ಕವನ

  • ನಸೀಬ ಗಡಿಯಾರ್

ಮತ್ತೆ ಮತ್ತೆ ಅದೇ ಹಳೆಯ ನೆನಪ ಕೆಣಕದಿರು ಮನಸೇ

ಅತ್ತು ಬಿಡಲು ಕಣ್ಣ ಹನಿಯು ಬತ್ತಿ ಹೋಗಿದೆ
ಕಾಣಲು ಕನಸಿನ ಕದ ಮುಚ್ಚಿ ಹೋಗಿದೆ
ಬರೆದು ವರ್ಣಿಸಲು ಬಳಪವು ನೀ ಕವಿ ಅಲ್ಲ ಎನ್ನುತಿದೆ

ಒಂದು ಬಾರಿ ಹಿಂದಿರುಗಿ ನೋಡಲು ನಕ್ಕು ನಲಿದ
ನೆಮ್ಮದಿಯ ದಿನದ ಹಾದಿಯೂ ದುರಸ್ತಿಗೊಂಡಿದೆ
ಕುಟುಂಬವೆಂಬ ಜೇನಿನ ಗೂಡನು ಸವಿಯಲು ಹೊರಟಾಗ…
ಆಸ್ತಿ ಎಂಬ ಹೆಸರಲಿ ನಾಲ್ಕು ದಿಕ್ಕಾಗಿದೆ

ಇನ್ಯಾರು ನಮ್ಮವರು?
ಇನ್ನೆಲ್ಲಿ ನಮ್ಮವರು?

ನೆನಪಾಯಿತು ಬಾಲ್ಯದ ತುಂಟ ಗೆಳೆಯರು
ಆದರೆ ಅವರೆಲ್ಲರು ಹಣದ ಗುಂಗಿನಲ್ಲಿ ತೇಲುತ್ತಿರುವರು
ಕೊನೆ ಬಾರಿ ಪ್ರೇಯಸಿಯ ನೋಡ ಹೊರಟೆ
ಆಕೆಯು ಜಗತ್ತಿಗೆ ವಿದಾಯ ಹೇಳಿ ಆಯ್ತು ವರ್ಷ ಹತ್ತಾರು.

ಇನ್ಯಾರು ನನ್ನವರು?
ಇನ್ನೆಲ್ಲಿ ನನ್ನವರು?

ಕೇಳುವೆ ನಿನಗೊಂದು ಪ್ರಶ್ನೆ ಮನವೇ?
ನನ್ನ ಮುಗ್ದ ನೆನಪೆಲ್ಲವು ಒಂದು ನೆಪವೇ?
ನಾ ನೆಪವೆಂದೇ ಒಪ್ಪುವೆ
ಕಾರಣ ನನ್ನ ಸಿಹಿ ನೆನಪೆಲ್ಲವು ಸದ್ದಿಲ್ಲದೆ ಸತ್ತಿವೆ!

LEAVE A REPLY

Please enter your comment!
Please enter your name here