• ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ

ಶಿಕ್ಷಕ ದಿನಾಚರಣೆಯ ಶುಭಾಶಯಗಳು – ಇಂಕ್ ಡಬ್ಬಿ ಬಳಗ

ಇಂದು ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಪ್ರಯುಕ್ತ ಶಿಕ್ಷಕ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ ಸುಭದ್ರವಾದದ್ದು. ಅದಕ್ಕೆ ಸರಿ ಸಾಟಿಯಿಲ್ಲ. ಕಾಲ ಎಷ್ಟೇ ಉರುಳಿ ಹೋದರೂ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಬೇರೂರಿರುವ ವ್ಯಕ್ತಿ ಅದು ಅವನ ನೆಚ್ಚಿನ ಶಿಕ್ಷಕ. ಎಂಬುವದರಲ್ಲಿ ಎರಡು ಮಾತಿಲ್ಲ. “ಗುರು ದೇವೋ ಭವಃ” ಅಂತ ವೇದಗಳ ಸಾರದಂತೆ, ತಾಯಿಯಂತೆ ಮಮತೆಯಿಂದ ಅಕ್ಕರೆಯಿಂದ ಜವಾಬ್ದಾರಿಯುತವಾಗಿ ಅಕ್ಷರದ ದೀಪ್ತಿಯನ್ನು ಬೆಳಗಿಸುವ ಮಾತೃ ಸಮಾನ ವ್ಯಕ್ತಿತ್ವ ಅದು ಶಿಕ್ಷಕರು ಮಾತ್ರ.

ಶಾಲೆಯ ಮೆಟ್ಟಿಲು ಹತ್ತಿ ಇಳಿದ ವಿದ್ಯಾರ್ಥಿ ತನ್ನ ಜೀವನದಲ್ಲಿ ಬಹಳಷ್ಟು ಸಾಧಿಸಿ, ಗಳಿಸಿ ದೊಡ್ಡ ಮನುಷ್ಯನಾಗಿ ಬದಲಾಯದರೂ ತನ್ನನ್ನು ರೂಪಿಸಿದ ಶಿಕ್ಷಕ ಅದೇ ಶಾಲೆಯ ನಾಲ್ಕು ಗೋಡೆಯ ಒಳಗೆ ತನ್ನ ಸೇವೆಯನ್ನು ಮುಂದುವರಿಸುತ್ತಿರುತ್ತಾರೆ ಎಂಬುವುದನ್ನು ಕಾಣುತ್ತೇವೆ. ಯಾವುದೇ ಪ್ರಶಸ್ತಿಯ, ಪ್ರಚಾರದ ಬೆನ್ನು ಹತ್ತದೆ ತನ್ನಲ್ಲಿರುವ ವಿದ್ಯಾ ಜ್ಯೋತಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ತೃಪ್ತಿ ಕಾಣುವ ಎಷ್ಟೋ ಶಿಕ್ಷಕರು ನಮ್ಮಲ್ಲಿದ್ದಾರೆ. ಎಲೆ ಮರೆ ಕಾಯಿಯಂತೆ ಅವರು ಶಾಲೆಯ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಣತೊಟ್ಟು ನಿಸ್ವಾರ್ಥರಾಗಿ ಸೇವೆಯಲ್ಲಿರುತ್ತಾರೆ. ಅಂತಹ ನೂರಾರು ಶಿಕ್ಷಕರ ಪೈಕಿ ಒಬ್ಬರಾಗಿದ್ದಾರೆ ನನ್ನ ನೆಚ್ಚಿನ ಕನ್ನಡ ಭಾಷ ಶಿಕ್ಷಕ ಲಕ್ಷ್ಮಣ್ ಸರ್.

ಲಕ್ಷ್ಮಣ್ ಪೂಜಾರಿ . ಎಸ್ ಮೂಲತ ಬಂಟವಾಳ ತಾಲೂಕಿನ ನರಿಂಗಾನ ಗ್ರಾಮದ ಸರ್ಕುಡೈಲು ಊರಿನಲ್ಲಿ ತಂದೆ ಶೀನ ಪೂಜಾರಿ ಮತ್ತು ತಾಯಿ ಸರೋಜಾರ ಮಗನಾಗಿ ೧೯೬೧ ರಲ್ಲಿ ಜನಿಸಿದರು. ಕನ್ನಡದಲ್ಲಿ ಎಂ.ಎ, ಬಿ.ಎಡ್ ಮುಗಿಸಿದ ನಂತರ ಶ್ರೀ ರಾಮಕೃಷ್ಣ ಹೈಸ್ಕೂಲ್ ಪಾವೂರು ಹರೇಕಳ ಇಲ್ಲಿ ಹತ್ತು ವರ್ಷಗಳ ಕಾಲ ಕನ್ನಡ ಭಾಷಾ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿ ಸುಮಾರು ಇಪ್ಪತ್ತ ಮೂರು ವರ್ಷಗಗಳಿಂದ ಸೇವೆಯಲ್ಲಿದ್ದು ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿದ್ದಾರೆ.

ಕನ್ನಡ ಪಾಠದ ಜೊತೆಗೆ ಕ್ರೀಡೆ, ಯಕ್ಷಗಾನ, ಓದುವುದು ಬರೆಯುವುದರ ಹೆಚ್ಚು ಆಸಕ್ತಿ ಇರುವ ಇವರು ಪಠ್ಯದ ಜೊತೆಗೆ ಕಲಾ ಸಾಹಿತ್ಯದಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಅವರ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಇವರೊಬ್ಬ ಉತ್ತಮ ನಿರೂಪಕರೂ ಕೂಡ ಆಗಿದ್ದಾರೆ. ಎಲೆ ಮರೆ ಕಾಯಿಯಂತೆ ಶಾಲೆಯ ಏಳಿಗೆಗಾಗಿ ಮುಖ್ಯೋಪ್ಯಾಧ್ಯಾರ ಜೊತೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ ಫಲವಾಗಿ ಉತ್ತಮ ಹೂದೋಟದ ನಿರ್ಮಾಣ, ತರಕಾರಿ ತೋಟದ ನಿರ್ಮಾಣ, ಹೆಣ್ಣುಮಕ್ಕಳ ಶುಚಿತ್ವದ ಗಮನದಲ್ಲಿಟ್ಟು ನ್ಯಾಪ್ಕಿನ್ ಬರ್ನರ್ ವ್ಯವಸ್ಥೆ, ಪ್ಯೂರಿಫೈ ಕುಡಿಯುವ ನೀರಿನ ವ್ಯವಸ್ಥೆ , ಮಳೆಕೊಯ್ಲು, ಸಿ ಸಿ ಟಿವಿ ಇತ್ಯಾದಿ ಸೌಕರ್ಯಗಳು ಇಂದು ಈ ಶಾಲೆಯಲ್ಲಿ ಇದೆ.

ನರಿಂಗಾನ ಪ್ರದೇಶವು ಕೇರಳ ಗಡಿ ಪ್ರದೇಶದಲ್ಲಿರುವುದರಿಂದ ಹೆಚ್ಚಿನ ಮುಸ್ಲಿಮರು ಮತ್ತು ಮಲೆಯಾಳಿ, ಮಲಾಮೆ, ಬ್ಯಾರಿ ಭಾಷೆಯೊಂದಿಗೆ ನಂಟು ಇರುವವರು ಆದ ಕಾರಣ ಕನ್ನಡ ಕಾಗುಣಿತ, ಅಕ್ಷರ ಸ್ಪುಟತೆಯಲ್ಲಿ, ಉಚ್ಚಾರಣೆಯಲ್ಲಿ ಹೆಚ್ಚು ಲೋಪ ದೋಷ ಕಾಣುತ್ತದೆ ಅದನ್ನೆಲ್ಲ ತಿದ್ದಿ ಸರಿ ಪಡಿಸುವುದು ಎಂದರೆ ಕನ್ನಡ ಶಿಕ್ಷಕನ ಪಾಲಿಗೆ ಕಬ್ಬಿಣದ ಕಡಲೇಕಾಯಿ ದೊಡ್ಡ ಸಾಹಸದ ಕೆಲಸ ಆದರೂ ಸಹ ಅದನ್ನ ಜವಾಬ್ದಾರಿಯುತವಾಗಿ ನಿಭಾಯಿಸಿ ಮಕ್ಕಳಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುವಂತೆ ಮಾಡಿದ ಲಕ್ಷ್ಮಣ್ ಸರ್ ಅವರನ್ನು ಮೆಚ್ಚಲೇ ಬೇಕು. ಇಂದಿಗೂ ವಿದ್ಯಾರ್ಥಿಗಳು ಅದನ್ನು ನೆನಪಿಸುತ್ತಾರೆ.

“ಇಂದು ಸರಕಾರೀ ಶಿಕ್ಷಣ ರಂಗವು ಒಳ್ಳೆಯ ಗುಣಮಟ್ಟದಿಂದ ಬೆಳೆಯುತ್ತಿದೆ ಮಕ್ಕಳಿಗಾಗಿ ಒಳ್ಳೆಯ ಅವಕಾಶ ಮತ್ತು ಸೌಕರ್ಯಗಳನ್ನು ಸರಕಾರ ಒದಗಿಸಿ ಕೊಡುತ್ತದೆ ಶಿಕ್ಷಕರು ಸಹ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮ ವಹಿಸಿ ದುಡಿಯುತ್ತಿದ್ದಾರೆ ಶಿಕ್ಷಕರಂತೆ ಸಮಾನ ಆಸಕ್ತಿ ಪೋಷಕರಲ್ಲಿಯೂ ಇರಬೇಕು ಖಾಸಗಿ ಶಾಲೆಗೆ ಕಳುಹಿಸುವಾಗ ವಹಿಸುವ ಮುತುವರ್ಜಿ ಸರಕಾರೀ ಶಾಲೆಗೇ ಕಳುಹಿಸುವಾಗಲು ಇದ್ದರೆ ಮಕ್ಕಳ ಶೈಕ್ಷಣೈಕ ಗುಣಮಟ್ಟ ಬೆಳೆಯುತ್ತದೆ ಮಕ್ಕಳಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ

ಒಂದೇ ಶಾಲೆಯಲ್ಲಿ ಕಲಿತು ಅದೇ ಶಾಲೆಯಲ್ಲಿ ಶಿಕ್ಷಕನಾಗಿ ತನ್ನ ಸುಧೀರ್ಘ ವರ್ಷದ ಸೇವೆಯಲ್ಲಿದ್ದು ಇದೀಗ ನಿವೃತ ಹಂತದಲ್ಲಿ ಇರುವ ಇವರನ್ನು ಹಳೆವಿದ್ಯಾರ್ಥಿ ಸಂಘ, ನರಿಂಗಾನ ಯುವಕ ಮಂಡಲ, ಲಯನ್ಸ್ ಕ್ಲಬ್ ನಂತಹ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆಯಾದರೂ ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತು ದುಡಿದ ನಿಸ್ವಾರ್ಥ ಸೇವಕನನ್ನು ಸರಕಾರಕ್ಕೆ ಗುರುತಿಸಲು ಸಾಧ್ಯವಾಗಲಿಲ್ಲ ಎಂಬುವುದು ಅವರಿಂದ ಅಕ್ಷರವನ್ನು ಕಲಿತ ನನ್ನತಹ ಹಲವಾರು ವಿದ್ಯಾರ್ಥಿಗಳ ನೋವು.

LEAVE A REPLY

Please enter your comment!
Please enter your name here