ಸಿನಿಮಾ ವಿಮರ್ಶೆ

  • ಎಂ ಅಶೀರುದ್ದೀನ್ ಆಲಿಯಾ, ಮಂಜನಾಡಿ

ಒಂದು ಶಿಕಾರಿಯ ಕಥೆ, ಈ ಚಿತ್ರ ಕೊರೊನ ಮತ್ತು ಲಾಕ್ ಡೌನ್ ಕಾರಣದಿಂದ ಹೆಚ್ಚಿನ ಸಿನಿ ಪ್ರೀಯರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಅಮೇಝಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸದ್ದು ಮಾಡುತ್ತಿದೆ.

ಒಂದು ಶಿಕಾರಿಯ ಹಿಂದೆ ನಡೆಯುವ ಈ ಕಥೆಯಲ್ಲಿ ಎಂದಿಗಿಂತ ಹೊಸತನವಿದೆ. ಬೇಟೆಗಾರನ ಮಗ ಶಂಭು ಶೆಟ್ರು ಅಪ್ಪ ಬಯಸಿದಂತೆ ಪರಂಪರಾಗತವಾಗಿದ್ದ ಕುಲದ ಮಹಿಮೆಯನ್ನು ಉಳಿಸುವ ಒಬ್ಬ ಬೇಟೆಗಾರನಾಗದೆ, ಅಹಿಂಸಾವಾದಿಯಾಗಿ ಓದುವುದು ಮತ್ತು ಬರೆಯುವುದರಲ್ಲಿ ಆಸಕ್ತನಾಗಿರುತ್ತಾನೆ. ಬೇಟೆಗಾರನಾಗಬೇಕೆಂಬ ಕೊನೆಯಾಸೆನ್ನು ನೆರವೇರಿಸಲು ಮಗ ಶಂಭುವಿನಿಂದ ಸಾಧ್ಯವಾಗಲಿಲ್ಲ. ಹಲವು ವರ್ಷಗಳ ನಂತರ ತಂದೆಯ ನೆನಪಾಗಿ ಅವರ ಆತ್ಮ ಸಂತೃಪ್ತಿಗಾಗಿ ಕೋವಿ ಹಿಡಿದು ಕೆಲಸದಾಳು ಹರಿಯ ಜೊತೆ ಶಿಕಾರಿಗೆ ಹೊರಡುತ್ತಾನೆ. ನಿಗೂಢ ಕಾಡಿನಳಗೆ ಉಂಟಾದ ಅನಾಹುತವೇ ಕಥೆಯ ಪ್ರಮುಖ ತಿರುವು.

“ಪ್ರಾಣಿಗಳು ತನ್ನ ಬದುಕಿಗಾಗಿ ಕಾಡಿನಲ್ಲಿ ಬೇಟೆಯಾಡುವುದಾದರೆ ಮನುಷ್ಯ ಸಮಾಜದಲ್ಲಿ ಸ್ವಾರ್ಥ ಚಪಲವನ್ನು ತೀರಿಸಿಕೊಳ್ಳಲು ಶಿಕಾರಿ ಮಾಡುತ್ತಾನೆ” ಎನ್ನುವುದು ಸಿನಿಮಾದ ಕಥಾ ಹಂದರ.
ಇಲ್ಲಿ ಐದು ಪ್ರಮುಖ ಪಾತ್ರಗಳಿವೆ ಅಹಿಂಸಾವಾದಿಯಾಗಿ ಊರವರ ಕಣ್ಣಿಗೆ ಹುಚ್ಚನಾಗಿರುವ ಸಾಹಿತಿ ಶಂಭು ಶೆಟ್ರು, ಅವರನ್ನು ಹೊಂದಿಕೊಂಡು ಬದುಕುವ ಕೆಲಸದಾಳು ಹರಿ, ಅವನ ಮಗಳು ಉಮಾ, ಅವಳು ಮೆಚ್ಚಿದ ಯಕ್ಷಗಾನ ಕಲಾವಿದ ಹರ್ಷ, ಅವನ ಗೆಳೆಯ ಸ್ವಾರ್ಥಿ ಮೋಹನ್ ಈ ಎಲ್ಲಾ ಪಾತ್ರಗಳು ಒಂದಕೊಂದು ಹೊಂದಿಕೊಂಡು ಸ್ವಾರಸಕರವಾಗಿ ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತದೆ.

ತನ್ನ ನಿಕೃಷ್ಟ ಮಾನಸಿಕತೆಯು ಪತ್ನಿ ಗುಲಾಬಿಯ ಸಾವಿಗೆ ಕಾರಣವಾಯಿತೆಂದು ಹರಿ ಅಸ್ವಸ್ಥನಾಗುತ್ತಾನೆ. ಹರ್ಷ ಗೆಳೆಯನ ಸ್ವಾರ್ಥಕ್ಕಾಗಿ ಬಲಿಯಾಗುತ್ತಾನೆ ಉಮಾ ಪ್ರೀತಿಯಲ್ಲಿ ಕರಗಿ ಹೋಗುತ್ತಾಳೆ ಇವಿಷ್ಟು ಕಥೆಯ ಸಂಕ್ಷಿಪ್ತ ಅಂಶ. ಒಂದು ಶಿಕಾರಿಯಿಂದ ಉಂಟಾದ ಜಂಜಾಟಗಳಿಗೆ ಬೇಸೆತ್ತು ಶಂಭು ಶೆಟ್ರು ಕೊನೇಗೆ ಜೀವನದ ಪರಮೋಚ್ಛ ಅವಸ್ಥೆಗೆ ಮುಕ್ತಿಯನ್ನು ಅರಸುತ್ತಾ ಬುದ್ದನಂತೆ ಸಂಚಾರ ಆರಂಭಿಸುತ್ತಾರೆ.

ಕಾಡಿನಲ್ಲಿ ನಡೆಯುವ ಶಿಕಾರಿ ಮತ್ತು ಸ್ವಾರ್ಥ ಗಳಿಕೆಗಾಗಿ ಮನುಷ್ಯರ ನಡುವೆ ನಡೆಯುವ ಶಿಕಾರಿಯ ಜೊತೆಗೆ ಯಕ್ಷಗಾನವನ್ನು ಪ್ರಮುಖವಾಗಿಸಿ ನಿರ್ದೆಶಕ ಸಚಿನ್ ಶೆಟ್ಟಿ ಸಣ್ಣ ಬಜೆಟ್ ನಲ್ಲಿ ನಿರ್ಮಿಸಿದ ಸಿನಿಮ. ಕುಂದಾಪುರ ಆಸುಪಾಸಿನ ಸಂಸ್ಕೃತಿ ಮತ್ತು ಭಾಷೆಯನ್ನು ಸಿನಿಮದಲ್ಲಿ ಅನುಭವಿಸಬಹುದು. ಬಹುತೇಕ ಚಿತ್ರೀಕರಣ ಕಾಡಿನಲ್ಲಿ ಮಾಡಲಾಗಿದೆ.

ಪ್ರಮೋದ್ ಶೆಟ್ಟಿ ಶಂಭುವಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ಕೆ ಮಠ ಹರಿಯ ಪಾತ್ರದಲ್ಲಿ ನಟಿಸಿ ತನ್ನನ್ನು ಸಂಪೂರ್ಣವಾಗಿ ಸಿನಿಮಕ್ಕೆ ಅರ್ಪಿಸಿಕೊಂಡಿದ್ದಾರೆ ಮೈತುಂಬ ಹುಲಿಯ ವೇಷ ಹಾಕಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೋಹನ್ ಪಾತ್ರದಲ್ಲಿ ಅಭಿಮನ್ಯು ಪ್ರಜ್ವಲ್, ಯಕ್ಷಗಾನ ಕಲಾವಿದನಾದ ಹರ್ಷನಾಗಿ ಪ್ರಸಾದ್ ಚಿಕ್ಕಾಡಿ, ಉಮಾ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಪ್ರಮುಖವಾಗಿ ನಟಿಸಿದ್ದಾರೆ. ಸನತ ಬಲೂರು ಸಂಗೀತ ನಿರ್ದೇಶಿಸಿದ್ದಾರೆ.

LEAVE A REPLY

Please enter your comment!
Please enter your name here