ಲೇಖಕರು: ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

Fiction is the lie through which we tell the truth – Albert Camus

ಸಾಮಾನ್ಯವಾಗಿ ಮುಸ್ಲಿಂ ಸಾಹಿತಿಗಳ ಸಾಹಿತ್ಯಗಳಲ್ಲಿ ಮುಖ್ಯವಾಗಿ ಎರಡು ಅಂಶಗಳು ಕಾಣಸಿಗುತ್ತವೆ; ಒಂದು, ಮುಸ್ಲಿಂ ಸಮಾಜದ ಆಗು-ಹೋಗುಗಳ ಬಹಿರಂಗ ಚರ್ಚೆಯಾದರೆ ಇನ್ನೊಂದು ಮುಸ್ಲಿಂ ಸಮಾಜದಲ್ಲಿ ಬೆಳೆದಿರುವ ಮೌಢ್ಯತೆಯ ವಿರುದ್ಧ ಟೀಕಾ ಪ್ರಹಾರವಾಗಿದೆ. ಎರಡೂ ಅಂಶಗಳಲ್ಲಿ ನಾವು ಸಮಾಜವನ್ನು ಮುಸ್ಲಿಂ ಮನೆತನದ ದೃಷ್ಟಿಕೋನದಿಂದ ವಿಮರ್ಶಿಸಬಹುದು.

ಸಾರಾ ಅಬೂಬಕ್ಕರ್, ಬಾನು ಮುಷ್ತಾಕ್ ಇತ್ಯಾದಿ ಸಾಹಿತಿಗಳು ಮುಸ್ಲಿಂ ಮನೆತನದಲ್ಲಿ ಮಹಿಳೆಯರ ಜ್ವಲಂತ ಸಮಸ್ಯೆಗಳನ್ನು ಸ್ವತಂತ್ರವಾಗಿ ಚರ್ಚಿಸಿದ್ದಾರೆ. ಅಂದರೆ, ಅವರು ಮಹಿಳಾ ಸಾಹಿತಿಗಳಾಗಿದ್ದರಿಂದ ಅವರು ಸ್ತ್ರೀವಾದ ದೃಷ್ಟಿಕೋಣ ಆಯ್ದುಕೊಂಡರು. ಪ್ರಾಚೀನ ಸೂಫಿ-ಸಂತ ಕವಿಗಳು ಅಲ್ಲಾಹನ ಹಿರಿಮೆ, ಪ್ರವಾದಿ ಪ್ರೇಮ, ಔಲಿಯಾಗಳ ಗುಣಗಾನ ಇತ್ಯಾದಿಗಳನ್ನು ಹಾಡಿ ಹೊಗಳಿದ್ದುಂಟು.

ಒಟ್ಟಾರೆ, ಮುಸ್ಲಿಂ ಸಾಹಿತಿಗಳ ಸಾಹಿತ್ಯ ಕೃಷಿಯಲ್ಲಿ ನಮಗೆ ಒಡೆದೆದ್ದು ಕಾಣಸಿಗುವುದು ಮುಸ್ಲಿಂ ಮನೆತನದ, ಕೌಟುಂಬಿಕ ಕಲಹ, ದಿನನಿತ್ಯದ ಸಂಕಷ್ಟಗಳು, ಮೌಢ್ಯದ ಪ್ರಭಾವಗಳು ಇತ್ಯಾದಿ. ಆದರೆ, ಗೆಳೆಯ ಅಶೀರುದ್ದೀನ್ ಸಾರ್ತಬೈಲು ಅವರು ರಚಿಸಿದ ಕಥಾ ಸಂಕಲನವಾದ ‘ಪಾಸ’ ವಿಭಿನ್ನ ದೃಷ್ಟಿಕೋನದಿಂದ ರಚಿಸಲಾಗಿದೆ!! ಒಂದು ಕಥೆ, ಕಾದಂಬರಿ ಅಥವಾ ನೀಳ್ಗಥೆ ಸಾಮಾನ್ಯವಾಗಿ ಸಾಹಿತಿಯ ಭಾವನೆ ಮತ್ತು ಪ್ರತೀಭೆಯ ಸೃಷ್ಟಿಯಾಗಿದೆ; ಹಲವು ಬಾರಿ ಅವು ಸಾಹಿತಿಯ ಪ್ರತಿಭಟನಾತ್ಮಕ ಕೂಗಾಗಿರುತ್ತದೆ; ಆ ಕೂಗಿಗೆ ಪ್ರೇರಣೆ ನೀಡುವುದು ವಾಸ್ತವದಲ್ಲಿ ನಡೆದ ಅಥವಾ ನಡೆಯಬಹುದಾದ ಯಾವುದಾದರೂ ವಿದ್ಯಮಾನ ಆಗಿದೆ.

ಕಲ್ಪನೆ ಮತ್ತು ವಾಸ್ತವಗಳು ಸಮೀಪವಾದಷ್ಟು ಕಾದಂಬರಿಯು ಓದುಗರ ಮನಸ್ಸಿನಲ್ಲಿ ಗಾಢವಾದ ಪ್ರಭಾವವನ್ನು ಬೀರುತ್ತದೆ. ಹಸಿವು ಮತ್ತು ಬಡತನ ಒಂದೇ ನಾಣ್ಯದ ಎರಡು ಮುಖಗಳು; ಹಸಿವಿಗೆ ಧರ್ಮವಿಲ್ಲ ಮತ್ತು ಎಲ್ಲಾ ಧರ್ಮಗಳಲ್ಲಿ ಹಸಿದವನಿಗೆ ಉಣಿಸುವುದರಲ್ಲಿ ಬಹಳ ಪುಣ್ಯವಿದೆ ಎಂದು ಸಾರಲಾಗಿದೆ. ಬಾಯಾರಿದ ನಾಯಿಯೊಂದಕ್ಕೆ ನೀರು ನೀಡಿದ ಕಾರಣ ವೇಶ್ಯೆಯೊಬ್ಬಳು ಸ್ವರ್ಗ ಪ್ರವೇಶಿಸಿದ್ದಳು ಎಂದು ಪ್ರವಾದಿ (ಸ) ಉಪದೇಶಿಸಿದ ಧರ್ಮೋಪದೇಶವನ್ನೇ ಅನಾವರಣಗೊಳಿಸುವ ಪ್ರಯತ್ನಕ್ಕೆ ಅಶೀರ ಶ್ರಮಿಸಿದ್ದಾರೆ.

‘ಅಶೀರನ ಕವಿತೆಗಳು’ ಎಂಬ ಕಾವ್ಯ ಸಂಕಲನದ ಬಳಿಕ, ಅಶೀರವರು ಈಗ ‘ಕಥಾ ಸಂಕಲನ’ ಹೊರ ತರುವ ಹೊಸ ಪ್ರಯೋಗ ನನಗೆ ಬಹಳ ಹಿಡಿಯಿತು. ‘ಪಾಸ’ ಅಂದರೆ ತುಳು ಭಾಷೆಯಲ್ಲಿ ಧಾರ್ಮಿಕ ಆಚರಣೆಯಾಗಿ ಗುರುತಿಸಲ್ಪಡುವ ಉಪವಾಸ ಎಂದರ್ಥ; ಆದರೆ, ಈ ಕೃತಿಯಲ್ಲಿ ಹೆಸರು ‘ಹಸಿವು’ ಅನ್ನು ಸಂಕೇತಿಸುತ್ತಿದೆ. ‘ಪಾಸ’ ಕೃತಿಯ ಕೆಲವು ಕಥೆಗಳು ನಿಮಗೆ ಕುಪಿತಗೊಳಿಸಬಹುದು; ನಾವು ದಿನನಿತ್ಯ ಎಷ್ಟು ಮಂದಿಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದೇವೆ ಎಂಬ ಪಾಪಪ್ರಜ್ಞೆಯನ್ನೂ ನಮ್ಮಲ್ಲಿ ಮೂಡಬಹುದು ಅಥವಾ ಸಮಕಾಲೀನ ಆಗುಹೋಗುಗಳ ಕುರಿತಂತೆ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಬಹುದು.

ಸಾಹಿತಿ ಅಶೀರ ಅವರ ಕಥಾಸಂಕಲನ ‘ಪಾಸ’ದಲ್ಲಿ ಒಳಗೊಂಡಿರುವ ಹಸಿವಿನ ಸನ್ನಿವೇಶಗಳು ವಾಸ್ತವಕ್ಕೆ ಅತ್ಯಂತ ನಿಕಟವಾದುದರಿಂದ ಸಂವೇದನಾಶೀಲ ಓದುಗರ ಮನಸ್ಸಿನಲ್ಲಿ ದುಮ್ಮಾನಕ್ಕೆ ಆಸ್ಪದ ನೀಡುತ್ತದೆ. ಕೃತಿಯ ‘ದಾಹ’ ಎಂಬ ಕಥೆಯಲ್ಲಿ ಬಾಯಾರಿದೊಬ್ಬನ ಕಷ್ಟ ನಿಜಕ್ಕೂ ನಿಮ್ಮನ್ನು ಕ್ರೋಧಿಸಬಹುದು. ಸಾಂಕೇತಿಕವಾಗಿ, ಒಂದೆಡೆ ತುಳಿತಲ್ಪಟ್ಟವರು ಹಸಿವಿನಿಂದ ನರಳಿ ಪ್ರಾಣ ಕಳೆದರೂ, ಹೂಡಿಕೆಯೊಲವಿಗವರು ಗೋದಾಮುಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಶೇಖರಿಸಿ, ಹಣಗೊಳಿಸುವುದನ್ನು ಇಲ್ಲಿ ನೆನೆಯಬಹುದು.

ಈ ಕಥೆಯ ನೀತಿಯಿರುವ ಇನ್ನೊಂದು ಕಥೆಯಾಗಿರುವ ‘ಮಸೀದಿಯ ಕಲೆಕ್ಷನ್’ ಸಹ ಇದೇ ಸಾಮಾಜಿಕ ಕೆಡುಕನ್ನು ಎತ್ತಿ ಹಿಡಿದಿದೆ. ಅಲಂಕಾರಿಕ ಮಸೀದಿಯನ್ನು ಕಟ್ಟಲು ಇಸ್ಲಾಂ ಧರ್ಮ ಎಲ್ಲಿಯೂ ಕಲಿಸಿಲ್ಲ; ತದ್ವಿರುದ್ಧವಾಗಿ, ಹಸಿದವನಿಗೆ ಎರಡು ತುತ್ತು ಅನ್ನ ನೀಡಲು ಪ್ರೇರೇಪಿಸುತ್ತದೆ. ‘ಪಾಸ’ ಕೃತಿಯಲ್ಲಿ ಸಿಗುವ ಇನ್ನೊಂದು ನೀತಿಯೆಂದರೆ ಕೋಮು ಸಾಮರಸ್ಯ. ‘ಮಸೀದಿಯ ಕಲ್ಲು’ ಕಥೆಯಲ್ಲಿ ಕಂಡು ಬರುವಂತೆ ಕೋಮು ಸಾಮರಸ್ಯ, ಸಮಾಜಕ್ಕೆ ಸೊಗಸಾದ ಸಂದೇಶವನ್ನು ನೀಡುತ್ತದೆ. ಕೇವಲ ‘ಒಂದು ತುಂಡು ಮಾಂಸ’ಕ್ಕಾಗಿ ನಡೆಯುವ ಗಲಭೆಯು, ಆರೋಗ್ಯಕರ ಸಮಾಜಕ್ಕೆ ಅಪಾಯಕಾರಿ ಆಗಿದೆ. ಹಾಗೆಯೇ , ಮಾನವೀಯ ನೆಲೆಯಲ್ಲಿ ಅದು ಮಾನವನ ಬುದ್ಧಿಹೀನತೆಯ ಬಹಿರಂಗ ಪ್ರದರ್ಶನವಾಗಿದೆ.

ಅಶೀರವರ ಕೆಲವು ಕಥೆಗಳನ್ನು ವಿಮರ್ಶಿಸಿದರೆ ಅವರಲ್ಲಿ ‘ಗಾಂಧೀಜಿ’ ಅವರ ವಿಚಾರಗಳ ಪ್ರಭಾವ ಒಡೆದೆದ್ದು ಕಾಣಸಿಗುತ್ತಿದೆ. ಗಾಂಧೀಜಿ ಅವರ ಸ್ವಚ್ಛ (ಎಲ್ಲ ಬಗೆಯ ಮಲಿನತೆಯಿಂದ ಮುಕ್ತವಾಗಿರುವ) ಸಮಾಜದ ಪರಿಕಲ್ಪನೆಯೇ, ಅಶೀರವರ ಕನಸ್ಸಿನಂತೆ ಭಾಸವಾಗುತ್ತದೆ. ‘ದಾಡಿವಾಲ’ ಕಥೆಯಲ್ಲಿ ಅವರು ಮುಸ್ಲಿಮರ ವಿರುದ್ಧ ಹರಡಿರುವ ಪೂರ್ವಾಗ್ರಹವನ್ನು ಸರಳ ಭಾಷೆಯಲ್ಲಿ ಸರಿಪಡಿಸಲು ಯತ್ನಿಸಿದ್ದಾರೆ. ಮನಸ್ಸಿನ ಸ್ವಚ್ಛತೆಯೊಂದಿಗೆ ಅವರು ಪರಿಸರ ಕಾಳಜಿಯನ್ನೂ ವ್ಯಕ್ತಪಡಿಸಿದ್ದಾರೆ. ‘ಅಜ್ಜಿಯ ಮರ’ ಕಥೆಯಲ್ಲಿ ಹಿರಿಜೀವಿ ಅಮೀನಾ ಬೀ ಒಂದು ಮಾವಿನ ಮರಕ್ಕಾಗಿ ಮಾಡುವ ಶ್ರಮ ನಿಜಕ್ಕೂ ಶ್ಲಾಘನೀಯ.

ಒಟ್ಟಾರೆ, ಮಾಸ್ತರಿಕೆಯ ವೃತ್ತಿಯಲ್ಲಿರುವ ಅಶೀರ ಅವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರಾಮಾಣಿಕರಾಗಿ ನಿಭಾಯಿಸಿದ್ದಾರೆ. ಇಂತಹ ಸೊಗಸಾದ ಸಂದೇಶಗಳು ನಾವು ಶಿಕ್ಷಕರಿಂದಲೇ ನಿರೀಕ್ಷಿಸಬಹುದು. ಜನಸಾಮಾನ್ಯರು ಪ್ರತಿದಿನ ಬಳಸುವ ಸರಳ ಭಾಷೆಯಲ್ಲಿ ರಚಿತ ‘ಪಾಸ’ ಕೃತಿಯು ಎಲ್ಲರು ಒಮ್ಮೆ ಓದಲೇ ಬೇಕೆಂಬುವುದು ನನ್ನ ವ್ಯಕ್ತಿಗತ ಅಭಿಪ್ರಾಯ ಆಗಿದೆ. ಅಂದಹಾಗೆ, ‘ಹಸಿವು’ ಎಂಬ ಪೆಡಂಭೂತವು ಯಾವ ಜೀವಿಗೂ ಕಾಡದಿರಲಿ.

1 COMMENT

  1. ಪುಸ್ತಕದ ಈ ವಿಮರ್ಶಾತ್ಮಕ ಪರಿಚಯ ಚನ್ನಾಗಿ ಮೂಡಿಬಂದಿದೆ
    ಪುಸ್ತಕ ತರಿಸಿ ಓದುತ್ತೇನೆ
    ನನ್ನ ಮಟ್ಟಿಗೆ ಧರ್ಮ ಮತ್ತು ಮತ ಪರ್ಯಾಯ ಪದಗಳಲ್ಲ. ಅವನ್ನು ಬಳಸುವಾಗ ಎಚ್ಚರ ಬೇಕು. ಧರ್ಮ ವಿಶ್ವಾತ್ಮಕ ಸಾರ್ವಕಾಲೀಕ ಮೌಲ್ಯಗಳ ವಿಷಯ. ಮತ ಒಂದು ಪಂಥದ ನಂಬಿಕೆಗಳ ವಿಷಯ…

LEAVE A REPLY

Please enter your comment!
Please enter your name here