ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ವಿದ್ಯಾರ್ಥಿ)

ಇಸ್ಲಾಮ್ ನೈಸರ್ಗಿಕ ಧರ್ಮ. ಅದು ಪ್ರಾಕೃತಿಕವಾಗಿಯೇ ಮನುಷ್ಯನ ಗುಣಗಳನ್ನು ಸರಿ ಪಡಿಸಲು ಬಯಸುವಂತಹ ಧರ್ಮ.  ಯಾವುದೇ ಕಾಲ್ಪನಿಕ ವಿಧಿ ವಿಧಾನಗಳಿಗಿಂತ ಮನುಷ್ಯನ ಸಂಸ್ಕರಣೆಯನ್ನು ಸಹಜವಾಗಿಯೇ ಮಾಡಲು ಬಯಸುವಂತಹ ಜೀವನ ವ್ಯವಸ್ಥೆ. ರಂಝಾನ್ ಈ ನೈಸರ್ಗಿಕತೆಗೆ ಸ್ಪಷ್ಟ ನಿದರ್ಶನ. ಸಂಸ್ಥೆಯೊಂದು ಪ್ರತಿವರ್ಷ ಉದ್ಯೋಗಿಗಳಿಗೆ ತಮ್ಮ ಕಾರ್ಯದಲ್ಲಿ ನೈಪುಣ್ಯತೆ ಹೊಂದಲು ತರಬೇತಿ ನೀಡಿದಂತೆ,ಮನುಷ್ಯನು ಹಾದಿ ತಪ್ಪಿ ಮಾಡುತ್ತಿರುವ ಕೆಡುಕುಗಳಿಂದ ರಕ್ಷಿಸಿ ಆತನ ಆತ್ಮಸಂಸ್ಕರಣೆ ನಡೆಸಿ ಮತ್ತೊಮ್ಮೆ ಒಳಿತಿನ ಹಾದಿಯಲ್ಲಿ ಸಂಚರಿಸಲು ದೇವನು ದಯಪಾಲಿಸಿರುವ ತರಬೇತಿಯ ತಿಂಗಳು ರಂಝಾನ್.

ರಂಝಾನ್ ಮನುಷ್ಯನ ಜೀವನಕ್ಕೊಂದು ಹೊಸ ದಿಕ್ಕು ತೋರಿಸುವ ತಿಂಗಳು. ತನ್ನನ್ನು ತಿದ್ದಿ ಗತ ಜೀವನದ ದೌರ್ಬಲ್ಯಗಳಿಂದ ಹೊರಬಂದು ಹೊಸ ಚೈತನ್ಯದೊಂದಿಗೆ, ದೇವನ ಅನುಸರಣೆಯೊಂದಿಗೆ ನವ ಜೀವನ ನಡೆಸಲು ಇರುವ ದೇವನ ಔದಾರ್ಯ. ಆದರೆ ಬಹತೇಕ ಸಂದರ್ಭಗಳಲ್ಲಿ ನಾವು ಅದರ ಲಾಭಗಳಿಸುದರಲ್ಲಿ ಸೋತು ಬಿಡುತ್ತೇವೆ. ನಮ್ಮನ್ನು ಪ್ರಾಯೋಗಿಕವಾಗಿ ಬದಲಾಯಿಸಲು ರಂಝಾನ್ ತಿಂಗಳನ್ನು ಉಪಯೋಗಿಸುವ ಬದಲು ಕೇವಲ ಸಂಪ್ರಾದಾಯಿಕ ಆಚರಣೆಯಾಗಿ ರಂಝಾನಿನ ಆಚರಣೆಗಳನ್ನು ಆಚರಿಸುತ್ತ, ಬದಲಾವಣೆಯ ಸಂಕಲ್ಪವಿಲ್ಲದೆ ತಿಂಗಳನ್ನು ಪೋಲು ಮಾಡಿ ಬಿಡುತ್ತೇವೆ. ಬದಲಾವಣೆಯ ಸಂಕಲ್ಪವಿಲ್ಲದ ಆಚರಣೆಗಳಿಂದ ಏನು ಸಾಧಿಸಲು ಸಾಧ್ಯ ? ತಪ್ಪುಗಳ ಸರಪಳಿಯಲ್ಲಿ ಬಂಧಿಸಿರುವ ನಮ್ಮ ಜೀವನವನ್ನು ಒಳಿತಿನ ಹಾದಿಯಲ್ಲಿ ಮುನ್ನಡೆಸಬೇಕೆಂಬ ಸಂಕಲ್ಪವಿಲ್ಲದಿದ್ದ ಪಕ್ಷದಲ್ಲಿ ನಮ್ಮ ಉಪವಾಸಗಳು, ರಾತ್ರಿ ಹೊತ್ತು ನಡೆಸುವ ಪ್ರಾರ್ಥನೆಗಳು ವ್ಯರ್ಥವಲ್ಲವೇ? ಇದಕ್ಕೆ ಪೂರಕವಾಗಿಯೇ ಪ್ರವಾದಿ (ಸ) ಹೇಳುತ್ತಾರೆ, ಬಹಳಷ್ಟು ಮಂದಿ ಉಪವಾಸ ಆಚರಿಸುತ್ತಾರೆ, ಆದರೆ ಅದರಿಂದ ಅವರಿಗೆ ಹಸಿವು ಮತ್ತು ಬಾಯಾರಿಕೆ ಹೊರತು ಮತ್ತೇನು ಪ್ರಾಪ್ತವಾಗುದಿಲ್ಲ. ಬಹಳಷ್ಟು ಮಂದಿ ರಾತ್ರಿ ಹೊತ್ತು ನಿದ್ದೆಗೆಟ್ಟು ಪ್ರಾರ್ಥಿಸುತ್ತಾರೆ ಆದರೆ ಇಡೀ ರಾತ್ರಿಯ ಎಚ್ಚರವಿದ್ದುದರ ಹೊರು ಮತ್ತೇನು ಪ್ರಾಪ್ತವಾಗುದಿಲ್ಲ (ದಾರಿಮಿ). ಈ ಪ್ರವಾದಿ ವಚನವು ಕೂಡ ನಮ್ಮನ್ನು ಬದಲಾಯಿಸುವ ನೇರ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪದೊಂದಿಗೆ ಉಪವಾಸ, ರಾತ್ರಿ ಪ್ರಾರ್ಥನೆ, ದಾನ-ಧರ್ಮಗಳನ್ನು ಮಾಡಿದಾಗ ಮಾತ್ರ ಈ ಆಚರಣೆಗಳು ಸಾರ್ಥಕತೆಯ ತೃಪ್ತಿಯನ್ನು ಕಾಣಲು ಸಾಧ್ಯ ಎಂಬ ಉದಾತ್ತವಾದ ಆಶಯವನ್ನು ವ್ಯಕ್ತಪಡಿಸುತ್ತದೆ.

ಈ ಭೂಮಿಗೆ ಅಲ್ಲಾಹನು ಲಕ್ಷಾಂತರ ಪ್ರವಾದಿಗಳನ್ನು ಕಳುಹಿಸಿದನು. ಆದಿ ಪ್ರವಾದಿ ಆದಮ್ (ಅ) ರಿಂದ ಹಿಡಿದು ಪ್ರವಾದಿ ಮುಹಮ್ಮದ್ (ಸ) ರವರೆಗೂ ಪ್ರವಾದಿಗಳು ಈ ಭೂಮಿಯಲ್ಲಿ ಎರಡು ಮುಖ್ಯ ಕಾರ್ಯವನ್ನು ನಡೆಸಿದರು, ಒಂದನೆಯದು ಮನುಷ್ಯನಿಗೆ ದೇವನನ್ನು ಪರಿಚಯಿಸಿ, ದೇವನೊಂದಿಗೆ ಸಂಬಂಧವನ್ನು ಸುಧೃಢಗೊಳಿಸುವುದು. ಎರಡನೆಯದು ಇಲ್ಲಿನ ಎಲ್ಲ ಕೆಡುಕುಗಳಿಂದ ಮನುಷ್ಯನನ್ನು ತಡೆದು ದೇವ ಮಾರ್ಗದಲ್ಲಿ ಮುನ್ನಡೆಸಲು, ಹಾಗೂ ಮನುಷ್ಯನ ಸಂಪೂರ್ಣ ಜೀವನ ಅಲ್ಲಾಹನ ಅಣತಿಯಂತೆ ಬದುಕಲು ಕಲಿಸಿಕೊಟ್ಟರು. ಅಂತಿಮ ಪ್ರವಾದಿ ಮುಹಮ್ಮದ್ (ಸ) ರ ನಂತರ ಯಾವ ಪ್ರವಾದಿಯೂ ಕೂಡ ಈ ಭೂ ಲೋಕದಲ್ಲಿ ಬರಲಿಕ್ಕಿಲ್ಲ, ಬದಲಾಗಿ ಮನುಷ್ಯನನ್ನು ದೇವನೊಂದಿಗೆ ಜೋಡಿಸುವ ಮತ್ತು ಅವರನ್ನು ಆತನ ಆಜ್ಞೆಯಂತೆ ಜೀವನ ಸಾಗಿಸಲು ಪ್ರೇರೇಪಿಸುವ ಮಹತ್ತರವಾದ ಜವಾಬ್ದಾರಿಯನ್ನು ನಮಗೆ ನೀಡಲಾಗಿದೆ. ಆದರೆ ಪ್ರಸ್ತುತ ಮುಸ್ಲಿಮ್ ಸಮುದಾಯ ಈ ಜವಾಬ್ದಾರಿ ಹೊರಲು ಪ್ರಬುದ್ದವಾಗಿದೆಯೇ ಎಂಬುದು ಪ್ರಶ್ನಾರ್ಥಕ.

ಪ್ರವಾದಿ ಮುಹಮ್ಮದ್ (ಸ) ರ ಬಗ್ಗೆ ಮುಸ್ಲಿಮ್ ಸಮುದಾಯಕ್ಕೆ ಅಪಾರವಾದ ಗೌರವವಿದೆ. ಅವರು (ಸ) ರ ಬಗ್ಗೆ ಯಾರಾದರು ಅವಹೇಳನ ಮಾಡಿದಾಗ ನಾವೆಲ್ಲರೂ ಕೆಂಡಮಂಡಲಗೊಳ್ಳುತ್ತೇವೆ. ಆದರೆ ಅದೇ ಪ್ರವಾದಿ (ಸ) ಬೋಧಿಸಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ನಾವು ಎಂದು ಕೂಡ ಪಾಲಿಸುವ ಗೋಜಿಗೆ ಹೋಗುವುದಿಲ್ಲ. ಪ್ರವಾದಿ(ಸ) ರ ಪ್ರಮಾಣಿಕತೆ, ಅವರ ಸತ್ಯದ ನುಡಿ, ವ್ಯವಹಾರದಲ್ಲಿನ ಪಾರದರ್ಶಕತೆ, ಅನಾಥರ,ದಮನಿತರ ಬಗ್ಗೆ ಇದ್ದ ಕಾಳಜಿ ಅವರನ್ನು ದ್ವೇಷಿಸುತ್ತಿದ್ದ ಜನರಲ್ಲೂ ಕೂಡ ಅವರು (ಸ) ರ ಬಗ್ಗೆ ಗೌರವವನ್ನು ಹುಟ್ಟು ಹಾಕಿಸಿತ್ತು. ಆದರೆ ನಾವು ಪ್ರವಾದಿ(ಸ) ರನ್ನು ನಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ಆದರೆ ಅವರು ತೋರಿದ ನೇರ ಮಾರ್ಗದಲ್ಲಿ ನಡೆಯದೆ, ಸುಳ್ಳಿನ, ಮೋಸದ, ಅಪ್ರಮಾಣಿಕತೆಯ ಹಾದಿಯಲ್ಲಿ ಸಾಗುತ್ತ ಪ್ರವಾದಿ(ಸ) ರನ್ನು ಪ್ರತಿ ಕ್ಷಣ ಅವಮಾನಿಸುತ್ತಾ ತಿರುಗುತ್ತಿಲ್ಲವೇ ?

ಕೆಡುಕನ್ನು ಕಂಡಾಗ ಕೈಯಲ್ಲಿ ತಡೆಯಿರಿ, ಸಾಧ್ಯವಾಗದ್ದಿದಾಗ ಬಾಯಿ ಮಾತಿನಲ್ಲಿ ತಡೆಯಿರಿ, ಅದೂ ಸಾದ್ಯವಾಗದಿದ್ದರೆ ಮನಸ್ಸಿನಲ್ಲಾದರೂ ಕೆಡುಕನ್ನು ಕೆಡುಕೆಂದು ಭಾವಿಸಿರೆಂದು ಹೇಳಿದ ಪ್ರವಾದಿ(ಸ) ರ ಅನುಯಾಯಿಗಳಾದ ನಾವು ನಮ್ಮ ಅಂತರಾತ್ಮದಲ್ಲಿ ಅಡಗಿರುವ ಕೆಡುಕನ್ನು ಬದಲಾಯಿಸಲು ಪಟ್ಟ ಪರಿಶ್ರಮ ಮಾತ್ರ ಶೂನ್ಯ ! ಹೌದು ನಾನು ಮತ್ತು ನೀವು ಪ್ರವಾದಿ (ಸ) ರ ಮಾತುಗಳನ್ನು ಕೇಳುತ್ತಲೇ ತಪ್ಪುಗಳನ್ನು ಎಸಗಿದವರು, ಅವರ ಬೋಧನೆಗಳಿಂದ ವಿಮುಖರಾದವರು, ಬಹಳಷ್ಟು ಸಂದರ್ಭದಲ್ಲಿ ನಮ್ಮ ಮೇಲಿನ ಅಲ್ಲಾಹನ ಅಪಾರ ಅನುಗ್ರಹವನ್ನು ಮರೆತು ಆತನಿಗೆ ಕೃತಘ್ನನಾದವರು. ಆದರೆ ಅಲ್ಲಾಹನು ಮಹಾ ಕರುಣಾಮಯಿ ನಮ್ಮ ಪಶ್ಚತ್ತಾಪಗಳು ಬದಲಾವಣೆಯ ಸಂಕಲ್ಪದೊಂದಿಗೆ ಆತನ ಮುಂದೆ ಶಿರ ಬಾಗಿದಾಗಲೆಲ್ಲ ಆತ ನಮ್ಮ ಪಾಪಗಳನ್ನು ಮನ್ನಿಸಿ ಬದಲಾವಣೆಗೆ ಅವಕಾಶ ಕಲ್ಪಿಸುತ್ತಾನೆ. ಆದರೆ ನಾವೆಷ್ಟು ಇವತ್ತು ನಮ್ಮನ್ನು ನಾವೇ ಬದಲಾವಣೆಗೆ ಒಗ್ಗಿಕೊಳ್ಳಲು, ಜೀವನವನ್ನು ಕುರಆನಿನ, ಪ್ರವಾದಿ(ಸ) ರ ಮಾದರಿ ಜೀವನದಂತೆ ಬದುಕಲು ಪ್ರಯತ್ನಿಸುತ್ತೇವೆ?  ಕುರಾನ್ ನಮ್ಮನ್ನು ಉದ್ದೇಶಿಸಿ ಹೇಳುತ್ತದೆ, ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ (ಅಲ್ ಬಕರ). ಆದ್ದರಿಂದ ರಂಝಾನ್ ತಿಂಗಳನ್ನು ನಮ್ಮ “ನಾನು”ಗಳನ್ನು ಬಿಟ್ಟು ಅಲ್ಲಾಹನ ಮುಂದೆ ಸಂಪೂರ್ಣ ಶರಣಾಗತಿ ಹೊಂದಿ, ಇಸ್ಲಾಮಿನ ಜೀವನವನ್ನು ತನ್ನದಾಗಿಸುವ ಸಾಧನವನ್ನಾಗಿಸಬೇಕಾಗಿದೆ. ಎರಡು ಗಂಟೆಗಳ ಕಾಲ ಸರಕಾರಗಳು ಕೋಟ್ಯಾಂತರ ರೂಪಾಯಿ ಹಣಗಳಿಂದ ತುಂಬಿದ ಬ್ಯಾಂಕ್ ಒಳಗೆ ಬಿಟ್ಟು ನಿಮಗೆ ಎಷ್ಟು ಬೇಕು, ಅಷ್ಟು ಹಣ ತೆಗೆದುಕೊಳ್ಳಿ ಎಂದಾಗ ನಾವು ಕೈಕಟ್ಟಿ ಸುಮ್ಮನಿರುತ್ತೇವೆಯೇ ? ಇಲ್ಲ ತಾನೇ ? ಹಾಗೆಯೇ ಅಲ್ಲಾಹನು  ನಮಗೆ ಅನಿಯಮಿತ ಪುಣ್ಯ ಗಳಿಸಲು ಮತ್ತು ಜೀವನದ ಬದಲಾವಣೆಯೊಂದಿಗೆ ಪರಲೋಕದ ವಿಜಯ ಪ್ರಾಪ್ತಿಗಳಿಸಲು ಕರುಣಿಸಿದ ಆಫರ್ ರಂಝಾನ್ !

ಹಾಗದರೆ ಈ ಪುಣ್ಯ ಮಾಸದ ಸದುಪಯೋಗ ಪಡೆಯಲು ನಾವು ಮಾಡಬೇಕಾದ ಕಾರ್ಯಗಳೇನು ?
ರಂಝಾನ್ ಬಂದ ತಕ್ಷಣ ಸ್ವಲ್ಪ ಮಟ್ಟಿಗೆಯಾದರೂ ಬದಲಾವಣೆಯ ಬಗ್ಗೆ ಚಿಂತಿಸುವ ಮುಸ್ಲಿಮರು ಕ್ರಮೇಣ, ತಮಗೆ ಅರಿವಿಲ್ಲದೆ ಬೇಡದ ಚರ್ಚೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಾರವಿಹ್ ನಮಾಝಿನ ಸಂಖ್ಯೆಗಳ ಬಗ್ಗೆ ಸಂಕುಚಿತ ಮನಸ್ಥಿತಿಗಳ ಜೊತೆ ಸೇರಿ ಚರ್ಚೆ ನಡೆಸುತ್ತಾ, ರಂಝಾನಿನ ಸುವರ್ಣವಕಾಶದಿಂದ ಬಹುತೇಕ ಸಂದರ್ಭದಲ್ಲಿ ವಂಚಿತರಾಗಿ ಬಿಡುತ್ತೇವೆ. ಇನ್ನು ಕೆಲವರು ಕುರಾನ್ ಸಂಪೂರ್ಣವಾಗಿ ಎರಡು ಮೂರು ಬಾರಿ ಮುಗಿಸುವ ಪ್ರಯಾಸದಲ್ಲಿ ಕುರಾನನ್ನು ಅರ್ಥೈಸಿ ಅದನ್ನು ಜೀವನದಲ್ಲಿ ಪಾಲಿಸಲು ರಂಝಾನ್ ವೇದಿಕೆ ಎಂಬುದನ್ನು ಮರೆತು ಬಿಡುತ್ತಾರೆ. ಆದ್ದರಿಂದ ರಂಝಾನಿನ ಸದುಪಯೋಗ ಪಡೆಯಲು ಮೊದಲಿಗೆ ನಾವು ದೇವನ ಮೇಲಿನ ವಿಶ್ವಾಸವನ್ನು ಸುಧೃಢಗೊಳಿಸಿ ಬದಲಾವಣೆಯ ಸಂಕಲ್ಪದೊಂದಿಗೆ ದೇವನ ಮುಂದೆ ನಮ್ಮ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಕ್ಷಮಿಸಲು ಮೊರೆ ಇಡಬೇಕಾಗಿದೆ. ಸಾಧ್ಯವಾದಷ್ಟು ರಂಝಾನಿನ ರಾತ್ರಿಗಳನ್ನು ಜೀವಂತವಾಗಿಟ್ಟು, ಏಕಾಂತದಲ್ಲಿ ಅಲ್ಲಾಹನ ಮುಂದೆ ಶಿರಬಾಗಿ ಪ್ರಾರ್ಥಿಸಬೇಕಾಗಿದೆ. ಪ್ರವಾದಿ(ಸ) ರ ರಲ್ಲ ಪಾಪಗಳನ್ನು ಅಲ್ಲಾಹನು ಕ್ಷಮಿಸಿದ್ದರೂ ಕೂಡ, ಅವರು(ಸ) ರಂಝಾನಿನ ರಾತ್ರಿಗಳಲ್ಲಿ ಎಚ್ಚರವಿದ್ದು ಪ್ರಾರ್ಥಿಸುತ್ತಿದದ್ದು, ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಬೇಕು!

ರಂಝಾನ್  ತಿಂಗಳಲ್ಲಿ ಕುರಾನ್ ನನ್ನು ಕೇವಲ ಗಿಳಿಪಾಠ ಓದಿದಂತೆ ಒದದೆ, ಪವಿತ್ರ ಕುರಾನಿ ನಲ್ಲಿ ತಿಳಿಸಿದಂತೆ,(ಪೈಗಂಬರರೇ,) ಇದೊಂದು ಅತಿ ಸಮೃದ್ಧವಾದ ಗ್ರಂಥವಾಗಿದ್ದು ಇವರು ಇದರ ಸೂಕ್ತಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿಜೀವಿಗಳು ಇದರಿಂದ ಉಪದೇಶ ಪಡೆಯುವಂತಾಗಲೆಂದು ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ (ಸೂರ ಸ್ವಾದ್). ಓದಿದ ಪ್ರತಿ ಸೂಕ್ತವನ್ನು ಅರ್ಥೈಸಿ ಅದರಲ್ಲಿ ಅಡಕವಾಗಿರುವ ವಿಚಾರಗಳನ್ನು ಚಿಂತಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸವೆಸುವ ಪ್ರಯತ್ನ ಮಾಡಬೇಕಾಗಿದೆ. ಆದರೆ ಇದೆಲ್ಲವು ಸಾಧ್ಯವಾಗುವುದು ನಮ್ಮ ನಮ್ಮ ಬದಲಾವಣೆಯ ಜವಾಬ್ದಾರಿಯನ್ನು ನಾವೇ ಹೊತ್ತು ಕೊಂಡಾಗ ಮಾತ್ರ ಸಾಧ್ಯ !

“ವಾಸ್ತವದಲ್ಲಿ ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹ್ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ” ( ಪವಿತ್ರ ಕುರಾನ್ ಸೂರ ಅರ್ರಅದ್)  

Reference : ಪವಿತ್ರ ಕುರಾನ್, ಪ್ರವಾದಿ ವಚನಗಳು

LEAVE A REPLY

Please enter your comment!
Please enter your name here