ಕರ್ನಾಟಕದ ಸಂದರ್ಭದಲ್ಲಿ “ಹಿಂದುಳಿದ ವರ್ಗ”ಗಳನ್ನು ವ್ಯಾಖ್ಯಾನಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ವಿವಿಧ ಕಮಿಟಿಗಳು, ಆಯೋಗದ ಶಿಫಾರಸ್ಸುಗಳು ಹಿಂದುಳಿದ ವರ್ಗಗಳನ್ನು “ವರ್ಗಗಳಾಗಿ” ಮಾತ್ರವಲ್ಲದೇ “ಜಾತಿಗಳಾಗಿ” ನೋಡುತ್ತವೆ. ವಾಸ್ತವವಾಗಿ ಹಿಂದುಳಿದ ವರ್ಗವೆಂಬುದು ನೂರಾರು ಜಾತಿಗಳ ಗುಂಪು ಹಾಗು ಸಮುದಾಯ. ಅದನ್ನು ಸೀಮಿತವಾಗಿ ಒಂದು ವರ್ಗವಾಗಿ ನೋಡಬಾರದು ಮತ್ತು ವಿಶ್ಲೇಷಿಸಬಾರದು. ಅಲ್ಲದೇ ಹಿಂದುಳಿದ ವರ್ಗಗಳನ್ನು ವಿವರಿಸುವ ಸಂದರ್ಭದಲ್ಲಿ ‘ಇತರೆ’ ಎಂಬ ಉಪಯೋಗ ಕೂಡ ಸಮಸ್ಯೆಯಿಂದ ಕೂಡಿದೆ. ‘ಇತರೆ’ ಅಂದರೆ ಯಾರು? ‘ಹಿಂದುಳಿದ ವರ್ಗ’ಗಳ ವ್ಯಾಖ್ಯಾನದ ಸಮಸ್ಯೆ ಹೊಸತೇನಲ್ಲ.  ಅದನ್ನು ಹಳೇ ಮೈಸೂರು ಸಂಸ್ಥಾನದ ಕಾಲದಿಂದಲೂ ನೋಡಬಹುದು. ಯಾವಾಗ ಹಳೇಯ ಮೈಸೂರು ಸಂಸ್ಥಾನ ಮೀಸಲಾತಿಗೆ ಸಂಬಂಧಿಸಿದಂತೆ ಲೆಸ್ಲಿ ಮಿಲ್ಲರ್ ಸಮೀತಿಯನ್ನು ನೇಮಿಸಿತ್ತೋ, ಆಗ ಈ ಸಮಸ್ಯೆ ಉಲ್ಭಣಗೊಂಡಿತ್ತು. ರಾಜಕೀಯದಲ್ಲಿ ಹಿಂದುಳಿದ ವರ್ಗಗಳ ಅಸ್ತಿತ್ವ ಅಥವಾ ಐಡೆಂಟಿಟಿಯನ್ನು ಗುರುತಿಸುವುದೇ ಈ ಸಮಸ್ಯೆಯ ಭಾಗವಾಗಿತ್ತು. ವಸಾಹತುಶಾಹಿ ಕೋಲಾಪುರ ಮತ್ತು ಟ್ರವಾಂಕೂರು ರಾಜ್ಯಗಳನ್ನು ಹೊರತು ಪಡಿಸಿದರೆ ಹಳೇಯ ಮೈಸೂರು ಸಂಸ್ಥಾನ ಮೀಸಲಾತಿಯನ್ನು ನೀಡಿದ ಮೊದಲ ರಾಜ್ಯವಾಗಿತ್ತು. ಇದಕ್ಕೆ ಕಾರಣ ಎರಡು: ಒಂದು ಹಿಂದುಳಿದ ವರ್ಗದಿಂದ ಬಂದ ರಾಜಮನೆತನ, ಎರಡನೇಯದು ಅಂದಿನ ಸಂದರ್ಭದಲ್ಲಿ ಹುಟ್ಟಿದ “ಬ್ರಾಹ್ಮಣೇತರ ಚಳುವಳಿ”. ವಾಸ್ತವವಾಗಿ ನಾವೆಲ್ಲಾ “ಬ್ರಾಹ್ಮಣೇತರ ಚಳುವಳಿ”ಯನ್ನು 1910/20 ದಶಕದಲ್ಲಿ ನೋಡುತ್ತೇವೆ. ಇದು ತಮಿಳುನಾಡಿನಲ್ಲಿ ನಡೆದ “ಬ್ರಾಹ್ಮಣೇತರ ಚಳುವಳಿಯ” ವಿಸ್‍ತೃತ ಭಾಗದ ರೂಪವಾಗಿ ನೋಡುತ್ತೇವೆ. ವಾಸ್ತವವಾಗಿ ಇದು ಸಂಪೂರ್ಣ ನಿಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಹಳೇಯ ಮೈಸೂರು ಪ್ರಾಂತ್ಯದಲ್ಲಿ ‘ಬಾಹ್ಮಣೇತರ ಚಳುವಳಿಯ’ ಮೂಲವನ್ನು 90 ವರ್ಷ ಹಿಂದೆ ನೋಡಬಹುದು. ಅದನ್ನು 1830ರಲ್ಲಿ ನಡೆದ “ನಗರ ರೈತ ದಂಗೆ”ಯಲ್ಲಿ ನೋಡಬಹುದು. ನಗರ ರೈತ ದಂಗೆ “ಶರತ್” ವ್ಯವಸ್ಥೆಯ ವಿರುದ್ಧ ನಡೆದಿದ್ದರೂ, ಆ ದಂಗೆ ಹಿಂದೆ ಬ್ರಾಹ್ಮಣ ಆಡಳಿತಶಾಹಿ ಕುರಿತು ಅತೃಪ್ತ ಇತ್ತು ಎಂದು ದಂಗೆ ಕುರಿತು ತನಿಖೆ ನಡೆಸಿದ ಮಾರ್ಕ್ ವಿಲ್ಕ್ಸ್ ಹೇಳುತ್ತಾನೆ.

ಮಿಲ್ಲರ್ ಸಮಿತಿಯ ಮುಖ್ಯ ಉದ್ದೇಶ ವಿವಿಧ ಸಾಮಾಜಿಕ ವರ್ಗಗಳಿಗೆ ಮೀಸಲಾತಿಯನ್ನು “ಬ್ರಾಹ್ಮಣೇತರ ಚಳುವಳಿ”ಯ ಹಿನ್ನಲೆಯಲ್ಲಿ ಕಲ್ಪಿಸುವುದಾಗಿತ್ತು. ವಿಚಿತ್ರವೆಂದರೆ ಮಿಲ್ಲರ್ ಸಮಿತಿಗೆ ಇಂಗ್ಲೀಷ್ ಭಾಷೆಯ ಮೇಲೆ ವಿವಿಧ ಸಾಮಾಜಿಕ ವರ್ಗಗಳಿಗಿರುವ ಜ್ಞಾನ, ಮೀಸಲಾತಿಯನ್ನು ನಿರ್ಧರಿಸುವ ಮಾನದಂಡವಾಯಿತು.  ಒಂದು ಸಮುದಾಯದಲ್ಲಿ ಐದು ಶೇಕಡಾಕ್ಕಿಂತ ಕಡಿಮೆ ಇಂಗ್ಲೀಷ್ ಜ್ಞಾನವನ್ನು ಬಲ್ಲ ಜನ ಸಮುದಾಯವಿದ್ದರೆ ಆ ಸಮುದಾಯ “ಹಿಂದುಳಿದ ವರ್ಗ”ವೆಂದು ಪರಿಗಣಿಸಲ್ಪಡುತಿತ್ತು. ಇದು ಒಂದಕ್ಕೊಂದು ವಿರೋಧ ಸಮುದಾಯವನ್ನು ನಿರ್ಮಿಸಿತ್ತು ಎಂದು ಅನ್ನಬಹುದು. ರಾಜಕೀಯವಾಗಿ ಎರಡು ನೇರ ಹಾಗು ಸ್ಪಷ್ಟ ವರ್ಗಗಳನ್ನು ಅದು ನಿರ್ಮಿಸಿತ್ತು: ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ವರ್ಗ. ಮುಂದುವರಿದ ವರ್ಗಗಳಲ್ಲಿ ಆಂಗ್ಲೋ-ಇಂಡಿಯನ್ಸ್, ಐರೋಪಿಯನ್ನರನ್ನು ಲೆಸ್ಲೀ ಮಿಲ್ಲರ್ ಸಮಿತಿ ಸೇರಿಸಿತ್ತು. ಪ್ರಪ್ರಥಮ ಭಾರಿಗೆ ಹಳೇಯ ಮೈಸೂರು ಪ್ರಾಂತ್ಯ 75 ಶೇಕಡಾದಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಾಗಿಟ್ಟಿತ್ತು. ಇದು ಅಸ್ಮಿತೆ/ಐಡೆಂಟಿಟಿ ರಾಜಕಾರಣದ ಪ್ರಥಮ ಹಂತವೆನ್ನಬಹುದು. ಈ ರಾಜಕಾರಣದಲ್ಲಿ ಅತೀ ಹೆಚ್ಚು ಲಾಭ ಪಡೆದವರು ಪ್ರಬಲ ಜಾತಿಗಳೇ ಹೊರತು ಹಿಂದುಳಿದ ವರ್ಗಗಳು ಅಥವಾ ಜಾತಿಗಳಲ್ಲ. ಯಾಕೆಂದರೆ ಪ್ರಬಲ ಜಾತಿಗಳು ಈ ಹಿಂದುಳಿದ ಜಾತಿಗಳ ಪಟ್ಟಿಗಳ ಸೇರ್ಪಡೆಯಾದ ಕಾರಣ, ಲಾಭ ಅನಿವಾರ್ಯವಾಗಿ ಅವರ ಪಾಲಾಯಿತು. ಅದರೊಟ್ಟಿಗೆ ರಾಜಕೀಯ ಚೌಕಟ್ಟಿನ ಅಧಿಕಾರವು ಕೂಡ ಅವರ ಕೈಯೊಳಗಿತ್ತು. ಇದು ರಾಜಕೀಯದಲ್ಲಿ ಕಲ್ಪಿತ ಸಾಮಾಜಿಕ ಸಮೀಕರಣಕ್ಕೆ ದಾರಿ ಮಾಡಿಕೊಟ್ಟದ್ದು ವಾಸ್ತವ. ಒಂದೆಡೆ ಹಿಂದುಳಿದ ವರ್ಗ ಮತ್ತು ಪ್ರಬಲ ಜಾತಿಗಳ ಸಾಮಾಜಿಕ ಸಮೀಕರಣ ಅಥವಾ ಸಮ್ಮಿಶ್ರತೆ ಇದ್ದರೆ, ಇನ್ನೊಂದೆಡೆ ಅದು ಮೇಲ್ಜಾತಿಗಳ ಸಮೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ರಾಜಕಾರಣದಲ್ಲಿ ಅತ್ಯಲ್ಪ ಲಾಭ ಪಡೆದವರೆಂದರೆ ಅಲ್ಪಸಂಖ್ಯಾತರು ಮತ್ತು ದಲಿತರು.

1951ರಲ್ಲಿ ಕಾಂಗ್ರೇಸ್‍ನ ತುಷ್ಟೀಕರಣ ನೀತಿಯಂತೆ ಸಮುದಾಯಗಳನ್ನು 18 ಗುಂಪುಗಳಾಗಿ ವಿಂಗಡಿಸಿ, ಅವುಗಳಿಗೆ ನಿರ್ದಿಷ್ಟ ಮೀಸಲಾತಿಯನ್ನು ನೀಡಿತ್ತು. ಇದನ್ನು ಸಾಮಾಜಿಕ ನೆಲೆಯಲ್ಲಿ ವಾದಿಸಲಾಯಿತು. ವಾಸ್ತವದಲ್ಲಿ ಇದರ ಹಿನ್ನೆಲೆಯ ರಾಜಕಾರಣವೇ ಬೇರೆ, ಕಾಂಗ್ರೆಸ್‍ಗೆ ತನ್ನ ಸಾಮಾಜಿಕ ತಳಹದಿಯನ್ನು ವಿಸ್ತರಿಸಬೇಕಿತ್ತು ಮತ್ತು ಎಲ್ಲರನ್ನೂ ತುಷ್ಟೀಕರಿಸಬೇಕತ್ತು. ವಾಸ್ತವವಾಗಿ ಇದೇ ಕಾಲದಲ್ಲಿ ರಾಜಕೀಯ ಶಕ್ತಿ ಒಕ್ಕಲಿಗರ ಕೈಯಲ್ಲಿತ್ತು.

1956 ರಾಜ್ಯದ ಪುನರ್ ವಿಂಗಡೆನೆಯ ಸಂದರ್ಭದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಹಿಂದುಳಿದ ವರ್ಗಗಳ ವಿವಿಧ ಪಟ್ಟಿಗಳು ಇದ್ದವು. ಒಂದು ಪ್ರಾಂತ್ಯದಲ್ಲಿ ಒಂದು ಸಮುದಾಯ ಮುಂದುವರಿದ ಸಮುದಾಯವಾಗಿದ್ದರೆ ಅದೇ ಸಮುದಾಯ ಬೇರೆ ಪ್ರಾಂತ್ಯದಲ್ಲಿ ಹಿಂದುಳಿದ ವರ್ಗವಗಿತ್ತು. ಇಂತಹ ವೈರುಧ್ಯಗಳನ್ನು ಹೋಗಲಾಡಿಸಲು ಅಂದಿನ ಆಡಳಿತ 165 ಜಾತಿಗಳನ್ನು, ಹದಿನಾಲ್ಕು ಗುಂಪುಗಳಾಗಿ ಹಿಂದುಳಿದ ವರ್ಗಗಳ ಪಟ್ಟಿಯೊಳಗೆ ಸೇರಿಸಿತ್ತು. ಅದರೊಟ್ಟಿಗೆ ಮೀಸಲಾತಿಯನ್ನು 57 ಶೇಕಡಾಕ್ಕೆ ಮಿತಿಗೊಳಿಸಿತು. ದುರಂತವೆಂದರೆ 1958ರ ತನಕ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಜಾತಿಗಳು ಹಿಂದುಳಿದ ಜಾತಿಗಳಾಗಿಯೇ ಉಳಿದು ಬಿಟ್ಟವು. ಈ ಪಟ್ಟಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಅದಕ್ಕೆ ಸರಿಯಾಗಿ ಮುಂದುವರಿದ ಗುಂಪುಗಳಿಗೆ 1959ರಲ್ಲಿ ಇನ್ನಷ್ಟು ಜಾತಿಗಳನ್ನು ಸೇರಿಸಲಾಯಿತು. ಅವುಗಳಲ್ಲಿ ಬ್ರಾಹ್ಮಣರಲ್ಲದೆ, ಬನಿಯಾ ಕ್ಷತ್ರೀಯರು, ಮುಸ್ಲಿಮರು, ಕ್ರಿಶ್ಚಿಯನರು ಮತ್ತು ಜೈನರನ್ನು ಸೇರಿಸಲಾಯಿತು. ಈ ಸರಕಾರಿ ಆದೇಶವನ್ನು ಹೈಕೋರ್ಟ್ ಮತ್ತೊಮ್ಮೆ ತಳ್ಳಿಹಾಕಿತ್ತು.

ಇವೆಲ್ಲಾ ಕಾರಣಗಳಿಗಾಗಿ ಅಂದಿನ ಸರಕಾರ 1960ರಲ್ಲಿ ನಾಗನ್‍ಗೌಡ ಸಮಿತಿಯನ್ನು ನೇಮಿಸಿತ್ತು. ನಾಗನ್‍ಗೌಡ ಸಮಿತಿಯ ತೀರ್ಮಾನಗಳನ್ನು ಇಲ್ಲಿ ದಾಖಲಿಸುವುದು ಉತ್ತಮ. ಒಂದನೇಯದಾಗಿ, ಹಿಂದುಳಿದಿರುವಿಕೆ ಮತ್ತು ಸಾಮಾಜಿಕ ಚೌಕಟ್ಟಿನ ಸಮೀಕರಣ, ಎರಡನೇಯದಾಗಿ ಅಲ್ಪಸಂಖ್ಯಾತರಾದ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರ ಮೇಲಿರುವ ಜಾತಿಯ ಪ್ರಭಾವ. ನಾಗನ್‍ಗೌಡ ಸಮಿತಿ ಹಿಂದುಳಿಯುವಿಕೆಯನ್ನು ಗುರುತಿಸಲು ಮೂರು ಮಾನದಂಡಗಳನ್ನು ಉಪಯೋಗಿಸಿತ್ತು. ಸಮುದಾಯಗಳ ಅಥವಾ ಜಾತಿಗಳ ಸ್ಥಾನಮಾನ ಮೊದಲನೇಯ ಮಾನದಂಡವಾದರೆ, ಎರಡನೇಯದಾಗಿ ಜಾತಿಗಳ ಒಟ್ಟಾರೆ ಅಕ್ಷರ ಜ್ಞಾನ ಹಾಗು ಶೈಕ್ಷಣಿಕತೆ. ಮೂರನೇಯದಾಗಿ ಸಾರ್ವಜನಿಕ ಹಾಗೂ ರಾಜ್ಯದ ಚೌಕಟ್ಟಿನೊಳಗೆ ಜಾತಿಗಳ ಪ್ರಾತಿನಿಧಿತ್ವ. ಈ ಸಮಿತಿಯು ಮೀಸಲಾತಿಗೆ ಗುರುತಿಸಿದ್ದು ಬರೋಬ್ಬರಿ 214 ಜಾತಿಗಳನ್ನು. ಆದರೆ ಮೀಸಲಾತಿಯ ಮಿತಿಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಮಿತಗೊಳಿಸಿದ್ದು 59 ಶೇಕಡಾಕ್ಕೆ, ಸರಕಾರಿ ಉದ್ಯೋಗಗಳಲ್ಲಿ 45 ಶೇಕಡಾಕ್ಕೆ. ಇಲ್ಲಿರುವ ಆಸಕ್ತಿಯ ವಿಷಯವೇನೆಂದರೆ ಸಮಿತಿಯು ಲಿಂಗಾಯುತರಲ್ಲಿದ್ದ ಎಲ್ಲಾ ಉಪಜಾತಿ/ಸಣ್ಣ ಜಾತಿಗಳನ್ನು “ಮುಂದುವರಿದ ಜಾತಿಗಳೆಂದು” ತೀರ್ಮಾನಿಸಿತ್ತು. ಯಾಕೆಂದರೆ ಅದರ ಪ್ರಕಾರ ಇವೆಲ್ಲವೂ “ಸಾಮಾಜಿಕವಾಗಿ ಮುಂದುವರಿದ ಸಮುದಾಯಗಳು”, ಮತ್ತೊಂದು ವಿಚಿತ್ರವೆಂದರೆ ಅದು ಒಕ್ಕಲಿಗರಲ್ಲಿ ಬಂಟರನ್ನು ಹೊರತು ಪಡಿಸಿ ಉಳಿದವರನ್ನು “ಹಿಂದುಳಿದವರೆಂದು”  ಗುರುತಿಸಿತ್ತು. ಯಾಕೆಂದರೆ ಸಮಿತಿ ಪ್ರಕಾರ ಬಂಟರು ಸಾಮಾಜಿಕವಾಗಿ ಮುಂದುವರಿದ ಸಮುದಾಯ. ಮಾತ್ರವಲ್ಲದೇ ಅವರ ಶೈಕ್ಷಣಿಕ ಪ್ರಗತಿಯು ರಾಜ್ಯದ ಒಟ್ಟಾರೆ ಸರಾಸರಿಗಿಂತಲೂ ಹೆಚ್ಚಾಗಿತ್ತು.

ನಾಗನ್‍ಗೌಡ ಸಮಿತಿ ಮತ್ತೊಂದು ಮಹತ್ತರದ ಶಿಫಾರಸ್ಸನ್ನು ನೀಡಿತ್ತು. ಅದೇನೆಂದರೆ ಹತ್ತು ವರುಷ ನಂತರ ಮೀಸಲಾತಿ ನೀತಿಯನ್ನು ಪುನರ್ ವಿಮರ್ಶಿಸಬೇಕು. ಶಿಕ್ಷಣದಲ್ಲಿ ಹಾಗು ರಾಜಕೀಯದ ಪ್ರಾತಿನಿಧ್ಯತೆಯಲ್ಲಿ ಪ್ರಗತಿ ಸಾಧಿಸಿದ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಹೊರತುಪಡಿಸಬೇಕು. ಅಂದಿನ ಸಂದರ್ಭದಲ್ಲಿ ಸಾಧ್ಯನೂ ಆಗುತ್ತಿರಲಿಲ್ಲ.

ದುರಂತವೆಂದರೆ ಅಂದಿನ ಸರಕಾರ ನಾಗನ್‍ಗೌಡ ಸಮಿತಿಯ ಶಿಫಾರಸ್ಸನ್ನು ಒಟ್ಟಾರೆಯಾಗಿ ಜಾರಿಗೆ ತರಲು ವಿಫಲವಾಯಿತು. ಯಾಕೆಂದರೆ ಇದಕ್ಕೆ ಪ್ರತಿರೋಧ ಬಂದದ್ದು ಪ್ರಬಲ ಜಾತಿಗಳಿಂದ. ಲಿಂಗಾಯತರ ಎಲ್ಲಾ ಸಣ್ಣ ಜಾತಿಗಳನ್ನು “ಮುಂದುವರಿದ ಜಾತಿಯ” ಪಟ್ಟಿಯಲ್ಲಿ ಹಾಕಿದ್ದು ಒಂದು ಕಾರಣವಾದರೆ, ಶಾಸನ ಸಭೆಯಲ್ಲಿ ಲಿಂಗಾಯತರ ಬೆಂಬಲ ಕಳೆದುಕೊಳ್ಳುವ ಹೆದರಿಕೆ ಅಂದಿನ ಆಡಳಿತಕ್ಕೆ/ಸರಕಾರಕ್ಕೆ ಇದ್ದದ್ದು ಕೂಡಾ ಇನ್ನೊಂದು ಕಾರಣ. ಇದೊಂದು ಒತ್ತಡದ ರಾಜಕಾರಣವೂ ಹೌದು. ಇದರಿಂದಾಗಿಯೇ ಲಿಂಗಾಯತರು ಸುಪ್ರೀಮ್ ಕೋರ್ಟ್‍ನ ಮೊರೆ ಹೊಗಬೇಕಾಯಿತು. ಒತ್ತಡ ರಾಜಕಾರಣದ ಒಂದು ಪರಿಣಾಮವೆಂದರೆ ಸರಕಾರ  ಲಿಂಗಾಯತರನ್ನು “ಹಿಂದುಳಿದ ವರ್ಗಗಳ” ಪಟ್ಟಿಗೆ ಸೇರಿಸಿತ್ತು. ಮೀಸಲಾತಿಯನ್ನು 68 ಶೇಕಡಾಕ್ಕೆ ಏರಿಸಿತ್ತು. ಆದರೆ ಸುಪ್ರೀಮ್ ಕೋರ್ಟ್ ಇದಕ್ಕೆ ತದ್ವಿರುದ್ಧವಾದ ತೀರ್ಪನ್ನೇ ನೀಡಿತ್ತು. ಅಂದಿನ ದಿನಗಳಲ್ಲಿ ಬಹಳಷ್ಟು ಸುದ್ಧಿ ಮಾಡಿದ ಬಾಲಾಜಿ ಮೊಕದ್ದಮೆಯಲ್ಲಿ(1963) ಈ ರೀತಿಯ ಮೀಸಲಾತಿಯನ್ನು ಸುಪ್ರೀಮ್ ಕೋರ್ಟ್ ತಿರಸ್ಕರಿಸಿತ್ತು. ಅದಕ್ಕೆ ಕಾರಣವಿತ್ತು. ಸರಕಾರ ಜಾತಿಗಳನ್ನು “ಹಿಂದುಳಿದವುಗಳು” ಎಂದು ಘೋಷಿಸುವಾಗ “ಜಾತಿ”ಯನ್ನೆ ಮಾತ್ರ ಮಾನದಂಡವಾಗಿ ತೆಗೆದುಕೊಂಡಿದ್ದು ಈ ತಿರಸ್ಕರಣೆಗೆ ಕಾರಣವಾಗಿತ್ತು. ಅಲ್ಲದೇ ಮೀಸಲಾತಿಯ ಮಿತಿಯನ್ನು 50 ಶೇಕಡಾಕ್ಕೆ ಸುಪ್ರೀಮ್ ಕೋರ್ಟ್ ಸೀಮಿತಗೊಳಿಸಿತು.

-ಡಾ. ಮುಜಾಫ್ಫರ್ ಅಸ್ಸಾದಿ
ವಿಶೇಷಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

ಡಾ. ಮುಜಾಫ್ಫರ್ ಅಸ್ಸಾದಿ, ವಿಶೇಷಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

(ಮುಂದಿನ ಭಾಗದಲ್ಲಿ: ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ ಭಾಗ-4)

(ಲೇಖನ: ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು (2017)ಪುಸ್ತಕದಿಂದ)

1 COMMENT

  1. ಜ್ಞಾನಾರ್ಜನೆಯ ಜೊತೆಗೆ ಉಪಯುಕ್ತ ಮಾಹಿತಿ
    ಸಾಮಾಜಿಕ ಸಮಸ್ಯೆಯನ್ನ ಲೇಖನಿ ಮೂಲಕ ವ್ಯಕ್ತಪಡಿಸುವ ಒಳ್ಳೆಯ ಕಾರ್ಯ

LEAVE A REPLY

Please enter your comment!
Please enter your name here