✍ ಮನ್ಸೂರ್ ಅಹ್ಮದ್ ಬಿನ್ ಅಬ್ದುಲ್ಲಾ ಟಿ.ಯಸ್

ಕೊರೊನಾ ಬಗ್ಗೆ ಭಯ ಬೇಡ, ಎಚ್ಚರವಿರಲಿ.
ಮನೆಯಲ್ಲಿರಿ ಸುರಕ್ಷಿತವಾಗಿರಿ…..
ಎಲ್ಲರಿಗೂ ರಂಜಾನ್ ತಿಂಗಳ ಶುಭಾಶಯಗಳು

ರಂಜಾನ್ ತಿಂಗಳ ಆಗಮನವಾಗಿದೆ. ವಿಶ್ವದ ವಿವಿಧೆಡೆ ನೆಲೆಸಿರುವ ಮುಸ್ಲಿಮರು ರಂಜಾನ್‌ ತಿಂಗಳ ಉಪವಾಸ ಆಚರಿಸುತ್ತಿದ್ದಾರೆ. ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ ರಂಜಾನ್‌ ಉಪವಾಸ ಕೂಡಾ ಒಂದು. ಇಸ್ಲಾಮಿಕ್‌ ಕ್ಯಾಲೆಂಡರಿ ನ ಒಂಬತ್ತನೇ ತಿಂಗಳು ‘ರಂಜಾನ್‌’ ಆಗಿದ್ದು, ಪುಣ್ಯ ಸಂಪಾದಿಸುವ ತಿಂಗಳು ಎನಿಸಿಕೊಂಡಿದೆ. ಹಸಿವಿನ ಮೌಲ್ಯ, ಬಡವರ ಬಗೆಗಿನ ಕಾಳಜಿ ಹಾಗೂ ಧರ್ಮ ನಿಷ್ಠೆ ಉಳ್ಳವರಿಗೆ ಆತ್ಮ ಶುದ್ದಿಯನ್ನು ಮಾಡುವ ಸಂದೇಶವನ್ನು ಸಾರುವ ಪವಿತ್ರ ತಿಂಗಳು ರಂಜಾನ್.

ಮುಸ್ಲಿಮರು ಈ ತಿಂಗಳಸಂಪೂರ್ಣ ಉಪವಾಸ ಆಚರಿಸುವ ಜೊತೆಗೆ ಪ್ರೀತಿ ವಿಶ್ವಾಸವನ್ನು ಬೆಳೆಸುತ್ತಾ ದಾನ ಧರ್ಮ ಹಾಗು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನೂ ಉಪವಾಸ ಕಲಿಸಿಕೊಡುತ್ತದೆ. ಉಪವಾಸವು ಒಂದು ಆರಾಧನೆಯಾಗಿದೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಇಚ್ಛೆಯೊಂದಿಗೆ ಆಹಾರ ಪಾನೀಯ ಸೇವನೆ ತ್ಯಜಿಸುವುದಲ್ಲದೆ ಎಲ್ಲಾ ರೀತಿಯ ಕಾಮ, ತೃಷೆ, ಮನರಂಜನೆ ಮತ್ತು ಕೆಟ್ಟಚಟಗಳಿಂದ ದೂರವಿರುವುದನ್ನು ಬೋಧಿಸಿ ಮನುಷನನ್ನು ಪರಿಶುದ್ಧಿಗೊಳಿಸುವುದು ಉಪವಾಸದ ಉದ್ದೇಶ.

ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. “ನೆರೆಮನೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಂಡು ಮಲಗುವವನು ನನ್ನವನಲ್ಲ” ಎಂದು ಪ್ರವಾದಿ ಮೊಹಮ್ಮದ್ (ಸ.ಅ) ಹೇಳಿರುವುದನ್ನು ನಾವು ಸ್ಮರಿಸಬೇಕಾಗಿದೆ.ಹೊಟ್ಟೆ ತುಂಬಿದ್ದರೆ ಇತರರ ಕಷ್ಟವನ್ನು ಅರಿಯಲು ಸಾಧ್ಯವಿಲ್ಲ. ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು ಎಂಬ ಪಾಠವನ್ನು ಉಪವಾಸ ಹಸಿವಿರುವುದರ ಮೂಲಕ ನಮಗೆ ಕಲಿಸಿಕೊಡುತ್ತದೆ.

ಇಂದು ಕೊರೊನಾವೆಂಬ ಭೀಕರವಾದ ಮಹಾಮಾರಿ ಕಾಯಿಲೆಗೆ ತುತ್ತಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿವೆ. ನಮ್ಮ ದೇಶವೂ ಕೂಡಾ, ಕೊರೊನಾ ಸೊಂಕಿನಿಂದಾಗಿ ದೇಶ ವೀಡಿ ಲಾಕ್ ಡೌನ್ ಆಗಿದೆ. ಇಂತಹ ಭೀಕರ ಸನ್ನಿವೇಶದಲ್ಲಿ ಸಮಸ್ತ ದೇಶದ ಮುಸ್ಲಿಂ ಸಮೂದಾಯ ರಂಜಾನ್ ಉಪವಾಸವನ್ನು ಆಚರಿಸುವಂತಾಗಿದೆ. ಅದೆಷ್ಟೊ ದಿನಕೂಲಿ ಕಾರ್ಮಿಕರು,ರೈತರು,ಬಡಜನರು ಇಂದು ಒಪ್ಪೊತ್ತಿನ ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಆದ್ದರಿಂದ ನಾವು ಅಗತ್ಯವಿದ್ದಷ್ಟು ಮಾತ್ರ ಆಹಾರ ಸಾಮಗ್ರಿಗಳನ್ನು ಉಪಯೋಗಿಸಿ ನಮ್ಮ ಇಫ್ತಾರ್ ಮತ್ತು ಸಹಾರಿ ವೇಳೆಗಳಲ್ಲಿ ಸರಳತೆಯನ್ನು ಮೈಗೊಡಿಸಿ ಸಂಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆಯಬೇಕಾಗಿದೆ.

ರಂಜಾನ್‌ ತಿಂಗಳಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ತಿಂಗಳಲ್ಲಿ ದಾನ ಮಾಡಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್‌ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಹಸಿದಾಗ ಬಡವರ ಕಷ್ಟ ಅನುಭವಕ್ಕೆ ಬರುತ್ತದೆ. ಇದರಿಂದ ಬಡವರಿಗೆ ಹೆಚ್ಚೆಚ್ಚು ದಾನ ಮಾಡಬೇಕು ಎಂಬ ಪ್ರೇರಣೆ ದೊರೆಯುತ್ತದೆ. ಮನುಷ್ಯನನ್ನು ಕೆಡುಕಿನತ್ತ ಕೊಂಡೊಯ್ಯುವ ಎಲ್ಲ ಬಾಗಿಲುಗಳನ್ನು ಮುಚ್ಚಿ, ಒಳಿತಿನ ಬಗ್ಗೆ ಮಾತ್ರ ಚಿಂತಿಸುವಂತೆ ಮಾಡುವುದು ರಂಜಾನ್‌ ತಿಂಗಳ ವಿಶೇಷ.

ಪುಣ್ಯವಾದ ರಂಝಾನ್ ತಿಂಗಳ ನಮ್ಮ ವಿಶೇಷವಾದ ,ಪ್ರಾರ್ಥನೆಗಳಲ್ಲಿ ಕೊರೊನಾ ಸೊಂಕಿತರ ಹಾಗೂ ನಮ್ಮ ನಿಮ್ಮಲ್ಲರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಪ್ರಾಣದ ಹಂಗುತೊರೆದು ದುಡಿಯುತ್ತಿರುವ ಡಾಕ್ಟರ್ ಗಳು, ನರ್ಸ್ ಗಳು ,ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆರೋಗ್ಯ ಅಧಿಕಾರಿಗಳು ಅದೇ ರೀತಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು, ಹಸಿದವರಿಗೆ ಆಹಾರವನ್ನು ನೀಡಿ ಸಂಕಷ್ಟದಲ್ಲಿದ್ದವರಿಗೆ ರೇಷನ್ ಕಿಟ್ಟ್ ಗಳನ್ನು ಹಂಚುತ್ತಿರವ ನಿಶ್ವಾರ್ಥ ಜನ ಸೇವಕರು. ಅದೆ ರೀತಿ ಮುಖ್ಯವಾಗಿ ಕೊರೊನಾ ಸೊಂಕಿಗೆ ತುತ್ತಾಗಿ ಮಡಿದವರ ಮೃತ ದೇಹಗಳನ್ನ ದಫನ ಕಾರ್ಯ ನಿರ್ವಹಿಸುವ ಸ್ವಯಂಸೇವಕರನ್ನು ಅವರ ನಿಶ್ವಾರ್ಥ ಸೇವೆಗಳಿಗಾಗಿ ನಮ್ಮ ದೈನಂದಿನ ಪ್ರಾರ್ಥನೆಗಳಲ್ಲಿ ಸ್ಮರಿಸಬೇಕಾಗಿದೆ. ಅದೇ ರೀತಿ ವಿದೇಶಗಳಲ್ಲಿ ವರ್ಷವಿಡೀ ದುಡಿದು ತಮ್ಮ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದ ಅನಿವಾಸಿ ಭಾರತೀಯ ಸಹೋದರರು ಇಂದು ಬಹಳಷ್ಟು ಸಂಕಷ್ಟದಲ್ಲಿದ್ದಾರೆ ಅವರಿಗಾಗಿ ದುವಾಗಳಲ್ಲಿ ಸ್ಮರಿಸಿ ಸಾಂತ್ವಾನ ಹೇಳಬೇಕಾಗಿರುವುದು ನಮ್ಮ ನಿಮ್ಮಲ್ಲರ ಕರ್ತವ್ಯವಾಗಿದೆ.

ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ‘ತರಾವೀಹ್‌’ ನಿರ್ವಹಿಸಲಾಗುತ್ತದೆ. ಕೊರೊನಾ ವೈರಸ್ ತಡೆಗಟ್ಟಲು ಸರಕಾರ ಮತ್ತು ರಾಜ್ಯ ವಕ್ಫ್ ಮಂಡಳಿಯು ನೀಡಿರುವ ನಿರ್ದೇಶನದಂತೆ ಮುಂಜಾಗ್ರತಾ ಕ್ರಮವಾಗಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ್, ತರಾವೀಹ್ ನಮಾಜ್, ಇಫ್ತಾರ್ ಕೂಟಗಳನ್ನು, ಶುಕ್ರವಾರದ ಜುಮಾ ನಮಾಝ್ ಗಳನ್ನು ನಿರ್ಭಂದಿಸಲಾಗಿದೆ. ಹಾಗಾಗಿ ಯಾರೂ ಕೂಡಾ ಮಸೀದಿಗಳಿಗೆ ಹೋಗದೆ ತಮ್ಮ ತಮ್ಮ ಮನೆಗಳಲ್ಲೆ ನಮಾಝ್ ನಿರ್ವಹಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.

ದೇಶ ಲಾಕ್ ಡೌನ್ ಆದ ನಂತರ ದಿನಗಳಲ್ಲಿ ಎಲ್ಲರೂ ಮನೆಗಳಲ್ಲೇ ನಮಾಝ್ ನಿರ್ವಹಿಸುತ್ತಿರುವ ನಾವು ಲಾಕ್ ಡೌನ್ ಮುಗಿಯುವ ವರೆಗೂ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ. ಈಗಾಗಲೇ ಕೊರೊನಾ ಸೋಂಕು ಹರಡುವಿಕೆಯನ್ನ ಮುಸ್ಲಿಮರ ಮೇಲೆ ಎತ್ತಿಕಟ್ಟಿ ಕೋಮು ಉದ್ವಿಗ್ನನತೆಯ ವಾತಾವರನವನ್ನು ಸೃಷ್ಟಿಸಿರುವ ಮಾದ್ಯಮಗಳಿಗೆ ವಿನಾ ಕಾರಣ ನಾವುಗಳು ಆಹಾರವಾಗದೆ ಮನೆಯಲ್ಲಿಯೇ ನಮಾಝ್ ನಿರ್ವಹಿಸಿ ವಿನಾ ಕಾರಣ ಮನೆಯಿಂದ ಹೊರಬರದೆ ಈ ದೇಶದ ಹಾಗೂ ರಾಜ್ಯದ ಕಾನೂನಿಗನುಸಾರವಾಗಿ ಜನರ ಹಿತ ಕಾಪಾಡಬೇಕಾಗಿದ್ದು ನಮ್ಮ ಕರ್ತವ್ಯವೂ ಕೂಡಾ. ಈಗಾಗಲೇ ಪರಿಶುದ್ದ ರಂಜಾನ್ ತಿಂಗಳು ಆಗಮನವಾಗಿದೆ. ಪುಣ್ಯವೇರಿದ ಈ ತಿಂಗಳ ಬರಕತ್ತಿನಿಂದ ನಮ್ಮ ನಾಡು, ನಮ್ಮ ರಾಜ್ಯ, ನಮ್ಮ ದೇಶ ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ಮುಕ್ತಿ ಸಿಗಲಿ ಎಂದು ಸರ್ವಶಕ್ತನಾದ ಅಲ್ಲಾಹನಲ್ಲಿ ನಾವೆಲ್ಲರೂ ಒಕ್ಕೊರಲಿನಿಂದ ಬೇಡೊಣ…
ಅಮೀನ್…

LEAVE A REPLY

Please enter your comment!
Please enter your name here