ತಶ್ರೀಫಾ ಜಹಾನ್, ಉಪ್ಪಿನಂಗಡಿ

ವಿದ್ಯಾರ್ಥಿನಿ, ಬಿ.ಎ(ಪತ್ರಿಕೋದ್ಯಮ), ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು.

ಆತ ರೋಹಿಂಗ್ಯನ್ ಬಾಲಕ. ಮುಹಮ್ಮದ್ ಶಫೀಕ್ ಎಂಬ ಪುಟ್ಟ ಬಾಲಕನನ್ನು ಭೇಟಿ ಮಾಡಿದ ಇವಾನ್ ರೆಡ್ಲಿ ಹೇಳುತ್ತಾರೆ, “ಈ ಮಗು ಇನ್ನು ಜೀವನದಲ್ಲಿ ನಗಲು ಸಾಧ್ಯವಿದೆಯೇ? ಎಂದು ನನಗೆ ಗೊತ್ತಿಲ್ಲ. ಏಕೆಂದರೆ 11 ವರ್ಷದ ಶಫೀಕ್ ಎದುರಿಸಿದ ದೌರ್ಜನ್ಯ ವಿವರಿಸಲು ಅಸಾಧ್ಯ. ಆತನ ದುರಂತ ಕಥೆಯನ್ನು ವಿವರಿಸುವಾಗ, ನಾನು ಸ್ತಬ್ಧಳಾಗಿ ಆತನನ್ನೇ ದಿಟ್ಟಿಸುತ್ತಾ ಕುಳಿತೆ. ಅವನ ಆ ನೋವು ತುಂಬಿದ ಮಾತುಗಳನ್ನು ಜೀವನವಿಡೀ ಮರೆಯಲು ಸಾಧ್ಯವಿಲ್ಲ.” ಪ್ರಸಿದ್ಧ ಪತ್ರಕರ್ತೆ ಇವಾನ್ ರೆಡ್ಲಿಯವರ ಮಾತುಗಳಿವು.

ರೋಹಿಂಗ್ಯನ್ ಜನತೆಯ ದುರಂತಮಯ ಬದುಕನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಉದ್ದೇಶದಿಂದ ಅವರು ಬಾಂಗ್ಲಾದ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ್ದರು. ಕರುಳು ಹಿಂಡುವ ಹಲವಾರು ಅನುಭವಗಳನ್ನು ಕೇಳಿ ತಿಳಿದುಕೊಂಡರು. ಆದರೆ, ಮುಹಮ್ಮದ್ ಶಫೀಕ್ ಎದುರಿಸಿದ ದುರಂತವು ನಿಜಕ್ಕೂ ನಡುಗಿಸಿಬಿಟ್ಟಿತು.

ಓರ್ವ ಪತ್ರಕರ್ತೆಯಾಗಿ ಹಲವಾರು ಯುದ್ಧ ಭೂಮಿಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಫೆಲೆಸ್ತೀನ್, ಅಫ್ಘಾನಿಸ್ತಾನ್, ಇರಾಕ್, ಲೆಬನಾನ್ ಎಲ್ಲೆಡೆಗೂ ಹೋಗಿದ್ದೇನೆ. ಆದರೆ ರೋಹಿಂಗ್ಯಾದಂತಹ ಅನುಭವ ಕಥನಗಳನ್ನು ಇದುವರೆಗೂ ಕೇಳಿರಲಿಲ್ಲ.

6,70,000ಕ್ಕಿಂತಲೂ ಅಧಿಕ ನಿರಾಶ್ರಿತರು ಆ ಶಿಬಿರದಲ್ಲಿದ್ದಾರೆ. ಅಲ್ಲಿ ಓರ್ವ ಬಾಲಕನ್ನು ಕಂಡೆ. ಅವನೊಂದಿಗೆ ಮಾತನಾಡಲು ಸಿದ್ಧಳಾದಾಗ, ಅನುವಾದಕರು ಕೇಳಿದರು “ಈತನ ಸಂದರ್ಶನ ನಡೆಸಲು ಮಾತಾಪಿತರ ಅನುಮತಿ ಬೇಕಲ್ಲವೇ?” ತಲೆಯಲ್ಲಾಡಿಸಿದೆ. ಏಕೆಂದರೆ ಆತನ ವಿಷಯ ಕೇಳಲು ಒಬ್ಬರೂ ಅಲ್ಲಿರಲಿಲ್ಲ. ಆತನ ತಾಯಿಯಾಗಲೀ ಇತರ ಕುಟುಂಬಿಕರಾಗಲೀ ಯಾರೂ ಬದುಕುಳಿದಿರಲಿಲ್ಲ. ಮೌಂಗ್‍ದೇಯಿಯ, ತುಲಾತುಲಿ ಗ್ರಾಮದಲ್ಲಿ ಕೊಲೆಗಡುಕರ ಕ್ರೂರ ಹಿಂಸೆಯಿಂದ ಬಲಿಯಾಗಿದ್ದಾರೆ. ಗನ್ ಹಾಗೂ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾನವೀಯತೆ ಇಲ್ಲದೆ, ಬರ್ಬರವಾಗಿ ಕೊಂದು ಹಾಕಿದ್ದರು. ಇಂದು ಶಫೀಕ್ ಬಾಂಗ್ಲಾದ ತೈಂಗಿಲಿ ಎಂಬ ನಿರಾಶ್ರಿತ ಶಿಬಿರದಲ್ಲಿದ್ದಾನೆ. ಪ್ಲಾಸ್ಟಿಕ್‍ನಿಂದ ತಯಾರಿಸಿದ ಪುಟ್ಟ ಕೋಣೆ ಈತನ ಮನೆ.

ಮ್ಯಾಯನ್ಮಾರ್‍ಲ್ಲಿದ್ದ ಮನೆಗೆ ಹೋಲಿಸಿದರೆ, ಇದು ಏನೂ ಅಲ್ಲ. ಅಲ್ಲಿ ತಂದೆ ನೂರುಲ್ ಇಸ್ಲಾಮ್(42 ವಯಸ್ಸು), ತಾಯಿ ಹಾಮಿದಾ ಖಾತುನ್(35), 5 ಸಹೋದರರು ಹಾಗು ಒಂದು ಸಹೋದರಿಯರನ್ನೊಳಗೊಂಡ ಸುಂದರ ಮನೆ ಅದಾಗಿತ್ತು. ಅವರೊಂದಿಗೆ ಸುಂದರ ಬದುಕು ಸಾಗಿಸುತ್ತಿದ್ದ ಶಫೀಕ್‍ನ ಬದುಕು ಅನಿರೀಕ್ಷಿತ ದಾಳಿಯಿಂದ ಬಿರುಗಾಳಿಗೆ ಸಿಲುಕಿದ ನಾವೆಯಂತಾಯಿತು. ದಿನಾಂಕ ಸರಿಯಾಗಿ ನೆನಪಿಲ್ಲದಿದದ್ದರೂ, ಅದು ಬೆಳಿಗ್ಗಿನ 9 ಗಂಟೆ, ಮಯನ್ಮಾರ್‍ನ ಸೇನೆಯು ದಿಢೀರನೆ ಪ್ರತ್ಯಕ್ಷಗೊಂಡು ಕಣ್ಣಿಗೆ ಕಂಡದ್ದೆಲ್ಲವನ್ನು ನಾಶಗೊಳಿಸಿತು. ಶಫೀಕ್ ಹಾಗೂ ಅವನ ಕುಟುಂಬಿಕರೆಲ್ಲಾ ಓಡ ತೊಡಗಿದರು. ಸೈನಿಕರು ಗುಂಡು ಹಾರಿಸತೊಡಗಿದರು. ಜೀವವಿರುವ ಪ್ರತಿಯೊಂದರ ಮೇಲೂ ಗುಂಡಿನ ಸುರಿಮಳೆಯಾಯಿತು.

ಶಫೀಕ್‍ನ ಕಿರಿಯ ಸಹೋದರ 15 ತಿಂಗಳ ಮಗುವಾಗಿದ್ದ, ಆತನ್ನೂ ರಕ್ಷಿಸಬೇಕಿತ್ತು. ಚಿಂತಿಸುತ್ತಾ ನಿಲ್ಲಲು ಸಮಯವಿರಲಿಲ್ಲ. ಓಟದ ಮಧ್ಯೆಯೆ ತಾಯಿ ಮಗುವನ್ನು ಶಫೀಕ್‍ನ ಕೈಗೆ ನೀಡಿ, ಓಡುವಂತೆ ಸೂಚಿಸಿದರು. ಹೀಗೆ ಪ್ರಾಣ ಕೈಯಲ್ಲಿಟ್ಟು ಓಡುವಾಗ ಮನೆಯವರೆಲ್ಲರೂ ದಿಕ್ಕಾಪಾಲಾದರು. ಆದರೆ ಶಫೀಕ್ ಮಗುವನ್ನು ಕೈಯಲ್ಲಿ ಹಿಡಿದೇ ಓಟ ಮುಂದುವರಿಸಿದ.

ಆದರೆ ಅತೀ ವೇಗದ ಆ ಆಟ ಒಂದೆಡೆ ನಿಂತಿತು. ವಿಶಾಲವಾದ ಮೈದಾನದ ಮೂರು ಕಡೆಯಿಂದಲೂ ಸೈನಿಕರು ಸುತ್ತುವರಿದಿದ್ದಾರೆ. ಕೈಯಲ್ಲಿ ಗನ್ ಹಿಡಿದು ಸಿದ್ಧರಾಗಿ ನಿಂತಿದ್ದಾರೆ ಮತ್ತು ಗುಂಡು ಹಾರತೊಡಗಿತು. ಮೈದಾನದಲ್ಲಿ ಶಫೀಕ್‍ನೊಂದಿಗೆ ಇತರ ಗುಂಪುಗಳೂ ಸೇರಿಕೊಂಡಿತು. ಆತ ಸ್ತಬ್ಧನಾಗಿ ನಿಂತುಕೊಂಡಿದ್ದ, ಕೇವಲ ಭಯ ತುಂಬಿದ ಕಣ್ಣುಗಳು ಮಾತ್ರ ಚಲಿಸುತ್ತಿತ್ತು. ಆ ಪುಟ್ಟ ಸಹೋದರನನ್ನು ಎರಡು ಕೈಗಳಿಂದ ಗಟ್ಟಿಯಾಗಿ ತಬ್ಬಿಕೊಂಡ ಶಫೀಕ್.

ಗುಂಡಿನ ಆರ್ಭಟ ಹೆಚ್ಚಾಯಿತು. ಪುಟ್ಟ ಹೃದಯ ತಲ್ಲಣಿಸಿತು. ಜನರು ಒಬ್ಬೊಬ್ಬರಾಗಿ ನೆಲಕ್ಕುರುಳುತ್ತಿದ್ದರು. ನೋವಿನಿಂದ ಚಿರುತ್ತಾ ನೆಲಕ್ಕುರುಳುತ್ತಿದ್ದರು. ನೋವಿನಿಂದ ಚೀರುತ್ತಾ ನೆಲಕ್ಕುರುಳುವವರೊಡನೆ ಶಫೀಕ್ ತನ್ನ ಮಾವರಾದ ಮುಹಮ್ಮದ್ ಮತ್ತು ಅಬ್ದುಲ್ ಮಲಿಕ್‍ರನ್ನೂ ನೋಡಿದ.

ಆ ಹೃದಯ ವಿದ್ರಾವಕ ಘಳಿಗೆಯನ್ನು ಇವಾನ್ ರೆಡ್ಲಿಗೆ ವಿವರಿಸುವಾಗಲೂ ಆ ಬಾಲಕನ ಭಾವನೆಯಲ್ಲಿ ಏನೂ ವ್ಯತ್ಯಾಸವಿರಲಿಲ್ಲ. ಇನ್ನೂ ಮರಣದ ದುಃಖದಿಂದ ಹೊರಬರದಂತೆ, ಯಾವುದೇ ಮುಖಭಾವವಿಲ್ಲದೇ, ಶರೀರವು ತಟಸ್ಥವಾಗಿ, ಸ್ವರದಲ್ಲಿ ಯಾವುದೇ ಏರುಪೇರಿಲ್ಲದೆ ಎಲ್ಲವನ್ನೂ ವಿವರಿಸುತ್ತಿದ್ದ.

ಸೈನಿಕರು ಗ್ರಾಮಸ್ಥರನ್ನು ಮೂರು ಭಾಗಗಳಾಗಿ ಬೇರ್ಪಡಿಸಿದರು. ಶಫೀಕ್ ತನ್ನ ತಾಯಿಯನ್ನು ಇನ್ನೊಂದು ಗುಂಪಿನಲ್ಲಿ ಕಾಣುತ್ತಾನೆ. ಇಬ್ಬರೂ ಸಮೀಪಿಸಿದಾಗ, ತಾಯಿ ಮಗುವಿಗಾಗಿ ಕೈಚಾಚಿದಳು. ಅರ್‍ಖಾನುಲ್ಲಾ ನನ್ನ ಸಹೋದರಿಯ ಕೈಗಿತ್ತರು. ಆ ಗುಂಪನ್ನು ಸೈನಿಕರು ಎಲ್ಲೋ ಕೊಂಡುಹೋಗಿದ್ದರು.

ತನ್ನ ಸಹೋದರಿ ಮತ್ತು ಪುಟ್ಟ ಸಹೋದರನನ್ನಾಗಲೀ ಶಫೀಕ್ ನಂತರ ಒಮ್ಮೆಯೂ ನೋಡಿಲ್ಲ. ಶಫೀಕ್ ಇದ್ದ ಗುಂಪಿನಲ್ಲಿ ಅವನ ತಾಯಿ ಹಾಗೂ ಅತ್ತಿಗೆ ಇದ್ದರು. ಆ ಗುಂಪನ್ನು ಒಂದು ಕಟ್ಟಡದೊಳಗೆ ಕರೆದುಕೊಂಡು ಹೋಗಲಾಯಿತು. ಒಳಹೊಕ್ಕ ಕೂಡಲೇ ಒಬ್ಬ ಸೈನಿಕ ತಾಯಿಯ ಹಣೆಯಲ್ಲಿ ಪಿಸ್ತೂಲನ್ನಿಟ್ಟು ಹಣ ಹಾಗೂ ಒಡವೆಯನ್ನು ಕೇಳಿದ, ಆಕೆಯಲ್ಲಿ ಏನೂ ಇರಲಿಲ್ಲ. ತನ್ನಲ್ಲಿ ಏನು ಇಲ್ಲವೆಂದಾಗ ಆತನಿಗೆ ಕೋಪನೆತ್ತಿಗೇರಿತು. ಬೆತ್ತದಿಂದ ಆಕೆಯ ಮುಂದೆ ಶಫೀಕ್‍ನಿಗೆ ಹೊಡೆಯಲಾರಂಭಿಸಿದ. ತಲೆಯ ಎಡ ಭಾಗಕ್ಕೆ ಜೋರಾಗಿ ಹೊಡೆತ ಬಿತ್ತು. ಇನ್ನೊಬ್ಬ ಹಿಂದಿನಿಂದ ಬಂದು ಚೂರಿಯಿಂದ ತಲೆಗೆ ಜೋರಾಗಿ ತಿವಿದ. ಇದರಿಂದಾಗಿ ತಲೆಗೆ ಆಳವಾದ ಗಾಯ ಉಂಟಾಗಿ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದ ಅವನ ಪ್ರಾಣವು ಮುಗಿಯಿತೆಂದು ಅವರು ಭಾವಿಸಿದರು.

ಆತನಿಗೆ ಯಾವಗಲೋ ಎಚ್ಚರ ಬಂದಾಗ ಸೈನಿಕರಾರೂ ಇರಲಿಲ್ಲ.  ನಿಜವಾಗಿ ಆತನಿಗೆ ಸಮಾಧಾನವಾಗಬೇಕಿತ್ತು. ಆದರೆ ಸುತ್ತ ಕಣ್ಣೋಡಿಸಿದಾಗ,  ಅದಕ್ಕಿಂತಲೂ ಭಯಾನಕವಾದ ದೃಶ್ಯ ಕಣ್ಣಮುಂದಿತ್ತು. ತಾಯಿ ನೆಲೆದಲ್ಲಿ ಚಲನೆ ಇಲ್ಲದೆ ಬಿದ್ದು ಕೊಂಡಿದ್ದಾಳೆ. ಎಲ್ಲರೂ ನಿಸ್ತೇಜರಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ತಾಯಿಯ ಹತ್ತಿರ ಓಡಿ ಹೋದಾಗ ಆಕೆಯ ಕುತ್ತಿಗೆಯನ್ನು ಕೊಯ್ಯಲಾಗಿತ್ತು. ಸುತ್ತಲೂ ಕಣ್ಣೋಡಿಸಿದ, ಆತನನ್ನೊಬ್ಬನನ್ನು ಬಿಟ್ಟು ಎಲ್ಲರೂ ಮರಣ ಹೊಂದಿದ್ದಾರೆ. ಎಲ್ಲರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ಆ ಪುಟ್ಟ ಕಣ್ಣುಗಳು ಇದಕ್ಕೆಲ್ಲಾ ಸಾಕ್ಷಿಯಾಯಿತು. ಹೆತ್ತ ತಾಯಿಯ ಈ ಪರಿಸ್ಥಿತಿಯನ್ನು ಕಂಡ ಶಫೀಕ್‍ನ ಮನೋಸ್ಥಿತಿ ಹೇಗಾಗಿರಬಹುದು?!!

ಆತ ಬಳಲಿ ಹೋಗಿದ್ದ, ತೀವ್ರವಾದ ತಲೆನೋವು, ಎಡಭಾಗದಲ್ಲಿನ ಕಿವಿ ತನ್ನ ಶಕ್ತಿಯನ್ನು ಕಳಕೊಂಡಿತ್ತು. ನೋವು ಆಯಾಸ ನಡುಕದಿಂದ ಜರ್ಜರಿತನಾಗಿದ್ದ. ಅದಾಗಲೇ ಕಟ್ಟಡಕ್ಕೆ ಬೆಂಕಿ ಹಚ್ಚಿರುವ ವಿವರ ತಿಳಿಯಿತು, ಆತ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡತೊಡಗಿದ, ಕ್ಷಣಾರ್ಧದಲ್ಲಿ ಕಟ್ಟಡ ಬೆಂಕಿಗಾಹುತಿಯಾಯಿತು. ಶಫೀಕ್ ಆ ಅನಾಹುತದಿಂದ ಹೇಗೋ ಪಾರಾಗಿ ಎಲ್ಲೋ ಅಡಗಿ ಕುಳಿತ, ಸೂರ್ಯ ಉದಯಿಸುವವರೆಗೂ ಅಲ್ಲೇ ಅಡಗಿಕೊಂಡಿದ್ದ. ಇಡೀ ಗ್ರಾಮವು ಬೆಂಕಿಗಾಹುತಿಯಾಗಿ ಭಸ್ಮಗೊಂಡಿತು. ವಾತಾವರಣವಿಡೀ ಬೆಂದ ಶರೀರದ ದುರ್ವಾಸನೆ ಹಬ್ಬಿದೆ ಮತ್ತು ಎಲ್ಲಿ ಕಣ್ಣು ಹಾಯಿಸಿದರೂ ಮೃತ ದೇಹಗಳು, ರಕ್ತಸಿಕ್ತ ಶರೀರಗಳು!!

ಒಂಟಿಯಾಗಿ, ಭಯದಿಂದ ಮುಂದೆ-ಮುಂದೆ ಸಾಗಿ ವೈಕುಂ ಎಂಬ ಗ್ರಾಮಕ್ಕೆ ತಲುಪಿದ. ಇವನಂತೆ ಇನ್ನೂ ಹಲವಾರು ಮಂದಿ ದುರಂತದಿಂದ ಪಾರಾಗಿ, ಕ್ರೂರಿಗಳ ಕಣ್ಣು ತಪ್ಪಿಸಿ ಇಲ್ಲಿ ಬಂದು ತಲುಪಿದ್ದರು. ಪರಿಚಿತರಿಗಾಗಿ ಕಣ್ಣೋಡಿಸಿದ, ಕಣ್ಣು ನಿರಾಶೆಯಿಂದ ಮರಳಿತು. ಹೀಗೆ ನಾಲ್ಕು ರಾತ್ರಿ ಹಾಗು ನಾಲ್ಕು ಹಗಲನ್ನು ಒಂಟಿಯಾಗಿಯೇ ಭಯದ ವಾತಾವರಣದಲ್ಲಿ ಕಳೆದ. ಯಾವ ಸಮಯದಲ್ಲೂ ಏನೂ ಸಂಭವಿಸಬಹುದು, ಯಾವುದೇ ಶುಭ ನಿರೀಕ್ಷೆಯಿರಲಿಲ್ಲ, ಸುರಕ್ಷಿತೆಯಿಲ್ಲ. ಹೀಗೆ ಒಂದು ತಂಡದೊಂದಿಗೆ ಸೇರಿಕೊಂಡ. ಎರಡು ದಿನಗಳ ಬಳಿಕ ಆ ತಂಡ ಬಾಂಗ್ಲಾ ದೇಶಕ್ಕೆ ತೆರಳಿತು. ಸ್ವಂತವಾಗಿ ಏನಿಲ್ಲದಿದ್ದರೂ ಸುರಕ್ಷಿತೆ ಇತ್ತು.

ವೈದ್ಯರು ಬಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ತಲೆಗೆ ಆರು ಸ್ಟಿಚ್‍ಗಳ ಅವಶ್ಯಕತೆಯಿತ್ತು. ನಂತರ ಅನಿರೀಕ್ಷಿತವಾಗಿ ಓರ್ವ ವ್ಯಕ್ತಿಯ ಭೇಟಿಯಾಯಿತು. ಅವರು ಆತನನ್ನು ಒಂದು ಕೋಣೆಗೆ ಕರಕೊಂಡು ಹೋದರು, ಅಲ್ಲಿ ಅಜ್ಜಿ ಮತ್ತು ಆಕೆಯೊಂದಿಗೆ ಆತನ ತಮ್ಮ ರೌಸಿಯುಲ್ಲಾ ಕೂಡಾ ಇದ್ದನು. ಆತ ಮೊದಲನೇಯದಾಗಿ ಸಂತೋಷಪಟ್ಟ.

ನಿನಗೆ ಬೇರೆ ಯಾವ ಆಶೆಯಿದೆ? ಎಂದು ಇವಾನ್ ರೆಡ್ಲಿ ಶಫೀಕ್‍ನೊಂದಿಗೆ ಪ್ರಶ್ನಿಸಿದಾಗ, “ಒಮ್ಮೊಮ್ಮೆ ಕುಟುಂಬದೊಂದಿಗೆ ತಾನೂ ಮರಣ ಹೊಂದಿದ್ದರೆ ಎಂದು ಭಾಸವಾಗುತ್ತದೆ. ಮತ್ತೊಮ್ಮೆ ತನ್ನನ್ನು ರಕ್ಷಿಸಿದ ಆ ದೇವನಿಗೆ ಸ್ತುತಿಯನ್ನು ಅರ್ಪಿಸುತ್ತೇನೆ.” ಎಂದು ಶಫೀಕ್ ಉತ್ತರಿಸಿದ.

ಶಫೀಕ್‍ನಂತೆ ರಾಕ್ಷಸೀಯತೆಯ ಬಲಿಪಶುಗಳಾಗಿ ಲಕ್ಷಾಂತರ ಮುಗ್ಧ ಜನರು ಅಲ್ಲಿದ್ದಾರೆ. ಇವರ ಮೇಲೆ ದೌರ್ಜನ್ಯವೆಸಗಿದವರು ಯಾವುದೇ ಪಶ್ಚಾತಾಪವಿಲ್ಲದೆ ಆರಾಮವಾಗಿ ಬದುಕುತ್ತಿದ್ದಾರೆ. ದಕ್ಷಿಣಾಫ್ರಿಕಾದ, ‘ಪ್ರೊಟೆಕ್ಟ್ ರೋಹಿಂಗ್ಯ’ ಎಂಬ ಮಹಿಳಾ ವಕೀಲರ ಸಂಘಕ್ಕಾಗಿ ಇವಾನ್ ರೆಡ್ಲಿ ಬಾಂಗ್ಲಾದೇಶ ಮತ್ತು ಇತರೆಡೆಗಳಲ್ಲಿನ ರೋಹಿಂಗ್ಯನ್ನರನ್ನು ಭೇಟಿ ಮಾಡಿದ್ದರು. ಯುದ್ಧಾಪರಾಧಗಳ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದರು.

ರೋಹಿಂಗ್ಯನ್ ಜನತೆ ಅನುಭವಿಸಿದ ನೋವುಗಳು ಮರೆಯಲು ಅಸಾಧ್ಯ ಮತ್ತು ಅವರ ದುರಂತ ಕಥೆಯನ್ನು ತಿಳಿದು ಅವರಿಗೆ ನ್ಯಾಯ ದೊರಕಿಸಿಕೊಡಲು ನಮಗೆ ಸಾಧ್ಯವಿದ್ದಷ್ಟು ಪರಿಶ್ರಮಿಸುವ ಒಂದು ಮಹಾ ಜವಾಬ್ದಾರಿ ನಮ್ಮ ಮೇಲಿಲ್ಲವೇ?

 

 

 

LEAVE A REPLY

Please enter your comment!
Please enter your name here