(ಕುಸುಮ ಷಟ್ಪದಿ)

ಬರೆದವರು: ನಾಗರಾಜ ಖಾರ್ವಿ

  ಪದವೀಧರ ಶಿಕ್ಷಕ
 ಸ.ಹಿ.ಪ್ರಾ.ಶಾಲೆ. ಕಲ್ಮಂಜ. ಬಂಟ್ವಾಳ

ಹುಟ್ಟಿನೀಂ ಕುಲವಲ್ಲ
ಪಟ್ಟಿರ್ದು ಫಲಮಿಲ್ಲ
ನೆಟ್ಟ ತರು ನೆಟ್ಟವಗೆ ಫಲಗೊಡುವುದೇ?
ಬಿಟ್ಟು ಬಿಡುತಲಿ ಮೋಹ
ನಟ್ಟಿರುಳು ಅಲೆದಾಡಿ
ಪಟ್ಟು ಬಿಡದೆಯೆ ಜಾನ ಯೋಗಿ ಪಡೆವ||

ಕಣ್ಣುಗಾಣದ ಕುರುಡ
ಬಣ್ಣ ತಿಳಿವುದ ಕಾಣೆ
ಕಣ್ಣಿರುವ ಮನುಜಂಗೆ ಜಗವೆ ಬಣ್ಣ|
ಬೆಣ್ಣೆ ಮಾತನ್ನುಸುರಿ
ಮಣ್ಣೆರೆಚುವವನಧಮ
ಕಣ್ಣಿದ್ದು ಕುರುಡಾಗೊ ಮೌನ ಹೇತು||

ಲೋಕದೊಲುಮೆಯು ಬೇಕು
ನಾಕದಾಸೆಯುಬೇಕು
ಮೂಕನಾಗಿರಬೇಕು ಮೂದಲಿಕೆಗೆ|
ಸಾಕೆಂಬ ಮನಬೇಕು
ಬೇಕುಗಳ ಬಿಡಬೇಕು
ಶೋಕಿ ಬಾಳುವೆ ಬಿಸುಟು ಜೀಕಬೇಕು||

ನುಡಿಯಂತೆ ನಡೆಬೇಕು
ನುಡಿಯೊಳಗೆ ಹಿತಬೇಕು
ಮಿಡಿಯುತಲಿ ಕಣ್ಣೊರಸೊ ಗುಣವುಬೇಕು|
ನಡೆದ ಹೆಜ್ಜೆಯುಬೇಕು
ದುಡಿದ ಬೆವರಿರಬೇಕು
ಕಿಡಿಕಾರಿ ಸಿಡುಕದಿಹ ಮನವುಬೇಕು||

ಕೋಟೆ ಕೆಡಗಿದ ರಾಜ
ಲೂಟಿ ಹೊಡೆದಿಹ ಭೂಪ
ಮೂಟೆ ಹೊರುವನೆ ಕೊನೆಗೆ ಪಾಪತುಂಬಿ|
ಬೂಟಾಟಿಕೆಯೆಂಬೋ
ನಾಟಕದಿ ರಂಜಿಸುತ
ದಾಟಬಲ್ಲನೆ ಭವವನೀ ಬುವಿಯೊಳು||

ನೆಲದಿ ಹುದುಗಿದ ಬೀಜ
ನಿಲಲು ಹವಣಿಸುತಿಹುದು
ಮಲಮೂತ್ರ ಕೊಳಚೆಯೊಳ್ ಭೇದವಿರದು|
ಸಲಹುವವ ದಯೆದೋರೆ
ಹುಲುಸಾಗಿ ತಾನ್ ಬೆಳೆದು
ಫಲವೆರೆದು ತೋರುವನು ತನ್ನತನವ||

ಕರೆಯ ನೀರನು ಕೆರೆಗೆ
ಹರಿಯಗೊಡುವವ ನರನು
ಧರೆಯ ತವನಿಧಿ ಬಯಸೆ ಬಾಳಲೇನು|
ಬರಿದುಗೊಳುತಿರೆ ಕರವು
ಪೊರೆಯುವವ ಮೇಲಿಹನು
ಮೆರೆವ ಸಂಪದನೀವ ದಿಟವಲ್ಲವೇ||

ಅತಿಯಾಸೆ ಪಡಲೇನು
ಮತಿಯಿರದೆ ಕೆಡಲೇನು
ಚಿತೆಯಲ್ಲಿ ಸುಡುವಾಗ ತಾ ಬರುವುದೇ?
ಮತವಿರಲಿ, ಪಥವಿರಲಿ
ಜೊತೆಯಿರದು ಯಾತ್ರೆಯಲಿ
ರಥದೊಳಗೆ ರಥಿಕನಿಹ ಮುಂದೆಸಾಗು||

ನುಡಿ ಮೆಚ್ಚಿಕೊಳಬೇಕು
ನಡೆಯಲ್ಲಿ ಗುಣಬೇಕು
ಬಿಡದಂತೆ ಕಜ್ಜವನು ಗೈಯಬೇಕು|
ಕೆಡೆನುಡಿದು ಕೆಡಲೇಕೆ?
ದುಡಿಯದಿಹ ಬದುಕೇಕೆ?
ಮಿಡಿಯದಿಹ ಮನವಿದ್ದು ಫಲವೇನಿದೆ??

ಕಳ್ಳಿಗಿಡದಿಂ ಸುರಿವ
ಬೆಳ್ಳನೆಯ ನೊರೆಹಾಲೊ
-ಳುಳ್ಳ ವಿಷವನುಣುತಲಿ ಬದುಕಬಹುದೇ?
ಸುಳ್ಳನುಸುರುವ ಮಂದಿ
ಕಳ್ಳಿ ವಿಷದಂತಿರ್ಕು
ಪೊಳ್ತು ಸರಿಯುವ ಮುನ್ನ ತಿಳಿಪರರನು||

LEAVE A REPLY

Please enter your comment!
Please enter your name here