ಲೇಖಕರು:ವೈ.ಎನ್.ಕೆ, ಉಡುಪಿ(ರಾಜ್ಯ ಶಾಸ್ತ್ರ, ಸ್ನಾತ್ತಕೋತ್ತರ ವಿದ್ಯಾರ್ಥಿ)

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ಮೈತ್ರಿ ಅಸ್ತಿತ್ವಕ್ಕೆ ಬಂದು ಇಡೀ ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಅಣಕಿಸುವಂತ ನಾಟಕ ನಡೆದಿದೆ. ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ ಮೈತ್ರಿ ಮಾಡಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರಕಾರ ರಚಿಸಬೇಕೆಂದು ಶುಕ್ರವಾರ ರಾತ್ರಿ ಎಲ್ಲ ಸಿದ್ಧತೆ ನಡೆದಿತ್ತು. ಆದರೆ ಬೆಳಿಗ್ಗೆ ಬಿಜೆಪಿಯಾಡಿದ ಆಟದಿಂದಾಗಿ ಎನ್.ಸಿ.ಪಿ ಪಕ್ಷದ ಮುಖಂಡನ ಒಪ್ಪುಗೆಯಿಲ್ಲದಿದ್ದರೂ ಅಜಿತ್ ಪವಾರ್’ರೊಂದಿಗೆ ಸೇರಿ ಬಿಜೆಪಿ ಸರಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ದೇವೆಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣಾ ಪೂರ್ವ ಬಿಜೆಪಿಯ ವಿರುದ್ಧ ಕಿಡಿಕಾರುತ್ತ ಗೆದ್ದ ಕೆಲವು ಶಾಸಕರು ಇದೀಗ ಅಧಿಕಾರದ ಲಾಲಸೆಗೆ‌ ಬಿಜೆಪಿಯ ಹಿಂದೆ ಓಡಿರುವುದು ಸ್ಪಷ್ಟವಾಗಿದೆ.

ಯಾವುದೇ ಕಾರಣಕ್ಕೂ ಭ್ರಷ್ಟಾಚಾರಿ ಎನ್.ಸಿ.ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಘಂಟಾ ಘೋಷವಾಗಿ ಘೋಷಿಸಿದ ‘ನಾ ಖಾನೆ ದೂಂಗಾ, ನಾ ಖಾವೂಂಗಾ’ ಪಕ್ಷದ ಮುಖಂಡ ದೇವೆಂದ್ರ ಫಡ್ನವಿಸ್ ಹಿಂಬಾಗಿಲಿನ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗಾಗಲೇ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಹೇಳಿಕೆಕೊಟ್ಟು ಈ ಮೈತ್ರಿ ಬಹುಮತ ಸಾಧಿಸುವುದಿಲ್ಲ. ಅಜಿತ್ ಪವಾರ್ ಬಳಿ 10-11 ಶಾಸಕರು ಬಿಟ್ಟರೆ ಯಾರು ಇರಲಿಕ್ಕಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನೆಲದ ಕಾನೂನಿಗೆ ನಿರಂತರವಾಗಿ ಅಗೌರವ ಮಾಡುತ್ತಿದ್ದು ಕರ್ನಾಟಕದಲ್ಲೂ ಇದೇ ಮಾದರಿಯ ನಾಚಿಕೆ ರಹಿತವಾಗಿ ಆಡಳಿತ ಪಕ್ಷದ ಶಾಸಕರನ್ನು ಸೆಳೆದು ಅಧಿಕಾರ ಕಸಿದುಕೊಂಡಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಅಧಿಕಾರ ದಾಹ ಮುಂದುವರಿಸಿದ್ದು‌ ಸ್ಪಷ್ಟವಾಗುತ್ತಿದೆ.50:50 ಸೂತ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಶಿವಸೇನೆ ತಮ್ಮ ಅಧಿಕಾರದ ಲಾಲಸೆಗೆ ಜನರ ಹಿತಾಸಕ್ತಿ ಬದಿಗೊತ್ತಿ ಪಕ್ಷಗಳ ಹಿಂದೆ ಅಲೆದಾಡಿದ್ದು ಎಲ್ಲರೂ ನೋಡಿರುವಂತಹದೇ. ಇದೀಗ ಬಿಜೆಪಿಯ ನಾಚಿಕೆಹೀನ ನಡೆಯಿಂದ ಇಡೀ ಮಹಾರಾಷ್ಟ್ರದತ್ತ ದೇಶದ ಕಣ್ಣು ಬಿದ್ದಿದ್ದು ಬಿಜೆಪಿ ಬಹುಮತ ಸಾಬೀತು ಮಾಡುವುದು ಅಷ್ಟು ಸುಲಭವಲ್ಲವೆಂಬುವುದು ಎನ್.ಸಿ.ಪಿ ಶಾಸಕಾಂಗ ನಾಯಕನ ಸ್ಥಾನದಿಂದ ಅಜಿತ್ ಪವಾರ್ ರನ್ನು ಕಿತ್ತೆಸೆದ ನಂತರ ಸ್ಪಷ್ಟವಾಗುತ್ತಿದೆ. ಅದರೊಂದಿಗೆ ಬಿಜೆಪಿಯೊಂದಿಗೆ ಕೈಜೋಡಿಸಿದ ಶಾಸಕರು ಅನರ್ಹತೆಯ ಭೀತಿ ಕೂಡ ಎದುರಿಸುತ್ತಿದ್ದಾರೆ.

ಜನರು ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಚುನಾಯಿಸಿ ವಿಧಾನ ಸಭೆಗೆ ಕಳುಹಿಸಿದರೆ ಅಧಿಕಾರಕ್ಕಾಗಿ ಜನರ ಹಿತಾಸಕ್ತಿಯನ್ನು ಮಾರಿ ಯಾವ ರೀತಿ ರಾಜ್ಯದಲ್ಲಿ ಅರಾಜಕತೆ ಉಂಟು ಮಾಡುತ್ತಾರೆ ಎಂಬುವುದಕ್ಕೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಪಕ್ಷಗಳು ದೇಶದಲ್ಲಿ ಅಲ್ಪ ಸ್ವಲ್ಪ ಉಳಿದಿರುವ ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ ಈ ರೀತಿಯ ಆಟ ಕರ್ನಾಟಕ, ಗೋವಾ, ಹರ್ಯಾಣ ಸೇರಿದಂತೆ ಕೆಲವು ರಾಜ್ಯದಲ್ಲಿ ಆಡಿ ತನ್ನ ಹೊಲಸುತನ ಪ್ರದರ್ಶಿಸಿ ಆಗಿದೆ. ಇದೀಗ ಮಹಾರಾಷ್ಟ್ರ ಅದಕ್ಕೆ ಸೇರ್ಪಡೆಯಾಗಿದೆ.

ಇನ್ನು ಮಾಧ್ಯಮಗಳು ಶಿವಸೇನೆ, ಎನ್.ಸಿ.ಪಿ, ಕಾಂಗ್ರೆಸ್ ಮೈತ್ರಿಯನ್ನು ಅವಕಾಶವಾದಿಯೆಂದು ಬಣ್ಣಿಸುತ್ತಿದ್ದವು.‌ಆದರೆ ಇದೀಗ ಬಿಜೆಪಿ ಮತ್ತುವ ಅಜಿತ್ ಪವಾರ್ ಅನೈತಿಕ ಮೈತ್ರಿಯನ್ನು ‘ಮಾಸ್ಟರ್ ಸ್ಟ್ರೋಕ್’ ಎಂದು ಬಣ್ಣಿಸುತ್ತಿದೆ. ಇದರಿಂದಲೇ ಅರ್ಥವಾಗುತ್ತದೆ ದೇಶದಲ್ಲಿ ಜನರ ಹಿತಾಸಕ್ತಿಯ ಮೇಲೆ ಆಸಕ್ತಿ ವಹಿಸಬೇಕಿದ್ದ ಪಕ್ಷಗಳು ಅಧಿಕಾರಕ್ಕಾಗಿ ತಲೆ ಹಿಡಿಯುತ್ತಿದ್ದರೆ, ಇತ್ತ ರಾಜಕಾರಣಿಗಳ ಕಾಳ ದಂಧೆಗೆ ಬ್ರೇಕ್ ಹಾಕ ಬೇಕಿದ್ದ ವಸ್ತು ನಿಷ್ಠ ವರದಿ ಪ್ರಕಟಿಸಬೇಕಿದ್ದ ಮಾಧ್ಯಮಗಳು ಎಂಜಲ್ ಕಾಸಿಗಾಗಿ ತಮ್ಮ ಜವಾಬ್ದಾರಿಯುತ ಕರ್ತವ್ಯ ಮರೆತು ‘ಮಾಲಿಕ ಸಾಕಿದ ನಾಯಿ’ಯಂತೆ ವರ್ತಿಸುತ್ತಿರುವುದು ನಿಜಕ್ಕೂ ಭಾರತದಂತಹ ಪ್ರಜಾಪ್ರಭುತ್ವ ದೇಶದ ಪಾಲಿಗೆ ಮಾರಕವಾಗಿದೆ.

LEAVE A REPLY

Please enter your comment!
Please enter your name here