ಈ ಹೊಸ ವರ್ಷ, ಎಲ್ಲರ ಹೊಟ್ಟೆಗೂ ಅನ್ನ ನೀಡಲಿ ಎಂದು ಆಶಿಸುತ್ತಾ, ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳುಇಂಕ್ ಡಬ್ಬಿ ಬಳಗ

ಮಹಮ್ಮದ್ ಶರೀಫ್‌ ಕಾಡುಮಠ

ಈಗೀಗ ಈ ಅತಿವೇಗದ ಯುಗದಲ್ಲಿ ವರ್ಷಗಳೆಲ್ಲ ತಿಂಗಳ ಹಾಗೆ ಮುಗಿದುಹೋಗುತ್ತಿವೆ. ಇದೆಂತಹ ವೇಗವೋ‌ ಗೊತ್ತಿಲ್ಲ. ವರ್ಷ ಹೊಸದಾದಂತೆ, ಕಾಲ ಬದಲಾದಂತೆ ಬದುಕಿನಲ್ಲಿ, ಸಮಾಜದಲ್ಲಿ ಹೊಸತನ ಕಾಣಿಸಿಕೊಳ್ಳುತ್ತಲೇ ಹೋಗುತ್ತದೆ. ಹೊಸತು ಎನ್ನುವುದು ಇಲ್ಲ. ಹಳತನ್ನೆ ತೀಡಿ ಹೊಸತಾಗಿಸುವ ಪ್ರಯತ್ನವನ್ನೇ ನಾವು ಮಾಡುವುದು. ಅದರಲ್ಲಿನ ಸೃಜನಶೀಲತೆಯೇ ಅದನ್ನು ಹೊಸತು ಎಂದು ಅನಿಸುವಂತೆ ಮಾಡುತ್ತದೆ. 
ವರ್ಷಾಂತ್ಯದ ಹೊತ್ತಿನಲ್ಲಿ ಕಳೆದ ವರ್ಷದ‌ ನೆನಪುಗಳನ್ನು ಮೆಲುಕು ಹಾಕುತ್ತ ಕೂರುತ್ತಿದ್ದಿದ್ದು ಹಳೆ ಕಾಲ. ಈಗಲೂ ಅದು ಮುಂದುವರಿಯುತ್ತಿದೆ. ಆದರೆ ಎಲ್ಲವನ್ನೂ ನೆನಪಿನೊಳಗೆ ಇಟ್ಟುಕೊಳ್ಳಲು ಸಾಧ್ಯವಾಗದು. ಕಾರಣ ಇಂದು ಒಂದೇ ದಿನದೊಳಗೆ ರಾಶಿ ರಾಶಿ ಘಟನೆಗಳು‌ ನಡೆಯುತ್ತವೆ. ಹಿಂದೆಯೂ ನಡೆಯುತ್ತಿತ್ತು.‌ಆದರೆ ಅವುಗಳ ಸುದ್ದಿ ಅಷ್ಟು ವೇಗವಾಗಿ ಎಲ್ಲರಿಗೂ ತಲುಪುತ್ತಿರಲಿಲ್ಲ. ಮೆಲುಕು ಹಾಕುವಾಗ ಸಿಹಿ-ಕಹಿ,ಕರಾಳ, ಸುಂದರ ಸಂಗತಿಗಳು ನೆನಪಾಗುತ್ತವೆ. ಹಳೆಯದು ಮತ್ತೆ ಮರುಕಳಿಸಬೇಕು ಎಂದು ಆಶಿಸುವುದು ಕಡಿಮೆ. ಎಲ್ಲರಿಗೂ ಹೊಸತು ಎನ್ನುವುದೇ ಇಷ್ಟ. 
ನಾವು ಈ ಕಾಲದಲ್ಲಿ ನಮ್ಮ ಮನಸ್ಸನ್ನು ಎಲ್ಲಿಗೆ ಹಚ್ಚಬೇಕೋ‌ ಅಲ್ಲಿಗೆ ಹಚ್ಚದೆ ವಿಸ್ಮಯಕಾರಿ ಪ್ರಪಂಚವನ್ನು ಕುತೂಹಲದಿಂದ ಗಮನಿಸುವಲ್ಲಿ ಸೋಲುತ್ತಿದ್ದೇವೆಯೇ ಎಂದು ನನಗನಿಸುತ್ತಿದೆ. ಯೋಚಿಸಿ ನೋಡಿ, ನಮ್ಮ ತಲೆಯೊಳಗೆ ಏನೇನು ವಿಚಾರಗಳು ತುಂಬಿಕೊಂಡಿವೆ ಎಂದು… ಕಳೆದ ಜನವರಿಯಿಂದ ಈ ಡಿಸೆಂಬರ್ ವರೆಗೆ ಸಮಾಜದ ಘಟನೆಗಳಷ್ಟೇ ನಮ್ಮ ಮನಸ್ಸಿನಲ್ಲಿ ನಿಂತುಬಿಟ್ಟಿದೆ. ಸರ್ಕಾರ ಆಡಳಿತದ ದಿನಗಳು ಗಾಢವಾಗಿ ಉಳಿದುಕೊಂಡಿವೆ. 
ಏಕೋ ಇಂತಹ ವಿಷಯಗಳಾಚೆಗೆ ಸುಮ್ಮನೆ ಏನನ್ನಾದರೂ ಆಲೋಚಿಸಬೇಕೆನಿಸುತ್ತಿದೆ. ಹೊಸವರ್ಷ ಎಂದು ನಾವು ಕರೆದು ಸಂಭ್ರಮಿಸಿ ಶುಭಾಶಯ ಕೋರಿ ಕಳೆಯುತ್ತೇವಲ್ಲ, ಈ ವರ್ಷದಂತಹ ಸಮಯವನ್ನು ನಾವು ದಿನನಿತ್ಯ ಕಳೆಯುತ್ತಿದ್ದೇವೆ ಎಂದು ನೀವು ಆಲೋಚಿಸಿದ್ದೀರಾ. ವರ್ಷದಿಂದ ಹೀಗೇ ಹಿಂದಕ್ಕೆ ಬನ್ನಿ…ತಿಂಗಳು, ಒಂದು ತಿಂಗಳ 30, 31 ಕಳೆದ ಮೇಲೆ ಆ ತಿಂಗಳುರುಳಿ ಹೊಸತಿಂಗಳು ಬರುತ್ತದೆ. ಶನಿವಾರ ಕಳೆದು ಮತ್ತೆ ಭಾನುವಾರ, ಮತ್ತದೇ ಸೋಮವಾರ… ಇನ್ನೂ ಹಿಂದಕ್ಕೆ ಹೋಗಿ, ದಿನವನ್ನು ಗಮನಿಸಿ… ಹಗಲಾಗುತ್ತದೆ, ಮತ್ತೆ ಕತ್ತಲಾಗಿ ರಾತ್ರಿಯಾಗುತ್ತದೆ. ನಸುಕಿನಲ್ಲಿ ಬೆಳಕು ಹರಿಯುತ್ತ ಮರುದಿನಕ್ಕೆ ದಿನ ಉರುಳುತ್ತದೆ. ದಿನ ಬಿಟ್ಟು ಘಳಿಗೆಗೆ ಬನ್ನಿ, ಒಂದು ಗಂಟೆಯ ಅವಧಿಯನ್ನು ತಗೊಳ್ಳಿ, 59 ನಿಮಿಷ ಕಳೆದ ಮೇಲೆ, ಗಂಟೆ ಬದಲಾಗುತ್ತದೆ, ನಿಮಿಷಕ್ಕೆ ಬಂದರೆ, 59ನೇ ಸೆಕೆಂಡು ಕಳೆದು ಒಂದು ನಿಮಿಷ, ಒಂದು ಸೆಕೆಂಡ್ ಉರುಳಬೇಕಾದರೂ 59ಮಿಲಿ ಸೆಕೆಂಡ್ ದಾಟಿ ಬರಬೇಕು…. ಈಗ ಯೋಚಿಸಿ, ವರ್ಷ ಎನ್ನುವುದರ ಈ ಉರುಳುವಿಕೆ ಎಲ್ಲಿಂದ ಆರಂಭವಾಗುತ್ತದೆ! ನಾವು ಕಳೆಯುವ ಪ್ರತಿ‌ಕ್ಷಣವೂ ಹೊಸದೇ. ಹೊಸದು ಎನ್ನುತ್ತಲೇ ಅದನ್ನು ಕಳೆಯುತ್ತಲೇ ಸಾಗುತ್ತೇವೆ. ಒಂದು ಕ್ಷಣವನ್ನಾದರೂ‌ ನಾಳೆಗಿರಲಿ ಎಂದು ತೆಗೆದಿಟ್ಟುಕೊಳ್ಳುವ ಆಯ್ಕೆಯಿಲ್ಲ. ಸಮಯ ಸಾಗುವ ಗತಿಯೇ ಹೀಗೆ. 

ಸೆಕೆಂಡುಗಳುರುಳಿ ನಿಮಿಷ ಬದಲಾಗುವ ಸಂಗತಿ‌ ನಮ್ಮ ಮನಸ್ಸಿನಲ್ಲಿ ಬರುವುದೇ ಇಲ್ಲ. ಅದು ವರ್ಷದಂತೆ ಸಂಭ್ರಮವೂ ಕೊಡುವುದಿಲ್ಲ. ನೋಡನೋಡುತ್ತಿದ್ದಂತೆ ಕಳೆದುಹೋಗುತ್ತವೆ ಅವೆಲ್ಲ. ಇನ್ನೂ ನಾವು ಹಳೆ‌ ನೆನಪುಗಳನ್ನಿಟ್ಟುಕೊಂಡು ಮೆಲುಕು ಹಾಕುತ್ತ ಕೂರುವುದೆಂದರೆ ಅದೊಂದು ತಮಾಷೆ ಎನಿಸುತ್ತದೆ. ಹಾಗಂತ ಹಾಗೆ ಮಾಡಬಾರದು ಎನ್ನುವುದಿಲ್ಲ. ಏಕೆಂದರೆ ಹಲವರಿಗೆ ಅದು ಖುಷಿಯೂ ಕೊಡುತ್ತದೆ. 
ಇನ್ನು ಈ ವರ್ಷವಾದರೂ ನಾನು ಬದಲಾಗಬೇಕು ಎಂದು ಗುರಿ ಇಟ್ಟುಕೊಳ್ಳುವವರಿದ್ದಾರೆ. ತಮಾಷೆಯೆಂದರೆ ಅವರು ಕಳೆದ ವರ್ಷವೂ ಗುರಿ ಇಟ್ಟುಕೊಂಡಿರುತ್ತಾರೆ. ಬಹುಷ ಅದನ್ನೇ ಈ ವರ್ಷಕ್ಕೂ ಇಡುತ್ತಾರೋ ಏನೋ ಹೇಳಲಾಗದು. ಬದಲಾಗುವುದರ ಸೂಕ್ಷ್ಮತೆಯ ಅರಿವು ನಮಗಿದ್ದರೆ ನಾವು ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಬದಲಾಗುವ ಪ್ರಕ್ರಿಯೆ ಬಾಹ್ಯವಾದದ್ದಲ್ಲ, ಆಂತರಿಕವಾದದ್ದು. ಅದು ಮನಸ್ಸಿನೊಳಗಿನ ಪ್ರಕ್ರಿಯೆ. ‘ಮನಸ್ಸು ಬದಲಾಗಬೇಕು’ ಎನ್ನುತ್ತೇವೆ‌. ಇದನ್ನೇ ಮತ್ತೆ ಮತ್ತೆ ಹೇಳುತ್ತಿರಿ. ‘ನಾನೇನು ಹೇಳುತ್ತಿದ್ದೇನೆ ಮಾರ್ರೆ’ ನಿಮಗೆ ನೀವೇ ಅಂದುಕೊಳ್ಳುತ್ತೀರಿ. ಒಂದು ಮಾತು, ವಿಷಯ ತಟ್ಟುವ ಬಗೆಯಲ್ಲಿಯೂ ಶ್ರಮ‌ ಬೇಕಿದೆ. ಅದನ್ನು ಸುಲಭವಾಗಿ ಎಲ್ಲರ ಮನಸ್ಸಿಗೆ ತಲುಪಿಸುವುದು ಸಾಧ್ಯವಿಲ್ಲ. ನೀನು ಬದಲಾಗು ಎಂದಾಕ್ಷಣ ಈ ಸಮಾಜದಲ್ಲಿ ಯಾರೂ ಬದಲಾಗುವುದಿಲ್ಲ.‌ ಹಾಗೆ ಬದಲಾಗುವವರಿದ್ದಿದ್ದರೆ ಇಂದು ಕಟುಕರೇ ಇರಬಾರದಿತ್ತು. ಪರಿವರ್ತನೆಯ ಪ್ರಕ್ರಿಯೆ ಮಾತು, ಅಕ್ಷರಕ್ಕೆ ತಗ್ಗಿ ಹೋಗುವಷ್ಟು ಸಣ್ಣದಲ್ಲ. ಹಾಗಾಗಿ ನಾನು ಬದಲಾಗುತ್ತೇನೆ ಎಂದು ಹೇಳುವುದಕ್ಕಿಂತ ಮನಸ್ಸಿನೊಳಗೆಯೇ ನಮ್ಮ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಿದೆ. ಸತತವಾಗಿ ಅದನ್ನು ಬೆಂಬಿಡದೆ ಕಾಡಬೇಕು. ಕತ್ತಿ ತಯಾರಿಸುವವ ಅದನ್ನು ಆಗಾಗ ಬೆಂಕಿಗಿಟ್ಟು ಕಾಯಿಸುತ್ತಲೇ ಇರುತ್ತಾನೆ. ಮನಸ್ಸನ್ನೂ ನಾವು ಹೀಗೊಂದು ಹಠಕ್ಕೆ ಒಡ್ಡಬೇಕು. 
ಈ ಹೊಸ ವರ್ಷಕ್ಕೆ ಗುರಿ, ಅದು ಇದು ಎಲ್ಲ ಬದಿಗಿಡಿ.‌ ಒಂದು ವಿಷಯವನ್ನಷ್ಟೇ ಗಟ್ಟಿಯಾಗಿ ಮನಸ್ಸಿನಲ್ಲಿ ಭದ್ರವಾಗಿ ಇರಿಸಿಕೊಳ್ಳಿ. ಅದು ನಿಮ್ಮ ಮನಸ್ಸಿನ ಶಕ್ತಿಯ ಬಗ್ಗೆ. ನಿಮಗೆಷ್ಟು ಶಕ್ತಿಯಿದೆ ಎನ್ನುವುದು ನಿಮಗೆ ಗೊತ್ತಿದೆ ಎಂದು ನೀವು ಭಾವಿಸಿರುತ್ತೀರಿ. ಆದರೆ ನಿಮ್ಮ ಪರಿಜ್ಞಾನದಲ್ಲಿರುವ ಶಕ್ತಿ ನಿಜಕ್ಕೂ ನಿಮ್ಮೊಳಗಿರುವ ಅಗಾಧ ಶಕ್ತಿಯ ಕಾಲು ಭಾಗವಷ್ಟೆ ಆಗಿರಬಹುದು.‌ ಮನುಷ್ಯನಲ್ಲಿ‌ ಅಸಾಧ್ಯ ಶಕ್ತಿ ಇರುತ್ತದೆ. ನೀವು ಇಡುವ ಹೆಜ್ಜೆಯಲ್ಲಿ ನಿಮ್ಮ ಮನಸ್ಸನ್ನು ಪೂರ್ತಿಯಾಗಿ ಇಟ್ಟುಕೊಂಡರೆ…ಊಹಿಸಿ ನೋಡಿ ನೀವೆಂತಹಾ ಅದ್ಭುತ ಜಗತ್ತನ್ನು ಪ್ರವೇಶಿಸಬಹುದು ಎಂದು. 
‘ನೀವೆನಾದರೂ ಸಾಧಿಸಬೇಕು ಎಂದು ಇಚ್ಛಿಸಿದರೆ, ಇಡೀ ಬ್ರಹ್ಮಾಂಡವೇ ಸಂಚು ಹೂಡಿ ನಿಮ್ಮನ್ನು ಸಹಕರಿಸುತ್ತದೆ’. ಕೊನೆಯದಾಗಿ ಜಗತ್ಪ್ರಸಿದ್ಧ ಕಾದಂಬರಿಕಾರ ಪಾವ್ಲೊ ಕೊಯ್ಲೊ ಅವರ ‘ದಿ ಆಲ್ಕೆಮಿಸ್ಟ್’ ಎಂಬ ರೋಚಕ‌ ಕಾದಂಬರಿಯಲ್ಲಿ ಬರುವ ಸಾಲು ಇದು. ನೀವು ಮನಸಾರೆ ಬದಲಾಗಬೇಕೆಂದು ಬಯಸಿದರೆ ಈ ಸಾಲನ್ನು ಮತ್ತೆ ಮತ್ತೆ ಓದಿಕೊಳ್ಳಿ, ನೆನಪಿಸುತ್ತಲೇ, ಅದರ ಅರ್ಥವಿಸ್ತಾರವನ್ನು ನಿಮ್ಮದಾಗಿಸಿ, ಹೊಸವರ್ಷದಲ್ಲಿ ನಿಮಗರಿಯದೇ ನೀವು ಬದಲಾಗಿರುತ್ತೀರಿ, ನಿಜವಾದ ನಿಮ್ಮನ್ನು ನೀವು ಪಡೆದಿರುತ್ತೀರಿ. 
ಕೊನೆಯದಾಗಿ ಈ ಹೊಸ ವರ್ಷ, ಎಲ್ಲರ ಹೊಟ್ಟೆಗೂ ಅನ್ನ ನೀಡಲಿ ಎಂದು ಆಶಿಸುತ್ತಾ, ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

LEAVE A REPLY

Please enter your comment!
Please enter your name here