• ಅಬ್ದುಲ್ ಸಲಾಮ್ , ದೇರಳಕಟ್ಟೆ

2020ರ ಆರಂಭದಲ್ಲೇ ಜಗತ್ತನ್ನು ಆವರಿಸಿದ ಕೊರೋನ ಭೀತಿ ದಿನೇ ದಿನೇ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಘಟನೆ ಮತ್ತು ಜಗತ್ತಿನ ಬಲಿಷ್ಟ್ರ ರಾಷ್ಟ್ರಗಳು ಅದನ್ನು ಹತ್ತಿಕ್ಕಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಕೋವಿಡ್-19ನ್ನು ಪ್ರತಿ ರೋಧಿಸಲು ಸಹಕಾರಿಯಾಗಬಲ್ಲ ವ್ಯಾಕ್ಸಿನ್ ಚೀನಾ ಸೇರಿದಂತೆ ಕೆಲವು ಬೆರಳೆಣಿಕೆಯ ರಾಷ್ಟ್ರಗಳು ಆವಿಷ್ಕರಿಸಿದರೂ ಅದು ಇನ್ನೂ ಸಾರ್ವಜನಿಕ ವಲಯಕ್ಕೆ ಲಭ್ಯವಾಗಲು ವರ್ಷಗಳೇ ಬೇಕಾಗಬಹುದು.
ಏನಿದ್ದರೂ ಕೊರೋನ ಎಂಬ ಮಹಾಮಾರಿ ಇತಿಹಾಸದಲ್ಲೇ ಸ್ಮರಿಸಲ್ಪಡುವ ಅನೇಕ ಬದಲಾವಣೆಗಳಿಗೆ ನಾಂದಿಯಾಗ ಬೇಕಾದ ಪಾಠಗಳನ್ನು ಮತ್ತು ಸರಳತೆಯ, ಸಹಾನುಭೂತಿಯ ಹಾಗೂ ಕಟಿಬದ್ಧತೆಯ ಶಿಕ್ಷಣ ಕೊಡುಗೆಯಾಗಿ ನೀಡಿದೆ. ಆಡಂಬರ ಕಲ್ಯಾಣ ಮಂಟಪದಲ್ಲಿ ವಿವಾಹವಾಗುತ್ತಿದ್ದ ವಿವಾಹಗಳು ಇಂದು ತಮ್ಮ ಸ್ವಂತ ಮನೆಗಳಿಗೆ ಸ್ಥಳಾಂತರಿಸ ಲ್ಪಟ್ಟಿದ್ದು ಹಿಂದಿನ ಕಾಲದ ವಿವಾಹದ ಸವಿನೆನಪು ಮರುಕಳಿಸುವಂತಾಗಿದೆ. ಸಾವಿರಾರು ಮಂದಿಗೆ ಆಮಂತ್ರಣ ನೀಡುತ್ತಿದ್ದ ವಿವಾಹವು ಇಂದು ಐವತ್ತು ಇಲ್ಲವೇ ನೂರಕ್ಕೆ ಸೀಮಿತಗೊಂಡಿದೆ. ವಿವಾಹಕ್ಕೆ ಸಂಬಂಧಿಸಿ ನಡೆಯುವ ಇನ್ನಿತರ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿದೆ. ಅನಗತ್ಯವಾಗಿ ಮಾರುಕಟ್ಟೆಯಲ್ಲಿ ತಿರುಗುತ್ತಾ ಕಾಲಹರಣ ಮಾಡುವ ಮಂದಿ ಇಂದು ಭಯಭೀತರಾದ್ದಾರೆ. ಕೈತುಂಬಾ ಹಣವಿದ್ದು ಅಹಂಕಾರದ ಉತ್ತುಂಗಕ್ಕೇರಿದ್ದ ಬಂಡವಾಳಶಾಹಿಗಳು ಇಂದು ದೊಪ್ಪನೆ ಕುಸಿದು ಬಿದ್ದಿದ್ದಾರೆ. ಜಾಗತಿಕ ನೆಲೆಯಲ್ಲಿಯೇ ಆರ್ಥಿಕತೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪಾತಾಳಕ್ಕೆ ತಳ್ಳಲ್ಪಟ್ಟಿದೆ. ಮನುಷ್ಯನು ಭೂಮಿಯಲ್ಲಿ ನಡೆಸುವ ಅಕ್ರಮ ಮತ್ತು ಅತಿರೇಕಗಳಿಗೆ ಇತಿಹಾಸವು ತಕ್ಕದಾದ ಪಾಠ ಕಲಿಸಿದೆ. ಇವೆಲ್ಲದರ ಮಧ್ಯೆಯೂ ಕೆಲವೊಂದು ಮನುಷ್ಯರು ವಿನಮ್ರತೆಯ ಔನ್ನತ್ಯಕ್ಕೇರಿ ದರು. ಪರಸ್ಪರ ಸಹಾಯ ಮಾಡುವ ಮೂಲಕ ಹಂಚಿ ತಿಂದರು ಮತ್ತು ಇತರರನ್ನು ತಮ್ಮವರೆಂದು ಅವರ ಕಷ್ಟ ಸುಖಗಳಿಗೆ ಹೆಗಲು ಕೊಟ್ಟರು. ಆದುದ ರಿಂದಲೇ ಕಾಲವು ಕೇವಲ ದುಃಖ ದುಮ್ಮಾನಗಳಿಗೆ ಮಾತ್ರವಲ್ಲ ಸುಖ ಸಂತೋಷಗಳಿಗೂ ಸಾಕ್ಷಿಯಾಗಿವೆ.
ಅಂತಹ ಒಂದು ಘಟನೆಯ ಸಾರಾಂಶವೇ ಈ ಕಥೆಯ ಹಿನ್ನೆಲೆ. ಬ್ರಿಟನ್‍ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಾ ಸಾಮಾಜಿಕ ಕಾರ್ಯಕರ್ತೆಯೂ ಆಗಿ ಗುರುತಿಸಿಕೊಂಡಿರುವ ಕೇರಳದ ಮಲ ಪ್ಪುರಮ್‍ನ ರಾಫಿಯಾ ಶೆರೀನ್ ಎಂಬ ಹೆಣ್ಣಿನ ವಿವಾಹವು ಜರ್ಮನಿಯಲ್ಲಿರುವ ಕೇರಳದ ಹುಡುಗ ಫವಾಸ್ ಅಹ್ಮದ್ ನೊಂದಿಗೆ ನಡೆಯಬೇಕಿದ್ದು ವಿವಾಹ ಧನವಾಗಿ ವಧು ವರನಿಂದ ಬೇಡಿಕೆ ಯಿಟ್ಟಿದ್ದು ಒಂದು ಮನೆ. ಅದು ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಿ ಅಲ್ಲ. ಬದಲಾಗಿ ಒಂದು ನಿರ್ಗತಿಕ ಮಹಿಳೆಗಾಗಿ. ಫವಾಸ್ ಅವಳ ಬೇಡಿಕೆಗೆ ಸಮ್ಮತಿಯನ್ನೂ ಸೂಚಿಸಿದ. ವಿವಾಹದ ಹಿಂದಿನ ದಿನ ಶೆರೀನ್ ಜರ್ಮನಿಗೆ ಪ್ರಯಾಣಿಸಿ ವರ ನೊಂದಿಗೆ ಸೇರಿಕೊಂಡಳು. ಸರಳವಾಗಿ ಝೂಮ್ ವೀಡಿಯೋ ಮೂಲಕ ನಿಖಾಹ್ ಕಾರ್ಯಕ್ರಮ ನಡೆದವು.
ಈ ಘಟನೆಯು ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ. ವಿವಾಹ ವೆಂಬುದು ಇಬ್ಬರು ಅಪರಿಚಿತರು ಒಂದುಗೂಡುವ ಮೂಲಕ ಒಂದು ಜೋಡಿಯಾಗಿ ಮಾರ್ಪಾಟು ಹೊಂದು ವುದು. ಅವರು ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಅಥವಾ ಅವರಿಬ್ಬರೂ ಒಂದಾಗಿ ವಿಲೀನಗೊಳ್ಳು ವುದು ವಿವಾಹದೊಂದಿಗೆ ಆಗಿರುತ್ತದೆ. ಈ ರೀತಿ ವಿಲೀನಗೊಳ್ಳುವುದರೊಂದಿಗೆ ಅವರ ನಡುವೆ ಪ್ರೇಮಾಂಕುರಗೊಳ್ಳು ತ್ತವೆ. ಅವರ ಸಂಬಂಧವು ಸುದೃಢ ಗೊಳ್ಳುತ್ತವೆ. ಇದನ್ನು ವೇದಗ್ರಂಥವು ಈ ರೀತಿ ಪ್ರಸ್ತಾಪಿಸಿದೆ. ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನು ಮಾಡಿದುದೂ ಅವನ ನಿದರ್ಶನ ಗಳಲ್ಲೊಂದಾಗಿದೆ. (30:21) ಹೀಗೆ ಎರಡು ಅಪರಿಚಿತ ಸ್ತ್ರೀ ಪುರುಷರ ಮಧ್ಯೆ ನಡೆಯುವ ಪವಿತ್ರವಾದ ನಿಖಾಹ್ ಅಥವಾ ವಿವಾಹ ಎಂಬ ಬಂಧನದಲ್ಲಿ ಒಂದುಗೂಡುವ ಮೂಲಕ ದಾಂಪತ್ಯದ ಹೂದೋಟಕ್ಕೆ ಪ್ರವೇಶಿಸು ತ್ತಾರೆ. ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯವೇನೆಂದರೆ, ಒಂದು ವರದಕ್ಷಿಣೆ ಮತ್ತೊಂದು ವಧುದಕ್ಷಿಣೆ. ಈ ಎರಡು ಅಂಶಗಳು ವಿವಾಹದ ಮೂಲಕ ವಿನಿಮಯ ನಡೆಯುವ ಸಂಪತ್ತಿನ ಮುಖ್ಯ ಘಟಕಗಳಾಗಿವೆ.
ವರದಕ್ಷಿಣೆ ಎಂಬುದು ಪ್ರಚಲಿತ ಸಮಾಜದಲ್ಲಿ ಹಿಂದಿನಿಂದಲೂ ಚಾಲ್ತಿ ಯಲ್ಲಿರುವ ಒಂದು ಸಂಸ್ಕಾರ ಅಥವಾ ಕಟ್ಟುಪಾಡಾಗಿದ್ದು ಧಾರ್ಮಿಕವಾಗಿ ಯಾವುದೇ ಸಂಬಂಧವಿಲ್ಲದ ಮತ್ತು ಧಾರ್ಮಿಕ ಶಿಷ್ಟಾಚಾರದಲ್ಲಿ ಯಾವುದೇ ಸ್ಥಾನವಿಲ್ಲದ ಒಂದು ಪ್ರಕ್ರಿಯೆಯಾಗಿದೆ. ಇದರಲ್ಲಿ ಹೆಣ್ಣು ಅಥವಾ ಹೆಣ್ಣಿನ ಪೋಷಕರು ಅತಿ ಹೆಚ್ಚು ಶೋಷಿಸ ಲ್ಪಡುವುದು, ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಮತ್ತು ಶಾರೀರಿಕವಾದ ಚಿತ್ರಹಿಂಸೆಗೆ ಗುರಿಯಾಗುವುದು ಮತ್ತು ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಬದುಕು ಕೊನೆಗೊಳ್ಳುವ ಮಟ್ಟಿಗೆ ತಲುಪುತ್ತದೆ. ನಿಜವಾಗಿ ವರದಕ್ಷಿಣೆ ಎಂಬುದು ಮಾನವ ನಿರ್ಮಿತ ಒಂದು ಪಿಡುಗಾಗಿದ್ದು ಅದಕ್ಕೆ ಧರ್ಮದ ಲೇಪ ಹಚ್ಚುವ ಮೂಲಕ ಒಂದು ಕೆಡುಕನ್ನು ಧರ್ಮಕ್ಕೆ ತುರು ಕಿಸಲಾಗಿದೆಯೇ ಹೊರತು ಇದನ್ನು ಧರ್ಮವು ಯಾವುದೇ ರೀತಿಯಲ್ಲೂ ಪ್ರೊತ್ಸಾಹಿಸುವುದಿಲ್ಲ.
ಇನ್ನೊಂದು, ವಧುದಕ್ಷಿಣೆ ಅಥವಾ ಅರಬಿ ಪಾರಿಭಾಷಿಕದಲ್ಲಿ ಈ ಪದಕ್ಕೆ ಮಹ್ರ್ ಎಂದು ಕರೆಯಲಾಗುತ್ತಿದ್ದು ವಿವಾಹಧನವಾಗಿ ಪುರುಷನು ವಧುವಿಗೆ ಕಡ್ಡಾಯವಾಗಿ ಕೊಡಬೇಕಾದ ನಿಧಿ ಯಾಗಿದ್ದು ಅದನ್ನು ನೀಡಿದರೆ ಮಾತ್ರ ವಿವಾಹವು ಸಿಂಧುವಾಗಬಲ್ಲುದು. ಆದರೆ ಧಾರ್ಮಿಕ ನಿಯಮಾನುಸಾರ ಕಡ್ಡಾಯ ಗೊಳಿಸಿದ ನಿಯಮವನ್ನು ಗಾಳಿಗೆ ತೂರಿ ಧಾರ್ಮಿಕ ವಿಧಿಯಲ್ಲಿ ಯಾವುದೇ ಸ್ಥಾನವಿಲ್ಲದ ವರದಕ್ಷಿಣೆಗೆ ಹೆಚ್ಚಿನ ಮಹತ್ವ ವನ್ನು ನೀಡುವ ಪರಿಕಲ್ಪನೆ ಸಮಾಜ ದಲ್ಲಿ ಇಂದು ವ್ಯಾಪಕವಾಗಿ ಬಿಟ್ಟಿದೆ. ಸ್ತ್ರೀಯರಿಗೆ ವಿವಾಹ ಧನವನ್ನು ಆತ್ಮ ಸಂತೋಷದಿಂದ (ಕಡ್ಡಾಯವೆಂದರಿತು) ಪಾವತಿ ಮಾಡಿರಿ. ಅವರು ತಮ್ಮಿಷ್ಟದಿಂದ ವಿವಾಹಧನದ ಒಂದಂಶವನ್ನು ನಿಮಗೆ ಬಿಟ್ಟುಕೊಟ್ಟರೆ ನೀವು ಅದನ್ನು ಸಂತೋಷ ದಿಂದ ಅನುಭೋಗಿಸಿಕೊಳ್ಳಬಹುದು. (4:4) ಎಂದು ವೇದಗ್ರಂಥವು ತಾಕೀತು ಮಾಡಿದೆ.
ಗಲ್ಫ್ ರಾಷ್ಟ್ರಗಳಲ್ಲಿ ವಧುದಕ್ಷಿಣೆಯ ಕಾರಣದಿಂದ ಸ್ತ್ರೀಯರು ವಿವಾಹವಾಗದೆ ಉಳಿದ ಅನೇಕ ಉದಾಹರಣೆಗಳಿವೆ. ವಧುವಿನ ಪೋಷಕರ ಬೇಡಿಕೆಯನುಸಾರ ವಧುದಕ್ಷಿಣೆಯನ್ನು ನೀಡಲು ಸಾಧ್ಯವಾಗದ ಅಲ್ಲಿನ ಪುರುಷರು ತಮ್ಮ ಸ್ವದೇಶದ ಸ್ತ್ರೀಯರನ್ನು ವರಿಸುವುದಕ್ಕೆ ಬದಲು ಇತರ ದೇಶಗಳ ಸ್ತ್ರೀಯರನ್ನು ವಿವಾಹ ವಾಗುವ ಪರಿಪಾಠವು ಬೆಳೆದು ಬರುತ್ತಿದೆ. ಆದರೆ ನಮ್ಮ ಸಮಾಜದ ರೀತಿ ನೀತಿಗಳು ತೀರಾ ವಿಭಿನ್ನವಾಗಿದ್ದು ವರದಕ್ಷಿಣೆಯ ಅಭಾವದ ಕಾರಣ ಸ್ತ್ರೀಯರು ವಿವಾಹ ವಾಗದೆ ಉಳಿಯುತ್ತಿದ್ದಾರೆ. ವರನ ಪೋಷಕರು ಬೇಡಿಕೆಯಿಡುವಷ್ಟು ಚಿನ್ನಾ ಭರಣಗಳನ್ನು ನೀಡಲು ಸಾಧ್ಯವಾಗದೆ ಪ್ರಾಯ ಮೀರಿ ತಮ್ಮ ಮನೆಗಳಲ್ಲೇ ಉಳಿದು ವಿವಾಹದ ಕನಸನ್ನು ಕಾಣುವ ಅದೆಷ್ಟೋ ನತದೃಷ್ಟ ಹೆಣ್ಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಆದರೂ ಕೆಲವೊಂದು ಸಂಘಟನೆಗಳ ನಿಸ್ವಾರ್ಥ ಸೇವೆಯ ಕಾರಣ ದಿಂದ ಸಾಮೂಹಿಕ ವಿವಾಹದ ಮೂಲಕ ಕೆಲವೊಂದು ಬಡ, ಅನಾಥ ಮತ್ತು ನಿರ್ಗತಿಕ ಹೆಣ್ಮಕ್ಕಳು ವಿವಾಹವಾಗುತ್ತಿರು ವುದು ಕೂಡ ಖುಷಿಯ ಸಂಗತಿ.
ಈ ನಿಟ್ಟಿನಲ್ಲಿ ಶೆರೀನ್ ಎಂಬ ವಧುವಿನ ವಧುದಕ್ಷಿಣೆ ನಿಜಕ್ಕೂ ಸಮಾಜಕ್ಕೆ ಅಭೂತಪೂರ್ವವಾದ ಸಂದೇಶವನ್ನು ನೀಡುತ್ತದೆ. ನಮ್ಮ ಸಮಾಜದಲ್ಲಿ ವಿವಾಹ ವಾಗುವ ಯುವತಿಯರಿಗೆ ಮದುವೆಯ ಬಗ್ಗೆ ತಮ್ಮದೇ ಆದ ಒಂದು ನಿಲುವು ಅಥವಾ ಪರಿಕಲ್ಪನೆ ಇರುವುದಿಲ್ಲ ಎಂಬುದು ಒಂದು ವಾಸ್ತವಿಕತೆ. ಏಕೆಂದರೆ ಅಲ್ಲಿ ಪೋಷಕರದೇ ಕೊನೆಯ ನಿರ್ಧಾರ ವಾದ ಕಾರಣ ಯುವತಿಯರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುವ ಸನ್ನಿವೇಶ ಲಭ್ಯವಾಗುವುದಿಲ್ಲ. ಇಲ್ಲಿ ಶೆರೀನ್ ಧಾರ್ಮಿಕ ಚೌಕಟ್ಟಿನೊಳಗಿದ್ದು ಅವಳಿಗೆ ತನ್ನ ವಿವಾಹದ ಬಗ್ಗೆ ಪೂರ್ವಭಾವಿ ನಿರ್ಧಾರವನ್ನು ಕೈಗೊಳ್ಳುವ ಪ್ರಭುದ್ದತೆ ಮತ್ತು ಆ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವ ಸ್ವಾತಂತ್ರ್ಯ ಅವಳ ಮುಂದಿದ್ದು ಅವಳು ಸಂಧರ್ಬೋಚಿತವಾದ ನಿರ್ಧಾರ ವನ್ನು ಕೈಗೊಳ್ಳುವಲ್ಲಿ ಯಾವ ಅಡ ಚಣೆಯೂ ಇದ್ದಿರಲಿಲ್ಲ. ಆದ್ದರಿಂದಲೇ ಇನ್ನೊಬ್ಬರ ನೋವಿಗೆ ಸ್ಪಂದಿಸುವ, ಇನ್ನೊಬ್ಬರಿಗೆ ಸಾಂತ್ವನವಾಗುವ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ ವಾಯಿತು. ಅದರ ಪರಿಣಾಮ ತನ್ನ ಇನಿಯನ ಜೊತೆ ಒಂದು ಮನೆ ಕಟ್ಟಲು ಬೇಕಾದ ಮೊತ್ತವನ್ನು ವಿವಾಹಧನ ವಾಗಿ ನೀಡಬೇಕೆಂಬ ಬೇಡಿಕೆಯಿಡುವ ನಿರ್ಧಾರಕ್ಕೆ ಬಂದಳು ಮತ್ತು ವರನಾದ ಫವಾಸ್ ಅವಳ ನಿರ್ಧಾರವನ್ನು ಗೌರವಿಸಿ ಸಮ್ಮತಿ ಸೂಚಿಸಿದ.
ಇಂತಹ ಸಕಾರಾತ್ಮಕವಾದ ಒಂದು ಯೋಚನೆ ನಮ್ಮ ಸಮಾಜದಲ್ಲಿ ಎಷ್ಟು ಹೆಣ್ಮಕ್ಕಳಿಗಿದೆ. ಸಮಾಜದಲ್ಲಿ ಬಡವರು, ಅನಾಥರು ಮತ್ತು ನಿರ್ಗತಿಕರು ಹಿಂದೆಯೂ ಇದ್ದರು ಮತ್ತು ಈಗಲೂ ಇದ್ದಾರೆ. ಆದರೆ ಅವರ ಕಷ್ಟಕ್ಕೆ ಮನಮಿಡಿಯುವ, ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ವೈಶಾಲ್ಯತೆ ಎಷ್ಟು ಹೆಣ್ಮಕ್ಕಳಿಗಿದೆ. ನೆರೆಹೊರೆಯಲ್ಲಿ ಆರ್ಥಿಕ ವಾಗಿ ಸಂಕಷ್ಟದಲ್ಲಿರುವ, ವರದಕ್ಷಿಣೆಯ ಕಾರಣದಿಂದ ಮದುವೆಯಾಗದೆ ಉಳಿದ ಹೆಣ್ಣಿಗೆ ನನ್ನ ವರದಕ್ಷಿಣೆಯ ಅಥವಾ ವಧುದಕ್ಷಿಣೆಯ ಹಣದಿಂದ ಮದುವೆ ಯಾಗಲಿ ಎಂದು ಎಷ್ಟು ವಧು-ವರರು ಆಲೋಚಿಸಿದ್ದಾರೆ ಪವನ್ ಗಟ್ಟಲೆ ಅಥವಾ ಕಿಲೋಗಟ್ಟಲೆ ಚಿನ್ನಾಭರಣವನ್ನು ವರ ದಕ್ಷಿಣೆಯಾಗಿ ಪಡೆದು ಬ್ಯಾಂಕ್ ಲಾಕರ್ ನಲ್ಲಿಡುವ ನವ ವಧೂ ವರರು ಆತ್ಮಾವಲೋಕನ ನಡೆಸಬೇಕಾದ ಗಂಭೀರ ವಿಷಯವಾಗಿದೆ ಇದು. ಏಕೆಂದರೆ ಮನುಷ್ಯನ ಆಸೆ ಮತ್ತು ಆಗ್ರಹಗಳನ್ನು ಈಡೇರಿಸಲು ಯಾರಿಂದಲೂ ಸಾಧ್ಯ ವಿಲ್ಲ. ಮನುಷ್ಯನಿಗೆ ಎಷ್ಟು ಸಿಕ್ಕಿದರೂ ಸಾಲದು. ನಾವು ನಮಗಾಗಿ ಉಳಿಸು ವುದು ಅದು ನಿಜವಾಗಿಯೂ ನಮ್ಮ ಪಾಲಲ್ಲ. ಬದಲಾಗಿ ಅದು ಇತರರ ಸ್ವತ್ತು. ಆದರೆ ನಾವು ಇತರರಿಗಾಗಿ ಖರ್ಚು ಮಾಡುವುದೇ ನಮ್ಮ ಗಳಿಕೆ ಅಥವಾ ನಮ್ಮ ಉಳಿತಾಯ. ಅದು ಇಹದಲ್ಲೂ ಪರದಲ್ಲೂ ನಮಗೆ ಪ್ರಯೋಜನಪ್ರದವಾಗುತ್ತದೆ. ಈ ನಿಟ್ಟಿ ನಲ್ಲಿ ಶೆರೀನ್ ಮತ್ತು ಫವಾಸ್‍ನಂತಹ ಮುತ್ತು ರತ್ನಗಳಾದ ವಧೂ ವರರು ನಮ್ಮ ಸಮಾಜದಲ್ಲಿ ಇನ್ನೂ ಬೆಳೆದು ಬರಲಿ. ಸಮಾಜಕ್ಕೆ ಅವರ ಕೊಡುಗೆ ಮಾದರಿಯಾಗಲಿ.

LEAVE A REPLY

Please enter your comment!
Please enter your name here