ಮಹಮ್ಮದ್ ಶಾರೂಕ್ ತೀರ್ಥಹಳ್ಳಿ.

2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ಓರ್ವ ಆತ್ಮಹತ್ಯೆಗೆ ಶರಣಾಗಿದ್ದನು. ಅದರಲ್ಲಿ ಓರ್ವ ಅಪ್ರಾಪ್ತ ವಯಸ್ಕ ಎಂಬ ಕಾರಣಕ್ಕಾಗಿ ನಾಲ್ವರನ್ನು ದೋಷಿಗಳೆಂದು ತೀರ್ಮಾನಿಸಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಇದೀಗ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣ ಅಪರಾಧಿಗಳನ್ನು ಗಲ್ಲಿಗೇರಿಸುವ ದಿನ ಹತ್ತಿರವಾಗಿದೆ. ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿ ಶಿಕ್ಷೆ ಜಾರಿಮಾಡಲಾಗಿದೆ.

ಈ ದೇಶದ ಉದ್ದಗಲಕ್ಕೂ ಅತ್ಯಾಚಾರ ಎನ್ನುವ ಮಾತುಗಳು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ವರ್ಷ ಭಾರತದಲ್ಲಿ ದಿನವೊಂದಕ್ಕೆ 100 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ನ್ಯಾಷನಲ್ ಕ್ರೈಂ ಬ್ಯೂರೋ ವರದಿ ಹೇಳುತ್ತಿದೆ. ಅಂದರೆ ಸುಲಿಗೆ, ದರೋಡೆಯಂತೆಯೇ ಅತ್ಯಾಚಾರ ಕೂಡಾ ಒಂದು ಸಾಧಾರಣ ಅಪರಾಧವೆಂಬಂತೆ ನಡೆಯುತ್ತಿದೆ.2017ರಲ್ಲಿ 32,559 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದರೆ ವರದಿಯಾಗದೇ ಇರುವ ಅತ್ಯಾಚಾರಗಳ ಸಂಖ್ಯೆ ಎಷ್ಟು.? ಅದೇ ವೇಳೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, ಅಪ್ಪ ಅಮ್ಮ ಬಳಿಯಲ್ಲಿ ಇಲ್ಲದೇ ಇದ್ದರೆ ಮಕ್ಕಳು ಸುರಕ್ಷಿತರಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ. ಒಂದು ವರುಷದಲ್ಲಿ 13,833 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಕೃತ್ಯಗಳನ್ನು ಮಾಡಿದವರು ಮಕ್ಕಳ ಸಂಬಧಿಕರೇ ಆಗಿದ್ದಾರೆ. ಕಳೆದ ವರುಷದ ಅಂಕಿ ಅಂಶಗಳನ್ನು ನೋಡುವುದಾದರೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶೇ.86 ಪ್ರಕರಣಗಳು ಸಂಬಂಧಿಕರೇ ಮಕ್ಕಳ ಮೇಲೆ ಈ ರೀತಿ ಕೃತ್ಯಗಳನ್ನು ಮಾಡಿದ್ದಾರೆ. ಆದಾಗ್ಯೂ, ಲೈಂಗಿಕ ದೌರ್ಜನ್ಯಕ್ಕೊಳಗಾದವರಲ್ಲಿ ಶೇ.50 ರಷ್ಟು ಮಂದಿ 11 ಮತ್ತು 18ರ ನಡುವೆ ವಯಸ್ಸುಳ್ಳವರಾಗಿದ್ದಾರೆ. ಇವರಲ್ಲಿ ಶೇ.91ರಷ್ಷು ಮಂದಿ ಸಂಬಂಧಿಕರಿಂದಲೇ ದೌರ್ಜನ್ಯಕ್ಕೊಳಪಟ್ಟವರಾಗಿದ್ದಾರೆ.ಮಕ್ಕಳ ವೇಲೆ ಲೈಂಗಿಕ ದೌರ್ಜನ್ಯ, ಬಾಲಕಿಯ ಮೇಲೆ ಅತ್ಯಾಚಾರ ಎಂಬ ಸುದ್ದಿಗಳನ್ನು ಪದೇ ಪದೇ ನೋಡುತ್ತಲೇ ಇದ್ದೇವೆ.

ಅತ್ಯಾಚಾರವೆಸಗಿದವ ಒಂದಿಷ್ಟು ಕಾಲ ಕಂಬಿಯೆಣಿಸಿ ಆಮೇಲೆ ಶಿಕ್ಷೆ ಮುಗಿಸಿ ಹೊರಬರಬಹುದು. ಆದರೆ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ಸ್ಥಿತಿಯೇನು.? ಮನಸ್ಸಿಗೆ, ದೇಹಕ್ಕೆ ಆದ ಆ ನೋವು ಆಕೆಯ ಮನಸ್ಸಿನಿಂದ ಮರೆಯಾಗುತ್ತದೆಯೇ?ಇದೀಗ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹುಟ್ಟಿದ ಮಗುವಿಗೂ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಅಲಹಾಬಾದ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಸ್ವಾಗತರ್ಹವೇ ಆಗಿದ್ದರೂ ಆ ಹೆಣ್ಣು ಅತ್ಯಾಚಾರದಿಂದ ಹುಟ್ಟಿದ ಆ ಮಗುವನ್ನು ಹೊತ್ತು ಸಲಹುವುದಿದೆಯಲ್ಲಾ ಆ ಯಾತನೆಯ ಲೆಕ್ಕ ಹೇಳುವವರಾರು,,?ಹೆಣ್ಣೊಬ್ಬಳ ಮೇಲಾದ ದೊಡ್ಡ ಗಾತ್ರದ ಗುರುತು ಆ ಮಗು. ಅತ್ಯಾಚಾರದ ಆ ನೋವನ್ನು ಪದೇ ಪದೇ ನೆನಪಿಸುವಂತೆ ಮಾಡುವುದೇ ಆ ಮಗು. ಕೆಲವೊಂದು ಪ್ರಕರಣಗಳಲ್ಲಿ ಅತ್ಯಾಚಾರಿಯೊಬ್ಬನಿಂದ ಹುಟ್ಟಿದ ಮಗು ಬೀದಿ ಪಾಲಾಗುತ್ತದೆ. ಹಾಗೆ ಬೀದಿ ಪಾಲಾದ ಮಕ್ಕಳಿಗೆ ಅಮ್ಮನ ಲಾಲನೆಯೋ, ಅಪ್ಪನ ಎದೆಯ ತಾಪವೋ ಸಿಗುವುದಿಲ್ಲ. ಹಾಗೆ ಅದೆಷ್ಟೋ ಮಕ್ಕಳಿದ್ದಾರೆ. ಅವರಿಗೆ ಅಪ್ಪ ಯಾರು? ಅಮ್ಮ ಯಾರು? ಎಂದು ಗೊತ್ತೇ ಇರುವುದಿಲ್ಲ! ಅತ್ಯಾಚಾರದಿಂದ ಗರ್ಭ ಕಟ್ಟಿದ ಎಷ್ಟು ಭ್ರೂಣಗಳು ಶಿಶುಗಳಾಗಿ ಹೊರ ಬಂದಿವೆ..? ಇಲ್ಲಿ ಅಲಹಬಾದ್ ಹೈಕೋರ್ಟ್ ಹೇಳಿದ ಮಾತು ಹೆಚ್ಚು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ಅದೇನೆಂದರೆ ಅತ್ಯಾಚಾರಕ್ಕೀಡಾಗಿದ್ದಾರೆ ಎಂಧು ಹೇಳಬೇಕಾಗಿರುವುದು ಒಬ್ಬರಲ್ಲ, ಇಬ್ಬರನ್ನು. ನ್ಯಾಯಲಯ ಹೇಳಿದ್ದೇನೆಂದರೆ, ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದರೆ ಅವಳಿಗೆ ಹುಟ್ಟುವ ಮಗು ಕೂಡಾ ಪೀಡನೆಗೊಳಗಾಗಿದೆ ಎಂದೇ ಪರಿಗಣಿಸತಕ್ಕದ್ದು. ಇಲ್ಲಿ ಇಬ್ಬರೂ ಪೀಡಿತರೇ.  ತನ್ನದಲ್ಲದ ತಪ್ಪಿಗೆ ಅವಮಾನವನ್ನೂ ಅನುಭವಿಸಿಕೊಂಡು, ಆ ಅವಮಾನದ ಭಾರವನ್ನು ಹೊತ್ತು ಆಕೆ ಬದುಕುತ್ತಿರಬೇಕು. ಚಿಕ್ಕ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯ ಬಾಲ್ಯವನ್ನು ಯಾರಿಗಾದರೂ ಮರಳಿ ಕೊಡಲು ಸಾಧ್ಯವೇ..? ಅತ್ಯಾಚಾರಕ್ಕೊಳಗಾದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಮಗುವಿಗೂ ಆಸ್ತಿಯಲ್ಲಿ ಪಾಲು ನೀಡಬೇಕೆಂದು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವ ಹೊತ್ತಿನಲ್ಲೇ ಅಪ್ರಾಪ್ತರನ್ನು ಅತ್ಯಾಚಾರಗೈದವರನ್ನು ಷಂಡರನ್ನಾಗಿ ಮಾಡಬೇಕು ಎಂದು ಮದ್ರಸ್ ಹೈಕೋರ್ಟ್ ಹೇಳಿದ್ದು ಕೂಡಾ ಅನುಷ್ಠಾನಕ್ಕೆ ಬರಬೇಕು. ಹಾಗಾದರೆ ಮಾತ್ರ ಅತ್ಯಾಚಾರಿಗಳ ಪೌರುಷಕ್ಕೆ ಏಟು ಬೀಳಬಹುದು.

ಕಳೆದ ನವೆಂಬರ್ ನಲ್ಲಿ ಹೈದರಾಬಾದ್ ನಲ್ಲಿ ಪಶುವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾಂಕ ರೆಡ್ಡಿ  ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯು ಈ ದೇಶವನ್ನು ಮತ್ತೊಮ್ಮೆ ಎಚ್ಚರಿಸಿತ್ತು, ಕೋರ್ಟ್ ತೀರ್ಮಾನ ನೀಡುವ ಮುನ್ನವೇ ಪೊಲೀಸರೇ ಎನ್ಕೌಂಟರ್ ಮೂಲಕ ಆರೋಪಿಗಳನ್ನು ಕೊಂದು ಹಾಕಿದ್ದು ಇಂದಿಗೂ ಕೂಡ ಈ ತೀರ್ಮಾನ ನಿಗೂಢವಾಗಿಯೇ ಉಳಿದಿದೆ. ಅಂದ ಹಾಗೇ ನಿರ್ಭಯ ಅತ್ಯಾಚಾರಿಗಳಿಗೆ ಕಳೆದ ಡಿಸೆಂಬರ್ 16ರಂದು ಸೋಮವಾರ ಮುಂಜಾನೆ 5 ಗಂಟೆಗೆ ಗಲ್ಲಿಗೇರಿಸಲಾಗುವುದು ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿದ್ದು ಇದೀಗ ಜನವರಿ 22ಕ್ಕೆ ಮುಂದೂಡಿರುವುದು ಮತ್ತು ಜನವರಿ 22ಕ್ಕೆ ಸುಪ್ರಿಂ ಕೋರ್ಟ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರಿಶೀಲನೆ ಕೂಡ ನಡೆಯುದಿದೆ. ದೇಶಾದ್ಯಂತ ಪೌರತ್ವ ತಿದ್ದು ಪಡಿ ವಿರುದ್ದ ಈಗಾಗಲೇ ಜನಾಂದೊಲನ ನಡೆಯುತ್ತಿದ್ದು ಇದನ್ನು ಬೇರೆಡೆಗೆ ತಿರುಗಿಸಲು ಒಂದೇ ದಿನದಲ್ಲಿ ಈ ತೀರ್ಪನ್ನು ಇಡಲಾಗಿದೆಯೇ ಎಂದು ಭಾಸವಾಗುತ್ತಿದೆ. ಏನೇ ಇರಲಿ ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಈ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲೇ ಅತ್ಯಾಚಾರ ಪ್ರಕರಣ ಕೊನೆಗೊಳ್ಳಲಿ ಎಂಬ ಆಶಯದೊಂದಿಗೆ ಈ ದೇಶ ಕೆಡುಕು ಮುಕ್ತ ದೇಶವಾಗಿ ಜಗತ್ತಿಗೆ ಮಾದರಿಯಾಗಲಿ.

LEAVE A REPLY

Please enter your comment!
Please enter your name here