ಇಂಡಿಯನ್ ಸೋಷಿಯಲ್ ಫೋರಮ್,ಸೌದಿ ಅರೇಬಿಯಾ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ “ನಾ ಕಂಡ ಕರುನಾಡು” ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ “ಮಿಸ್ರಿಯಾ.ಐ.ಪಜೀರ್” ಅವರ ಕವನ.

ರಚನೆ -ಮಿಸ್ರಿಯಾ.ಐ.ಪಜೀರ್

ಶಿಶುನಾಳನ ಪಾದವ ನುಂಗಿದ
ಗೋವಿಂದ ಗುರುವನು ಕಂಡೆ
ಗುರುವೆಂಬ ಶಿಲ್ಪಿಯ ಧರ್ಮದೇಟಿಗೆ
ಉರುಳಿ ಬಿದ್ದ ಜೈಬುನ್ನಿಸಾಳನೂ ಕಂಡೆ

ಬುಡಾನಜ್ಜನ ಕಾಫಿಯ ಘಮಲು
ಅಮಲೇರಿಸಿದೆ
ದತ್ತಾತ್ರೇಯರ ಜೊತೆಯಲಿ ಕಂಡು
ಧರ್ಮದ ನಶೆಯೇರಿಸಿದೆ

ಕರುನಾಡ ಮೈಸಿರಿಗೆ
ರೇಷ್ಮೆಯುಡಿಸಿದ ಟಿಪ್ಪು ಸುಲ್ತಾನ
ಈ ನಾಡು ಅವನಿಗಿತ್ತಿದೆ
ಮತಾಂಧನೆಂಬ ಬಹುಮಾನ

ಸತ್ಯ ಮಿಥ್ಯೆಯ ಸಂಘರ್ಷದಿ
ರಕುತ ಚೆಲ್ಲಿತು ಲೇಖನಿ
ಕಲ್ಬುರ್ಗಿ ಗೌರಿಯ ಅಮರರಾಗಿಸಿ
ನಾಡು ಹರಿಸಿತು ಕಂಬನಿ

ಕೃಷ್ಣಾ ನದಿ ತಟದಲ್ಲಿ ತಿಂಥಣಿಯ ನೆಲದಲ್ಲಿ
ಮೊಯ್ನುದ್ದೀನ್-ಮೋನಪ್ಪಯ್ಯರ ಕಂಡೆ
ಸೂಫಿ-ಶರಣರ ಐಕ್ಯತೆಯ ನೆರಳಲ್ಲಿ
ನನ್ನ ಕರುನಾಡ ಕಂಡೆ

ಜನಪದ ಸಿರಿಯ ಹೆಕ್ಕಿ ಕೂಡಿಟ್ಟ
ಕರೀಂ ಖಾನರ ನೋಡಿದೆ
ಈ ನಾಡ ಮಿಡಿತದಲಿ ನಮ್ಮಿರವ ಕಾಣಲು
ಅನ್ಯರೆನುವ ಧಾಟಿಗೆ ಬೆಚ್ಚಿದೆ.
*************************

LEAVE A REPLY

Please enter your comment!
Please enter your name here