ಪುಸ್ತಕ ವಿಮರ್ಶೆ

ಇಸ್ಮತ್ ಪಜೀರ್

ಇತ್ತೀಚೆಗೆ ನನಗೆ ಮೂರು ಮಂದಿ ಲೇಖಕರು ಸೂಫಿಸಂಗೆ ಸಂಬಂಧಿಸಿದ ಕೃತಿಗಳನ್ನು ಕಳುಹಿಸಿದ್ದರು. ನನ್ನ ಗುರುಸಮಾನರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರು ತಮ್ಮ “ ಸೂಫಿ ಆಧ್ಯಾತ್ಮ ಚಿಂತನೆಗಳು” , ಸ್ವಾಲಿಹ್ ತೋಡಾರ್ ಅವರು ಅನುವಾದಿಸಿದ “ಅಜ್ಞಾತ ಭಾರತ” ಮತ್ತು ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿ ಅವರು ತಮ್ಮ “ಪ್ರೇಮ ಸೂಫಿ ಬಂದೇ ನವಾಝ್” ಕೃತಿಯನ್ನು ಕಳುಹಿಸಿದ್ದರು. ರಿಯಾಝ್ ಸಾಬ್ ಮತ್ತೆ ಮತ್ತೆ ಕಾಲ್ ಮಾಡಿ ಓದಿ ಆಯಿತಾ. ಎಂದು ಕೇಳುತ್ತಿದ್ದುದರಿಂದ ಈ ಸರದಿಯಲ್ಲಿ ಕೊನೆಯದಾಗಿ ಕೈ ತಲುಪಿದ ರಿಯಾಝ್ ಸಾಬರ ಕೃತಿಯನ್ನೇ ಮೊದಲು ಓದಿ ಮುಗಿಸಿದೆ.

ಈ ಕೃತಿಯನ್ನು ಲೇಖಕರು ಒಟ್ಟು ಹನ್ನೊಂದು ಭಾಗಗಳಾಗಿ ವಿಭಾಗಿಸಿದ್ದರೂ ಅದರ ಮೊದಲ ಐದು ವಿಭಾಗಗಳು ಈ ಕೃತಿಯ ಪಠ್ಯಗಳಾಗಿವೆ. ಮೂಲತಃ ಸೂಫಿ ಆಧ್ಯಾತ್ಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ನನಗೆ ಸೂಫಿಸಂನ ಕೆಲವು ವ್ಯಾಖ್ಯೆಗಳು ಗೊತ್ತಿತ್ತಾದರೂ ತಸವ್ವುಫ್‌ನ ಹೆಚ್ಚಿನ ವಿಧಾನಗಳ ಬಗ್ಗೆ ನಾನು ತೀರಾ‌ ಅಜ್ಞ ಎಂದು ನನಗೆ ಗೊತ್ತಾಗಿದ್ದೇ ಈ ಕೃತಿಯನ್ನು ಓದಿದ ಬಳಿಕ. ನಾನು ಕರಾವಳಿ ಕರ್ನಾಟಕದ ಬ್ಯಾರಿಯಾದುದರಿಂದ ಇಲ್ಲಿನ ಮುಸ್ಲಿಮರಲ್ಲಿ ಕೇರಳೀಯತೆಯ ಪ್ರಭಾವ ದಟ್ಟವಾಗಿದೆ ಮತ್ತು ನಮ್ಮ ಕರ್ನಾಟಕದ ಇತರ ಯಾವುದೇ ಪ್ರದೇಶಕ್ಕೆ ಹೋಲಿಸಿದರೂ ಇಲ್ಲಿನ ಮುಸ್ಲಿಮರು ತುಸು ಹೆಚ್ಚೇ ಧಾರ್ಮಿಕರು ಮತ್ತು ಅಷ್ಟೇ ಸುಧಾರಣಾವಾದಿಗಳು. (ಇಲ್ಲಿ‌ ಸುಧಾರಣಾವಾದಕ್ಕೆ ವಿಪರೀತ ಅರ್ಥ ಕಲ್ಪಿಸಬೇಕಾದುದಿಲ್ಲ.)
ಕರಾವಳಿಗೆ ಇಸ್ಲಾಮ್ ಬಂದಿದ್ದು ನೇರವಾಗಿ ಅರೇಬಿಯಾದಿಂದ ಎನ್ನುವುದು ಇಲ್ಲಿ ಉಲ್ಲೇಖನೀಯ.ಹಾಗೆ ನೋಡ ಹೋದರೆ ಭಾರತದಲ್ಲಿ ಮೊಟ್ಟ ಮೊದಲು ನೆಲೆಯೂರಿದ ಮುಸ್ಲಿಂ ಧರ್ಮಪ್ರಚಾರಕರ ತಂಡದ ನೇತೃತ್ವ ವಹಿಸಿದ್ದ ಮಾಲಿಕ್ ಬಿನ್ ದೀನಾರ್ ಅವರೇ ಸ್ವತಃ ಓರ್ವ ವಲಿಯ್ಯ್ ಆಗಿದ್ದರು. ಅವರು ಪ್ರವಾದಿ (ಸ)ರೊಂದಿಗೆ ಬಾಳಿ ಬದುಕಿದ ಪ್ರವಾದಿ ಅನುಯಾಯಿಯಾಗಿರುವುದರಿಂದ ಅವರಿಗೆ ವಲಿಯ್ಯುಲ್ಲಾಹ್ ಎಂಬುವುದಕ್ಕಿಂತ ಹೆಚ್ಚಿನ ಮಹತ್ವವಿದೆ. ಸೂಫಿಸಂ‌ ಇಸ್ಲಾಮಿನ ಭಕ್ತಿ ಪಂಥ. ಸೂಫಿಸಂಗೆ ಇಸ್ಲಾಮಿನ ಹೊರತಾದ ಬಣ್ಣ ಕೊಡುವುದು ಅರ್ಥಹೀನ. ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾದ ಇನ್ನೊಂದು ವಿಚಾರವೇನೆಂದರೆ ಇಸ್ಲಾಮಿನ ಪವಿತ್ರ ಗ್ರಂಥವಾದ ಖುರ್‌ಆನಿನಲ್ಲಿ ಸೂಫಿ ಎಂಬ ಪದವೇ ಇಲ್ಲ. ಬದಲಾಗಿ ವಲಿಯ್ಯ್ ಅಥವಾ ಅವುಲಿಯಾ ಎಂಬ ಉಲ್ಲೇಖಗಳು ಮಾತ್ರ ಇವೆ. ಅವುಲಿಯಾಅ್ ಎಂದರೆ ಅಲ್ಲಾಹನ ಸ್ನೇಹಿತರು. ಈ ಅವುಲಿಯಾ ಎನ್ನುವವರು ಪ್ರವಾದಿ (ಸ) ಗಿಂತಲೂ ಮುಂಚೆಯೂ ಇದ್ದರು. ಪವಿತ್ರ ಖುರ್‌ಆನಿನಲ್ಲೇ ಸಿಗುವ ಒಂದು ಉದಾಹರಣೆ ನೋಡೋಣ. ಪ್ರವಾದಿ ಮುಹಮ್ಮದ್ (ಸ) ಗಿಂತ ಸುಮಾರು ಸಾವಿರದ ಆರುನೂರು ವರ್ಷಗಳಿಗಿಂತ ಮುಂಚೆ ಬಾಳಿ ಬದುಕಿದ್ದ ಪ್ರವಾದಿ ಸುಲೈಮಾನ್ (ಅ)ರ ಕಾಲದ ಆಸಿಫ್ ಬಿನ್ ಬರ್ಕಿಯಾ ಎಂಬ ಅವುಲಿಯಾರ ಉಲ್ಲೇಖವೂ ಖುರ್‌ಆನಿನಲ್ಲಿದೆ. ಅವರಿಗೆ ಅಲ್ಲಾಹನು ಕರುಣಿಸಿದ ಒಂದು ವಿಶೇಷ ಶಕ್ತಿಯ ಕುರಿತಂತಹ ವಿವರಣೆಗಳೂ ಖುರ್‌ಆನಿನಲ್ಲಿವೆ. ಸಾವಿರಾರು ಮೈಲುಗಳ ದೂರದಲ್ಲಿದ್ದ ಬಿಲ್ಕೀಸ್ ರಾಣಿಯ ಅರಮನೆಯಲ್ಲಿದ್ದ ಆಕೆಯ ಸಿಂಹಾಸನವನ್ನು ಕಣ್ಮುಚ್ಚಿ ತೆರೆಯುವುದರೊಳಗಾಗಿ ಮಹಾಚಕ್ರವರ್ತಿಯೂ ಆಗಿದ್ದ ಪ್ರವಾದಿ ಸುಲೈಮಾನ್ (ಅ)ರ ಆಸ್ಥಾನಕ್ಕೆ ಆಸಿಫ್ ಬಿನ್ ಬರ್ಕಿಯ್ಯಾ ತಲುಪಿಸುತ್ತಾರೆ.

ವಲಿಯುಲ್ಲಾಅಹ್ ಮತ್ತು ಸೂಫಿಗಳೂ ಒಂದೇ ಎಂಬ ಅಭಿಪ್ರಾಯವನ್ನು ಉಲೆಮಾಗಳು ತಾಳುತ್ತಾರೆ. ಆದರೆ ಸೂಫಿ ಎಂಬ ಹೆಸರು ಬಂದಿರುವುದು ಮಾತ್ರ ಪ್ರವಾದಿವರ್ಯರ ಕಾಲಾನಂತರ. ಆ ಬಳಿಕವೇ ಬೇರೆ ಬೇರೆ ಸೂಫಿ ತ್ವರೀಖತ್‌ಗಳೂ ಹುಟ್ಟಿಕೊಂಡವು. ಸೂಫಿ ಎಂಬ ಪದ ಸೂಫ್ ಎಂಬುವುದರಿಂದ ಹುಟ್ಟಿಕೊಂಡಿತೆಂದೂ ಹೇಳಲಾಗುತ್ತದೆ. ಸೂಫ್ ಎಂದರೆ ಒಂದು ವಿಧದ ಕಂಬಳಿ. ಒಂದು ವಿಧದ ವಿಶಿಷ್ಟ ಕಂಬಳಿ ಹೊದ್ದು ಆಡಂಬರದ ವಸ್ತ್ರಧಾರಣೆಗಳಿಂದ ಸೂಫಿಗಳು ದೂರವಿರುತ್ತಿದ್ದುದರಿಂದ ಅಥವಾ ವಿರಾಗಿಗಳಾಗಿರುವುದರಿಂದ ಸೂಫ್ ಎಂಬ ಪದದ ಉಲ್ಲೇಖಕ್ಕೆ ಹೆಚ್ಚಿನ ಮಾನ್ಯತೆ ಕೊಡಲಾಗುತ್ತದೆ.ಸೂಫಿಯಾ, ಸುಫಾ, ಸಾಫ್ ಎಂಬುವುದರಿಂದಲೂ ಹುಟ್ಟಿಕೊಂಡಿರಬಹುದೆಂಬ ಅಭಿಪ್ರಾಯವನ್ನು ಪ್ರಸ್ತುತ ಲೇಖಕರು ತನ್ನ ಅಧ್ಯಯನಗಳ ಪ್ರಕಾರ ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಜುನೈದಿಯಾ ತ್ವರೀಕತ್‌ನ ಮೂಲ ಪುರುಷರಾದ ಜುನೈದ್ ಬಗ್ದಾದಿಯವರ ಪ್ರಕಾರ ತಸವ್ವುಫ್ ಎಂಟು ವಿಶೇಷತೆಗಳನ್ನು ಇಲ್ಲಿ ಲೇಖಕರು ಉಲ್ಲೇಖಿಸಿದ್ದಾರೆ.
೧.ದಾನಧರ್ಮ
೨.ಸಂತುಷ್ಟಿ
೩.ಸಹನೆ
೪.ಸಂಕೇತ
೫.ಶ್ರೇಷ್ಟತೆ
೬.ಸೂಫ್ ಧಾರಣೆ
೭. ಲೋಕಸಂಚಾರ
೮. ಫಕೀರತ್ವ
ಈ ಎಂಟು ಗುಣ ವಿಶೇಷತೆಗಳನ್ನು ವಿವಿಧ ಪ್ರವಾದಿಗಳಿಂದ ಅನುಕರಿಸಲಾಗಿದೆ
ದಾನ ಧರ್ಮ -ಪ್ರವಾದಿ ಇಬ್ರಾಹಿಂ (ಅ)
ಸಂತುಷ್ಟಿ – ಪ್ರವಾದಿ ಇಸ್‌ಹಾಕ್‌(ಅ)
ಸಹನೆ – ಪ್ರವಾದಿ ಅಯ್ಯೂಬ್ (ಅ)
ಸಂಕೇತ – ಪ್ರವಾದಿ ಝಕರಿಯ್ಯಾ
ಶ್ರೇಷ್ಟತೆ – ಪ್ರವಾದಿ ಯಹ್ಯಾ (ಅ)
ಸೂಫ್ ಧಾರಣೆ- ಪ್ರವಾದಿ ಮೂಸಾ (ಅ)
ಲೋಕ ಸಂಚಾರ- ಪ್ರವಾದಿ ಈಸಾ (ಏಸುಕ್ರಿಸ್ತ) (ಅ)
ಫಕೀರತ್ವ – ಪೈಗಂಬರ್ ಮುಹಮ್ಮದ್ (ಸ).
ಇದು ನಮಗೆ ಏನನ್ನು ಕಲಿಸುತ್ತದೆಯೆಂದರೆ ಸೂಫಿಗಳು ಪ್ರವಾದಿಗಳು ತೋರಿದ ಹಾದಿಯಲ್ಲಿ ಜನಸೇವೆ , ಬೋಧನೆ ಮತ್ತು ಅಲ್ಲಾಹನ ಸಂತೃಪ್ತಿಗಾಗಿ ಬದುಕಿದವರು. ಈ ಕೃತಿಯಲ್ಲಿ ಲೇಖಕರು ಸೂಫಿಸಂನ ವಿವಿಧ ತ್ವರೀಕತ್‌ಗಳ ಕುರಿತಂತೆಯೂ ಉಲ್ಲೇಖಿಸಿದ್ದಾರೆ. ಅವರು ಅವುಗಳಲ್ಲಿ ಸುಮಾರು ಹದಿನಾಲ್ಕು ತ್ವರೀಕತ್‌ಗಳನ್ನು ಪ್ರಮುಖ ತ್ವರೀಕತ್‌ಗಳೆಂದೂ ದಾಖಲಿಸಿದ್ದಾರೆ.

ಚಿಶ್ತಿಯಾ, ಜುನೈದಿಯಾ, ಸುರ್ಹವರ್ದಿಯಾ, ಹಬೀಬಿಯಾ, ಇಯಾದಿಯಾ, ತಯ್‌ಪೂರಿಯಾ, ಫಿರ್ದೋಸಿಯಾ, ಖರ್ಕಿಕಿಯಾ, ಹುಬಾರಿಯಾ, ಗಜರನಿಯಾ, ತೂಸಿಯಾ, ಆಜಾಮಿಯಾ, ಸಕಾತಿಯಾ, ಜಾಯೇದಿಯಾ…
ಆದರೆ ನಾನು ಇವುಗಳಲ್ಲಿ ಎಲ್ಲವುಗಳ ಬಗ್ಗೆ ನಾನು ಕೇಳಿಲ್ಲ. ಅದು ನನ್ನ ಅರಿವಿನ ಮಿತಿಯಷ್ಟೇ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ. ಆದರೆ ಇಲ್ಲಿ ಎರಡು ಅತ್ಯಂತ ಪ್ರಮುಖ ಸೂಫಿ ತ್ವರೀಕತ್‌ಗಳ ಉಲ್ಲೇಖವಿಲ್ಲದಿರುವುದು ನನಗೆ ಸೋಜಿಗ ಹುಟ್ಟಿಸಿದೆ. ಆದರೆ ಮುಂದೆ ಓದುತ್ತಾ ಹೋದಂತೆ ಖಾದ್ರಿಯಾ ತ್ವರೀಕತ್‌ನ ಚರ್ಚೆಯೂ ಬರುತ್ತದೆ.‌ ಆದರೆ ಅತ್ಯಂತ ಪ್ರಬಲ ಸೂಫಿ ಪರಂಪರೆಗಳಾದ ನಕ್ಷಬಂದಿಯಾ ಮತ್ತು ರಿಫಾಇಯ್ಯಾ ತ್ವರೀಕತ್‌ಗಳ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖವೋ, ವಿವರಗಳೋ ಕಾಣಸಿಗುವುದಿಲ್ಲ.
ಖ್ವಾಜಾ ಬಂದೇ ನವಾಝರು ದಕ್ಷಿಣ ಭಾರತದ ಅತ್ಯಂತ ಪ್ರಮುಖ ಸೂಫಿವರ್ಯರೆಂಬ ಅಭಿಪ್ರಾಯವನ್ನು ಲೇಖಕರು ತಾಳುತ್ತಾರೆ. ಅದು ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಿರುವ ವಿಚಾರವೂ ಹೌದು. ಇತ್ತ ಕರಾವಳಿ ಕರ್ನಾಟಕಕ್ಕೆ ಬಂದಾಗ ಖುತುಬುಝ್ಝಮಾನ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ಉಳ್ಳಾಲ್ ಅವರ ದರ್ಗಾವನ್ನು ದಕ್ಷಿಣ ಭಾರತದ ಅಜ್ಮೀರ್ ಎಂದೂ ಹೇಳಲಾಗುತ್ತದೆ.

ಈ ಕೃತಿಯಲ್ಲಿ ಓದುತ್ತಾ ಹೋದಂತೆ. ಸೂಫಿಸಂನ ಗುರಿ ಅಲ್ಲಾಹನಿಗೆ ಸಂಪೂರ್ಣವಾಗಿ ಶರಣಾಗುವುದು ಮತ್ತು ತಾನು ಮಾಡುವ ಪ್ರತಿಯೊಂದರ ಗುರಿಯೂ ಅಲ್ಲಾಹನ ಸ್ನೇಹಪ್ರಾಪ್ತಿ. ಅಲ್ಲಾಹನ ಸ್ನೇಹ ಪ್ರಾಪ್ತಿಗೆ ಕೇವಲ ಆರಾಧನೆಗಳಷ್ಟೇ ಸಾಕೇ..? ಖಂಡಿತಾ ಸಾಕಾಗದು. ಪ್ರವಾದಿವರ್ಯರ ಸ್ವಹೀಹ್ ಆದ ಒಂದು ಹದೀಸ್ ಇಂತಿದೆ “ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ..‌ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು..”. ಆದುದರಿಂದ ಜನಸೇವೆಯ ಮೂಲಕ, ಜನರ ನೋವಿಗೆ ಸಾಂತ್ವನ ಮತ್ತು ಪರಿಹಾರ ಮಾರ್ಗ ತೋರಿಸುವುದನ್ನು ಸೂಫಿಗಳು ತಮ್ಮ ಕರ್ತವ್ಯವೆಂಬಂತೆ ಮಾಡುತ್ತಾ ಬರುವುದನ್ನು ನಾವು ಯಾವುದೇ ಸೂಫಿಗಳ ಚರಿತ್ರೆಯಲ್ಲೂ ಕಾಣಲು ಸಾಧ್ಯ. ಬಂದೇ ನವಾಝರೂ ತಮ್ಮ ಬದುಕಿನ ಪಾರಮಾರ್ಥಿಕ ಗುರಿಯೆಂಬ ನೆಲೆಯಲ್ಲಿ ಇವೆಲ್ಲವುಗಳನ್ನೂ ಮಾಡುತ್ತಾ ಬಂದಿದ್ದಾರೆ.ಈಗಾಗಲೇ ಉಲ್ಲೇಖಿಸಿದಂತೆ ತಸವ್ವುಫ್‌ನ ಎಂಟು ಗುಣವಿಶೇಷಣಗಳಲ್ಲಿ‌ ಸಂಕೇತವೂ ಒಂದು. ಹಾಗಿರುವುದರಿಂದ ಸೂಫಿಗಳ ಬದುಕಿನಲ್ಲಿ ಸಂಕೇತಕ್ಕೆ ಬಹಳ ಮಹತ್ವವಿದೆ. ಈ ಕೃತಿಯಲ್ಲಿ ಒಂದೆಡೆ ಮನ್ಸೂರ್ ಹಲ್ಲಾಜ್ ಎಂಬ ಸೂಫಿಯೊಬ್ಬರ ಕುರಿತ ಉಲ್ಲೇಖವೊಂದು ಕಾಣಸಿಗುತ್ತದೆ. ಅವರು ” ಅನಲ್ ಹಕ್” ಎಂಬ ಪ್ರತಿಪಾದನೆಗೈದಿದ್ದರು. ಇದು ತಸವ್ವುಫ್‌ನ ಗುಣವಿಶೇಷಗಳಲ್ಲೊಂದಾದ ಸಂಕೇತವೇ ಆಗಿದೆ. ಅನಲ್ ಹಕ್ ಎಂಬ ಪ್ರತಿಪಾದನೆಯನ್ನು ವೇದೋಪನಿಷತ್ತುಗಳಲ್ಲಿನ “ಅಹಂ ಬ್ರಹ್ಮಾಸ್ಮಿ” ಎಂಬುವುದಕ್ಕೆ ಹೋಲಿಸಲಾಗುತ್ತದೆ. ಅನಲ್ ಹಕ್ ಎಂಬುವುದರ ಪ್ರತ್ಯಕ್ಷ ಅರ್ಥ. ನಾನು ದೇವನೆಂದು ಅಲ್ಲವೇ ಅಲ್ಲ. ಅನ ಎಂದರೆ ನಾನು, ಹಕ್ ಎಂದರೆ ಸತ್ಯ. ಒಟ್ಟಿನಲ್ಲಿ “ನಾನೇ ಸತ್ಯ” ಆದುದರಿಂದ ಹಲವು ವ್ಯಾಖ್ಯಾನಕಾರರು ಅನಲ್ ಹಕ್ ಎಂಬುವುದನ್ನು ಅಹಂ ಬ್ರಹ್ಮಾಸಿಗೆ ಸಂವಾದಿಯಾಗಿ ಬಳಸುವುದನ್ನು ನಾನಂತೂ ಒಪ್ಪಲಾರೆ. ಅನಲ್ ಹಕ್ ಎಂದರೆ ಖಂಡಿತವಾಗಿಯೂ ನಾನೇ ದೇವ ಎಂಬ ಅರ್ಥ ಕೊಡಲಾಗದು ಎನ್ನುವುದು ಸೂಫಿ ಜಗತ್ತಿನ ಬಹುತೇಕರ ಅಭಿಪ್ರಾಯ. ಇದಕ್ಕೆ ಕಾರಣವೂ ಇದೆ.ಜನಸಾಮಾನ್ಯರ ಭಾಷೆಯಲ್ಲಿ ತರ್ಕಿಸುತ್ತಾ ಹೋದಾಗ ನಾನು ಸತ್ಯ ಎಂದರೆ ನನ್ನ ಇರುವು ಸತ್ಯ. ನಾನು ಎಂಬ ಸತ್ಯ ಉದ್ಭವವಾಗುವುದಾದರೂ ಹೇಗೆ..? ನನ್ನ ಸೃಷ್ಟಿ ಕರ್ತ ಅಲ್ಲಾಹು ಇಲ್ಲದಿದ್ದರೆ ನನ್ನ ಅಸ್ತಿತ್ವಕ್ಕೆ, ನಾನೆಂಬ ಸತ್ಯಕ್ಕೆ ಏನರ್ಥ…? ಅನಲ್ ಹಕ್ ಇದಕ್ಕೆ ವಿವಿಧ ಉಲೆಮಾಗಳು ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ. ಅವರ್ಯಾರೂ ಅಲ್ಲಿ ಹಲ್ಲಾಜ್ ತಾನೇ ದೇವನೆಂದರು ಎಂದು ವಾದಿಸಿಲ್ಲ. ಅನಲ್ ಹಕ್ ಎಂದು ಪ್ರತಿಪಾದಿಸಿದ ಕಾರಣಕ್ಕೆ ಮನ್ಸೂರ್ ಹಲ್ಲಾಜರು ತೀವ್ರತರ ಚಿತ್ರಹಿಂಸೆಗೆ ಒಳಗಾದರು.. ಆ ಬಳಿಕ ಪ್ರಭುತ್ವ ಅವರನ್ನು ನೇಣಿಗೇರಿಸಿತು. ಆದರೆ ಅವರ ಕಾಲಾನಂತರ ಅವರ ಪ್ರತಿಪಾದನೆ ಹೆಚ್ಚೆಚ್ಚು ನಿಷ್ಕರ್ಷೆಗೊಳಗಾಗುತ್ತಾ ಅನಲ್ ಹಕ್ ಎನ್ನುವ ಪ್ರತಿಪಾದನೆ ತಪ್ಪಲ್ಲ ಎನ್ನುವ ವಾದಕ್ಕೆ ನಂತರದ ಉಲೆಮಾಗಳು ಬಂದರು. ಅಲ್ಲಾಹನ ಮಾರ್ಗದಲ್ಲಿ‌ ಕಠಿಣ ಸಾಧನೆಗೈದವನೊಬ್ಬ ತನ್ನನ್ನು ತಾನೇ ದೇವನೆನ್ನಲು ಸಾಧ್ಯವೇ.. ಎಂಬುವುದು ಕಾಲಾನಂತರದಲ್ಲಿ ಸೂಫಿ ಜಗತ್ತಿನಲ್ಲಿ ಚರ್ಚೆಗೊಳಗಾಗಿತ್ತು. ಹೀಗೆ ಅನೇಕ ಬಾರಿ ಸೂಫಿಗಳು ಆಡುವ ಮಾತುಗಳು ಸಂಕೇತಗಳಲ್ಲಿರುತ್ತವೆ. ಈ ರೀತಿಯ ಸಂಕೇತದ ಮಾತುಗಳು ಅನೇಕ ಬಾರಿ ಅಪಾರ್ಥಕ್ಕೊಳಗಾಗಿದ್ದೂ ಇವೆ.

ಈ ಕೃತಿಯ ಮೊದಲ ಅಧ್ಯಾಯ ಸೂಫಿಸಂ ಬಗ್ಗೆ ಆಸಕ್ತಿಯಿಲ್ಲದವರನ್ನು ಖಂಡಿತಾ ಓದಿಸುವುದಿಲ್ಲ. ಸೂಫಿ ದಾರ್ಶನಿಕತೆಯ ಚರ್ಚೆಗಳು ಮೊದಲ ಅಧ್ಯಾಯದಲ್ಲಿ ದಟ್ಟವಾಗಿದ್ದರೂ ಇದನ್ನು ಓದಲು ತಾಳ್ಮೆ ಅಗತ್ಯವಾಗಿ ಬೇಕಾಗುತ್ತದೆ. ಎರಡನೇ ಅಧ್ಯಾಯದಲ್ಲಿ ದಖನಿನಲ್ಲಿ ಕಾರ್ಯಾಚರಿಸಿದ ವಿವಿಧ ಸೂಫಿ ಪರಂಪರೆಯ ಕುರಿತಂತೆ ಸಂಕ್ಷಿಪ್ತ ಚರ್ಚೆ ನಡೆಸಲಾಗುತ್ತದೆ. ಇದೊಂದು ಆಸಕ್ತಿದಾಯಕ ಮತ್ತು ವಿಚಾರ ಪ್ರಚೋದಕ ಚರ್ಚೆಯಾಗಿದೆ. ಇದು ಮೊದಲ ಅಧ್ಯಾಯದಂತೆ ಕೇವಲ ಪಂಡಿತರ ಓದಲ್ಲ. ಸರಾಗವಾಗಿ ಓದಿಸುತ್ತಾ ಕುತೂಹಲ ಕೆರಳಿಸುತ್ತದೆ.ಮೂರನೇ ಅಧ್ಯಾಯದಲ್ಲಿ ಖ್ವಾಜಾ ಬಂದೇ ನವಾಝರ ಬಾಲ್ಯ, ಶಿಕ್ಷಣ, ಅವರ ಗುರುಗಳಾದ ದೆಹಲಿಯ ಪ್ರಸಿದ್ಧ ಸೂಫಿ ಸಂತರಾದ ನಾಸಿರುದ್ದೀನ್ ಚಿರಾಗ್ ದೆಹಲ್ವಿಯವರ ಜೊತೆಗಿನ ಒಡನಾಟ, ಅವರು ತನ್ನ ಶಿಷ್ಯನ ಆಧ್ಯಾತ್ಮ ಸಿದ್ಧಿಗಳನ್ನು ಕಂಡು ಇವರ ಕುರಿತು ನುಡಿದ ಭವಿಷ್ಯವಾಣಿಗಳು ಇತ್ಯಾದಿಗಳ ಕುರಿತಂತಹ ಚರ್ಚೆಯೂ ಇದೆ. ಜೊತೆ ಜೊತೆಗೆ ಬಹುಮನಿ ಸುಲ್ತಾನ್ ಫಿರೋಝ್ ಶಾ ಬಹುಮನಿಯ ಇತಿಹಾಸದ ಕಿರು ಪರಿಚಯವೂ ಸಿಗುತ್ತದೆ. ಬಂದೇ ನವಾಝರು ಗುಲ್ಬರ್ಗಾಕ್ಕೆ ಬರುವಾಗ ಅವರು ಎಂಬತ್ತರ ಹರೆಯದ ವಯೋವೃದ್ಧರಾಗಿದ್ದರು. ಆಗ ಸೂಫಿ ಆಧ್ಯಾತ್ಮದ ಉತ್ತುಂಗ ಶಿಖರಕ್ಕೇರಿದ್ದರು. ಸಾಮಾನ್ಯವಾಗಿ ಸೂಫಿಗಳು ಅರಸೊತ್ತಿಗೆಯ ವಿರೋಧಿಗಳಾಗಿರುತ್ತಾರೆ. ಅರಸೊತ್ತಿಗೆಯ ಅವಧಿಯೇ ತನ್ನ ಬದುಕಿನ ಅತ್ಯಂತ ಕೆಟ್ಟ ಕಾಲವೆಂದು ಸಿಂಹಾಸನ ತೊರೆದು ಬಂದು ಅಸಾಮಾನ್ಯ ಆಧ್ಯಾತ್ಮ ಸಿದ್ಧಿಗೈದ ಇಬ್ರಾಹಿಂ ಬಿನ್ ಅದ್‌ಹಮ್‌ ಸೂಫಿ ಜಗತ್ತಿನಲ್ಲಿ ಕಂಗೊಳಿಸುವ ತಾರೆಯಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಅವರ ವಿರಕ್ತಿಯು ಹೆಚ್ಚು ಕಡಿಮೆ ಸಿದ್ದಾರ್ಥನ ವಿರಕ್ತಿಯನ್ನೇ ಹೋಲುತ್ತದೆ.ಚಿಶ್ತಿಯಾ ಪರಂಪರೆಯ ಸೂಫಿಗಳ ಪ್ರಭುತ್ವ ವಿರೋಧೀ ಧೋರಣೆಗಳು ಜನಜನಿತ. ಅದಕ್ಕೆ ಸಾಕ್ಷಿಯಾಗಿ ಭಾರತೀಯ ಸೂಫಿ ಪರಂಪರೆಯ ಮಹೋನ್ನತ ಸಾಧಕ ಸುಲ್ತಾನುಲ್‌ ಹಿಂದ್ ಗರೀಬ್ ನವಾಝ್‌ ಖ್ವಾಜಾ ಮುಈನುದ್ದೀನ್ ಚಿಶ್ತಿಯವರ ಮತ್ತು ರಜಪೂತ ವಂಶದ ರಾಣಾ ಪ್ರತಾಪ ಸಿಂಹನ ನಡುವಿನ ತಿಕ್ಕಾಟವನ್ನು ನಾವು ಸೂಫಿ ಇತಿಹಾಸದ ಪುಟಗಳಲ್ಲಿ ಕಾಣಲು ಸಾಧ್ಯ. ಆದರೆ ಬಂದೇ ನವಾಝರ ವ್ಯಕ್ತಿತ್ವವು ಮೊದ ಮೊದಲು ಅದಕ್ಕೆ ವ್ಯತಿರಿಕ್ತವಾಗಿ ಕಾಣುತ್ತದೆ.‌ಅಂದ ಮಾತ್ರಕ್ಕೆ ಅವರು ಅರಸೊತ್ತಿಗೆಯ ಪರವೆಂದಲ್ಲ. ಯಾವುದೇ ಸೂಫಿಯೂ ಪ್ರಭುತ್ವವನ್ನು ವಿನಾ ಕಾರಣ ವಿರೋಧಿಸುವುದೂ ಇಲ್ಲ.‌ಪ್ರಭುತ್ವ ಜನ ವಿರೋಧಿಯಾದಾಗ ವಿರೋಧಿಸುವುದೂ ಸೂಫಿಸಂನ ಮೂಲ ತತ್ವವೆಂದು ನಾವು ಅರ್ಥೈಸುವ ಮಟ್ಟಿಗೆ ಕೆಲ ಸೂಫಿಗಳು ಪ್ರಭುತ್ವದೊಂದಿಗೆ ತಿಕ್ಕಾಟ ನಡೆಸಿದ್ದೂ ಇದೆ. ಪ್ರಭುತ್ವ ಹಾದಿ ತಪ್ಪಿದಾಗ ಅವರನ್ನು ಎಚ್ಚರಿಸಿದಂತಹ ಪರಂಪರೆಯೂ ಸೂಫಿಸಂಗಿದೆ. ಅದೆಷ್ಟೋ ಸೂಫಿಗಳು ರಾಜಾಶ್ರಯ ಪಡೆದದ್ದೂ ಇದೆ. ಸಾಮಾನ್ಯವಾಗಿ ಪ್ರಭುತ್ವದ ಬೆಂಬಲವಿದ್ದರೂ ಸೂಫಿಗಳು ಪ್ರಭುತ್ವದೊಂದಿಗೆ ಅಂತರ ಕಾಯ್ದುಕೊಂಡದ್ದು ಅನೇಕ ಸೂಫಿಗಳ ಚರಿತ್ರೆಯಲ್ಲಿ ಕಾಣಸಿಗುತ್ತದೆ. ಬಂದೇ ನವಾಝರಿಗೆ ಗುಲ್ಬರ್ಗಾಕ್ಕೆ ಆಹ್ವಾನ ನೀಡಿದವನು ಬಹಮನಿ ಸುಲ್ತಾನ ಫಿರೋಝ್ ಶಾ ಬಹಮನಿ. ಆತ ಬಹು ಭಾಷಾ ಪ್ರವೀಣನೂ, ಕವಿಯೂ ಆಗಿದ್ದ. ಆತ ಸೂಫಿ ಆಧ್ಯಾತ್ಮಿಕತೆ, ತತ್ವಚಿಂತನೆಗಳು, ಖಗೋಳ ಶಾಸ್ತ್ರ, ವಿಜ್ಞಾನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವೂ ಗಳಿಸಿದ್ದರಿಂದ ಸೂಫಿಗಳ ಬಗೆಗೆ ಅಪಾರ ಗೌರವವನ್ನೂ ಇಟ್ಟುಕೊಂಡಿದ್ದ. ಅದಾಗ್ಯೂ ಆತ ಬಂದೇ ನವಾಝರಿಗೆ ಆಹ್ವಾನ ನೀಡಿ, ಆಶ್ರಯ ನೀಡಿರುವುದರ ಹಿಂದೆ ಇತರ ರಾಜಕೀಯ ಕಾರಣಗಳೂ ಇತ್ತೆಂದು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಆತನೊಂದಿಗೆ ಮೊದ ಮೊದಲು ಮಧುರ ಬಾಂಧವ್ಯವನ್ನೇ ಬಂದೇ ನವಾಝರು ಹೊಂದಿದ್ದರು. ಯಾವಾಗ್ ಆತ ತನ್ನ ಸಂಸ್ಥಾನದ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದ ತನ್ನ ಸಹೋದರನನ್ನು ಬಿಟ್ಟು ತನ್ನ ಪುತ್ರನಿಗೆ ಉತ್ತರಾಧಿಕಾರ ನೀಡುವಷ್ಟರ ಮಟ್ಟಿಗೆ ಪುತ್ರ ವ್ಯಾಮೋಹಿಯಾದನೋ ಅಲ್ಲಿಂದ ಬಂದೇ ನವಾಝರಿಗೆ ಆತನೊಂದಿಗೆ ಶೀತಲ ಸಮರ ಪ್ರಾರಂಭವಾಗುತ್ತದೆ. ವಾಸ್ತವದಲ್ಲಿ ಬಂದೇ ನವಾಝರು‌ ಇಲ್ಲಿ ನ್ಯಾಯ ಪಕ್ಷಪಾತಿಯಾಗಿದ್ದರು ಎಂಬುವುದನ್ನು ಸುಂದರವಾಗಿ ಮತ್ತು ಅರ್ಥವತ್ತಾಗಿ ಲೇಖಕರು ಮನದಟ್ಟು ಮಾಡಿಕೊಡುತ್ತಾರೆ. ಇತಿಹಾಸದ ಈ ಘಟನೆಗಳನ್ನು ಲೇಖಕ ಇಲ್ಲಿ ಓರ್ವ ವೃತ್ತಿಪರ ಇತಿಹಾಸಕಾರನಂತೆಯೇ ಮಂಡಿಸಿದ್ದು ಪ್ರಶಂಸಾರ್ಹ. ಸೂಫಿಯೊಬ್ಬರು ಪ್ರಭುತ್ವದೊಂದಿಗೆ ನಡೆಸಿದ ಶೀತಲ ಸಮರವನ್ನು ಎಲ್ಲೂ ಪಕ್ಷಪಾತೀಯ ನಿಲುವು ತೋರದೇ ಎಚ್ಚರ ವಹಿಸಿ ಇತಿಹಾಸದ ಘಟನೆಗಳನ್ನು ಇತಿಹಾಸ ದಾಖಲೀಕರಣದ ವಿಧಾನಕ್ಕೆ ಎಳ್ಳಷ್ಟೂ ಅಪಚಾರವಾಗದಂತೆ ಲೇಖಕರು ದಾಖಲಿಸಿದ್ದಾರೆ. ಸೂಫಿಗಳ ಕುರಿತಂತೆ ಬರೆಯುವಾಗ ಅನೇಕ ಬರಹಗಾರರು ಮಾಡುವ ಅತೀ ದೊಡ್ಡ ತಪ್ಪು ಅವರ ಜನಸೇವೆಗೆ ಪ್ರಾಮುಖ್ಯತೆ ಕಡಿಮೆ ಮಾಡಿ ಪವಾಡಗಳನ್ನೇ ವೈಭವೀಕರಿಸುವುದು. ನಾವೆಲ್ಲಾ ತಿಳಿದುಕೊಳ್ಳಬೇಕಾದಂತಹ ಒಂದು ಸತ್ಯವೇನೆಂದರೆ ಸೂಫಿಗಳೆಂದರೆ ಖಂಡಿತವಾಗಿಯೂ ದೇವ ಮಾನವರೋ, ಪವಾಡ ಪುರುಷರೋ ಅಲ್ಲ. ಪವಾಡಗಳನ್ನು ತೋರಿಸುವುದು ಸೂಫಿಗಳ ಗುರಿಯೂ ಆಗಿರುವುದಿಲ್ಲ. ಅಂತಹ ಅಸಾಮಾನ್ಯವಾದ ಕಾರ್ಯಗಳನ್ನು ಸೂಫಿಗಳು ಮಾಡಿದ್ದರೆ ಅದರ ಹಿಂದಿನ ಉದ್ದೇಶ ಯಾವತ್ತೂ ಸ್ವಾರ್ಥವಾಗಿರುವುದಿಲ್ಲ.‌ ಅದರಲ್ಲಿ‌ ಸಮಷ್ಟಿ ಹಿತ ಅಡಗಿರುತ್ತದೆ.

ಬಂದೇ ನವಾಝರ ಅನುಭಾವಿಕ ನೆಲೆಗಳನ್ನು ಓದುವಾಗ ಮೊದ ಮೊದಲು ಎಲ್ಲೋ ಪವಾಡಕ್ಕೆ ಪ್ರಾಶಸ್ತ್ಯ ಕೊಡಲಾಗಿದೆಯೋ ಎಂಬ ಭಾವ ಬಂದು ಬಿಡುತ್ತಾದಾದರೂ ಆ ಅಧ್ಯಾಯವನ್ನು ಓದುತ್ತಾ ಹೋದಂತೆ ಲೇಖಕ ಇಲ್ಲಿ ಭಿನ್ನವಾದ ನಿಲುವುಗಳನ್ನು ತಾಳಿದ್ದು ಮನವರಿಕೆಯಾಗುತ್ತದೆ. ಬಂದೇ ನವಾಝರ ಸಿದ್ಧಿಯಲ್ಲಿ‌ ಜನ-ಹಿತ ಮತ್ತು ಸಮಷ್ಟಿ ಹಿತವಿರುವುದನ್ನು ನಾವು ಕಾಣಬಹುದು. ಆದರೆ ಓದು ನಮಗೆ ಆಪ್ತವಾದಾಗ ಮಾತ್ರ ನಾವು ಅದರೊಳಗೆ ಮುಳುಗಿ ಓದಲು ಸಾಧ್ಯ. ಆ ಶಕ್ತಿಯು ಈ ಕೃತಿಗಿದೆ. ಬಂದೇ ನವಾಝರ ಕಾವ್ಯಗಳಲ್ಲಿ ಅವರ ಮತ್ತು ಅಲ್ಲಾಹನ ಪ್ರೇಮದ ಆಳ ಕಾಣಸಿಗುತ್ತದೆ. ಇಲ್ಲಿ ಅಂತಹ ಕೆಲವು ದ್ವಿಪದಿಗಳನ್ನು ಲೇಖಕರು ಉದ್ಧರಿಸಿದ್ದಾರೆ.ಒಂದು ಉದಾಹರಣೆ :“ತೇರಿ ಗಲೀಮೆ ಆಶಿಖ್ ಇಸ್ ತರಾಹ್ ಭೀ ಜಾನ್ ದೇತೆ ಹೈಂ..ಕೆ ಇಸ್ ಜಗಾ ಮಲಿಕುಲ್ ಮೌತ್ ಕಿ ಸಮಾಯೀ ನಹೀ ಹೋತಿ…”ನಿನ್ನ ಓಣಿಯಲ್ಲಿ ದಿವ್ಯ ಪ್ರೇಮಿಗಳು ಈ ರೀತಿಯೂ ಪ್ರಾಣ ತ್ಯಾಗ ಮಾಡುವರು., ಅಲ್ಲಿ ಮಲಿಕುಲ್ ಮೌತ್‌ನ (ಆತ್ಮವನ್ನು ದೇಹದಿಂದ ಪ್ರತ್ಯೇಕಿಸುವ ಅಥವಾ ಪ್ರಾಣ ತೆಗೆಯುವ ದೇವದೂತ ಅಝ್‌ರಾಯೀಲ್) ಪ್ರವೇಶವೂ ನಿಷಿದ್ಧ… ಇದು ಕಾವ್ಯ ಭಾಷೆ.. ಇಲ್ಲಿ ಸಂಕೇತದ ಬಳಕೆಯಿದೆ. ಇದರ ಪ್ರತ್ಯಕ್ಷ ಅರ್ಥವಿಟ್ಟು ನೋಡಿದರೆ ಇದು ದೇವ ದೂತನಿಗೆ ಹಾಕುವ ಸವಾಲಿನಂತೆ ಕಾಣುತ್ತದೆ. ಆದರೆ ಇದು ಅಲ್ಲಾಹನ ಮತ್ತು ಆತನ ಸ್ನೇಹಿತ ಬಂದೇ ನವಾಝರ ನಡುವಿನ ವ್ಯವಹಾರವಷ್ಟೆ. ಬಂದೇ ನವಾಝರು ಬಹುಭಾಷಾ ಜ್ಞಾನಿ. ಅವರು ಅರಬಿ, ಉರ್ದು, ಫಾರಸಿ ಮತ್ತು ದಖಃನಿ ಭಾಷೆಯಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥ ರಚಿಸಿದ್ದಾರೆ. ಅವುಗಳಲ್ಲಿ ಜ್ಞಾನದ ವಿವಿಧ ಶಾಖೆಗಳಾದ ವಿಜ್ಞಾನ, ತತ್ವಜ್ಞಾನ, ಖಗೋಳ ಶಾಸ್ತ್ರ, ಇಸ್ಲಾಮೀ ಕರ್ಮಶಾಸ್ತ್ರ, ಸೂಫಿ ತತ್ವ ಚಿಂತನೆಗಳು, ಸೂಫಿ ಪ್ರೇಮ ಕಾವ್ಯಗಳು, ಸೂಫಿ ಕಾವ್ಯಗಳು, ಸೂಫಿ ಆಧ್ಯಾತ್ಮ ಚಿಂತನೆಗಳೆಲ್ಲಾ ಒಳಗೊಂಡಿವೆ.ಅವರಷ್ಟು ಗ್ರಂಥಗಳನ್ನು ರಚಿಸಿದ ಸೂಫಿಗಳು ಭಾರತದಲ್ಲೇ ವಿರಳ ಅಥವಾ ಇಲ್ಲ. ಅವರು ದಖಃನಿ ಭಾಷೆಯ ಮೊಟ್ಟ ಮೊದಲ ಕವಿಯೂ ಹೌದು. ಅವರ ಕಾವ್ಯಗಳಲ್ಲಿ ಕೆಲವು ಜನಸಾಮಾನ್ಯರ ಬಾಯಲ್ಲಿ ಲಾವಣಿಗಳಂತೆಯೂ ಹಾಡಲ್ಪಡುತ್ತದೆ. ಉದಾಹರಣೆಗೆ ಅವರ ಚಕ್ಕಿ ನಾಮಾವನ್ನು ತೆಗೆದುಕೊಳ್ಳಬಹುದು. ಇದು ಮೇಲ್ನೋಟಕ್ಕೆ ಸರಳ ಹಾಡಿನಂತೆ ಕಂಡರೂ ಇದರೊಳಗೆ ಅಡಗಿರುವ ತತ್ವ ಚಿಂತನೆ ಅಪಾರವಾದುದು. ನಮ್ಮ ತುಳುನಾಡಿನಲ್ಲಿ ಹೇಗೆ ಕೃಷಿಕ ಮಹಿಳೆಯರು ಪಾಡ್ದನಗಳನ್ನು ಹಾಡುತ್ತಿದ್ದರೋ ಅದೇ ರೀತಿ ಇವರ ಚಕ್ಕಿ ನಾಮಾವನ್ನು ಗ್ರಾಮೀಣ ಶ್ರಮಿಕ ಮಹಿಳೆಯರು ಜೋಳ, ಗೋಧಿಗಳನ್ನು ಬೀಸುಗಲ್ಲಿನಲ್ಲಿ ಬೀಸುತ್ತಾ ಹಾಡುತ್ತಿದ್ದರಂತೆ. ಬಂದೇ ನವಾಝರ ಅನೇಕ ರುಬಾಯತ್‌ಗಳೂ ಲಾವಣಿಗಳಂತೆ ಹಾಡಲ್ಪಡುತ್ತವೆ.ಪಾನಿ ಮೆ ನಮಕ್ ಡಾಲ್ ಮಜಾ ದೇಕ್ತಾ ದಿಸೇ/ಜಬ್ ಘುಲ್‌ಗಯಾ ನಮಕ್ ತೋ ನಮಕ್ ಬೋಲ್ನಾ ಕಿಸೇ/ಯೂಂ‌ ಖೋಯಿ ಖುದಿ ಅಪ್ನಿ ಖುದಾ ಸಾತ್ ಮುಹಮ್ಮದ್/ಅಬ್ ಘಲ್ ಗಯಿ ಖುದಿ ತೋ ಖುದಾಬನ್ ನಾಕೋಯಿ ದಸೇ.ಈ ಸರಳ ರುಬಾಯಿಯಲ್ಲಿ ದೈವಿಕ ಸತ್ಯ ಅಡಗಿದೆ. ಇಲ್ಲಿ ದೈವಿಕ ಸತ್ಯವನ್ನು ಬಂದೇ ನವಾಝರು ಉಪ್ಪು ಮತ್ತು ನೀರಿನಲ್ಲಿ ಸಂಕೇತಿಸುತ್ತಾರೆ. ಅವರ ದ್ವಿಪದಿಗಳೂ‌ ಬಹಳ ಅರ್ಥಪೂರ್ಣವಾಗಿವೆ. ಅಲ್ಲಿಯೂ ಖುದಾ ಮತ್ತು ಬಂದಾ ನ ಮಾತುಕತೆಗಳಿವೆ. ಒಂದು ದ್ವಿಪದಿ ನೋಡೋಣ.” ಚಷ್ಮೆ ದಾರಂ ಹಮಾ ಫರಾಜ್ ಸೂರತ್ ದೋಸ್ತ್/ನಾದೀದಾ ಮೆರಾ ಖುಶ್ ಅಸ್ತ್ ಚೂಂ ದಕ್ ಅವಸ್ತ್”ಅರ್ಥ : ನಾನು ಆ ಕಣ್ಣನ್ನು ಹೊಂದಿರುವೆನು, ಅದು ಮಿತ್ರನ ಮೊಗದಿಂದ ತುಂಬಿದೆ. ನನ್ನ ಕಣ್ಣು ನನಗೆ ಅತೀ ಪ್ರಿಯವಾಗಿದೆ, ಯಾಕೆಂದರೆ ನನ್ನ ಮಿತ್ರನು ಅದರೊಳಗಿರುವನು..ಹೀಗೆ ಹತ್ತಾರು ರುಬಾಯಿ, ದ್ವಿಪದಿ ಮತ್ತಿತರ ಕಾವ್ಯಗಳಿಂದ ಸಮೃದ್ಧವಾದ ಅಪೂರ್ವ ಕಾವ್ಯಗಳ ಓದನ್ನು ಈ ಕೃತಿ ನಮಗೊದಗಿಸುತ್ತದೆ.

ಕಡಲ ತೀರದ ಮಂಗಳೂರಿನವನಾದ ನಾನು ನನ್ನ ಸುತ್ತ ಮುತ್ತಲ ಊರುಗಳಲ್ಲಿ ಕಂಡ, ಓದಿದ, ಅರಿತ ಸೂಫಿಗಳು ಮತ್ತು ಅವರ ಪರಂಪರೆಯಿಂದ ಬಹಳ ವ್ಯತಸ್ಥವಾದ ಸೂಫಿ ನೆಲೆಗಳನ್ನು ಈ ಕೃತಿಯ‌ ಮೂಲಕ ಅರಿತುಕೊಳ್ಳಲು ಸಾಧ್ಯವಾಗಿದೆ. ಉದಾಹರಣೆಗೆ ಖಾನ್‌ಕಾಹ್ ಅಥವಾ ಸೂಫಿ ಮಠದ ಪರಿಕಲ್ಪನೆ ನಮ್ಮ ಕರಾವಳಿಯಲ್ಲಿ ನಾನು ಕಂಡಿಲ್ಲ. ಜಂಗಮ ಸೂಫಿಗಳು ಎಲ್ಲೋ ಒಂದೆಡೆ ನೆಲೆ ನಿಲ್ಲುವುದು ಕಡಿಮೆ, ಸ್ಥಾವರವಾದವರು ನಿಂತರೂ ತಮಗಾಗಿ ಒಂದು ಮನೆಯನ್ನೂ ಕಟ್ಟಿಕೊಳ್ಳದ ಸೂಫಿಗಳೇ ಅಧಿಕರಿದ್ದಾರೆ. ಇಲ್ಲಿನ ಸೂಫಿಗಳು ರಾಜಾಶ್ರಯ ಹೊಂದಿದ್ದೇ ಇಲ್ಲ ಎನ್ನುವಷ್ಟು ವಿರಳ. ಸದಾ ಅರಸೊತ್ತಿಗೆಯಿಂದ ಮಾರು ದೂರವೇ ನಿಂತವರು. ಖಾನ್‌ಖಾಗಳಲ್ಲಿ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಸೂಫಿಗಳು ಪ್ರವಚನ ನೀಡಿದರೆ.. ಇಲ್ಲಿನ ಸೂಫಿಗಳು ಬಯಲಲ್ಲೇ ಪ್ರವಚನ ನೀಡುತ್ತಿದ್ದ ಉದಾಹರಣೆಗಳು ಕಾಣಸಿಗುತ್ತವೆ. ಮತ್ತು ಕೆಲ ಸೂಫಿಗಳು ಪ್ರವಚನಕ್ಕಿಂತ ಹೆಚ್ಚು ಕೃತಿಗಳಲ್ಲಿ, ಕರ್ಮಗಳಲ್ಲಿ ಸಾಮಾನ್ಯ ಜನಕ್ಕೆ ಮಾದರಿಯಾಗಿದ್ದರು. ಅಗತ್ಯ ಬಿದ್ದಾಗ ತಮ್ಮ ಕೃತಿ ಮತ್ತು ಕರ್ಮಗಳ ಹಿಂದಿನ ಉದ್ದೇಶ ಮತ್ತು ಅದು ಹೇಗೆ ಪ್ರವಾದಿ ಚರ್ಯೆ ಎಂದು ವಿವರಿಸುತ್ತಿದ್ದರು ಎಂದು ಕೇಳಿ ಬಲ್ಲೆ. ಖಾನ್‌ಕಾಹ್‌ಗಳಲ್ಲಿ ಬಡಬಗ್ಗರಿಗೆ ಊಟ ವಸತಿಯ ವ್ಯವಸ್ಥೆಗಳಿದ್ದವು. ಇಲ್ಲಿನ ಸೂಫಿಗಳ ಚರಿತ್ರೆಯಲ್ಲಿ ಅವರು ತಿನ್ನುವಾಗ ಅವರ ಜೊತೆಗೆ ಮತ್ತು ಸುತ್ತಮುತ್ತಲಲ್ಲಿದ್ದವರಿಗೆ ಇದ್ದುದನ್ನೇ ಹಂಚಿ ತಿನ್ನಿಸುತ್ತಿದ್ದರು. ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಹೊಂದಿದ ಉಳ್ಳಾಲದ ಸಯ್ಯದ್ ಮದನಿಯವರ ಸನ್ನಿಧಿಯಲ್ಲಿ ಅವರು ಕಾಲವಾಗಿ ನಾಲ್ಕು ಶತಮಾನಗಳ ನಂತರ‌ ಅವರ ಹೆಸರಲ್ಲಿ ಪ್ರತೀ ಮಧ್ಯಾಹ್ನ ಅನ್ನ ಸಂತರ್ಪಣೆ ಜಾರಿಗೆ ಬಂತು. ಸಾಮಾನ್ಯವಾಗಿ ಕೆಲ ಸೂಫಿಗಳು ನಾಳೆಗಾಗಿ ಏನನ್ನೂ ಕಟ್ಟಿಡುವುದಿಲ್ಲ. ಅವರು ಇಂದಿನದ್ದನ್ನು ಇಂದಿಗೆ ಖರ್ಚು ಮಾಡಿ, ಉಳಿದದ್ದನ್ನು ದಾನ ಮಾಡುತ್ತಾರೆ. ನಾಳೆಯ ವ್ಯವಸ್ಥೆಯನ್ನು ಸೃಷ್ಟಿ ಕರ್ತನಿಗೆ ವಹಿಸಿ ಬಿಡುತ್ತಾರೆ.ಉಳ್ಳಾಲದ ಸಯ್ಯದ್ ಮದನಿಯವರ ಕುರಿತಂತೆ ಜನಮಾನಸದಲ್ಲೊಂದು ಕತೆಯಿದೆ. ಮದನಿಯವರಿಗೆ ಸಂತಾನವಿರಲಿಲ್ಲ. ಮೂಲತಃ ಮದೀನಾದವರಾದ ಅವರು ಉಳ್ಳಾಲದ ಓರ್ವ ಮಹಿಳೆಯನ್ನು ವರಿಸಿದ್ದರು.‌ಅವರು ತನ್ನ ಅಂತ್ಯಕಾಲದಲ್ಲಿ ತನ್ನ ಪತ್ನಿಯ ಬಳಿ ಹೇಳಿದರು.‌” ನನ್ನ ನಂತರ ನೀನು ನಿನ್ನ ಖರ್ಚಿಗೇನೂ ಫಿಕರ್ ಮಾಡಬೇಡ. ನೀನು ಪ್ರತಿದಿನ ನನ್ನ ಸಮಾಧಿಯ ಬಳಿ ಹೋಗು. ಅಲ್ಲಿ ನಿನ್ನ ಅಂದಂದಿನ ಖರ್ಚಿಗೆ ಬೇಕಾದದ್ದು ಇರುತ್ತದೆ.ಹಾಗೆಯೇ ಮದನಿಯವರ ಕಾಲಾ ನಂತರ ಅವರ ಪತ್ನಿಗೆ ಅಂದಂದಿನ ಖರ್ಚಿಗಾಗುವಷ್ಟು ದುಡ್ಡು ಅವರ ಸಮಾಧಿಯ ಮೇಲೆ ಸಿಗುತ್ತಿತ್ತಂತೆ. (ಬಹುಶಃ ಅವರ ಅನುಯಾಯಿಗಳು ಹಾಕುತ್ತಿದ್ದರೇನೋ) ಹಾಗೆ ಸಿಕ್ಕದ್ದನ್ನು ಅವರು ಖರ್ಚು ಮಾಡುತ್ತಿದ್ದರು. ಹೀಗೆ ಪ್ರತೀದಿನ ಅವರ ಖರ್ಚಿಗೆ ಸಿಗುತ್ತಿತ್ತು. ಒಮ್ಮೆ ಅವರು ಇಷ್ಟೆಲ್ಲಾ ಖರ್ಚು ಮಾಡುವುದೇಕೆಂದು ಅರ್ಧದಷ್ಟನ್ನು ಉಳಿತಾಯ ಮಾಡಿದರು. ಮರುದಿನದಿಂದ ಅವರಿಗೆ ಮೊದಲು ಸಿಗುತ್ತಿದ್ದುದರ ಅರ್ಧವೇ ಸಿಗತೊಡಗಿತು. ಯಾಕೆಂದು ಚಿಂತಿತರಾಗಿದ್ದಾಗ ಅವರಿಗೆ ಮದನಿಯವರ ಬೋಧನೆ ನೆನಪಿಗೆ ಬಂತು. ನಮ್ಮ ಖರ್ಚು ಕಳೆದು ಮಿಕ್ಕಿದ್ದು ನಮ್ಮದಲ್ಲ. ಅದು ಬಡವರ ಪಾಲು‌. ಸೂಫಿಗಳು ಅಂದಂದಿನ ಖರ್ಚು ಕಳೆದು ಮಿಕ್ಕಿದ್ದನ್ನು ದಾನ ಮಾಡಬೇಕು‌.” ಸೂಫಿಯೋರ್ವರ ಅಣತಿಯಂತೆ ಅವರ ಪತ್ನಿಗೆ ಸಿಗುವುದಕ್ಕೂ ಅದು ಅನ್ವಯ.

ಬೋಡೆ ರಿಯಾಝ್ ಅಹ್ಮದರ ಪ್ರೇಮ ಸೂಫಿ ಬಂದೇ ನವಾಝ್ ಕನ್ನಡದ ಮಟ್ಟಿಗೊಂದು ಅತ್ಯುತ್ತಮ ಕೊಡುಗೆ. ಬಂದೇ ನವಾಝರ ಕುರಿತಂತೆ ಕನ್ನಡದಲ್ಲಿ ಕೆಲವು ಚಿಕ್ಕ ಪುಟ್ಟ ಕೃತಿಗಳು ಬಂದಿವೆಯಾದರೂ ಅವುಗಳಲ್ಲಿ ಬಳಸಲಾದ ಬಂದೇ ನವಾಝರ ಕಾವ್ಯಗಳಲ್ಲಿ ಎರಡನೇ ಅಥವಾ ಮೂರನೇ ತರ್ಜುಮೆಗಳೇ ಜಾಸ್ತಿ. ಆದರೆ ಈ ಕೃತಿಯಲ್ಲಿ ಉಲ್ಲೇಖಿಸಲಾದ ಕಾವ್ಯ ಮತ್ತಿತರ ಸಾಹಿತ್ಯಕ್ಕೆ ಆಕರ ಮೂಲ ಕೃತಿಗಳೇ ಆಗಿವೆ ಎನ್ನುವುದೊಂದು ವಿಶೇಷ. ಒಟ್ಟಂದದಲ್ಲಿ ಈ ಇಡೀ ಕೃತಿಯ ಓದು ಸರಾಗವಲ್ಲದಿದ್ದರೂ… ಆಸ್ಥೆಯಿಂದ ಓದಿದರೆ ಮಸ್ತಿಷ್ಕಕ್ಕಿಳಿದು ನಮ್ಮ ಜ್ಞಾನದ ಹರವನ್ನು ವಿಸ್ತರಿಸಬಲ್ಲಷ್ಟು ಅಗಾಧ ಶಕ್ತಿಯನ್ನು ಹೊಂದಿದೆ.

LEAVE A REPLY

Please enter your comment!
Please enter your name here