• ಲಬೀದ್ ಆಲಿಯಾ

ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು.

ಇಮಾಮ್ ಗಾಝಾಲಿ, ಶಾ ವಲಿಯುಲ್ಲಾ ದಾಹಲವಿ, ಇಬ್ನು ತೈಮೀಯ ಮುಂತಾದವರನ್ನು ಜಗತ್ತು ಶೈಖುಲ್ ಇಸ್ಲಾಂ, ಹುಜ್ಜತುಲ್ಲಾ ಎಂಬ ಅಂಕಿತನಾಮದಿಂದ ಗುರುತಿಸುವಾಗ ಇವರನ್ನು ನಾವು ಬಹುರುಲ್ ಉಲಮ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಇವರು ಒಮ್ಮೆ ಮಂಗಳೂರಿಗೆ ಬಂದಿದ್ದರು. ಆಗ ಅವರನ್ನು ಭೇಟಿಯಾಗಿದ್ದೆ. ಅಪಾರ ಪಾಂಡಿತ್ಯ, ಸಾಧಾರಣ ಜೀವನದ ಅಸಾಧಾರಣ ವ್ಯಕ್ತಿತ್ವ. ಅವರ ಕುರಿತು ಇನ್ನಷ್ಟು ತಿಳಿದದ್ದು ನನ್ನ ಆಲಿಯಾದ ಅಧ್ಯಾಪಕರಾದ ಬಖವಿ ಉಸ್ತಾದರಿಂದ. ಅವರು ಕೂಡ ಇವರ ಶಿಷ್ಯರಲ್ಲೊಬ್ಬರಾಗಿದ್ದರು. ಲೂನಾರ್ ಕೆಲೆಂಡರ್ ನ ವೈಜ್ಞಾನಿಕತೆಯನ್ನು ಬಹಳ ಸರಳವಾಗಿ ಅವರು ವಿವರಿಸಿದ್ದಾರೆ. ಚಂದ್ರ ದರ್ಶನದ ನಮ್ಮ ತರ್ಕಗಳಿಗೆ, ಗೊಂದಲಗಳಿಗೆ ಅವರ ಬಳಿ ಸ್ಪಷ್ಟವಾದ ಉತ್ತರವಿದೆ. ನಾವು ಇಬ್ನು ರುಷ್ದ್, ಇಬ್ನು ಸೀನಾ ಮುಂತಾದ ಇಸ್ಲಾಮೀ ವಿದ್ವಾಂಸರ ಕುರಿತು ಕೇಳಿದ್ದೇವೆ. ಅವರದೇ ಜ್ಞಾನದ ದಾರಿಯಲ್ಲಿ ನಡೆಯುವ ೨೧ನೇ ಶತಮಾನದ ಮಹಾನ್ ಚೇತನ. ಯಾವುದೇ ಔಪಚಾರಿಕ ಶಿಕ್ಷಣದಲ್ಲಿ ಕಲಿತವರಲ್ಲ. ತಮ್ಮ ಮಕ್ಕಳನ್ನೂ ಶಾಲೆಗೆ ಸೇರಿಸಲಿಲ್ಲ. ಮಕ್ಕಳಿಗೆ ಮನೆಯಲ್ಲೇ ಸ್ವತಃ ಅವರೇ ಶಿಕ್ಷಣ ನೀಡುತ್ತಾರೆ. ಶಿಕ್ಷಣದ ಕುರಿತು ಅವರಿಗೆ ತಮ್ಮದೇ ಆದ ಒಂದು ನಿಲುವು ಇದೆ. ಇಂದು ನಾವು ಕಲಿಯುವ ಶಿಕ್ಷಣ ವ್ಯವಸ್ಥೆ ಕೃತಕ ಮತ್ತು ಅರ್ಥಹೀನವಾಗಿದೆ. ಜ್ಞಾನವನ್ನು ಪಡೆಯಲು ಉತ್ತಮ ಮಾರ್ಗವೆಂದರೆ ನಮ್ಮ ಪರಿಸರವನ್ನು ಗಮನಿಸುವುದರ ಮೂಲಕ ಬುದ್ಧಿವಂತಿಕೆಯನ್ನು ಪಡೆಯುವುದು.

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಒಂದರ್ಥದಲ್ಲಿ ಅವರು ಪ್ರತಿಪಾದಿಸುವ ಈ ಶಿಕ್ಷಣದ ಮಾದರಿಯನ್ನು ತನ್ನಲ್ಲಿ ಮತ್ತು ತಮ್ಮ ಕುಟುಂಬದಲ್ಲಿ ಅಳವಡಿಸಿ ಯಶಸ್ವಿಯಾದರು. ಇವರ ಮತ್ತೊಂದು ಆಸಕ್ತಿಯ ವಿಷಯ ಸಮುದ್ರ. ಒಬ್ಬ ಪರಿಣಿತ ಸಮುದ್ರ ಶೋಧಕ. ಲಕ್ಷ ದ್ವೀಪ್ ನ ಭಾರತೀಯ ಮರೇನ್ ಫಿಷರೀಸ್ ರಿಸರ್ಚ್ ಫೌಂಡೇಶನ್ ನಲ್ಲಿ ಸಮುದ್ರ ಶಾಸ್ತ್ರಜ್ಞರಾದ ಸಾಂತಪ್ಪನ್ ಜೋನ್ಸ್ ಅವರೊಂದಿಗೆ ಸಮುದ್ರ ಜೀವಿಗಳ ಸಂಶೋಧನೆಯಲ್ಲಿ ಕೆಲಸ ಮಾಡಿರುತ್ತಾರೆ. ಯುವಕನಾಗಿದ್ದಾಗ ಸಮುದ್ರ ಜ್ಞಾನ ಹಾಗೂ ಈಜಿನಲ್ಲಿ ಇವರ ಪ್ರಖರತೆ ಕಂಡು ಆಶ್ಚರ್ಯಗೊಂಡ ಜಾನ್ ರವರು ಮನಿಕ್ ಫಾನ್ ರನ್ನು ತಮ್ಮ ಜತೆ ಸೇರಿಸುತ್ತಾರೆ. ಹೊಸ ಎರಡು ಜಾತಿಯ ಮೀನನ್ನು ಶೋಧಿಸಿದ ಇವರು ಒಂದು ಮೀನಿಗೆ ಇವರ ಹೆಸರಾದ “ಆಬುದೆಫ್ ದಪ್ ಮಾನಿಕ್ಫಾನ್” ಎಂದು ಹೆಸರಿಡಲಾಗಿದೆ. ಅಟೋಮೊಬೈಲ್ ಬಗ್ಗೆ ಆಸಕ್ತಿ ಹೊಂದಿ ಸೈಕಲ್ ಮಾದರಿಯ ಡೈನಮೋ ಮೋಟಾರ್ ತಯಾರಿಸಿ ಅದರಲ್ಲಿ ಮಗನ ಜತೆ ಕೇರಳದಿಂದ ದಿಲ್ಲಿಗೆ ಯಾತ್ರೆ ನಡೆಸಿ ಯಶಸ್ವಿಯಾದರು. ಗಡಿಯಾರ ರೇಡಿಯೋ ಹೀಗೆ ಹಲವಾರು ಸಾಮಾಗ್ರಿಗಳನ್ನು ಸ್ವತಃ ಸರಿಪಡಿಸುತ್ತಾರೆ. ಅವರ ಭಾಷಾ ಜ್ಞಾನ ಅಪಾರ. ಸುಮಾರು ೧೪ ಭಾಷೆಗಳ ಓದು, ಬರಹ ಹಾಗೂ ಮಾತು ಎಲ್ಲವೂ ಬಲ್ಲವರಾಗಿದ್ದರೆ. ಸ್ವತಃ ಪರಿಶ್ರಮದಿಂದ ಇದನ್ನು ಕರಗತ ಮಾಡಿದರು. ಅವರ ಮಾತೃಭಾಷೆಯಾದ ದಿವೇಹಿ, ಇಂಗ್ಲಿಷ್, ಮಲಯಾಳಂ, ಅರೇಬಿಕ್, ಹಿಂದಿ, ಲ್ಯಾಟಿನ್, ರಷ್ಯನ್, ಜರ್ಮನ್, ಫ್ರೆಂಚ್, ಸಿಂಹಳೀಯ, ಉರ್ದು ಪರ್ಷಿಯನ್, ಸಂಸ್ಕೃತ, ಮತ್ತು ತಮಿಳು ಭಾಷೆಗಳನ್ನು ಕಲಿತರು. ಅವರೇ ಹೇಳುವ ಹಾಗೆ ಅದರಲ್ಲಿ ೭ ಭಾಷೆಯನ್ನು ಈಗ ಉಪಯೋಗಿಸುತ್ತಿದ್ದಾರೆ ಮತ್ತು ೭ ಭಾಷೆ ಉಪಯೋಗ ಮಾಡಲು ಅವಕಾಶವೇ ಸಿಗುತ್ತಿಲ್ಲ. ಸಮುದ್ರ ಜೀವಶಾಸ್ತ್ರ, ಸಮುದ್ರ ಸಂಶೋಧನೆ, ಭೌಗೋಳಿಕತೆ, ಖಗೋಳ ವಿಜ್ಞಾನ, ಸಾಮಾಜಿಕ ವಿಜ್ಞಾನ, ಹಡಗು ನಿರ್ಮಾಣ, ಶಿಕ್ಷಣ, ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಎಲ್ಲಾ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನ ಬಂಡಾರವೇ ಅವರ ಬಳಿ ಇದೆ. ಮನೆಯಲ್ಲಿ ಕೃಷಿ, ತಮ್ಮ ಕೈಯಿಂದಲೇ ತಮ್ಮ ಮನೆಯ ನಿರ್ಮಾಣ, ಹಡಗು ನಿರ್ಮಿಸಿ ವಿದೇಶಕ್ಕೆ ಯಾತ್ರೆ ಹೀಗೆ ಅದೆಷ್ಟೋ ರೋಮಾಚನ ಹಾಗೂ ಕುತೂಹಲದ ಜೀವನ ಪಾಠ. ಲಕ್ಷ ದ್ವೀಪದ ಮಿನಿಕೋಯ್ ಇವರ ನಾಡು ಸಾಧ್ಯ ಕೇರಳದಲ್ಲಿ ನೆಲೆಸಿದ್ದಾರೆ. ಈ ವರ್ಷ ಭಾರತ ಸರ್ಕಾರ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿದೆ. ದುರಾದೃಷ್ಟವೆಂದರೆ ಮುಸ್ಲಿಂ ಸಮಾಜ ಅವರನ್ನು ಇನ್ನೂ ಗುರುತಿಸಲಿಲ್ಲ. ನಮ್ಮಲ್ಲಿ ಭಾಷಣಗಾರರಿಗೆ ಹೆಚ್ಚಿದರೆ ಲೇಖಕರಿಗೆ ಮಾತ್ರ ಮನ್ನಣೆ. ಒಂದು ಸಹಜ ಪ್ರಶ್ನೆ ಇಂತಹ ಮಹಾನ್ ವಿದ್ವಾಂಸರನ್ನು ಗುರುತಿಸದ ನಮಗಿಂತ ದೊಡ್ಡ ದಡ್ಡರಾರು?

LEAVE A REPLY

Please enter your comment!
Please enter your name here