ಲೇಖಕರು: ಇಸ್ಮತ್ ಪಜೀರ್, ಮಂಗಳೂರು

ನನ್ನ ಅನೇಕ ಬರಹಗಳಲ್ಲಿ ಬರೆದಂತೆ ನಾನು ನನ್ನ ಶಾಲಾದಿನಗಳನ್ನು ಕಳೆದದ್ದು ಉಳ್ಳಾಲದ ಮಂಚಿಲ ಎಂಬಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿ. ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅಜ್ಜ ನಮ್ಮನ್ನಗಲಿದ್ದರು. ಆದರೆ ಅಜ್ಜನ ವರ್ಣರಂಜಿತ ವ್ಯಕ್ತಿತ್ವದ ಕೆಲ ತುಣುಕುಗಳಿನ್ನೂ ಮನದಲ್ಲಿ ಅಚ್ಚೊತ್ತಿ ಕೂತಿವೆ. ಅದೆಷ್ಟೋ ಬಾರಿ ಅವರಂತೆ ಬೇಕಾದದ್ದನ್ನೆಲ್ಲಾ ಬೇಕಾದಷ್ಟು ತಿಂದುಂಡು ಬಿಂದಾಸಾಗಿ ಬದುಕಬೇಕೆಂದು ಮನಸ್ಸು ಬಯಸುತ್ತದೆ. ಅಜ್ಜನಿಗೆ ಎಲ್ಲದರಲ್ಲೂ‌‌ ಶ್ರೇಷ್ಟತೆಯ ವ್ಯಸನ. ಈಗಿನವರು ಎಲ್ಲದರಲ್ಲೂ ಬ್ರ್ಯಾಂಡ್ ಎನ್ನುತ್ತಾರಲ್ವಾ ಅದನ್ನೇ ನನ್ನಜ್ಜ ಮುಂದಿಯೆದ್ (ಟಾಪ್ ಮೋಸ್ಟ್) ಎನ್ನುತ್ತಿದ್ದರು.

ನನ್ನ ಅಜ್ಜ ಮಂಚಿಲ ಮೂಸಾಕ ಅನುಕೂಲಸ್ಥ. ಅವರಂತೆ ಬದುಕುವಷ್ಟನ್ನು ಅವರಾಗಲೀ, ಅಪ್ಪನಾಗಲೀ ನಮಗೆ ಬಿಟ್ಟು ಹೋಗಿಲ್ಲ. ಅಜ್ಜ ಭೂ‌ ಸುಧಾರಣೆ ಕಾನೂನಲ್ಲಿ ಬಹಳಷ್ಟು ಭೂಮಿ ಕಳೆದುಕೊಂಡರೂ ನನ್ನ ಬಾಲ್ಯ ಕಾಲದಲ್ಲಿ ಅದೇ ಜಮೀನುದಾರಿ ಗತ್ತು ಗೈರತ್ತು ಇನ್ನೂ ಉಳಿದಿತ್ತು.
ಅಜ್ಜನಿಂದ ನನಗೆ ಬಳುವಳಿಯಾಗಿ ಬಂದಿದ್ದು ಒಂದು ಗುಣ ಮಾತ್ರ .ಕುರ್ಚಿಯಲ್ಲಿ ಕೂತರೂ ಕಾಲನ್ನು ನನ್ನ ಸೊಂಟಕ್ಕಿಂತಲೂ ಎತ್ತರದ ಮೇಜಿನ ಮೇಲಕ್ಕೆ ಚಾಚುವುದು. ಆದರೂ ಕೂಡಾ ನನ್ನ ಮುಖದಲ್ಲಿ ಒಂದಿನಿತೂ ಜಮೀನುದಾರನ ಗೆಟಪ್ ಬರುವುದೇ ಇಲ್ಲ ಮಾರಾಯರೇ…

ಅಜ್ಜ ಭೋಜನ ಪ್ರಿಯ. ನಾಲ್ಕೈದು ಕಿಲೋ ತೂಗುವ ದೊಡ್ಡ ದೊಡ್ಡ ಮೀನುಗಳನ್ನು ಸ್ವತಃ ಮಾರುಕಟ್ಟೆಗೆ ಹೋಗಿ ಆಯ್ದು ತರುತ್ತಿದ್ದರು. ಮಾತ್ರವಲ್ಲ ಮೀನನ್ನು ಅವರೇ ಚೆನ್ನಾಗಿ‌ ಕತ್ತರಿಸುತ್ತಿದ್ದರು. ಅವರಾಗಲೀ, ಅಜ್ಜಿಯಾಗಲೀ ಅವರ ಹೆಣ್ಮಕ್ಕಳಾಗಲೀ ಬೀಫ್ ತಿನ್ನುತ್ತಿರಲಿಲ್ಲವಾದ್ದರಿಂದ ಮನೆಗೆ ತರುತ್ತಿರಲಿಲ್ಲ. ಅವರ ಗಂಡು ಮಕ್ಕಳು, ಮೊಮ್ಮಕ್ಕಳಾದ ನಾವು ಬೀಫ್ ತಿನ್ನಲು ಕಲಿತದ್ದೇ ಹೊರಗೆ. ಈಗಾಗಲೇ ಅಂದಂತೆ ಅಜ್ಜನಿಗೆ ವಿಪರೀತ ಶ್ರೇಷ್ಟತೆಯ ವ್ಯಸನ. ವಾರದಲ್ಲೊಂದು ದಿನ ಆಡಿನ ಮಾಂಸ ಕಡ್ಡಾಯವಾಗಿ ಬೇಕಿತ್ತು. ಅಜ್ಜ ಜಮಾ‌ಅತ್ ಕಮಿಟಿಯ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಹೀಗೆ ಏನಾದರೊಂದು ಹುದ್ದೆಯಲ್ಲಿ ಮರಣದವರೆಗೂ ಇದ್ದರು. ಮಸೀದಿ‌ ಉಸ್ತಾದರುಗಳಿಗೆ ನಮ್ಮ ಮನೆಯಿಂದ ಊಟ ನೀಡುವ ದಿನ ಆಡಿನ ಮಾಂಸ ಕಡ್ಡಾಯವಾಗಿ ಇರಲೇಬೇಕಿತ್ತು. ಉಸ್ತಾದರ ಊಟದಂದು ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಆಡಿನ ಮಾಂಸದೂಟ ಬಡಿಸದಿದ್ದರೆ ಅದು ತನ್ನ ಘನತೆಗೆ ಕಡಿಮೆಯೆಂದೇ ಅಜ್ಜ ಬಗೆಯುತ್ತಿದ್ದರು.

ಭಾನುವಾರ ಅಜ್ಜನ ಐದು ಹೆಣ್ಮಕ್ಕಳಲ್ಲಿ ಯಾರಾದರೊಬ್ಬರು ಬರುತ್ತಿದ್ದರು. ಹೆಣ್ಮಕ್ಕಳೆಂದರೆ ಅಜ್ಜನಿಗೆ ತುಸು ಹೆಚ್ಚೇ ಪ್ರೀತಿ. ಹೆಣ್ಮಕ್ಕಳ ಜೊತೆ ಅವರ ಗಂಡಂದಿರೂ ಮಕ್ಕಳೂ ಬರುತ್ತಾರೆ. ಅವರ ಹೆಣ್ಮಕ್ಕಳಲ್ಲಿ ಕಿರಿಯ ಪ್ರಾಯಕ್ಕೆ ಎಂದರೆ ಇಪ್ಪತ್ತೇಳು ವಯಸ್ಸಿಗೆ ವಿಧವೆಯಾದವಳು ನನ್ನಮ್ಮ.‌ ಆ ಕನಿಕರ ಕಾರಣವೂ‌ ಸೇರಿ ಅಜ್ಜನ ತುಸು ಹೆಚ್ಚೇ ಪ್ರೀತಿಯ ಮಗಳು ನನ್ನಮ್ಮ. ಮಕ್ಕಳು ಬರುತ್ತಾರೆಂದೂ ಭಾನುವಾರ ಆಡಿನ ಮಾಂಸ ಮಾಡುತ್ತಿದ್ದರು. ಈ ಆಡಿನ ಮಾಂಸದಲ್ಲೂ ಅಜ್ಜನಿಗೆ ಶ್ರೇಷ್ಟತೆಯ ವ್ಯಸನ. ಅವರು ಕುರಿ, ಹೆಣ್ಣಾಡಿನ ಮಾಂಸವನ್ನು ಮನೆಗೆ ತರುತ್ತಿರಲಿಲ್ಲ. ಅವರಿಗೆ ಗಂಡಾಡಿನ ಮಾಂಸವೇ ಆಗಬೇಕಿತ್ತು. ಅದು ಕೂಡಾ ಅವರ ಕಣ್ಮುಂದೆಯೇ ದ್ಸಬಹ್ (ಚೂರಿ ಹಾಕಿದ್ದು) ಆಗಿರಬೇಕು. ತೊಡೆಯ ಮಾಂಸವೇ ಆಗಬೇಕು. ನಮಗೆ ಹತ್ತಿರದ ಮಾರುಕಟ್ಟೆ ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆ.

ಅಜ್ಜ ಪ್ರತೀ ಭಾನುವಾರ ಮುಂಜಾನೆ ಚಹಾ ಉಪಹಾರ ಮುಗಿಸಿ ನನ್ನನ್ನು ಕರೆದುಕೊಂಡು ಮಾರುಕಟ್ಟೆಗೆ ಹೊರಡುತ್ತಿದ್ದರು. ತೊಕ್ಕೊಟ್ಟಿನ ಮಾರುಕಟ್ಟೆಯಲ್ಲಿ ಆಗ ಎರಡು ಆಡಿನ ಮಾಂಸದ ಅಂಗಡಿಗಳಿದ್ದವು ಒಂದು ಪುತುಬಾವಾಕ ಎಂಬ ಮುಸ್ಲಿಮರದ್ದಾದರೆ, ಇನ್ನೊಂದು ಹರೀಶಣ್ಣ ಎಂಬ ಹಿಂದೂ ವ್ಯಕ್ತಿಯೊಬ್ಬರದ್ದು. ಇಬ್ಬರ ಅಂಗಡಿಗಳಲ್ಲೂ ಆಡು ಕುರಿಗಳನ್ನು ದ್ಸಬಹ್ ಮಾಡುವ ಕೆಲಸಕ್ಕಿದ್ದದ್ದು ಅದ್ರಾಮಿಚ್ಚ. ಪುತುಬಾವಾಕ ಮತ್ತು ಹರೀಶಣ್ಣ ಇಬ್ಬರ ಅಂಗಡಿಗಳಲ್ಲೂ ಕಾಸರಗೋಡಿನ ಬದಿಯಡ್ಕದಿಂದ ಬಂದು ನಮ್ಮ ಮಂಚಿಲದ ಮಹಿಳೆಯೊಬ್ಬರನ್ನು ವರಿಸಿ ಇಲ್ಲೇ ಸೆಟ್ಲ್ ಆಗಿದ್ದ ಅದ್ರಾಮಿಚ್ಚ ಎಂಬವರು ಆಡುಗಳನ್ನು ದ್ಸಬಹ್ ಮಾಡುತ್ತಿದ್ದರು. ನನ್ನಜ್ಜ ಆ ದಿನ ಯಾವ ಅಂಗಡಿಯಲ್ಲಿ ಒಳ್ಳೆಯ ದಷ್ಟ ಪುಷ್ಟವಾದ ಗಂಡಾಡು ದ್ಸಬಹ್ ಮಾಡಿದ್ದಾರೆಂದು ನೋಡಿ ಅಥವಾ ಅದ್ರಾಮಿಚ್ಚರಿಂದ ಖಚಿತಪಡಿಸಿಕೊಂಡೇ ಖರೀದಿಸುತ್ತಿದ್ದರು.
ನಮ್ಮ ಮನೆಯಿಂದ ಕೇವಲ ಐದು ನಿಮಿಷಗಳ ನಡೆತದ ದಾರಿಯಷ್ಟೇ ತೊಕ್ಕೊಟ್ಟು ಒಳಪೇಟೆಗೆ.. ನಾನು ತಂಗೀಸಿನ ಚೀಲ ಹಿಡ್ಕೊಂಡು ಅಜ್ಜನನ್ನು ಹಿಂಬಾಲಿಸುತ್ತಿದ್ದೆ.
ಆಗ ತೊಕ್ಕೊಟ್ಟು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದವರು ಬಹುತೇಕರು ಮೊಗವೀರ ಮಹಿಳೆಯರು, ಕೋಳಿ ಅಂಗಡಿ ಮತ್ತು ಮಾಂಸದ ಅಂಗಡಿ ಹಿಂದೂಗಳದ್ದೂ ಮುಸ್ಲಿಮರದ್ದೂ ಇತ್ತು. ತರಕಾರಿ ಅಂಗಡಿಗಳು ಹಿಂದೂ ಮುಸ್ಲಿಂ ಮತ್ತು ಕ್ರೈಸ್ತರದ್ದೂ ಇತ್ತು. ನನ್ನಜ್ಜ ಸಾಮಾನ್ಯವಾಗಿ ತರಕಾರಿ ಖರೀದಿಸುತ್ತಿದ್ದುದು ಬಾಯಮ್ಮನವರಿಂದಲೇ (ಕ್ರೈಸ್ತ ಮಹಿಳೆ). ಬಾಯಮ್ಮನವರು ಕೆಲ ತರಕಾರಿಗಳನ್ನು ಸ್ವತಃ ಬೆಳೆಯುತ್ತಿದ್ದುದರಿಂದ ಅವರ ತರಕಾರಿಗಳು ತಾಜಾ ಇರುತ್ತದೆಂದು ಅಜ್ಜ ಹೇಳುತ್ತಿದ್ದರು. ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಗೆ ಬರುತ್ತಿದ್ದ ಗ್ರಾಹಕರಲ್ಲಿ ದೊಡ್ಡ ಪಾಲು ಮುಸ್ಲಿಮರೇ ಆಗಿದ್ದರು. ನನ್ನ ನೆನಪಲ್ಲಿ ನನ್ನಜ್ಜನಾಗಲೀ, ಇನ್ಯಾರೇ ಬ್ಯಾರಿಗಳಾಗಲೀ ಜಾತಿ ಧರ್ಮ ನೋಡಿ ವ್ಯಾಪಾರ ಮಾಡುತ್ತಿರಲಿಲ್ಲ. ನನ್ನಜ್ಜ ಪ್ರತೀ ಭಾನುವಾರ ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಿದ್ದಾಗ ನನಗೆ ಗಣೇಶ್ ಭವನ ಹೋಟೆಲಲ್ಲಿ ಶೀರ, ಗೋಲಿಬಜೆ, ಸಜ್ಜಿಗೆ, ಬನ್ಸ್ ಹೀಗೆ ಏನಾದರೊಂದು ತಿಂಡಿ ಮತ್ತು ಕಾಫಿ ಕೊಡಿಸುತ್ತಿದ್ದರು. ಪಕ್ಕದಲ್ಲೇ ಮುಬಾರಕ್ ಹೋಟೆಲಿದ್ದರೂ ಅಜ್ಜ ಹೋಗುತ್ತಿದ್ದುದು ಗಣೇಶ್ ಭವನಕ್ಕೆ..

ಅಜ್ಜ ಪರ್ಮನೆಂಟಾಗಿ ಚಿಲ್ಲರೆ ದಿನಸಿ ಸಾಮಾನುಗಳಿಗೆ ಹೋಗುತ್ತಿದ್ದುದು ಕೊರಗ ಬೆಳ್ಚಡರ ಅಂಗಡಿಗೆ.. ನನ್ನ ನೆನಪಲ್ಲಿ ಅಜ್ಜ ಬದುಕಿದ್ದ ಕಾಲಕ್ಕೆ ನಮ್ಮಲ್ಲಿ ಕೋಳಿಗಳು ಮತ್ತು ಹಾಲು ಕೊಡುವ ದನಗಳು ಧಾರಾಳವಾಗಿತ್ತು. ಕೋಳಿ ಸಾರಿಗೆ ಒಂದೋ ಮನೆಯಲ್ಲಿ ಸಾಕುತ್ತಿದ್ದ ಕೋಳಿಗಳನ್ನೇ ದ್ಸಬಹ್ ಮಾಡುತ್ತಿದ್ದರು ಅಥವಾ ಅಕ್ಕ ಪಕ್ಕದ ಯಾರಿಂದಾದರೂ ಖರೀದಿಸುತ್ತಿದ್ದರು. ಕೋಳಿಯ ವಿಚಾರದಲ್ಲೂ ಅಜ್ಜನ ಶ್ರೇಷ್ಠತೆಯ ವ್ಯಸನ ಯಥಾವತ್ತಾಗಿತ್ತು. ಅಜ್ಜನಿಗೆ ನಾಟಿ ಹುಂಜದ್ದೇ ಮಾಂಸವಾಗಬೇಕು. ಹೇಂಟೆಗಳಿರುವುದು ಮೊಟ್ಟೆ ಇಡಲು ಮತ್ತು ಮರಿ ಮಾಡಲು ಎಂದು ಅಜ್ಜ ಹೇಳುತ್ತಿದ್ದರು. ನಾನು ಹುಟ್ಟುವ ಮುಂಚೆಯೇ ನನ್ನಜ್ಜನಿಗೆ ತೊಕ್ಕೊಟ್ಟು ಸಂತ ಸಬೆಸ್ತಿಯನ್ನರ ಚರ್ಚ್ ಬಳಿ ಜಬರ್ದಸ್ತ್ ವ್ಯಾಪಾರವಿದ್ದ ‌ಜವಳಿ ಅಂಗಡಿಯೊಂದಿತ್ತು. ಅದಕ್ಕೆ ಟೈಟಸ್ ಪೊರ್ಬು ಎಂಬ ಓರ್ವ ಕ್ರೈಸ್ತರು ಪಾಲುದಾರರಾಗಿದ್ದರಂತೆ.
ನೇತ್ರಾವತಿ ಬ್ರಿಡ್ಜ್ ಅಥವಾ ಉಳ್ಳಾಲ ಸೇತುವೆ ಆಗುವುದಕ್ಕಿಂತ ಮುಂಚೆ ತೊಕ್ಕೊಟ್ಟಿನ ಈಗಿನ ಪೇಟೆಯೇ ಇರಲಿಲ್ಲವಂತೆ. ಆಗ ತೊಕ್ಕೊಟ್ಟು ಒಳಪೇಟೆಯೇ ಮುಖ್ಯ ವಾಣಿಜ್ಯ ಕೇಂದ್ರವಾಗಿತ್ತು. ಉಳ್ಳಾಲ ಸೇತುವೆ ನಿರ್ಮಾಣವಾಗಿ ಸುಮಾರು ಹದಿನೈದಿಪ್ಪತ್ತು ವರ್ಷಗಳ ವರೆಗೂ ತೊಕ್ಕೊಟ್ಟು ಒಳಪೇಟೆಯೇ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು.

ಕೋಟೆಕಾರು ಆನಂದಾಶ್ರಮ ಶಾಲೆಗೆ ಸೈಕಲಲ್ಲಿ ಹೋಗಿ ಅಜ್ಜ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದರು. ಅಜ್ಜನದು ಒಳ್ಳೆಯ ಇಂಗ್ಲಿಷ್. ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಚೆನ್ನಾಗಿ ಲೆಟರ್ ಡ್ರಾಫ್ಟ್ ಮಾಡುತ್ತಿದ್ದರು. ಬರಹದಲ್ಲೂ ಅದೇ ಶ್ರೇಷ್ಟತೆಯ ವ್ಯಸನ. ಒಂದು ಪದ ಚಿತ್ತಾಗದಂತೆ ಬರೆಯುತ್ತಿದ್ದರು. ಓದು ಅವರ ನೆಚ್ಚಿನ ಹವ್ಯಾಸ.
ವಿಪರೀತವೆನ್ನುವಷ್ಟು ಚಹಾ ಮತ್ತು ನಶ್ಯದ ಚಟವಿತ್ತು.‌ ಚಹಾ ಖಡಕ್ಕಾಗಿರಬೇಕಿತ್ತು. ಚಹಾ ಅವರ ನಿರೀಕ್ಷೆಗೆ ತಕ್ಕಂತಿರದಿದ್ದರೆ ಅದರ ಅವಗುಣವನ್ನು ಖುಲ್ಲಂಖುಲ್ಲಾ ಹೇಳಿಬಿಡುತ್ತಿದ್ದರು. ನಶ್ಯದಲೂ ಅದೇ ಶ್ರೇಷ್ಠತೆಯ ವ್ಯಸನ. ಎಲ್ಲೆಡೆಯೂ ನಶ್ಯದ ಒಂದು ಕಟ್ಟಕ್ಕೆ ಎಪ್ಪತ್ತೈದು ಪೈಸೆಯಿದ್ದರೆ ಅಜ್ಜನ ಸ್ಪೆಷಲ್ ನಶ್ಯಕ್ಕೆ ಡಬಲ್ ಬೆಲೆ (ಒಂದೂವರೆ ರೂಪಾಯಿ). ತೊಕ್ಕೊಟ್ಟಿನ ಮನೆಯೊಂದರಲ್ಲಿ ತಯಾರಿಸುತ್ತಿದ್ದ ಆ ಸ್ಪೆಶಲ್ ನಶ್ಯ ಒಳ್ಳೆಯ ಖಾರವಿರುತ್ತಿತ್ತು.
ಉತ್ತಮವಾಗಿ ಶಟಲ್ ಮತ್ತು ಕ್ಯಾರಂ ಆಡುತ್ತಿದ್ದರು. ನಮ್ಮ ಜೊತೆ ಅಜ್ಜ ಕ್ರಿಕೆಟ್ ಆಡುತ್ತಿದ್ದುದೂ ಉಂಟು. ಶಟಲ್ ಆಟ ಬಹಳ ಚೆನ್ನಾಗಿ ಆಡುತ್ತಿದ್ದರಂತೆ. ಶಾಲಾ ದಿನಗಳಲ್ಲಿ ಮತ್ತು ಯುವಕರಾಗಿದ್ದಾಗ ಮಂಗಳೂರು ನಗರದಲ್ಲಿ ನಡೆಯುತ್ತಿದ್ದ ಸ್ಥಳೀಯ ಟೂರ್ನಮೆಂಟ್‌ಗಳಲ್ಲಿ ಅನೇಕ ಬಾರಿ ಚಾಂಪಿಯನ್ ಆಗಿದ್ದರಂತೆ.


ಅವರು ಮಸೀದಿ ಆಡಳಿತ ಸಮಿತಿಗಳಲ್ಲಿ ಸದಾ ಒಂದಿಲ್ಲೊಂದು ಹುದ್ದೆಯಲ್ಲಿದ್ದರೂ ತನ್ನ ಹೆಣ್ಮಕ್ಕಳನ್ನೆಲ್ಲಾ ಕಾನ್ವೆಂಟ್ ಶಾಲೆಗೆ ಕಳುಹಿಸಿದ್ದರು. ಬ್ಯಾರಿ ಸಮುದಾಯದ ಗಣ್ಯರಾಗಿದ್ದರೂ ಅವರು ತನ್ನ ಮೊಮ್ಮಕ್ಕಳಾದ ನಮ್ಮನ್ನು ಪಕ್ಕದಲ್ಲೇ ಇರುವ ಮುಸ್ಲಿಂ ಆಡಳಿತದ ಶಾಲೆಗಳಿಗೆ ಸೇರಿಸದೇ ಕಾನ್ವೆಂಟ್ ಶಾಲೆಗಳಿಗೆ ಸೇರಿಸಿದ್ದರು. ಒನ್ಸ್ ಎಗೈನ್ ಕಾನ್ವೆಂಟ್ ಶಾಲೆಗಳೆಂದರೆ ಗುಣಮಟ್ಟದ ಶಿಕ್ಷಣ ಎಂಬ ಶ್ರೇಷ್ಠತೆಯ ವ್ಯಸನ ಅಜ್ಜನದಾಗಿತ್ತು. ನಮಗೆಲ್ಲಾ ಅಜ್ಜನೇ ಟ್ಯೂಶನ್ ಕೊಡುತ್ತಿದ್ದರು. ಮನೆಗೊಂದು ಕರಿಹಲಗೆಯಿತ್ತು. ಮಸೀದಿಯಿಂದ ಕೇಳುತ್ತಿದ್ದ ಮುಕ್ರಿಕನ ಆಝಾನಿ‌ನ ಕರೆ ನನ್ನ ಪಾಲಿಗೆ ವಿಮೋಚನೆಯ ಕೂಗಿನಂತನಿಸುತ್ತಿತ್ತು. ಅಜ್ಜ ಮಸೀದಿಗೆ ಹೊರಡುತ್ತಿದ್ದಂತೆಯೇ ಅಜ್ಜನ ಟ್ಯೂಶನ್ ಎಂಬ ಶಿಕ್ಷೆಯಿಂದ ವಿಮೋಚನೆ ಸಿಗುತ್ತಿತ್ತು. ನಾನಂತೂ ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಆ ಇಡೀ ದಿನ ಅಜ್ಜನಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದೆ.
ನನಗೆ ಬುದ್ಧಿ ಬಂದ ದಿನಗಳಿಂದಲೇ ಮನೆಯಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿತ್ತು. ಕಾಂಗ್ರೆಸ್ ಎಂದರೆ ಅಜ್ಜ ನಖ ಶಿಖಾಂತ ಉರಿದು ಬೀಳುತ್ತಿದ್ದರು. ಭೂ ಸುಧಾರಣೆ ಕಾನೂನಿನಿಂದ ಭೂಮಿ ಕಳೆದುಕೊಂಡ ಬಗ್ಗೆ ಅಜ್ಜನಿಗೆ, ಅಜ್ಜಿಗೆ, ಮಾವಂದಿರಿಗೆ ಕಾಂಗ್ರೆಸ್ ಬಗ್ಗೆ ಅತೀವ ಸಿಟ್ಟಿತ್ತು. ನನಗೆ ನಾಲ್ಕು ಮಂದಿ ಮಾವಂದಿರು. ಅದರಲ್ಲಿ ಯಹ್ಯಾ ಎಂಬ ಮಾವ ಇಪ್ಪತ್ತೆರಡು ವಯಸ್ಸಿಗೆಲ್ಲಾ ಮರಣಹೊಂದಿದ್ದರು. ಈ ಕಾಂಗ್ರೆಸ್‌ನಿಂದಾಗಿ ನಾವು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದೇವೆ ಎಂಬ ಸಿಟ್ಟು ನನ್ನ ಮಾವ ಯಹ್ಯಾರಿಗೆ ಅದ್ಯಾವ ಪರಿಯಿತ್ತೆಂದರೆ ಬಿ.ಎಂ.ಇದ್ದಿನಬ್ಬರು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ತೆರೆದ ಜೀಪಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದರಂತೆ. ನನ್ನ ಮಾವ ಯಹ್ಯಾ ನಮ್ಮ ಹಿತ್ತಲ ಮರವೊಂದರ ಮೇಲೆ ಕೂತು ಶಾಸಕ ಇದ್ದಿನಬ್ಬರಿಗೆ ಕಲ್ಲು ತೂರಾಟ ನಡೆಸಿದ್ದರಂತೆ. ಸಿಟ್ಟಾದ ಕಾಂಗ್ರೆಸ್ ಕಾರ್ಯಕರ್ತರು ಮಾವನಿಗೆ ಸಿಕ್ಕಾಪಟ್ಟೆ ಹೊಡೆದಿದ್ದರಂತೆ. ಅಜ್ಜ ಕೊನೆಯವರೆಗೂ ಪರ್ಯಾಯ ರಾಜಕೀಯದ ಒಲವಿದ್ದವರಾಗಿದ್ದರು.

1992 ಡಿಸೆಂಬರ್ ಆರರಂದು ಅಂದರೆ ಬಾಬರೀ ಮಸೀದಿ ಧರಾಶಾಹಿಯಾದಂದು ಅಜ್ಜನಿಗೆ ಮೊದಲ ಬಾರಿ ಹೃದಯಾಘಾತವಾಗಿತ್ತು. ಊರಿಗೆ ಊರೇ ಬಂದಾಗಿತ್ತು. ಎಲ್ಲರ ಮುಖದಲ್ಲೂ ಏನಾಗುತ್ತೋ ಏನೋ ಎಂಬ ಆತಂಕದ ಛಾಯೆ. ತೊಕ್ಕೊಟ್ಟು ಹೈವೇ ತುಂಬಾ ಪೋಲೀಸರಿದ್ದಾರೆ. ಏನೋ ಅಪಾಯದ ಮುನ್ಸೂಚನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು
ಹೈವೇಯ ಪಕ್ಕದಲ್ಲೇ ನನ್ನ ಚಿಕ್ಕಮ್ಮನ ಮನೆ. ಚಿಕ್ಕಪ್ಪ ಗಲ್ಫಲ್ಲಿದ್ದರು, ಚಿಕ್ಕಮ್ಮ ಮತ್ತು ಮೂವರು ಪುಟ್ಟ ಪುಟ್ಟ ಮಕ್ಕಳು ಮಾತ್ರ ಇದ್ದುದರಿಂದ ಅಜ್ಜ ಅವರನ್ನು ಮನೆಗೆ ಕರೆತಂದಿದ್ದರು. ಅಜ್ಜ ತನ್ನ ಆತ್ಮೀಯ ಸ್ನೇಹಿತನೂ ತನ್ನ ಒಕ್ಕಲಿನ ಅಪ್ಪಯ್ಯ ಆಚಾರಿಯ ಮಗನೂ ಆದ ಗಂಗಾಧರ ಆಚಾರಿಯ ಜೊತೆಗೆ ಕಲ್ಲಾಪು ರೈಲ್ವೆ ಹಳಿ ದಾಟಿ ಒಳದಾರಿಯ ಮೂಲಕ ಚಿಕ್ಕಮ್ಮನ ಮನೆ ತಲುಪಿದ್ದರು. ಅಜ್ಜ ಮತ್ತು ಗಂಗಾಧರ ಆಚಾರಿ ಚಿಕ್ಕಮ್ಮನ ಮನೆಯ ಚಾವಡಿಯಲ್ಲಿ ನಿಂತು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಚಿಕ್ಕಮ್ಮನ ಮನೆಯ ಎದುರು ಬದಿಗೆ ಎಂದರೆ ಹೈವೇ ಇನ್ನೊಂದು ಬದಿಯಲ್ಲಿ ಅಂದು ರಹ್ಮತ್ ಎಂಟರ್‌ಪ್ರೈಸಸ್ ಎಂಬ ಒಂದು ದೊಡ್ಡ ಟಿಂಬರ್ ಇತ್ತು. ಅದಕ್ಕೆ ಯಾರೋ‌ ದುಷ್ಕರ್ಮಿಗಳು ಬೆಂಚಿ ಹಚ್ಚಿದರು. ಅಜ್ಜನ ಕಣ್ಮುಂದೆಯೇ ಆ ಟಿಂಬರ್ ಹೊತ್ತಿ ಉರಿಯುತ್ತಿತ್ತು. ಸೂಕ್ಷ್ಮ ಮನಸ್ಸಿನವರಾಗಿದ್ದ ಅಜ್ಜ ಟಿಂಬರ್ ಬೆಂಕಿಗಹುತಿಯಾಗುತ್ತಿದ್ದುದನ್ನು ನೋಡುತ್ತಲೇ ಗೆಳೆಯ ಗಂಗಾಧರ ಆಚಾರಿಯ ಹೆಗಲಿಗೆ ಒರಗುತ್ತಾ ದೊಪ್ಪನೆ ನೆಲಕ್ಕೆ ಬಿದ್ದರು. ಆಚಾರಿ ಅಕ್ಕ ಪಕ್ಕದ ಯುವಕರನ್ನು ಕರೆದು ಅಜ್ಜನ ಮುಖಕ್ಕೆ ನೀರು ಚಿಮುಕಿಸಿ, ಮುಖ ತೊಳೆದು, ತನಗೆ ತಿಳಿದದ್ದನ್ನೆಲ್ಲಾ ಮಾಡಿದರು. ಹಾಗೂ ಹೀಗೂ ಸಾವರಿಸಿಕೊಂಡ ಅಜ್ಜನನ್ನು ಎತ್ತಿಕೊಂಡು ಮನೆಗೆ ಬಂದರು. ಅಜ್ಜನಿಗೆ ಮೊದಲ ಬಾರಿ ಹೃದಯಾಘಾತವಾಗಿತ್ತು. ಅದಾದ ಬಳಿಕ ಅಜ್ಜ ಮುಂಚಿನಂತಾಗಲಿಲ್ಲ. 1993 ಸೆಪ್ಟೆಂಬರ್ 29ರಂದು ಆಸ್ಪತ್ರೆಯಲ್ಲೇ ಅಜ್ಜ ಕೊನೆಯುಸಿರೆಳೆದರು. ಅಜ್ಜನಿಗೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ತನ್ನ ಕಾಲ ಮುಗಿಯಿತು ಎಂಬ ಮುನ್ಸೂಚನೆ ಸಿಕ್ಕಿತ್ತೇನೋ.. ಅಜ್ಜ ತನ್ನ ಅಂತಿಮ ವಿಧಿ ವಿಧಾನಗಳನ್ನು ಹೇಗೆ ಮಾಡಬೇಕು. ಯಾವುದಕ್ಕೆಲ್ಲಾ ಎಷ್ಟೆಷ್ಟು ಖರ್ಚು ಮಾಡಬೇಕು ಎಂಬುವುದನ್ನೆಲ್ಲಾ ಪಟ್ಟಿ ಬರೆದಿಟ್ಟಿದ್ದರು. ಅವರ ಮರಣದ ನಾಲ್ಕನೇ ದಿನವಷ್ಟೇ ನಾವವರ ಪುಸ್ತಕ ತೆರೆದು ಇದನ್ನೆಲ್ಲಾ ಓದಿದ್ದು. ಅಷ್ಟೊತ್ತಿಗೆ ಮೂರನೇ ದಿನದ ಪ್ರಾರ್ಥನೆಯೂ ಮುಗಿದಿತ್ತು.
ಸಂಪ್ರದಾಯಸ್ಥ, ಪಕ್ಕಾ ಸೆಕ್ಯುಲರ್, ಕ್ರೀಡಾಪಟು, ಭೋಜನಪ್ರಿಯ, ಶ್ರೇಷ್ಟತೆಯ ವ್ಯಸನ ಇವೆಲ್ಲವುಗಳಿಂದ ಕೂಡಿದ ವಿಶಿಷ್ಟ ವ್ಯಕ್ತಿತ್ವವಾಗಿತ್ತು ನನ್ನಜ್ಜನದು.

LEAVE A REPLY

Please enter your comment!
Please enter your name here