• ಸಬೀಹಾ ಫಾತಿಮ ಮಂಗಳೂರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ ಬೀರುವ ವಿಷಯವಾಗಿದೆ. ಆದುದರಿಂದ ಇದರ ಬಗ್ಗೆ ಅರಿಯೋಣ. ಒಂದು ದೇಶವನ್ನು ಬದಲಿಸಬೇಕಿದ್ದರೆ, ಅದರ ಶಿಕ್ಷಣ ನೀತಿಯನ್ನು ಬದಲಿಸಬೇಕು ಎಂಬುದು ಪ್ರಮುಖ ವಿಚಾರ. ಆದುದರಿಂದ ದೊಡ್ಡ ಪ್ರಮಾಣ. 10+2 ಲೆಕ್ಕಾಚಾರ ಬದಲಾಗಿದೆ. ಅಂದರೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವಿತ್ತು. ಇನ್ನು ಮುಂದೆ ಅದು 5+2+3+4 ರಲ್ಲಿ ಬದಲಾಗಲಿದೆ. ಮೊದಲ 5 ವರ್ಷ, ಪೌಂಡೇಶನ್ ಸ್ಟೇಜ್, ಪ್ರೀ ಪ್ರೈಮರಿಯ ಮೂರು ವರ್ಷ ಹಾಗೂ ಒಂದು ಮತ್ತು ಎರಡನೆಯ ತರಗತಿ. ಇಲ್ಲಿ ಪುಸ್ತಕಗಳ ಹೊರೆ ಕಡಿಮೆ. ಆಟ ಹಾಗೂ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲು ಪ್ರಯತ್ನ. ಮುಂದಿನ ಮೂರು ವರ್ಷ 3, 4, 5ನೇ ತರಗತಿಯಲ್ಲಿ ಮಕ್ಕಳನ್ನು ಮುಂದಿನ ಭವಿಷ್ಯಕ್ಕಾಗಿ ತಯಾರು ಮಾಡುವ ಕೆಲಸ ಆರಂಭ. ಗಣಿತ, ವಿಜ್ಞಾನ, ಕಲೆ ಹಾಗೂ ಸಮಾಜ ವಿಜ್ಞಾನವನ್ನು ಪರಿಚಯಿಸಲಾಗುತ್ತದೆ. ಮುಂದಿನ 3 ವರ್ಷ ಮಧ್ಯಂತರ ಅವಧಿ 6, 7, 8ನೇ ತರಗತಿಗಳಲ್ಲಿ ಇದನ್ನೇ ಸ್ವಲ್ಪ ಅಧಿಕ ಕಲಿಸಲಾಗುತ್ತದೆ. 9, 10, 11, 12ನೇ ತರಗತಿ ನಾಲ್ಕು ವರ್ಷಗಳ ಲಾಸ್ಟ್ ಸ್ಟೇಜ್. ಶಾಲಾ ಶಿಕ್ಷಣದ ವ್ಯಾಪ್ತಿಗೆ ಬರುತ್ತದೆ. ವಿಷಯಗಳ ಬಗ್ಗೆ ಆಳವಾದ ಅಧ್ಯಯನ, ವಿಶ್ಲೇಷಣಾ ಸಾಮಥ್ರ್ಯ ಹೆಚ್ಚಿಸುವ ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ.

ಸ್ಟ್ರೀಮ್ ಸಿಸ್ಟಮ್ ಕೊನೆಗೊಳಿಸಲಾಗುತ್ತದೆ. ವಿವಿಧ ವಿಭಾಗಗಳಾದ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ವಿದ್ಯಾರ್ಥಿಗೆ ಇಷ್ಟವಾದ ವಿಷಯಗಳನ್ನು ಆಯ್ದುಕೊಂಡು ಒಟ್ಟಾಗಿ ಕಲಿಯುವ ಅವಕಾಶ. ಉದಾಹರಣೆಗೆ ಜೀವಶಾಸ್ತ್ರದೊಂದಿಗೆ ರಾಜಕೀಯ ಶಾಸ್ತ್ರ, ವಾಣಿಜ್ಯ ಶಾಸ್ತ್ರ ಜೊತೆಯಾಗಿ ಕಲಿಯಬಹುದು. ಇದಕ್ಕೆ ಒಂದು ನಿಯಮವಿದೆ. ಸಿಕ್ಕಿದನ್ನೆಲ್ಲಾ ಜೊತೆಯಾಗಿ ಕಲಿಯುವಂತಿಲ್ಲ. ಆದರೆ ನೀವಿಷ್ಟ ಪಡುವುದನ್ನು ಕಲಿಯುವುದಕ್ಕೆ ಹಿಂದಿಗಿಂತ ಹೆಚ್ಚು ಅವಕಾಶ ಸಿಗುವ ಸಾಧ್ಯತೆಯಿದೆ. ಮಾತೃ ಭಾಷೆಯಲ್ಲಿ 5ನೇ ತರಗತಿಯವರೆಗೆ ಶಿಕ್ಷಣ. 6ನೇ ತರಗತಿಯಿಂದ ಮಕ್ಕಳಿಗೆ ಕಂಪ್ಯೂಟರ್ ಕೋಚಿಂಗ್ ಮತ್ತು ವೃತ್ತಿ ಶಿಕ್ಷಣ ಕರಗತ ಮಾಡಿಸಲಾಗುತ್ತದೆ. 6ನೇ ತರಗತಿಯಿಂದಲೇ ಇಂಟರ್ನ್ ಶಿಫ್ಟ್ ಮಾಡಲು ಅವಕಾಶವಿದೆ. ಇಷ್ಟದ ವಿಷಯದ ಮೇಲೆ ಪ್ರಾಕ್ಟಿಕಲ್ ಜ್ಞಾನ ಗಳಿಸಿ ಎಕ್ಸ್‍ಪರ್ಟ್ ಆಗಲು ಅವಕಾಶ. 9ರಿಂದ 12ನೇ ತರಗತಿಯವರೆಗೆ ಶಿಕ್ಷಣಕ್ಕೆ ಸೆಮಿಷ್ಟರ್ ಪದ್ಧತಿ. ವಿವಿಧ ಕೋನಗಳಿಂದ ಆಧರಿಸಿ ಅಂಕಪಟ್ಟಿ ತಯಾರಿಸಲಾಗುತ್ತದೆ. ವಿದ್ಯಾರ್ಥಿಯ ವರ್ತನೆ, ಮಾನಸಿಕ ಕ್ಷಮತೆ, ಬೌದ್ಧಿಕ ವಿಕಸನ, ವಿದ್ಯಾರ್ಥಿಯ ಸೆಲ್ಫ್ ಅಸೆಸ್‍ಮೆಂಟ್, ಶಿಕ್ಷಕರ ಹಾಗೂ ಸಹಪಾಠಿಗಳ ಅಸೆಸ್‍ಮೆಂಟ್ ಸಿಗಲಿದೆ. 12ನೇ ತರಗತಿಯಲ್ಲಿ ಸರಿಯಾದ ಅಂಕ ಸಿಗದೇ ಹೋದರೆ, ಸಿ.ಎ.ಟಿ. (ಕಾಮ್ ಆಪ್ಪಿಟ್ಯೂಡ್ ಟೆಸ್ಟ್) ತೆಗೆದು ಕೊಳ್ಳಲು ಅವಕಾಶವಿದೆ. ಡ್ರಾಪ್‍ಔಟ್ ಆದರೂ ಸರ್ಟಿಫಿಕೇಟ್ ಸಿಗುತ್ತದೆ. 1ನೇ ವರ್ಷಕ್ಕೆ ಸರ್ಟಿಫಿಕೇಟ್ ಕೋರ್ಸ್, ಎರಡನೇ ವರ್ಷಕ್ಕೆ ಡಿಪ್ಲೊಮಾ ಕೋರ್ಸ್, 3ನೇ ವರ್ಷಕ್ಕೆ ಬ್ಯಾಚು ಲರ್ ಡಿಗ್ರಿ ಕೋರ್ಸ್, 4 ವರ್ಷದ ಪದವಿ ತೆಗೆದುಕೊಂಡರೆ ರಿಸರ್ಚ್ ಪದವಿ ಪ್ರಮಾಣ ಪತ್ರ ಸಿಗುತ್ತದೆ. ಇದರ ಜೊತೆಗೆ ಸರಕಾರ ಶಿಕ್ಷಣಕ್ಕೆ ಜಿ.ಡಿ.ಪಿ.ಯ 6 ಶೇಕಡಾ ಮೀಸಲಿಡು ತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಇದೇ ಜಾರಿಗೆ ಬಂದರೆ ಒಂದು ಮೈಲಿಗಲ್ಲಾಗಬಹುದು. ಇದು ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಮ್ ಆಝಾದ್‍ರ ದೃಷ್ಟಿಕೋನ ಎಂಬುದನ್ನು ನೆನಪಿಸಿಕೊಳ್ಳಬೇಕು.

ಆದರೆ ಇದರ ಇನ್ನೊಂದು ಮಜಲಿನ ಬಗ್ಗೆ ವಿಶ್ಲೇಷಣೆಯೂ ಅಗತ್ಯ. ಕಳೆದೊಂದು ದಶಕದಿಂದ ಭಾರತದಲ್ಲಿ ಶಿಕ್ಷಣದ ವ್ಯಾಪಾರೀ ಕರಣದ ವಿರುದ್ಧ ಹಾಗೂ ಸಮಾನ ಶಿಕ್ಷಣ ನೀತಿಗಾಗಿ ಹೋರಾಡುತ್ತಿರುವ ಅಖಿಲ ಭಾರತ' ಶಿಕ್ಷಣ ಹಕ್ಕು ವೇದಿಕೆಯ ಸಂಘಟನಾ ಕಾರ್ಯದರ್ಶಿ ಯಾಗಿರುವ ಡಾ| ವಿಕಾಸ್ ಗುಪ್ತಾ 2020 ಉನ್ನತ ಶಿಕ್ಷಣದ ಮೇಲೆ ಬೀರಲಿರುವ ದುಷ್ಪರಿಣಾಮಗಳು, ಬಂಡವಾಳಶಾಹಿ ಮತ್ತು ವಿದೇಶಿ ವಿದ್ಯಾನಿಲಯಗಳ ಅನಿಯಂತ್ರಿತ ಪ್ರವೇಶ, ಬಡ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಡಲಿರುವ ಹಾನಿ, ಸಮಾಜದ ದುರ್ಬಲ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಮಾಡಲಿರುವ ಮೋಸ ಇತ್ಯಾದಿಗಳ ಬಗ್ಗೆ ಬರೆದಿದ್ದಾರೆ. ಹೊಸ ಶಿಕ್ಷಣ ನೀತಿ- 2020 ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಬೀರುವ ದೂರಗಾಮಿ ಪರಿಣಾಮಗಳು ಬಹುಶಃ ಮೇಲು ನೋಟಕ್ಕೆ ಕಾಣದೆ ಹೋಗಬಹುದು. ಆದರೆ ಅವು ವೇಗವಾಗಿ ಶಿಕ್ಷಣ ಕ್ಷೇತ್ರದ ಉದಾರೀ ಕರಣ ಮತ್ತು ಸ್ವಾಯತ್ತತೆಯ ಹೆಸರಿ ನಲ್ಲಿ ಖಾಸಗೀಕರಣವನ್ನು ಆಳವಾಗಿ ಬೇರೂರಿಸುವುದಂತೂ ಖಚಿತ. ಆದರೆ ಇಷ್ಟೆಲ್ಲ ಅಪಾಯಕಾರಿ ಅಂಶಗಳಿರುವ ಈ ನೀತಿಯನ್ನು ಭಾರತದ ಬಹುತೇಕ ಅಕಾಡೆಮಿಕ್ ರಂಗಗಳಬುದ್ಧಿವಂತರು’ ಸ್ವಾಗತಿಸುತ್ತಿರುವುದು ಮಾತ್ರವಲ್ಲ ಅದ ರಲ್ಲಿರುವ ಅಸ್ಪಷ್ಟತೆಗಳನ್ನೇ ಮುಂದಿಟ್ಟು ಹಾಡಿ ಹೊಗಳುತ್ತಾ ವಿದ್ಯಾರ್ಥಿಗಳು, ಪೋಷಕರು ಮತ್ತು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಪರಿಸ್ಥಿತಿ ನೋಡಿದಾಗ, ಬಹುಶಃ ಇದರ ಪರಿಣಾಮವನ್ನು ಅರಿಯಲು ಮತ್ತು ಇವುಗಳ ವಿರುದ್ಧ ದನಿ ಎತ್ತಲು ಭಾರತದ ಶಿಕ್ಷಣ ರಂಗಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಇದು ಈ ಕಾಲಘಟ್ಟದ ದುರಂತ.

ಹೊಸ ಶಿಕ್ಷಣ ನೀತಿ ಹತ್ತು ಹಲವು ಪ್ರಗತಿಪರ ನಿಲುವುಗಳನ್ನು, ಪ್ರಯೋಗಗಳನ್ನು, ಯೋಜನೆಗಳನ್ನು, ನೀತಿಯನ್ನು ಪ್ರಸ್ತಾಪಿಸಿದೆ. ಆದರೆ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೇಗೆ ಒದಗಿಸಲಾಗುತ್ತದೆ ಎಂಬುದರ ಬಗ್ಗೆ ಸ್ವಷ್ಟತೆ ಇಲ್ಲ. 1967ರ ಕೊಠಾರಿ ಕಮಿಷನ್‍ನಿಂದ ಹಿಡಿದು ಹಲವು ತಜ್ಞರು ಸಾರ್ವತ್ರಿಕ ಶಿಕ್ಷಣದ ಆಶಯ ಯಶಸ್ವಿಯಾಗಬೇಕಾದರೆ ಸಂಪನ್ಮೂಲ ಗಳು ಹಲವು ಪಟ್ಟು ಹೆಚ್ಚಬೇಕು ಎಂಬ ಸಲಹೆಯನ್ನು ನೀಡುತ್ತಾ ಬಂದಿ ದ್ದರೆ. ಸರಕಾರಿ ಶಾಲೆಗಳ ಅವಸ್ಥೆಯ ಬಗ್ಗೆ ತಿಳಿಯದವರು ಯಾರೂ ಇರಲಿಕ್ಕಿಲ್ಲ. ಮೂಲಭೂತ ಸೌಕರ್ಯ ಗಳ ಕೊರತೆ, ಕಟ್ಟಡಗಳ ಕೊರತೆ, ಶಿಕ್ಷಕರ ಕೊರತೆಗಳಿಂದ ನಲುಗುತ್ತಿವೆ. ಖಾಸಗಿ ಶಾಲೆಗಳ ಜೊತೆ ಸ್ಪರ್ಧಿಸಲು ಸಂಪೂರ್ಣ ವಿಫಲವಾಗಿರುವ ಸರಕಾರಿ ಶಾಲೆಗಳನ್ನು ಮೇಲೆತ್ತಲು ಇವರ ಬಳಿ ಯಾವ ಕಾರ್ಯಕ್ರಮಗಳಿವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈಗಾಗಲೇ ಸಾಮಾಜಿಕ ವಲಯಗಳನ್ನು ಬಜೆಟ್‍ನಲ್ಲಿ ಸಂಪೂರ್ಣ ತಿರಸ್ಕರಿಸಿರುವ ಕೇಂದ್ರ ಸರಕಾರ, ತನ್ನ ಹೊಸ ನೀತಿಯ ಅನುಷ್ಠಾನಕ್ಕೆ ಎಷ್ಟರ ಮಟ್ಟಿಗೆ ಹಣವನ್ನು ಮೀಸಲಿಟ್ಟಿದೆ ಎನ್ನುವುದಕ್ಕೆ ಗಮನಹರಿಸಿದಾಗ ನಿರಾಸೆಯಾಗುತ್ತದೆ. ಜೊತೆಗೆ ಸಂಪನ್ಮೂಲಗಳ ಸಂಗ್ರಹಕ್ಕೆ ಪರೋಕ್ಷ ವಾಗಿ ಖಾಸಗಿ ಸಂಸ್ಥೆಗಳಿಗೆ ಹಸಿರು ನಿಶಾನೆ ನೀಡಿದೆ. ಅಂದರೆ ಶುಲ್ಕ ಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸುವ ಅನುಮತಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಿದೆ.

ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಎನ್ನುವ ನಿರ್ಧಾರದ ಕುರಿತಂತೆ ಕೆಲವು ಪ್ರಗತಿಪರರು ಸಂಭ್ರಮಿಸಿದ್ದಾರೆ. ಏಕ ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಯನ್ನು ಯುವ ಮಕ್ಕಳ ಸಹಜ ಸಾಮಥ್ರ್ಯವನ್ನು ಮುಂದಿಟ್ಟುಕೊಂಡು ಪ್ರಾದೇಶಿಕ/ಮಾತೃ ಭಾಷೆಯೊಂದಿಗೆ ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷನ್ನು ಧಾರಾಳವಾಗಿ ಕಲಿಸಬಹುದಾಗಿದೆ. ಇಂಗ್ಲೀಷ್ ಭಾಷೆಯಿಂದ ಮತ್ತು ಮಾಧ್ಯಮದಿಂದ ಸಕಲ ಪ್ರಯೋಜನ ಪಡೆದಿರುವ ವರ್ಗವೊಂದು ಜನ ಸಾಮಾನ್ಯರು, ದೇಶದ ಹಿಂದುಳಿದ ಅಲ್ಪಸಂಖ್ಯಾತರು, ದಲಿತ ವರ್ಗ ಇಂಗ್ಲಿಷ್ ಕಲಿಯದಂತೆ ಮಾಡುವ ಷಡ್ಯಂತ್ರದ ಭಾಗವಿದು. ಸರಕಾರಿ ಶಾಲೆಗಳಲ್ಲಿ ಕಲಿಯುವವರು ಯಾರ ಮಕ್ಕಳು? ಅಂತಹ ಮಕ್ಕಳಿಗೆ ಬಲ ವಂತವಾಗಿ ಸಂಸ್ಕøತ, ಹಿಂದಿ ಹೇರುವ ಉದ್ದೇಶವನ್ನು ಈ ಶಿಕ್ಷಣ ನೀತಿ ಹೊಂದಿದೆ.
ಏಕೆಂದರೆ ಐದನೇ ತರಗತಿಯ ವರೆಗೆ ಕಡ್ಡಾಯವಾಗಿ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಎನ್ನುವುದು ಈ ದೇಶದ ಎಲ್ಲ ಶಾಲೆಗಳಲ್ಲೂ ಸಮಾನ ವಾಗಿ ಅನುಷ್ಠಾನಗೊಳಿಸುವ ಉದ್ದೇಶ ವೇನೂ ಇಲ್ಲ. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮತ್ತು ಸರಕಾರಿ ಶಾಲೆಯ ಮಕ್ಕಳ ನಡುವಿನ ಅಂತರ ವನ್ನು ಇದು ಹೆಚ್ಚಿಸುತ್ತದೆ. ಮಾತ್ರವಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರಲಿದೆ. ಮಾತ್ರವಲ್ಲ ಸರ್ವರಿಗೂ ಸಮಾನ ಶಿಕ್ಷಣ ಎನ್ನುವ ಆಶಯಕ್ಕೂ ಇದು ಪೂರಕವಾಗಿಲ್ಲ.
ಇಂದು ಆಂಧ್ರ ಕರ್ನಾಟಕ ಸೇರಿ ದಂತೆ ಹಲವು ರಾಜ್ಯಗಳು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಅಳವಡಿಸುವ ಹೊಸ ಯೋಜನೆಗಳನ್ನು ರೂಪಿಸಿದೆ. ಇದರಿಂದಾಗಿ ಮೂಲೆ ಗುಂಪಾಗಿರುವ ಸರಕಾರಿ ಶಾಲೆಗಳು ಮತ್ತೆ ಜೀವ ಪಡೆದುಕೊಳ್ಳುತ್ತಿವೆ. ಆದರೆ ಹೊಸ ಶಿಕ್ಷಣ ನೀತಿಯಿಂದಾಗಿ ಪುನಃ ಇದಕ್ಕೆ ಕಲ್ಲು ಬೀಳುವ ಸಾಧ್ಯತೆಯಿದೆ. ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಮುಂದೆ ಬರಲು ಅವಕಾಶ ಮಾಡುವುದು ಬಡವರ ಪ್ರತಿಭಾವಂತ ಮಕ್ಕಳು ಮೇಲೇಳದಂತೆ ಕಲ್ಲುಚಪ್ಪಡಿ ಹಾಕುವುದು ಎಷ್ಟುಸರಿ. ಪ್ರಜಾಫ್ರಭುತ್ವ ರಾಷ್ಟ್ರದಲ್ಲಿ ಈ ರೀತಿಯ ಯಾವುದೇ ಚರ್ಚೆ ನಡೆಯದೆ ಏಕಾ ಏಕಿ ಹೇರಲ್ಪಟ್ಟ ಶಿಕ್ಷಣ ನೀತಿಯನ್ನು ಕಾಣುವುದು ಭಾರತದ ಸ್ವಾತಂತ್ರ್ಯ ಕಂಡ ಬಳಿಕ ಇದೇ ಮೊದಲ ಬಾರಿ. ನೋಟ್ ಬ್ಯಾನ್‍ಗೊಳಿಸಿದಂತೆ ಏಕಾ ಏಕಿ ತೆಗೆದುಕೊಳ್ಳುವ ತೀರ್ಮಾನದಂತೆ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರೆ ಭಾರತದ ಭವಿಷ್ಯ ಏನಾಗಬಹುದು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಇದರ ಜತೆಗೆ ಕೊರೋನದ ಕಾರಣದಿಂದ ಮುಚ್ಚಲ್ಪಟ್ಟ ಶಿಕ್ಷಣ ಸಂಸ್ಥೆಗಳ ಕಾರಣದಿಂದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ನೀಡಲಾಗುತ್ತಿದೆ. ಇದು ನಗರ ಪ್ರದೇಶದ ಜನರಿಗಷ್ಟೇ ಶಿಕ್ಷಣ ಎನ್ನುವಲ್ಲಿಗೆ ಶಿಕ್ಷಣ ಕ್ಷೇತ್ರವನ್ನು ತಲುಪಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿರುವವರಿಗಷ್ಟೇ ಶಿಕ್ಷಣ ಎನ್ನುವುದಾದರೆ ಬಡವರ ಹಳ್ಳಿಯ ಮಕ್ಕಳು ಎಲ್ಲಿಂದ ಕಲಿಯಬೇಕು. ಪರ್ಯಾಯದ ಬಗ್ಗೆ ಆಲೋಚಿಸುವುದು ಕಾಲದ ಬೇಡಿಕೆ.
ಹೊಸ ಶಿಕ್ಷಣ ನೀತಿಯಲ್ಲಿ ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿ ಜಾತ್ಯಾ ತೀತತೆಯನ್ನು ನೀಗಿಸಿ ವೇದಾಂತ, ಗೀತೆ, ಪುರಾಣಗಳನ್ನು ಕಲಿಸುವ ಪ್ರಾಚೀನ ನಳಂದಾ ವಿಶ್ವವಿದ್ಯಾನಿಲಯ ಶೈಲಿಯ ಶಿಕ್ಷಣದ ಮರುಸ್ಥಾಪನೆಗೆ ಪ್ರಯತ್ನ. ಪ್ರತಿ ಪ್ಯಾರಾಗ್ರಾಫ್‍ನ ಬಳಿಕ ಈ ವಿಷಯವನ್ನು ಪುನರಾವರ್ತಿಸಿ ಹೇಳಲಾಗಿದೆ. ಎಲ್.ಎಲ್.ಎ.ಎಸ್.ಎಂ. ಅಂದರೆ ಭಾಷೆ, ಸಾಹಿತ್ಯ, ಕಲೆ, ಕ್ರೀಡೆ ಮತ್ತು ಸಂಗೀತ ಇದಕ್ಕಾಗಿ ಬಹಳ ಸಬ್ಸಿಡಿ ಮತ್ತು ಲೋನ್ ಜಾರಿಗೊಳಿಸ ಲಾಗಿದೆ. ಉರ್ದುವನ್ನು ಕೊನೆಗೊಳಿಸ ಲಿಕ್ಕಾಗಿ ಬಹಳ ಪ್ರಯತ್ನ ನಡೆಯು ತ್ತಿದೆ. 5 ರಿಂದ 10 ವರ್ಷಗಳ ಒಳಗೆ ಈ ದೇಶದಿಂದ ಉರ್ದುವನ್ನು ನಾಮಾವಶೇಷಗೊಳಿಸುವ ಉದ್ದೇಶ ಇವರಿಗಿದೆ. ಫಾರ್ಸಿ ಭಾಷೆ, ತಾಬಿ ಬರಹದ ಬಗ್ಗೆ ಅದರ ಅಭಿವೃದ್ಧಿಯ ಬಗ್ಗೆ ವಿಷಯವಿದೆ. ಆದರೆ ಉರ್ದು ಭಾಷೆಯ ಪ್ರಸ್ತಾಪ ಎಲ್ಲೂ ಇಲ್ಲ. ಪ್ರತಿ ಶಾಲಾ-ಕಾಲೇಜುಗಳ ಶಿಕ್ಷಕರ ನೇಮಕರ ಬಗ್ಗೆ ಸರಕಾರದ ಸಬ್ಸಿಡಿಯ ಪ್ರಕಾರ ಸಾಬೀತುಪಡಿಸಬೇಕಾಗಿದೆ. ಇದು ಬಹಳ ಆಂತಕ ಕಾರಿ ವಿಷಯ. ಶಾಲಾ ಪಠ್ಯ ನಿರ್ಧರಿಸುವುದರಿಂದ ಆರಂಭಿಸಿ ಶಿಕ್ಷಕರ ನೇಮಕದವರೆಗಿನ ಎಲ್ಲ ವಿಷಯಗಳನ್ನು ಸರಕಾರ ತನ್ನ ನಿಯಂತ್ರಣಕ್ಕೆ ಮೀಸಲಿಟ್ಟಿದೆ. 87% ಮುಸ್ಲಿಮರು ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಉತ್ತರ ಪ್ರದೇಶದ ಜೊತೆಗೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ್‍ನಲ್ಲಿ ಉರ್ದು ಶಾಲೆಗಳಿವೆ. ಅದಕ್ಕೆ ಸರಕಾರದ ಸಬ್ಸಿಡಿಯನ್ನು ಕೊನೆಗೊಳಿಸಲಾಗುವುದು. ಹೀಗೆ ಅಲ್ಪಸಂಖ್ಯಾತ ವಿರೋಧಿ ವಿಷಯಗಳನ್ನು ಈ ಶಿಕ್ಷಣ ನೀತಿ ಒಳ ಗೊಂಡಿದೆ. ಇದರ ಬಗ್ಗೆ ಸರಿಯಾದ ಅಧ್ಯಯನ ಜೊತೆಗೆ ವಿಮರ್ಶೆ ನಡೆಸುವ ಅಗತ್ಯವಿದೆ.

ಕೃಪೆ : ಅನುಪಮಾ ಮಹಿಳಾ ಮಾಸಿಕ

LEAVE A REPLY

Please enter your comment!
Please enter your name here