- ತನ್ಸೀರಾ ಆತೂರು
ಪ್ರವಾದಿ ಮುಹಮ್ಮದರು ಕ್ರಿ.ಶ. 571 ಎಪ್ರಿಲ್ 22ರಂದು ಮಕ್ಕಾದಲ್ಲಿ ಜನಿಸಿದರು. ಎಳವೆಯಲ್ಲೇ ತಂದೆ–ತಾಯಿಯನ್ನು ಕಳೆದುಕೊಂಡು, ಎಂಟು ವರ್ಷ ವಯಸ್ಸಿನವರೆಗೆ ತಾತ ಅಬ್ದುಲ್ ಮುತಾಲಿಬ್‌ರ ಪೋಷಣೆಯಲ್ಲಿ ಬೆಳೆದರು. ನಂತರ ಚಿಕ್ಕಪ್ಪ ಅಬೂತಾಲಿಬ್ ಬಹಳ ಪ್ರೀತಿ-ವಾತ್ಸಲ್ಯದಿಂದ ಅವರನ್ನು ಸಾಕಿದರು. ಚಿಕ್ಕ ಪ್ರಾಯದಲ್ಲೇ ವ್ಯಾಪಾರದಲ್ಲಿ ಆಸಕ್ತಿ ಹೊಂದಿ ಸಿರಿಯಾಗೆ ಚಿಕ್ಕಪ್ಪನೊಂದಿಗೆ ಪ್ರಯಾಣಿಸಿದ್ದರು. ವ್ಯಾಪಾರದಲ್ಲಿ ಅತ್ಯಂತ ಪ್ರಾಮಾಣಿಕತೆಯನ್ನು ಮೆರೆದು ಮಕ್ಕಾದ ಎಲ್ಲ ಗೋತ್ರಗಳ ಜನರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬಾಲ್ಯದಿಂದಲೇ ಇವರ ಸತ್ಯಸಂಧತೆ, ವಿನಯಶೀಲತೆ ಜನರ ಗಮನ ಸೆಳೆದಿತ್ತು.
ಯೌವನಕ್ಕೆ ಬಂದಾಗ ಮಕ್ಕಾದ ಸಿರಿವಂತ ವಿಧವೆ ಖತೀಜಾ(ರ) ಅವರ ಕಡೆಯಿಂದ ವಿವಾಹ ಪ್ರಸ್ತಾಪ ಬಂತು. ಹಿರಿಯರ ಮಾತುಕತೆಯಂತೆ 40 ವರ್ಷ ವಯಸ್ಸಿನ ಖದೀಜಾರನ್ನು 25ರ ಹರೆಯದ ಮುಹಮ್ಮದರು ವಿವಾಹವಾಗುತ್ತಾರೆ. ಖದೀಜಾ ಅವರು ಬದುಕಿರುವವರೆಗೂ ಆ ದಾಂಪತ್ಯಜೀವನ ಸುಖಮಯವಾಗಿತ್ತು. ಅಂದು ಅರಬ್‌ನ ವಾತಾವರಣವು ಸಾಮಾಜಿಕವಾಗಿ ಕಲುಷಿತವಾಗಿತ್ತು. ಮದ್ಯಪಾನ, ಅಶ್ಲೀಲ ನೃತ್ಯ, ಜೂಜು ಯುವಕರ ಮನಸ್ಸನ್ನು ರಂಜಿಸುತ್ತಿದ್ದವು. ಬಲಶಾಲಿಯಾದವನು ದುರ್ಬಲನನ್ನು ದೋಚುವುದು ಸಕ್ರಮವೆಂಬಂತೆ ನಡೆದಿತ್ತು. ಸ್ತ್ರೀಯರನ್ನು ಜಾನುವಾರುಗಳಂತೆ ಮಾರುವುದು, ಕೆಲವು ಗೋತ್ರಗಳಲ್ಲಿ ಹೆಣ್ಣುಮಗುವನ್ನು ಜೀವಂತ ಹೂಳುವುದು ಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಉತ್ತಮ ಚಾರಿತ್ರ್ಯ, ಗುಣನಡತೆ, ಸತ್ಯ ಮತ್ತು ನ್ಯಾಯಪಾಲನೆಯ ಮನೋಭಾವದಿಂದ ಮುಹಮ್ಮದ್ ಗೌರವಾರ್ಹರಾಗಿದ್ದರು. ಸಮಯ ಸಿಕ್ಕಿದಾಗ ಮಕ್ಕಾ ಹೊರವಲಯದ ಹಿರಾ ಎಂಬ ಗುಹೆಯಲ್ಲಿ ಧ್ಯಾನಮಗ್ನರಾಗುತ್ತಿದ್ದರು
ದೇವದೂತ ಜಿಬ್ರೀಲರ ಮೂಲಕ ಅವತೀರ್ಣಗೊಂಡ ಖುರ್‌ಆನ್, ಮಾನವನ ಸಮಗ್ರ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿಯ ಕುರಿತು ಮಾತನಾಡುತ್ತದೆ. ಮುಹಮ್ಮದರು ಅನಕ್ಷರಸ್ಥರು. ಆದರೆ ಖುರ್‌ಆನ್ ಮೂಲಕ ಅವರು ಮುಸ್ಲಿಮರಿಗೆ ನೀಡಿರುವ ಸಮಗ್ರ ಜೀವನಪದ್ಧತಿಯ ಪಾಠ ಒಂದು ಅದ್ಭುತವೇ ಸರಿ. ಚಾರಿತ್ರ್ಯಹೀನರಾಗಿದ್ದ ಅರಬರ ನೈತಿಕ ಮೌಲ್ಯಗಳ ಸಂರಕ್ಷಕರಾದ ಮುಹಮ್ಮದರು, ಇಡೀ ಮನುಕುಲವೇ ಒಂದು ಎಂದು ಸಾರಿದರು. ಧರ್ಮ, ಮೈಬಣ್ಣ, ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಪರಸ್ಪರ ಮನುಷ್ಯರ ನಡುವೆ ಮೇಲು ಕೀಳು ಇಲ್ಲ ಎಂದು ಸಾರಿದರು. ಗುಲಾಮ ಪದ್ಧತಿಯನ್ನು ತೊಲಗಿಸಲು ಯತ್ನಿಸಿದರು. ‘ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು, ಉಣ್ಣುವವನು ನನ್ನವನಲ್ಲ’ ಎನ್ನುವುದು ಅವರ ಪ್ರಸಿದ್ಧ ಸೂಕ್ತಿ. ಸರ್ವಶಕ್ತ, ನಿರಾಕಾರ, ಸ್ವಯಂಸಂಪೂರ್ಣನೂ ಆಗಿರುವ ಏಕದೇವನನ್ನು ಆರಾಧಿಸಿ ಎನ್ನುವುದು ಅವರ ಧರ್ಮಪ್ರಚಾರದ ತಿರುಳು.
ಕೆಡುಕನ್ನು ತಡೆಯುವ, ಅನ್ಯಾಯದ ವಿರುದ್ಧ ಹೋರಾಡುವ, ಮಾನವೀಯತೆಯೊಂದಿಗೆ ಜನಸೇವೆ ಮಾಡುವುದು ಬದುಕಿನ ಉದ್ದೇಶ ಆಗಿರಬೇಕೆಂದು ಸಾರಿದರು ಪ್ರವಾದಿ. ಸಂಪತ್ತಿನ ಕ್ರೋಢೀಕರಣ ಸಲ್ಲದು, ಅದು ಸಮಾಜದ ಬಡವರಿಗೂ ತಲುಪಬೇಕು ಎನ್ನುವುದಕ್ಕಾಗಿ ಸಂಪತ್ತಿನ ಕಡ್ಡಾಯ ದಾನ (ಝಕಾತ್) ವ್ಯವಸ್ಥೆ ಜಾರಿಗೆ ತಂದರು. ಬಡ್ಡಿಯನ್ನು ನಿಷೇಧಿಸಿದರು. ‘ಕಾರ್ಮಿಕನ ಬೆವರು ಭೂಮಿಗೆ ಬೀಳುವ ಮುನ್ನ ಅವನ ಕೂಲಿಯನ್ನು ಕೊಡಿರಿ’ ಎಂದು ಆದೇಶಿಸಿದರು. ‘ಮೂವರು ಹೆಣ್ಣುಮಕ್ಕಳನ್ನು ಹೆತ್ತು, ಉತ್ತಮ ಶಿಕ್ಷಣ ನೀಡಿ, ಯೋಗ್ಯ ವರನಿಗೆ ವಿವಾಹ ಮಾಡಿಕೊಡುವ ಹೆತ್ತವರಿಗೆ ಸ್ವರ್ಗದ ಭರವಸೆ’ ನೀಡಿದರು. ಆಸ್ತಿಯಲ್ಲಿ ಮಹಿಳೆಗೆ ಹಕ್ಕು ನೀಡಿ, ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು.
ಪ್ರವಾದಿತ್ವ ಲಭಿಸಿದ ಬಳಿಕ 23 ವರ್ಷಗಳಲ್ಲಿ ಇಸ್ಲಾಂ ಎಂಬ ಜೀವನಪದ್ಧತಿಯನ್ನು 12 ಲಕ್ಷ ಚದರ ಮೈಲಿ ವಿಸ್ತೀರ್ಣದ ಭೂಪ್ರದೇಶದಲ್ಲಿ ಪಸರಿಸಿದ ಯಶಸ್ವಿ ನಾಯಕ ಮುಹಮ್ಮದರು. ಇವತ್ತು ಜಗತ್ತಿನಾದ್ಯಂತ ಅವರ ಅನುಯಾಯಿಗಳಿದ್ದಾರೆ. ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗಿದ್ದರೂ ಅವರು ಬಡವರಾಗಿ ಬದುಕಿದರು. ಚಾಪೆಯ ಮೇಲೆ ಮಲಗುತ್ತಿದ್ದರು, ತಮ್ಮ ಚಪ್ಪಲಿ ತಾವೇ ಹೊಲಿದುಕೊಳ್ಳುತ್ತಿದ್ದರು. ದನದ ಹಾಲು ಕರೆಯುತ್ತಿದ್ದರು, ಮನೆಯನ್ನು ಗುಡಿಸಿ ಶುಚಿ ಮಾಡುತ್ತಿದ್ದರು. ಪತ್ನಿಗೆ ಅಡುಗೆಯಲ್ಲಿ ನೆರವಾಗುತ್ತಿದ್ದರು. ಇಂದು ಮುಸ್ಲಿಂ ದೊರೆಗಳ, ಜನಪ್ರತಿನಿಧಿಗಳ ಐಶಾರಾಮದ ಜೀವನವನ್ನು ನಾವು ಕಾಣುತ್ತಿದ್ದೇವೆ. ಇದು ಪ್ರವಾದಿಯವರ ಸರಳ ಜೀವನಕ್ಕೆ ತದ್ವಿರುದ್ಧ ಸಂಗತಿಯಾಗಿದೆ.
ಕುರ್ ಆನ್ ಹೇಳುವಂತೆ ಆದಮರಿಂದ ಹಿಡಿದು ಅಂತಿಮ ದೇವ ಸಂದೇಶವಾಹಕ ಮುಹಮ್ಮದರವರೆಗೆ ಯಾವ ಪೈಗಂಬರರೂ ಪುರೋಹಿತರಾಗಿರಲಿಲ್ಲ, ಪ್ರತಿಯೊಬ್ಬರೂ ಸಮಾಜಕ್ಕಾಗಿ ಸದಾ ಜಾಗರೂಕರಾಗಿರುತ್ತಿದ್ದರು.
ಅರ್ಥವರಿಯದ ಶಬ್ದಗಳನ್ನು ಮಂತ್ರಿಸುವುದಾಗಲೀ, ಸಮಾಜಕ್ಕಾಗಿ ಶ್ರಮಿಸದೆ, ಸಮಾಜದೊಂದಿಗೆ ಸಂಪರ್ಕವನ್ನಿಡದೆ ದೇಹವನ್ನು ಬೆಳೆಸಿಕೊಂಡು ಕೆಲ ವ್ಯಕ್ತಿಪೂಜೆಯಂತಹ ಅಂಧ ಶ್ರದ್ಧೆಯ ಭಕ್ತರನ್ನು ಕಟ್ಟಿಕೊಂಡು ಢಂಭಾಚಾರ ಪ್ರದರ್ಶನದ ಒಂದಂಶವೂ ಪ್ರವಾದಿಗಳ ಪ್ರಕೃತಿಯಲ್ಲ.ನಮಾಝ್, ಝಕಾತ್, ಉಪವಾಸ, ಹಜ್ಜ್ ಗಳು ದೇವನ ಸಾಮೀಪ್ಯಕ್ಕಾಗಿರುವ ಕಡ್ಡಾಯ ಕರ್ಮಗಳು, ಇದರಿಂದ ಸದಾ ದೇವನನ್ನು ಸ್ಮರಿಸಿ ದೇವ ನಿಷ್ಠೆಗಳಿಸಿ, ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದು ಮತ್ತು, ಈ ಹಾದಿಯಲ್ಲ ಬರುವ ಅಡೆತಡೆ, ಪರೀಕ್ಷಾಘಟ್ಟದಲ್ಲೂ ದೇವ ಸಹಾಯ ದೊರೆಯುತ್ತಲಿರುವುದು.
ಸಮಾಜದ ನವ ನಿರ್ಮಾಣ
ಪ್ರವಾದಿ (ಸ) ಮದೀನಾಗೆ ಹೋದಾಗ ಅಲ್ಲೊಂದು ಅಧಿಕೃತ ಸರಕಾರ ಇರಲಿಲ್ಲ. ಮದೀನಾ ಮಾತ್ರವಲ್ಲ ಅರಬ್ ನಾಡಿನ ಹೆಚ್ಚಿನೆಡೆ ಅಧಿಕೃತ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಅಲ್ಲಲ್ಲಿ ವಿವಿಧ ಬುಡಕಟ್ಟು ಜನಾಂಗಗಳು ಮತ್ತು ಕುಲಗೋತ್ರಗಳು ತಮ್ಮ ಶಕ್ತಿ ಸಾಮರ್ಥ್ಯಗಳ ಆಧಾರದಲ್ಲಿ ಭೂಮಿಯ ಯಾವ ಭಾಗ ಯಾರಿಗೆ ಸೇರಿದ್ದೆಂದು ತೀರ್ಮಾನಿಸಿ ಅದರ ಆಧಾರದಲ್ಲೇ ಹಕ್ಕು ಸಾಧಿಸುತ್ತಿದ್ದರು. ಪ್ರತಿಯೊಂದು ಜನಾಂಗಕ್ಕೆ ಆಯಾ ಜನಾಂಗದ ನಾಯಕನೇ ಆಡಳಿತಗಾರನಾಗಿರುತ್ತಿದ್ದನು. ಯಾವುದಾದರೂ ಜನಾಂಗದೊಳಗಿನ ವಿವಿಧ ಪಂಗಡಗಳ ನಡುವೆ ಅಥವಾ ಎರಡು ಭಿನ್ನ ಜನಾಂಗಗಳ ನಡುವೆ ಘರ್ಷಣೆ ಏರ್ಪಟ್ಟಾಗ ಸಕಾಲದಲ್ಲಿ ಅದನ್ನು ಇತ್ಯರ್ಥಗೊಳಿಸಬಲ್ಲ ಯಾವುದೇ ಏರ್ಪಾಡು ಅಲ್ಲಿರಲಿಲ್ಲ. ಇದರಿಂದಾಗಿ ಚಿಕ್ಕಪುಟ್ಟ ಕಾರಣಗಳಿಗಾಗಿ ಆರಂಭವಾದ ಜಗಳಗಳು ಯುದ್ಧದ ರೂಪ ತಾಳಿ ಹಲವು ವರ್ಷಗಳಷ್ಟು ಕಾಲ ಮುಂದುವರಿಯುತ್ತಿದ್ದವು. ಅಂತಹ ಸಮಾಜದಲ್ಲಿ ಪ್ರವಾದಿ (ಸ) ತಮ್ಮ ಅನುಯಾಯಿಗಳನ್ನು ಮಾತ್ರವಲ್ಲ ಮದೀನಾ ಮತ್ತು ಅದರ ಸುತ್ತಮುತ್ತಲ ವಿವಿಧ ಜನಾಂಗ, ಕುಲಗೋತ್ರಗಳು ಮತ್ತು ಬುಡಕಟ್ಟುಗಳ ಜನರನ್ನು ಒಂದುಗೂಡಿಸಿ ಅವರೆಲ್ಲರ ಸಮ್ಮತಿಯೊಂದಿಗೆ ಒಂದು ಸರಕಾರವನ್ನು ಸ್ಥಾಪಿಸಿದರು. ವಿಶೇಷವೇನೆಂದರೆ ಏಳನೇ ಶತಮಾನದಲ್ಲಿ (ಕ್ರಿ.ಶ. 622) ಧರ್ಮಸ್ಥಾಪಕರೊಬ್ಬರು ಸ್ಥಾಪಿಸಿದ ಆ ಸರಕಾರವು ಒಂದು ಧರ್ಮದವರ ಹಿತಕ್ಕಾಗಿ ಸ್ಥಾಪಿಸಿದ ಸರಕಾರವಾಗಿರಲಿಲ್ಲ. ಅದು ವಿಭಿನ್ನ ಧಾರ್ಮಿಕ ಹಿನ್ನೆಲೆಯ ಎಲ್ಲ ನಾಗರಿಕರಿಗೆ ಸಮಾನ ಸ್ಥಾನಮಾನವನ್ನು ನೀಡುವ, ಎಲ್ಲರಿಗೆ ನ್ಯಾಯ ಒದಗಿಸುವ, ಎಲ್ಲರ ಸಮಗ್ರ ಅಭ್ಯುದಯ ಬಯಸುವ ಮತ್ತು ಎಲ್ಲರಿಗೆ ಗೌರವ ಹಾಗೂ ಭದ್ರತೆ ನೀಡುವ ಸರಕಾರವಾಗಿತ್ತು.
ಪ್ರಥಮ ಲಿಖಿತ ಸಂವಿಧಾನ
ಪ್ರವಾದಿಯವರು ಮದೀನಾ ಪ್ರವೇಶಿಸಿದ ವರ್ಷದಲ್ಲೇ
ಅವರು ಮಾಡಿದ ಒಂದು ಉತ್ತಮ ವ್ಯವಸ್ಥೆ ವೆಂದರೆ ಅಲ್ಲಿರುವ ರಲ್ಲಾ ಪಂಗಡಗಳು ಒಪ್ಪುವಂತಹ ಒಂದು ಸಂವಿಧಾನದ ರಚನೆ ಅದು ಇತಿಹಾಸದಲ್ಲೇ ಪ್ರಥಮವಾಗಿ ಲಿಖಿತ ಸಂವಿಧಾನದ ರಚನೆ ಅದು ಪ್ರವಾದಿಯವರ ಒಂದು ಸಾಧನೆಯಾಗಿದೆ ಅದರ ಒಂದು ಗಣ್ಯ ಭಾಗ ಮುಸ್ಲಿಮರಿಗೆ ಸಂಭಂದಿಸಿದ್ದು ಮತ್ತು ಬಹುತೇಕವಾಗಿ ಅರ್ದ ಭಾಗ ಇತರ ಸಮುದಾಯ ಮುಸ್ಲಿಮರಲ್ಲದ ಜನರ ಹಿತ ರಕ್ಷಣೆಗೆ ಸಂಬಂಧಿಸಿದ ಹಕ್ಕು ಭಾದ್ಯತೆಗಳನ್ನು ಒಳಗೊಂಡ ರಚನೆಯು ಹೆಚ್ಚು ಗಮನಾರ್ಹ ಆ ಸಂವಿಧಾನದ ಅನ್ವಯ ಎಲ್ಲಾ ಧರ್ಮದರಿಗೂ ಸಮಾನ ಮಟ್ಟದ ಪೌರತ್ವದ ಅಂಗೀಕಾರ ಹಾಗೂ ಎಲ್ಲಾ ಧರ್ಮದ ಅನುಯಾಯಿಗಳು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುವ ಅಧಿಕಾರ ಹಾಗೂ ಅವರ ಮೇಲೆ ಅವರ ಇಚ್ಚೆಗೆ ವಿರುದ್ಧವಾಗಿ ಯಾವುದೇ ಧರ್ಮವನ್ನು ಹೇರಬಾರದು ಎಂದು ವಿಧಿಸಲಾಗಿತ್ತು
ಈ ಸಂವಿಧಾನದ ಪ್ರಕಾರ ಸರಕಾರದ ಸಂವಿಧಾನ ದತ್ತ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿತ್ತು ಮತ್ತು ಪ್ರತಿಯೊಬ್ಬ ಪ್ರಜೆಯ ಹಕ್ಕು ಹಾಗೂ ಹಿತಾಸಕ್ತಿಗಳ ಸಂರಕ್ಷಣೆಯು ಪ್ರವಾದಿ ಮುಹಮ್ಮದರ ನೇತೃತ್ವದ ಸರಕಾರದ ಕರ್ತವ್ಯವಾಗಿತ್ತು. ಸರಕಾರವು ತನ್ನ ಅಧಿಕಾರ ವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬ ನಾಗರಿಕನ ಮೂಲಭೂತ ಮಾನವೀಯ ಹಕ್ಕುಗಳನ್ನು ಗುರುತಿಸಿ ರಕ್ಷಿಸುವ ಹೊಣೆ ಹೊತ್ತಿತು. ನಾಗರಿಕರ ಜೀವ ಮತ್ತು ಸೊತ್ತುಗಳ ರಕ್ಷಣೆ ಮಾತ್ರವಲ್ಲ ಅವರ ಪೈಕಿ ದುರ್ಬಲ ಸ್ಥಿತಿಯಲ್ಲಿರುವವರ ಅನ್ನ, ವಸ್ತ್ರ ಮತ್ತು ಆಶ್ರಯದಂತಹ ಮೂಲಭೂತ ಅಗತ್ಯಗಳ ಈಡೇರಿಕೆಯ ಹೊಣೆ ಕೂಡಾ ಸರಕಾರದ್ದಾಗಿತ್ತು. ಪ್ರವಾದಿ ಸ್ಥಾಪಿಸಿದ ಆಡಳಿತ ವ್ಯವಸ್ಥೆಯು ಕೇಂದ್ರ ಪ್ರಧಾನವಾಗಿರದೆ ಒಕ್ಕೂಟ ವ್ಯವಸ್ಥೆಯ ಸ್ವರೂಪದಲ್ಲಿತ್ತು. ಹೆಚ್ಚಿನೆಲ್ಲಾ ಆಡಳಿತಾತ್ಮಕ ಚಟುವಟಿಕೆಗಳನ್ನು ಕೆಳಸ್ತರಕ್ಕೆ ವರ್ಗಾಯಿಸಲಾಗಿತ್ತು. ಉದಾ: ಆಡಳಿತದ ಅನುಕೂಲಕ್ಕಾಗಿ ವಿವಿಧ ಪ್ರದೇಶ ಹಾಗೂ ಜನಾಂಗಗಳ ಆಡಳಿತಾತ್ಮಕ ಅಧಿಕಾರವ್ಯಾಪ್ತಿಯನ್ನು ಗೊತ್ತುಪಡಿಸಿ, ನಿರ್ದಿಷ್ಟ ಪ್ರದೇಶದ ಹಾಗೂ ನಿರ್ದಿಷ್ಟ ಜನಾಂಗಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಆಯಾ ಪ್ರದೇಶಗಳ ಮತ್ತು ಜನಾಂಗಗಳ ಜನರು ತಮ್ಮೆಳಗೆ ಸಮಾಲೋಚಿಸಿ ಬಗೆಹರಿಸಿಕೊಳ್ಳಬೇಕೆಂದು ವಿಧಿಸಲಾಯಿತು. ಎರಡು ಭಿನ್ನ ಪ್ರದೇಶಗಳ ಅಥವಾ ಎರಡು ಭಿನ್ನ ಜನಾಂಗಗಳ ನಡುವಣ ಬಿಕ್ಕಟ್ಟುಗಳ ಇತ್ಯರ್ಥವನ್ನು ಪ್ರವಾದಿ ಮುಹಮ್ಮದರ ಬಳಿಗೆ ಒಯ್ಯಬೇಕು ಮತ್ತು ಅವರ ತೀರ್ಪನ್ನೇ ಎಲ್ಲರೂ ಅಂತಿಮ ತೀರ್ಪಾಗಿ ಸ್ವೀಕರಿಸಬೇಕು ಎಂದು ಒಮ್ಮತದಿಂದ ತೀರ್ಮಾನಿಸಲಾಯಿತು.
ನ್ಯಾಯಕ್ಕೆ ನಮ್ಮವರು ಮತ್ತು ಅನ್ಯರೆಂಬ ಭೇದವಿಲ್ಲ. ಜನರು ಯಾವ ದೇಶ, ಭಾಷೆ, ವರ್ಣ ಅಥವಾ ಧರ್ಮದವರಾಗಿದ್ದರೂ ಅವರೆಲ್ಲರೂ ನ್ಯಾಯಕ್ಕೆ ಅರ್ಹರು ಮತ್ತು ನ್ಯಾಯವು ಎಲ್ಲರ ಹಕ್ಕು ಎಂಬ ಸ್ಪಷ್ಟ ಪಾಠ ಪ್ರವಾದಿ ನೀಡಿದ ಸಂವಿಧಾನದಲ್ಲಿತ್ತು. ಈ ಬಗೆಯ ನಿಯಮಗಳ ಮೂಲಕ ಆ ನಾಡಿನಲ್ಲಿ ಅರಾಜಕತೆಯನ್ನು ಅಳಿಸಿ ಕಾನೂನಿನ ಆಡಳಿತವನ್ನು ಸ್ಥಾಪಿಸಲು ಅವರಿಗೆ ಸಾಧ್ಯವಾಯಿತು. ಸುಧಾರಣೆಯ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳು
ಮದೀನಾದಲ್ಲಿ ಪ್ರವಾದಿವರ್ಯರು ಜೀವಿಸಿದ್ದು ಹೆಚ್ಚೆಂದರೆ ಕೇವಲ 10 ವರ್ಷ ಮಾತ್ರ. ಆದರೆ ಅಷ್ಟೊಂದು ಅಲ್ಪಾವಧಿಯಲ್ಲೇ ಅವರು ಸಮಾಜದಲ್ಲಿ ಭಾರೀ ಬದಲಾವಣೆಯನ್ನು ತಂದರು. ಅವರು ತಂದ ಬದಲಾವಣೆಗಳು ಮತ್ತು ಅದಕ್ಕೆ ಅವರು ಬಳಸಿದ ವಿಧಾನ ಎರಡೂ ಎಲ್ಲ ಕಾಲಗಳ ಎಲ್ಲ ಸಮಾಜಗಳಿಗೆ ಮಾದರಿಯಾಗಿದೆ