ಕಥೆ

ಹಂಝ ಮಲಾರ್

ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಜಮಾತ್‍ನ ಅಧೀನಕ್ಕೊಳಪಟ್ಟ ತಾಳಿಪಿಂಡ್ ಕಾಲನಿಯಲ್ಲಿರುವ ನಿಸ್ಕಾರ ಪಳ್ಳಿಯ ಅಧ್ಯಕ್ಷ ಹಾಜಿ ಬದ್ರುದ್ದೀನ್‍ರು ಮಧ್ಯಾಹ್ನದ ಊಟಕ್ಕಾಗಿ ಕೈ ತೊಳೆಯುತ್ತಿದ್ದಾಗ “ಅಸ್ಸಲಾಂ ಅಲೈಕುಂ” ಎಂಬ ಅಪರಿಚಿತ ಧ್ವನಿ ಕೇಳಿ ಬಂದೊಡನೆ ಹಿಂತಿರುಗಿ ನೋಡಿದರು.
ಮನೆಯ ಮೆಟ್ಟಲು ಹತ್ತಿ ದಾರಂದದ ಬಳಿ ಸುಮಾರು 25ರ ಹರೆಯದ ಯುವ ಮುಸ್ಲಿಯಾರ್ ನಿಂತುದನ್ನು ಕಂಡು ಪುಳಕಿತರಾದ ಹಾಜಿ ಬದ್ರುದ್ದೀನ್ “ವ ಅಲೈಕುಂ ಸ್ಸಲಾಂ” ಎನ್ನುತ್ತಾ ನಾಲ್ಕು ಹೆಜ್ಜೆ ಮುಂದಿಟ್ಟು, “ಬನ್ನಿ ಉಸ್ತಾದ್” ಎಂದು ಕರೆದರು.
ಖುಷಿಯಿಂದ ಮನೆಯೊಳಗೆ ಕಾಲಿಟ್ಟ ಮುಸ್ಲಿಯಾರ್, “ನಾನು ಕೇರಳದಿಂದ ಬಂದಿದ್ದೇನೇ ಇಲ್ಲಿನ ಮಸೀದಿಯಲ್ಲಿ ಕೆಲಸ ಖಾಲಿ ಇದೆ ಎಂದು ಗೊತ್ತಾಯಿತು. ಹಾಗೇ ಬಂದೆ” ಎಂದು ಮಲಯಾಳಂನಲ್ಲಿ ತಾನು ಬಂದ ಉದ್ದೇಶವನ್ನು ತಿಳಿಸಿದರು.
ಕಳೆದ ಏಳೆಂಟು ತಿಂಗಳಿನಿಂದ ನಿಸ್ಕಾರ ಪಳ್ಳಿಯಲ್ಲಿ ಸೇವೆ ಸಲ್ಲಿಸಲು ಉಸ್ತಾದರ ಕೊರತೆ ಎದುರಿಸುತ್ತಿದ್ದ ಹಾಜಿ ಬದ್ರುದ್ದೀನ್ ಬಯಸದ ಬಂದ ಭಾಗ್ಯ ಎಂಬಂತೆ “ಬನ್ನಿ ಕೂತ್ಕೊಳ್ಳಿ” ಎಂದು ಕುರ್ಚಿ ತೋರಿಸಿದರು.
ಕೋಯಿಕ್ಕೋಡು ನನ್ನೂರು. ಅರೆಬಿಕ್ ಪದವಿ ಪಡೆದಿದ್ದೇನೆ. ಎರಡು ವರ್ಷ ಕೇರಳದ ಸಣ್ಣ ಮದ್ರಸದಲ್ಲಿ ಮುಅಲ್ಲಿಂ ಆಗಿ ದುಡಿದಿದ್ದೇನೆ. ಇತ್ತೀಚೆಗೆ ಮಂಗಳೂರಿಗೆ ಬಂದಾಗ, ಇಲ್ಲೊಂದು ಹುದ್ದೆ ಖಾಲಿ ಇದೆ ಅಂತ ತಿಳಿಯಿತು. ಹಾಗೇ ಈ ಕಡೆ ಬಂದೆ ಎನ್ನುತ್ತಾ ಅವುಡು ಕಚ್ಚಿದರು.
ಉಸ್ತಾದ್ ಸಂಪೂರ್ಣ ಬೆವೆತು ಹೋದುದನ್ನು ಕಂಡ ಹಾಜಿ ಬದ್ರುದ್ದೀನ್, “ಹುದ್ದೆ ಖಾಲಿ ಇದೆ ಅಂತ ಯಾರು ಹೇಳಿದರು?” ಎಂದು ಕೇಳಿದರು.
“ಹೇಳಿದವರ ಗುರುತು ಪರಿಚಯ ಇಲ್ಲ. ವಿಳಾಸ ಪಡೆಕೊಂಡು ಈ ಕಡೆ ಬಂದೆ” ಎಂದು ಉಸ್ತಾದ್ ನುಡಿದರು.
“ಅವರು ಬೇರೆ ಏನಾದರು ಹೇಳಿದರಾ?”
“ಇಲ್ಲ”
“ಸರಿ, ಎಷ್ಟು ಸಂಬಳ ಕೊಡಬೇಕು?”
“ಅದನ್ನು ನೀವೇ ನಿರ್ಧರಿಸಿದರೆ ಒಳ್ಳೆಯದು”
“ನಮ್ಮದು ಸಣ್ಣ ಮಸೀದಿ. ಜುಮ್ಮಾ ನಮಾಜು ಇಲ್ಲ. ನಿಸ್ಕಾರ ಪಳ್ಳಿಯಾದ ಕಾರಣ, ಪಳ್ಳಿಯ ಒಂದು ಬದಿಯಲ್ಲಿ ಆಸುಪಾಸಿನ ಹತ್ತಿಪ್ಪತ್ತು ಮನೆಯ ಸುಮಾರು 32 ಮಕ್ಕಳು ಮದ್ರಸ ಶಿಕ್ಷಣ ಪಡೆಯುತ್ತಿದ್ದಾರೆ” ಎಂದ ಹಾಜಿ ಬದ್ರುದ್ದೀನ್, “ನಿಮ್ಮ ಹೆಸರು ಹೇಳಲಿಲ್ಲವಲ್ಲಾ” ಎಂದರು.
“ಇಬ್ರಾಹಿಂ ಮುಸ್ಲಿಯಾರ್”- ಉಸ್ತಾದ್ ತೊದಲಿದರು.
“ಯಾವಾಗಿನಿಂದ ಸೇವೆ ಆರಂಭಿಸುವಿರಿ?”
“ನೀವು ಹೇಳಿದ ದಿನ”
“ಬಟ್ಟೆಬರೆ ತಂದಿದ್ದೀರಾ?”
“ಒಂದೆರೆಡು ಜತೆ ಬಟ್ಟೆಬರೆ ಇದೆ. ಸದ್ಯಕ್ಕೆ ಅದು ಸಾಕು”
ಅಷ್ಟರಲ್ಲಿ ಒಬ್ಬ ಕುಡಿಯಲು ಚಹಾ ತಂದಿಟ್ಟ. ಹಾಜಿ ಬದ್ರುದ್ದೀನ್ “ತೆಕ್ಕೊಳ್ಳಿ” ಎಂದ ನಂತರ ಇಬ್ರಾಹಿಂ ಮುಸ್ಲಿಯಾರ್ ಚಹಾ ಕೈಗೆತ್ತಿಕೊಂಡರು. ಒಳಗಿನ ಕಿಟಕಿಯಲ್ಲಿ ಇಣುಕಿದ ಹಾಜಿಯಾರರ ಇಬ್ಬರು ಸಣ್ಣ ಹೆಣ್ಮಕ್ಕಳು “ಉಸ್ತಾದ್‍ಗೆ ಮಾತು ಕಮ್ಮಿ” ಎಂದು ಮೆಲ್ಲನೆ ಉಸುರಿದರು.
“ಏ… ಹಯವಾನೆ… ಎಲ್ಲಿದ್ದೀಯಾ?” ಎಂದು ಹಾಜಿಯಾರರು ಜೋರಾಗಿ ಕೂಗಿದಾಗ, ಹಿತ್ತಲಿನಲ್ಲಿದ್ದ ಇಕ್ಕು ಓಡಿ ಬಂದ.
“ನೋಡು, ಇವರಿಗೆ ಮಸೀದಿಯ ಉಸ್ತಾದರ ರೂಮು ತೋರಿಸು. ಕಪಾಟಿನ ಪಕ್ಕದ ಕುಟ್ಟಿಯಲ್ಲಿ ರೂಮಿನ ತಾಕೋಲು ಇರಬೇಕು. ಬೇಗ ಕರೆದುಕೊಂಡು ಹೋಗು. ಅಧಿಕ ಪ್ರಸಂಗದ ಮಾತುಗಳನ್ನಾಡುವುದು ಬೇಡ” ಎಂದು ಹಾಜಿಯಾರ್ ತಾಕೀತು ಮಾಡಿದರು.
ಇಕ್ಬಾಲ್ ಯಾನೆ ಇಕ್ಕು, ಹಾಜಿಯಾರರ ದೂರದ ಸಂಬಂಧಿಯೂ ಹೌದು. ಬಾಲ್ಯದಿಂದಲೇ ಅವನು ಆ ಮನೆಗೆ ಹೋಗಿ ಬರುತ್ತಿದ್ದ. ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಸ್ವಲ್ಪ ಪೆದ್ದನಂತಿದ್ದ ಇಕ್ಕುವನ್ನು ಸ್ವತ: ಅವನ ತಾಯಿಯೇ ಹಾಜಿಯಾರರ ಚಾಕರಿಗೆ ನಿಲ್ಲಿಸಿದ್ದರು. ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ, ಹಾಜಿಯಾರರು ಕರೆದರೆ ಅವರು ಹಿಂದೆ ಹೆಜ್ಜೆ ಹಾಕುತ್ತಾ, ಹಾಜಿಯಾರರ ಬ್ಯಾಗೋ, ಕೊಡೆಯೋ ಹಿಡಿಯುತ್ತಾ ದಿನ ದೂಡುತ್ತಿದ್ದ ಇಕ್ಕುವಿಗೆ ಸಂಬಳ ಅಂತ ಇರಲಿಲ್ಲ. ಮನೆಯಲ್ಲಿ ಹೊಟ್ಟೆ ತುಂಬಾ ತಿನ್ನುವ, ಒಳ ಪ್ರವೇಶಿಸಿ ತನಗೆ ಬೇಕಾದಂತೆ ಇರುವ ಅವಕಾಶವಿತ್ತು. ಅಲ್ಲದೆ, 2 ಪೆರ್ನಾಳ್ ಹಬ್ಬಕ್ಕೆ ಹೊಸ ಬಟ್ಟೆ ಬರೆಯೂ ಸಿಗುತ್ತಿತ್ತು. ಇದ್ದುದರಲ್ಲೇ ತೃಪ್ತಿ ಪಡೆದ ಇಕ್ಕು ಆ ಮನೆಯ ಒಬ್ಬ ಸದಸ್ಯನೂ ಆಗಿದ್ದ.
“ಬನ್ನಿ ಉಸ್ತಾದ್” ಎಂದು ಅಂಗಳದಲ್ಲಿ ನಿಂತು ಇಕ್ಕು ಕರೆದಾಗ, ಉಸ್ತಾದ್ ತನ್ನ ಪ್ಲಾಸ್ಟಿಕ್ ಚೀಲವನ್ನು ಕೈಗೆತ್ತಿಕೊಂಡು ಹೊರಗೆ ಹೆಜ್ಜೆ ಇಟ್ಟರು. ಹತ್ತು ನಿಮಿಷದಲ್ಲೇ ಅವರು, ಮಸೀದಿಯ ಆವರಣಕ್ಕೆ ಕಾಲಿಟ್ಟಿದ್ದರು. ಅದು ಬಿಕೋ ಎನ್ನುತ್ತಿತ್ತು. ತಾನು ಯಾವುದೋ ನಿರ್ಜನ ಪ್ರದೇಶಕ್ಕೆ ಬಂದಿದ್ದೇನೋ ಎಂಬ ಶಂಕೆ ಇಬ್ರಾಹಿಂ ಮುಸ್ಲಿಯಾರ್‍ಗೆ ಉಂಟಾಯಿತು. ಇಕ್ಕು ರೂಮಿನ ಬೀಗ ತೆಗೆದು ಬಾಗಿಲು ದೂಡಿದಾಗ, ಅದು ಜನವಾಸವಿಲ್ಲದ ರೂಮು ಎಂದು ತಿಳಿಯಲು ಇಬ್ರಾಹಿಂ ಮುಸ್ಲಿಯಾರ್‍ಗೆ ಹೆಚ್ಚೇನೂ ಸಮಯ ಬೇಕಾಗಿಲ್ಲ. ಗಾಳಿ, ಬೆಳಕಿಲ್ಲದ ಆ ಕೋಣೆಯಲ್ಲಿ ಕೆಟ್ಟ ವಾಸನೆ ಇತ್ತು. ಸತ್ತ ಇಲಿಯ ವಾಸನೆಯೂ ಮೂಗಿಗೆ ಬಡಿಯುತ್ತಿತ್ತು. ಇಕ್ಕು ಅಲ್ಲಿ ನಿಲ್ಲಲಾಗದೆ ಹೊರ ಬಂದ.
“ರೂಮು ಶುಚಿಗೊಳಿಸಲು ಸ್ವಲ್ಪ ಸಹಾಯ ಮಾಡುವೆಯಾ?” ಎಂದು ಉಸ್ತಾದರು ಯಾವುದೇ ಮುಲಾಜಿಲ್ಲದೆ ಕೇಳಿದಾಗ, ಇಕ್ಕುವಿಗೆ “ಇಲ್ಲ” ಎನ್ನಲಾಗಲಿಲ್ಲ. ಬೇರೆ ಯಾರಾದರು ಕೇಳಿದ ತಕ್ಷಣ ಇಕ್ಕು ಕೆಲಸ ಮಾಡಲು ತುದಿಗಾಲಲ್ಲಿ ನಿಂತಾನು. ಆದರೆ, ಉಸ್ತಾದ್ ಕೇಳಿದಾಗ ಅರೆ ಮನಸ್ಸಿನಲ್ಲೇ ಒಪ್ಪಿದ. ಯಾಕೆಂದರೆ, ಉಸ್ತಾದರುಗಳಿಂದ ಭಕ್ಷೀಸು ನಿರೀಕ್ಷಿಸುವುದು ತಪ್ಪು. ಕೊಟ್ಟರೆ ಪಡೆಯುವುದು ಕೂಡ ಮುಜುಗರ. ಅಂತೂ ಇಕ್ಕು ಕೋಣೆಯನ್ನು ಶುಚಿಗೊಳಿಸಲು ನಿಂತ. ಉಸ್ತಾದ್ ಕೂಡ ಕೈ ಜೋಡಿಸಿದರು.
“ಈ ಕೋಣೆ ಯಾಕೆ ಹೀಗಾಗಿದೆ? ಮೊದಲ ಉಸ್ತಾದ್ ಕೆಲಸ ಬಿಟ್ಟು ಹೋಗಿ ಎಷ್ಟು ಸಮಯವಾಯಿತು?” ಎಂದು ಇಬ್ರಾಹಿಂ ಮುಸ್ಲಿಯಾರ್ ಪ್ರಶ್ನಿಸಿದರು.
“ಎಂಥ ಹೇಳುವುದು ಉಸ್ತಾದ್. ಈ ನಿಸ್ಕಾರ ಪಳ್ಳಿ ಸ್ಥಾಪನೆಯಾಗಿ 1 ವರ್ಷ ಕೂಡ ಪೂರ್ತಿಯಾಗಲಿಲ್ಲ. ಆಗಲೇ ನಾಲ್ಕು ಉಸ್ತಾದರು ಆಯಿತು. ಯಾರ ಶಾಪವೋ ಏನೋ, ಇಲ್ಲಿ ಕೆಲಸಕ್ಕೆ ನಿಂತವರು ಯಾರೂ ಬರ್ಕತ್ ಆಗಲಿಲ್ಲ. ಒಬ್ಬ ಉಸ್ತಾದರು ರಸ್ತೆ ದಾಟುವಾಗ ಲಾರಿ ಬಡಿದು ಕೊನೆಯುಸಿರೆಳೆದರು. ಇನ್ನೊಬ್ಬರು ಬಸ್ಸಿನಿಂದ ಕೆಳಗೆ ಇಳಿಯುವಾಗ ಮೃತಪಟ್ಟರು. ಮತ್ತೊಬ್ಬರು ಇದೇ ಮಸೀದಿಯ ಹೌಲಿಗೆ ಬಿದ್ದು ಕಣ್ಮಚ್ಚಿದರು. ಇನ್ನೊಬ್ಬರು ದಿಢೀರ್ ನಾಪತ್ತೆಯಾದರು. ತದನಂತರ ಯಾರೂ ಈ ಮಸೀದಿಗೆ ಬಂದು ನಿಲ್ಲಲು ಕೇಳುತ್ತಿಲ್ಲ. ನಿಂತರೂ ವಿಷಯ ತಿಳಿದ ತಕ್ಷಣ ಅಂದರೆ ಒಂದೆರೆಡು ದಿನದಲ್ಲೇ ಕಣ್ಮರೆಯಾಗುತ್ತಾರೆ”-ಇಕ್ಕು ಉಗುಳು ನುಂಗಿದ.
“ಹಾಗೇ ಆಗಲು ಏನು ಕಾರಣ?”
“ಯಾರಿಗೆ ಗೊತ್ತು?. ಇದು ಕೇವಲ ನಿಸ್ಕಾರ ಪಳ್ಳಿ. ಪಕ್ಕದಲ್ಲೇ ಜಮಾತ್ ಪಳ್ಳಿ ಇದೆ. ನಮ್ಮ ಕಾಕ ಇದ್ದಾರಲ್ಲ, ಅವರು ಈ ಪಳ್ಳಿಯ ಅಧ್ಯಕ್ಷರು. ಘಟ್ಟದಲ್ಲಿ ಮರದ ಮಿಲ್ಲು ಇದೆ. ಅದೆಷ್ಟೋ ವರ್ಷ ಅವರು ಅಲ್ಲೇ ನೆಲೆಸಿದ್ದರು. ಇತ್ತೀಚೆಗೆ ಊರಿಗೆ ಬಂದವರು, ಐದು ವಕ್ತ್ ನಮಾಜಿಗೆ ದಿನಾ ಅರ್ಧರ್ಧ ಮೈಲು ನಡೆಯಲು ಸಾಧ್ಯ ಇಲ್ಲ ಎಂದು ಹೇಳುತ್ತಾ ಇಲ್ಲಿ ನಿಸ್ಕಾರ ಪಳ್ಳಿ ಕಟ್ಟಲು ಮುಂದಾದರು. ಜಮಾತಿನ ಆಡಳಿತ ಕಮಿಟಿಯ ಸದಸ್ಯರ ಪೈಕಿ ಕೆಲವರು ವಿರೋಧ ವ್ಯಕ್ತಪಡಿಸಿದರೂ ಇವರು ಕೇಳಲಿಲ್ಲ. ತನ್ನದೇ ಸ್ವಂತ ಜಾಗದಲ್ಲಿ ಯಾರಿಂದಲೂ ನಯಾ ಪೈಸೆ ಪಡೆಯದೆ ಈ ಪಳ್ಳಿ ಕಟ್ಟಿಸಿದರು. ನಂತರ ಅಕ್ಕಪಕ್ಕದ ಹತ್ತಿಪ್ಪತ್ತು ಮನೆಯವರೂ ಮಕ್ಕಳಿಗೆ ಮದ್ರಸಕ್ಕೆ ಹೋಗಲು ಕಷ್ಟವಾಗುತ್ತದೆ ಎಂದು ಹೇಳಿಕೊಂಡು ನಮ್ಮ ಕಾಕನ ಜತೆ ಸೇರಿದರು. ಹಾಗೇ ಇಲ್ಲಿ ಮದ್ರಸ ತರಗತಿಯನ್ನೂ ಪ್ರಾರಂಭಿಸಲಾಯಿತು. ಉಸ್ತಾದರಿಗೆ ಎಲ್ಲರೂ ಸೇರಿ ಸಂಬಳ ಪಾವತಿಸುತ್ತಾರೆ. ತಿಂಗಳಿಡೀ ರಾತ್ರಿ ಊಟ ನಮ್ಮ ಕಾಕರ ಮನೆಯಿಂದಲೇ. ಅದನ್ನು ನಾನೇ ತಂದು ಕೊಡುವುದು. ಉಳಿದ ವೇಳೆ ಇತರರ ಮನೆಯಿಂದ. ಮಸೀದಿಯ ಹೌಲಿನ ಬದಿಯಲ್ಲೊಂದು ಊಟದ ಪಟ್ಟಿ ಇದೆ. ಇದನ್ನು ಓದಿ, ಮದ್ರಸಕ್ಕೆ ಬರುವ ಮಕ್ಕಳಲ್ಲಿ ಬುತ್ತಿ ಕಳುಹಿಸಿಕೊಟ್ಟರೆ ಸಾಕು, ಒಳ್ಳೆಯ ಊಟ ಬರುತ್ತದೆ”-ಹೇಳುತ್ತಲೇ ಇದ್ದ ಇಕ್ಕ, ತಕ್ಷಣ ತನ್ನ ಮಾತನ್ನು ಅರ್ಧಕ್ಕೆ ನಿಲ್ಲಿಸಿ “ಯಾ ಪಡಚ್ಚೋನೆ, ನಾನೆಂಥ ತಪ್ಪು ಮಾಡಿಬಿಟ್ಟೆ. ನಿಮ್ಮಲ್ಲಿ ಯಾವ ವಿಷಯವನ್ನೂ ಹೇಳಬಾರದು ಎಂದು ಕಾಕ ಹೇಳಿದ್ದರು. ಆದರೂ ಮರೆತು ಎಲ್ಲವನ್ನೂ ಹೇಳಿಬಿಟ್ಟೆ. ಉಸ್ತಾದೇ…. ನಾನು ಹೇಳಿದ್ದನ್ನು ಅವರಿಗೆ ಹೇಳಬೇಡಿ” ಎಂದು ಅಂಗಲಾಚತೊಡಗಿದ.
ಇಕ್ಕುವಿನ ಮಾತು ಕೇಳಿ ಕ್ಷಣಕಾಲ ಅಧೀರರಾದ ಇಬ್ರಾಹಿಂ ಮುಸ್ಲಿಯಾರ್ `ಏನು ಮಾಡುವುದು? ತನಗೂ ಆ ಮೊೈಲಾರ್‍ರ ಗತಿಯಾದರೆ? ತಾನು ಇಲ್ಲಿಗೆ ಬಂದು ತಪ್ಪು ಮಾಡಿದೆನೇ?’ ಎಂದು ಆತಂಕಿತರಾದರು.
ಇಕ್ಕು ರೂಮು ಶುಚಿಗೊಳಿಸುವುದನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದ. ಎಲ್ಲ ಕೆಲಸ ಮುಗಿಸಿದ ಮೇಲೆ ಹತ್ತು ರೂಪಾಯಿಯಾದರೂ ಇಕ್ಕುವಿಗೆ ಕೊಡಬೇಕು ಎಂದು ಇಬ್ರಾಹಿಂ ಮುಸ್ಲಿಯಾರ್ ಭಾವಿಸಿದ್ದರು. ಆದರೆ, ಈಗ ಯಾವ ಸೂಚನೆಯೂ ಇಲ್ಲದೆ ಇಕ್ಕು ತಪ್ಪಿಸಿಕೊಂಡ ಕಾರಣ, ತನ್ನ 10 ರೂಪಾಯಿ ಉಳಿಯಿತಲ್ಲಾ ಎಂಬ ಖುಷಿಯೂ ಇಬ್ರಾಹಿಂ ಮುಸ್ಲಿಯಾರ್‍ಗೆ ಆಯಿತು. ಅಂತೂ ರೂಮು ಶುಚಿಗೊಳಿಸಿ, ಮಸೀದಿಯೊಳಗೆ ಕಾಲಿಟ್ಟು ತನ್ನ ಸೇವೆ ಸಲ್ಲಿಸಲು ಇಬ್ರಾಹಿಂ ಮುಸ್ಲಿಯಾರ್ ಸನ್ನದ್ಧರಾದರು.
ಮಗ್ರಿಬ್ ಬಾಂಗನ್ನು ಜೋರಾಗಿಯೇ ಕರೆದರು. ಮಸೀದಿಗೆ ಹೊಸ ಉಸ್ತಾದ್ ಬಂದಿದ್ದಾರೆ ಎಂದು ಸ್ಥಳೀಯರು ತಕ್ಷಣ ಭಾವಿಸಿದರು. ಹಾಗೇ ಎಲ್ಲರೂ ಲಗುಬಗನೆ ಮಸೀದಿಗೆ ಹೆಜ್ಜೆ ಹಾಕಿದರು. ಇನ್ನೂ ಸರಿಯಾಗಿ ಮೀಸೆ ಚಿಗುರದ ಹುಡುಗನಂತೆ ಕಾಣುವ ಇಬ್ರಾಹಿಂ ಮುಸ್ಲಿಯಾರ್‍ರನ್ನು ಆದರದಿಂದ ಉಪಚರಿಸತೊಡಗಿದರು. ಊರು, ತಂದೆ, ತಾಯಿ, ಮನೆಯ ಬಗ್ಗೆ ಒಬ್ಬೊಬ್ಬರೇ ಸಮಯ ಸಿಕ್ಕಾಗಲೆಲ್ಲಾ ಬಂದು ಕೇಳಿ ತಿಳಿದುಕೊಂಡರು. ತನಗೆ ತಿಳಿದಂತೆ ಮಕ್ಕಳಿಗೆ ಮದ್ರಸದ ತರಗತಿಯನ್ನೂ ನಡೆಸಿಕೊಟ್ಟರು. ಕೆಲವೇ ಸಮಯದಲ್ಲಿ ಇಬ್ರಾಹಿಂ ಮುಸ್ಲಿಯಾರ್ ಊರವರ ಪ್ರೀತಿಗೆ ಪಾತ್ರರಾದರು. ಎಲ್ಲರೂ ಅವರನ್ನು ಕೊಂಡಾಡತೊಡಗಿದರು.
ಇಬ್ರಾಹಿಂ ಮುಸ್ಲಿಯಾರ್ ಕೂಡ, ಊರವರ ಜತೆ ಬೆರೆತರು. ಮಸೀದಿಗೆ ಹೊಸ ಕಳೆ ತಂದಿಟ್ಟರು. ಈ ಹಿಂದೆ ಮಸೀದಿಯಲ್ಲಿ ಸೇವೆ ಸಲ್ಲಿಸತೊಡಗಿದ ಉಸ್ತಾದರು 2 ತಿಂಗಳೊಳಗೆ ದುರಂತಕ್ಕೊಳಗಾಗುತ್ತಿದ್ದರು. ಆದರೆ, ಇಬ್ರಾಹಿಂ ಮುಸ್ಲಿಯಾರ್ ಅದಕ್ಕೆ ಅಪವಾದವಾದರು. 3 ತಿಂಗಳ ನಂತರವಂತೂ ಅವರಲ್ಲಿ ಲವಲವಿಕೆ ಹೆಚ್ಚಾಯಿತು. ಅಲ್ಲಾಹುವೇ ಈ ಹುಡುಗನನ್ನು ನಮಗೆ ನಿಧಿಯಂತೆ ದಯಪಾಲಿಸಿದ ಎಂದೆಲ್ಲಾ ಭಾವಿಸಿಕೊಂಡರು. ಈ ಪಳ್ಳಿಗೆ ಯಾವ ಉಸ್ತಾದ್ ಕೂಡ ಸೇವೆ ಸಲ್ಲಿಸಲು ಮುಂದೆ ಬಾರದಿದ್ದರೆ ಖಂಡಿತಾ ಒಂದಲ್ಲ ಒಂದು ದಿನ ಈ ಪಳ್ಳಿಗೆ ನಾವೆಲ್ಲ ಸೇರಿ ಬಾಗಿಲು ಹಾಕಬೇಕಿತ್ತು. ಅದನ್ನು ಅಲ್ಲಾಹು ತಪ್ಪಿಸಿದನಲ್ಲ. ಅಷ್ಟು ಸಾಕು ಎಂದು ಎಲ್ಲರೂ ಖುಷಿಯಿಂದ ತೇಲಾಡಿದರು.
ಊರವರ ವಿಶೇಷ ಪ್ರೀತಿ-ಉಪಚಾರದಿಂದ ಇಬ್ರಾಹಿಂ ಮುಸ್ಲಿಯಾರ್ ಕೂಡ ದಷ್ಟಪುಷ್ಠವಾಗಿ ಬೆಳೆದರು. ಮೊದಲ ಬಾರಿ ನೋಡಿದಾಗ, ಊದು ಕಡ್ಡಿಯಂತಿದ್ದ ಉಸ್ತಾದ್ ಇದೀಗ ಬುರುಡೆಯಂತೆ ಕಾಣುತ್ತಾರೆ. ಒಂದಿಬ್ಬರು ಹೆಣ್ಮಕ್ಕಳ ಹೆತ್ತವರು, ಈ ಉಸ್ತಾದರಿಗೆ ತಮ್ಮ ಮಗಳನ್ನು ಮದುವೆ ಮಾಡಿಸಿಕೊಟ್ಟರೆ ಹೇಗೆ ಎಂದು ಯೋಚಿಸಿದ್ದು ಸುಳ್ಳಲ್ಲ.
ಇಬ್ರಾಹಿಂ ಮುಸ್ಲಿಯಾರ್ ಆಕರ್ಷಣೆಯ ಕೇಂದ್ರ ಬಿಂದುವಾದರು. ಚರ್ಚೆಯ ವಸ್ತುವೂ ಆದರು. ಹಿಂದಿನ ವಿಷಯವೆಲ್ಲಾ ಗೊತ್ತಾದರೆ, ಅವರು ಖಂಡಿತಾ ಊರು ಬಿಟ್ಟು ಓಡಿ ಹೋದಾರು ಎಂದು ಕೆಲವು ಪಡ್ಡೆ ಹುಡುಗರು ಹೇಳಿದ್ದೂ ಗುಟ್ಟಾಗಿ ಉಳಿದಿಲ್ಲ.
ಅದೊಂದು ದಿನ ಇಬ್ರಾಹಿಂ ಮುಸ್ಲಿಯಾರ್ ಇದ್ದಕ್ಕಿದ್ದಂತೆ ಕಾಣೆಯಾದರು. ಅವರು ಎಲ್ಲಿದ್ದಾರೆ, ಎತ್ತ ಹೋಗಿದ್ದಾರೆ? ಅಂತ ಯಾರಿಗೂ ಗೊತ್ತಿಲ್ಲ. ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಬಹುಷ: ಅವರಿಗೂ ಈ ಹಿಂದಿನ ಮೊೈಲಾರ್‍ರಂತೆ ಆಗಿರಬೇಕು. ಒಂದು ವೇಳೆ ಕೆಲಸ ಬಿಟ್ಟು ಹೋಗುತ್ತಿದ್ದರೆ ಒಂದಿಬ್ಬರಲ್ಲಾದರು ಹೇಳಿ ಹೋಗುತ್ತಿದ್ದರು. ಇನ್ನು ಈ ಮಸೀದಿಗೆ ಯಾರೂ ಬಂದು ನಿಲ್ಲಲಾರರು… ಹೀಗೆ ತಲೆಗೊಂದರಂತೆ ಒಬ್ಬೊಬ್ಬರು ಹೇಳುತ್ತಿದ್ದರು. ಇಬ್ರಾಹಿಂ ಮುಸ್ಲಿಯಾರ್ ತನ್ನದೂ ಅಂತ ಅಲ್ಲಿ ಯಾವ ಕುರುಹನ್ನೂ ಬಿಟ್ಟು ಹೋಗಿರಲಿಲ್ಲ. ಹಾಗೇ ಬಿಟ್ಟು ಹೋಗಲು ಅವರೇನೂ ತಂದಿರಲೂ ಇಲ್ಲ. ಒಂದು ಪ್ಲಾಸ್ಟಿಕ್ ಚೀಲವನ್ನು ನೇತಾಡಿಸಿಕೊಂಡು ಬಂದುದನ್ನು ಈಗಲೂ ಇಕ್ಕು ನೆನಪಿಸುತ್ತಾನೆ.
ಯಾವ ಊರಿನ, ಯಾವ ತಾಯಿಯ ಮಗನೋ, ಏನೋ…? ಎಷ್ಟು ಒಳ್ಳೆಯವರು. ಅವರ ಮುಖ ನೋಡಿದ ಮೇಲಾದರೂ ನಾವು ಸತ್ಯ ವಿಷಯ ಹೇಳಬೇಕಿತ್ತು. ಜೀವದ ಮೇಲೆ ಆಸೆ ಇದ್ದಿದ್ದರೆ ಅವರು ಜಾಗ ಖಾಲಿ ಮಾಡುತ್ತಿದ್ದರು. ಈಗ ಎಲ್ಲಿಗೆ ಹೋಗಿದ್ದಾರೆ? ಏನಾಗಿದ್ದಾರೆ? ಅಪಘಾತಕ್ಕೀಡಾದರೇ?, ಅವಘಡಕ್ಕೊಳಗಾದರೇ? ಯಾರಲ್ಲಿ ಕೇಳುವುದು? ಅಂತ ಕಟ್ಟಪುಣಿಯ ಚಾಯಬ್ಬಾಕ ನಾಲ್ಕು ಮಂದಿಗೆ ಕೇಳುವಂತೆ ಪ್ರಶ್ನಿಸುತ್ತಿದ್ದರು.
ಅಧ್ಯಕ್ಷ ಹಾಜಿ ಬದ್ರುದ್ದೀನ್ ಈಗ ಮತ್ತಷ್ಟು ಕಂಗಾಲಾಗಿದ್ದಾರೆ. ಮಸೀದಿ ಕಟ್ಟುವಾಗ ಏನಾದರು ದೋಷ ಆಗಿದೆಯಾ? ಹಿರಿಯರ ಒಪ್ಪಿಗೆ ಇಲ್ಲದೆ ಕಟ್ಟಿದ್ದಕ್ಕೆ ಈ ಶಿಕ್ಷೆಯಾ?ಎಂದು ಪ್ರಶ್ನಿಸುತ್ತಿದ್ದಾಗ, “ಏನಾದರು ಆಗಲಿ, ತಂಙಳ್ ಬಳಿ ಹೋಗಿ. ಪಳ್ಳಿ ಅಲ್ವಾ? ಅಲ್ಲಾಹು ಕೈ ಬಿಡಲಾರ” ಎಂದು ಹೆಂಡತಿ ಮರಿಯಮ್ಮ ಗಂಡನನ್ನು ಸಮಾಧಾನ ಪಡಿಸುತ್ತಿದ್ದರು. ಆದರೆ, ಹಾಜಿ ಬದ್ರುದ್ದೀನ್‍ರ ಮನಸ್ಸು ಅಸ್ತವ್ಯಸ್ತಗೊಂಡಿತ್ತು.
ಒಂದು ವಾರ ಉರುಳಿತು. ಅಧ್ಯಕ್ಷ ಹಾಜಿ ಬದ್ರುದ್ದೀನ್ ಮನೆಯಲ್ಲೇ ಕುಳಿತು ಚಿಂತೆಯಲ್ಲಿ ಮುಳುಗಿದ್ದರು. ಮಕ್ಕಳು ಮದ್ರಸದ ತರಗತಿಯಿಂದ ವಂಚಿತರಾದ ಕಾರಣ ಅವರನ್ನೆಲ್ಲಾ ಹಳೆಯ ಮಸೀದಿಯ ಬಳಿ ಇರುವ ಮದ್ರಸಕ್ಕೆ ಕಳುಹಿಸಲು ಹೆತ್ತವರು ನಿರ್ಧರಿಸಿದ್ದು, ಅವರ ಕಿವಿಗೆ ಬಿದ್ದಿತ್ತು. ಅಲ್ಲದೆ ಇತ್ತೀಚೆಗೆ ಮಸೀದಿಯಲ್ಲಿ ಸಮಯಕ್ಕೆ ಸರಿಯಾಗಿ ಬಾಂಗ್ ಕೂಡ ಮೊಳಗುತ್ತಿಲ್ಲ. ಈವರೆಗೆ ಒಂದಿಬ್ಬರು ಸಣ್ಣ ಮಕ್ಕಳು ಬಾಂಗ್ ಕರೆ ಕೊಡುತ್ತಿದ್ದರು. ಅವರಿಗೆ ಸ್ವಲ್ಪ ಹಣವನ್ನೂ ಹಾಜಿಯಾರರು ಕೊಡುತ್ತಿದ್ದರು. ಈಗ ಆ ಮಕ್ಕಳು ಕೂಡ ಕೈ ಕೊಟ್ಟಿದ್ದಾರೆ. ಹೀಗೆ ಮುಂದುವರಿದರೆ, ಸ್ವತ: ತಾನೇ ಬಾಂಗ್ ಕರೆ ಕೊಡಬೇಕಾದೀತು, ನಮಾಜಿಗೆ ಇಮಾಮ್ ಆಗಿ ನಿಲ್ಲಬೇಕಾದೀತು. ಸ್ವಲ್ಪ ಸಮಯದ ನಂತರ ನಾನೇ ಮೇಲೆ ಹೋಗಬೇಕಾದೀತು. ಅದಕ್ಕಿಂತ ಮುಂಚೆ ಹೆಂಡತಿ ಹೇಳಿದಂತೆ ತಂಙಳ್ ಬಳಿ ಹೋಗಿ ಚರ್ಚಿಸಬೇಕು. ಅವರು ನೀಡಿದ ಪರಿಹಾರದಂತೆ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದಾಗಲೇ, ಅಂಚೆಯವ ಅಂಗಳ ಹತ್ತಿ ಪೋಸ್ಟ್ ಎಂದ.
ಹಾಜಿ ಬದ್ರುದ್ದೀನ್ ಅದನ್ನು ಕೈಗೆತ್ತಿಕೊಂಡು ನೋಡಿದರು. ಯಾರು, ಎಲ್ಲಿಂದ ಕಳುಹಿಸಿದ್ದು ಅಂತ ನಮೂದಿಸಲಿಲ್ಲ. ಮಸೀದಿ ಕಟ್ಟಿದ ನಂತರ ತನಗೆ ಮಸೀದಿ, ಮದ್ರಸದ ಉದ್ಘಾಟನೆ, ಶಂಕುಸ್ಥಾಪನೆ, ಸಂಘ ಸಂಸ್ಥೆಗಳ ಸೇವಾ ಕಾರ್ಯಗಳ ಬಗ್ಗೆಗಿನ ಆಮಂತ್ರಣ ಪತ್ರಗಳು ಬರುವುದು ಸಾಮಾನ್ಯವಾಗಿತ್ತು. ಆರಂಭದಲ್ಲಿ ಉತ್ಸಾಹದಿಂದ ಅದನ್ನು ಒಡೆದು ಓದುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಧ್ಯಾಹ್ನ ಪೋಸ್ಟ್ ಬಂದರೆ, ರಾತ್ರಿಯೋ ಮರು ದಿನವೋ ಒಡೆದು ಓದುತ್ತಿದ್ದರು.
ಆವತ್ತು ಬಂದ ಆ ಪೋಸ್ಟನ್ನು ಕೂಡ ಒಡೆದು ಓದದೆ ಹಾಗೇ ಬಿಟ್ಟಿದ್ದರು. ನಂತರ ಅದನ್ನು ಓದಲು ಮರೆತಿದ್ದರು. ಎರಡು ದಿನದ ನಂತರ ಪೋಸ್ಟ್ ಮ್ಯಾನ್ ಮನೆಯ ಮುಂದೆ ಹಾದು ಹೋದಾಗ ಹಾಜಿಯಾರರಿಗೆ ಮೊನ್ನೆ ಬಂದ ಪೋಸ್ಟ್ ನೆನಪಾಯಿತು. ತಕ್ಷಣ ಅವರು ಅದನ್ನು ಒಡೆದರು. ಹಾಗೇ ಮಲಯಾಳಂನಲ್ಲಿ ಬರೆಯಲ್ಪಟ್ಟ ಆ ಪತ್ರವನ್ನು ಓದ ತೊಡಗಿದರು. ಬದ್ರುದ್ದೀನ್‍ರು ಕೆಲಕಾಲ ಕೊಡಗಿನಲ್ಲಿದ್ದಾಗ ಅಲ್ಲಿ ಕೇರಳಿಗರ ಜತೆ ಬೆರೆತು ಮಲಯಾಳಂ ಓದಲು ಕಲಿತಿದ್ದರು. ಅದೀಗ ಉಪಯೋಗಕ್ಕೆ ಬಂದಿತ್ತು. ಅದನ್ನು ಓದುತ್ತಲೇ ಅವರ ಮೈ ರೋಮಾಂಚನಗೊಂಡಿತ್ತು. ಕೊನೆಯ ಅಕ್ಷರ ಓದಿ ಮುಗಿಸುವಷ್ಟರಲ್ಲಿ ಅವರು ಬೆವೆತು ಹೋಗಿದ್ದರು.
“ಹಾಜಿಯಾರರಿಗೆ,
ಮೊದಲು ನಾನು ನಿಮ್ಮಲ್ಲಿ ಮತ್ತು ಮಸೀದಿಗೆ ಸಂಬಂಧಪಟ್ಟ ಎಲ್ಲರಲ್ಲೂ ಕ್ಷಮೆ ಕೋರುವೆ. ಅದಕ್ಕೂ ಮೊದಲು ನನಗೆ ಅಲ್ಲಿ ಕೆಲಕಾಲ ನೆಲೆಸಲು ಅವಕಾಶ ಮಾಡಿಕೊಟ್ಟ ನಿಮಗೆ ನಾನು ಅಭಾರಿಯಾಗಿದ್ದೇನೆ. ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವ. ಆದರೆ, ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಅದಕ್ಕಾಗಿ ನಾನು ಕೆಲಕಾಲ ಊರು ಬಿಟ್ಟಿರಲು ನಿರ್ಧರಿಸಿ, ಮಂಗಳೂರು ಕಡೆಗೆ ಬಂದೆ. ಸುಮ್ಮನೆ ವಸತಿ, ಊಟದ ಖರ್ಚು ಮಾಡುವುದು ನನಗೆ ಇಷ್ಟವಿರಲಿಲ್ಲ. ನಾನು ಕೋಯಿಕ್ಕೋಡಿನವನಲ್ಲ. ಸದ್ಯಕ್ಕೆ ಯಾವ ಊರಲ್ಲಿದ್ದೇನೆ ಅಂತ ಬೇಡ. ಕಾಲೇಜಿನಲ್ಲಿ ಓದುತ್ತಿದ್ದಾಗ ನನಗೆ ಮುಸ್ಲಿಮ್ ವಿದ್ಯಾರ್ಥಿಗಳ ಪರಿಚಯವಾಗಿತ್ತು. ಅವರು ನಮಾಜ್ ಮಾಡುವುದನ್ನು ನೋಡಿ ತಿಳಿದುಕೊಂಡಿದ್ದೆ. ಅವರ ಜತೆಯೇ ಹೆಚ್ಚಾಗಿ ಬೆರೆಯುತ್ತಿದ್ದ ಕಾರಣ ಇಸ್ಲಾಮಿನ ಬಗ್ಗೆಯೂ ಅರಿತುಕೊಂಡಿದ್ದೆ. ಹಾಗಾಗಿ ಮಂಗಳೂರಿಗೆ ಬಂದವ, ಯಾವುದಾದರು ಸಣ್ಣ ಮಸೀದಿಯಲ್ಲಿ ಕೆಲಕಾಲ ನಿಲ್ಲಲು ಬಯಸಿದೆ. ಉಚಿತ ಊಟ, ವಸತಿಯ ಜತೆಗೆ ಸಂಬಳ ಕೂಡ ಸಿಗುವ ಸಾಧ್ಯತೆ ಇದ್ದ ಕಾರಣ ನನಗೆ ಅದು ಅನಿವಾರ್ಯವಾಗಿತ್ತು. ಮಂಗಳೂರಿನ ಮಸೀದಿಗೆ ಹೋಗಿ ಕೆಲವರಲ್ಲಿ ಕೆಲಸದ ಬಗ್ಗೆ ಮಾತನಾಡಿದೆ. ಅವರು ನಿಮ್ಮ ಊರಿನ ವಿಳಾಸ ಕೊಟ್ಟು ಹೋಗುವಂತೆ ಸೂಚಿಸಿದರು. ಅದರಂತೆ ನಾನು ಬಂದು ನಿಮ್ಮನ್ನು ಕಂಡೆ. ಮಸೀದಿಯ ನಿಕಟಪೂರ್ವ ಉಸ್ತಾದರ ಬಗ್ಗೆ ಆವತ್ತೇ ನಿಮ್ಮ ಮನೆಯ ಇಕ್ಕು ನನಗೆ ತಿಳಿಸಿದ್ದ. ಒಂದು ಕ್ಷಣ ನನಗೆ ಹೆದರಿಕೆಯಾದರೂ ನಾನು ಆ ಪರೀಕ್ಷೆಯಲ್ಲೂ ತೇರ್ಗಡೆಯಾಗಲು ನಿರ್ಧರಿಸಿದೆ. ಗೊತ್ತಿದ್ದೂ ಮೂರುವರೆ ತಿಂಗಳು ಅಲ್ಲಿ ನಿಂತೆ. ನಿಮ್ಮೆಲ್ಲರ ಪ್ರೀತಿಗೆ ಪಾತ್ರನಾದೆ. ನೀವು ಭಾವಿಸಿದಂತೆ ನನಗೆ ಏನೂ ಆಗಲಿಲ್ಲ. ನಾನೀಗ ಜೀವಂತವಾಗಿದ್ದೇನೆ. ಮತ್ತೊಂದು ವಿಷಯ. ನಾನು ಮುಸ್ಲಿಮ್ ಅಲ್ಲ. ನನ್ನ ಜಾತಿ ಅಥವಾ ನಾನು ಅನುಸರಿಸುವ ಧರ್ಮ ಯಾವುದು ಅಂತಲೂ ಬೇಡ. ಹಾಗಾಗಿ ನನ್ನ ಹಿಂದೆ ಜಮಾತ್ ಆಗಿ ನಿಂತ ನೀವು ಮತ್ತೊಮ್ಮೆ ನಮಾಜ್ ಮಾಡುವುದು ಒಳ್ಳೆಯದು. ಮಕ್ಕಳಿಗೆ ನಾನೆಷ್ಟು ಕಲಿಸಿದ್ದೇನೆ ಎಂದು ನನಗೆ ಗೊತ್ತಿಲ್ಲ. ಅದನ್ನು ನೀವು ಪರೀಕ್ಷಿಸಿರಿ. ಇನ್ನು ನನಗೆ ಸಂಬಳದ ಅಗತ್ಯವಿಲ್ಲ. ನನಗೆ ಬೇಕಾದದ್ದು ಒಂದಷ್ಟು ಮಾನಸಿಕ ನೆಮ್ಮದಿ. ಇನ್ನೊಂದಷ್ಟು ಬದಲಾವಣೆ. ಅದು ನನಗೆ ಅಲ್ಲಿ ದಕ್ಕಿದೆ. ನೀವು ನೀಡಿದ ಮೂರು ತಿಂಗಳ ಸಂಬಳವನ್ನು ನಾನು ಈ ಚೆಕ್ ಮೂಲಕ ಕಳುಹಿಸಿಕೊಡುವೆ. ಇನ್ನು ಈ ಚೆಕ್‍ನ ಆಧಾರದ ಮೇಲೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಯಾಕೆಂದರೆ, ನಾನು ಈ ಊರನ್ನು ಕೂಡ ಬಿಟ್ಟು ಹೋಗುವೆ. ಹಾಗಂತ ಇನ್ನೆಂದೂ ನಾನು ಹೀಗೆ ಬೇರೆ ಮಸೀದಿಗೆ ಹೋಗಿ ಅವರಿಗೆ ಅನ್ಯಾಯ ಮಾಡಲಾರೆ. ನನ್ನಿಂದಾದ ತಪ್ಪಿಗೆ ಕ್ಷಮೆ ನೀಡಿ. ಸಾಧ್ಯವಾದರೆ ಜಮಾತರಿಗೂ ತಿಳಿಸಿ. ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು” ಎಂದಿತ್ತು. ಕೆಳಗೆ ಸಹಿ ಎಂದಿತ್ತೇ ವಿನ: ಹೆಸರು ಅಥವಾ ಸಹಿ ಹಾಕಲೂ ಸ್ಥಳವಿರಲಿಲ್ಲ. ಪತ್ರ ತುಂಬಾ ಬರಹಗಳೇ ತುಂಬಿ ಹೋಗಿತ್ತು.
ಹಾಜಿಯಾರರು ಆ ಪತ್ರವನ್ನು ಕಪಾಟಿನಲ್ಲಿ ಭದ್ರವಾಗಿಡಲು ಮುಂದಾದರು. ಅಲ್ಲದೆ, ಯಾರಲ್ಲೂ ಹೇಳುವುದು ಬೇಡ ಎಂದು ನಿರ್ಧರಿಸಿದರು. ಈ ಕಾಗದದ ಬಗ್ಗೆ ಹೇಳಿದರೆ ಮತ್ತೆ ಅದೊಂದು ರಂಪಾಟವಾದೀತು. ಎಲ್ಲವನ್ನೂ ಅಲ್ಲಾಹು ತಿಳಿದುಕೊಂಡಿರುತ್ತಾನೆ. ಅಷ್ಟು ಸಾಕು ಎನ್ನುತ್ತಾ ಸುಮ್ಮನಾದರು.
ಹಾಗೇ, ಕುರ್ಚಿಗೆ ಒರಗಿ ಕೂರುತ್ತಾ “ಯಾ ಅಲ್ಲಾಹ್, ಈ ಕಾಲದಲ್ಲೂ ಇಂಥವರು ಇದ್ದಾರೆಯೇ? ಇದು ವಂಚನೆಯಾ? ವಂಚನೆಯಾಗಿದ್ದರೆ ಸಂಬಳ ಮರಳಿಸುತ್ತಿದ್ದರೇ? ಅಂತೂ ಆತನ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು” ಎಂದು ತನ್ನಲ್ಲೇ ಹೇಳಿಕೊಂಡು ಸುಮ್ಮನಾದರು.
***

LEAVE A REPLY

Please enter your comment!
Please enter your name here