮತ್ತು 2015ರಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತವು ಆ ಸಾಲಿನಿಂದ ಕೆಳಗಿಳಿಯಿತು. ಇದು ಎರಡನೇ “ತುರ್ತು ಪರಿಸ್ಥಿತಿ”ಯ ಕಹಿ ಮುನ್ಸೂಚನೆ ಇರಬಹುದೇ? ಅಥವಾ 1970ರ ಕಟ್ಟಲೆಯ ಆಡಳಿತ ಮತ್ತು ನಾಗರೀಕ ಸ್ವಾತಂತ್ರ್ಯದ ನಿರ್ಬಂಧದ ಅವಧಿಯ ಮುಂದುವರಿದ ಭಾಗವೇ?

ವಿ-ಡೆಮ್ ಸಂಸ್ಥೆಯು ಕಾನೂನು ಪಾರದರ್ಶಕತೆ, ಖಾಸಗಿ ಆಸ್ತಿ ಹಕ್ಕಿಗೆ ಗೌರವ, ಸಾಮಾನ್ಯ ನಾಗರಿಕನಿಗೆ ನ್ಯಾಯ ವ್ಯವಸ್ಥೆಗಿರುವ ಪ್ರವೇಶಾವಕಾಶ ಮುಂತಾದ 400 ಸೂಚಕಗಳನ್ನು ಉಪಯೋಗಿಸುತ್ತದೆ ಎಂಬುವುದನ್ನು ಲಿಂಡ್‍ಬರ್ಗ್ ರವರು ಗುರುತಿಸಿದ್ದಾರೆ. ಉದಾರ ಪ್ರಜಾಪ್ರಭುತ್ವವನ್ನು ಮಾಪನ ಮಾಡುವ ಹೆಚ್ಚಿನ 48 ಸೂಚಕಗಳು ಭಾರತಕ್ಕೆ ಕೆಟ್ಟದ್ದಾಗಿದೆ. ಅಲ್ಲದೆ, ಭ್ರಷ್ಟಾಚಾರದ ಸೂಚಕವು ಹಿಂದೆಂದೂ ಮಾಪನವಾಗದ ಮಟ್ಟಕ್ಕೆ ಕುಸಿದಿದೆ.

ಈ ಪಲ್ಲಟವು ಸರಪಳಿ ಪ್ರತಿಕ್ರಿಯೆಯನ್ನು ನೀಡಬಹುದು,  ಭಾರತದೊಂದಿಗೆ ನಿಕಟ ಸಂಬಂಧವಿರುವ ದೇಶಗಳಿಗೆ ಪ್ರಜಾಪ್ರಭುತ್ವದಿಂದ ದೂರ ಸರಿಯಲು ಇದೊಂದು ಪ್ರಚೋದನೆ ಆಗಬಹುದೆಂದು ಪ್ರೊಫೆಸರ್ ಎಚ್ಚರಿಕೆಯನ್ನು ನೀಡಿದ್ದಾರೆ.

 

(ಡಾಟಾವಾಚ್ ಎನ್ನುವುದು ನಿಕಿ ಏಷಿಯಾ ರಿವ್ಯೂ ಮತ್ತು ಎಫ್ ಟಿ ಕಾನ್ಫಿಡೆನ್ಶಿಯಲ್ ರಿಸರ್ಚ್‍ನಿಂದ ಜಂಟಿಯಾಗಿ ತಯಾರಿಸಲ್ಪಟ್ಟ ಸರಣಿಯಾಗಿದೆ.)

LEAVE A REPLY

Please enter your comment!
Please enter your name here