ದಿವಂಗತ, ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಬರಹ:

ನನ್ನ ಬದುಕು ಮತ್ತು ನನ್ನ ಓದು. ಎಳೆವೆಯಿಂದಲೂ ನಾನು ಕ್ರೈಸ್ತರೊಡನೆ ಒಡನಾಡುತ್ತಾ ಬೆಳೆದೆ. ಕ್ರೈಸ್ತ ಧರ್ಮಗುರುಗಳನೇಕರ ಪ್ರೀತಿಯ ಸಂಬಂಧ, ಸಂಪರ್ಕ ನಿರಂತರ ಇತ್ತು. ಈಗಲೂ ಅಷ್ಟೇ ಮಧುರ ವಾದ ಸಂಬಂಧ ಇದೆ. ನಾನು ಸ್ವಲ್ಪ ಬೆಳೆದ ಮೇಲೆ ಬಂಟ್ವಾಳ ಪೇಟೆ ನನ್ನ ಆಡುಂಬೊಲವಾಯಿತು. ಅಲ್ಲಿ ಬಹಳಷ್ಟು ಮುಸ್ಲಿಮ್ ಬಂಧುಗಳೊಡನೆ ನನಗೆ ಸ್ನೇಹ ಸಂಬಂಧ ಬೆಳೆಯಿತು. ಮುಂದೆ ನನಗೆ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಸಂಪರ್ಕ ವಾಯಿತು. ಮೆಲ್ಲ ಮೆಲ್ಲನೆ ಅದು ಸೌಹಾರ್ದಯುತ ನಿಕಟ ಪ್ರೇಮ ವಾಗಿ ಪರಿವರ್ತಿತವಾಯಿತು. ಹಾಗಾಗಿ ನನಗೆ ಯಾವ ಧರ್ಮೀಯರನ್ನು ಕಂಡರೂ ‘ಅನ್ಯರು’ ಎಂದು ಎನಿಸಲೇ ಇಲ್ಲ.

ಎಳೆವೆಯಿಂದಲೇ ಓದು – ನಿರಂತರ ಓದು ನನ್ನ ಹವ್ಯಾಸ. ನಾನು ಉಳಿದೆಲ್ಲಾ ಪ್ರಕಾರದ ಸಾಹಿತ್ಯದೊಡನೆ ಧರ್ಮಗ್ರಂಥಗಳ ಓದನ್ನೂ ಬೆಳೆಸಿಕೊಂಡೆ. ಧರ್ಮಗ್ರಂಥಗಳ ಓದಿನಲ್ಲಿ ಹಿಂದುಗಳ ಆದಿಮ ಗ್ರಂಥವೆಂದು ನಂಬಿಕೊಂಡು ಬಂದಿರುವ ಋಗ್ವೇದದಲ್ಲಿನ ಒಂದು ಮಾತು “ಆನೋ ಭದ್ರಾ: ಕೃತವೊ ಯಂತು ವಿಶ್ವತಃ” (ಪ್ರಪಂಚದ ಎಲ್ಲ ಕಡೆಗಳಿಂದಲೂ ಒಳ್ಳೆಯ ವಿಚಾರಗಳು ಬರಲಿ) ನನಗೆ ತುಂಬಾ ಪ್ರಿಯವಾಯಿತು. ಮುಂದೆ ಕನ್ನಡದ ಪ್ರಾಚೀನ ಕೃತಿ ಎಂದು ತಿಳಿದಿರುವ ‘ಕವಿರಾಜ ಮಾರ್ಗ’ ಇದನ್ನು ಓದುತ್ತಿರುವಾಗ ಮುತ್ತಿನಂತಹ ಇನ್ನೊಂದು ಮಾತು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿದುಕೊಂಡಿತು, “ಕಸವರಮೆಂಬುದು ನೆರೆ ಸೈರಿಸಲಾಪೆರ್ವೆಡೆ ಪರ ವಿಚಾರಮಂ ಪರಧರ್ಮಮಂ.” (ಪರರ ವಿಚಾರವನ್ನೂ, ಪರಧರ್ಮವನ್ನೂ ಸಹನೆ, ಸೌಹಾರ್ದಗಳಿಂದ ಕಾಣುವುದೇ ನಿಜವಾದ ಸಂಪತ್ತು.)

ಹೀಗೆ ಬೆಳೆದು ಬಂದ ನನ್ನ ಸಹಜ ಮನೋಧರ್ಮದಿಂದಾಗಿಯೇ ನನ್ನ ಯೌವನ ಪೂರ್ವದಲ್ಲೇ ಬೈಬಲನ್ನು ಓದಿದೆ. ಏಸುಕ್ರಿಸ್ತರನ್ನು ತಿಳಿದುಕೊಂಡೆ. ಹಾಗೆಯೇ ಕುರ್‍ಆನನ್ನು ಓದಿದೆ, ಪ್ರವಾದಿ ಪೈಗಂಬರ್ ಅವರ ಕುರಿತು ಓದಿಕೊಂಡೆ. ಮುಂದೆ ಶಾಂತಿ ಪ್ರಕಾಶನದವರೇ ಪ್ರಕಾಶಪಡಿಸಿದ ಪ್ರವಾದಿ ಮುಹಮ್ಮದರ ಕುರಿತಾದ ‘ಶತ್ರುವತ್ಸಲ’ ಎಂಬ ಕೃತಿಗೆ ಮುನ್ನುಡಿಯನ್ನು ಬರೆದೆ. ಪ್ರವಾದಿ ಮುಹಮ್ಮದರ ಕುರಿತಾದ ನನ್ನ ಅತಿ ಸೀಮಿತ ಓದಿನ ಅತ್ಯಂತ ಪರಿಮಿತಿ ತಿಳಿವಿನೊಡನೆ, ಶಾಂತಿ ಪ್ರಕಾಶನದವರ ಪ್ರೀತಿಗೆ ಮಣಿದು ಪ್ರವಾದಿಯವರ ಕುರಿತು ನಾಲ್ಕು ಮಾತು ಬರೆಯಲು ಮುಂದಾಗಿದ್ದೇನೆ.

ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ ಕ್ರಿ.ಶ 571 ಎಪ್ರಿಲ್ 22ನೇ ಸೋಮವಾರ (ರಬೀಉಲ್ ಅವ್ವಲ್ 9ನೇ ದಿನಾಂಕ) ಹುಟ್ಟುವಾಗ ಮಕ್ಕಾ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು ಹಲವಾರು ಗೋತ್ರಗಳ, ಪರಸ್ಪರ ಹೋರಾಟದ, ಮೂಢ ನಂಬಿಕೆಗಳ, ಅಸೂಯೆ, ಅಶ್ಲೀಲತೆ, ಕ್ರೌರ್ಯಗಳ ಆಗರವಾಗಿತ್ತು. ಇಂತಹ ಪ್ರದೇಶದ, ಕಾಲದ, ಜನಗಳ ನಡುವೆ ದೇವರ ಅನುಗ್ರಹವೇ ಧರೆಗಿಳಿದಂತೆ ಮುಹಮ್ಮದರ ಜನನವಾಯಿತು. ಶಾಂತಿ, ಸೌಹಾರ್ದಗಳ ಸಂದೇಶವನ್ನು ಇವರ ಮೂಲಕ ಜನತೆಗೆ ನೀಡಲೆಂದೇ, ಅಲ್ಲಾಹನ ಇಚ್ಚೆಯಂತೆ ಮುಹಮ್ಮದ್‍ರ ಜನ್ಮವಾಯಿತು. ಈ ಮೂಲಕ ಅರೇಬಿಯದ ಮರುಭೂಮಿಯಲ್ಲಿ ಕೋಟ್ಯಂತರ ಜನರಿಗೆ ತಂಪೀವ ಮಹಾ ವಟುವೃಕ್ಷದ ಬೀಜಾಂಕುರವಾಯಿತು. ಮುಂದೆ ಅದು ವಿಶ್ವವ್ಯಾಪಿಯಾಗಿ ತನ್ನ ರೆಂಬೆ ಕೊಂಬೆಗಳನ್ನು ಹಬ್ಬಿ ಹರಡಿಕೊಂಡುದುದು ಇತಿಹಾಸ.

ಮುಹಮ್ಮದರು ಹುಟ್ಟಿನಲ್ಲಿ ಸ್ಪುರದ್ರೂಪಿಯಾಗಿದ್ದರು. ಅವರ ಹುಟ್ಟಿನ ಸಂದೇಶವನ್ನು ಪಿತಾಮಹ ಅಬ್ದುಲ್ ಮುತ್ತಲಿಬ್ ಅವರಿಗೆ ತಿಳಿಸಲು ಬಂದ ದಾಸಿ ಬರ್ಕ ಒಂದೇ ಉಸಿರಿಗೆ ಹೇಳುತ್ತಾಳೆ “ಸರದಾರರೇ ಶುಭವಾಗಲಿ, ಅಮ್ಮಾ ಅವರಿಗೆ ಚಂದ್ರನಂತಹ ಮುಖದ, ಕಾಡಿಗೆಯಂತಹ ಕಣ್ಣುಗಳ, ಅತ್ಯಂತ ಪರಿಶುದ್ಧ ದೇಹದ, ಸುಗಂಧ ಸೂಸುವ ಗಂಡು ಮಗು ಹುಟ್ಟಿದೆ.” ಎಳೆವೆಯಲ್ಲೇ ಆ ಸುಂದರ ದೇಹದೊಡನೆ ಆದ್ರ್ರವಾದ ಹೃದಯವಂತಿಕೆಯೂ ಅವರಲ್ಲಿ ಬೆಳೆಯಿತು. ತನ್ನ ಸುತ್ತಮುತ್ತಣ ಹಲವು ಗೋತ್ರಗಳ, ಮೂಢನಂಬಿಕೆಗಳ, ಪರಸ್ಪರ ಹೊಡದಾಡುತ್ತಿರುವ ಅನೈತಿಕತೆಯ ಪಾಶವೀ ಜನಸಮೂಹವನ್ನು ಹೇಗೆ ಏಕದೇವತಾರಾಧನೆಯ, ಸಮಾನತೆಯ, ಸೌಹಾರ್ದದ ಪ್ರೀತಿವಿಶ್ವಾಸಗಳ ನೆಲೆಗೆ ನಡೆಸಿ ತರಬಹುದೆಂಬ ಕಳಕಳಿ, ಕಾಳಜಿ ಮುಹಮ್ಮದರನ್ನು ಕಾಡಿತು. ಪ್ರಾಯಶಃ ಈ ಕುರಿತು ಚಿಂತಿಸಲೆಂದೇ ಮಕ್ಕಾದಿಂದ 3 ಕಿಲೋಮೀಟರ್ ದೂರದಲ್ಲಿದ್ದ ನೂರ್ ಬೆಟ್ಟಕ್ಕೆ ಹೋಗಿ ಅಲ್ಲಿ ‘ಹಿರಾ’ ಗುಹೆಯಲ್ಲಿ ಕುಳಿತು ಅವರು ಧ್ಯಾನಮಗ್ನರಾಗುತ್ತಿದ್ದರು.

ಇಂತಹ ನಿಶ್ಯಬ್ದ, ನಿತಾಂತ ಧ್ಯಾನದ ಸ್ಥಿತಿಯಲ್ಲೇ ಮುಹಮ್ಮದರಿಗೆ ದೇವದೂತ ಜಿಬ್ರೀಲ್‍ನ ಮೂಲಕ ಪವಿತ್ರ ಕುರ್‍ಆನಿನ ಅವತರಣವಾಗುತ್ತದೆ. ಅದು ಅಲ್ಲಾಹನ ಕರುಣೆಯ ಮೂಲಕ. ಮುಹಮ್ಮದರ ನಲುವತ್ತನೆಯ ವರ್ಷದಿಂದ ಅವತೀರ್ಣಗೊಳ್ಳಲು ಪ್ರಾರಂಭವಾದ ಕುರ್‍ಆನಿನ ಧರ್ಮವಾಕ್ಯಗಳು ಮುಂದೆ ಹಲವು ವರ್ಷಗಳು ಅವತೀರ್ಣಗೊಳ್ಳುತ್ತಲೇ ಇರುತ್ತವೆ. ಮುಂದೆ ಅವೇ 114 ಅಧ್ಯಾಯಗಳಲ್ಲಿ ಪವಿತ್ರ ಕುರ್‍ಆನ್ ಆಗಿ ಒಟ್ಟೈಸುತ್ತವೆ.

ಹೀಗೆ ಅವತೀರ್ಣಗೊಂಡ ಪವಿತ್ರ ಕುರ್‍ಆನಿನ ನೆಲೆಯಲ್ಲಿ ಪ್ರವಾದಿ ಮುಹಮ್ಮದರು ಇಸ್ಲಾಂ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ತನ್ನ ಮುಂದೆ ಬದುಕನ್ನೇ ಸಮರ್ಪಿಸಿಕೊಳ್ಳುತ್ತಾರೆ. ಈ ಸಾಧನೆಯ ಹಾದಿಯಲ್ಲಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವರಿಗೆ ನಿಂದನೆ, ಉಪಟಳ, ಯುದ್ಧ ಮತ್ತು ಅವರನ್ನು ವಿಷಹಾಕಿ ಸಾಯಿಸುವ, ಕರವಾಳದಿಂದ ಕಡತಂದಿಟ್ಟು ನಿಂತರು.

ಅಲ್ಲಾಹನು ಪ್ರವಾದಿ ಮುಹಮ್ಮದರ ಗುಣಗ್ರಹಣವನ್ನು ಮಾಡಿಯೇ ಅವರನ್ನು ತನ್ನ ಸಂದೇಶವಾಹಕರನ್ನಾಗಿ ಆಯ್ಕೆ ಮಾಡಿಕೊಂಡನು. ಪ್ರವಾದಿ ಮುಹಮ್ಮದರು ಆ ದಿನಗಳಲ್ಲಿ ಅವಿವೇಕಿಗಳೂ ಕ್ರೂರಿಗಳೂ ಆಗಿದ್ದ ಜನರ ನಡುವೆ ತನಗೆ ಅವತೀರ್ಣವಾದ ಸತ್ಯಧರ್ಮದ ಪ್ರಸಾರ ಮಾಡಬೇಕಿತ್ತು. ಆದರೂ ಅವರು ಎದೆಗುಂದಲಿಲ್ಲ, ಸಹನೆಯನ್ನು ಕಳೆದುಕೊಳ್ಳಲಿಲ್ಲ. ಕ್ರೂರ ಹಿಂಸೆ, ಅಸಹನೀಯ ವಿರೋಧದ ನಡುವೆಯೂ ಅವರು ಇಸ್ಲಾಮಿನ ಶಾಂತಿ ಸೌಹಾರ್ದಗಳ ಸಂದೇಶವನ್ನು ಸಾರುತ್ತಾ ಹೋದರು. ಪ್ರವಾದಿ ಮುಹಮ್ಮದರು ಈ ಮಹಾ ಸಾಹಸ ಯಾತ್ರೆಯಲ್ಲಿ ಯಶಸ್ವಿಯಾಗಲು ಅವರಿಗೆ ಅಲ್ಲಾಹನ ಪೂರ್ಣಾನುಗ್ರಹವಿತ್ತು.

ಪ್ರವಾದಿ ಮುಹಮ್ಮದರ ಸಕಲಧರ್ಮಿಯರಿಗೂ ಮಾನ್ಯವಾಗಬಹುದಾದ ಕೆಲವು ಮಾತುಗಳನ್ನು ಕೇಳಿ –

* ಮನುಷ್ಯನ ಅತ್ಯಂತ ಶ್ರೇಷ್ಠ ಬುತ್ತಿ ಅಂದರೆ ದೇವಭಕ್ತಿ.

* ಮದ್ಯಪಾನವು ಕೆಡುಕುಗಳ ತಾಯಿಯಾಗಿದೆ.

* ಮನುಷ್ಯನಿಗೆ ಧಾರ್ಮಿಕ, ನೈತಿಕ ಮತ್ತು ಆಧ್ಯಾತ್ಮಿಕ ಲಾಭ ದೊರಕುವ ಕಾರ್ಯಗಳೇ ಅತ್ಯುತ್ತಮವಾದವುಗಳು.

* ಅತ್ಯಂತ ಕೆಟ್ಟ ಕುರುಡು ಹೃದಯದ ಕುರುಡು.

* ಹೃದಯ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯಾಗಿದೆ.

* ಪಾಶು ಕಾರ್ಯಗಳಲ್ಲಿ ಅತ್ಯಂತ ಘೋರವಾದುದು ಸುಳ್ಳು ಹೇಳುವುದಾಗಿದೆ.

ಉದಾಹರಣೆಗಾಗಿ ಮಾತ್ರ ಕೆಲವೇ ಮಾತುಗಳನ್ನು ನಾನಿಲ್ಲಿ ಎತ್ತಿ ಹೇಳಿದೆ. ಇಂತಹ ಉದಾತ್ತ ವಿಚಾರಗಳ ಮೂಲಕ ಅಂದಿನ ಮಕ್ಕಾ, ಮದೀನಾಗಳ ಮರಳುಗಾಡಿನಲ್ಲಿ ಶಾಂತಿ, ಪ್ರೀತಿಗಳ ನಿರ್ಮಲ, ತಂಪಿನ ತೊರೆಯನ್ನು ಹರಿಸಿಯಿಸಿ ಜನಮನವನ್ನು ಗೆದ್ದರು. ಈ ಸಾಹಸ ಯಾತ್ರೆಯಲ್ಲಿ ಅವರು ತಮಗೆ ಎದುರಾದ ಆಪತ್ತು, ನೋವುಗಳನ್ನು ದೃಢಚಿತ್ತದಿಂದ ಎದುರಿಸುತ್ತಾ ಮುನ್ನೆಡೆದರು. ಕೊನೆಗೂ ತಮಗೆ ಅಲ್ಲಾಹ್‍ನಿಂದ ಅವತೀರ್ಣಗೊಂಡ ಸಂದೇಶಗಳನ್ನು ಲಕ್ಷಾಂತರ ಜನರ ಹೃದಯದಲ್ಲಿ ಬಿತ್ತಿ ಬೆಳೆಸಿ ಇಸ್ಲಾಂ ಧರ್ಮವನ್ನು ಹುಟ್ಟಿ ಬೆಳೆಯಿಸುವುದರಲ್ಲಿ ಯಶಸ್ಸು ಕಂಡರು.

ಪ್ರವಾದಿ ಮುಹಮ್ಮದರು(ಸ) ತನ್ನ ವಿರುದ್ಧವಿದ್ದವರ ಮಾತ್ರವಲ್ಲ, ತನ್ನನ್ನು ಹತ್ಯೆ ಮಾಡ ಬಂದವರಿಗೂ ಕ್ಷಮೆ ನೀಡಿ, ಶಾಂತಿ, ಸಹನೆಗಳಿಂದ, ಪ್ರೀತಿಯ ಮಾತುಗಳಿಂದ ತಿಳಿಹೇಳಿ ಕಳುಹಿಸಿರುವುದನ್ನು ಅವರ ಜೀವನ ಚರಿತ್ರೆ ಓದಿದಾಗ ಅರಿವಾಗುವುದು. ಇಸ್ಲಾಂ ಎಂದರೇ ಶಾಂತಿ ಎಂದು ಅರ್ಥ. ಯಾವುದೇ ಧರ್ಮ ಅನ್ಯರನ್ನು ಕೊಲ್ಲುವುದು ಬಿಡಿ, ದ್ವೇಷಿಸುವುದನ್ನೂ ಹೇಳಲಾರದು. ಇಂದು ಪ್ರಪಂಚಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮದ ಮೂಲತತ್ವಗಳನ್ನು ಅರಿತು ಅವುಗಳನ್ನು ನಿಷ್ಠೆಯಿಂದ ಆಚರಿಸುತ್ತಾ ಅನ್ಯ ಧರ್ಮೀಯರೊಡನೆ ಸ್ನೇಹ ಸದಾಶಯಗಳೊಂದಿಗೆ ಸಹಬಾಳ್ವೆ ನಡೆಸುವುದು. ಸಾಮಾಜಿಕ ಶಾಂತಿಗೆ ಸಹಕಾರಿಗಳಾಗುವುದು.

ಪ್ರವಾದಿ ಮುಹಮ್ಮದರ(ಸ) ಸಂದೇಶಗಳ ಕುರಿತು ನಡೆಯುವ ಅಭಿಯಾನದ ಈ ಶುಭ ಸಂದರ್ಭದಲ್ಲಿ ಪರಮ ದಯಾಮಯನೂ, ಪರಮ ಕರುಣಾ ನಿಧಿಯೂ ಆದ ದೇವರು ನಮ್ಮೆಲ್ಲರ ಹೃದಯದಲ್ಲೂ ಶಾಂತಿ, ಪ್ರೀತಿ, ಸದಾಶಯಗಳನ್ನು ಹುಟ್ಟುಹಾಕಲಿ, ಪರಸ್ಪರ ಸ್ನೇಹ ಸೌಹಾರ್ದಗಳೊಡನೆ ನಾವೆಲ್ಲ ಕೂಡಿ ಬಾಳುವಂತಾಗಲಿ, ಆ ಮೂಲಕ ಒಟ್ಟು ಸಮಾಜ ಪ್ರಸನ್ನ ಮತ್ತು ಪ್ರಶಾಂತವಾಗಿರಲಿ. ಸಮಸ್ತ ಜನಕೋಟಿ ಪ್ರಬೋಧಕವಾಗಲಿ, ಸಮಗ್ರ ದೇಶ ಪ್ರವರ್ಧಮಾನವಾಗಲಿ.

– ಕೃಪೆ, ಶಾಂತಿ ಪ್ರಕಾಶನ

LEAVE A REPLY

Please enter your comment!
Please enter your name here