ಲೇಖಕಿ : ರುಕ್ಸಾನ ಫಾತಿಮ ಉಪ್ಪಿನಂಗಡಿ

ಸೈಯ್ಯದ್ ಅಬುಲ್ ಆಲಾ ಮೌದೂದಿ (ರ)ರವರು 20ನೇ ಶತಮಾನದ ಓರ್ವ ಶ್ರೇಷ್ಠ ವಿದ್ವಾಂಸ ಹಾಗೂ ಭಾರತದಲ್ಲಿ ಇಸ್ಲಾಮೀ ಆಂದೋಲನದ ಸಂಸ್ಥಾಪಕರು. ಇವರು 1903 ರಲ್ಲಿ ಸೆಪ್ಟೆಂಬರ್ 25ರಂದು ಔರಂಗಾಬಾದ್ ನಲ್ಲಿ ಜನಿಸಿದರು. ಒಂದು ಪರಿಪೂರ್ಣ ಇಸ್ಲಾಮೀ ಜೀವನ ವ್ಯವಸ್ಥೆಯ ಸ್ಥಾಪನೆಗೆ, ಜಗತ್ತಿನ ಮುಸ್ಲಿಮರ ಒಗ್ಗಟ್ಟಿಗೆ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಸ್ಲಾಮಿ ಶರೀಯತ್, ಧಾರ್ಮಿಕ ವಿಧಿ- ವಿಧಾನಗಳು, ರಾಜಕೀಯ ನೀತಿ ನಿಯಮಗಳ ಬಗ್ಗೆ ಅಪಾರ ಜ್ಞಾನವಿದ್ದ ಅವರು ಸುಮಾರು 200ಕ್ಕಿಂತ ಹೆಚ್ಚು ಗ್ರಂಥಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.

ಇಸ್ಲಾಮಿನ ‘ಜಿಹಾದ್’ನ ಬಗ್ಗೆ ಜನರ ಮಧ್ಯೆ ಇದ್ದ ತಪ್ಪುಕಲ್ಪನೆಗಳನ್ನು ನೀಗಿಸುವ ನಿಟ್ಟಿನಲ್ಲಿ ಅಲ್ ಜಿಹಾದ್ ಫಿಲ್ ಇಸ್ಲಾಮ್ ಎಂಬ ಕೃತಿಯನ್ನು ರಚಿಸಿದರು. ಅದರ ಕುರಿತು ಮಹಾಕವಿ ಅಲ್ಲಾಮ ಇಕ್ಬಾಲ್ ಈ ರೀತಿ ಹೇಳುತ್ತಾರೆ: “ಇದು ಇಸ್ಲಾಮಿನ ಜಿಹಾದ್ನ ಸಿದ್ಧಾಂತ, ಯುದ್ಧ, ಶಾಂತಿ ನಿಯಮವನ್ನು ಪ್ರತಿಪಾದಿಸುವ ಒಂದು ಉತ್ತಮ ಗ್ರಂಥವಾಗಿದೆ. ಬುದ್ಧಿಜೀವಿಗಳಾದ ಪ್ರತಿಯೊಬ್ಬರೂ ಈ ಗ್ರಂಥವನ್ನು ಓದಬೇಕೆಂದು ನಾನು ಶಿಫಾರಸ್ಸು ಮಾಡುತ್ತೇನೆ”

1941ರಲ್ಲಿ ಅವರು ಜಮಾತ್-ಎ-ಇಸ್ಲಾಮಿ ಸಂಘಟನೆಯನ್ನು ಸ್ಥಾಪಿಸುತ್ತಾರೆ. 1953 ರಲ್ಲಿ ಖಾದಿಯಾನಿಗಳ ವಿರುದ್ಧ ಧ್ವನಿ ಎತ್ತಿದಾಗ ಪಾಕಿಸ್ತಾನ ಸರಕಾರ ಅವರ ಮೇಲೆ ದೇಶದ್ರೋಹ ಮತ್ತು ಕ್ಷೋಭೆ ಹರಡುವ ಆರೋಪ ಹೊರಿಸಿ ನೇಣು ಕಂಬಕ್ಕೆ ಏರಿಸುವ ಷಡ್ಯಂತ್ರ ಹೂಡಿ ಬಂದಿಸಿತು. ಈ ವಿವಾದಾಸ್ಪದ ವಿಧಿಯು ಉಕ್ಕಿನಂತಹ ಮನೋಧಾರ್ಡ್ಯದ ಮೌದೂದಿಯ ಮೇಲೆ ಯಾವ ಪರಿಣಾಮವು ಬೀರಲಿಲ್ಲ ಮತ್ತು ಜೈಲಿನ ಅಧಿಕಾರಿಯು ಅವರೊಡನೆ “ತಾವು ಒಂದು ವಾರದೊಳಗೆ ಮರಣದಂಡನೆಯ ವಿರುದ್ಧ ರಾಷ್ಟ್ರಾಧ್ಯಕ್ಷರಿಗೆ ದಯಾಭಿಕ್ಷೆ ಸಲ್ಲಿಸಬಹುದು” ಎಂದಾಗ ಅವರ ಮುಖವು ಕೆಂಡದಂತೆ ಪ್ರಜ್ವಲಿಸಿತು ಮತ್ತು ಅವರು ಹೇಳುತ್ತಾರೆ “ನನಗೆ ಯಾರ ದಯಾಭಿಕ್ಷೆಯು ಬೇಕಾಗಿಲ್ಲ. ಜೀವನ ಮರಣಗಳ ತೀರ್ಪುಗಳು ಭೂಮಿಯಲ್ಲಾಗುವುದಲ್ಲ. ಅದು ಆಕಾಶದಲ್ಲಾಗುತ್ತದೆ. ನೇಣು ಕಂಬದಲ್ಲಿ ನನ್ನ ಮರಣವು ಲಿಖಿತವಾಗಿದ್ದರೆ ಭೂಮಿ ಮೇಲಿರುವ ಯಾರಿಗೂ ನನ್ನನ್ನು ರಕ್ಷಿಸಲು ಸಾಧ್ಯವಿಲ್ಲ. ಅಂತ್ಯವು ನಿರ್ಧರಿತವಾಗವಾಗದಿದ್ದರೆ ಯಾರಿಂದಲೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ನಂತರ ಅವರನ್ನು ಮರಣದಂಡನೆಗಾಗಿ ವಿಶೇಷ ಕೊಠಡಿಗೆ ವರ್ಗಾಯಿಸಲಾಯಿತು. ಅವರು ಸರಕಾರದ ವತಿಯಿಂದ ನೀಡಿದ ಒಂದು ಶರ್ಟು ಮತ್ತು ನಾಡೆಯಿಲ್ಲದ ಇಜಾರು ಧರಿಸಿ ನೇಣುಕಂಬವನ್ನು ಏರುವುದರ ನಿರೀಕ್ಷೆಯಲ್ಲಿದ್ದರು.ಆದರೆ ಜಗತ್ತಿನಾದ್ಯಂತ ಮುಸ್ಲಿಂ ರಾಷ್ಟ್ರಗಳಲ್ಲಿ ತೀರ್ಪಿನ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಹಲವಾರು ಮುಸ್ಲಿಂ ದೇಶಗಳ ನಾಯಕರು, ಬುದ್ದಿ ಜೀವಿಗಳು ಮರಣದಂಡನೆ ರದ್ದುಗೊಳಿಸುವಂತೆ ಸರಕಾರಕ್ಕೆ ಸಂದೇಶಗಳನ್ನು ಕಳುಹಿಸುತ್ತಿದ್ದರಿಂದ ಕೊನೆಗೆ ಸರಕಾರವು ಮಣಿದು ತೀರ್ಪನ್ನು ರದ್ದುಗೊಳಿಸಿತು.

ನಂತರದ ದಿನಗಳಲ್ಲಿ ಅವರ ಆರೋಗ್ಯವು ದಿನೇದಿನೇ ಕುಸಿಯುತ್ತಾ ಬಂತು. ಇವೆಲ್ಲದರ ಮಧ್ಯೆ ಅವರು 1942ರಲ್ಲಿ ಪ್ರಾರಂಭಿಸಿದ ತಮ್ಮ ಸುಪ್ರಸಿದ್ಧ ಕುರಾನ್ ವ್ಯಾಖ್ಯಾನ ಗ್ರಂಥವಾದ ‘ತಫ್ಹೀಮುಲ್ ಕುರಾನ್’ನ ಕಾರ್ಯವನ್ನು ನಿರಂತರ ಮುಂದುವರಿಸಿದ್ದರು.
1972 ಜೂನ್ 7 ರಂದು 6 ಭಾಗಗಳಾಗಿ ‘ತಫ್ಹೀಮುಲ್ ಕುರಾನ್’ನ ಕಾರ್ಯವನ್ನು ಪೂರ್ಣಗೊಳಿಸಿದರು. ಅದರ ಕುರಿತು ಸೈಯದ್ ಮೌದೂದಿಯವರು ಈ ರೀತಿ ಹೇಳುತ್ತಾರೆ: “ನನ್ನ ಜೀವನ ಪರ್ಯಂತ ನಾನು ಪಠಣ, ಸಂಶೋಧನೆಗಳನ್ನು ನಡೆಸಿ ಗಳಿಸಿದ ಜ್ಞಾನ ಬಂಡಾರದ ಸಾರಾಂಶವೇ ಈ ತಫ್ಹೀಮುಲ್ ಕುರಾನ್” ಇಂದಿಗೂ ಜಗತ್ತಿನಾದ್ಯಂತ ಕುರಾನ್ ಜ್ಞಾನದಾಹಿಗಳಿಗೆ ಅನೇಕ ಭಾಷೆಗಳಿಗೆ ಭಾಷಾಂತರಗೊಂಡ ತಫ್ಹೀಮುಲ್ ಕುರಾನ್ ಒಂದು ವಿಶಿಷ್ಟ ಉಡುಗೊರೆ ಹಾಗೂ ಮಾರ್ಗದರ್ಶಿಯಾಗಿದೆ.
ತೀವ್ರ ಅನಾರೋಗ್ಯದಿಂದ 1979ರ ಸೆಪ್ಟೆಂಬರ್ 22ರಂದು ಇತಿಹಾಸದ ಪುಟಗಳಿಗೆ ಸೇರಿದ ಮಹಾನ್ ಚೈತನ್ಯವು ಇಹಲೋಕಕ್ಕೆ ವಿದಾಯ ಹೇಳಿದರು. ಜನಸಂದಣಿಯ ಕಾರಣ ಹಲವು ಬಾರಿ ಜನಾಝ ನಮಾಝ್ ನಿರ್ವಹಿಸಲಾಯಿತು. ಕೊನೆಯ ಜನಾಝ ನಮಾಝ್ ನಲ್ಲಿ 6 ಲಕ್ಷ ಮಂದಿ ಭಾಗವಹಿಸಿದ್ದರು. ಜಗದ್ವಿಖ್ಯಾತ ವಿದ್ವಾಂಸ ಯೂಸುಫುಲ್ ಖರ್ಝಾವಿ ಜನಾಝದ ನೇತೃತ್ವ ವಹಿಸಿದರು.

ಇನ್ನಾಲಿಲ್ಲಹಿ ವಇನ್ನಾ ಇಲೈಹಿ ರಾಜಿಊನ್

LEAVE A REPLY

Please enter your comment!
Please enter your name here