ಒಂದು ಕಥೆಯ ಸುತ್ತ ಹಲವಾರು ಸಂಧರ್ಭಗಳನ್ನು, ಸನ್ನಿವೇಶಗಳನ್ನು ಚಿತ್ರಿಸಿ ಒಂದೇ ಸಿನೆಮಾದಲ್ಲಿ ಹಲವಾರು ಸಂದೇಶಗಳನ್ನು ಪ್ರೇಕ್ಷಕರ ಮನಮುಟ್ಟುವ ಶೈಲಿಯಲ್ಲಿ ದೃಶ್ಯವಿರಿಸುವಲ್ಲಿ ರಾಜ್‍ಕುಮಾರ್ ಹಿರಾನಿ ಎತ್ತಿದ ಕೈ. ಮುನ್ನಾ ಬಾಯಿ ಎಂ.ಬಿ.ಬಿ.ಎಸ್, 3 ಈಡಿಯಟ್ಸ್, ಪಿ.ಕೆ ಮುಂತಾದ ಚಿತ್ರಗಳು ಅವರ ನಿರ್ದೇಶನ ತಂತ್ರದಿಂದ ಅರಳಿದ ಅಮೋಘ ಸಿನೆಮಾಗಳ ಸಾಲಿನಲ್ಲಿ ಸೇರುತ್ತದೆ. ಹಾಸ್ಯ, ವಿನೋದ, ಪ್ರೀತಿ, ನೋವು, ನಲಿವಿನ ಸಮಾಹಾರವಾಗಿ ಸಿನೆಮಾ ಸಂಚರಿಸುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಸಂಪೂರ್ಣ ಸಿನೆಮಾವನ್ನು ವೀಕ್ಷಿಸುವಂತೆ ಮಾಡುತ್ತದೆ. ನಗುವವರನ್ನು ಸಂಪೂರ್ಣ ನಗಲು ಬಿಡದೆ, ಕೊನೆಗೆ ನೋವಿನಿಂದ ಕಣ್ಣೀರು ಹರಿಸಿ ಪ್ರೇಕ್ಷಕರನ್ನು ಮಿಶ್ರರಾಗಿಸುವಲ್ಲಿ ರಾಜ್‍ಕುಮಾರ್ ಹಿರಾನಿ ಗೆದ್ದಿದ್ದರು. ಕಳೆದವಾರ ಬಿಡುಗಡೆಗೊಂಡ ಸಂಜು ಸಿನೆಮಾವೂ ಆ ರೀತಿಯ ಒಂದು ಅನುಭವವನ್ನು ನೀಡುತ್ತದೆ. ಆತ್ಮಕಥಾಧರಿತ ಸಿನೆಮಾಗಳಿಗಿಂತ ಒಂದು ವಿಭಿನ್ನ ಅನುಭವ.

“ಸಂಜು” ಸುನಿಲ್ ದತ್ತ್ ಮತ್ತು ನಟಿ ನರ್ಗಿಸ್‍ರ ಮಗನಾದ ಸಂಜಯ್ ದತ್‍ರ ಜೀವನಾಧರಿತ ಚಿತ್ರ. ದೇಶದ ಪ್ರಮುಖ ಸ್ಟಾರ್‍ಗಳ ಮಗನಾಗಿ ಹುಟ್ಟಿದ್ದರಿಂದ, ಆಡಂಬರ ಮತ್ತು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದನು. ಹೆತ್ತವರು ಸಿನೆಮಾ ಪಾತ್ರಗಳ ಮತ್ತು ಅದರ ಯಶಸ್ಸಿನ ನಾಗಲೋಟದಲ್ಲಿದ್ದರೆ, ಮಗ ಆಡಂಬರದಲ್ಲಿ ಮೈಮರೆತು ಮಾದಕ ವ್ಯಸನಗಳಿಗೂ, ವ್ಯಬಿಚಾರಕ್ಕೂ ಬಲಿಯಾಗಿ ಸಾವಿನ ಕೊನೆಯ ಹಂತಕ್ಕೆ ತಲುಪಿದ್ದನು. ತಂದೆ ಸುನಿಲ್ ದತ್ ನಿಷ್ಕಳಂಕ ದೇಶ ಪ್ರೇಮಿ ಮತ್ತು ರಾಜಕಾರಿಣಿ. ತಾಯಿ ನರ್ಗೀಸ್ ಒಬ್ಬಳು ಮುಸ್ಲಿಮ್ ಹೆಣ್ಣು ಮತ್ತು ಪ್ರೀತಿಯಲ್ಲಿ ಬಿದ್ದು ಸುಖದಾಂಪತ್ಯ ನಡೆಸುತ್ತಿದ್ದ ಮುಗ್ದೆ. 1981ರಲ್ಲಿ ಸಂಜಯ್ ದತ್‍ರ ಮೊದಲ ಸಿನೆಮಾ ‘ಲಕ್ಕಿ’ ಬಿಡುಗಡೆಗೆ ಮುಂಚೆ ತಾಯಿ ಮರಣ ಹೊಂದುತ್ತಾರೆ. ಆ ನೋವು ಅವರನ್ನು ಬಹಳ ಬಾದಿಸುತ್ತದೆ. ಸಂಜಯ್ ದತ್ ಮಾದಕ ವ್ಯಸನಕ್ಕೆ ಬಲಿಯಾಗಿ ತಾಯಿಯ ನೆನಪನ್ನು ಮರೆಯಲು ಯತ್ನಿಸುತ್ತಾರೆ.

1992ರ ಬಾಬರಿ ಮಸೀದಿಯ ಧ್ವಂಸದ ನಂತರ ಮುಂಬೈ ಪ್ರಮುಖ ನಗರದಲ್ಲಿ ನಡೆದ ಸೀರಿಯಲ್ ಬಾಂಬ್ ಸ್ಪೋಟದಲ್ಲಿ ಶಾಸ್ತ್ರಾಸ್ತ್ರ ಹೊಂದಿದ್ದರೆಂಬ ಆರೋಪದಡಿಯಲ್ಲಿ ಐದು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ತನ್ನ ದಾರಿ ತಪ್ಪಿದ ಮಗನ ಬಗ್ಗೆ ಕಾಳಜಿ ಹೊಂದುತ್ತಿದ್ದ ಸುನಿಲ್ ದತ್ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಮಗನ ಮೇಲೆ ಟಾಡಾ ಆ್ಯಕ್ಟ್ ಆರೋಪ ಹೊರಿಸಿದಾಗ ಬಹಳಷ್ಟು ಕೊರಗಿಕೊಳ್ಳುತ್ತಾರೆ. ತಂದೆಯ ಮರಣಾನಂತರವು ನಾನು ಭಯೋತ್ಪಾದಕ ಅಲ್ಲ ಎಂದು ಜನರನ್ನು ಕೈ ಮುಗಿದು ಬೇಡಿಕೊಂಡಿದ್ದರು. ಕೊನೆಗೂ ಸುಪ್ರಿಮ್ ಕೋರ್ಟ್ ಅವರನ್ನು ಆರೋಪದಿಂದ ಮುಕ್ತಗೊಳಿಸಿತ್ತಾದರೂ, ಹಲವಾರು ಸತ್ಯಗಳನ್ನು ಸಿನೆಮಾದಿಂದ ತೆಗೆದು ಹಾಕಲಾಗಿರಬಹುದು ಅಥವಾ ಚಿತ್ರೀಕರಿಸಿಲ್ಲದಿರಬಹುದು. ‘ಒನ್ ಮ್ಯಾನ್ ಇನ್ ಮೆನೀ ಲೈಫ್’ ಎಂಬ ತಲೆ ಬರಹದ ಸಂಜು ಜೀವನವನದ ಕೆಟ್ಟದು ಮತ್ತು ಒಳ್ಳೆಯ ರೂಪದಲ್ಲಿ ಜನರ ಮುಂದಿಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

ಈ ಚಿತ್ರದಲ್ಲಿ ಆತ್ಮಕಥೆಕ್ಕಿಂತಲೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವೂ ಮಾಡಲಾಗಿದೆ. ಮಾಧ್ಯಮ ರಂಗದವರ ಬ್ರೇಕಿಂಗ್ ನ್ಯೂಸ್, ಸಂಶಯದ ವರದಿ, ಮಕ್ಕಳ ಮೇಲೆ ಹೆತ್ತವರ ನಿರ್ಲಕ್ಷ್ಯ, ಮಾದಕ ವ್ಯಸನಕ್ಕೆ ಬಲಿಯಾಗುವವರ ಅಂತರಾಳದ ವೇದನೆ, ಗೆಳೆತನದಲ್ಲಿನ ಅರಿಕೆಗಳು ಇತ್ಯಾದಿಗಳ ಮೇಲೆ ಸಿನೆಮಾ ಬೆಳಕು ಚೆಲ್ಲುತ್ತದೆ. 60 ವರ್ಷದ ಸಂಜಯ್ ದತ್ ತನ್ನ 37 ವರ್ಷದ ಸಿನೆಮಾ ಜೀವನದಲ್ಲಿ 187 ಸಿನೆಮಾಗಳಲ್ಲಿ ನಟಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಮಾದರಿಯಾಗಬೇಕಾದ ಉತ್ತಮ ಜೀವನವಲ್ಲದಿದ್ದರೂ, ಜೀವನದೊಳಗಿನ ನೋವುಗಳಿಂದ ಮತ್ತು ಕೆಡುಕುಗಳಿಂದ ಪಾಠ ಕಲಿಯಬೇಕಾಗಿದೆ. ಸಂಜುವಿನ ಸಂಚಾದಂತೆ ಹಲವಾರು ಶ್ರೀಮಂತ ಮಕ್ಕಳ ಜೀವನವು ಸಂಚರಿಸುತ್ತದೆಂಬ ವಾಸ್ತವವನ್ನು ಮರೆಯಬಾರದು.

ಸಹಪಾಠಿ

LEAVE A REPLY

Please enter your comment!
Please enter your name here