• ಸುಹೈಮ ಇರಮ್

ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿ ಮನೆಗಳಲ್ಲೂ ಕಸ ನಿರ್ವಹಣೆಯದ್ದೇ ಸುದ್ದಿ. ಕಸವನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಸಂಗ್ರಹಿಸಿ ಕೊಡಲಿಕ್ಕಿಲ್ಲವಂತೆ, ಹಸಿ ಕಸ, ಒಣ ಕಸ ಎಂದೆಲ್ಲ ಬೇರ್ಪಡಿಸಿ ನೀಡ ಬೇಕು. ಒಣ ಕಸವನ್ನು ವಾರಕ್ಕೆ ಒಂದು ಬಾರಿ ಮಾತ್ರ ಒಯ್ಯುವುದು ಇತ್ಯಾದಿ. ಇತ್ಯಾದಿ. ಕೆಲವರು ಇದನ್ನು ಬಹಳ ದೊಡ್ಡ ಸಂಕಷ್ಟ ಎಂಬಂತೆ ಭಾವಿಸಿದರೆ ಇನ್ನು ಕೆಲವರು ಇದೆಂತಹ ಹೊಸ ಕಥೆ ಎಂದು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿಜವಾಗಿ ನಾವು ಈ ಬಗ್ಗೆ ತಿಳಿದಿರ ಬೇಕಾದುದೇನು? ಈ ರೀತಿಯ ಕಸ ವಿಂಗಡನೆಯಿಂದ ಮತ್ತು ನಿರ್ವಹಣೆಯಿಂದ ಆಗುವ ಲಾಭಗಳೇನು ಎಂಬುದನ್ನೆಲ್ಲ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಹಾಗಾದರೆ ಮಾತ್ರ ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ.

ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ದೈನಂದಿನ ಕಸದ ವಿಲೇವಾರಿಯು ನಗರ ಪಾಲಿಕೆಗಳಿಗೆ ಸದಾ ಒಂದು ಪಂಥಾಹ್ವಾನ. ಸರಿಯಾಗಿ ಕಸದ ವಿಲೇವಾರಿ ಮಾಡದಿದ್ದರೆ ಇಡೀ ನಗರವೇ ಗಬ್ಬೆದ್ದು ನಾರುವ ಮತ್ತು ಜನರು ಮೂಗಿಗೆ ಕೈ ಹಿಡಿದು ನಡೆ ದಾಡುವ ಪರಿಸ್ಥಿತಿ ಬಂದೊದಗುತ್ತದೆ. ವರ್ಷಗಳಿಗೆ ಹಿಂದೆ ಬೆಂಗಳೂರಿನಲ್ಲಿ ಈ ಕಸ ನಿರ್ವಹಣೆಯ ಸಮಸ್ಯೆ ತಲೆದೋರಿ ಇಡೀ ನಗರವೇ ಕಸದಿಂದ ತುಂಬಿದ್ದನ್ನು ಸ್ಮರಿಸಬಹುದು ಕೆಲವು ವರ್ಷಗಳ ಹಿಂದಿನವರೆಗೆ ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳಿದ್ದವು. ಮನೆ, ಅಂಗಡಿಗಳಲ್ಲಿ ಸಂಗ್ರಹಿತವಾದ ಕಸವನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಕಟ್ಟಿ ಈ ತೊಟ್ಟಿಗಳಿಗೆ ಎಸೆಯಲಾಗುತ್ತಿತ್ತು. ಇಲ್ಲಿಯೂ ಹೆಚ್ಚಿನ ಕಸದ ತೊಟ್ಟೆಗಳು ತೊಟ್ಟಿಗಳ ಹೊರಗೆಯೇ ಬಿದ್ದಿದ್ದು, ನಾಯಿ, ಹಂದಿಗಳ ಓಡಾಟ, ಗಬ್ಬೆಂದು ನಾರುವ ಪರಿಸರದಿಂದ ನಗರದ ಸೌಂದರ್ಯ ಕೆಡುವುದರೊಂದಿಗೆ ದನಗಳು ಕೂಡಾ ಆಹಾರದೊಂದಿಗೆ ಪ್ಲಾಸ್ಟಿಕ್‍ಗಳನ್ನು ನುಂಗಿ ಪಡಬಾರದ ಸಂಕಷ್ಟಪಡುವ ಬಗ್ಗೆ ವರದಿಗಳಾಗುತ್ತಿದವು.
ಕಳೆದ ಕೆಲವು ವರ್ಷಗಳಿಂದ ಮನೆ ಮನೆಯಿಂದ ಕಸವನ್ನು ಸಂಗ್ರಹಿಸುವ ಕ್ರಮ ಆರಂಭವಾಯಿತು. ನಿರ್ದಿಷ್ಟ ಸಮಯಕ್ಕೆ ಬರುವ ನಗರಪಾಲಿಕೆ ಸ್ವಚ್ಛತಾ ಕಾರ್ಮಿಕರಿಗೆ ಆ ಸಂದರ್ಭಗಳಲ್ಲೂ ಸಹಕಾರ ನೀಡಿದವರು ಕಡಿಮೆ. ಕಸವನ್ನು ನನ್ನ ಮನೆಯಿಂದ ಒಮ್ಮೆ ನೀಗಲಿ ಎಂಬ ಉದ್ದೇಶದಿಂದ ಮನೆಯ ಗೇಟಿನ ಹೊರಗೆ ಅಲ್ಲಲ್ಲಿ ನೇತಾಡಿಸಿದ ಪರಿಣಾಮ ಅದು ಪುನಃ ಬೀದಿ ನಾಯಿಗಳು ಕಚ್ಚಿ ತಂದು ರಸ್ತೆ ಮಧ್ಯೆ, ಮನೆಯ ಕಂಪೌಡಿ ನೊಳಗೆ ಎಳೆದಾಡಿ ಪರಿಸರವನ್ನು ಮತ್ತಷ್ಟು ಕೆಡಿಸುತ್ತಿತ್ತು. ಆಗೆಲ್ಲ ಎಲ್ಲ ರೀತಿಯ ಕಸವನ್ನು ಒಂದೇ ಕವರಿನೊಳಗೆ ಕಟ್ಟಿ ಎಸೆಯಲಾಗುತ್ತಿತ್ತು.

ಈ ಬಾರಿ ಕಳೆದ ತಿಂಗಳಿನಿಂದ ಹೊಸ ನಿಯಮವು ಜಾರಿಯಲ್ಲಿದೆ. ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಗೆ ನೀಡಬೇಕಾಗಿದೆ ಎಂಬ ಆದೇಶ ಹೊರಬಂದಿದೆ. ಇದರ ನಿರ್ವಹಣೆಯ ಬಗ್ಗೆ ಜನ ಸಾಮಾನ್ಯರಲ್ಲಿ ಗೊಂದಲಗಳಿವೆ. ಇದನ್ನು ಒಳ್ಳೆಯ ರೀತಿಯಲ್ಲಿ ಜನಸಾಮಾನ್ಯರಿಗೆ ಅರ್ಥಮಾಡಿಕೊಡಬೇಕಾದ ಜವಾಬ್ದಾರಿಯೂ ಪಾಲಿಕೆಯ ಮೇಲಿದೆ. ಜನರನ್ನು ಈ ವಿಷಯದಲ್ಲಿ ಸರಿಯಾಗಿ ಶಿಕ್ಷಿತರಾಗಿಸದೇ ಹೋದರೆ ಇದು ಪುನಃ ಬೇರೊಂದು ಸಮಸ್ಯೆಗೆ ಬಾಗಿಲು ತೆರೆದು ಕೊಡಬಹುದಷ್ಟೆ. ಅದರ ಮುನ್ಸೂಚನೆಯನ್ನು ನಾವು ಕಾಣುತ್ತಿದ್ದೇವೆ. ಬೀದಿ ಬೀದಿಗಳಲ್ಲಿ ಕಸದ ಕಟ್ಟುಗಳು ಕಾಣಿಸಿ ಕೊಳ್ಳಲಾರಂಭಿಸಿವೆ. ಅದನ್ನು ನಾಯಿಗಳು ಎಳೆದಾಡಿ ಪರಿಸರವನ್ನು ಮತ್ತಷ್ಟು ಕೆಡಿಸಿರುವ ದೃಶ್ಯಗಳು ಸಾಮಾನ್ಯವಾಗುತ್ತಿವೆ.
ಕಸದ ನಿರ್ವಹಣೆ ನಮಗೆ ಅರ್ಥವಾಗದ ರಾಕೆಟ್ ಸಾಯೆನ್ಸ್ ಏನಲ್ಲ. ಸರಳವಾಗಿ ಅದನ್ನು ಅರ್ಥಮಾಡಿಕೊಂಡು ಮನಪೂರ್ವಕವಾಗಿ ಅದನ್ನು ನಿರ್ವಹಿಸಿದರೆ ನಮ್ಮ ಮನೆ ಪರಿಸರ ಸ್ವಚ್ಛವಾಗುವುದರ ಜೊತೆಗೆ, ನಮ್ಮ ನಗರ, ರಾಜ್ಯ ಹೀಗೆ ಒಟ್ಟು ದೇಶ ನಮ್ಮ ಪರಿಸರ ಸ್ವಚ್ಛವಾಗುವುದು ಖಂಡಿತ. ಇದಕ್ಕೆ ಪ್ರತಿಯೊಬ್ಬ ನಾಗರಿಕನೂ ಮನಸ್ಸುಮಾಡಬೇಕು ಮತ್ತು ನಮ್ಮ ಕೊಡುಗೆಗಳನ್ನು ಪ್ರಜ್ಞಾಪೂರ್ವಕ ಸಲ್ಲಿಸಬೇಕು. ಇದರಿಂದ ನಗರಪಾಲಿಕಾ ಸ್ವಚ್ಛತಾ ಕಾರ್ಮಿಕರ ಸಮಯ, ಪರಿಶ್ರಮ ವ್ಯರ್ಥವಾಗಬಾರದು. ಕಸವನ್ನು ಸುರಿಯುವ ಡಂಪಿಂಗ್ ಯಾರ್ಡ್‍ನ ಸುತ್ತಮುತ್ತಲ ಪರಿಸರದ ವ್ಯಕ್ತಿಗಳ ಸಂಕಷ್ಟ ದೂರವಾಗುವುದು. ಪ್ಲಾಸ್ಟಿಕ್ ಕಸವನ್ನು ಮರು ಬಳಕೆಗಾಗಿ ಬಳಸುವ ಉದ್ದೇಶ ಪಾಲಿಕೆಗಿದೆ. ಹೀಗೆ ಹಸಿ ಕಸ ಮಣ್ಣಲ್ಲಿ ಸೇರಿ ಉತ್ತಮ ಗೊಬ್ಬರವಾಗಿ ಮಾರ್ಪಡುವುದು. ಪ್ಲಾಸ್ಟಿಕ್ ಕಸ ಪುನರ್ಬಳಕೆಯಾಗುವುದು. ನಮ್ಮ ಪರಿಸರ ಶುದ್ಧವಾಗುವುದು ಮಣ್ಣು ಫಲವತ್ತಾಗುವುದು.
ಈ ಜಗತ್ತು ನಮಗಾಗಿ ಸೃಷ್ಟಿಸಲ್ಪಟ್ಟಿದೆ ನಿಜ. ಇಲ್ಲಿರುವ ಪ್ರತಿಯೊಂದು ವಸ್ತುವಿನ ಮೇಲೆ ನಮಗೆ ಕರ್ತವ್ಯಗಳಿವೆ. ಹರಿಯುತ್ತಿರುವ ನೀರನ್ನು ಕೂಡಾ ದುವ್ರ್ಯಯ ಮಾಡಬಾರದು ಎಂದು ಧರ್ಮವು ಕಲಿಸುತ್ತದೆ. ಎಲ್ಲ ವಸ್ತುಗಳನ್ನು ಇತಿಮಿತಿಯಲ್ಲಿ ಉಳಿಸಬೇಕು ಮತ್ತು ಅದನ್ನು ಮುಂದಿನ ಪೀಳಿಗೆಗೆ ಉತ್ತಮ ರೀತಿಯಲ್ಲಿ ಬಳಸಬೇಕು ಎಂದಾದರೆ ಉತ್ತಮ ರೀತಿಯ ಕಸದ ನಿರ್ವಹಣೆಯಷ್ಟು ಸರಳವಾದ ಮಾರ್ಗ ಮತ್ತೊಂದಿಲ್ಲ.
ಎಲ್ಲಕ್ಕಿಂತಲೂ ಮುಖ್ಯವಾಗಿ ನೈರ್ಮಲ್ಯವು ವಿಶ್ವಾಸದ ಅರ್ಧಾಂಶವಾಗಿದೆ. ಸ್ವಚ್ಛತಾ ಕಾರ್ಮಿಕರು ನಮ್ಮ ಸಹೋದರ ಸಹೋದರಿಯರು. ಅವರು ಮನುಷ್ಯರು. ಅವರು ಕೆಲಸ ನಿಲ್ಲಿಸಿದರೆ ಇಡೀ ನಗರವೇ ಗಬ್ಬೆದ್ದು ನಾರುವುದು ಖಂಡಿತ. ಆದರಿಂದ ಮಾನವೀಯ ನೆಲೆ ಯಲ್ಲಿ ಅವರೊಂದಿಗೆ ಗೌರವದೊಂದಿಗೆ ವ್ಯವಹರಿಸಬೇಕು. ನಗರಪಾಲಿಕೆ ನೀಡಿದ ಸೂಚನೆಗಳನ್ನು ಸರಿಯಾಗಿ ಪಾಲಿಸಿ ಸ್ವಚ್ಛತೆಗೆ ನಮ್ಮ ಕೊಡುಗೆಯನ್ನು ನೀಡಲು ನಾವು ಸಂಪೂರ್ಣ ಸನ್ನದ್ಧರಾಗಬೇಕಿದೆ.

ಕಸದ ವಿಂಗಡನೆ ಎಂದರೇನು? ಇದನ್ನು ಮಾಡುವುದು ಹೇಗೆ?
ಕಸದ ವಿಂಗಡಣೆಯ ಕಷ್ಟಕರ ಕೆಲಸವಲ್ಲ.

 • ಕಸವನ್ನು ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಪ್ರತ್ಯೇಕ ಬಕೇಟುಗಳಲ್ಲಿ ತುಂಬಿಸಿ ಪಾಲಿಕೆಯ ಸಿಬ್ಬಂದಿಗೆ ಹಸ್ತಾಂತರಿಸಿ.
 • ಹಣ್ಣು ಹಂಪಲಿನ ಸಿಪ್ಪೆ, ತರಕಾರಿ ಸಿಪ್ಪೆ, ಮೊಟ್ಟೆಯ ಕವಚ, ಮೀನು ಮಾಂಸಗಳ ತ್ಯಾಜ್ಯ ಹಾಗೂ ಆಹಾರದ ತ್ಯಾಜ್ಯವನ್ನು ಹಸಿ ಕಸವೆಂದು ಪರಿಗಣಿಸಲಾಗುವುದು.
 • ನೈರ್ಮಲ್ಯಕ್ಕೆ ಉಪಯೋಗಿಸಲಾಗುವ ಸ್ಯಾನಿಟರಿ ಪ್ಯಾಡುಗಳು, ಡಯಪರ್‍ಗಳು, ತಿಶ್ಯೂ ಪೇಪರ್, ಮಾಸ್ಕ್ ಮುಂತಾದವು ಗಳನ್ನು ತಿರಸ್ಕøತ ತ್ಯಾಜ್ಯವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತ್ಯೇಕವಾಗಿ ಹಳೆಯ ದಿನ ಪತ್ರಿಕೆಯಲ್ಲಿ ಸುತ್ತಿ, ಆ ಪೇಪರಿನ ಮೇಲೆ ಒಂದು ಕೆಂಪು ಶಾಯಿಯಲ್ಲಿ ಈ + ರೀತಿಯ ಮಾರ್ಕ್ ಮಾಡಿ ಸಿಬ್ಬಂದಿಗೆ ಹಸ್ತಾಂತರಿಸಬೇಕು. ಆಗ ಅದು ಇಂತಹ ತ್ಯಾಜ್ಯ ಎಂದು ಅವರಿಗೆ ಮನದಟ್ಟಾಗುವುದು. ಅವರೂ ನಮ್ಮಂತೆಯೇ ಮನುಷ್ಯರು. ಆದುದರಿಂದ ಅವರನ್ನು ಗೌರವಿಸಬೇಕು. ತ್ಯಾಜ್ಯವನ್ನು ವಿಲೇವಾರಿ ಮಾಡುವಾಗಲೂ ಶಿಸ್ತನ್ನು ಪಾಲಿಸಬೇಕು.
 • ಪ್ಲಾಸ್ಟಿಕ್, ಕಾಗದ, ಕಟ್ಟು, ಗಾಜಿನ ಸಾಮಾನುಗಳು ಇತ್ಯಾದಿಗಳನ್ನು ಒಣ ಕಸವೆಂದು ಪರಿಗಣಿಸಲಾಗಿದೆ. ಇದನ್ನು ಶುಕ್ರವಾರ ದಿನ ಮಾತ್ರ ಪಾಲಿಕೆ ಸಿಬ್ಬಂದಿಗೆ ಹಸ್ತಾಂತರಿಸಬೇಕು.
 • ನಿಷ್ಕ್ರಿಯ ಟ್ಯೂಬ್‍ಲೈಟ್, ವಿದ್ಯುತ್ ಬಲ್ಬ್, ಚಾರ್ಜರ್, ಬ್ಯಾಟರಿಗಳು, ಇಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಸಂಬಂಧಿತ ತ್ಯಾಜ್ಯಗಳನ್ನು ಪೇಪರಿನಲ್ಲಿ ಕಟ್ಟಿ ಶುಕ್ರವಾರ ದಿನ ಮಾತ್ರ ಪಾಲಿಕೆ ಸಿಬ್ಬಂದಿಗೆ ಹಸ್ತಾಂತರಿಸಬೇಕು.
 • ಈ ರೀತಿ ಎಲ್ಲವನ್ನು ವಿಂಗಡಿಸಿ ನೀಡಿದಾಗ ಪಾಲಿಕೆಯ ಸಿಬ್ಬಂದಿಯ ಸಮಯ ಉಳಿತಾಯವಾಗುವುದರ ಜೊತೆ ನಗರವೂ ಸ್ವಚ್ಛವಾಗಿರುತ್ತದೆ.
 • ಕಸವು ಅನಗತ್ಯ ಸೃಷ್ಟಿಯಾಗುವುದನ್ನು ನಿಯಂತ್ರಿಸುವುದು ಹೇಗೆ?
 • ಪ್ಲಾಸ್ಟಿಕ್ ಕವರ್‍ಗಳ ಉಪಯೋಗ ವನ್ನು ಆದಷ್ಟು ಕಡಿತಗೊಳಿಸಬೇಕು. ಹಾಲು, ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗುವಾಗ ದೀರ್ಘ ಬಾಳಿಕೆ ಬರುವ ಚೀಲಗಳನ್ನು (ಬಟ್ಟೆ, ಪ್ಲಾಸ್ಟಿಕ್) ತೆಗೆದುಕೊಂಡು ಹೋಗಬೇಕು.
 • ಮನೆಯಲ್ಲಿ ಆಹಾರವನ್ನು ಬೇಯಿಸು ವಾಗ ಅಗತ್ಯವಿರುವಷ್ಟು ಮಾತ್ರ ಬೇಯಿಸ ಬೇಕು. ಪ್ರೋತ್ಸಾಹಿಸಲಾಗುವುದನ್ನು ತಡೆಯಬೇಕು. ಹಳಸಿದ ವಸ್ತುಗಳನ್ನು ಎಸೆಯುವುದನ್ನು ಇದರಿಂದ ತಪ್ಪಿಸಬಹುದು.
 • ಎಲ್ಲ ಉಪಕರಣಗಳನ್ನು ಜಾಗರೂ ಕತೆಯಿಂದ ಬಳಸಬೇಕು. ಮೇಲಿಂದ ಮೇಲೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬದಲಿಸುವ, ಹೊಸದನ್ನು ಖರೀದಿಸುವ ಚಾಳಿಯನ್ನು ತೊರೆಯಬೇಕು. ಈ ಕಸದ ನಿರ್ವಹಣೆಯು ಜಗತ್ತಿನ ಮುಂದಿರುವ ದೊಡ್ಡ ಸವಾಲು.
 • ಮನೆಯಲ್ಲಿ ಹಿತ್ತಿಲು ಇರುವವ ರಾದರೆ ಹಸಿ ತ್ಯಾಜ್ಯವನ್ನು ಗೊಬ್ಬರ ವಾಗಿ ಮಾರ್ಪಡಿಸುವ ಗೊಬ್ಬರ ಗುಂಡಿ ಗಳನ್ನು ತಯಾರಿಸಿ. ಅದರಲ್ಲಿ ಹಸಿ ಕಸ ತುಂಬಬೇಕು.
 • ಒಂದು ಪಾಲು ಹಸಿ ಕಸ, ತರಗೆಲೆಗಳು, ಮಣ್ಣು ಇವುಗಳನ್ನು ಸಮ ಪ್ರಮಾಣದಲ್ಲಿ ಹರಡಿ ಒಂದು ಹಳೆಯ ಮಣ್ಣಿನ ದೊಡ್ಡ ಪಾತ್ರೆಗಳಲ್ಲಿ ಹಾಕಿ ನೀರು ಸುರಿದು ಮುಚ್ಚಿಟ್ಟರೆ ಉತ್ತಮ ಸಾವಯವ ಗೊಬ್ಬರ ತಯಾರಾಗುವುದು. ಇದನ್ನು ಮರಗಿಡಗಳಿಗೆ ಉಪಯೋಗಿಸಿ ದರೆ ಚೆನ್ನಾಗಿ ಫಸಲು ನೀಡುವುದು.
 • ಮಕ್ಕಳನ್ನು ಕೂಡಾ ಕಸ ನಿರ್ವಹಣೆಯ ಕುರಿತು ಪ್ರಜ್ಞಾವಂತರ ನ್ನಾಗಿಸಿ. ಎಲ್ಲೆಂದರಲ್ಲಿ ಕಸ ಎಸೆಯದೆ ಅವುಗಳನ್ನು ಹಾಕಬೇಕಾದ ಸ್ಥಳದಲ್ಲಿ ಹಾಕುವಂತೆ ಎಳವೆಯಲ್ಲೇ ಕಲಿಸಿಕೊಡಿ.
 • ನಮ್ಮ ಕಸ ನಮ್ಮ ಜವಾಬ್ದಾರಿ ಎಂಬು ದನ್ನು ಅರಿತು ಅದನ್ನು ಸರಿಯಾಗಿ ವಿಲೇ ವಾರಿ ಮಾಡಲು ಸಹಕರಿಸಿದರೆ ಖಂಡಿತ ಸ್ವಚ್ಛ ಊರು ನಮ್ಮದಾಗುವುದು.

LEAVE A REPLY

Please enter your comment!
Please enter your name here