ನಿನ್ನೆ ಹತ್ತಿ‌ ಕೂತ ಬಸ್ಸಿನ
ಟ್ಯಾಂಕಿಗೆ ಡೀಸೆಲ್ಲು
ಸುರಿದ ಹುಡುಗನಿಗೆ
ಸಂಬಳ ಸಿಕ್ಕಿರಬಹುದೆ

ನಿಸ್ತೇಜ ಕಂಗಳಲಿ
ರಸ್ತೆಯನೆ ದಿಟ್ಟಿಸುತ
ಸ್ಟೇರಿಂಗು ತಿರುಗಿಸುವ
ಚಾಲಕನ ತಲೆಯೊಳಗೆ
ಮಗಳು ಕೊಡಿಸಲು
ಹಠ ಮಾಡಿದ
ಹೊಸ ಮೊಬೈಲಿನ ಚಿತ್ರವಿರಬಹುದೆ

ಈ ಮಧ್ಯ ರಾತ್ರಿಯಲಿ
ತಿರುವಿನಲಿ ಬಸ್ಸೇರಿದ
ಒಬ್ಬಂಟಿ ಹುಡುಗಿಯ
ಸುಂದರ ಕಣ್ಣುಗಳಿಗೆ
ನಾವೆಲ್ಲ ರಕ್ಕಸರಂತೆ
ಕಂಡಿರಬಹುದೆ

ಸೀಟೊಳಗೆ ದೇಹ ತುರುಕಿಸಿ
ತೂಕಡಿಸುತ ಕೂತಿರುವ
ತೋರದ ವ್ಯಕ್ತಿಗೆ
ತೂಕ ಇಳಿಸುವ ಬಗ್ಗೆ
ತಲೆನೋವಿರಬಹುದೆ

ಎರಡೆರಡು ಬಾರಿ
ನನ್ನತ್ತ ತಿರುಗಿದವಗೆ
ಏನೆನಿಸಿರಬಹುದು
ನನ್ನ ಕುರಿತು

ಕಂಡಕ್ಟರಿಗೇ ಬೈದ
ಹಲ್ಲಿಲ್ಲದ ಮುದುಕಿಯನು
ಒಳಗೊಳಗೆ ಆತ
ಕ್ಷಮಿಸಿರಬಹುದೆ

ಬಸ್ಸು ತುಂಬಿದ
ಇಷ್ಟೊಂದು ಜನರೆಲ್ಲ
ಎಲ್ಲೆಲ್ಲಿಗೆ ಹೊರಟವರು
ಖುಷಿಗೆ ಜೊತೆಯಾಗಲು
ದುಃಖಕೆ ಹೆಗಲ ನೀಡಲು
ಹೀಗೇ ಸುಮ್ಮನೆ ಸಮಯ ಕಳೆಯಲು
ಬದುಕಿನ ಹಾದಿಗೆ
ಉದ್ಯೋಗವನರಸಲು
ರೋಗಕ್ಕೆ ಮದ್ದು ಪಡೆಯಲು

ಒಂದೇ ರಸ್ತೆಯಲಿ
ಎಷ್ಟೊಂದು ದಾರಿ
ಅರ್ಧದಲಿ ಇಳಿವವರು
ಕೊನೆವರೆಗೆ ಬರುವವರು
ನಿಲ್ದಾಣದಲೆ ನಿಲುವವರು
ಅವರು ಇವರು
ನಾವೆಲ್ಲರೂ

ತಲೆಕೆಟ್ಟವನಂತೆ
ಅವರಿವರೆಲ್ಲರ
ಒಳಗನರಿಯಲು ಹೊರಟ
ನನ್ನೊಳಗೇನಿರಬಹುದು  !

ಬರೆದವರು: ಎಮ್ಮೆಸ್ಕೆ

LEAVE A REPLY

Please enter your comment!
Please enter your name here