ಕವನ

ಚರಣ್ ಐವರ್ನಾಡು

ದೇಶದ ನರನಾಡಿಗಳಲ್ಲಿ
ಸಾವಿರ ತೊರೆಗಳಾಗಿ ಹರಿದ,
ಜನಮನವ ತಣಿಸಿದ,
ಗಡಿ ಮೀರಿ ಪ್ರವಹಿಸಿದ
ರಾಮ ಒಂದು ನದಿ

ಒಂದೊಂದು ತೊರೆಗೆ
ಒಂದೊಂದು ಬಣ್ಣ,
ಒಂದೊಂದು ಕಥೆ
ಎಲ್ಲವೂ ರಾಮನೇ !

ರಾಮ ನಿರ್ಜೀವ ಪ್ರತಿಮೆಯಲ್ಲ
ಅವನು ಅದರಾಚೆಯ ಮೌಲ್ಯ!
ಗಗನಚುಂಬಿ ಮೂರ್ತಿಯಾಗಿ
ಒಂದೆಡೆಯೇ ನಿಲ್ಲದೆ
ಹರಿಯುತ್ತಲಿರುವ ರಾಮ
ಎಂದೂ ಬತ್ತದ ಜೀವ ಸೆಳೆ !

ಜಾತಿ ಮತ ಮೀರಿದವ
ಬರಡು ಗದ್ದೆಯಲಿ
ಉತ್ತು ಬಿತ್ತಿ ಬೆಳೆ ತೆಗೆವವನಿಗೆ
ನೀರುಣಿಸುವಾತ !

ಎಲ್ಲಿದ್ದಾನೆ ರಾಮ?
ಹುಡುಕಬೇಕೆ
ಒಳಗಿರುವವನನ್ನು?
ರಾಮನನರಿತು ಸೇವಿಸದವ
ಹುತ್ತದೊಳಗೆ ಹೂತು
ರಾಮನಾಮ ಜಪಿಸಿ ಫಲವೇನು?

ತಂಬೂರಿಯವರ ಬಾಯಲ್ಲಿ,
ಜೈನರ ನಾಗಚಂದ್ರನಲ್ಲಿ ರಾಮನಿದ್ದಾನೆ,
ವಾಲ್ಮೀಕಿಯಲ್ಲಿ ಕಾವ್ಯವಾಗಿದ್ದಾನೆ,
ಕಂಬನ್,ಕುವೆಂಪುವಿನಲ್ಲಿ ದರ್ಶನ ನೀಡಿದ್ದಾನೆ,
ಮಾಪಿಳ್ಳೆ ಬ್ಯಾರಿಗಳ ಹಾಡಾಗಿದ್ದಾನೆ!

ರಾಮ ಅಯೋಧ್ಯೆಯಲ್ಲಿದ್ದಾನೆ?
ರಾಮ ಈ ಕಾಡಲ್ಲಿದ್ದ, ಆ ಬೆಟ್ಟದಲ್ಲಿದ್ದ,
ಇಲ್ಲೇ ಉಂಡಿದ್ದ, ಆಡಿದ್ದ……
ಅವ ಹುಟ್ಟಿದ್ದು ನನ್ನ ಮನೆಯಲ್ಲೇ,
ನನ್ನ ಊರಲ್ಲೇ
ಹಳೆ ಮುದುಕರ ಮಾತು ಕೇಳಬೇಕಲ್ಲಾ?

ರಾಮ ಕಟ್ಟಿದ್ದಾನೆ ಕೆಡಹಲಿಲ್ಲ!
ಮನುಜ ಹೃದಯಗಳ
ನಡುವಿನಲಿ ಪ್ರೀತಿ ಪ್ರವಹಿಸಲೆಂದು
ಸೇತುವೆ ಕಟ್ಟಿದನು ರಾಮ
ಕಟ್ಟುವುದ ಕಲಿಸಿದನು ರಾಮ

ರಾಮ ಸದಾ ಹರಿವ ನದಿ
ಕಾರುಣ್ಯಾಂಬುದಿ
ಸಲಿಲ ತವನಿಧಿ
ರಥದ ಚಕ್ರಗಳಡಿ ಹರಿದ
ರುಧಿರ ಪ್ರವಾಹವಲ್ಲ!

1 COMMENT

LEAVE A REPLY

Please enter your comment!
Please enter your name here